

ವಾರಾಣಸಿ ತೀರದಲ್ಲಿ ಇಸ್ವಿ 2021ರ ಒಂದು ಶುಭ ಮುಂಜಾನೆ. ಆ ಮನೆಯಲ್ಲಿ ಸಂತಸದ ಹೊನಲಿತ್ತು. ಆ ಸಂಭ್ರಮವನ್ನೂ ಮೀರಿಸುತ್ತಿತ್ತು ಆ ಮನೆಯವರನ್ನೆಲ್ಲ ಆವರಿಸಿದ್ದ ಪವಾಡಸದೃಶ ಪುಳಕಿತ ಭಾವ. ಹದಿನಾಲ್ಕು ವರ್ಷಗಳ ನಂತರ ಆ ಮನೆಯ ಹಿರಿಜೀವ ಕಣ್ಣು ತೆರೆದಿತ್ತು! ಆತ ಹದಿನಾಲ್ಕು ವರ್ಷಗಳ ಕೋಮಾದಲ್ಲಿದ್ದ 'ಹೋಪ್' ಅಥವಾ ಭರವಸೆ ಅನ್ನೋದು ತುಂಬಾ ಮೌಲ್ಯದ್ದು. ಅದನ್ನು ಇಟ್ಟುಕೊಳ್ಳುವುದಕ್ಕೂ ಯೋಗ್ಯತೆ ಬೇಕಾಗುತ್ತದೆ. ಹಾಗೆಂದೇ ಅದನ್ನು ಪೊರೆದುಕೊಳ್ಳುವ ಶಕ್ತಿ ಕೆಲವರಿಗೆ ಮಾತ್ರ. ಎಷ್ಟೆಂದರೂ ಇಷ್ಟೇ ಅಂತ ಸಿನಿಕರಾಗುವುದು ತುಂಬ ಸುಲಭದ ಮಾರ್ಗವಾದ್ದರಿಂದ ಆ ದಾರಿಯಲ್ಲೇ ಹೆಚ್ಚಿನವರ ಪ್ರಯಾಣ. ಅವೆಲ್ಲದರ ನಡುವೆಯೂ ಈತ ಮತ್ತೆ ಕಣ್ಣು ಬಿಟ್ಟು ಎದ್ದು ಕೂರುತ್ತಾನೆಂಬ ವಿಶ್ವಾಸ ಅವನ ಮನೆಯವರಿಗೆ, ಆಪ್ತ ವರ್ಗದವರಿಗೆ ಇತ್ತು. ಅಂಥದೊಂದು ಅದ್ಯಮ ವಿಶ್ವಾಸವನ್ನು ಮುಕ್ಕಾಗದಂತೆ ಜತನ ಮಾಡುತ್ತಲೇ ಅವರೆಲ್ಲ ಈತನನ್ನು ಪೊರೆದರು. ಕೊನೆಯೇ ಇರದಂತಿದ್ದ ಅಯೋವುಯ ಸ್ವಪ್ನದ ಸಂಕೋಲೆಗಳಿಂದ ಅದು ಹೇಗೋ ತಪ್ಪಿಸಿಕೊಂಡವನಂತೆ ಆತ ಕಣ್ಣು ತೆರೆದಾಗ ಎರಡು ಸಾವಿರದ ಏಳನೇ ಇಸವಿಯ ಕ್ಯಾಲೆಂಡರ್ ಕುರುಹೂ ಸಿಗದಂತೆ ಮೂಲೆ ಸೇರಿಯಾಗಿತ್ತು. ಹದಿನಾಲ್ಕು ವರ್ಷ ದಂಡಕಾರಣ್ಯ, ಲಂಕೆಗಳಲ್ಲಿ ಹೊಕ್ಕು ಬಂದ ಶ್ರೀರಾಮನಿಗೆ ಅಯೋಧ್ಯೆಗೆ ಮರಳಿದಾಗ ಅದು ಹೇಗೆನಿಸಿತ್ತೋ ಗೊತ್ತಿಲ್ಲ. ಅವನ ಅನುಪಸ್ಥಿತಿಯಲ್ಲಿ ಆ ಸಾಮ್ರಾಜ್ಯ ತೀರ ಏನೂ ಬದಲಾಗಿರಲಿಲ್ಲವೇನೋ? ತಾನು ಹೊಕ್ಕು ಬಂದ ಮಾಯಾಲೋಕದ ಎದುರು ಅದವನಿಗೆ ಸಪ್ಪೆಯಾಗಿಯೇ ಅನಿಸಿತ್ತೇನೋ?
ಆದರೆ ನಮ್ಮ ಕಥಾನಾಯಕ ಮಾತ್ರ ಅತಿ ಎಂಬಂತೆ ಗೊಂದಲಕ್ಕೆ ಬಿದ್ದುಬಿಟ್ಟಿದ್ದ. ಆತ ಕಣ್ಮುಚ್ಚಿದಾಗ ಇದ್ದ ಭಾರತವನ್ನು ನೆನಪು ಮಾಡಿಕೊಳ್ಳುವುದೇ ಒಂದು ತ್ರಾಸದಾಯಕ ಕೆಲಸವಾಗಿತ್ತು. ಅದನ್ನು ತಾನೀಗ ಕಣ್ಣು ತೆರೆದಿರುವ ಭಾರತದೊಂದಿಗೆ ಹೋಲಿಸಿಕೊಂಡರೆ ಹೊಂದಾಣಿಕೆಯೇ ಆಗುತ್ತಿರಲಿಲ್ಲ. ಯಾವುದೋ ದುಃಸ್ವಪ್ನವೊಂದಕ್ಕೆ ಪ್ರವೇಶಿಸಿ, ಅಲ್ಲಿಂದ ಹೇಗೋ ಹೊರಬಿದ್ದು ಮತ್ತೆ ಪರಿವಾರದವರೊಂದಿಗೆ ಸೇರಿಕೊಂಡು ಮತ್ತೊಂದು ಸ್ವಪ್ನದ ಅರಮನೆಗೆ ಕಾಲಿರಿಸಿದಂಥ ಮಾಯಾ ಕೋಲಾಹಲ.
---
2007ರ ಆ ಸಾಯಂಕಾಲ ಆತ ಕರ್ನಾಟಕದ ಪೇಟೆಯೊಂದಕ್ಕೆ ತಾಗಿಕೊಂಡಿರುವ ಹಳ್ಳಿಯಲ್ಲಿ ಹಳೆಯ ಮಾರುತಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮನಸ್ಸಿನ ತುಂಬೆಲ್ಲ ಹತಾಶೆಯೇ ಹೊಯ್ದಾಡಿಕೊಂಡಿತ್ತು. ಸಣ್ಣ ವ್ಯಾಪಾರ, ಸ್ವಲ್ಪ ಕೃಷಿ ಮಾಡಿಕೊಂಡಿದ್ದ ಆತನಿಗೆ ಊರಿನ ಉಸಾಬರಿ ವಿಚಾರಿಸಿಕೊಳ್ಳುವ ಉಮೇದು ಜೋರಿತ್ತು. ಸರ್ಕಾರದ ಸವಲತ್ತುಗಳನ್ನು ಬೇಕಾದವರಿಗೆ ದೊರಕಿಸಿಕೊಡುವ ಯತ್ನ. ಭ್ರಷ್ಟಾಚಾರವಾಗಿದೆ ಎಂದಾದಾಗ ಪ್ರಶ್ನಿಸುವುದು. ಅರ್ಜಿ ಸಮರ ಇಂಥವೆಲ್ಲದರ ಮುಂಚೂಣಿಯಲ್ಲಿದ್ದನಾತ. ಇವನಿಗೆ ಸಾಮಾಜಿಕ ಕಾರ್ಯಕರ್ತ ಎಂಬ ಹಣೆಪಟ್ಟಿ ಸಿಕ್ಕಿತ್ತಾದರೂ ಅದೇನೂ ಖುಷಿ ಕೊಡುವ ವಿಚಾರವಾಗಿರಲಿಲ್ಲ. ಏಕೆಂದರೆ ವ್ಯವಸ್ಥೆಯ ಒಳಹೊಕ್ಕಂತೆಲ್ಲ ಅಲ್ಲಿನ ಘೋರ ಮೋಸಗಳು ಮುಖಾಮುಖಿಯಾಗಿ ಈತನನ್ನು ಅಧೀರನನ್ನಾಗಿಸುತ್ತಿದ್ದವು. ಅಧಿಕಾರಿ ವರ್ಗದ ಮಾತು ಹಾಗಿರಲಿ. ಸಾಮಾನ್ಯ ಜನರೂ ತೀರ ಸ್ವಾರ್ಥಿಗಳಾಗಿ ಹೋಗಿರುವುದು ನಿಚ್ಚಳವಾಗಿತ್ತು. ರಾಜಕಾರಣಿಗಳಿಗೆ ಮನಸೋಇಚ್ಛೆ ಬೈಯುತ್ತಿದ್ದರಾಗಲೀ, ತಾವೂ ಆ ಸ್ಥಾನಕ್ಕೆ ಹೋದರೆ ಸಿಕ್ಕಷ್ಟು ಬಾಚಿಕೊಳ್ಳುವ ತಲುಬಿನಲ್ಲಿದ್ದೇವೆ ಎಂಬುದು ಎಲ್ಲರ ಆತ್ಮಸಾಕ್ಷಿಗೂ ಗೊತ್ತಿತ್ತು. ಇವರು ಊರಿನಲ್ಲಿ ಬೆಂಬಲಿಸಿದ್ದ ಪ್ರಾಮಾಣಿಕ ಅಭ್ಯರ್ಥಿಯೊಬ್ಬ ಜಾತಿ ರಾಜಕಾರಣದ ಆಟದಲ್ಲಿ ಸರೋತು ಹೋದದ್ದು ಇವರ ನೈತಿಕತೆಯನ್ನೇ ಕುಗ್ಗಿಸಿತ್ತು. ಇತ್ತ, ತಮ್ಮ ಸ್ವಂತದ ವಹಿವಾಟು ಸಹ ಉತ್ತಮ ಸ್ಥಿತಿಯಲ್ಲಿರಲಿಲ್ಲ. ಅವೆಷ್ಟೋ ನಿಯಂತ್ರಣ ಕಾಯ್ದೆಗಳನ್ನು ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡಲೆಂದೇ ತಂದಂತಿತ್ತು. ಇವನ್ನೆಲ್ಲ ನೋಡುವಾಗ ಈತನಿಗೆ ತನ್ನ ಅಜ್ಜ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಏಕೆ ಎಂದೆಲ್ಲ ಮನಸ್ಸು ಖಿನ್ನವಾಗುತ್ತಿತ್ತು. ಈತನ ಮಕ್ಕಳಿಗೂ ಇವನ ಸಮಾಜಸೇವೆಯ ಮನಸ್ಥಿತಿ ಕುರಿತು ಸಹಾನುಭೂತಿ ಇತ್ತಾದರೂ, ದೇಶ ಯಾವತ್ತಿದ್ದರೂ ಇಷ್ಟೇ ಎಂಬ ಅಸಹಾಯಕತೆಯೂ ಮಾತುಕತೆಗಳಲ್ಲಿ ವ್ಯಕ್ತವಾಗುತ್ತಿತ್ತು. ಇಂಥವೆಲ್ಲದರ ಗುಂಗಿನಲ್ಲಿ ಅನ್ಯಮನಸ್ಕರಾಗಿ ವಾಹನ ಓಡಿಸಿದ್ದರಿಂದಲೋ ಏನೋ ಅವರು ಅಪಘಾತಕ್ಕೆ ಈಡಾಗಿ ಕೋಮಾಕ್ಕೆ ಜಾರಿದರು.
ಭರವಸೆ ಎಂಬುದು ಕೆಲವರ ಪ್ರಕಾರ ಅತ್ಯಂತ ಅಪಾಯಕಾರಿ. ಇನ್ನು ಕೆಲವರಿಗೆ ಆಪ್ಯಾಯ ತರಿಸುವಂಥದ್ದು. ಇವರ ಮನೆಯವರು ಎರಡನೇ ವರ್ಗಕ್ಕೆ ಸೇರಿದವರಾದ್ದರಿಂದ ಈ ವ್ಯಕ್ತಿ ತಾನಾಗಿ ಕೊನೆಯುಸಿರೆಳೆಯವವರೆಗೂ ತಮ್ಮೊಂದಿಗಿರಲಿ ಎಂಬ ನಿರ್ಧಾರಕ್ಕೆ ಬಂದರು. 'ಸುಮ್ಮನೇ ಗಾಳಿಪಂಖಕ್ಕೆ ಕಣ್ಣು ಜೋಡಿಸಿ ಜಗದರಿವಿಲ್ಲದೇ ಜೀವಚ್ಛವವಾಗಿರುವಾತನನ್ನು ಏಕೆ ಪೊರೆಯುತ್ತಿದ್ದೀರಿ' ಎಂಬ ಮಾತುಗಳಿಗೆ ಅವರ್ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಒಂದು ಹಂತದಲ್ಲಿ ತಮ್ಮ ನೆಲ ಬಿಟ್ಟು ಕಾಶಿಗೆ ಹೋಗುವ ಸಂದರ್ಭ ಬಂದಾಗಲೂ ಈತನನ್ನೂ ಎತ್ತಿ ಒಯ್ದರು. ಅದೆಷ್ಟೇ ಜರ್ಜರಿತವಾಗಿದ್ದರೂ ಆಸೆ-ಭರವಸೆಗೆ ಎದೆಮೂಲೆಯಲ್ಲೊಂದು ಜಾಗ ಕೊಡುವೆವಲ್ಲ, ಅಂತೆಯೇ.
---
2021ರ ಆ ಶುಭ ಮುಂಜಾನೆ ಕಳೆದು ನಾಲ್ಕು ತಿಂಗಳುಗಳೇ ಉರುಳಿಬಿಟ್ಟಿವೆ. ಈತನಿಗೆ ಖುಷಿಯೋ -ಗೊಂದಲವೋ ಎಂಬ ಬಗೆಹರಿಯದ ಮನಸ್ಥಿತಿ. ತಾನು ಕೋಮಾದಲ್ಲಿಯೇ ಇದ್ದು ಕನಸುತ್ತಿರುವೆನೇನೋ ಅಂತ ಅಂದುಕೊಳ್ಳುತ್ತಾನೆ. ಸುತ್ತಲೂ ತನ್ನ ಪರಿವಾರ ಅಂಟಿಕೊಂಡೇ ಇರುವುದರಿಂದ ಇದು ವಾಸ್ತವವೇ ಹೌದು ಎಂಬ ಅನಿಸಿಕೆಯೂ ಮೊಳೆತಿವೆ. ತಾನು ಅಪಘಾತವಾಗುತ್ತಲೇ ಸತ್ತು, ಪರಲೋಕ ಸೇರಿ ಈಗ ಕುಟುಂಬದವರನ್ನೂ ಈ ಪರಲೋಕದಲ್ಲಿಯೇ ಕಾಣುತ್ತಿದ್ದೇನೇನೋ ಅಂತೆಲ್ಲ ಅಂದುಕೊಳ್ಳುವುದಿದೆ. ಹೀಗೆಲ್ಲ ಯೋಚನೆ-ಪ್ರತಿ ಯೋಚನೆಗಳಿಂದ ತೊಳಲಾಟ ಅನುಭವಿಸುತ್ತಿರುವುದು ಬೇಡವೆಂದು ನಿರ್ಧರಿಸಿರುವ ಆತ, ತಾನಿರುವ ಸ್ಥಿತಿಗೆ 'ಸ್ವಪ್ನ ವಾಸ್ತವ' ಅಂತ ಹೆಸರಿಟ್ಟುಕೊಂಡಿದ್ದಾನೆ ಹಾಗೂ ಆ ಸ್ಥಿತಿಯನ್ನು ಎಂಜಾಯ್ ಮಾಡುವುದಾಗಿಯೂ ಮನಸ್ಸಿಗೆ ತಿಳಿ ಹೇಳಿದ್ದಾನೆ.
ಈಗಾತ ಗಂಗಾ ನದಿಯಲ್ಲಿ ಬೋಟ್ ಏರಿ ಸಾಗುತ್ತಿದ್ದಾನೆ. ಆತನ ನೆನಪಿನ ಪಟಲದಲ್ಲಿ ಸಿನಿಮಾ ದೃಶ್ಯವೊಂದಿದೆ. ಅದರಲ್ಲಿ ಪ್ಯಾರೀಸ್ನ ಜಲಬೀದಿಗಳಲ್ಲಿ ಪಾತ್ರಗಳು ವಿಹರಿಸಿದ್ದನ್ನು ನೋಡಿದ್ದ. ಈಗದು ವಾರಾಣಸಿಯಲ್ಲೇ ನಿಜವಾದಂತಿದೆ. ಮಾಲಿನ್ಯ ಮತ್ತು ಹೆಣ ತೇಲುವ ಬಿಕನಾಸಿ ಚಿತ್ರಣವನ್ನು ಯಾರೋ ಎತ್ತಿ ಮೂಟೆಕಟ್ಟಿಬಿಟ್ಟಿದ್ದಾರೇನೋ ಎನಿಸುತ್ತಿತ್ತು. ಪರಂಪರೆಯನ್ನು ಪ್ರದರ್ಶನಕ್ಕೆ ಇಟ್ಟಿರುವ ಆಕರ್ಷಕ ಪ್ರವಾಸಿ ತಾಣವಾಗಿತ್ತದು. ನದಿ ತೀರದ ಸಾಯಂಕಾಲಗಳಲ್ಲಿ ಅದೆಂಥ ಬೆರಗು! ಸುಮಾರು ಜಾಗಗಳಲ್ಲಿ ದೊಡ್ಡ ದೊಡ್ಡ ದೃಶ್ಯಾಚೌಕಗಳನ್ನು ಇಳಿಬಿಟ್ಟಿದ್ದರು. ಸಂಜೆಯಾಯಿತೆಂದರೆ ಅಲ್ಲೊಂದು ಜನಸಂತೆ. ಈ ನದಿ ತೀರದಲ್ಲಿ ಎಂಥೆಂಥ ಸಾಮ್ರಾಜ್ಯಗಳೆಲ್ಲ ತಲೆ ಎತ್ತಿದವು. ನಾಗರೀಕತೆ ಹೇಗೆಲ್ಲಾ ವಿಕಸಿಸಿತು. ಆಯಾ ಕಾಲಘಟ್ಟದ ಜನರ ಜಾಣ್ಮೆ-ಕೌಶಲಗಳೇನಿದ್ದರೂ ತಲೆಮಾರುಗಳನ್ನೆಲ್ಲ ಈ ನದಿ ತೀರ ಹೇಗೆಲ್ಲ ಉದ್ದೀಪಿಸಿತು ಅಂತ ಆ ಸ್ಕ್ರೀನ್ಗಳು ರಸವತ್ತಾಗಿ ಕತೆ ಹೇಳುತ್ತಿದ್ದವು. ಇಂಥ ಭವ್ಯ ಪರಂಪರೆ ನಾಗರೀಕತೆಗೆ ಅಪಚಾರವಾಗದಂತೆ ನಡೆದುಕೊಳ್ಳಬೇಕೆಂಬ ಸಂಕಲ್ಪವೊಂದನ್ನು ಆ ಕಥಾನಕವೇ ಒಡಮೂಡಿಸುತ್ತಿತ್ತು.
ಇಂಥ ಪುಳಕಗಳ ಝಲಕನ್ನು ಭಾರತದ ಬೇರೆಡೆಗಳಲ್ಲೂ ನೋಡಬಹುದು ಅಂತ ಈತನಿಗೆ ಮೊಮ್ಮಕ್ಕಳು ಆಸೆ ಹುಟ್ಟಿಸುತ್ತ ಕತೆ ಹೇಳುತ್ತಿದ್ದರು. ವಾರ್ತಾ ಮಾಧ್ಯಮದತ್ತ ಕಣ್ಣು ಹಾಯಿಸಿದರೂ ಇವಕ್ಕೆಲ್ಲಾ ಸಬೂತು ಸಿಗುತ್ತಿತ್ತು. ವಾರಾಣಸಿಯಂಥಹುದೇ ನೀರಹಾದಿಗಳು ದೇಶದ ಪ್ರಮುಖ ನದಿಗಳಲ್ಲೆಲ್ಲ ತೆರೆದುಕೊಂಡಿದ್ದವು. ಹರಿವೊಂದಕ್ಕೆ ಇನ್ನೊಂದನ್ನು ಬೆಸೆದು ಬತ್ತಿದ ಹಲವು ಹರಿವುಗಳಿಗೆ ಜೀವ ತರಿಸಲಾಗಿತ್ತು. ಬಸ್ಸಿನಲ್ಲಿ ಪ್ರಯಾಣಿಸಿದ್ದ ತನ್ನ ನೆನಪು ಚಿತ್ರಗಳೊಂದಿಗೆ ಇಂದಿನ ನೀರ ಮೇಲಿನ ಯಾನದ ಜಾಲವನ್ನು ಹೋಲಿಸಿಕೊಳ್ಳುತ್ತಾ ಆತ ಬೆರಗಾಗಿದ್ದ.
ತಾನು ನಿದ್ರೆಗೆ ಜಾರಿದ್ದ ಕಾಲದಿಂದ ಕಣ್ತೆರೆದಾಗ ಕಂಡ ಭಾರತದೊಂದಿಗೆ ಕೊಂಡಿ ಕಟ್ಟಿಕೊಳ್ಳುವ ಪ್ರಕ್ರಿಯೆ ಅವನ ಪಾಲಿಗೆ ಸುಲಭದ್ದೇನೂ ಆಗಿರಲಿಲ್ಲ. ಈ ಪ್ರಯತ್ನದಲ್ಲಿ ಆತ ಮೊಮ್ಮಕ್ಕಳೊಂದಿಗೆ ಮಾತಿಗೆ ಇಳಿಯುತ್ತಿದ್ದ. ಒಬ್ಬ ಮೊಮ್ಮಗ ಸಂಶೋಧಕನಾಗುವ ಹಾದಿಯಲ್ಲಿದ್ದಾನೆ. ಭಾರತದ ಪ್ರಾಚೀನ ಗ್ರಂಥಗಳೆಲ್ಲ ವಿಜ್ಞಾನ-ತಂತ್ರಜ್ಞಾನವನ್ನು ಹೇಗೆಲ್ಲಾ ವಿವರಿಸಿದ್ದರು ಹಾಗೂ ಅವುಗಳಲ್ಲಿ ಇಂದಿನ ಬದುಕಿಗೆ ಪ್ರಸ್ತುತವಾಗುವಂತೆ ಯಾವೆಲ್ಲ ವಿಚಾರಗಳನ್ನು ಅಭಿವೃದ್ಧಿಪಡಿಸಬಹುದು ಎಂಬುದು ಆತನ ವಿಷಯವಂತೆ. ಮೊಮ್ಮಗಳು ತಾನು ದೊಡ್ಡವಳಾಗಿ ಕೀಟಶಾಸ್ತ್ರಜ್ಞೆ ಆಗುತ್ತಾಳಂತೆ. ಇಂಥ ಥರಹೇವಾರಿ ಶಿಸ್ತುಗಳಿಗೆಲ್ಲ ಗೌರವ-ಆರ್ಥಿಕ ತಾಕತ್ತು ಬಂದಿರುವುದು ಸೋಜಿಗವೆನಿಸುತ್ತಿತ್ತು. ತನಗೆ ನೆನಪಿರುವಂತೆ ವೈದ್ಯನೋ, ಇಂಜಿನಿಯರೋ ಆದರಷ್ಟೇ ಬದುಕು ಎಂಬಂಥ ಸ್ಥಿತಿ ಇತ್ತು. ಅಂಥ ಉದ್ಯೋಗಗಳೂ ಕೆಲವು ಪಟ್ಟಣಗಳಿಗೆ ಸೀಮಿತವಾಗಿ ಅಲ್ಲೆಲ್ಲ ಹುಚ್ಚು ಪೈಪೋಟಿ, ದುಬಾರಿ ಒತ್ತಡದ ಬದುಕು ನಿರ್ಮಾಣವಾಗಿತ್ತು.
"ಈಗ ನೀವು ಹಳ್ಳಿಯ ಮೂಲೆಯಲ್ಲಿದ್ದು ಜಗತ್ತಿನ ಇನ್ಯಾವುದೋ ಮೂಲೆಯವನೊಂದಿಗೆ ವಹಿವಾಟು ನಡೆಸಬಹುದು. ಅಂತರ್ಜಾಲ ತರಂಗ ಭಾರತದ ಅಂಚುಗಳನ್ನೆಲ್ಲ ತಾಗುವಂತೆ ಸರ್ಕಾರ ವ್ಯವಸ್ಥೆ ಮಾಡಿದೆ" ಅಂತ ಮೊಮ್ಮಗ ವಿವರಿಸಿದ್ದ.
"ಭಾರತವನ್ನು ಇನ್ನಿಲ್ಲದಂತೆ ಕಾಡಿದ್ದ ಹತಾಶೆಯಿಂದ ಹೀಗೊಂದು ಆಶಾದಾಯಕ ಉತ್ಕರ್ಷಕ್ಕೆ ಚಿಮ್ಮಿಕೊಳ್ಳುವುದು ಸಾಧ್ಯವಾಗಿದ್ದಾದರೂ ಹೇಗೆ. ನನಗೆ ತುಂಬ ಸರಳವಾಗಿ ವಿವರಿಸು" ಅಂತ ಕೇಳಿದ್ದಕ್ಕೆ ನವ ಪೀಳಿಗೆಯವರೆಲ್ಲ ಸೇರಿ ಉತ್ತರವೊಂದನ್ನು ನೀಡಿದ್ದರು.
ೆ"ಎಲ್ಲ ಕ್ರಾಂತಿಗಳೂ ಸಣ್ಣ ಕಿಡಿಯೊಂದಿಗೇ ಹುಟ್ಟಿಕೊಳ್ಳುತ್ತವೆ. ಈ ಸಣ್ಣ ಕಾವು ಏನು ಮಾಡಲಿದೆ ಅಂತಲೇ ಎಲ್ಲರೂ ನಿರಾಸೆಯ ಮಾತಾಡುತ್ತಾರಾದರೂ ಅದಕ್ಕೊಂದು ಆಮ್ಲಜನಕ ಸಿಕ್ಕಿದರೆ ಎಲ್ಲವನ್ನೂ ವ್ಯಾಪಿಸುವುದು ಎಷ್ಟರ ಹೊತ್ತು? ನಕಾರಾತ್ಮಕತೆ ಮಾತ್ರವಲ್ಲ ಸಕಾರಾತ್ಮಕತೆಗೂ ಈ ವೇಗ ಸಾಧ್ಯ. ಮತ್ತೇನಿಲ್ಲ. ನಮ್ಮ ದೇಶದ ಮುಖ್ಯಸ್ಥನಾದವನು ಬೆಳಗ್ಗೆ ನಾಲ್ಕೂವರೆಗೆ ಎದ್ದು ಕೆಲಸ ಮಾಡತೊಡಗಿದ ಅಷ್ಟೆ. ಪ್ರಾರಂಭದಲ್ಲಿ ಆ ಉತ್ಕರ್ಷ ಆತನ ಮಂತ್ರಿಗಳಿಗೆ, ಮೇಲ್ಮಟ್ಟದ ಅಧಿಕಾರಿ ವರ್ಗಕ್ಕೆ ಅನಿವಾರ್ಯ ಎಂಬಂತೆ ಹಬ್ಬಿತು. ಅವರು ಅದನ್ನು ತಮ್ಮ ಅಧೀನದಲ್ಲಿರುವವರಿಗೆ ಹಬ್ಬಿಸುತ್ತಾ ಹೋದರು. ಹೀಗೆ ಕೆಲಸ ಮಾಡಿದರೆ ಅದಕ್ಕೆ ಪ್ರತಿಫಲ ನೀಡುವ ವ್ಯವಸ್ಥೆಯೂ ಇದೆ ಎಂಬುದನ್ನು ಆತ ಖಾತ್ರಿ ಮಾಡುತ್ತಿದ್ದಂತೆಯೇ 'ನಾವೇನು ಮಾಡಿದರೂ ದೇಶದ ಕತೆ ಇಷ್ಟೆ' ಅಂತ ಸಿನಿಕರಾಗಿದ್ದವರೂ ನಿಧಾನವಾಗಿ ಮನಸ್ಥಿತಿ ಬದಲಿಸಿಕೊಂಡರು. ಒಬ್ಬ ಪ್ರಾಮಾಣಿಕ ನಾಯಕನಿಗಾಗಿ ತಾನು ಕೆಲಸ ಮಾಡುತ್ತಿದ್ದೇನೆ ಎಂಬ ಅರಿವೇ ಸಾಮಾನ್ಯನಲ್ಲಿ ಹೊಸ ಶಕ್ತಿಯನ್ನೂ ಪ್ರಾಮಾಣಿಕತೆಯನ್ನೂ ಪ್ರೇರೇಪಿಸುತ್ತದೆ. ಚರಿತ್ರೆಯಲ್ಲಿ ಲಾಲ್ಬಹದ್ದೂರ್ ಶಾಸ್ತ್ರಿ ಆಹಾರ ಕೊರತೆ ನೀಗುವುದಕ್ಕೆ ದೇಶವಾಸಿಗಳಿಗೆ ಉಪವಾಸಕ್ಕೆ ಕರೆಕೊಟ್ಟಾಗ ಬಹುಪಾಲು ಜನ ಅದನ್ನು ಪಾಲಿಸಿದ್ದಕ್ಕೆ ಅವತ್ತಿನ ಪ್ರಧಾನಿಯಲ್ಲಿದ್ದ ಪ್ರಾಮಾಣಿಕತೆಯೇ ಕಾರಣವಲ್ಲವೇ?
ಕಾಲಕ್ಕೆ ಒದಗಿದ ಯುವಶಕ್ತಿಯನ್ನೂ ಉಪಯೋಗಿಸಿಕೊಂಡು ಭಾರತ ಬದಲಾಗಿಹೋಯಿತು. ಕೇವಲ ಬಾನೆತ್ತರದ ಕಟ್ಟಡಗಳಿಂದಾಗಲೀ, ಸೈಬರ್ ಕೂಲಿಯಿಂದಾಗಲೀ ಅಲ್ಲ. ಆಯಾ ಪ್ರದೇಶಕ್ಕೆ ಒಗ್ಗುವ ಜ್ಞಾನ-ಕೌಶಲಾಧಾರಿತ ಉದ್ಯಮಗಳ ಪೋಷಣೆಯಿಂದ. ನೀವೀಗ ಭಾರತದ ಉದ್ದಗಲಕ್ಕೆ ಪ್ರವಾಸ ಮಾಡಿದರೆ ಹೊಸದೊಂದು ಹರ್ಷದ ಜಗತ್ತು ಕಾಣಿಸುತ್ತೆ" ಅಂತ ಅವರೆಲ್ಲ ವಿವರಣೆ ಒಪ್ಪಿಸಿದರು.
ನನನ
ಇಸ್ವಿ 2014ರ ಜೂನ್. ಮುಂಗಾರಿನ ಆಗಮನದ ಆಸೆ ಹುಟ್ಟಿಸಿದೆ ಕೋಲ್ಮಿಂಚು. ಅದರ ಮಿಂಚಿನ ಅಂಚುಗಳಲ್ಲಿ ಸ್ವಪ್ನಸೌಧವೊಂದು ಕಣ್ಣುಕೋರೈಸಿದೆ. ವಿಶ್ವಾಸ ಹೊಂದುವುದು ಅಪಾಯಕಾರಿಯೋ, ಅಪ್ಯಾಯಮಾನವೋ?
-ಚೈತನ್ಯ ಹೆಗಡೆ
cchegde@gmail.com