ಭಾಷಾ ಮಾಧ್ಯಮ ಕುರಿತು ನಮ್ಮ ನಿಜ ತಲ್ಲಣ
ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರ ಕುರಿತು ಸುಪ್ರೀಂ ಕೋರ್ಟ್ ಸದ್ಯದಲ್ಲೇ ವಾದಗಳನ್ನು ಆಲಿಸಲಿದೆ. ಈ ಕುರಿತು ಪರಿಣಿತರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಂದಿಡುತ್ತಿದ್ದಾರೆ. ಸಾಮಾನ್ಯ ನಾಗರಿಕನಾದ ನಾನು, ಈ ಕುರಿತು ನಾನು ಕಂಡ ಸತ್ಯವನ್ನು ಮುಂದಿಡಲು ಬಯಸುತ್ತೇನೆ.
ಶಿಕ್ಷಣ ಮಾಧ್ಯಮವು ಯಾವುದಾಗಬೇಕೆಂಬುದನ್ನು ನಿರ್ಧರಿಸುವಾಗ, ಆ ಮಾಧ್ಯಮಗಳಿಂದಾಗಿ, ಇತರರಿಗೆ ಸಿಗಬಹುದಾದ ಭವಿಷ್ಯವನ್ನು ಬೋರೇ ಗೌಡನ ಮೊಮ್ಮಗನು ತನ್ನ ಆರ್ಥಿಕ ಹಾಗೂ ಸಾಮಾಜಿಕ ಸ್ಥಾನದಿಂದಾಗಿ ಕಳೆದುಕೊಳ್ಳುವಂತಾಗಬಾರದು. ಇಡೀ ದೇಶಕ್ಕೆ ಏಕರೀತಿಯ ಭಾಷಾಮಾಧ್ಯಮದಿಂದ ಮಾತ್ರ ಇದು ಸಾಧ್ಯ. ಹಾಗೆ ನೋಡಿದರೆ ಇಷ್ಟ ಇರಲಿ, ಇಲ್ಲದಿರಲಿ ಇಂಗ್ಲಿಷ್ ನಮಗೆ ಇಂದು ಅನಿವಾರ್ಯವಾಗಿದೆ. ನಾನು ಕಂಡಂತೆ, ಉಳ್ಳವರಿಗೆ ಒಂದು ಇತರರಿಗೆ ಒಂದು ಎಂಬ ಭಾಷಾಮಾಧ್ಯಮ ನೀತಿಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪಟ್ಟಣದ ಜೊತೆಗೆ ಗ್ರಾಮಾಂತರ ಪ್ರದೇಶಗಳ ಮಕ್ಕಳೂ ಸಹ ಎರಡು ಭಾಗಗೊಂಡಿದ್ದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಉಳ್ಳವರ ಮಕ್ಕಳು ಖಾಸಗಿ ಶಾಲೆಗೆ ಹೋದರೆ ಇತರರು ಸರಕಾರಿ ಶಾಲೆಗೆ ಹೋಗುತ್ತಿದ್ದಾರೆ.
ನಮ್ಮ ತಂದೆಯು, ತನ್ನ ಡಜನ್ ಮಕ್ಕಳಿಗೆ ವಿದ್ಯೆಗಾಗಿ ವೆಚ್ಚಮಾಡಿದ್ದಕ್ಕಿಂತ ಹೆಚ್ಚು ಹಣವನ್ನು ಈಗಿನ ಒಂದೋ ಎರಡೋ ಮೊಮ್ಮಕ್ಕಳ ಮೇಲೆ ನಮ್ಮ ಮಕ್ಕಳು ವೆಚ್ಚಮಾಡುತ್ತಿದ್ದಾರೆ. ಮನೆಯ ಪಕ್ಕದಲ್ಲಿರುವ ಸರ್ಕಾರಿ ಶಾಲೆಯನ್ನು ಬಿಟ್ಟು ದೂರ ದೂರದ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಆಳೆತ್ತರದ ಡೊನೇಷನ್ ಸುರಿದಿದ್ದಲ್ಲದೇ, ಮಕ್ಕಳ ಬೂಟು, ಟೈ, ಯೂನಿಫಾರಂಗಳನ್ನು ಹೊರತುಪಡಿಸಿ, ನಗರದಲ್ಲಿ ಆಟೋಗಳಿಗಾಗಿ ಕನಿಷ್ಠ ಐದುನೂರು ರುಪಾಯಿ ಖರ್ಚು ಮಾಡುತ್ತಿದ್ದರೆ, ಮೂವತ್ತು ನಲವತ್ತು ಕಿಲೋಮೀಟರ್ಗಳಿಂದ ಶಿರಸಿಯ ಪ್ರತಿಷ್ಠಿತ ಶಾಲೆಗೆ ಬರುವವರು ಒಂದು ಸಾವಿರಕ್ಕಿಂತ ಹೆಚ್ಚು ವೆಚ್ಚವನ್ನು ತಿಂಗಳೊಂದಕ್ಕೆ ಮಾಡುತ್ತಾರೆ. ಕೆಲವರಂತೂ ತೋಟಗಳ ಕೆಲಸವನ್ನು ಬಿಟ್ಟು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವುದು- ಕಳುಹಿಸುವುದನ್ನೇ ತಮ್ಮ ದಿನಚರಿಯನ್ನಾಗಿ ಮಾಡಿಕೊಂಡಿದ್ದಾರೆ. ಈ ಜಂಜಾಟ ಬೇಡ ಎಂದು ಕೆಲವರು ಶಿರಸಿಯಲ್ಲಿ ಬಾಡಿಗೆ ಮನೆ ಮಾಡಿದ್ದರೆ ಇನ್ನು ಕೆಲವರು ಸ್ವಂತ ಮನೆಯನ್ನೇ ಹೊಂದಿದ್ದಾರೆ. ಇಪ್ಪತ್ತು ಮೂವತ್ತು ವರುಷಗಳ ಹಿಂದೆ ಮಹಾನಗರಗಳಲ್ಲಿ ಕಂಡುಬರುತ್ತಿದ್ದ ಸನ್ನಿವೇಶಗಳು ಈಗ ಇಲ್ಲಿ ಸೃಷ್ಟಿಯಾಗುತ್ತಿವೆ. ಹಳ್ಳಿಗಳು ಬರಡಾಗುತ್ತಿವೆ. ಸರ್ಕಾರಿ ಶಾಲೆಯು ತಾನೇ ಮುಚ್ಚಿಕೊಳ್ಳುತ್ತಿದೆ. (ಸರ್ಕಾರಕ್ಕೆ ಉಳಿತಾಯವನ್ನು ತಂದುಕೊಡುತ್ತಿದೆ.)
ತಮ್ಮ ಆರ್ಥಿಕ ಹಾಗೂ ಸಾಮಾಜಿಕ ಕಾರಣಗಳಿಂದಾಗಿ ಕೆಳವರ್ಗದ ಮಕ್ಕಳು ಮಾತ್ರ ಇಂದು ಸರಕಾರಿ ಶಾಲೆಗೆ ಹೋಗುತ್ತಿದ್ದಾರೆ. ಈಗಿನ ಉಳ್ಳವರ ಮಕ್ಕಳ ತಾಯಂದಿರಲ್ಲಿ ಬಹುತೇಕರು ಪದವೀಧರರಾಗಿದ್ದಾರೆ. ಹೀಗಾಗಿ ಅವರು ತಮ್ಮ ಮಕ್ಕಳಿಗೆ ಸುಲಭವಾಗಿ ಹೊಂ ವರ್ಕ್ಗಳಲ್ಲಿ ಸಹಾಯ ಮಾಡುತ್ತಾರೆ. ಪರೀಕ್ಷೆಯಲ್ಲಿ ಮಾರ್ಕ್ಸ್ಗಳು ಸುಲಭದಲ್ಲಿ ಇವರ ಪಾಲಾಗುತ್ತವೆ. ಅನಕ್ಷರಸ್ಥ ಮಾತೆಯರ ಹಾಗೂ ಕೂಲಿಯವರ ಮಕ್ಕಳು ಮಾತ್ರ ಸರಕಾರಿ ಶಾಲೆಗೆ ಹೋಗುತ್ತಾರೆ. ದಡ್ಡರಾಗಿಯೇ ಉಳಿಯುತ್ತಾರೆ! ಉಳ್ಳವರ ಹಾಗೂ ಇಲ್ಲದವರ ನಡುವೆ ಮಧ್ಯಮ ವರ್ಗದವರು ಎಂಬ ಒಂದು ವರ್ಗವಿದೆ. ಅವರಲ್ಲಿ ಕೆಲವರು ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಿ ಕೃತಾರ್ಥರಾಗುತ್ತಾರೆ. ಇದರಲ್ಲಿ ಕೆಲವರು ಸಾಮಾಜಿಕವಾಗಿ ಮೇಲು ಸ್ಥರದಲ್ಲಿದ್ದು ಆರ್ಥಿಕವಾಗಿ ಕೆಳಸ್ಥರದಲ್ಲಿರುವವರು. ಇವರು ತಮ್ಮ ಸಾಮಾಜಿಕ ಕಾರಣಗಳಿಂದಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಮುಜುಗರ ಪಡುತ್ತಾರೆ. ಆದರೂ ಆರ್ಥಿಕ ಅಸಾಮರ್ಥ್ಯದಿಂದಾಗಿ ಖಾಸಗಿ ಶಾಲೆಗಳಿಗೆ ಕಳುಹಿಸುವುದಕ್ಕೆ ಹಿಂಜರಿಯುತ್ತಿದ್ದಾರೆ. ಇವರಿಗೆ ಸರಕಾರಿ ಶಾಲೆ ಅನಿವಾರ್ಯ. ಆದರೆ ಅಲ್ಲಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಒದ್ದಾಟ. ಇವರದ್ದು ತ್ರಿಶಂಕು ಸ್ಥಿತಿ. ಅನಿವಾರ್ಯತೆಯನ್ನು ಹೊರತು ಪಡಿಸಿದರೆ ಇವರ ಆಯ್ಕೆ ಖಾಸಗಿ ಶಾಲೆಯೇ ಆಗಿರುತ್ತದೆ.
ಸಾಯಂಕಾಲ ಶಾಲೆ ಬಿಡುವ ಸಮಯದಲ್ಲಿ ಪ್ರತಿಷ್ಟಿತ ಖಾಸಗಿ ಶಾಲೆಯ ಎದುರಿಗೆ ನಿಂತು ನೋಡಿದರೆ ತಲ್ಲಣವಾಗುತ್ತದೆ. ಪಾಲಕರು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಬಂದಿರುತ್ತಾರೆ. ಮಕ್ಕಳ ಕಲರವದ ಜೊತೆಗೆ ಎಲ್ಲಾ ತರಹದ ವಾಹನದ ಸದ್ದು, ಅವುಗಳ ಹಾರ್ನ್ಗಳ ಸದ್ದು, ಗಿಜಿಗಿಜಿಗಳು ಒಂದು ಕ್ಷಣ ಬೆಂಗಳೂರಿನ ಮೆಜೆಸ್ಟಿಕ್ಕನ್ನು ನಮ್ಮೂರಿನಲ್ಲಿಯೂ ಸೃಷ್ಟಿಸಿಬಿಡುತ್ತವೆ. ಇಲ್ಲೊಂದು ಪ್ರಶ್ನೆ ನನ್ನನ್ನು ಕಾಡುತ್ತಿದೆ. ಅಕ್ಷರದಿಂದ ಮಾತ್ರ ಅನ್ನ ಸಿಗುತ್ತದೆಯೇ? ಶಾಲಾ ಪುಸ್ತಕ ಓದಿ ಪಾಸಾದವನು ಮಾತ್ರ ಬದುಕುತ್ತಾನೆಯೇ? ಶಿಕ್ಷಣವನ್ನು ಉದ್ದಿಮೆಯಾಗಿ ಮಾಡಿಕೊಂಡ ಉದ್ದಿಮೆದಾರರು ಹಾಗೂ ವೇಗದ ಬದುಕಿಗೆ ಜಿಗಿಯಲು ಮಕ್ಕಳನ್ನು ತಯಾರು ಮಾಡುತ್ತಿರುವ ಪೋಷಕರ ಮುಂದೆ ಈ ಪ್ರಶ್ನೆ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತಿದೆ.
-ಡಾ. ಈಶ್ವರ ಶಾಸ್ತ್ರಿ ಮೋಟಿನಸರ
ಶಿರಸಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

