

ಎಂಥದೇ ದರ ಹೆಚ್ಚಾದರೂ ರಾಜಧಾನಿಯಿಂದ ಹೊರಡುವ ಊರಿನ ಎಲ್ಲ ಬಸ್ಸುಗಳೂ ಸರ್ವಋತುವಿನಲ್ಲೂ ಹೆಚ್ಚು ಕಡಿಮೆ ತುಂಬಿರುತ್ತವಲ್ಲ? ರಾಜ್ಯದ ಉದ್ದಗಲಕ್ಕೆ ಹರಡಿಕೊಂಡಿರುವ ಕಾಲೇಜುಗಳೆಲ್ಲ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಮಗುಚುತ್ತಲೇ ಎದೆಗೆ ಸರ್ಟಿಫಿಕೇಟ್ ಅವುಚಿಕೊಂಡ ಸಹಸ್ರ -ಸಂಹಸ್ರ ಜೀವಗಳು ಮೆಜೆಸ್ಟಿಕ್‌ನ ಗೌಜಿಗೇ ಬಂದು, ಬೆಂಗಳೂರಿನ ಜನಸಮುದ್ರದೊಳಗೆ ಎಲ್ಲೋ ಲೀನವಾಗುತ್ತಿದ್ದಾರಲ್ಲ? ಇದರ ಉದರದ ಹಿಗ್ಗು ಇನ್ನೆಷ್ಟರ ಪ್ರಮಾಣದ್ದು? ಇಷ್ಟೆಲ್ಲ ವಿಸ್ತಾರಕ್ಕೆ ಹರಡಿಕೊಂಡಿರುವ ರಾಜ್ಯದಲ್ಲಿ ಭವಿಷ್ಯ ಕಟ್ಟಿಕೊಳ್ಳಬೇಕಾದವರೆಲ್ಲ ಒಂದೇ ಬಿಂದುವಿಗೆ ಬಂದು ನಿಲ್ಲಬೇಕಾದ ಅನಿವಾರ್ಯ ಅದೇಕೆ ಸೃಷ್ಟಿಯಾಗಿದೆ? ಬಿಡುಬೀಸು ನೆಲ, ಉತ್ತಮ ಹವೆಯ ಸ್ವರ್ಗದ ತುಂಡು ವೃದ್ಧಾಶ್ರಮವಾಗುತ್ತಿರಲಾಗಿ, ತುದಿಯಲ್ಲೆಲ್ಲೋ ಕಂಗೊಳಿಸುತ್ತಿರುವ ಕನಸುಗಳ ಕಾರ್ಖಾನೆ ಒಂದಿಡೀ ರಾಜ್ಯದ ಯೌವನವನ್ನು ಒತ್ತೆ ಇಟ್ಟುಕೊಂಡಿರುವಂತೆ ಭಾಸವಾಗುತ್ತಿದೆ.
ಹೀಗೆಲ್ಲ ಅನ್ನಿಸುತ್ತಿರುವ ಹೊತ್ತಿಗೆ ಎರಡು ಪುಸ್ತಕಗಳು ಹೊಸ ಭರವಸೆಯ ಹಾದಿಯೊಂದನ್ನು ಕೋರೈಸಿವೆ. ಬೆಂಗಳೂರಿನ ಐಐಎಮ್‌ನ ಪ್ರೊಫೆಸರ್ ವೈದ್ಯನಾಥನ್ ಅವರು ಬರೆದಿರುವ 'ಇಂಡಿಯ ಅನ್‌ಇಂಕ್' ಭಾರತೀಯ ಅರ್ಥವ್ಯವಸ್ಥೆಯ ವಿಮರ್ಶೆ. ದೇಶದ ಅತಿ ಬೇಡಿಕೆಯ ಕೃತಿಕಾರರಲ್ಲಿ ಒಬ್ಬರಾಗಿರುವ ರಶ್ಮಿ ಬನ್ಸಾಲ್ ಅವರು ಬರೆದಿರುವ 'ಟೇಕ್ ಮಿ ಹೋಮ್' ಔದ್ಯಮಿಕ ಯಶೋಗಾಥೆಗಳ ಗುಚ್ಛ. ಇವೆರಡೂ ಪುಸ್ತಕಗಳೂ ಕೆಲ ತಿಂಗಳುಗಳ ಹಿಂದೆಯೇ ಬಿಡುಗಡೆ ಆಗಿವೆಯಾದರೂ ಕೇಂದ್ರದಲ್ಲಿ ಆಗಿರುವ ಅಧಿಕಾರದ ಬದಲಾವಣೆಯ ವಿದ್ಯಮಾನವು ಹೊಸ ನಿರೀಕ್ಷೆಗಳಿಗೆ ಪ್ರಚೋದಿಸುತ್ತಿದೆಯಾದ್ದರಿಂದ ಇವೆರಡನ್ನೂ ಎದುರಿಗೆ ಇಟ್ಟುಕೊಂಡೇ ಕನಸು ಕಾಣಬಹುದಾಗಿದೆ.
ಭಾರತದ ಕಾರ್ಪೋರೆಟ್ ಉದ್ಯಮ ವಲಯವನ್ನು ಇಂಡಿಯಾ ಇನ್‌ಕಾರ್ಪೊರೇಟೆಡ್ ಎಂದು ಗುರುತಿಸುತ್ತ 'ಇಂಡಿಯಾ ಇಂಕ್' ಎಂದು ಚುಟುಕಾಗಿ ಕರೆಯುವುದು ರೂಢಿ. ಈ 'ಇಂಡಿಯಾ ಇಂಕ್' ಪದ ವ್ಯಾಪ್ತಿಯಲ್ಲಿ ಬರುವ ಕೆಲವೇ ಉದ್ಯಮಪತಿಗಳು ಏನು ಮಾಡಿದರೂ ಸುದ್ದಿಯಾಗುತ್ತದೆ. ಯಾವ ಷೇರಿನ ಬೆಲೆ ಏರಿತು, ಇನ್ಯಾವುದು ನೆಲಕಚ್ಚಿತು ಎಂಬ ಅಂಕಿ -ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ಮಾಧ್ಯಮದಲ್ಲಿ ವಿವರವಾದ ಚರ್ಚೆಗಳನ್ನು ನಡೆಸಲಾಗುತ್ತದೆ. ಪ್ರೊಫೆಸರ್ ವೈದ್ಯನಾಥನ್ ಅವರು ಪುಸ್ತಕದ ಉದ್ದಕ್ಕೂ ಎತ್ತಿರುವ ತಕರಾರು ಇಂಥದೊಂದು ಧೋರಣೆಯ ಕುರಿತಾಗಿಯೇ. ರಾಷ್ಟ್ರೀಯ ಆದಾಯಕ್ಕೆ ಶೇ. 15-18 ರಷ್ಟು ಕೊಡುಗೆ ನೀಡುವ ಕಾರ್ಪೋರೇಟ್ ವಲಯವನ್ನಷ್ಟೇ ದೃಷ್ಟಿಯಲ್ಲಿ ಇರಿಸಿಕೊಂಡು ಕಾರ್ಪೋರೇಟೇತರ ವಲಯನ್ನು ನೀತಿ ನಿರೂಪಣೆಯಿಂದ ಸಂಪೂರ್ಣ ಕೈ ಬಿಡಲಾಗಿದೆ ಎಂದು ದೂರುತ್ತಾರೆ ಕೃತಿಕಾರರು. ಗೃಹ ಕಾರ್ಯದಲ್ಲಿ ತೊಡಗಿರುವ ಭಾರತದ ಬಹುದೊಡ್ಡ ವರ್ಗದ ಉಳಿತಾಯದ ಶೇ. 5ಕ್ಕಿಂತ ಕಡಿಮೆ ಭಾಗ ಸ್ಟಾಕ್ ಮಾರ್ಕೆಟ್‌ಗೆ ಹೋಗುತ್ತಿದೆ. ಏಷ್ಯನ್ನರು ತಮ್ಮ ಉಳಿತಾಯಕ್ಕೆ ನೆಚ್ಚಿಕೊಂಡಿರುವುದು ಬ್ಯಾಂಕ್‌ಗಳು ಮತ್ತು ಅಂಚೆ ವ್ಯವಸ್ಥೆಯನ್ನು ಹೊರತು ಷೇರು ಮಾರುಕಟ್ಟೆಯನ್ನಲ್ಲ. ಹೀಗಾಗಿ ಕಾರ್ಪೋರೇಟೇತರ ಭಾಗದಲ್ಲಿ ದೇಶದ ಆದಾಯಕ್ಕೆ ಬೃಹತ್ ಕೊಡುಗೆ ನೀಡುತ್ತಿರುವ ಶ್ರಮ ಸಂಸ್ಕೃತಿಯ ಸಮೂಹವನ್ನು 'ಇಂಡಿಯಾ ಆನ್‌ಇಂಕ್' ಎಂದು ವೈದ್ಯನಾಥನ್ ಗುರುತಿಸುತ್ತಾರೆ. ಈ ನಿರ್ಲಕ್ಷಿತ ವಿಭಾಗದ ಸಾಮರ್ಥ್ಯವನ್ನು ಅದು ಸಂಕಷ್ಟಕ್ಕೆ ಸಿಲುಕಿಸುವ ಪರಿಯನ್ನು ಪುಸ್ತಕ ಅಂಕಿ-ಅಂಶಗಳಲ್ಲಿ ತೆರೆದಿಡುತ್ತದೆ.
ನಮ್ಮ ಆರ್ಥಿಕ 'ಪರಿಣತ'ರು ಸ್ಟಾಕ್ ಮಾರ್ಕೆಟ್‌ನ ಪಟ್ಟಿಯಲ್ಲಿರುವ 30-40 ಕಂಪೆನಿಗಳ ಬಗ್ಗೆ ಅತ್ಯಂತ ವ್ಯಾಮೋಹಿತರಾಗಿ ಮಾತಾಡುತ್ತಾರೆ. ವಾಸ್ತವ ಏನೆಂದರೆ ನಮ್ಮ ದೇಶದಲ್ಲಿ ರೂಪಿತಗೊಂಡಿರುವ ಆಂತರಿಕ ಬಂಡವಾಳದ ಪ್ರಮಾಣಕ್ಕೆ ಈ ವಿದೇಶಿ ನೇರ ಹೂಡಿಕೆಗಳು ಮತ್ತೆಲ್ಲ ಸರ್ಕಸ್ಸುಗಳು ನೀಡುತ್ತಿರುವ ಕೊಡುಗೆ ಶೇ. 10ರ ಪ್ರಮಾಣವನ್ನು ಮೀರುವುದಿಲ್ಲ. ಉಳಿದೆಲ್ಲ ಬಂಡವಾಳ ರೂಪುಗೊಂಡಿರುವುದು ನಮ್ಮ ಆಂತರಿಕ ಉಳಿತಾಯವನ್ನು ಅವಲಂಬಿಸಿ. ಬೆಳವಣಿಗೆಯ ಮುಖ್ಯ ಶಕ್ತಿಯೇ ಇದು. ಊಟಕ್ಕೆ ಉಪ್ಪಿನಕಾಯಿಯಂತೆ ಒದಗಿರುವ ಎಫ್‌ಡಿಐ, ಎಫ್‌ಐಐಗಳನ್ನೆಲ್ಲ ಮುಖ್ಯ ಊಟವೇ ಅದು ಎಂಬಂತೆ ಏಕೆ ವರ್ತಿಸುತ್ತಿದ್ದೇವೆ ಎಂಬ ಪ್ರಶ್ನೆ ಪ್ರೊಫೆಸರ್ ಅವರದ್ದು.
ಉದ್ಯೋಗನಿರತ ಜನಸಂಖ್ಯೆಯ ಶೇ.85 ಭಾಗ ಸ್ವಉದ್ಯೋಗದವರೋ ಅಥವಾ ಭಾಗಶಃ ನೌಕರಿಯಲ್ಲಿರುವವರೋ ಆಗಿದ್ದಾರೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸಂಬಳ ಪಡೆಯುತ್ತಿರುವವರ ಪ್ರಮಾಣ ಶೇ. 15ರಷ್ಟು. ಆದರೆ ಚರ್ಚೆಗಳೆಲ್ಲ ಈ ಶೇಕಡಾ 15ರಷ್ಟು ಮಂದಿಯ ಸುತ್ತಲೇ ಸುತ್ತುತ್ತವೆ. ಪಾಶ್ಚಾತ್ಯ ರಾಷ್ಟ್ರಗಳ ಆರ್ಥಿಕ ಬಿಕ್ಕಟ್ಟು ಹೇಳುತ್ತಿರುವ ಪಾಠಗಳನ್ನು ಗಮನಿಸದೇ ಮತ್ತವೇ ನೀತಿಗಳನ್ನು ನಮ್ಮದಾಗಿಸಿಕೊಳ್ಳುತ್ತಿದ್ದೇವಲ್ಲ? ಉದ್ಯಮವನ್ನು ಖಾಸಗೀಕರಣಗೊಳಿಸುವತ್ತ, ಕುಟುಂಬಗಳನ್ನು ರಾಷ್ಟ್ರೀಕರಣಗೊಳಿಸುತ್ತಿರುವುದರಲ್ಲೇ ಇದೆ ಸಮಸ್ಯೆ ವೃದ್ಧರನ್ನುನೋಡಿಕೊಳ್ಳುವುದು, ಸಿಂಗಲ್ ಪೇರೆಂಟ್‌ಗಳ ಕಾಳಜಿ, ಮಕ್ಕಳ ಕಾಳಜಿ, ಹೆಲ್ತ್‌ಕೇರ್ ಎಲ್ಲವೂ ಸರ್ಕಾರದ ಜವಾಬ್ದಾರಿಯಾಗಿಬಿಟ್ಟಿದೆ. ಸರ್ಕಾರಗಳು ನಿತ್ರಾಣವಾದಾಗ ಇವರನ್ನೆಲ್ಲ ನೋಡಿಕೊಳ್ಳುವವರು ಯಾರು? ಅದುವೇ ಸಾಮೂಹಿಕ ಅಶಾಂತಿಗೆ ಮುನ್ನುಡಿ.'
'ಭಾರತದ ಆರ್ಥಿಕತೆಗೆ ಜೀವಾಳವಾಗಿರುವ ಇಂಡಿಯಾ ಆನ್‌ಇಂಕ್ ಸಮೂಹವನ್ನು ಬಲಪಡಿಸುವ ಯಾವ ನೀತಿಗಳೂ ಜಾರಿಯಲ್ಲಿಲ್ಲ. ಭಾರತದ ಪಟ್ಟಣವೊಂದರಲ್ಲಿ ಹೂವು ಮಾರುವ ಹುಡುಗಿ ಚಿಟ್‌ಫಂಡ್‌ಗಳಂಥ ಅನಾಹುತಕಾರಿ ಅನಿಯಂತ್ರಿತ ಉಳಿತಾಯ ಮಾರ್ಗಗಳಲ್ಲಿ ಹೊಡೆತ ತಿಂದು ಬ್ಯಾಂಕ್ ಖಾತೆ ತೆಗೆಯುವುದಕ್ಕೆ ಇಚ್ಛಿಸುತ್ತಾಳೆ. ಮುಂದಿನ ದಿನಗಳಲ್ಲಿ ಸಾಲ ಪಡೆಯಬಹುದು ಎಂಬ ಆಸೆಯೂ ಅವಳಿಗಿದೆ. ಆದರೆ ಅಲ್ಲೆಲ್ಲೋ ದಾವೋಸ್‌ನಲ್ಲಿ ಸೆಂಟ್ರಲ್ ಸರ್ವರ್ ಹೊಂದಿರುವ ಕೋರ್ ಬ್ಯಾಂಕಿಂಗ್ ಸಿಸ್ಟಮ್ ಇವಳ ಗುರುತನ್ನು ಸ್ವೀಕರಿಸುವುದೇ ಇಲ್ಲ. ಫೋಟೋ, ಅಡ್ರೆಸ್ ಪ್ರೂಫು, ಡೆಬಿಟ್ ಕಾರ್ಡು, ಪಾನ್ ನಂಬರ್, ಜನ್ಮದಿನಾಂಕದ ಪ್ರೂಫು ಹಾಗೂ ನೆಟ್ ಬ್ಯಾಂಕ್‌ಗಳ ಆಯ್ಕೆ ಈ ಎಲ್ಲ ಅಬ್ಬರಗಳಲ್ಲಿ ಕರಗಿ ಹೋಗುವ ಆಕೆಗೆ ಕೊನೆಗೂ ಮೀಟರ್ ಬಡ್ಡಿ ವ್ಯವಹಾರದ ಜನರಿಗೆ ಶರಣಾಗಬೇಕಾದ ಅನಿವಾರ್ಯ.
ಸರ್ಕಾರ ಎಸ್‌ಸಿ/ಎಸ್ಟಿ, ಮುಸ್ಲಿಮರ ಅಭ್ಯುದಯದ ಮಾತಾಡುತ್ತದೆ. ಮುಸ್ಲಿಮರ ಬಹು ದೊಡ್ಡ ವರ್ಗ ಚಿಲ್ಲರೆ ಮಾರಾಟದಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ. ಇವರಲ್ಲಿ ಹೆಚ್ಚಿನವರು ನಲ್ವತ್ತು-ಐವತ್ತು ಪ್ರಾಯದಲ್ಲಿರುವವರು. ಮಗು ತರಬೇತಿ ಹೊಂದಿ ಇನ್ಯಾವುದೋ ವೃತ್ತಿಗೆ ಹೊರಳಿಕೊಳ್ಳುವುದು ಅವರಿಗೆ ಅಸಾಧ್ಯವಾದ ಮಾತೇ ಸರಿ. ಹೀಗಿರುವಾಗ ರಿಟೇಲ್ ಕ್ರಾಂತಿ ಮಾಡುತ್ತೇವೆಂದು ರಿಯಲ್ ಎಸ್ಟೇಟ್‌ನವರಿಗೆ ಲಾಭ ಮಾಡಿಕೊಡುವ ಸುಧಾರಣೆಯ ಮುಖದ ಹಗರಣವೇಕೆ?'
ಇಂಥದೇ ಹತ್ತೆಂಟು ಪ್ರಶ್ನೆಗಳನ್ನು ಎತ್ತುತ್ತ ಹೋಗುವ ಪ್ರೊ. ವೈದ್ಯನಾಥನ್, ನಮ್ಮ ಅರ್ಥವ್ಯವಸ್ಥೆ ಹಾದಿ ಬದಲಿಸಬೇಕಿರುವ ತುರ್ತನ್ನು ಮನದಟ್ಟಾಗಿಸುತ್ತಾರೆ.
----
ಅಹಮದಾಬಾದ್‌ನ ಐಐಎಮ್‌ನಿಂದ ಎಂಬಿಎ ಪದವಿ ಪಡೆದು ನಂತರ ಉದ್ಯಮ ಪರಿಣತೆ, ಯುವ ಸಮೂಹಕ್ಕೆ ಸಂಬಂಧಿಸಿದ ವಿಷಯಗಳ ಬರಹಗಾರ್ತಿಯಾಗಿ ಹೊರಹೊಮ್ಮಿದವರು ರಶ್ಮಿ ಬನ್ಸಾಲ್. ಕನೆಕ್ಟ್ ದ ಡಾಟ್ಸ್, ಸ್ಟೇ ಹಂಗ್ರಿ ಸ್ಟೇ ಫೂಲಿಶ್, ಐ ಹ್ಯಾವ್ ಅ ಡ್ರೀಮ್... ಹೀಗೆ ಇವರ ಕೃತಿಗಳೆಲ್ಲ ಉದ್ಯಮಶೀಲರ ಯಶಸ್ಸಿನ ಕತೆಗಳನ್ನೆ ಅರುಹಿವೆ. 'ಕಡು ಬಡತನದಲ್ಲಿದ್ದವ ಕಷ್ಟಪಟ್ಟು ಶ್ರೀಮಂತನಾದ' ಎಂಬ ಏಕತಾನತೆಯ ಧಾಟಿಯನ್ನು ಮೀರಿ, ಉದ್ಯಮದ ಒಳ-ಹೊರಗನ್ನೂ ಬೋರಾಗದಂತೆ ಕಟ್ಟಿಕೊಡುವ ಇವರ ಶೈಲಿ ಅವರ ಪುಸ್ತಕಗಳನ್ನು ಲಕ್ಷಗಳ ಸಂಖ್ಯೆಯಲ್ಲಿ ಬಿಕರಿಯಾಗುವಂತೆ ಮಾಡಿದೆ.
ಕೆಲವು ತಿಂಗಳುಗಳ ಹಿಂದೆಯೇ ಬಂದ ಅವರ 'ಟೇಕ್ ಮಿ ಹೋಮ್'ನಲ್ಲೂ ಉದ್ಯಮಶೀಲರದ್ದೇ ಕತೆಗಳು. ಆ ಎಲ್ಲ, ಯಶಸ್ಸಿನ ಕತೆಗಳನ್ನು ಪೋಣಿಸಿಟ್ಟಿರುವ ಥೀಮ್ ಇದೆಯಲ್ಲ, ಅದು ಆಸಕ್ತಿಕರ ಹಾಗೂ ಅತಿ ಪ್ರಸ್ತುತ. ಇಲ್ಲಿ ಸಾಧನೆ ಮೆರೆದವರೆಲ್ಲ ತಾವಿರುವ ನೆಲದಲ್ಲೇ ಉದ್ಯಮ ಕಟ್ಟಿದವರು. ಅಂದರೆ ಇದು ಮುಂಬೈ, ಬೆಂಗಳೂರಿನಂಥ ಕೇಂದ್ರ ಸ್ಥಾನಗಳಲ್ಲಿ ವ್ಯಾಪಾರ ಕೋಟೆ ಕಟ್ಟಿದವರ ಕತೆಯಲ್ಲ. 'ಮನೆಗೆ ಕರೆದೊಯ್ಯಿ' ಎಂಬರ್ಥದ ಶೀರ್ಷಿಕೆಯೇ ಸೂಚಿಸುವಂತೆ ಮನೆಯಲ್ಲೇ, ಇರುವ ಊರಿನಲ್ಲೇ 'ಅರ್ಥ' ಕಂಡು ಕೊಂಡವರ ಕತೆ. ಕೆಲವರು ಬೇರೆ ಕಂಪನಿಗಳಲ್ಲಿ ಜಗತ್ತಿನ ಹಲವು ಮೂಲೆಗಳಲ್ಲಿ ದುಡಿದು, ಒಂದು ಹಂತದಲ್ಲಿ 'ಸ್ವಂತ'ದ್ದನ್ನು ನಿರ್ಮಿಸುವ ಆಸೆಯಿಂದ ಊರಿಗೆ ಮರಳಿ ಹೊಸತನ್ನು ಕಟ್ಟಿದವರು. ಇನ್ನು ಉಳಿದವರು ಅಂಥ ಅನುಭವಗಳ ಗಳಿಕೆಗೆ ಬೇರೆಲ್ಲೂ ಹೋಗದಿದ್ದರೂ ಸೀಮಿತ ಪರಿಧಿಯಲ್ಲೇ ಊರಲ್ಲೊಂದು ಉದ್ಯಮ ಎದ್ದು ನಿಲ್ಲಿಸಿದವರು.
"ಹತ್ತು ಜೇನುಪೆಟ್ಟಿಗೆಗಳಿಂದ ಆರಂಭಿಸಿ ಇವತ್ತಿಗೆ ಭಾರತದ ಅತಿ ದೊಡ್ಡ ಜೇನುತುಪ್ಪದ ರಫ್ತುದಾರನಾಗಿ ನೂರು ಕೋಟಿ ರುಪಾಯಿಗಳ ವಹಿವಾಟು ಮಾಡುತ್ತಿರುವ ಪಂಜಾಬ್‌ನ ಜಗಜೀತ್‌ಸಿಂಗ್ ಕಪೂರ್ ಕತೆ ಇಲ್ಲಿದೆ. ಕಾಲೇಜು ಅರ್ಧಕ್ಕೇ ಬಿಟ್ಟ ಮುಖ್ತಾರುಲ್ ಅಮೀನ್, ಕುಟುಂಬದ ವ್ಯವಹಾರದಲ್ಲಿ ಪಳಗಿ ನಂತರ ತನ್ನದೇ 'ಸೂಪರ್‌ಹೌಸ್ ಗ್ರೂಪ್' ಮೂಲಕ 900 ಕೋಟಿ ರುಪಾಯಿಗಳ ಚರ್ಮದ ವಹಿವಾಟು ಮಾಡುತ್ತಿರುವ ಯಶೋಗಾಥೆ ಇಲ್ಲಿ ತೆರೆದುಕೊಂಡಿದೆ. ಉಡುಪಿಯಂಥ ಪಟ್ಟಣದಲ್ಲೇ ಜಾಗತಿಕ ಮಟ್ಟದ ಸಾಫ್ಟ್‌ವೇರ್ ಕಂಪನಿ 'ರೊಬೊಸಾಫ್ಟ್' ರೂಪಿಸಿರುವ ರೋಹಿತ್ ಭಟ್, ಸಿನಿಮಾ ಮಂದಿರದಲ್ಲಿ ಚಿಪ್ಸ್ ಮಾರಿಕೊಂಡಿದ್ದ ವಿರಾನಿ ಬ್ರದರ್ಸ್, ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಕುಳಿತೇ ಐದು ರಾಜ್ಯಗಳನ್ನು ಆವರಿಸಿಕೊಂಡಿರುವ 'ಬಾಲಾಜಿ ವೇಫರ್ಸ್' ಕಟ್ಟಿದ್ದು... ಹೀಗೆಲ್ಲ ಹೊಸ ಹುಮ್ಮಸ್ಸುಗಳನ್ನು ಉಣಿಸಿದ್ದಾರೆ ರಶ್ಮಿ ಬನ್ಸಾಲ್.
---
ಜನ-ಸರ್ಕಾರಗಳೆಲ್ಲ ಹೀಗೆ ಹೊಸ ಜಾಡುಗಳನ್ನು ಹುಡುಕಿಕೊಂಡಾಗ ಮಾತ್ರವೇ ಆರ್ಥಿಕತೆಗೆ ಹೊಸ ಅರ್ಥ ಸಿಕ್ಕೀತು. ಕಾಂಡವನ್ನು ಶೃಂಗರಿಸುವ ಉತ್ಸಾಹದಲ್ಲಿ ಕೆಲ ಭಾಗವನ್ನಾದರೂ ಬೇರಿಗೆ ನೀರು- ಗೊಬ್ಬರ ತಲುಪಿಸುವುದಕ್ಕೆ ವ್ಯಯಿಸದಿದ್ದರೆ ಜೀವ ಅರಳೀತಾದರೂ ಹೇಗೆ?
- ಚೈತನ್ಯ ಹೆಗಡೆ
cchegde@gmail.com