ಅಂಕಣಗಳು

ಆಪರೇಷನ್ ಬ್ಲೂ ಸ್ಟಾರ್‌ಗೆ ಸಾಥ್ ನೀಡಿತ್ತೇ ಬ್ರಿಟನ್?

ಆಪರೇಷನ್ ಬ್ಲೂ ಸ್ಟಾರ್‌ಗೆ ಸಾಥ್ ನೀಡಿತ್ತೇ ಬ್ರಿಟನ್?
Published On :

ಜೂನ್, 1984ರಂದು ನಡೆದ ಆಪರೇಷನ್ ಬ್ಲೂ ಸ್ಟಾರ್, ಸ್ವತಂತ್ರ ಭಾರತದ ಇತಿಹಾಸದಲ್ಲಿ ಸರ್ಕಾರವೊಂದು ನಡೆಸಿದ ಅತ್ಯಂತ ವಿವಾದಿತ ಘಟನೆಯಾಗಿಯೇ ಉಳಿಯಲಿದೆ. ಅತಿರೇಕ ಅಕಾಲಿಗಳನ್ನು ಮೆತ್ತಗೆ ಮಾಡಬೇಕು ಎನ್ನುವ ಪ್ರಯತ್ನದಲ್ಲೇ ನಿರತವಾಗಿದ್ದ ಅಂದಿನ ಕೇಂದ್ರ ಸರ್ಕಾರ, ಅದೇ ಸಮಯದಲ್ಲಿ ಹೆಚ್ಚಾಗುತ್ತಲೇ ಇದ್ದ ತೀವ್ರವಾದಿಗಳನ್ನು ಕಡೆಗಣಿಸಿಬಿಟ್ಟಿತು. ಆ ತೀವ್ರವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರುವುದನ್ನು, ಶಸ್ತ್ರಾಸ್ತ್ರಗಳೊಂದಿಗೆ ಸ್ವರ್ಣಮಂದಿರ ಪ್ರವೇಶಿಸುವುದನ್ನು ತಡೆಯುವುದನ್ನು ಬಿಟ್ಟು, ಬೇರೆಡೆಗೇ ತನ್ನ ದೃಷ್ಟಿಯನ್ನು ಅದು ಹರಿಸಿತು. ಅಷ್ಟೇನೂ ಬಲಿಷ್ಠರಲ್ಲದ ಸಿಖ್ ರಾಜಕಾರಣಿಗಳಿಂದ ತಮಗೇನೂ ತೊಂದರೆಯಾಗಲಾರದು ಎಂದು ಅವರನ್ನು ಕಡೆಗಣಿಸಿತು. 1984ರ ಚುನಾವಣೆಗೂ ಮುನ್ನ ಸ್ವರ್ಣ ಮಂದಿರಕ್ಕೆ ನುಗ್ಗಿ ಪೊಲೀಸ್ -ಮಿಲಿಟರಿ ಸಹಯೋಗದಲ್ಲಿ ಅಲ್ಲಿ ಅವಿತಿದ್ದ ತೀವ್ರವಾದಿಗಳನ್ನು ಹೊಸಕಿ ಹಾಕಿದರೆ, "ಪಂಜಾಬ್ ಅನ್ನು ಉಳಿಸಿದ್ದಕ್ಕಾಗಿ ಮತ್ತು ಭಾರತವನ್ನು ಉಗ್ರರಿಂದ ರಕ್ಷಿಸಿದ್ದಕ್ಕಾಗಿ" ಆ ಚುನಾವಣೆಗಳಲ್ಲಿ ತಮಗೆ ಗೆಲುವು ಎದುರಾಗಲಿದೆ ಎಂದು ಇಂದಿರಾ ಸರ್ಕಾರ ಯೋಚಿಸಿತ್ತೇ?
ಭಾರತ ಸರ್ಕಾರದಲ್ಲಿರುವವರು ಈ ಘಟನೆಯನ್ನೂ, ತದನಂತರ ಎದುರಾದ ಸನ್ನಿವೇಶಗಳನ್ನೂ ವಿಭಿನ್ನ ರೀತಿಯಲ್ಲೇ ದಾಖಲಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಡಾ. ಪಿ.ಸಿ. ಅಲೆಕ್ಸಾಂಡರ್ ಅವರ ಆತ್ಮಕಥೆ ಬಿಡುಗಡೆಗೆ ಸಮಾರಂಭಕ್ಕೆ ನಾನೂ ಹೋಗಿದ್ದೆ. 1984, ಮೇ-ಜೂನ್ ತಿಂಗಳಲ್ಲಿ ಅಲೆಕ್ಸಾಂಡರ್ ಪ್ರಧಾನಿ ಇಂದಿರಾ ಗಾಂಧಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಹಾಗಾಗೇ ಅವರು ಆ ಸಮಯದಲ್ಲಿ ಏನೇನಾಯಿತು ಎನ್ನುವುದನ್ನು ಹತ್ತಿರದಿಂದ ಅರಿತಿರುವ ಅತ್ಯುತ್ತಮ ಸಾಕ್ಷಿ. ಅವರ ಪುಸ್ತಕದಲ್ಲಿನ ಅಧ್ಯಾಯವೊಂದು ಆಪರೇಷನ್ ಬ್ಲೂ ಸ್ಟಾರ್‌ಗೆ ಮೀಸಲಾಗಿದೆ."ಸಂತ ಹರ್‌ಚರಣ್ ಸಿಂಗ್ ಲೋಂಗೋವಾಲ್(ಅಕಾಲಿ ದಳ) ಮತ್ತು ಡಾ. ಪಿ.ಸಿ. ಅಲೆಕ್ಸಾಂಡರ್ ನಡುವಿನ ಮಾತುಕತೆ ಮುರಿದು ಬಿದ್ದ ನಂತರ, ಬೇರೆ ಯಾವುದೇ ದಾರಿ ಕಾಣದೆ ಇಂದಿರಾ ಗಾಂಧಿಯವರು ಜನರಲ್ ವೈದ್ಯ ಅವರನ್ನು ಕರೆದು ಮಿಲಿಟರಿ ಕಾರ್ಯಾಚರಣೆಗೆ ಸಿದ್ಧರಾಗಲು ಆದೇಶಿಸಿದರು" ಎನ್ನುತ್ತದೆ ಆ ಅಧ್ಯಾಯ.  ಆದರೆ ಭಾರತದ ಅತ್ಯಂತ ರಾಷ್ಟ್ರಭಕ್ತ ಸಮೂಹವಾದ ಸಿಖ್ಖರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಿದರೆ ಅವರ ಮೇಲೆ ಯಾವ ರೀತಿಯ ಪ್ರಭಾವ ಉಂಟಾಗಬಹುದು ಎನ್ನುವ ಅವಶ್ಯಕ ಮಾಹಿತಿಯನ್ನು ಮತ್ತು ರಾಜಕೀಯ ಸಲಹೆಗಳನ್ನು ಕೇಂದ್ರ ಸರ್ಕಾರ ಪಡೆದಿತ್ತೇ?
ಭಾರತ ಸರ್ಕಾರಕ್ಕೆ ಆ ವಿಷಯ ಅಷ್ಟೇನು ಅವಶ್ಯಕ ಅನ್ನಿಸಲೇ ಇಲ್ಲ. ಆಪರೇಷನ್ ಬ್ಲೂ ಸ್ಟಾರ್ ಸಿಖ್ ಸಮುದಾಯವನ್ನು ಮೂಲೆಗುಂಪಾಗಿಸಿತು. ಅಷ್ಟೇ ಅಲ್ಲದೆ, ಇಂದಿರಾಗಾಂಧಿಯವರ ಮತ್ತು ಸಿಖ್ಖರ ಹತ್ಯೆಗೆ ಕಾರಣವಾಯಿತು.
ನಾವು ಭಾರತೀಯರು "ಆಪರೇಷನ್ ಬ್ಲೂ ಸ್ಟಾರ್‌"ನಂತಹ ವಿದಾಸ್ಪದ ವಿಷಯದ ಮೇಲೆ ನಮ್ಮ ಮನಸ್ಸಿಗೆ ಬಂದ ತೀರ್ಪನ್ನು ನೀಡಲು ಸಿದ್ಧರಿರುತ್ತೇವೆ. ಆದರೆ ಇತ್ತೀಚೆಗೆ ಬ್ರಿಟನ್‌ನಲ್ಲಿ ಹೊರಬಿದ್ದ ಕೆಲವು ದಾಖಲೆಗಳು ಈ ಕಾರ್ಯಾಚರಣೆಯ ಮೇಲೆ ವಿಭಿನ್ನರೀತಿಯಲ್ಲಿ ಬೆಳಕು ಚೆಲ್ಲಿವೆ. 1984ರ ಆದಾಖಲೆಗಳು 30 ವರ್ಷಗಳ ನಂತರ ಹೊರಬಿದ್ದಿವೆ. ಇವನ್ನು ಇದುವರೆಗೂ ರಹಸ್ಯ ವರ್ಗೀಕೃತ ದಾಖಲೆಗಳೆಂದೇ ಕಾಪಾಡಿಕೊಂಡು ಬರಲಾಗಿತ್ತು.
===
ಬ್ರಿಟನ್‌ನ ಅಂದಿನ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅವರ ಪ್ರಧಾನ ಕಾರ್ಯದರ್ಶಿಗಳು, 6 ಫೆಬ್ರವರಿ 1984ರಂದು ಕಾಮನ್‌ವೆಲ್ತ್ ಕಚೇರಿಯ 'ಬ್ರಿಯಾನ್ ಫಾಲ್‌' ಅವರಿಗೆ ಪತ್ರವೊಂದನ್ನು ಬರೆಯುತ್ತಾರೆ.  ತೀವ್ರವಾದಿ ಸಿಖ್ಖರನ್ನು ಸ್ವರ್ಣಮಂದಿರದಿಂದ ಹೊರತರುವ ಬ್ರಿಟನ್‌ನ 'ಯೋಜನೆ'ಯ ಬಗ್ಗೆ ಬರೆಯುತ್ತಾ ಅವರು ಆ ಪತ್ರದಲ್ಲಿ ಹೇಳುತ್ತಾರೆ: "ವಿದೇಶಾಂಗ ಕಾರ್ಯದರ್ಶಿಗಳು ತಮ್ಮ ಪ್ರಸ್ತಾವನೆಯಂತೆಯೇ ಮುಂದುವರಿಯುವುದಕ್ಕೆ ಪ್ರಧಾನಿಗಳು(ಥ್ಯಾಚರ್) ಅನುಮತಿ ಕೊಟ್ಟಿದ್ದಾರೆ. ಒಂದು ವೇಳೆ ಭಾರತೀಯರು ಈ ಪ್ಲ್ಯಾನ್ ಅನ್ನು ಒಪ್ಪಿಕೊಂಡರೆ, ಕೂಡಲೇ ಆ ಕುರಿತ ವಿವರಗಳನ್ನು ತಮಗೆ ಕಳುಹಿಸಿಕೊಡಲು ಪ್ರಧಾನಿಗಳು ಹೇಳಿದ್ದಾರೆ."
 ಹಾಗಿದ್ದರೆ ಬ್ರಿಟಿಷರ ಸಲಹೆಯ ಮೇರೆಗೆ ಆಪರೇಷನ್ ಬ್ಲೂ ಸ್ಟಾರ್ ರೂಪುಗೊಂಡಿತೇ?!
ಆದರೆ ಇದುವರೆಗೂ ನಮಗೆ ಹೇಳುತ್ತಾ ಬಂದ ಕಥೆಯೇ ಬೇರೆ. ಮೇ, 1984ರಲ್ಲಿ ನಡೆದ ಮಾತುಕತೆ ವಿಫಲವಾದ ಕಾರಣಕ್ಕಾಗಿಯೇ ಈ ಕಾರ್ಯಾಚರಣೆಯನ್ನು ನಡೆಸಬೇಕಾಯಿತು ಎನ್ನುವ ಮಾತನ್ನು ನಾವು ಕೇಳಿದ್ದೇವೆ. ಆದರೆ ಭಾರತ ಸರ್ಕಾರ ಪವಿತ್ರ ಸ್ವರ್ಣ ಮಂದಿರದಿಂದ ತೀವ್ರವಾದಿ ಸಿಖ್ಖರನ್ನು ತೆಗೆದುಹಾಕುವ ಯೋಜನೆಯನ್ನು ಮೊದಲೇ ಬ್ರಿಟನ್ ಸರ್ಕಾರದೊಂದಿಗೆ ರೂಪಿಸಿತ್ತು ಎಂದು ಹೇಳುತ್ತಿವೆ ಈಗ ಹೊರಬಿದ್ದಿರುವ ದಾಖಲೆಗಳು.  
ಇನ್ನು 23/2/1984ರಂದು ಬ್ರಿಯಾನ್ ಫಾಲ್, ಗೃಹಕಾರ್ಯದರ್ಶಿಗಳಿಗೆ ಬರೆದ ಪತ್ರವೂ ಈ ವಿಷಯದ ಕುರಿತಾಗಿಯೇ ಇದೆ. ಆಪರೇಷನ್ ಬ್ಲೂ ಸ್ಟಾರ್‌ನಿಂದಾಗಿ ಇಂಗ್ಲೆಂಡಿನಲ್ಲಿರುವ ಸಿಖ್ಖರ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಈ ಪತ್ರದಲ್ಲಿ ಬ್ರಿಯಾನ್ ಫಾಲ್ ಹೇಳಿದ್ದಾರೆ. "ಅಮೃತಸರ್‌ನ ಸ್ವರ್ಣಮಂದಿರದಿಂದ ಸಿಖ್ ತೀವ್ರವಾದಿಗಳನ್ನು ಹೊರತರುವ ಪ್ಲ್ಯಾನ್‌ಗೆ ಸಲಹೆ ನೀಡಬೇಕು ಎಂದು ಭಾರತೀಯ ಅಧಿಕಾರಿಗಳು ಬ್ರಿಟಿಷರನ್ನು ಕೋರಿದ್ದಾರೆ.  ವಿದೇಶಾಂಗ ಕಾರ್ಯದರ್ಶಿಗಳು ಭಾರತದ ಮನವಿಗೆ ಸ್ಪಂದಿಸಿದ್ದಾರೆ. ಇನ್ನು ಪ್ರಧಾನಿಗಳ ಅನುಮತಿಯೂ ಇದಕ್ಕೆ ದೊರೆತಿರುವುದರಿಂದ, ಎಸ್‌ಎಡಿ(ಸ್ಪೆಷಲ್ ಆ್ಯಕ್ಟಿವಿಟೀಸ್ ಡಿವಿಷನ್) ಅಧಿಕಾರಿಯೊಬ್ಬರು ಭಾರತಕ್ಕೆ ಭೇಟಿ ಕೊಟ್ಟು ಇಂದಿರಾರನ್ನು ಭೇಟಿಯಾಗಿ ಬಂದಿದ್ದಾರೆ. ಬ್ರಿಟನ್‌ನ ಯೋಜನೆಗೆ ಇಂದಿರಾಗಾಂಧಿ ಒಪ್ಪಿಗೆ ಸೂಚಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಸರ್ಕಾರ ಆ ಪ್ಲ್ಯಾನ್ ಅನ್ನು ಕಾರ್ಯರೂಪಕ್ಕೆ ತರಬಹುದು".
ಬಹಿರಂಗಗೊಂಡಿರುವ ಈ ಪತ್ರಗಳಿಂದ ಒಂದಂಶವಂತೂ ಸ್ಪಷ್ಟವಾಗುತ್ತದೆ. ಆಪರೇಷನ್ ಬ್ಲೂ ಸ್ಟಾರ್ ಅನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಇಂದಿರಾಗಾಂಧಿಯವರಿಗೆ ವಿದೇಶದ ಕೈಗಳು ಸಹಾಯ ಮಾಡಿವೆ. ಭಾರತೀಯ ಸೇನೆಗೆ ಈ ಕಾರ್ಯಾಚರಣೆಯ ಕುರಿತು 1984ರ ಮೇ ತಿಂಗಳ ಕೊನೆಯಲ್ಲಷ್ಟೇ ತಿಳಿಯಿತು.
ಈ ವಿಷಯದ ಕುರಿತು ಇಂದಿರಾ ಗಾಂಧಿ ಸರ್ಕಾರ ಪಡೆದ ರಾಜಕೀಯ ಸಲಹೆಗಳು ಅತ್ಯಂತ ಕಡಿಮೆ. ಹಾಗಿದ್ದರೆ, ಬ್ರಿಟನ್ ಅಷ್ಟೇ ಅಲ್ಲದೆ, ಇನ್ಯಾವುದಾದರೂ ದೇಶವನ್ನು ಭಾರತ ಆ ಸಮಯದಲ್ಲಿ ಸಂಪರ್ಕಿಸಿ ಸಲಹೆ ಪಡೆದಿತ್ತೇ? ಬ್ರಿಟನ್ ಸರ್ಕಾರದ ಸಲಹೆಯನ್ನು 1984ರ ಫೆಬ್ರವರಿ ತಿಂಗಳಲ್ಲಿ ಪಡೆದಿದ್ದನ್ನು ನೋಡಿದರೆ, ಭಾರತ ಸರ್ಕಾರ ಈ ಸಮಸ್ಯೆಯನ್ನು ಮೊದಲ ಹಂತದಲ್ಲಿಯೇ ಪರಿಹರಿಸುವ ಬಗ್ಗೆ ಯೋಚಿಸಲಿಲ್ಲ ಮತ್ತು ತೀವ್ರವಾದಿಗಳನ್ನು ಸ್ವರ್ಣ ಮಂದಿರದಿಂದ ಓಡಿಸಲು ಅನ್ಯ ಮಾರ್ಗವನ್ನು ಹುಡುಕಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಆ ಪವಿತ್ರ ಪ್ರಾಕಾರವನ್ನು ಹೇಗೆ ಆಕ್ರಮಿಸಬೇಕು ಎನ್ನುವ ಬಗ್ಗೆ ಮಾತ್ರ ಇಂದಿರಾ ಸರ್ಕಾರ ತಲೆಕೆಡಿಸಿಕೊಂಡಿತೇ ಹೊರತು, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಿಖ್ ಸಮುದಾಯದ ಬಗ್ಗೆ ಅಲ್ಲ.       
ಈಗ ನಮಗೆ ಕೆಲವೇ ಕೆಲವು ಬ್ರಿಟಿಷ್ ದಾಖಲೆಗಳು ಲಭ್ಯವಾಗಿವೆ. ಫೆಬ್ರವರಿ ಮತ್ತು ಜೂನ್ 1984ರ ನಡುವೆ ಏನೇನಾಯಿತು ಎನ್ನುವುದರ ಕುರಿತ ಇನ್ನಷ್ಟು ದಾಖಲೆಗಳು ಮುಂಬರುವ ತಿಂಗಳುಗಳಲ್ಲಿ ಬಹಿರಂಗವಾಗಲಿವೆ. ನಿಜಕ್ಕೂ ಆಗ ಏನು ನಡೆಯಿತು, ಸತ್ಯವೇನು ಎನ್ನುವುದನ್ನು ಭಾರತ ಸರ್ಕಾರ ಈಗಲಾದರೂ ಬಹಿರಂಗಪಡಿಸಬೇಕು. ಆಗಲಾದರೂ ಭಾರತೀಯರಿಗೆ, 'ಆಪರೇಷನ್ ಬ್ಲೂ ಸ್ಟಾರ್‌' ಅನ್ನುವುದು ಪೂರ್ವಯೋಜಿತ ತಪ್ಪು ಲೆಕ್ಕವಾಗಿತ್ತು ಎಂದು ಹೇಳಲು ಸಾಧ್ಯವಾಗುತ್ತದೆ.


- ಅರುಣ್ ಜೇಟ್ಲಿ
ರಾಜ್ಯಸಭೆ ಪ್ರತಿಪಕ್ಷ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.