ರಾಜ್ಯ ಬಜೆಟ್ ರೈತಪರ ಅನುಷ್ಠಾನ ಆಗಲಿ ಸರಸರ
2014 -15ರ ಕರ್ನಾಟಕ ಆಯವ್ಯಯ ರೈತ ಪರ ಎನ್ನುವುದರಲ್ಲಿ ಅನುಮಾನವಿಲ್ಲ. ಕೃಷಿ ಬೆಲೆ ಆಯೋಗ ರಚನೆ, ಒಣ ಭೂಮಿ ಅಭಿವೃದ್ಧಿಗೆ ಒತ್ತು ಕೊಟ್ಟಿರುವುದು, ಕೃಷಿ ವಿಶ್ವವಿದ್ಯಾಲಯಗಳ ಡಿಪ್ಲೊಮ ಮತ್ತು ಪದವಿ ಪ್ರವೇಶದಲ್ಲಿ ರೈತರ ಮಕ್ಕಳಿಗೆ ಶೇಕಡ 40 ರಷ್ಟು ಮೀಸಲಿಟ್ಟಿರುವುದು ರೈತರ- ಗ್ರಾಮೀಣ ಜನರ ಭವಿಷ್ಯ ಸುಧಾರಿಸುವುದರಲ್ಲಿ ಪರಿಣಾಮಕಾರಿಯಾಗಬಲ್ಲದು. ಆದ್ದರಿಂದ ನಿಜಕ್ಕೂ ಮೆಚ್ಚುವಂತಹುದು. ಜೊತೆಗೆ ಕೃಷಿ ಮತ್ತು ಪಶು ವೈದ್ಯಕೀಯ ಕಾಲೇಜುಗಳ ಮೂಲಭೂತ ಸೌಕರ್ಯಗಳ ನವೀಕರಣ ಸಕಾಲಿಕವಾಗಿದೆ. ಮೇವು ಬೆಳೆಗಳ ವಿಸ್ತೀರ್ಣ ಹೆಚ್ಚಿಸಿ ಸುಧಾರಿತ ಪದ್ಧತಿಗಳ ಅಳವಡಿಕೆಯಿಂದ ಉತ್ಪಾದನೆಯನ್ನು ಅಭಿವೃದ್ಧಿ ಪಡಿಸಿ, ಸ್ವಬೀಜಾಭಿವೃದ್ಧಿಗೆ (ಕಿರು ಬೀಜ ಸರಬರಾಜು, ರೈತ ಬೆಳೆಯುವ ಎಲ್ಲಾ ಬೆಳೆಗಳ ಗುಣಮಟ್ಟ ಬೀಜ ಉತ್ಪಾದನೆ, ಒಕ್ಕಣೆ, ಸಂಸ್ಕರಣೆ ಮತ್ತು ಗೋದಾಮುಗಳ ಸೌಲಭ್ಯಗಳಿಗಾಗಿ ಅನುದಾನ ಮುಂತಾದ ಸೌಲಭ್ಯ) ಒತ್ತುಕೊಟ್ಟು ರೈತರು ತಮಗೆ ಬೇಕಾದ ಬೀಜವನ್ನು ತಾವೇ ಉತ್ಪಾದಿಸುವಂತೆ ಪ್ರೋತ್ಸಾಹ ನೀಡುವುದು, ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ, ಕುರಿ, ಮೇಕೆ ಸಾಕಾಣಿಕೆ, ರೇಷ್ಮೆ ಕೃಷಿಗೆ ಪ್ರೋತ್ಸಾಹ ಅರ್ಥಪೂರ್ಣ ಮತ್ತು ಇವು ಶೀಘ್ರವಾಗಿ ಪ್ರತಿಫಲ ದೊರಕಿಸುವಂತಹ ನಿರ್ಧಾರವಾಗಿವೆ. ರೈತರು ಬೆಳೆದ ಉತ್ಪಾದನೆಗಳನ್ನು ಮಧ್ಯವರ್ತಿಗಳ ಶೋಷಣೆಗೊಳಗಾಗುತ್ತಿರುವುದರತ್ತ (Distress salestorage loss) ಗಮನ ಹರಿಸಿ ಅವರನ್ನು ಅಂತಹ ಶೋಷಣೆಯಿಂದ ಮುಕ್ತಗೊಳಿಸುವ ದಿಕ್ಕಿನಲ್ಲಿ ಉಗ್ರಾಣಗಳ ನಿರ್ಮಾಣ ಮತ್ತು ಸುಲಭ ಬಡ್ಡಿ ದರದಲ್ಲಿ ಸಾಲ ಸಿಗುವಂತಹ ವ್ಯವಸ್ಥೆಗೆ (Pledge loan facility) ಮತ್ತು ಅವರೇ ನೇರವಾಗಿ ಮಾರಾಟಮಾಡಲು ಅನುವು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ. ಕಾರ್ಮಿಕರ ಕೊರತೆಯಿಂದಾಗಿ ರೈತರನ್ನು ಅದರಲ್ಲೂ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಹುಡುಕುವತ್ತ ಸಮೂಹಗಳು ಯಂತ್ರೋಪಕರಣಗಳನ್ನು ಕೊಂಡು ಬಾಡಿಗೆಗೆ ಕೊಡುವಂತೆ ಪ್ರೋತ್ಸಾಹ ನೀಡುವತ್ತ ತೆಗೆದುಕೊಂಡಿರುವ ನಿರ್ಧಾರದಲ್ಲಿ ಊಹೆಗೆ ಮೀರಿದ ತಿರುಳಿದೆ. ಕೊಯಿಲೋತ್ತರ ಮೌಲ್ಯವರ್ಧನೆ (secondary agriculture)ಗೆ ಒತ್ತು ಕೊಟ್ಟಿರುವುದು ಸಂತಸದ ವಿಷಯ. ಈ ಎಲ್ಲಾ ಯೋಜನೆಗಳು ಕೃಷಿ ಭಾಗ್ಯ 23 ಜಿಲ್ಲೆಗಳಲ್ಲಿನ (53 ಲಕ್ಷ ಕುಟುಂಬಗಳು -45 ಲಕ್ಷ ಹೆಕ್ಟೇರು ಜಮೀನಿನಲ್ಲಿ) ಯೋಜನೆಗಳೂ ಕಾರ್ಯಗತವಾಗಿ ಸಫಲವಾದಲ್ಲಿ ಗ್ರಾಮೀಣ ಯುವಕರು- ನಿರುದ್ಯೋಗಿಗಳು ಪಟ್ಟಣಮುಖಿಯಾಗುವವರ ಸಂಖ್ಯೆಯನ್ನು ಗಣನೀಯವಾಗಿ ಇಳಿಸಬಹುದು. ಸೌರಶಕ್ತಿ ಸಾರ್ಥಕ ಬಳಕೆ, ಮಾಹಿತಿ ತಂತ್ರಜ್ಞಾನ ಹೊಸನೀತಿ ರೂಪಿಸುವುದು, ಕೃಷಿಕರ ಸ್ಥಿತಿ ಸುಧಾರಿಸುವತ್ತ ಪರಿಣಾಮಕಾರಿಯಾಗಬಲ್ಲವು.
ಈ ಆಯವ್ಯಯಕ್ಕೆ ಒಂದೆರಡು ಅಂಶಗಳ ಸೇರ್ಪಡೆಯಾದರೆ ಮತ್ತಷ್ಟು ಉತ್ತಮ ಬಜೆಟ್ ಅನಿಸಿಕೊಳ್ಳಬಲ್ಲದು. ಎಂಜಿನಿಯರ್ ಮತ್ತು ಡಾಕ್ಟರ್ಗಳಿಗಿರುವ ಲ್ಯಾಪ್ಟಾಪ್ ಸೌಲಭ್ಯವು ಕೃಷಿ ವಿದ್ಯಾರ್ಥಿಗಳಿಗೇಕಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಚೀನಾದಲ್ಲಿ ನಮಗಿಂತಲೂ ಬೇಗ ತಾಂತ್ರಿಕತೆಗಳನ್ನು ರೈತರು ಅಳವಡಿಸಿಕೊಂಡು ಭಾರತದ ಎರಡರಷ್ಟು ಉತ್ಪಾದಕತೆ ಪಡೆಯುತ್ತಿರುವುದಕ್ಕೆ ಪ್ರಮುಖ ಕಾರಣವೆಂದರೆ, ಮಾಹಿತಿ ತಂತ್ರಜ್ಞಾನದ ಅತಿ ಶೀಘ್ರ ಅಳವಡಿಕೆ. ಕೃಷಿಯಲ್ಲಿ ಎಲ್ಲಿಂದ ಎಲ್ಲಿಗೋ ತಲುಪಿಸಬೇಕಾಗಿರುವ ತಾಂತ್ರಿಕತೆಯ ಅನಿವಾರ್ಯತೆ ಬಹಳವಾಗಿದೆ. ಬಹುಶಃ, ಬೇರೆ ಕ್ಷೇತ್ರಕ್ಕಿಂತಲೂ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಆದ್ದರಿಂದ ಲ್ಯಾಪ್ಟಾಪ್ ಸೌಲಭ್ಯವು ಕೃಷಿ ಶಿಕ್ಷಣಕ್ಕೂ ವಿಸ್ತರಿಸುವುದು ಬಹು ಸೂಕ್ತ.
ವಿಶೇಷ ವಿತ್ತವಲಯಕ್ಕೆ ದೇವನಹಳ್ಳಿ ಜಮೀನು ಕೊಡುವುದು ಅನಿವಾರ್ಯ. ಏಕೆಂದರೆ ನಾವು ಜಾಗತೀಕರಣದ ಸ್ಪರ್ಧೆಯಲ್ಲಿ ಮುನ್ನಡೆಯಬೇಕಾಗಿದೆ. ಆದರೆ ಜಗತ್ತಿನಲ್ಲೇ ಪ್ರಸಿದ್ಧವಾಗಿರುವ ಮತ್ತು ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್ ಗಳಿಸಿರುವ ವಿಶಿಷ್ಟ 'ದೇವನಹಳ್ಳಿ ಚಕ್ಕೋತ' ನಶಿಸಿಹೋಗದಂತೆ ಎಚ್ಚರಿಕೆ ವಹಿಸುವ ಗುರುತರ ಜವಾಬ್ದಾರಿ ನಮ್ಮ ಸರ್ಕಾರಕ್ಕಿದೆ ಎಂಬುದನ್ನು ಮರೆಯಬಾರದು. ಯಾರೋ ಅದರ ಮಹತ್ವವನ್ನರಿಯದವರು ಸಮಿತಿಯಲ್ಲಿ ಸೇರಿಕೊಂಡು ಯಾವುದೋ ಭೂಮಿಯನ್ನು ಕೊಡಲಾಗದು. ಪರಿಣತರೊಡನೆ ಚರ್ಚಿಸಿ ಈ ವಿಶೇಷ ಸಸ್ಯತಳಿಯನ್ನು ಕಾಪಾಡುವ ವ್ಯವಸ್ಥೆಯಾದ ನಂತರವಷ್ಟೇ ಖಊಘಿಗೆ ಅನುಮತಿ ನೀಡಬಹುದು. ಇದರಲ್ಲಿ ಯಾವುದೇ ರಾಜಿ ಬೇಡ.
ಬಜೆಟ್ ಆಶಾದಾಯಕವಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಬೇಕಾದ ಶಿಸ್ತು, ಸಕಾಲದಲ್ಲಿ ಅನುದಾನ ಬಿಡುಗಡೆ ಸರಿಯಾದ ರೀತಿಯಲ್ಲಿ ಆಯೋಗಗಳ ಪುನಾರಚನೆಯಾಗದಿದ್ದಲ್ಲಿ ಫಲ ಕಾಣುವುದು ಮರೀಚಿಕೆಯಾಗಬಹುದು. ಅನುಭವಿ ಮುಖ್ಯಮಂತ್ರಿ ಮತ್ತು ಅಷ್ಟೇ ಅನುಭವ ಮತ್ತು ಕಾಳಜಿ ಹೊಂದಿರುವ ಈಗಿನ ಸರ್ಕಾರ ಗುರಿ ಮುಟ್ಟಬಲ್ಲುದೆಂಬ ನಂಬಿಕೆ ನನ್ನಂತಹ ಅನೇಕರಿಗಿದೆ.
- ಎಂ. ಮಹದೇವಪ್ಪ
ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ವಿಭಾಗ
ಜೆಎಸ್ಎಸ್ ಮಹಾವಿದ್ಯಾಪೀಠ, ಮೈಸೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

