ಸಿಂಧೂರಕ್ಷಕ-ರತ್ನಗಳ ಅವಘಡದೆದುರು ಭಾರತದ ಸಂದಿಗ್ಧ

ಭಾರತೀಯ ನೌಕಾಪಡೆಯಲ್ಲಿ ಸಿಂಧೂ ಶ್ರೇಣಿಯ ಜಲಾಂತರ್ಗಾಮಿ ನೌಕೆ ಸಿಂಧುರತ್ನ ಅವಘಡಕ್ಕೆ ತುತ್ತಾಗಿದೆ. ಅದರಲ್ಲಿದ್ದ ಇಬ್ಬರು ಅಧಿಕಾರಿಗಳು ಮೃತರಾಗಿರುವ ಶಂಕೆ ಇದ್ದು, ನೌಕಾಪಡೆ ಮುಖ್ಯಸ್ಥರ ರಾಜಿನಾಮೆ ವಿದ್ಯಮಾನವೂ ನಡೆದಿದೆ. ಇಂಥ ಅವಘಡ ಇದೇ ಮೊದಲಲ್ಲ. 2013ರ ಆಗಸ್ಟ್ನಲ್ಲಿ ಈ ಶ್ರೇಣಿಯ 'ಐಎನ್ಎಸ್ ಸಿಂಧೂರಕ್ಷಕ' ಜಲಾಂತರ್ಗಾಮಿ ನೌಕೆ ಮುಳುಗಿಹೋಗಿತ್ತು. ರಷ್ಯಾನಿರ್ಮಿತ ಈ ನೌಕೆಗಳೆಲ್ಲ ಈ ಗತಿ ಕಾಣುತ್ತಿರುವುದನ್ನು ಭಾರತ ಹೇಗೆ ನಿಭಾಯಿಸಬೇಕು ಎಂಬ ನಿಟ್ಟಿನಲ್ಲಿ ಬೆಳಕು ಚೆಲ್ಲುವ ಲೇಖನವಿದು. ಈ ಹಿಂದೆ ಐಎನ್ಎಸ್ ಸಿಂಧುರಕ್ಷಕ ಮುಳುಗಿದ ಸಂದರ್ಭದಲ್ಲೇ ಬರೆದಿರುವಂಥದ್ದು. ಇಲ್ಲಿನ ಆತಂಕಗಳು ಈಗಲೂ ಪ್ರಸ್ತುತವಾಗಿರುವುದರಿಂದ ಆ ಬರಹ..
------
ರಷ್ಯಾ ನಿರ್ಮಿತ ಡಿಸೇಲ್- ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆ ಐಎನ್ಎಸ್ ಸಿಂಧುರಕ್ಷಕ 2013ರ ಆಗಸ್ಟ್ 14ರಂದು ಮುಂಬೈ ಸಮುದ್ರ ಪ್ರದೇಶದಲ್ಲಿ ಮುಳುಗಿಹೋಯಿತು. ಈ ವಿದ್ಯಮಾನ ನಡೆಯುತ್ತಿದ್ದಂತೆ ರಕ್ಷಣಾ ಇಲಾಖೆಯ ಉನ್ನತ ಹಂತದಲ್ಲಿ ಚರ್ಚೆಗಳಾದವು. ಏನೇ ಆದರೂ ಐಎನ್ಎಸ್ ಸಿಂಧೂರಕ್ಷಕದ ವಿಷಯದಲ್ಲಿ ರಷ್ಯನ್ ಕಂಪನಿಗೆ ವಾರಂಟಿ ಕಾಯ್ದೆಯನ್ನು ವಿಧಿಸುವುದು ಬೇಡ ಎಂದೇ ತೀರ್ಮಾನವಾಯಿತು. ಹಾಗೆಂದು ಈ ಲೇಖಕನಿಗೆ ಹೆಸರು ಬಹಿರಂಗಗೊಳಿಸುವುದಕ್ಕೆ ಇಚ್ಛಿಸದ ಅಧಿಕಾರಿಗಳೊಬ್ಬರು ತಿಳಿಸಿದ್ದರು. ವಾಸ್ತವದಲ್ಲಿ, ಆಗಷ್ಟೇ ಮಾಸ್ಕೋದಲ್ಲಿ ಮುಕ್ತಾಯವಾದ ಹದಿನಾಲ್ಕನೇ ಇಂಡೊ-ರಷ್ಯನ್ ಶೃಂಗದಲ್ಲಿ ಭಾರತದ ಪ್ರಧಾನಿ ಮನಮೋಹನ ಸಿಂಗ್ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ರಕ್ಷಣಾ ವಿಭಾಗದಲ್ಲಿ ಉಭಯದೇಶಗಳ ಸಹಕಾರವನ್ನು ಇನ್ನಷ್ಟು ಗಾಢಗೊಳಿಸುವ ಬಗ್ಗೆಯೇ ಮಾತನಾಡಿದ್ದರು. ಅಲ್ಲಿ ಐಎನ್ಎಸ್ ಸಿಂಧೂರಕ್ಷಕ್ಗೆ ಒದಗಿದ ಪರಿಸ್ಥಿತಿಯೂ ಚರ್ಚೆ ಆಗದೇ ಇದ್ದಿರಲಿಲ್ಲ.
ಹೀಗೆಲ್ಲ ವಾರಂಟಿ ಕಾಯ್ದೆ ಬಗ್ಗೆ ಪಟ್ಟು ಹಿಡಿಯದೇ ಇರುವುದಕ್ಕೆ ಭಾರತಕ್ಕೆ ಎದುರಾಗಿರುವ ಪರಿಸ್ಥಿತಿ ಕುರಿತೂ ಸಾಂದರ್ಭಿಕ ಪುರಾವೆಗಳಿವೆ. ಸಿಂಧೂರಕ್ಷಕದ ಗುತ್ತಿಗೆಯಲ್ಲಿ ವಾರಂಟಿ ಕಾಯ್ದೆಯ ಬಗ್ಗೆ ಬಹಳ ಒತ್ತು ನೀಡಿದ್ದರೆ ಅವಘಡ ಸಂಭವಿಸಿದಾಗ ಮೊದಲು ಆ ಜಲಾಂತರ್ಗಾಮಿಯನ್ನು ತಲುಪುವುದಕ್ಕೆ ರಷ್ಯನ್ನರಿಗೇ ಅನುವು ಮಾಡಿಕೊಡಬೇಕಿತ್ತು. ಅಲ್ಲಿ ವಿಧಿವಿಜ್ಞಾನ ಪ್ರಯೋಗವನ್ನು ನಡೆಸಿ, ಜಲಾಂತರ್ಗಾಮಿ ಮುಳುಗುವುದಕ್ಕೆ ನಿಜ ಕಾರಣವೇನು ಎಂಬುದನ್ನು ಅವರೇ ನಿರ್ಧರಿಸುತ್ತಿದ್ದರು. ಆದರೆ ಹಾಗೇನೂ ಆಗಲಿಲ್ಲ. ಕಳೆದ ವರ್ಷ ಘಟಿಸಿದ ಐಎನ್ಎಸ್ ಸಿಂಧೂರಕ್ಷಕ ಅವಘಡ ಶಾಂತಿಕಾಲದಲ್ಲಿ ಅಪ್ಪಳಿಸಿದ ದೊಡ್ಡ ಆಘಾತ ಎಂದೇ ಹೇಳಬಹುದು. ಹೀಗಾಗಿ ಈ ಘಟನೆ ವರದಿಯಾಗುತ್ತಿದ್ದಂತೆ ರಷ್ಯಾವು ಭಾರತಕ್ಕೆ ಸಹಕರಿಸುವುದಾಗಿ ಹೇಳಿತು. ಆದರೆ ಸಿಂಧೂರಕ್ಷಕ ಜಲಾಂತರ್ಗಾಮಿಯು ಸಮುದ್ರದ ತಳ ಕಂಡು ತಿಂಗಳುಗಳೇ ಕಳೆದರೂ ಭಾರತವು ರಷ್ಯನ್ನರಿಗೆ ಅದನ್ನು ಪರೀಕ್ಷಿಸುವುದಕ್ಕೆ ಬಿಡಲಿಲ್ಲ. ಭಾರತದ ತನಿಖೆ ಸಂಪೂರ್ಣ ಮುಗಿದ ನಂತರವಷ್ಟೇ ಅವರಿಗೆ ಅವಕಾಶ ಕೊಡುವುದು ಎಂಬುದು ಮಿಲಿಟರಿ ನಿಲವು. ಅರಬ್ಬಿ ಸಮುದ್ರದ ಹೊಟ್ಟೆ ಸೇರಿರುವ ಆ ಜಲಾಂತರ್ಗಾಮಿಯನ್ನು ಮತ್ತೆ ಚಲಿಸುವಂತೆ ಮಾಡುವ ಕಾರ್ಯ, ಅಂತಾರಾಷ್ಟ್ರೀಯ ಪರಿಣತರ ಒಡಗೂಡಿ 2014ರ ಫೆಬ್ರವರಿಯಲ್ಲಿ ಶುರುವಾಗಿದೆ ಅಷ್ಟೆ. ಅದರ ಅಂದಾಜು ವೆಚ್ಚವೇ 200 ಕೋಟಿ ರುಪಾಯಿಗಳು.
ಸಿಂಧೂರಕ್ಷಕದ ವಾರಂಟಿ ಮುಕ್ತಾಯವಾಗಿದ್ದು ಜನವರಿ 2014ಕ್ಕೆ. ಅಷ್ಟರೊಳಗೇ ಸಿಂಧೂರಕ್ಷಕವನ್ನು ದಡಕ್ಕೆಳೆದು ತಂದಿದ್ದರು ಅಂತಲೇ ಇಟ್ಟುಕೊಂಡಿದ್ದರೂ ರಷ್ಯನ್ನರಿಗೆ ಡ್ಯಾಮೇಜ್ ತುಂಬಿಕೊಡಿ ಅಂತ ಸುಲಭಕ್ಕೆ ನೋಟೀಸ್ ಕೊಡುವುದಕ್ಕೆ ಆಗುತ್ತಿರಲಿಲ್ಲ. ಆ ನಿಟ್ಟಿನಲ್ಲಿ ಕೆಲ ತಾಂತ್ರಿಕ ವಾದಗಳು ಅಡ್ಡಬರುತ್ತಿದ್ದವು. ಆಗಿರುವ ಅಪಘಾತದ ನಷ್ಟ ತುಂಬಿಕೊಡಿ ಎಂದು ರಷ್ಯನ್ನರನ್ನು ಕೇಳಬೇಕಾದರೆ ಅವಘಡ ಆಗಿರುವುದು ಯಾರದ್ದೋ ದಾಳಿಯಿಂದಲೋ, ಮಾನವ ಪ್ರಮಾದದಿಂದಲೋ ಅಥವಾ ತಾಂತ್ರಿಕ ದೋಷದಿಂದಲೋ ಎಂಬುದನ್ನು ಸೂಕ್ತವಾಗಿ ಋಜುವಾತು ಪಡಿಸಬೇಕು. ಈ ಪೈಕಿ ಮೊದಲಿನೆರಡು ಅಂಶಗಳಿಗೆ ರಷ್ಯನ್ ಕಂಪನಿ ಉತ್ತರದಾಯಿ ಆಗುವುದಿಲ್ಲ. ಜಲಾಂತರ್ಗಾಮಿಯ ಶಸ್ತ್ರ ವ್ಯವಸ್ಥೆ, ಚಾರ್ಜಿಂಗ್ ವ್ಯವಸ್ಥೆ ಹೀಗೆ ರಷ್ಯನ್ ನಿರ್ಮಿತಿಗೆ ಸಂಬಂಧಿಸಿದ ತಾಂತ್ರಿಕ ದೋಷದಿಂದಲೇ ಅವಘಡ ಸಂಭವಿಸಿರುವುದು ಪಕ್ಕಾ ಆದಾಗಲಷ್ಟೇ ಅವರ ಬಳಿ ಪರಿಹಾರ ಕೇಳಬಹುದು. ಆದರೆ ಇವೆಲ್ಲ ಆಗಬೇಕು ಅಂತಾದರೆ ಅವಘಡಕ್ಕೆ ತುತ್ತಾದ ಜಲಾಂತರ್ಗಾಮಿಯನ್ನು ಮೊದಲಿಗರಾಗಿ ಪ್ರವೇಶಿಸಿ ಪರೀಕ್ಷೆಗೆ ಒಳಪಡಿಸಿದವರು ರಷ್ಯನ್ನರೇ ಆಗಿರಬೇಕು. ಭಾರತ ನಡೆಸಿದ ಫೊರೆನ್ಸಿಕ್ ಪರೀಕ್ಷೆಗಳು ಅವರ ಪಾಲಿಗೆ ವಿಶ್ವಾಸಾರ್ಹವಾಗುವುದಿಲ್ಲ.
ರಷ್ಯದ ಜತೆ ವಾರಂಟಿ ನೀತಿಯನ್ನು ಕಟ್ಟುನಿಟ್ಟಾಗಿ ಪ್ರತಿಪಾದಿಸದೇ ಇರಲಿಕ್ಕಿರುವ ಇನ್ನೊಂದು ಕಾರಣ ರಾಜಕೀಯ ಹಾಗೂ ರಾಜತಾಂತ್ರಿಕ ಆಯಾಮದ್ದು. ಐಎನ್ಎಸ್ ಸಿಂಧೂರಕ್ಷಕದ ಮೇಲೆ ಭಾರತವು ಬಿಲಿಯಾಂತರ ಡಾಲರುಗಳನ್ನು ಖರ್ಚು ಮಾಡಿತ್ತು ಎಂಬುದೇನೋ ನಿಜ. ಖರೀದಿ ಹಾಗೂ ನಂತರದ ಗುಣಮಟ್ಟ ಮೇಲ್ದರ್ಜೆಗೇರಿಸುವಿಕೆ ಪ್ರಕ್ರಿಯೆಗೆ ಭಾರಿ ಹಣ ಖರ್ಚಾಗಿರುವುದು ಹೌದಾದರೂ ರಾಜತಾಂತ್ರಿಕ ಬಾಂಧವ್ಯದ ಎದುರು ಅದೇನೂ ಅತಿಮೌಲ್ಯ ಎನ್ನಿಸುವುದಿಲ್ಲ. ವಾರಂಟಿ ಬಗ್ಗೆ ಪಟ್ಟು ಹಿಡಿಯುವುದನ್ನು ರಷ್ಯನ್ನರು ಸಹಜವಾಗಿಯೇ ವಿರೋಧಿಸುತ್ತಾರೆ. ಭಾರತ ಹಠ ತೊಟ್ಟರೆ ಅದು ಉಭಯ ದೇಶಗಳ ನಡುವಿನ ಕಾರ್ಯತಂತ್ರ ಭಾಂದವ್ಯವನ್ನು ಮುಕ್ಕಾಗಿಸುತ್ತದೆ.
ಜಲದೊಡಲು ಸೇರಿದ ಜಲಾಂತರ್ಗಾಮಿಯನ್ನು ತೀರಕ್ಕೆಳೆದು ತಂದಾದ ಮೇಲಷ್ಟೇ ಈ ಎಲ್ಲ ಕಾನೂನು ಪ್ರಕ್ರಿಯೆಗಳ ಮಾತು. ಸದ್ಯೋಭವಿಷ್ಯದಲ್ಲಂತೂ ಅಂಥ ಲಕ್ಷಣಗಳಿಲ್ಲ. ಈ ಬಗ್ಗೆ ಸುಮ್ಮನೇ ಗಲಾಟೆ ಎಬ್ಬಿಸುವುದು ಬೇಡ ಎಂಬ ಧೋರಣೆಯನ್ನೇ ಭಾರತ ತಾಳಿದಂತಿದೆ. ಭಾರತವು ರಷ್ಯಾದೊಂದಿಗೆ ಹೊಂದಿರುವಂಥ ರಕ್ಷಣಾ ಸಂಬಂಧವು ಅರೆ ಶತಮಾನ ಪ್ರಾಯದ್ದು. ಈ ಸಂಬಂಧದಲ್ಲಿ ಮಾಸ್ಕೊ ಹಲವು ಬಾರಿ ಮುಗ್ಗರಿಸಿದ್ದು ಹೌದಾದರೂ ಭಾರತ ಅದನ್ನು ಯಾವತ್ತೂ ಕಟಕಟೆಯಲ್ಲಿ ನಿಲ್ಲಿಸಿಲ್ಲ. ಮೊನ್ನೆ ಮೊನ್ನೆಯಷ್ಟೇ ಭಾರತಕ್ಕೆ ಸಿಕ್ಕ ಐಎನ್ಎಸ್ ವಿಕ್ರಮಾದಿತ್ಯ ನೌಕೆಯನ್ನು ನಮಗೆ ಪೂರೈಸುವ ನಿಟ್ಟಿನಲ್ಲಿ ರಷ್ಯಾ ಹಲವು ಅಂತಿಮ ಗಡವುಗಳನ್ನು ಮೀರಿತು. ಹೇಳಿದ ಸಮಯವನ್ನು ಮೀರಿ ಎಷ್ಟೋ ಕಾಲಾವಧಿ ನಂತರ ವಿಕ್ರಮಾದಿತ್ಯ ಭಾರತದ ತೀರ ಸೇರಿದೆ. ಒಪ್ಪಂದ ನಿಯಮಗಳಿಗೇ ಗಟ್ಟಿಯಾಗಿ ಆತುಕೊಂಡರೆ ಇದಕ್ಕಾಗಿ ರಷ್ಯನ್ನರಿಗೆ ದಂಡ ವಿಧಿಸಬಹುದಾಗಿದೆ. ಈ ವಿಳಂಬದ ಕಾರಣದಿಂದಾಗಿಯೇ ನೌಕೆಯ ಬೆಲೆ ಅವೆಷ್ಟೋ ಪಟ್ಟು ಹೆಚ್ಚಾಗಿರುವುದು ಹೌದಾದರೂ ಭದ್ರತೆ ವಿಷಯದಲ್ಲಿ ಬಹುಕಾಲದ ಸಹಭಾಗಿಯಾಗಿರುವ ರಷ್ಯಾವನ್ನು ಕಟಕಟೆಯಲ್ಲಿ ನಿಲ್ಲಿಸುವುದಾಗಲೀ, ಅದನ್ನು ಪ್ರಶ್ನಿಸುವುದಾಗಲೀ ಭಾರತಕ್ಕೆ ಇಷ್ಟವಿಲ್ಲ.
ಒಟ್ಟಾರೆಯಾಗಿ ಸಿಂಧೂರಕ್ಷಕದ ಸುತ್ತಲಿನ ವಿಷಯಗಳನ್ನು ಸಂಘರ್ಷವಲ್ಲದೇ ಬಹಳ ಸಹಕಾರ ಮನೋಭಾವದಿಂದ, ದೂರಗಾಮಿ ರಾಜಕೀಯ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ವಹಿಸಬೇಕು ಎಂಬುದೇ ಭಾರತದ ಕಾರ್ಯತಂತ್ರವಾಗಿದೆ.
ರಾಜೀವ್ ಶರ್ಮ
ರಕ್ಷಣಾ ಪರಿಣತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


