ಮುಕ್ಕಾಲು ಭಾರತ ಹಿಂದಿಮಯ ಎಂಬ ಮಿಥ್ಯೆ

ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದಿಯನ್ನು ಉತ್ತೇಜಿಸುವ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಯೋಜನೆ ವಿವಾದವನ್ನು ಎಬ್ಬಿಸಿದೆ. ಜನರನ್ನು ಭಾಷೆ ಆಧಾರದಲ್ಲಿ ಪ್ರತ್ಯೇಕಿಸುವ ಆತಂಕವನ್ನೂ ಹುಟ್ಟುಹಾಕಿದೆ. ಹಿಂದಿಯನ್ನು ಉತ್ತೇಜಿಸುವ ಕೇಂದ್ರದ ನಿರ್ಧಾರವನ್ನು ಕೇಂದ್ರ ಸಚಿವ ಕಿರೆನ್ ರಿಜಿಜು ಸಮರ್ಥಿಸಿಕೊಂಡಿದ್ದರೆ, ಬಿಜೆಪಿಯ ಮುಕ್ತಾರ್ ಅಬ್ಬಾಸ್ ನಖ್ವಿ ಅವರು, 'ಕೇವಲ ಇಂಗ್ಲಿಷ್ ಮಾತನಾಡುವವರು ಬುದ್ಧಿವಂತರು ಎಂಬ ಗ್ರಹಿಕೆ ಹೋಗಲಾಡಿಸುವುದಕ್ಕೆ ಹಿಂದಿಯನ್ನು ಪ್ರೋತ್ಸಾಹಿಸಲಾಗುತ್ತಿದೆ' ಎಂಬ ಬಲಹೀನ ವಾದ ಮಂಡಿಸಿದ್ದಾರೆ.
ಆದರೆ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಿರುವ ಮಂದಿ ಹೇಳುವ ಪ್ರಕಾರ ಇದೀಗ ಹಿಂದಿ ವರ್ಸಸ್ ಇಂಗ್ಲಿಷ್ ಎಂಬ ಚರ್ಚೆಯು ಹಿಂದಿ ವರ್ಸಸ್ ಉಳಿದ ಭಾರತೀಯ ಭಾಷೆಗಳು ಎಂಬಂತಾಗಿದೆ. ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಬೇಕಾದರೆ ಕೇಂದ್ರ ಆ ಭಾಷೆಯನ್ನು ಪ್ರೋತ್ಸಾಹಿಸಲಿ ಹಾಗೂ ಇಂಗ್ಲಿಷ್ ಬದಲಿಗೆ ಹಿಂದಿ ತರುವ ಯೋಚನೆ ಮಾಡಲಿ. ಆದರೆ ಹಿಂದಿ ಮಾತನಾಡದ ರಾಜ್ಯಗಳಿಗೆ ಇದನ್ನು ಹೇರುವುದು ಸರಿಯಲ್ಲಿ ಎಂಬುದು ಇವರೆಲ್ಲರ ವಾದ. ಹಿಂದಿ ರಾಷ್ಟ್ರಭಾಷೆ ಎಂಬ ತಲೆಬುಡವಿಲ್ಲದ ಮಾತುಗಳಿಗೂ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಏಕೆಂದರೆ ಭಾರತದ ಸಂವಿಧಾನದ ಪ್ರಕಾರ ಎಲ್ಲ 15 ಪ್ರಮುಖ ಭಾಷೆಗಳೂ ರಾಷ್ಟ್ರಭಾಷೆಗಳೇ. ಹಿಂದಿ ಮತ್ತು ಇಂಗ್ಲಿಷ್ ಆಡಳಿತದಲ್ಲಿ ಬಳಕೆಯಾಗುವ ಎರಡು ಪ್ರಮುಖ ಭಾಷೆಗಳು ಅಷ್ಟೆ.
ಜನಗಣತಿ ಸಹ ಹಿಂದಿ ಮಿಥ್ಯೆಯನ್ನು ಕೆಡವಿದೆ. ಭಾರತದ ಶೇ. 25ರಷ್ಟು ಮಂದಿ ಮಾತ್ರವೇ ಹಿಂದಿ ತಮ್ಮ ಮಾತೃಭಾಷೆ ಎಂದು ಹೇಳಿದ್ದಾರೆ. ಹಿಂದಿ ಬೆಂಬಲಿಗರ ಮಾತನ್ನೇ ಕೇಳುವುದಾದರೆ ಭಾರತದ ಶೇ. 70ರಷ್ಟು ಜನ ಹಿಂದಿ ಮಾತನಾಡುತ್ತಾರೆ ಎಂದು ಹೇಳುವವರು ಇವರು. 2001ರ ಜನಗಣತಿ ಮಾಹಿತಿಯಂತೆ ಶೇ. 45ರಷ್ಟು ಮಂದಿ ಹಿಂದಿಯನ್ನು ತಾವು ಬಲ್ಲವೆಂದೂ, ಮಾತಾಡುತ್ತೇವೆಂದೂ ಹೇಳಿಕೊಂಡಿದ್ದಾರೆ. ಆದರೆ ಮಾತೃಭಾಷೆಯನ್ನೇ ಹಿಂದಿ ಎಂದವರು ಶೇ. 25ರಷ್ಟು ಮಂದಿ ಮಾತ್ರ. 25 ಕೋಟಿಗಿಂತ ಸ್ವಲ್ಪ ಹೆಚ್ಚಿನ ಜನಸಂಖ್ಯೆ ಹಿಂದಿಯನ್ನು ಅರ್ಥ ಮಾಡಿಕೊಳ್ಳಬಲ್ಲುದು. ಉಳಿದೆಲ್ಲ ಮಂದಿ ಹಿಂದಿಗೆ ಸಾಮಿಪ್ಯವಿದ್ದಂತೆ ಕಂಡರೂ ಭಿನ್ನರೂಪದಿಂದ ಇರುವ ಭೋಜ್ಪುರಿ, ಮಗಧಿ, ಮೈಥಿಲಿ, ಘರ್ವಾಲಿ, ದೋಗ್ರಿ, ರಾಜಸ್ಥಾನಿ, ಮರ್ವಾರಿ, ಹರ್ಯಾಣ್ವಿ ಭಾಷೆಗಳನ್ನು ಆಡುತ್ತಾರೆ. ಅಂದರೆ ಉಳಿದ ಶೇ. 55ರಷ್ಟು ಮಂದಿ ಹಿಂದಿಯೇತರ ಭಾಷೆಗಳನ್ನು ಆಡುತ್ತಿದ್ದಾರೆ ಹಾಗೂ ಭಾರತದ ಬಹುಸಂಖ್ಯಾತ ಮಂದಿಗೆ ಹಿಂದಿ ಭಾಷೆ ಗೊತ್ತಿಲ್ಲ ಎಂದಾಯಿತು. 2001ರ ಜನಗಣತಿ ಬಿಚ್ಚಿಡುವ ಅಂಶಗಳು ಹೀಗಿವೆ: ಭಾರತದಾದ್ಯಂತ 42 ಕೋಟಿ ಮಂದಿ ಹಿಂದಿಯನ್ನು ಅರ್ಥಮಾಡಿಕೊಳ್ಳುತ್ತಾರೆ. 8.5 ಕೋಟಿ ಮಂದಿ ಬೆಂಗಾಳಿ ಮಾತನಾಡುತ್ತಾರೆ. 7.5 ಕೋಟಿ ಜನ ತೆಲುಗು ಮಾತನಾಡುತ್ತಾರೆ. 7 ಕೋಟಿ ಮಂದಿ ಮರಾಠಿಯನ್ನು, 6 ಕೋಟಿ ಮಂದಿ ತಮಿಳನ್ನು, 5 ಕೋಟಿ ಜನ ಉರ್ದುವನ್ನು, 4.6 ಕೋಟಿ ಜನ ಗುಜರಾತಿಯನ್ನು ಹಾಗೂ 4 ಕೋಟಿ ಮಂದಿ ಕನ್ನಡವನ್ನು ಮಾತನಾಡುತ್ತಿದ್ದರು. ಮಲಯಾಳಮ್ ಅನ್ನು 3.5 ಕೋಟಿ ಜನ, ಓರಿಯಾವನ್ನು 3.3 ಕೋಟಿ ಮಂದಿ, ಪಂಜಾಬಿಯನ್ನು ಮೂರು ಕೋಟಿ ಜನ, ಅಸ್ಸಾಮಿಯನ್ನು 1.5 ಕೋಟಿ ಮಂದಿ, ಸಂತಾಲಿ ಭಾಷೆಯನ್ನು 64 ಲಕ್ಷ ಮಂದಿ ಹಾಗೂ ಕಾಶ್ಮೀರಿ ಭಾಷೆಯನ್ನು 55 ಲಕ್ಷ ಮಂದಿ ಮಾತನಾಡುತ್ತಾರೆ.
ಈಶಾನ್ಯ ರಾಜ್ಯಗಳ ಮಂದಿ 50ಕ್ಕೂ ಭಿನ್ನ ಭಾಷೆಗಳನ್ನು ಮಾತನಾಡುತ್ತಾರೆ. ಈಶಾನ್ಯ ರಾಜ್ಯಗಳ ಹೊರತಾಗಿಯೂ ವಾಸಿಸುವ ಬುಡಕಟ್ಟು ಜನಾಂಗದವರ ಭಾಷೆ ಕೂಡ ಭಿನ್ನ. ಇವೆಲ್ಲ ಹಿಂದಿ ಹಾಗೂ ಅದರ ಸಮೀಪದ ಭಾಷೆಗಳನ್ನು ಹೋಲುವುದೇ ಇಲ್ಲ. ಕನ್ನಡ ನಾಡಿನಲ್ಲೇ ಕೊಂಕಣಿ, ತುಳು, ಕೊಡವ, ಬ್ಯಾರಿ ಭಾಷೆಗಳೆಲ್ಲ ಹಿಂದಿಯ ಜತೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹೀಗಾಗಿಯೇ, ಮುಕ್ಕಾಲು ಭಾರತ ಹಿಂದಿಯಲ್ಲೇ ಮಾತನಾಡುತ್ತದೆ ಬಿಡಿ ಎಂಬಂಥ ಧೋರಣೆ ತೋರಿಸುವ ಮುನ್ನ ಸರ್ಕಾರವು 2001ರ ಜನಗಣತಿ ದಾಖಲೆಯನ್ನು ಪರಿಶೀಲಿಸಬೇಕು ಎನ್ನುತ್ತಾರೆ ಪರಿಣತರು. ಇತಿಹಾಸಕಾರ ರಾಮಚಂದ್ರ ಗುಹ ತಮ್ಮ ಟ್ವೀಟ್ನಲ್ಲಿ ಹೀಗೆ ಹೇಳುತ್ತಾರೆ- 'ಒಂದೇ ರಾಷ್ಟ್ರೀಯ ಭಾಷೆ ಎಂಬ ಪರಿಕಲ್ಪನೆಯಲ್ಲಿಯೇ ಪಾಕಿಸ್ತಾನದ ವಿದಳನ, ಶ್ರೀಲಂಕ ನಾಗರಿಕ ಸಂಘರ್ಷಗಳಾದವು ಎಂಬುದನ್ನು ಮರೆಯಬಾರದು.' ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ರಾಜಕಾರಣಿಗಳು ಪ್ರಖರ ಧ್ವನಿಯನ್ನೇ ಮೊಳಗಿಸಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನವನ್ನೂ ಈ ವಿಷಯ ತಲ್ಲಣಿಸುವಂತೆ ಮಾಡಿದರೆ ಅಚ್ಚರಿ ಇಲ್ಲ.
= ಡಿ. ಪಿ. ಸತೀಶ, ಸಿಎನ್ಎನ್- ಐಬಿಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


