

ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್... ಕರ್ನಾಟಕದ ರಾಜಕೀಯದ ಮೇಲೆ ಹಿಡಿತ ಸಾಧಿಸುತ್ತಾ ಬಂದಿರುವ ಪಕ್ಷಗಳು. ಇವುಗಳನ್ನು ಹೊರತು ಪಡಿಸಿ ಬೇರೆ ಯಾವ ಪಕ್ಷಗಳಿಗೂ ಮಿಂಚಲು ಸಾಧ್ಯವಾಗಿಲ್ಲ. ಆದರೆ ಈ ಏಕಸ್ವಾಮ್ಯವನ್ನು ಆಮ್ ಆದ್ಮಿ ಪಕ್ಷ ಮುರಿಯಬಲ್ಲದು. ದೆಹಲಿಯ ಅತ್ಯದ್ಭುತ ಗೆಲುವಿನ ನಂತರ, ಆ ಪಕ್ಷ ಕರ್ನಾಟಕದ ಮತದಾರರ ಗಮನವನ್ನು ತನ್ನತ್ತ ಬಲವಾಗಿ ಸೆಳೆದಿದೆ. ಕೊನೆಗೂ ವಿಶ್ವಾಸಾರ್ಹ ಪರ್ಯಾಯವೊಂದು ಕರ್ನಾಟಕಕ್ಕೆ ದೊರಕಿದೆ. ಕರ್ನಾಟಕಕ್ಕೂ ಆಪ್‌ನ ಸ್ಪರ್ಷದ ಅಗತ್ಯವಿದೆ ಎಂದು ಮತದಾರರು ಭಾವಿಸುತ್ತಿದ್ದಾರೆ. ಆಡಳಿತದ ಅಭಾವ, ಹೆಚ್ಚುತ್ತಿರುವ ಭ್ರಷ್ಟಾಚಾರ ಮತ್ತು ರಾಜಕೀಯ ವರ್ಗದ ಅಸಂವೇದಿ ಗುಣವನ್ನು ನೋಡಿ ಅವರು ರೋಸಿಹೋಗಿದ್ದಾರೆ.
ಕೆಲ ವರ್ಷಗಳ ಹಿಂದೆ ಅಣ್ಣಾ ಹಜಾರೆಯವರು ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ನಡೆಸಿದಾಗ, ಕರ್ನಾಟಕದ ವಿದ್ಯಾವಂತ ಮಧ್ಯಮ ವರ್ಗ ಆ ಹೋರಾಟದಲ್ಲಿ ಭಾಗಿಯಾಯಿತು. ಬೆಂಗಳೂರಷ್ಟೇ ಅಲ್ಲದೆ, ರಾಜ್ಯದ ವಿವಿಧ ಭಾಗಗಳ, ವಿವಿಧ ಕ್ಷೇತ್ರಗಳ ಜನರು- ವಿದ್ಯಾರ್ಥಿಗಳು, ಶಿಕ್ಷಕರು, ವಕೀಲರು, ವೈದ್ಯರು, ಐಟಿ ಮಂದಿ, ನಿವಾಸಿ ಕಲ್ಯಾಣ ಸಂಘಗಳು, ಎನ್‌ಜಿಒಗಳು, ಸಾಮಾಜಿಕ ಕಾರ್ಯಕರ್ತರು...ಹೀಗೆ ಎಲ್ಲರೂ ಬಹುಸಂಖ್ಯೆಯಲ್ಲಿ ಮುಂದೆ ಬಂದು ರ್ಯಾಲಿಗಳಲ್ಲಿ ಭಾಗಿಯಾದರು, ಉಪವಾಸ ಕುಳಿತರು. ಹೋರಾಟದ ವ್ಯಾಪ್ತಿ ಮತ್ತು ತೀವ್ರತೆಯಲ್ಲಿ ದೆಹಲಿಯ ನಂತರದ ಸ್ಥಾನ ಬೆಂಗಳೂರಿಗೇ ದೊರಕಿತ್ತು. ವಿದ್ಯಾವಂತ, ನಿಷ್ಠಾವಂತ ಸಾಮಾಜಿಕ ಕಾರ್ಯಕರ್ತರು ಆಗ ಚುನಾವಣೆಯಲ್ಲಿ ಸ್ಪರ್ಧಿಸಿದರಾದರೂ, ಒಂದು ವಿಶ್ವಾಸಾರ್ಹ ಬ್ಯಾನರ್ ಸಿಗದೇ ವಿಫಲರಾದರು. ಈಗ ಆಮ್ ಆದ್ಮಿ ಪಕ್ಷದ ಆಗಮನ ಅವರಲ್ಲಿ ಭರವಸೆ ಮೂಡಿಸಿದೆ.
ಆದರೆ ಅದರ ಆಗಮನ ಕರ್ನಾಟಕದ ಮೂರು ಸಾಂಪ್ರದಾಯಿಕ ಪಕ್ಷಗಳನ್ನು ನಡುಗಿಸುತ್ತಿರುವುದಂತೂ ಸುಳ್ಳಲ್ಲ. ಲೋಕಸಭಾ ಚುನಾವಣೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳು ಹೊಸ ಎದುರಾಳಿಯನ್ನು ಎದುರಿಸಲು ಸರ್ವರೀತಿಯ ಪ್ರಯತ್ನ ಮಾಡುತ್ತಿವೆ. ಪಕ್ಷದಿಂದ ಹೊರಹಾಕಲ್ಪಟ್ಟ ನಾಯಕರನ್ನೂ ಮತ್ತೆ ಕರೆತರುತ್ತಿವೆ. ಅವುಗಳ ಬಿಡಾರದಲ್ಲಿ ಏನಾಗುತ್ತಿದೆ ಎನ್ನುವುದನ್ನು ಒಮ್ಮೆ ಇಣುಕಿ ನೋಡೋಣ...
ಈ ಮೂರು ರಾಜಕೀಯ ಪಕ್ಷಗಳಲ್ಲಿ ಅತಿ ಹೆಚ್ಚು ಕಳವಳಗೊಂಡಿರುವುದು ಆಡಳಿತ ಪಕ್ಷ ಕಾಂಗ್ರೆಸ್. ಅದಾಗ್ಯೂ ಕೇಂದ್ರ ಕಾಂಗ್ರೆಸ್ ಸರಣಿ ಹಗರಣಗಳಿಂದ ಹೆಸರು ಕೆಡಿಸಿಕೊಂಡಿದ್ದರೂ ಕೂಡ, ಬಿಜೆಪಿ ವಿರೋಧಿ ಅಲೆಯ ಮೇಲೆ ಸವಾರಿ ಮಾಡಿದ್ದ ರಾಜ್ಯ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ತದನಂತರ ನಡೆದ ಎಲ್ಲಾ ಉಪಚುನಾವಣೆಗಳಲ್ಲೂ ಅದು ಗೆಲುವು ಸಾಧಿಸಿತು. ವಿರೋಧಿಗಳ ಹಿಡಿತದಲ್ಲಿದ್ದ ಕ್ಷೇತ್ರಗಳಲ್ಲೂ ಕೂಡ! ಸ್ವಚ್ಛ ಚಹರೆಯನ್ನು ಜನತೆಯ ಮುಂದಿಡುವುದಕ್ಕಾಗಿ ಅದು ಕಳಂಕಿತ ನಾಯಕರಿಗೆ ಮಂತ್ರಿಗಿರಿ ಕೊಡಲು ನಿರಾಕರಿಸಿತು(ಆ ವ್ಯಕ್ತಿಗಳು ಪ್ರಭಾವಿಯಾಗಿದ್ದರೂ ಕೂಡ). ಲೋಕಸಭಾ ಚುನಾವಣೆಗಳಲ್ಲಿ ಅತ್ಯಧಿಕ ಸ್ಥಾನಗಳನ್ನು ಗಳಿಸುತ್ತೇನೆ ಎನ್ನುವ ಹುಮ್ಮಸ್ಸಿನಲ್ಲಿ ರಾಜ್ಯ ಕಾಂಗ್ರೆಸ್ ಇತ್ತಾದರೂ, ಆ ಹುಮ್ಮಸ್ಸು ಆಮ್ ಆದ್ಮಿ ಪಕ್ಷದ ಆಗಮನದಿಂದ ಕಡಿಮೆಯಾಗಿದೆ. ಅದಷ್ಟೇ ಅಲ್ಲ ಇದಕ್ಕೆ ನರೇಂದ್ರ ಮೋದಿಯವರ ಹೆಚ್ಚುತ್ತಿರುವ ಪ್ರಭಾವವೂ ಒಂದು ಕಾರಣ. ಈಗ ಈ ಪಕ್ಷದ ನಾಯಕರು ಯಾವ ಪಾಟಿ ಹೆದರಿದ್ದಾರೆಂದರೆ, ಬಿಜೆಪಿಯ ಮೇಲೆ ಭ್ರಷ್ಟಾಚಾರದ ಬಾಣವನ್ನು ಎಸೆಯುತ್ತಿದ್ದವರು, ಈಗ ಆ ಸುದ್ದಿಯನ್ನೇ ಎತ್ತುತ್ತಿಲ್ಲ. ಬದಲಾಗಿ ಅಂದು ತಾವು ದೂರವಿಟ್ಟ ಅದೇ ಕಳಂಕಿತ ನಾಯಕರನ್ನು ಈಗ ಮತ್ತೆ ಬಿಗಿದಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ವಿರೋಧಿ ಬಣವನ್ನು ಶಾಂತಗೊಳಿಸಲು ಕೆಲವರಿಗೆ ಸದ್ಯದಲ್ಲೇ ಕ್ಯಾಬಿನೆಟ್ ಬರ್ತ್‌ಗಳನ್ನು ಕೊಡುವ ಸಾಧ್ಯತೆಗಳು ಹೆಚ್ಚಿವೆ. ಈ ನಡೆಯಿಂದ ಕಾಂಗ್ರೆಸ್‌ಗೆ ಅನುಕೂಲವಾಗಲಿದೆಯೇ? ಕಾದು ನೋಡಲೇಬೇಕು.
ಕಾಂಗ್ರೆಸ್‌ನಂತೆಯೇ ಚಿಂತೆಗೀಡಾಗಿದೆ ಬಿಜೆಪಿ. 5 ವರ್ಷದ ಹಿಂದೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದ ಬಿಜೆಪಿ, ತನಗೆ ದೊರೆತ ಅವಕಾಶವನ್ನು ಬಳಸಿಕೊಂಡು ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಯಿತು. ಪಕ್ಷದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಧಿಕಾರದಾಹ, ಒಡಕುಗಳು ಹೆಚ್ಚಾಗುತ್ತಲೇ ಸಾಗಿದವು. ಕೊನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕುರ್ಚಿಯಿಂದ ಕೆಳಗಿಳಿಯಬೇಕಾಯಿತು. ನಂತರ ಸದಾನಂದ ಗೌಡರು ಆ ಜಾಗಕ್ಕೆ ಬಂದರಾದರೂ, ಅವರನ್ನೂ ಕೆಲವೇ ತಿಂಗಳಲ್ಲಿ ತೆಗೆದುಹಾಕಲಾಯಿತು. ಮುಂದೆ ಸಿಎಂ ಆದದ್ದು ಜಗದೀಶ್ ಶೆಟ್ಟರ್. ಆದರೆ ಶೆಟ್ಟರ್ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿನ ಹೊಂಡಕ್ಕೆ ದೂಡಿದರು. ಬಿಜೆಪಿಯಿಂದ ಹೊರಬಂದ ಯಡಿಯೂರಪ್ಪನವರು ಕೆಜೆಪಿ ಪಕ್ಷವನ್ನು ಸ್ಥಾಪಿಸಿ ಕೇಸರಿ ಪಕ್ಷದ ಮತಗಳನ್ನು ಒಡೆಯಲು ಸಫಲರಾಗಿದ್ದರು. ಕೆಲವು ತಿಂಗಳ ಹಿಂದೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಆಯ್ಕೆಯಾದಾಗ ರಾಜ್ಯ ಬಿಜೆಪಿಯ ಮುಖದಲ್ಲಿ ತುಸು ಧೈರ್ಯದ ಕಳೆ ಕಾಣಿಸಿತಾದರೂ, ಆಪ್‌ನ ಎಂಟ್ರಿ ಈಗ ಅದನ್ನು ಮಂಕಾಗಿಸಿದೆ.
ದೆಹಲಿಯಲ್ಲಿ ಬಿಜೆಪಿಯನ್ನು ಗೆಲುವಿನ ದಡ ಮುಟ್ಟದಂತೆ ತಡೆದಿದ್ದು ಆಮ್ ಆದ್ಮಿ ಪಕ್ಷ. ಆದಾಗ್ಯೂ ಬಿಜೆಪಿಯೇ ಅಧಿಕ ಸ್ಥಾನಗಳನ್ನು ಗಳಿಸಿತ್ತಾದರೂ, ನಾಲ್ಕು ಸ್ಥಾನಗಳ ಕೊರತೆಯಿಂದಾಗಿ ಸರ್ಕಾರ ರಚಿಸಲು ಅದು ವಿಫಲವಾಯಿತು. ಕರ್ನಾಟಕದಲ್ಲಿ 'ಆಪರೇಷನ್ ಕಮಲ'ದಂತೆ, ಅಲ್ಲಿ ವಿರೋಧೀ ಬಣದಿಂದ ನಾಲ್ಕು ಮಂದಿಯನ್ನು ಸೆಳೆಯಲು ಅದಕ್ಕೆ ಸಾಧ್ಯವಾಗಲಿಲ್ಲ. ಆದಾಗ್ಯೂ ಕರ್ನಾಟಕ ಬಿಜೆಪಿ ಮೋದಿ ಹೆಸರಿಂದಲೇ ಲಾಭ ಮಾಡಿಕೊಳ್ಳಲು ಸಿದ್ಧಾವಾಗುತ್ತಿದೆಯಾದರೂ, ಸುರಕ್ಷತೆಗಾಗಿ ಇನ್ನೊಂದೆಡೆ ಬಿ.ಎಸ್. ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತಂದಿದೆ. ಯಡಿಯೂರಪ್ಪ ಅವರ ಮೇಲಿರುವ ಆರೋಪ ಏನೇ ಇದ್ದರೂ, ಅವರಿಗೆ ಪಕ್ಷವನ್ನು ಒಗ್ಗೂಡಿಸುವ ಶಕ್ತಿಯಿದೆ ಎಂದು ಹಿರಿಯ ನಾಯಕರು ಭಾವಿಸಿದ್ದಾರೆ. ಈ ಕಾರಣಕ್ಕಾಗಿಯೇ ಬಿಎಸ್‌ವೈ ಅಂದು ಬಿಜೆಪಿಯನ್ನು ತೊರೆದು ಹೋದದ್ದನ್ನು, ಬಿಜೆಪಿ ನಾಯಕರ ಮೇಲೆ ಅವರು ಮಾಡಿದ ಅಂದಿನ ವಾಗ್ದಾಳಿಯನ್ನೂ ಮರೆತಿದ್ದಾರೆ. ಅವರ ವಿರುದ್ಧದ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪವನ್ನು ಚಾಪೆಯ ಕೆಳಗೆ ತೂರಿಸಿ ಮರೆಮಾಚಿದ್ದಾರೆ. ಬಿಎಸ್‌ವೈ ಬೇಷರತ್ ಹಿಂದಿರುಗಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಅವರು ಬಹಳ ಕಾಲದವರೆಗೆ ಸುಮ್ಮನೆ ಕೂಡುವ ವ್ಯಕ್ತಿಯಲ್ಲ. ತಮ್ಮ ಪಾಲನ್ನು ಪಡೆದೇ ತೀರುತ್ತಾರೆ. ಹಾಗಿದ್ದರೆ ಹಳಿ ತಪ್ಪಿರುವ ರಾಜ್ಯ ಬಿಜೆಪಿಯನ್ನು ಮತ್ತೆ ಪಟರಿ ಹತ್ತಿಸಿ, ಕಾಂಗ್ರೆಸ್ ಅನ್ನು ತಡೆದು ನಿಲ್ಲಿಸಬಲ್ಲರೇ ಯಡಿಯೂರಪ್ಪ? ಎಲ್ಲದಕ್ಕಿಂತಲೂ ಮುಖ್ಯವಾಗಿ, ಆಮ್ ಆದ್ಮಿ ಪಕ್ಷದ ಅಪಾಯವನ್ನು ಅವರು ಎದುರಿಸಬಲ್ಲರೇ?
ಜೆಡಿ(ಎಸ್) ಬಹಳ ಕಾಲದಿಂದ ಒದ್ದಾಡುತ್ತಲೇ ಇದೆ. ಅದರ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗುತ್ತಲೇ ಬಂದಿವೆ. ಮೊದಲು ಅದು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್‌ನ ಜೊತೆ ಕೈ ಜೋಡಿಸಿತು. ನಂತರ ಕಾಂಗ್ರೆಸ್‌ಗೂ ಕೈ ಕೊಟ್ಟಿತು. ಆಮೇಲೆ, ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಡಲು ಬಿಜೆಪಿ ಸಖ್ಯ ಬೆಳೆಸಿತು. ಕೊನೆಗೆ ಬಿಜೆಪಿಯ ಕಿವಿಗೆ ಕಮಲವಿಟ್ಟಿತು. ಹಾಗಾಗೇ ಮತದಾರರು ಅದನ್ನೀಗ ಅನುಮಾನದಿಂದಲೇ ನೋಡುತ್ತಾರೆ. ಅದರ ಮೇಲಿನ ವಿಶ್ವಾಸ ತೀರಾ ಕಡಿಮೆಯಾಗಿದೆ. ಅಧಿಕಾರಕ್ಕಾಗಿ ಅದು ದೆವ್ವದೊಂದಿಗೂ ಸ್ನೇಹ ಸಂಪಾದಿಸಬಲ್ಲದು ಎಂದು ಮಾತನಾಡುತ್ತಿದ್ದಾರೆ. ಆಪ್‌ನ ಆಗಮನ ಮತ್ತು ಮೋದಿ ಮಾಯೆಯಿಂದಾಗಿ ಅದೂ ಕೂಡ ಕಂಗಾಲಾಗಿದೆ. ಇನ್ನು ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ಪಕ್ಷಗಳನ್ನು ಒಂದೇ ಸೂರಿನಡಿಯಲ್ಲಿ ಕರೆತಂದು ತೃತೀಯ ರಂಗವನ್ನು ಸ್ಥಾಪಿಸಬೇಕು ಎಂಬ ಅದರ ಯೋಚನೆ, ಯೋಚನೆಯಾಗೇ ಉಳಿದಿದೆ. ಜೆಡಿಎಸ್ ತೆರೆಮರೆಗೆ ಸರಿಯುವುದೇ? ಕಾದು ನೋಡೋಣ.
ಈ ಮೂರೂ ಸಾಂಪ್ರದಾಯಿಕ ವಿರೋಧಿಗಳು ತಮ್ಮ ಮನೆಯನ್ನು ಬಾಹ್ಯ ಶಕ್ತಿಗಳ ದಾಳಿಯಿಂದ ಬಚಾವು ಮಾಡಲು ತಯಾರಿಯಲ್ಲಿ ತೊಡಗಿವೆ. ಆದರೆ ರಾಜ್ಯದ ಜನತೆ ಮಾತ್ರ ಮೌನವಾಗಿ ಎಲ್ಲವನ್ನೂ ಗಮನಿಸುತ್ತಿದ್ದಾರೆ. ದೆಹಲಿಯ ಮತದಾರರಂತೆ ಅವರೂ ಕೂಡ ಚುನಾವಣೆಯ ದಿನವೇ ತಮ್ಮ ಮನದಿಂಗಿತವನ್ನು ಹೊರಹಾಕಲಿದ್ದಾರೆ.
ಕೊನೆಯ ಗುಟುಕು: ದೇಶದ ಮಹಾನಗರಿಗಳಲ್ಲಿ ಅತಿ ಹೆಚ್ಚು ಫುಟ್‌ಪಾತ್‌ಗಳನ್ನು ಹೊಂದಿರುವ ನಗರವೆಂದರೆ ಬೆಂಗಳೂರು ಎಂದು ಹೇಳುತ್ತದೆ ಗ್ಲೋಬಲ್ ಮೊಬಿಲಿಟಿ ಮಾನಿಟರ್ ನೆಟ್‌ವರ್ಕ್‌ನ ವರದಿ. ಅಂದರೆ ಈ ವಿಷಯದಲ್ಲಿ ದೆಹಲಿಗಿಂತಲೂ ಮುಂದಿದೆ ನಮ್ಮ ಬೆಂಗಳೂರು. ಆದರೆ ಈ ವರದಿ ಒಂದು ವಿಷಯವನ್ನು ಹೇಳುವುದನ್ನೇ ಮರೆತುಬಿಟ್ಟಿದೆ. ಈ ಫುಟ್‌ಪಾತ್‌ಗಳು ಎಷ್ಟು ಕಳಪೆಯಾಗಿವೆಯೆಂದರೆ ಅವುಗಳು ಬಳಕೆಗೆ ಅರ್ಹವಾಗಿಲ್ಲ ಎನ್ನುವುದು. ಬೆಂಗಳೂರು ಪಾದಚಾರಿಗಳ ಪಾಲಿಗೆ ನರಕವಾಗಿಯೇ ಉಳಿದಿದೆ.
- ಎಚ್.ಎಸ್. ಬಲರಾಮ್
hsbalram@gmail.com