ಪರ್ಯಾಯ ರಾಜಕೀಯ ಎಡವುತ್ತಿರುವುದೇಕೆ?

ಭಾರತಕ್ಕೆ ಪರ್ಯಾಯ ರಾಜಕೀಯದ ಭರವಸೆ ನೀಡಲಾಗಿತ್ತು. ಆಮ್ ಆದ್ಮಿ ಪಕ್ಷ ಆಶ್ವಾಸನೆ ಕೊಟ್ಟಿದ್ದ 'ಪರ್ಯಾಯ ರಾಜಕೀಯ', ಭಾರತೀಯ ಸಮಾಜದ ಮೇಲೆ ಬಹುದೊಡ್ಡ ಹೆಜ್ಜೆ ಗುರುತುಗಳನ್ನು ಮೂಡಿಸಲಿದೆ, ಇದರಿಂದಾಗಿ ಸಾಂಪ್ರದಾಯಿಕ ಪಕ್ಷಗಳು ಹಾಗೂ ರಾಜಕಾರಣಿಗಳಿಗೆ ಪ್ರಾಮಾಣಿಕತೆ ಮತ್ತು ಉತ್ತರದಾಯಿತ್ವದ ಮಹತ್ವ ತಿಳಿಯಲಿದೆ ಎಂದು ನಾನು ಭಾವಿಸಿದ್ದೆ.
ದೇಶವಿಂದು ಢೋಂಗಿ ಜನರ ಮತ್ತು ಅರಾಜಕತೆಯ ಮಾರ್ಗವಾಗಿ ಬದಲಾಗಿದೆ. ಒಂದು ರಾಜಕೀಯ ಪಕ್ಷವನ್ನು ಸ್ಥಾಪಿಸಿ ಆನಂತರ ಅದರ ಮತ್ತು ಅಭ್ಯರ್ಥಿಗಳ ಸಿದ್ಧಾಂತವನ್ನು ಹುಡುಕಲು ಹೊರಡುವುದರಲ್ಲಿ ಬಹಳಷ್ಟು ಅಂತರ್ಗತ ಅಪಾಯಗಳಿವೆ. ಈ ಪ್ರಕ್ರಿಯೆಯಲ್ಲೇ, ಸ್ವೇಚ್ಛಾಮನೋವೃತ್ತಿಯ ಭಿನ್ನಜಾತಿಯ ಗುಂಪೊಂದು ಹೊಸ ಪಕ್ಷದಲ್ಲಿ ಒತ್ತಟ್ಟಿಗೆ ಸೇರಿದರು. ಬೆಂಗಳೂರಿನ ವಿಮಾನಯಾನ ಸಂಸ್ಥೆಯ ಮಾಜಿ ಮಾಲೀಕರು ಮತ್ತು ಮುಂಬೈ ಮೂಲದ ಬ್ಯಾಂಕರ್ ಒಬ್ಬರು ಈಗ ಆಪ್ನ ಭಾಗವಾಗಿದ್ದಾರೆ. ಇವರುಗಳು ಮಾರುಕಟ್ಟೆ ಆರ್ಥಿಕತೆಯ ಮುಖ್ಯಪಾತ್ರಗಳಂತೆ ಕಾಣಿಸುತ್ತಿದ್ದಾರೆ. ಇವರೊಟ್ಟಿಗೆ ಮಾವೋವಾದಿಗಳಿಗೆ ಸಹಾನುಭೂತಿ ತೋರಿಸುವ ಛತ್ತೀಸ್ಗಢದವರೊಬ್ಬರು ಮತ್ತು ಜವಾಹರ್ ಲಾಲ್ ನೆಹರು ಯುನಿವರ್ಸಿಟಿಯಿಂದ ಬಂದ, 'ಭಾರತದ ವಿರುದ್ಧ ಎದ್ದು ನಿಲ್ಲುವಂತೆ' ಕಾಶ್ಮೀರಿಗಳನ್ನು ಬೆಂಬಲಿಸಿದ ವ್ಯಕ್ತಿಯೂ ಆಪ್ನಲ್ಲಿದ್ದಾರೆ. ಈ ವ್ಯಕ್ತಿಯ ಬದ್ಧತೆ ಎಷ್ಟಿದೆಯೆಂದರೆ ಅಮೆರಿಕದ ಫೆಡರಲ್ ಸಮಿತಿ(ಯುಎಸ್ಸಿಐಆರ್ಎಫ್)ಯ ಮುಂದೆ ಗುಜರಾತ್ ಸರ್ಕಾರದ ವಿರುದ್ಧ ಹೇಳಿಕೆಕೊಡಲು ಇವರನ್ನು ಅಲ್ಲಿಗೆ ಕರೆಸಿಕೊಳ್ಳಲಾಗಿತ್ತು. ಇನ್ನೊಬ್ಬ ಸದಸ್ಯರಂತೂ ಕಾಶ್ಮೀರ ಕಣಿವೆ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಅಲ್ಲೆಲ್ಲ ಸೇನೆಯ ಭದ್ರತೆ ಒದಗಿಸಬೇಕೋ ಬೇಡವೋ ಎನ್ನುವ ಬಗ್ಗೆ ನಿರ್ಧರಿಸಬೇಕು ಎಂದು ಹೇಳುತ್ತಾರೆ. ಮೋದಿಯವರನ್ನು ವಿರೋಧಿಸುವುದನ್ನೇ ಪೂರ್ಣಾವಧಿ ಉದ್ಯೋಗ ಮಾಡಿಕೊಂಡ ಅಹಮದಾಬಾದ್ನ ಕಾರ್ಯಕರ್ತೆ, ಸಲಿಂಗಕಾಮದ ಬಗ್ಗೆ ಆಪ್ನ ಉಳಿದ ಸದಸ್ಯರ ಅಭಿಪ್ರಾಯವನ್ನು ತಿಳಿದುಕೊಳ್ಳಲು ಬಯಸುತ್ತಾರೆ. ತಮ್ಮ ಪಕ್ಷದಲ್ಲಿ ಸಲಿಂಗ ಕಾಮವನ್ನು ವಿರೋಧಿಸುವ ಸಂಪ್ರದಾಯವಾದಿ ವ್ಯಕ್ತಿಗಳಿದ್ದಾರೆ ಎನ್ನುವುದನ್ನು ಅವರು ಒಪ್ಪಿಕೊಳ್ಳಲು ತಯಾರಿಲ್ಲ!
ಇಷ್ಟೇ ಅಲ್ಲ, ಈ ಹೊಸ ಪಕ್ಷದ ಬಳಿ ನ್ಯಾಯಶಾಸ್ತ್ರದ ಹೊಸ ಪರಿಕಲ್ಪನೆಯೂ ಇದೆ. ನ್ಯಾಯಾಧೀಶರು ತಮ್ಮ ನಿರ್ಣಯವನ್ನು ಆಡಳಿತಾಂಗಕ್ಕೆ ಮೊದಲು ಸೂಚಿಸಬೇಕಂತೆ. ಅಂದರೆ, ಕಳಕಿಂತ ಮಂತ್ರಿಯೊಬ್ಬನಿಗೆ ನ್ಯಾಯಾಧೀಶರ ನಿರ್ಣಯದಲ್ಲಿ ಸರಿ ತಪ್ಪನ್ನು ಹುಡುಕುವ ಅವಕಾಶ ಸಿಗಬೇಕು ಎನ್ನುವುದು! ಸರಳವಾಗಿ ಹೇಳಬೇಕೆಂದರೆ, ತನ್ನ ವಿರುದ್ಧದ ಆದೇಶವನ್ನು ಆತ ತಿರಸ್ಕರಿಸಬಹುದು. ಇನ್ನು ಜನರೇ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎನ್ನುವ ಈ ಪಕ್ಷದ 'ಹೊಸ ಹುರುಪು' ಆಗಲೇ ಸಾವಿನಂಚಲ್ಲಿದೆ. ಆಮ್ ಆದ್ಮಿ ಪಕ್ಷದ ಆರ್ಥಿಕ ನೀತಿಗಳ ಆರಂಭಿಕ ಸೂಚನೆ, ವಿಮಾನ ನಿಲ್ದಾಣಗಳು ಮತ್ತು ನೈಸರ್ಗಿಕ ಸಂಪತ್ತನ್ನು ರಾಷ್ಟ್ರೀಕರಣಗೊಳಿಸುವುದು, ಅಧಿಕ ಸಬ್ಸಿಡಿ ನೀಡುವುದು ಮತ್ತು ಇದಕ್ಕಾಗಿ ಅಧಿಕ ತೆರಿಗೆಯನ್ನು ವಸೂಲು ಮಾಡುವುಗದೇ ಆಗಿದೆ ಎಂದು ಹೇಳುತ್ತಿದೆ. ಆಪ್ನ ಆದರ್ಶವಾದದ ಪ್ರಜ್ಞೆಯ ಜಾಗದಲ್ಲೀಗ ಉನ್ನತ ಸ್ಥಾನಗಳಿಗಾಗಿ ಹಪಾಹಪಿಸುವ ಮನಸ್ಸುಗಳೇ ಜಾಗ ಪಡೆದಿವೆ. ಇದರಿಂದಾಗಿಯೇ ಆಪ್ನಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವುದು.
ಇಷ್ಟೆಲ್ಲಾ ಕೇವಲ ಮೂರು ವಾರಗಳಲ್ಲಿಯೇ ಘಟಿಸಿಹೋಗಿದೆ. ಈ ಪ್ರಯೋಗದ ವೈಫಲ್ಯವನ್ನು ಇನ್ನುಳಿದ ಪಕ್ಷಗಳು 'ಪ್ರಾಮಾಣಿಕತೆಯ ಮತ್ತು ಉತ್ತರದಾಯಿತ್ವದ ವೈಫಲ್ಯ' ಎಂದು ಭಾವಿಸಬಾರದು.
ಪೊಲೀಸ್ ಅಧಿಕಾರಿಗಳು ಮಂತ್ರಿಗಳ ಗುಲಾಮರಲ್ಲ
ಪೊಲೀಸ್ ಅಧಿಕಾರಿಯೊಬ್ಬ ಮಂತ್ರಿಯೊಬ್ಬರ ಆದೇಶಕ್ಕೆ ಅಧೀನನಾಗಬೇಕೆ? ಖಂಡಿತ ಇಲ್ಲ. ಆತ ಕಾನೂನಿನ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಾನೆ. ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ಸ್ ಮತ್ತ್ತು ಇತರ ಕಾನೂನುಗಳು
ಪೊಲೀಸರಿಗೆ ತನಿಖೆ ಮಾಡುವ, ಬಂಧಿಸುವ, ಶಂಕಿತರ ವಿಚಾರಣೆ ನಡೆಸುವ ಅಧಿಕಾರವನ್ನು ನೀಡುತ್ತವೆ.
ಬ್ರಿಟನ್ನ ಪ್ರಖ್ಯಾತ ನ್ಯಾಯಾಧೀಶರಾದ ಲಾರ್ಡ್ ಡೆನ್ನಿಂಗ್ 1968ರಲ್ಲಿ ಈ ಕುರಿತು ಹೀಗೆ ಹೇಳಿದ್ದರು: "ಪೋಲೀಸ್ ಅಧಿಕಾರಿಯೊಬ್ಬ ಕಾರ್ಯಾಂಗದ ಹಿಡಿತದಿಂದ ಸ್ವತಂತ್ರನಾಗಿರುತ್ತಾನೆ. ರಾಜಕಾರಣಿಗಳಿಗೆ ಆತನಿಗೆ ಆದೇಶ ನೀಡುವ ಅಧಿಕಾರವಿಲ್ಲ. ಆದರೆ ತನ್ನ ನೆಲದ ಕಾನೂನನ್ನು ಆತ ಪಾಲಿಸಬೇಕು. ಪ್ರಜೆಗಳು ನೆಮ್ಮದಿಯಿಂದ ಬದುಕುವಂಥ ಪರಿಸರ ನಿರ್ಮಾಣ ಮಾಡುವ ಜವಾಬ್ದಾರಿ ಆತನ ಮೇಲಿರುತ್ತದೆ. ಹಾಗಾಗೇ ಯಾರ ಮೇಲಾದರೂ ಅನುಮಾನ ಬಂದರೆ ಅಥವಾ ಅಪಾಯವೆದುರಾದರೆ ಕಾನೂನಿನಡಿಯಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ಅಧಿಕಾರ ಆತನಿಗಿದೆ. ಆತ ಯಾರ ಗುಲಾಮನೂ ಅಲ್ಲ. ಅಧಿಕಾರದಲ್ಲಿರುವ ಯಾವ ಮಂತ್ರಿಯೂ ಏನು ಮಾಡಬೇಕು, ಏನು ಮಾಡಬಾರದು ಎಂದು ಪೊಲೀಸ್ ಅಧಿಕಾರಿಗೆ ಆದೇಶಿಸುವಂತಿಲ್ಲ. ಆತ ಕೇವಲ ಕಾನೂನಿಗಷ್ಟೇ ಉತ್ತರದಾಯಿಯಾಗಿರುತ್ತಾನೆ".
ಇದೇ ತತ್ವವನ್ನು 1998ರಲ್ಲಿ ನಮ್ಮ ಸುಪ್ರೀಂ ಕೋರ್ಟ್, ಜೈನ್ ಹವಾಲಾ ಪ್ರಕರಣ(ವಿನೀತ್ ನಾರಾಯಣ್) ವೇಳೆ ಎತ್ತಿ ಹಿಡಿಯಿತು. ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾನೂನಿಗೆ ಬದ್ಧರಾಗಿರಬೇಕು. ಕಾನೂನಿನಡಿಯಲ್ಲಿನ ಅವರ ಅಧಿಕಾರ, ಜನತೆಯ ಬದುಕು ಮತ್ತು ಸ್ವಾತಂತ್ರ್ಯದ ಹಕ್ಕಿನೊಂದಿಗೆ ಸಮತೋಲಿತವಾಗಿರಬೇಕು. ಒಂದು ವೇಳೆ ಅವರು ಈ ನಿಯಮವನ್ನು ಉಲ್ಲಂಘಿಸಿದರೆ, ಅದು ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಆಗ ಹೇಳಿತ್ತು.
ಢಢಢಢ
ಜುಲೈ 6, 2000 ಇಸವಿ. ಬ್ರಿಟನ್ನ ಅಂದಿನ ಪ್ರಧಾನಿ ಟೋನಿ ಬ್ಲೇರ್ ಅವರ 16 ವರ್ಷದ ಮಗ, ಕುಡಿದು ತೂರಾಡುತ್ತಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಮುಜುಗರದಿಂದ ತಪ್ಪಿಸಿಕೊಳ್ಳಲು ತನ್ನ ತಂದೆಯ ಹೆಸರನ್ನು ಬದಲಿಸಿ ಹೇಳಿದ. ಆಗ ಆತನನ್ನು ಚಾರ್ಜಿಂಗ್ ಕ್ರಾಸ್ ಪೊಲೀಸ್ ಸ್ಟೇಷನ್ನಿಗೆ ಕರೆದೊಯ್ದು, ಅಲ್ಲಿನ ಸೆಲ್ನಲ್ಲಿಡಲಾಯಿತು. ಆ ಸಮಯದಲ್ಲಿ ಬ್ಲೇರ್ ಮತ್ತವರ ಪತ್ನಿ ಚೇರಿ ಪೋರ್ಚುಗಲ್ನ ಪ್ರವಾಸದಲ್ಲಿದ್ದರು. ವಿಷಯ ಅವರಿಗೆ ಹೇಗೋ ತಿಳಿಯಿತು. ಕೂಡಲೇ ಅವರು ಆ ಪೊಲೀಸ್ ಸ್ಟೇಷನ್ನಿಗೆ ತೆರಳಿ, ಪೊಲೀಸರೊಂದಿಗೆ ಮಾತನಾಡಿದರು. ಬ್ಲೇರ್ನ ಮಗನಿಗೆ ಕೊನೆಯ ಎಚ್ಚರಿಕೆ ಕೊಟ್ಟು ಬಿಡುಗಡೆ ಮಾಡಿದರು ಅಲ್ಲಿನ ಪೊಲೀಸರು. ಇಲ್ಲಿ ಇನ್ನೊಂದು ವಿಷಯವನ್ನು ನಾವು ಗಮನಿಸಬೇಕು. ಪ್ರಧಾನಿಗಳಿಗೆ ಪೊಲೀಸ್ ಸ್ಟೇಷನ್ಗೆ ಹೋಗುವುದರಲ್ಲಿ ಯಾವ ತಪ್ಪೂ ಕಾಣಿಸಲಿಲ್ಲ. ಅವರು ಪೊಲೀಸರನ್ನೇ ತಮ್ಮ ಮನೆಗೆ ಕರೆಸಿಕೊಳ್ಳಲು ಹೋಗಲಿಲ್ಲ! ಅಂದರೆ ಪ್ರಧಾನಿಯೂ ಕೂಡ ಪೊಲೀಸರ ಅಧಿಕಾರಕ್ಕೆ ತಲೆಬಾಗಬೇಕು ಎಂದರ್ಥ.
ದುರ್ದೈವವಶಾತ್, ದೆಹಲಿಯ ಸಚಿವರೊಬ್ಬರ ಆದೇಶದಿಂದಾಗಿ, ಕೆಲವು ವಿದೇಶೀ ಮಹಿಳೆಯರು ಮುಜುಗರಕ್ಕೀಡಾದ ಘಟನೆ ನಡೆದಿದೆ. ಅವರನ್ನು ಥಳಿಸಿ, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಕ್ಯಾವಿಟಿ ಸರ್ಚ್ ಕೂಡ ಮಾಡಲಾಯಿತಂತೆ! ಈ ತಪಾಸಣೆಯನ್ನು ನಡೆಸಿದವರು ಪೊಲೀಸರಲ್ಲ, ಬದಲಾಗಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು. ಇಂಥ ಕಾನೂನು ವಿರೋಧಿ ಕೆಲಸ ಮಾಡಿದ ಮಂತ್ರಿಗೆ ಶಿಕ್ಷೆಯಾಗಬೇಕಿತ್ತು. ಈ ಅಮಾನವೀಯ ಕೃತ್ಯಕ್ಕಾಗಿ ಆತನನ್ನು ಆ ಹೆಣ್ಣುಮಕ್ಕಳ ಕ್ಷಮೆ ಕೊರುವಂತೆ ಮಾಡಬೇಕಿತ್ತು. ಇದೆಲ್ಲದರ ನಡುವೆಯೇ ಎಸಿಪಿ ಬಿ.ಎಸ್. ಝಾಕರ್ ಎನ್ನುವವರು ಆ ಮಂತ್ರಿ ಕೊಟ್ಟ ಕ್ರೂರ ಆದೇಶವನ್ನು ವಿರೋಧಿಸಿ, ಕಾನೂನನ್ನು ಪಾಲಿಸಿದರು ಎನ್ನುವ ಸುದ್ದಿಯೂ ಹೊರಬಿದ್ದಿದೆ. ನಿಜಕ್ಕೂ ನಾವು ಝಾಕರ್ ಅವರಂಥ ನಿಷ್ಠಾವಂತ ಅಧಿಕಾರಿಗಳಿಗೆ ಸಲಾಮು ಹೊಡೆಯಲೇಬೇಕು!
- ಅರುಣ್ ಜೇಟ್ಲಿ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


