ಸುಡುಗಾಡನ್ನು ಸೋಕಿದ ಗಾಳಿ ನಮ್ಮ ಬೃಂದಾವನಕ್ಕೂ ಬಡಿಯುತ್ತದೆ...

'ಪಪ್ಪಾ, ಐಸ್‌ಕ್ರೀಂ...' ಅಂತ ಮಗಳು ಮುದ್ದಾಗಿ ಕೇಳಿದ್ದಾಳೆ. 'ಹೇಳೋಣ, ನಂಗೂ ಬೇಕು...
ಸುಡುಗಾಡನ್ನು ಸೋಕಿದ ಗಾಳಿ ನಮ್ಮ ಬೃಂದಾವನಕ್ಕೂ ಬಡಿಯುತ್ತದೆ...
Updated on: 

'ಪಪ್ಪಾ, ಐಸ್‌ಕ್ರೀಂ...' ಅಂತ ಮಗಳು ಮುದ್ದಾಗಿ ಕೇಳಿದ್ದಾಳೆ. 'ಹೇಳೋಣ, ನಂಗೂ ಬೇಕು. ಎಲ್ಲರಿಗೂ ಹೇಳೋಣ' ಎಂದಿದ್ದಾನೆ ಅಪ್ಪ. ಆ ಹೊಟೇಲ್‌ನಲ್ಲಿ ಅವನ ಚಿಕ್ಕ ಕುಟುಂಬ ಆಗಷ್ಟೇ ಊಟ ಮುಗಿಸಿದೆ. ಕೊನೆಯಲ್ಲಿ ಬರಲಿರುವ ಐಸ್‌ಕ್ರೀಂನ ಸ್ವಾದ ಅವನ ಪಾಲಿಗೆ ನಾಲಗೆಯ ಮೇಲಷ್ಟೇ ಅಲ್ಲದೇ ಮನೋಭಿತ್ತಿಯ ಮೇಲೇ ಅಚ್ಚೊತ್ತಲಿದೆ. ಮರುದಿನ ಆತ ದೂರತೀರವೊಂದಕ್ಕೆ ಪಯಣಿಸಲಿದ್ದಾನೆ. ಕುಟುಂಬ, ಊಟ- ಐಸ್‌ಕ್ರೀಮು, ಅಷ್ಟೇ ಏಕೆ... ಬದುಕಿನ ಸಾಧ್ಯತೆಗಳನ್ನೇ ಹಿಂದಕ್ಕೆ ಬಿಟ್ಟು. ನಮ್ಮೆಲ್ಲರ ಪಾಲಿಗೆ ನಕಾಶೆಯ ಚೂರಷ್ಟೇ ಆಗಿರುವ ದಕ್ಷಿಣ ಸುಡಾನ್ ಎಂಬ ಹಿಂಸಾಗ್ರಸ್ತ ದೇಶದಲ್ಲಿ, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಯೋಧನಾತ.
ಬದುಕು ಮತ್ತು ಸಾವಿನ ವಲಯಗಳಲ್ಲಿ ಗಿರಿಗಿಟ್ಲೆ ಹೊಡೆಯುತ್ತಿರುವ ಆತನ ಜೀವನ ನಮ್ಮೆಲ್ಲ ಕ್ಷುಲ್ಲಕ ಥ್ರಿಲ್ಲುಗಳ ಅಂದಾಜಿನ ಆಚೆಯದ್ದು. ಈಗ ಮಗಳೊಂದಿಗೆ ಐಸ್‌ಕ್ರೀಮ್‌ಗಾಗಿ ಕಾಯುತ್ತಿರುವ ಈತ, ಮೂರು ವಾರಗಳ ಹಿಂದೆ ದಕ್ಷಿಣ ಸುಡಾನ್‌ನಲ್ಲಿದ್ದ. ಆ ಅಪರಿಚಿತ ದೇಶದಲ್ಲಿ ಸರ್ಕಾರಿ ಪಡೆಗೂ ಬಂಡುಕೋರರ ಪಡೆಗೂ ಹೊತ್ತಿಕೊಂಡಿದೆ ಸಂಘರ್ಷ. ಅಲ್ಲಿ ಶಾಂತಿಪಾಲನೆಗೆಂದು ನಾನಾ ದೇಶಗಳ ನೆರವಿನಿಂದ 7 ಸಾವಿರ ಸೈನಿಕರನ್ನು ಇರಿಸಿದೆ ವಿಶ್ವಸಂಸ್ಥೆ. ಈ ಪೈಕಿ ಭಾರತೀಯ ಸೇನೆಯ 2000 ಯೋಧರಿದ್ದಾರೆ. ಶಾಂತಿ ಎಂಬುದು ಯುದ್ಧಕ್ಕಿಂತ ಹೆಚ್ಚಿನ ಧೀಮಂತಿಕೆಯನ್ನು ಬೇಡುತ್ತದೆ. ಶಾಂತಿಪಾಲನಾ ಪಡೆಯ ಯೋಧರ ಕಾರ್ಯವೈಖರಿ ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ವೈರಿಗಳನ್ನು ಹುಡುಕಿ ಹೊಸಕಿ 'ಕೆಲಸ ಮುಗಿಸುವ' ಯೋಜನೆ ಇದಲ್ಲವೇ ಅಲ್ಲ. ಬಂಡುಕೋರರ ದಾಳಿಗೆ ಪ್ರತಿಯಾಗಿ ರಕ್ಷಣಾತ್ಮಕ ಕದನವನ್ನಷ್ಟೇ ಇಲ್ಲಿನ ಯೋಧರು ಮಾಡಬಹುದು. ಉಳಿದಂತೆ ಹಿಂಸಾಗ್ರಸ್ತ ಪ್ರದೇಶದಲ್ಲಿರುವ ಜನರನ್ನು ರಕ್ಷಿಸಿ ತರುವುದು, ಅವರಿಗೆ ಅಗತ್ಯ ಸೌಲಭ್ಯಗಳನ್ನು ದೊರಕಿಸುವುದು ಇವರ ಹೊಣೆಗಾರಿಕೆ. ತಮ್ಮದಲ್ಲದ ಪ್ರದೇಶದಲ್ಲಿ ಇಂಥ ಕಾರ್ಯಾಚರಣೆಗಳಿಗೆ ತೆರಳುವುದೆಂದರೆ ಅದು ಸಾವಿನ ಜತೆ ಗೊತ್ತಿದ್ದೂ ಆಡುವ ಸರಸ. ಪೊರೆವವನಿಗೆ ಇರುವ ನಿಯಮಗಳು ಕೊಲ್ಲುವವನಿಗೆ ಇಲ್ಲ. ಯಾವುದೋ ಬುಡಕಟ್ಟು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಕರೆತರಲೆಂದು ಹೋಗುತ್ತಿರುವಾಗ ಮಾರ್ಗ ಮಧ್ಯೆ ಈ ಬಂಡುಕೋರರು ಎಲ್ಲಿಂದಲೋ ಎರಗಿ ಇವರನ್ನೆಲ್ಲ ಕೊಂದುಬಿಡಬಹುದು. ಅಂತಕನ ದೂತರಿಗೆ ಕಿಂಚಿತ್ತು ಭಯವಿಲ್ಲ! ನಕಾಶೆಯ ಯಾವುದೋ ಬಿಂದುವಿನಲ್ಲಿ ಬೆದರಿ ಕುಳಿತ ಅನಾಮಧೇಯ ಮಾನವೀಯ ಮಿಡಿತಗಳನ್ನು ಸುರಕ್ಷಿತವಾಗಿಡುವ ಹಂಬಲದಲ್ಲಿ ಈ ಯೋಧರು ಗುಡ್ಡಗಾಡು-ಅರಣ್ಯಗಳಲ್ಲಿ ಹಗಲಿರುಳೆನ್ನದೇ ಸಾಗುತ್ತಾರೆ. ಎಲ್ಲ ಬಾರಿ ಆಹಾರ ಹೊತ್ತೊಯ್ಯುವುದು ಆಗದ ಮಾತು. ಸಮವಸ್ತ್ರದ ಅಸಂಖ್ಯ ಪಾಕೀಟುಗಳಲ್ಲಿ ಯಾವುದೋ ಒಂದರಲ್ಲಿ ಒಣಮಾಂಸ, ಇನ್ನೊಂದರಲ್ಲಿ ಖರ್ಜೂರ-ಬಾದಾಮಿಯಂಥ ಹೈ ಎನರ್ಜಿ ಪದಾರ್ಥಗಳು, ಕಾಲರ್ ಪಕ್ಕ ಚಿಕ್ಕ ಕಡ್ಡಿಯಂತೆ ಇರುವ ಪೈಪ್‌ನಲ್ಲಿ ನೀರು ಹೀರಿಕೊಳ್ಳುವುದು, ದಣಿವಾದಾಗ ಮರಗಳ ಮೇಲೆ ಅದರ ಕಾಂಡದಂತೆಯೇ ಅಂಟಿ ಮಲಗುವುದು... ಹೀಗೆ ಆ ಲೋಕ ಸಾಮಾನ್ಯರ ಅರಿವಿಗೆ ಮೀರಿದ್ದು. ಬಹಳಷ್ಟು ವೇಳೆ ತುತ್ತಿಗೆ ತತ್ವಾರ. ಆಗೆಲ್ಲ ಆಯ್ಕೆಯ ಪ್ರಶ್ನೆಯೇ ಇಲ್ಲ. ಇಲಿ ಸಿಕ್ಕಿದರೆ ಇಲಿ, ನಾಯಿ ಸಿಕ್ಕಿದರೆ ಅದೂ ಆದೀತು ಅಂದಿನ ಭೋಜನಕ್ಕೆ. ಹಾಗಂತ ಬಲಿ ಹಾಕಿ ಅಡುಗೆ ಸಿದ್ಧತೆಗೆಂದು ಬೆಂಕಿ ಹಾಕುವಂತಿಲ್ಲ. ಹೇಳಿಕೇಳಿ ಅಲ್ಲಿನ ಬಂಡುಕೋರರು ಗೆರಿಲ್ಲಾ ಮಾದರಿ ಆಕ್ರಮಣದಲ್ಲಿ ಸಿದ್ಧಹಸ್ತರು. ಇವರಿರುವ ಪ್ರದೇಶದಿಂದ ಸಣ್ಣ ಹೊಗೆ ಎದ್ದರೂ ಸಾಕು. ಅದೇ ಆಧಾರದಲ್ಲಿ ಎರಗಿ ದಾಳಿ ಮಾಡುತ್ತಾರೆ. ಹೀಗೆ ಸಮಯದ ಪರಿವೆಯೇ ಇಲ್ಲದೆ, ನಿದ್ರೆ-ಆಹಾರಗಳ ವಿಷಯದಲ್ಲಿ ಯಾವ ನಾಜೂಕು ಆಯ್ಕೆಗಳೂ ಇಲ್ಲದೇ ಸುದೀರ್ಘ ಆರು ವಾರಗಳವರೆಗೆ ಇಂಥ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡ ಯೋಧನಿಗೆ ಮೂರು ವಾರಗಳ ರಜೆ ನೀಡಲಾಗುತ್ತದೆ. ಆ ಅವಧಿಗೆ ಆತ ಹಾರಿ ಬಂದು ಬೆಂಗಳೂರಿನಲ್ಲೋ, ಹೈದರಾಬಾದಿನಲ್ಲೋ, ಪಟ್ನಾದಲ್ಲೋ ಇರುವ ತನ್ನ ಕುಟುಂಬವನ್ನು ಸೇರಿಕೊಳ್ಳುತ್ತಾನೆ. ಅಷ್ಟು ದಿನ ಸಾವಿನ ಪಕ್ಕ ಉಸಿರು ಬಿಗಿಹಿಡಿದು ಮಲಗಿ ಬಂದವನಿಗೆ ಈ ಮೂರು ವಾರ ಬದುಕಿನ ಜತೆ ಕುಣಿದು ಕುಪ್ಪಳಿಸುವ ಅವಕಾಶ. ಹಾಗಂತ ಅದರಲ್ಲೇ ಕಳೆದುಹೋಗುವಂತಿಲ್ಲ. ಮೂರು ವಾರಗಳ 'ರೆಸ್ಟ್ ಆ್ಯಂಡ್ ರಿಕ್ರಿಯೇಷನ್‌' ಅವಧಿ ಮುಗಿಯುತ್ತಲೇ ಮತ್ತೆ ಅಲ್ಲಿಗೆ ಮರಳಬೇಕು. ಹುಟ್ಟು ಮತ್ತು ಸಾವಿನ ನಡುವೆ ನಾವೆಲ್ಲರೂ ಕಂಡುಕೊಳ್ಳುವುದಕ್ಕೆ ಒದ್ದಾಡುತ್ತಿರುವ ಸಾರ್ಥಕ್ಯ ಯಾವುದು ಎಂಬ ಪ್ರಶ್ನೆಗೆ ನಿಖರ ಉತ್ತರವನ್ನು ಮಗಳ ಜತೆ ಕುಳಿತು ಇದೇ ಕೊನೆಯದೆಂಬಂತೆ ಐಸ್‌ಕ್ರೀಂ ಮೆಲ್ಲುತ್ತಿರುವ ಆ ಯೋಧನಲ್ಲಿ ಪಡೆಯಬಹುದೇನೋ?
----------
ಡಿಸೆಂಬರ್ 31, 2013. ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರ ಯಾವುದೋ ಮಹಡಿ. ಪಾರ್ಟಿ ಮಾಡಲೆಂದು ಜಮಾಯಿಸಿರುವ ಆ ಗುಂಪು ಬೇರೆ ಬೇರೆ ಕಡೆಗಳಿಂದ ಕಟ್ಟಿಸಿಕೊಂಡು ಬಂದಿರುವ ಥರಹೇವಾರಿ ಪಾರ್ಸಲ್‌ಗಳನ್ನು ಒಂದೊಂದಾಗಿ ಬಿಚ್ಚುತ್ತಿದೆ. ಗ್ಲಾಸುಗಳ ಹೊಂದಾಣಿಕೆ ಇನ್ನೂ ಆಗುತ್ತಿತ್ತಾದ್ದರಿಂದ ಬೋಂಡಾ ಪೊಟ್ಟಣವನ್ನು ಬಿಚ್ಚಿದ ಒಬ್ಬಾತ ಟೈಮ್ ಪಾಸ್‌ಗೆಂಬಂತೆ ಅದನ್ನು ಸುತ್ತಿ ತಂದಿದ್ದ ರದ್ದಿ ಪೇಪರ್ ಓದುತ್ತಿದ್ದಾನೆ. ಡಿಸೆಂಬರ್ 19ರ ದಿನಾಂಕದ ಆ ಸುದ್ದಿ, ದಕ್ಷಿಣ ಸುಡಾನ್‌ನಲ್ಲಿ ಬಂಡುಕೋರರ ಗುಂಡಿಗೆ ಬಲಿಯಾದ ಭಾರತೀಯ ಯೋಧನ ಕತೆ ಹೇಳುತ್ತಿದೆ. ಅಕೊಬೊ ಪ್ರಾಂತ್ಯದ ವಿಶ್ವಸಂಸ್ಥೆ ಬಿಡಾರದಲ್ಲಿ ಡಿಂಕಾ ಜನಾಂಗಕ್ಕೆ ಸೇರಿದ 36 ಮಂದಿ ಆಶ್ರಯ ಪಡೆದಿರುತ್ತಾರೆ. ಜನಾಂಗೀಯ ಸಂಘರ್ಷದ ಬಿಸಿಯಲ್ಲಿ ಇವರ ವಿರುದ್ಧ ಗುರುತಿಸಿಕೊಂಡಿರುವ ನುಯೆರ್ ಸಮುದಾಯದ 2 ಸಾವಿರ ಬಂಡುಕೋರರಿಂದ ಆ ಬಿಡಾರದ ಮೇಲೆ ದಾಳಿ ನಡೆದಿದೆ. ಈ ದಾಳಿಯನ್ನು ಎದುರಿಸುವಾಗ ಭಾರತೀಯ ಯೋಧರಾದ ಧರ್ಮೇಶ್ ಸಾಂಗ್ವಾನ್ ಹಾಗೂ ಕನ್ವರ್ ಪಾಲ್ ಸಿಂಗ್ ಮರಣಿಸಿದ್ದಾರೆ. ಇನ್ನೇನು ಹತ್ತು ದಿನಗಳಲ್ಲಿ ಹರ್ಯಾಣದ ತನ್ನೂರಿಗೆ ಮರಳಿ ತನ್ನ 34ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವುದರಲ್ಲಿದ್ದ ಸಾಂಗ್ವಾನ್ ತೆರಳಿದ್ದು ಸಾವಿನ ಮನೆಗೆ...
ಇವನ್ನೆಲ್ಲ ಓದಿಕೊಂಡು ಸ್ನೇಹಿತರಿಗೂ ಹೇಳಿದ ಆ ವ್ಯಕ್ತಿಯ ಮನ ಪ್ರಕ್ಷುಬ್ಧಗೊಂಡಿತು. ಇವಕ್ಕೆಲ್ಲ ಏನೂ ಮಾಡಲಾಗದ ಹತಾಶೆ, ಪಶ್ಚಾತ್ತಾಪ, ಎಲ್ಲರಲ್ಲಿ. 'ನಮ್ಮದೇ ನಮಗೆ ಸಂಭಾಳಿಸೋಕೆ ಆಗ್ತಿಲ್ಲ. ಅದ್ಯಾವುದೋ ದಕ್ಷಿಣ ಸುಡಾನ್‌ಗೆ ನಮ್ಮ ಸೈನಿಕರನ್ನು ಯಾಕಾದರೂ ಕಳುಹಿಸಬೇಕಿತ್ತು ಅಂತೀನಿ. ಅವರು ಏನಾದ್ರೂ ಮಾಡ್ಕೊಂಡು ಸಾಯ್ಲಿ. ನಮಗಾಗೋದೇನು? ನಾನ್ ಹೇಳ್ತೀನಿ, ನಮ್ಮನ್ನು ಆಳೋರಿಗೆ ಬುದ್ಧಿ, ಪಾಪಪ್ರಜ್ಞೆ ಏನೂ ಇಲ್ಲ. ವ್ಯವಸ್ಥೇನೆ ಹಾಳಾಗಿಹೋಗಿದೆ' ಅಂತ ಅವರಲ್ಲೊಬ್ಬ ಆಕ್ರೋಶದ ಉಪಸಂಹಾರ ನೀಡಿದ್ದಕ್ಕೆ ಎಲ್ಲರೂ ಅಹುದಹುದೆಂದರು.
----------
ವ್ಯವಸ್ಥೆಯ ವಾಸ್ತವ...
ಆಫ್ರಿಕಾ ಖಂಡದ ಹೆಚ್ಚಿನ ದೇಶಗಳಲ್ಲಿ ಅರಾಜಕತೆ ಕೊನೆಗಾಣಲಿ ಎಂಬ ಪ್ರಯತ್ನ ಭಾರತದ್ದಷ್ಟೇ ಅಲ್ಲ, ವಿಶ್ವದ ಎಲ್ಲ ಶಕ್ತಿಶಾಲಿ ರಾಷ್ಟ್ರಗಳದ್ದು. ಇದನ್ನು ಔದಾರ್ಯ ಎಂದು ಕರೆಯಬೇಕಿಲ್ಲವಾದರೂ ಅನಿವಾರ್ಯವಂತೂ ಹೌದು. ಅಭಿವೃದ್ಧಿ ಚಕ್ರದ ಮೇಲೆ ನಿಂತಿರುವ ಎಲ್ಲ ದೇಶಗಳಿಗೆ ಆ ಗಾಲಿ ಉರುಳುವಂತೆ ಮಾಡಲು ಇಂಧನ ಬೇಕು. ಹಾಗೆಂದೇ ದಕ್ಷಿಣ ಸುಡಾನ್ ಸೇರಿದಂತೆ ಆಫ್ರಿಕಾದ ಅನೇಕ ರಾಷ್ಟ್ರಗಳಲ್ಲಿ ಅಮೆರಿಕ, ಚೀನಾದಂಥ ದೈತ್ಯ ದೇಶಗಳ ಹಿತಾಸಕ್ತಿಗಳಿವೆ. ತಡವಾಗಿಯಾದರೂ ಭಾರತವೂ ಒಂದು ಹಂತದ ಪೈಪೋಟಿಗೆ ಇಳಿದಿದ್ದಾಗಿದೆ.
2011ರಲ್ಲಿ ಅಮೆರಿಕ ಮಧ್ಯಸ್ತಿಕೆಯಲ್ಲಿ ಸುಡಾನ್‌ನಿಂದ ಬೇರ್ಪಟ್ಟು ತೈಲ ಸಂಪದ್ಭರಿತ ದಕ್ಷಿಣ ಸುಡಾನ್ ಅಸ್ತಿತ್ವಕ್ಕೆ ಬಂತು. ಈಗ ತೈಲ ನಿಕ್ಷೇಪದ ಬಹುಪಾಲು ದಕ್ಷಿಣ ಸುಡಾನ್‌ನಲ್ಲಿ ಹಾಗೂ ಅದರ ಸಾಗಣೆಗೆ ಬೇಕಾದ ಪೈಪ್‌ಲೈನ್‌ಗಳು ಸುಡಾನ್‌ನಲ್ಲಿ ಹಂಚಿ ಹೋಗಿವೆ. ತನ್ನ ಈ ಮೂಲ ಸೌಕರ್ಯವನ್ನು ಬಳಸಿಕೊಳ್ಳುವುದಕ್ಕೆ ದಕ್ಷಿಣ ಸುಡಾನ್ ನೀಡುತ್ತಿರುವ ರಾಯಲ್ಟಿ ಸಾಲದು ಎಂದು ಸುಡಾನ್ ತಗಾದೆ ತೆಗೆದಿದೆ. ಇನ್ನೊಂದೆಡೆ ಹೊಸ ರಾಷ್ಟ್ರದ ಆಂತರ್ಯದಲ್ಲೇ ಜನಾಂಗೀಯ ಸಂಘರ್ಷ ತೀವ್ರವಾಗಿ ತೈಲ ವ್ಯಾಪಾರ ಸ್ತಬ್ಧವಾಗಿದೆ. ಇವೆಲ್ಲ ಆಗುವುದಕ್ಕೆ ತುಂಬ ಮೊದಲೇ, 2003ರಲ್ಲಿ ಸುಡಾನ್‌ಗೆ ಕಾಲಿಟ್ಟಿರುವ ಭಾರತ, 'ಓಎನ್‌ಜಿಸಿ ವಿದೇಶ್ ಲಿಮಿಟೆಡ್‌' ಮೂಲಕ 2.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಎಲ್ಲವನ್ನೂ ತನ್ನದಾಗಿಸಿಕೊಳ್ಳಬೇಕೆಂಬ ಚೀನಾದ ದಾಪುಗಾಲಿಗೆ ಅಡ್ಡಗಾಲಿಟ್ಟು, ಸುಡಾನ್‌ನ 'ಗ್ರೇಟರ್ ನೈಲ್ ಪೆಟ್ರೋಲಿಯಂ ಕಾರ್ಪೊರೇಷನ್‌'ನ ಪಾಲುದಾರನಾಗುವ ಮೂಲಕ ಸಾಧಿಸಿದ ವಿಕ್ರಮವಿದು. ಇದಲ್ಲದೇ ಭಾರತದ ರಫ್ತು ಹಿತಾಸಕ್ತಿಗಳಿಗೂ ವೇದಿಕೆ ನೀಡಿದೆ ಸುಡಾನ್. ಪರಿಣತರು ಹೇಳುವಂತೆ ಬಿಎಚ್‌ಇಎಲ್‌ನಂಥ ನಮ್ಮ ಕಂಪನಿಗಳು ಅಲ್ಲಿನ ನೆಲದಲ್ಲಿ ತಮ್ಮದೇ ಛಾಪು ಮೂಡಿಸಿವೆ. ಅಲ್ಲಿನ ರಸ್ತೆಗಳು ತಮ್ಮ ಮೈ ಮೇಲೆ ನಮ್ಮ ಬಜಾಜ್ ಆಟೋಗಳನ್ನು ಬಿಟ್ಟುಕೊಂಡಿವೆ. ಹೀಗೆಲ್ಲ ಇರುವಾಗ ದಕ್ಷಿಣ ಸುಡಾನ್‌ನ ಧಗ್ದ ನೆಲದಲ್ಲಿ ನಿಂತು 'ಸರ್ವೇ ಜನಾಃ ಸುಖಿನೋ ಭವಂತು' ಅನ್ನೋದು ನಮ್ಮ ಅನಿವಾರ್ಯತೆ ಹೊರತು ನಮಗೆ ಬೇಡದ ಉಪದ್ವ್ಯಾಪವಾಗುವುದಿಲ್ಲ. ಆ ನೆಲದಲ್ಲಿ ಸತ್ತ ಸೈನಿಕನ ಸ್ಮೃತಿಯನ್ನು ಅಷ್ಟು ಸುಲಭದಲ್ಲಿ ಸಿನಿಕತೆಯ ಗೋರಿಯೊಳಗೆ ಹುಗಿಯಲಾಗುವುದಿಲ್ಲ.
------------
ನಮ್ಮ ವಾಸ್ತವ...
ನಾವು ಅನುದಿನವೂ ವ್ಯವಸ್ಥೆಯನ್ನು ಕಟಕಟೆಯಲ್ಲಿ ನಿಲ್ಲಿಸುತ್ತೇವೆ. ನಾವೂ ವ್ಯವಸ್ಥೆಯ ಭಾಗವೆನ್ನುವುದನ್ನು ಮರೆಯುತ್ತೇವೆ. ನಮಗೆ ಬೆಲೆ ಏರದ ರೀತಿಯಲ್ಲಿ ಪೆಟ್ರೋಲು ಬೇಕು. ಆದರೆ ಅದು ಇಲ್ಲಿ ಬಂದು ತಲುಪುವುದಕ್ಕೆ ಯಾವೆಲ್ಲ ಬೆವರು -ನೆತ್ತರಿನ ಮಾರ್ಗ ಹಾದು ಬಂದಿದೆ ಎಂಬ ವಿವರಗಳು ಬೇಡ. ಪ್ಯಾಕೆಟ್ಟಿನಲ್ಲಿ ಬಂದು ಬೀಳುವ ಹಾಲಲ್ಲಿ ಕಲಬೆರಕೆ ಇದೆ ಅಂತ ದಿಗಿಲಿಗೆ ಬೀಳುತ್ತೇವೆ. ಹಾಲು ಕೊಡುತ್ತಿದ್ದ ಪುಣ್ಯಕೋಟಿಯ ಮೇವಿನ ಜಾಗಗಳಲ್ಲೆಲ್ಲ ಕಟ್ಟಡ ಕಟ್ಟಿದ್ದೇವಲ್ಲ ಅಂತ ಯೋಚಿಸುವುದಿಲ್ಲ. ಸರ್ಕಾರ ನೀರು ಪೂರೈಸುತ್ತಿಲ್ಲ ಅಂತ ಬಯ್ದುಕೊಳ್ಳುತ್ತೇವೆ, ನೆಲವನ್ನು ರಿಚಾರ್ಜ್ ಮಾಡುವ ಕಾಳಜಿ ತೋರುವುದಿಲ್ಲ.
ಅವರವರ ಸಾವು- ನೋವುಗಳು ಅವರವರ ಕರ್ಮವಷ್ಟೇ ಎಂದು ಯೋಚಿಸುವ ನಿರ್ದಯಿ ಜಗತ್ತಿನಲ್ಲಿ, ಭೂಗೋಳದ ಕ್ಲಾಸಿನಲ್ಲೂ ಅಷ್ಟಾಗಿ ಕೇಳಿರದ ಯಾವುದೋ ಸುಡಾನು, ದಕ್ಷಿಣ ಸುಡಾನಿನ ಆಕ್ರಂದನಗಳಿಗೆ ಯಾವ ಅರ್ಥ ಹುಡುಕಲಾದೀತು?



- ಚೈತನ್ಯ ಹೆಗಡೆ
cchegde@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com