ಅಂಕಣಗಳು

ಮರುಳರಿಗೆ ಒಂದಿಷ್ಟು ಪ್ರಶ್ನೆಗಳು

Published On :

ಬುಧವಾರದ 'ಕನ್ನಡಪ್ರಭ'ದಲ್ಲಿ 'ನಾವೆಲ್ಲರೂ ಮುಸಲ್ಮಾನರಾಗೋಣ' ಎಂಬ ವರದಿಯಿದೆ. ಸಮಾರಂಭವೊಂದರಲ್ಲಿ ಮರುಳಸಿದ್ಧಪ್ಪನವರು ಹೀಗೆ ಹೇಳಿರುವುದಾಗಿ ವರದಿಯಾಗಿದೆ. ಸಂದರ್ಭ- 'ಹಿಂದೂ ಧರ್ಮದ ಅಧಃಪತನ' ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ. ವರದಿಯ ಪ್ರಕಾರ ಆ ಪುಸ್ತಕವು ಭಾರತದಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಅಂಶ ಪ್ರಸ್ತಾಪವಾಗಿದೆಯಂತೆ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ 'ನಾವೆಲ್ಲ ಮುಸಲ್ಮಾನರಾಗುವ ಪ್ರಮೇಯ ಬಂದರೆ ಒಳ್ಳೆಯದೇ ಆಯಿತು ಬಿಡಿ. ಅಲ್ಲಿ ಏಕದೇವತೆ ಉಪಾಸನೆ ಇರುವುದರಿಂದ ತೊಂದರೆಯೇ ಇಲ್ಲ' ಎಂಬ ಸಮಾಧಾನದ ಮಾತು ಮರುಳಸಿದ್ಧಪ್ಪನವರಿಂದ ಬಂದಿದೆ.
ಅವರು  ತಮ್ಮ  ನಿಜವಾದ ಮನಸ್ಥಿತಿಯನ್ನು ಹೊರಹಾಕಿದ್ದಾರೆ.  ಈ ಹಿಂದೆ ಮಾನ್ಯ ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನ ಧರ್ಮದಲ್ಲಿ ಹುಟ್ಟಬೇಕು ಅಂತ ಆಸೆಪಟ್ಟಿದ್ದರು. ಪರೋಕ್ಷವಾಗಿ ಹಿಂದೂ ಧರ್ಮದಲ್ಲಿ ಹುಟ್ಟಿದ್ದಕ್ಕೆ ಬೇಜಾರು ಪಟ್ಟಿದ್ದರು. ಅವರು ಕೈಗೊಳ್ಳುತ್ತಿರುವ ತೀರ್ಥಯಾತ್ರೆ ಗಳಲ್ಲಿ ಈ ಬಗ್ಗೆಯೇ ನಮ್ಮ ದೇವರುಗಳಲ್ಲಿ ಬೇಡುತ್ತಿದ್ದಾರೆಯೇ?
ಇರಲಿ. ಯಾವುದೇ ಧರ್ಮವನ್ನು ಇಷ್ಟಪಡುವುದು, ಬಿಡುವುದು ಅವರವರ ವೈಯಕ್ತಿಕ ಸ್ವಾತಂತ್ರ್ಯ. ಆದರೆ ಹಿಂದೂಧರ್ಮದ ವಿಚಾರ ಬಂದಾಗ ಅದರಲ್ಲಿ ಹುಳುಕೇ ತುಂಬಿದೆ ಎಂಬಂತೆ ವಿಮರ್ಶಿಸುವವರು ಅಂಥ ವಿಶ್ಲೇಷಣಾ ಗುಣಗಳನ್ನು ಬೇರೆ ಧರ್ಮಗಳ ಬಗ್ಗೆ ತೋರುವುದಿಲ್ಲವೇಕೆ? ಏಕ ದೇವತೆ ಉಪಾಸನೆ ಇರುವುದರಿಂದ ಇಸ್ಲಾಮ್‌ನಲ್ಲಿ ಎಲ್ಲವೂ ಸರಿ ಇರುತ್ತದೆ ಎಂಬಂತೆ ಮಾತು ತೇಲಿಸುವ ಮರುಳಸಿದ್ಧಪ್ಪ ಮತ್ತು ಅಂಥ ಸಮಾನಮನಸ್ಕರ ಗ್ಯಾಂಗ್ ಎದುರು ಕೆಲ ವಿದ್ಯಮಾನಗಳನ್ನು ಹರವಿಡಲೇಬೇಕಾಗುತ್ತದೆ.
ಈ ಮಹನೀಯರು ಒಂದು ವಿಷಯವನ್ನು ತಿಳಿದುಕೊಳ್ಳಬೇಕು. ಇಸ್ಲಾಂ ಧರ್ಮ ಕತ್ತಿಯ ಅಲಗಿನಿಂದ ಈಗ ಎ. ಕೆ. 47ರಿಂದ ಪ್ರಸಾರವಾಗುವ ಮಾರ್ಗವನ್ನು ಆಗಾಗ ಸಾಕಷ್ಟು ಬಳಸಿದೆ. ಇದನ್ನು ನೀವು ಒಪ್ಪುವಿರಾ? ಇಸ್ಲಾಂ ಧರ್ಮದ ಹೆಸರಿನಲ್ಲಿ ಜನ್ಮತಾಳಿದ ಪಾಕಿಸ್ತಾನ ದೇಶದಲ್ಲಿ ಹಿಂದೂಗಳ ವಿಚಾರಬಿಡಿ, ಶಿಯಾ ಪಂಥೀಯ ಮುಸಲ್ಮಾನರ ಮಾರಣಹೋಮವೇ ನಡೆಯುತ್ತಿದೆ.  ಕ್ವೆಟ್ಟಾದಲ್ಲಿ  ಹಜಾರ ಶಿಯಾಗಳ ಮತ್ತು ಗಿಲ್ಗಿಟ್- ಬಾಲ್ಟಿಸ್ತಾನ್ ಬಸ್ಸುಗಳಲ್ಲಿ ಶಿಯಾ ಪಂಥೀಯರನ್ನು ಹುಡುಕಿ ಕೊಲೆಗೈದ ವಿಚಾರಗಳಿಗೆ ನೀವು ಪ್ರತಿಕ್ರಿಯಿಸುವುದಿಲ್ಲ ಏಕೆ? ಭಾರತದಿಂದ ನಾವು ಭಾರಿ ಮುಸ್ಲಿಮರು ಎಂದು ಪಾಕಿಸ್ತಾನಕ್ಕೆ ವಲಸೆಹೋದ (ಹಿಂದೂ ಧರ್ಮದಿಂದ ಬಲತ್ಕಾರವಾಗಿ ಮತಾಂತರವಾದ) ಕರಾಚಿಯಲ್ಲಿ ನೆಲೆಸಿರದ ಅಹಮದಿಯರ ಶೋಚನೀಯ ಸ್ಥಿತಿಯ ಬಗ್ಗೆ ತಿಳಿದರೆ ಒಳಿತು. ಏಕ ದೇವತೆಯ ಉಪಾಸನೆ ಇರುವೆಡೆ ಹೀಗೆಲ್ಲ ಆಗಬಾರದಿತ್ತಲ್ಲವೇ? ಇಂಥವೆಲ್ಲ ಆಗುತ್ತಿರುವುದಕ್ಕೆ ತಾವು ಕೊಡಬಹುದಾದ ಕಾರಣಗಳ ಬಗ್ಗೆ ಕುತೂಹಲವಿದೆ.   
ಇನ್ನು ಬೊಕೊ ಹರಮ್ ಎಂಬ ಮುಸ್ಲಿಂ ಸಂಘಟನೆಯ ಮಹಾಶಯ ಆಫ್ರಿಕಾ ದೇಶದಲ್ಲಿ ಕನ್ಯೆಯರನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ಮತ್ತು ದಿನನಿತ್ಯ ನೂರಾರು ಮುಸ್ಲಿಮರ ಹತ್ಯೆ ಬಗ್ಗೆ ಸಹ ಪರಾಮರ್ಶಿಸಬೇಕು. ತಾವು ವೇದಿಕೆಗಳಲ್ಲಿ ಬೊಂಬ್ಡಾ ಹೊಡೆಯುವ ಕಾರ್ಯದ ನಡುವೆ ಪುರಸೊತ್ತು ಮಾಡಿಕೊಂಡು ಪಾಕ್ ಸಂಸತ್ ಸದಸ್ಯ ಫಾರ್ಹ್ನಜ್ ಇಸ್ಪಹನಿ ಬರೆದ 'ಡೆತ್ ಬೈ ಥೌಸಂಡ್ ಕಟ್ಸ್‌' ಎಂಬ ಬರಹವನ್ನು ಓದಬೇಕು. ಇನ್ನು ಸೌದಿ ಅರಬರು ಭಾರತದ ಮುಸ್ಲಿಮರನ್ನು ತಮ್ಮವರೆಂದು ಪರಿಗಣಿಸುವುದಿಲ್ಲ. ಸೌದಿಯಲ್ಲಿ ಇತರ ಮುಸ್ಲಿಮರು ಚರಾಸ್ತಿ ಗಳಿಸುವಂತಿಲ್ಲ, ಮದುವೆ  ಸಂಬಂಧ ದೂರದಮಾತು! ಸಮಾಜದಲ್ಲಿಯ ಶ್ರೇಣಿಕೃತ ವ್ಯವಸ್ಥೆ ಕೇವಲ ಹಿಂದೂ ಧರ್ಮಕ್ಕೆ  ಸೀಮಿತವಾಗಿಲ್ಲ. ಅದು ಎಲ್ಲ ಧರ್ಮ, ಮತ, ದೇಶಗಳಲ್ಲಿ ಇದೆ. ಭಾರತ ದೇಶದಲ್ಲಿ ಮಾತ್ರ ಈ ವಿಚಾರವನ್ನು ಕಂಡ ಕಂಡಲ್ಲಿ ಮನೋಸೋ ಇಚ್ಛೆಯಾಗಿ ಖಂಡಿಸುವ ಸ್ವಾತಂತ್ರ್ಯವಿದೆ. ಸ್ವಧರ್ಮದ ಬಗ್ಗೆ ಕಟುವಾಗಿ ಟೀಕಿಸುವ ಮುನ್ನ ಇತರ ಧರ್ಮಗಳ ಜೊತೆಗೆ ತುಲನೆ ಮಾಡುವಾಗ ಪೂರ್ವಗ್ರಹ ಇರಬಾರದು. ಹಾಗೆ ನೋಡಿದರೆ ಹಿಂದೂ ಧರ್ಮದಲ್ಲಿ ಇರುವ ಸ್ವಾತಂತ್ರ್ಯ ಬೇರೆ ಧರ್ಮಗಳಲ್ಲಿ ವಿರಳ. ಇಲ್ಲಿ ಏಕೋಪಾಸನೆ, ಬಹುದೇವತಾ ಆರಾಧನೆ, ಚಾರ್ವಾಕರಿಗೂ ಸರಿ ಸಮನಾದ ವ್ಯಕ್ತಿ  ಸ್ವಾತಂತ್ರ್ಯ, ಜೀವನ ಸ್ವಾತಂತ್ರ್ಯಕ್ಕೆ ಅವಕಾಶವಿದೆ. ಇಲ್ಲಿ ಧರ್ಮಗುರುಗಳು ಫತ್ವಾಗಳನ್ನು ಆ ಮೂಲಕವೇ ಮರಣ ದಂಡನೆಯನ್ನು ವಿಧಿಸುವ ಪದ್ಧತಿಯೇ ಇಲ್ಲ.  ಈ ಕಾರಣದಿಂದಲೇ  ಸಂತ ತುಕಾರಾಮರು 'ನಿಂದಕರಿರಬೇಕು ತಮ್ಮ ನೆರೆಯಲ್ಲಿ' ಎಂದು ತಮ್ಮ ಅಭಂಗಗಳಲ್ಲಿ ಪ್ರಚುರಪಡಿಸಿದ್ದಾರೆ. ಇದಲ್ಲವೇ ಧರ್ಮದ ಆಳ, ಮಹತ್ವ? ಹಿಂದೂಗಳ ಧರ್ಮದ ಸಹಿಷ್ಣುತೆ ನೋಡಿ ಅದರ ಎಷ್ಟೋ ಅಂಶಗಳನ್ನು ಅನ್ಯಧರ್ಮದವರು ಎತ್ತಿಕೊಂಡು ತಮ್ಮಲ್ಲಿ ಬೆರಕೆ ಮಾಡಿಕೊಂಡಿದ್ದಾರೆ. ಹಿಂದೂಗಳ ಶೋಷಿತರ ಸವಲತ್ತುಗಳನ್ನು 'ಮತಾಂತರಿ'ಗಳು ಲಪಟಾಯಿಸುವುದನ್ನು ಮರುಳಸಿದ್ಧಪ್ಪರಂಥವರು ಎಲ್ಲೂ ಪ್ರಸ್ತಾಪ ಮಾಡುವದಿಲ್ಲ.   
ತಮ್ಮ ಧರ್ಮ ಹಿಂದುಧರ್ಮ ಎಂದು  ನಂಬಿದ್ದರೆ - ಈ ಧರ್ಮವನ್ನು ಸಮೃದ್ಧಗೊಳಿಸಲಿ. ಈ ಬಗ್ಗೆ ಹೀನಾಯವಾಗಿ ಜರಿಯುವದನ್ನು ನಿಲ್ಲಿಸಲಿ.  
ಮೇಲಿನ ಉದಾಹರಣೆಗಳನ್ನು ಉಪೇಕ್ಷಿಸಿ, ಹಿಂದೂಗಳಿಗೆ ಬಿಟ್ಟಿ ಸಲಹೆ ಕೊಡುವುದು ನಿಮಗೆಲ್ಲ ಬಹಳ ಸುಲಭ. ಏಕೆಂದರೆ ನಿಮ್ಮ ಪ್ರತಿಪಾದನೆಯ 'ಏಕದೇವರ ಉಪಾಸನೆ' ಢಾಳಾಗಿರುವ ಪ್ರಕ್ಷುಬ್ಧ ರಾಷ್ಟ್ರಗಳಲ್ಲಿ ನೀವಿಲ್ಲವಲ್ಲ. ನೀವೇಕೆ ಅಲ್ಲಿಗೇ ತೆರಳಿ ನಿಮ್ಮ ಇಷ್ಟದ ಉಪಾಸನೆಗಳನ್ನು ಕೈಗೊಳ್ಳುವ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಬಾರದು?

- ಪ್ರಕಾಶ ವಾಟವೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.