ಅಂಕಣಗಳು

ಇದೇನು ವೀರಗಾಥೆಯೋ ಅಥವಾ ಕರ್ಮಗಾಥೆಯೋ?

ಇದೇನು ವೀರಗಾಥೆಯೋ ಅಥವಾ ಕರ್ಮಗಾಥೆಯೋ?
Published On :

1971ರ ಡಿಸೆಂಬರ್ ತಿಂಗಳಿನಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಯುದ್ಧ ಆರಂಭವಾಗಿತ್ತು.
ಪಶ್ಚಿಮ ಕ್ಷೇತ್ರದಲ್ಲಿ ಭಾರತೀಯ ವಾಯುಪಡೆಯ ವಿಮಾನಗಳು ಗರ್ಜಿಸಲು ಪ್ರಾರಂಭಿಸಿದ್ದವು. ಪಶ್ಚಿಮ ಸೆಕ್ಟರ್ಗೆ ಸೇರಿದ ಪಟಾನ್ಕೋಟ್ ವಾಯುನೆಲೆಯಲ್ಲಿ 4.12.1971 ಭಾರತೀಯ ವಾಯುಪಡೆಯ ವಿಮಾನವೊಂದು ಶತ್ರು ಸ್ಥಾನಗಳತ್ತ ಗುರಿಯಿಟ್ಟು ಮೇಲೇರಿತು. ವಿಮಾನದಲ್ಲಿ ಪೈಲಟ್ಗಳಾಗಿದ್ದವರು ಫ್ಲೈಟ್ ಲೆಫ್ಟಿನೆಂಟ್ ಬಾಜಪೈ ಮತ್ತು ಫ್ಲೈಯಿಂಗ್ ಆಫೀಸರ್ ಕೆ.ಪಿ. ಮುರಳೀಧರನ್. ಆ ವಿಮಾನ ತನ್ನ ನೆಲೆಗೆ ಹಿಂದಿರುಗಿ ಬರಲಿಲ್ಲ. ವಿಮಾನ ಶತ್ರು ನೆಲೆಯತ್ತ ಬಾಂಬ್ ದಾಳಿ ಮಾಡುವ ಕಾಲಕ್ಕೆ ರಾಕೆಟ್ ದಾಳಿಗೆ ಸಿಕ್ಕಿ ನೆಲಕ್ಕುರುಳಿತೋ ಅಥವಾ ದಾಳಿ ಮಾಡಿದ ನಂತರ ಹಿಂದಿರುಗುವಾಗ ಶತ್ರುಗಳ ಫಿರಂಗಿಗಳಿಗೆ ಸಿಕ್ಕಿತೋ ತಿಳಿಯಲೇ ಇಲ್ಲ. ಅದರೊಳಗಿದ್ದ ಚಾಲಕರು ತಮ್ಮ ಪ್ರಾಣತ್ಯಾಗ ಮಾಡಿದರೇ ಅಥವಾ ಶತ್ರುಗಳಿಗೆ ಸೆರೆ ಸಿಕ್ಕರೇ, ಅವರ ಗತಿ ಏನಾಯಿತು ಗೊತ್ತಾಗಲೇ ಇಲ್ಲ.
ಇತ್ತ ಮುರಳೀಧರನ್ ತಾಯಿ ಮಾಲತಿ ಅಮ್ಮ ಮತ್ತು ತಂದೆ  ಟಿ.ಎನ್. ಪದ್ಮನಾಭನ್ ತಿರುಮಲಪಾಡ್ ತಮ್ಮ ಮಗನ ಸುದ್ದಿ ಏನಾಯಿತು ಎಂದು ರೇಡಿಯೋ ಎದುರು ಕುಳಿತಾಗ ಬಂದಿತು ಬರಸಿಡಿಲಿನಂತಹ ಸುದ್ದಿ. ತಮ್ಮ ಮಗ ಹಿಂದಿರುಗಿ ವಾಯುನೆಲೆಗೆ ಹಿಂದಿರುಗಲೇ ಇಲ್ಲ ಎಂದು!
ತಂದೆ ತಾಯಿಗಳ ಹೃದಯ ಬಿರಿದು ಹೋಯಿತು. ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿತು.ಏತನ್ಮಧ್ಯೆ ವಾಯುಸೇನೆಗೆ ಸಂಬಂಧಪಟ್ಟವರಿಂದ ಮಾಲತಿ ಅಮ್ಮನಿಗೆ ಒಂದು ಮಾಹಿತಿ ಬಂದಿತು. ನಿಮ್ಮ  ಮಗ ಹಿಂದಿರುಗಿ ಬಾರದ್ದರಿಂದ ಆತನನ್ನು ಪತ್ತೆಯಾಗದವರ ಪಟ್ಟಿಗೆ ಸೇರಿಸಲಾಗಿದೆ, ಆದುದರಿಂದ ಆತನ ವಾರಸುದಾರರಾದ ತಾಯಿಗೆ ಸರ್ಕಾರದಿಂದ ಪರಿಹಾರ ಅಂದರೆ ರು. 15,000/- ಗಳನ್ನು ಕೊಡಲಾಗುವುದು ಹಾಗೂ ಅದನ್ನು ಆಕೆ ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿತ್ತು. ಆಘಾತದಲ್ಲಿ ಮುಳುಗಿದ್ದ ತಾಯಿಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವಾಯುಸೇನೆಯ ಅಧಿಕಾರಿಗೆ ಸರ್ಕಾರ ಕೊಡ ಮಾಡಿದ ಹಣವನ್ನು ಮುಟ್ಟಲೂ ಆಕೆಗೆ ಹೇಸಿಗೆಯಾಯಿತು. ಸಾಧಾರಣ ಮನುಷ್ಯನೊಬ್ಬ ಅಪಘಾತದಲ್ಲಿ ಸತ್ತರೆ ಧಾರಾಳವಾಗಿ ಹಣ ಕೊಡುವ ವ್ಯವಸ್ಥೆಯಲ್ಲಿ ದೇಶಕ್ಕಾಗಿ ಮಡಿದ ಅಧಿಕಾರಿಗೆ ಕೊಡ ಮಾಡಿದ ಹಣದ ಬಗ್ಗೆ ಆಕೆ ಪ್ರತಿಕ್ರಿಯೆ ಮಾಡಲಾರದಷ್ಟು ನಿಶ್ಚೇತನಗೊಂಡಿದ್ದರು.
ಏತನ್ಮಧ್ಯೆ ತಾ. 24.1.1995ರಂದು ತಂದೆ ಟಿ.ಎನ್. ಪದ್ಮನಾಭನ್ ತಿರುಮಲಪಾಡ್ ದುಃಖದ ಆವೇಗವನ್ನು ತಡೆಯಲಾರದೆ ತೀರಿಕೊಂಡರು. ಮಗಳು ಲಲಿತಾ ಕೃಷ್ಣಕುಮಾರ್ ಮದುವೆಯಾಗಿ ಗಂಡನ ಮನೆಯಲ್ಲಿ ಇದ್ದ್ದುದರಿಂದ ತಾಯಿ ಮಾಲತಿ ಏಕಾಂಗಿಯಾದಳು. ರೋದಿಸುವುದೊಂದನ್ನು ಬಿಟ್ಟು ಅವರಿಗೆ ಇನ್ನಾವ ಮಾರ್ಗವೂ ಇರಲಿಲ್ಲ.
ಈ ಮಧ್ಯೆ ವಾಯುಪಡೆಯ ಆದೇಶದಂತೆ ಮಾಲತಿ ಅಮ್ಮ ತಾನು ಮತ್ತು ತನ್ನ ಮಗಳು ಲಲಿತಾ ಮಾತ್ರ ವಾರಸುದಾರರು ಎಂಬ ಬಗ್ಗೆ ಕೇರಳದ ಮಂಜೇರಿಯ ಎರ್ನಾಡ್ನ ತಹಸೀಲ್ದಾರರ ಕಚೇರಿಯಿಂದ ಹಕ್ಕುದಾರಿಕೆ ದೃಢೀಕರಣ ಪತ್ರ ಪಡೆದುಕೊಂಡರು. ಆ ಪತ್ರದ ಆಧಾರದ ಮೇಲೆ ನ್ಯಾಯಾಲಯದಿಂದ ವಾರಸುದಾರರ ದೃಢೀಕರಣ ಪತ್ರ ಪಡೆದುಕೊಳ್ಳಬೇಕೆಂದು ಮಾಲತಿ ಅಮ್ಮನಿಗೆ ತಿಳಿವಳಿಕೆ ಪತ್ರ ಹೋಯಿತು. ಆ ಕುರಿತಾದ ವಾರಸುದಾರರ ಪತ್ರ ಕೊಡಿ ಎಂದು ಮಂಜೇರಿಯ ನ್ಯಾಯಾಲಯದಲ್ಲಿ ಅರ್ಜಿ ಹಾಕಲಾಗಿ ಸದರಿ ಅರ್ಜಿ ಪುರಸ್ಕೃತವಾಯಿತು.
ಈ ಎಲ್ಲ ಘಟನೆಗಳ ಮಧ್ಯೆ ಕೇಂದ್ರ ಸರ್ಕಾರ ನಿರ್ಧರಿಸಿದ ಪರಿಹಾರದ ಹಣಕ್ಕೆ ಸಂಬಂಧಿಸಿದಂತೆ ಸದರಿ ಹಣ ಉಚ್ಚರಿಸಲು ಆಗದಷ್ಟು ಸಾಲದಿರುವ ಹಣ ಎಂದು ತೀರ್ಪು ಕೊಡಬೇಕೆಂದು ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಒಂದು ರಿಟ್ ಅರ್ಜಿ ಸಲ್ಲಿಸಲಾಯಿತು. ಆ ರಿಟ್ ಅರ್ಜಿಯಲ್ಲಿ ಈ ರೀತಿ ಸೇವೆಯಲ್ಲಿದ್ದು ಕಾಣೆಯಾದವರು ತತ್ವಾಧಾರಿತ ನಿವೃತ್ತಿ ಪಡೆದಿದ್ದಾರೆ ಎಂದು ಭಾವಿಸಿ ಅದರಂತೆ ಪರಿಹಾರವನ್ನು ಘೋಷಿಸಬೇಕೆಂದು ಉಚ್ಚ ನ್ಯಾಯಾಲಯವನ್ನು ಕೋರಲಾಯಿತು. ಆ ರಿಟ್ ಅರ್ಜಿಯಲ್ಲಿ ಆದ ತೀರ್ಮಾನದಂತೆ ಕೆ.ಪಿ. ಮುರಳೀಧರನ್ ವಾಯು ದಾಳಿಯಲ್ಲಿ ಕಾಣದಾದ ಹಿನ್ನೆಲೆಯಲ್ಲಿ ಅವರನ್ನು ತತ್ವಾಧಾರಿತ ನಿವೃತ್ತಿ ಪಡೆದಿದ್ದಾರೆ ಎಂದು ಘೋಷಿಸಿ ವಿಂಗ್ ಕಮಾಂಡರ್ ಹುದ್ದೆಯಲ್ಲಿ ನಿವೃತ್ತಿ ಪಡೆದವರು ಎಂದು ಪರಿಗಣಿಸಿ ಆತ ನಿವೃತ್ತನಾಗುವವರೆಗೆ ಕೊಡಬೇಕಾದ ಸೇವಾ ಸೌಲಭ್ಯಗಳನ್ನು ತಾಯಿಗೆ ಕೊಡಬೇಕೆಂದು ಆಜ್ಞೆ ನೀಡಿತು. ಆದರೆ ಮಾಲತಿ ಅಮ್ಮನ ಶೋಕಗಾಥೆ ಇಲ್ಲಿಗೆ ಮುಗಿಯಲಿಲ್ಲ. ಸಂಬಂಧಪಟ್ಟ ದಾಖಲೆಗಳನ್ನು ಕೊಡಿ ಎಂದು ವರ್ಷಾನುಗಟ್ಟಲೆ ಅಲೆಸಲಾಯಿತು. ಬಹುಷಃ ಈ ಆಘಾತಗಳ ಸರಮಾಲೆಯನ್ನು ತಡೆಯುವುದು ಆಕೆಗೆ ಸಾಧ್ಯವಾಗಲಿಲ್ಲ. 2008ರಲ್ಲಿ ಮಾಲತಿ ಅಮ್ಮ ಇಹಲೋಕ ತ್ಯಜಿಸಿದರು. ದೇಶಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಂಡವನ ತಾಯಿಗೆ ದೇಶ ತೋರಿದ ಕೃತಜ್ಞತೆಯ ಪರಿ ಇದು.
ನಂತರ ಆತನ ಸಹೋದರಿ ಲಲಿತಾ ಕೃಷ್ಣಕುಮಾರ್ ಸೇನಾಧಿಕಾರಿಗೆ ತಾನೊಬ್ಬಳೇ ಉತ್ತರಾಧಿಕಾರಿಯೆಂದೂ ಸದರಿ ಹಣ ತನಗೆ ಕೊಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಅದಕ್ಕೆ ಪೂರಕವಾಗಿ ಮಂಜೇರಿಯ ನ್ಯಾಯಾಲಯದ ತೀರ್ಪಿನ ಪ್ರತಿ ಮತ್ತು ಗುಜರಾತ್ ಉಚ್ಚ ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಸಲ್ಲಿಸಿದರು. ಆ ಕಾಲಕ್ಕೆ ಲಲಿತಾರವರು ತನ್ನ ಗಂಡ ಮತ್ತು ಮಕ್ಕಳೊಂದಿಗೆ ಮೈಸೂರಿನಲ್ಲಿ ನೆಲೆಸಿ ಆಗಿತ್ತು. ಆ ಹಿನ್ನೆಲೆಯಲ್ಲಿ ತಾನೂ ಮಾಲತಿ ಅಮ್ಮನಿಗೆ ಒಬ್ಬಳೇ ವಾರಸುದಾರಳು ಎಂಬುದಾಗಿ ಮೈಸೂರು ತಾಲೂಕು ತಹಸೀಲ್ದಾರರ ಕಾರ್ಯಾಲಯದಿಂದ ಒಂದು ದೃಢೀಕರಣ ಪತ್ರವನ್ನು ಸಹ ಪಡೆದು ಅದನ್ನೂ ಸಹ ಸರ್ಕಾರಕ್ಕೆ ಕಳುಹಿಸಲಾಯಿತು.
ಇಷ್ಟೆಲ್ಲ ದಾಖಲಾತಿಗಳನ್ನು ಸಲ್ಲಿಸಿದರೂ ದಳ ಕಾರ್ಯಾಲಯದಿಂದ ಲಲಿತಾರವರಿಗೆ ಅವರು ತಮ್ಮ ತಾಯಿಯ ಏಕಮಾತ್ರ ವಾರಸುದಾರಳು ಅಲ್ಲದೆ ಆ ಹಕ್ಕಿನ ಮೂಲಕ ಹಣವನ್ನು ಪಡೆದುಕೊಳ್ಳಲು ಹಕ್ಕುಳ್ಳವಳು ಎಂದು ನ್ಯಾಯಾಲಯದಿಂದ ಉತ್ತರಾಧಿಕಾರ ಪತ್ರ ಪಡೆದುಕೊಳ್ಳಬೇಕೆಂದು ಸೂಚಿಸಲಾಯಿತು.
ನ್ಯಾಯಾಲಯ ಅನುಸರಿಸುವ ಕ್ರಮದಂತೆ ಪತ್ರಿಕೆಯಲ್ಲಿ ಪ್ರಚುರಪಡಿಸಲಾಯಿತು. ನ್ಯಾಯಾಲಯದಿಂದ ದೃಢೀಕರಣ ಪತ್ರ ಲಲಿತಾರವರಿಗೆ ಪರಿಹಾರದ ಹಣ ಕೊಡಬೇಕೆಂದು ಆದೇಶವಾಯಿತು. ಅದು ಪಡೆದುಕೊಳ್ಳಬೇಕಾದರೆ ಕಟ್ಟಬೇಕಾದ ಹೆಚ್ಚು ಕಡಿಮೆ ರು. 40,000 ಶುಲ್ಕವನ್ನು ಕಟ್ಟಿ ದೃಢೀಕರಣ ಪತ್ರವನ್ನು 2013ರ ಕೊನೆಯಲ್ಲಿ ಪಡೆದುಕೊಳ್ಳಲಾಯಿತು. ಸದರಿ ಪತ್ರವನ್ನು ವಾಯು ದಳಕ್ಕೆ ಸಲ್ಲಿಸಿ ಹಣವನ್ನು ಇನ್ನೂ ಪಡೆದುಕೊಳ್ಳಬೇಕಾಗಿದೆ.
1971ರಿಂದ 2014ರವರೆಗೆ 43 ವರ್ಷಗಳು ಕಳೆದು ಹೋಗಿವೆ. ಹಣವಿನ್ನೂ ಲಲಿತಾರವರಿಗೆ ತಲುಪಿಲ್ಲ. ಲಲಿತಾರವರಿಗೆ ತಮ್ಮ ಜೀವಿತಾವಧಿಯಲ್ಲಿ ಹಣ ಪಡೆದುಕೊಳ್ಳುವ ಬಗ್ಗೆ ವಿಶ್ವಾಸವಿದೆ. ಬಹುಶಃ ಅದು ಸಿಗಬಹುದು.
ಏತನ್ಮಧ್ಯೆ ಮಾಲತಿ ಅಮ್ಮ ಮತ್ತು ಲಲಿತಾ ಕೇಂದ್ರ ಸರ್ಕಾರದೊಂದಿಗೆ ಮಾಡಿದ ಪತ್ರ ವ್ಯವಹಾರಗಳಿಗೆ ಲೆಕ್ಕವಿಲ್ಲ. ಮುರಳೀಧರನ್ ಪಾಕಿಸ್ತಾನಿ ಸೆರೆಯಲ್ಲಿ ಇದ್ದಾರೆಯೇ? ಇದ್ದರೆ ಅದರ ಬಗ್ಗೆ ಸೆರೆಯಾಳುಗಳನ್ನು ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಾಡಿದ ಕ್ರಮಗಳನ್ನು ತನಗೆ ತಿಳಿಸಬೇಕೆಂದು ಮಾಲತಿ ಒತ್ತಾಯಿಸಿದ್ದರು.
ಮಂತ್ರಿಗಳ, ಸಂಸದರ, ಶಾಸಕರ, ಅಧಿಕಾರಿಗಳ ತೆವಲುಗಳಿಗೆ ಲೆಕ್ಕವಿಲ್ಲದಂತೆ ಹಣ ಖರ್ಚು ಮಾಡುವ ಹಾಗೂ ಅದರ ಕುರಿತು ಮೈ ತುರಿಸಿಕೊಳ್ಳುವ ಸರ್ಕಾರ ತನಗೆ ಈ ವಿಷಯ ಸಂಬಂಧವಿಲ್ಲದಂತೆ ನಡೆದುಕೊಂಡಿತು. ಬೇರೆ ಸೈನಿಕ ಕೈದಿಗಳನ್ನು ಬಿಡಿಸಿಕೊಳ್ಳುವ ಸಲುವಾಗಿ ಪಾಕಿಸ್ತಾನಿ ಜೈಲುಗಳಲ್ಲಿ ಬಂಧಿ ಕೈದಿಗಳನ್ನು ಬಿಡಿಸಿಕೊಳ್ಳಲು ಹೋದವರಿಗೆ ಪಕ್ಕದ ಸೆಲ್ನಿಂದ ಅರಚಿಕೊಳ್ಳುವುದು ಕೇಳಿ ಬಂದಿತು. ಅದೇನೆಂದು ವಿಚಾರಿಸಿದಾಗ ಅಲ್ಲಿಯೂ ಭಾರತೀಯ ಯುದ್ಧ ಕೈದಿಗಳಿದ್ದಾರೆ ಎಂದು ತಿಳಿದು ಬಂತು. ದೇಶವಾಸಿಗಳಾದ 125 ಕೋಟಿ ಭಾರತೀಯರಲ್ಲಿ ಸೈನಿಕರು ನಾಮ ಮಾತ್ರದವರು ಎಂದುಕೊಂಡಿರುವ ಸರ್ಕಾರಕ್ಕೆ ಮಾಲತಿ ಅಮ್ಮ, ಲಲಿತಾರಂತಹವರ ಕೂಗು ಮುಟ್ಟುವುದಾದರೂ ಹೇಗೆ?
   ತಮ್ಮ ವೈಯಕ್ತಿಕ ವರ್ಚಸ್ಸನ್ನು ಸದಾ ಬೆಳೆಸಿಕೊಳ್ಳುವ ತವಕದಲ್ಲಿರುವ ದೇಶವನ್ನಾಳುವವರಿಗೆ ಸಾಮಾನ್ಯ ಸೈನಿಕನ ಕೂಗು ತಲುಪುವುದಾದರೂ ಸಾಧ್ಯವೇ? ಹಗರಣಗಳಲ್ಲಿ ಸಿಲುಕಿ ಅವುಗಳಿಂದ ಬಿಡಿಸಿಕೊಳ್ಳುವ, ಅದಕ್ಕಾಗಿ ತಹತಹಿಸುವ ರಾಜಕಾರಣಿಗಳಿಗೆ ಯಕಶ್ಚಿತ್ ಶ್ರೀಸಾಮಾನ್ಯನೊಬ್ಬನ ಅಹವಾಲಿಗೆ ಸ್ಪಂದಿಸಲು ಸಮಯವಾದರೂ ಎಲ್ಲಿದೆ?
ಮಾಲತಿ ಅಮ್ಮನ ಆತ್ಮಕ್ಕೆ ಮುಕ್ತಿ ಸಿಗಲೇ ಇಲ್ಲ. ತನ್ನ ಮಗ ಇದ್ದಾನೋ ಇಲ್ಲವೋ ಎಂಬುದೇ ಆಕೆಗೆ ಗೊತ್ತಾಗಲೇ ಇಲ್ಲ. ಜಡ್ಡುಗಟ್ಟಿ ಹೋಗಿರುವ ವ್ಯವಸ್ಥೆಯಲ್ಲಿ ಅವುಗಳಿಗೆ ಪರಿಹಾರ ಕಾಣುವುದಾದರೂ ಎಲ್ಲಿ? ನಾಯಕ ಪೂಜೆ ಎನ್ನುತ್ತಾ ಬೇರೆ ಪೂಜೆಗಳಲ್ಲಿ ತೊಡಗುವ ಸಮಾಜದಿಂದ ಏನನ್ನಾದರೂ ನಿರೀಕ್ಷಿಸುವುದು ಹೇಗೆ ಸಾಧ್ಯ?



- ಪಿ.ಡಿ. ಮೇದಪ್ಪ
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.