'ಹಿಂದೂ ಜನರ ಪರ್ಯಾಯ ಇತಿಹಾಸವನ್ನು ಹೇಳುತ್ತೇನೆ ಕೇಳುವಂತವರಾಗಿ...' ಎನ್ನುತ್ತ ವೆಂಡಿ ಡೊನಿಗರ್ ಎಂಬ ಪಾಶ್ಚಾತ್ಯ 'ವಿದ್ವನ್ಮಣಿ' ತನ್ನ ಲಂಗು ಲಗಾಮಿಲ್ಲದ ಕಲ್ಪನೆಗಳನ್ನೇ ಸಂಶೋಧನೆ ಎಂಬ ಶೀರ್ಷಿಕೆ ಅಡಿ ಹೊರತಂದಾಗ ಸಹಜವಾಗಿಯೇ ವಿರೋಧ ಬಂತು. ಈ ವಿರೋಧವೇ ಸರಿ ಅಲ್ಲ ಎಂದು 'ಉದಾರವಾದಿ'ಗಳೆನಿಸಿಕೊಂಡವರು ತಮ್ಮ ಮಾಮೂಲಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಶಂಖ ಊದಿದರು. ಒಂದು ಕೃತಿ ಯಾರಿಗಾದರೂ ನಿಂದನೆಯಾಗಿ ಏಕೆ ಕಾಣಬೇಕು? ಹಾಗೊಮ್ಮೆ ಕೀಳು ಚಿತ್ರಣವಾಗಿದೆ ಎಂದಾದರೆ ಅದನ್ನು ವಿರೋಧಿಸುವ ಇನ್ನೊಂದು ಕೃತಿ ಬರೆಯಲಿ, ಆದರೆ ಪುಸ್ತಕವನ್ನೇ ಹಿಂಪಡೆದುಕೊಳ್ಳುವಂತೆ ಮಾಡುವುದು ತಪ್ಪು ಎಂದೆಲ್ಲ ಇವರ ವಾದಸರಣಿ. ಆದರೆ ಹೀಗೆಲ್ಲ ಸ್ವಾತಂತ್ರ್ಯದ ಶಂಖ ಊದಿದ ಪಡೆಯೇ ಇದಕ್ಕೂ ಮೊದಲು 'ಡಾ ವಿನ್ಸಿ ಕೋಡ್' ಚಿತ್ರ ಬಂದಾಗ, ಯಾವುದೋ ಡ್ಯಾನಿಷ್ ಕಾರ್ಟೂನ್ ಪ್ರಕಟವಾದಾಗ- ಇವನ್ನೆಲ್ಲ ಭಾರತದಲ್ಲಿ ಹರಡುವುದಕ್ಕೆ ಬಿಟ್ಟರೆ ನಮ್ಮಲ್ಲಿ ಅಲ್ಪಸಂಖ್ಯಾತರಿಗೆ ನೋವಾಗಿ ಸಾಮಾಜಿಕ ಸಾಮರಸ್ಯವೇ ಕುಸಿದುಬಿಡುತ್ತದೆ ಅಂತ ಸೈರನ್ ಮೊಳಗಿಸಿತ್ತು. ಇದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದನೆಯ ಮಿತಿ. ಆದರೆ ಹಿಂದೂ ದೇವತೆಗಳಿಗೆ ವ್ಯಭಿಚಾರ- ದುರಾಚಾರದ ಬಣ್ಣಗಳನ್ನು ಕಟ್ಟಿ ವ್ಯಾಖ್ಯಾನಿಸುವಾಗ ಮಾತ್ರ ಇವರ ಮಿದುಳು ಮಿತಿ ಮೀರಿ ಕೆಲಸ ಮಾಡುತ್ತದೆ.
ಮುಖ್ಯವಾಗಿ, ವೆಂಡಿ ಡೊನಿಗರ್‌ಳ 'ದ ಹಿಂದೂಸ್: ಆ್ಯನ್ ಅಲ್ಟರ್‌ನೇಟಿವ್ ಹಿಸ್ಟರಿ' ಪುಸ್ತಕವನ್ನು ಪೆಂಗ್ವಿನ್ ಸಂಸ್ಥೆ ಹಿಂತೆಗೆದುಕೊಂಡಿದ್ದು ಉದಾರವಾದಿಗಳೆಂದು ಕರೆಸಿಕೊಳ್ಳುತ್ತಿರುವವರು ಬಿಂಬಿಸುವಂತೆ 'ಹಿಂದೂ ಮೂಲಭೂತವಾದಿಗಳ ಎಂಥದ್ದೋ ಒತ್ತಡ'ದಿಂದ ಅಲ್ಲ. 'ಶಿಕ್ಷಣ ಬಚಾವೊ ಆಂದೋಲನ'ದ ಸದಸ್ಯರು ನಾಲ್ಕು ವರ್ಷಗಳಿಂದ ನಡೆಸುತ್ತಿದ್ದ ಕಾನೂನು ಹೋರಾಟಕ್ಕೆ ಮಣಿದ ಪ್ರಕಾಶನ ಸಂಸ್ಥೆ, ಭಾರತದಲ್ಲಿ ಆ ಪುಸ್ತಕವನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ತಾನಾಗಿಯೇ ಪ್ರಕಟಿಸಿತು. ಕಾಯ್ದೆಯ ಚೌಕಟ್ಟಿನಲ್ಲಿ ನಡೆದ ಈ ಹೋರಾಟಕ್ಕೆ ಮೂಲಭೂತವಾದವನ್ನು ಹೇಗೆ ಅಂಟಿಸುತ್ತಾರೆ? ಇದೀಗ ಡೊನಿಗರ್‌ಳ 'ಆನ್ ಹಿಂದುಯಿಸಮ್' ಕೃತಿಯನ್ನೂ ಹೀಗೆಯೇ ನ್ಯಾಯಾಲಯದ ಮೆಟ್ಟಿಲು ಹತ್ತಿಸುವುದಕ್ಕೆ 'ಶಿಕ್ಷಣ ಬಚಾವೋ ಆಂದೋಲನ' ಯೋಚಿಸಿರುವುದು 'ಭಾರತದಲ್ಲಿ ಜ್ಞಾನಕ್ಕೆ ಬೆಲೆ ಇಲ್ಲ' ಎಂಬ ಧಾಟಿಯಲ್ಲಿ ಉದಾರವಾದಿಗಳೆಲ್ಲ ಉರಿದುರಿದು ಲೊಚಗುಟ್ಟುವುದಕ್ಕೆ ಪ್ರೇರಣೆ ಒದಗಿಸಿದೆ. ಇಷ್ಟಕ್ಕೂ ವೆಂಡಿ ಡೊನಿಗರ್‌ರ ಜ್ಞಾನ ಮತ್ತು ವ್ಯಾಖ್ಯಾನಶಕ್ತಿಯ 'ಮಟ್ಟ' ಎಂಥದ್ದು ಹಾಗೂ ಅದೇಕೆ ನ್ಯಾಯಾಲಯವನ್ನು ಎದುರಿಸುವ ಯೋಗ್ಯತೆ ಪಡೆಯಿತು ಎಂಬುದನ್ನು ವೆಂಡಿಯ ಪ್ರತಿಪಾದನೆಗಳು ಸ್ಪಷ್ಟಪಡಿಸುತ್ತವೆ. ಭಗವದ್ಗೀತೆ ಎಂಬುದು ಕೃಷ್ಣನು ಮಹಾಭಾರತ ಕಾಲದ ಮನುಷ್ಯರನ್ನೆಲ್ಲ ಕೊಲೆ- ಉನ್ಮಾದಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ ಗ್ರಂಥವಷ್ಟೆ, ಸೀತೆಗೆ ಲಕ್ಷ್ಮಣನ ಮೇಲೆಯೂ ವ್ಯಾಮೋಹವಿತ್ತೆಂದು ತೋರುತ್ತದೆ, ಸೂರ್ಯ ದೇವನ ಕೆಲಸವೇ ಹೆಂಗಸರನ್ನು ಸೆಳೆದು ರೇಪ್ ಮಾಡುವುದು... ಹೀಗೆಯೇ ಮುಂತಾಗಿ ವೆಂಡಿ ಡೊನಿಗರ್‌ಳ ಹಿಂದುತ್ವದ ಅರಿವು ಹಬ್ಬಿಕೊಳ್ಳುತ್ತದೆ. ಸೆಕ್ಸ್ ಎಂಬುದು ಹಿಂದೂ ನಂಬಿಕೆಗೆ ಮುಚ್ಚಟೆಯ ವಿಷಯವೇನೂ ಆಗಬೇಕಿಲ್ಲ. ಆದರೆ ಪ್ರತಿಯೊಂದನ್ನೂ ಆ ಮೂಲಕವೇ ವ್ಯಾಖ್ಯಾನಿಸುತ್ತೇವೆ ಹಾಗೂ ನೀವು ನಿಜಕ್ಕೂ ಪ್ರಗತಿಪರರಾದರೆ ಇದನ್ನು ಒಪ್ಪಿಕೊಳ್ಳಬೇಕು ಎಂಬುದು ಕುಹಕವಾಗುತ್ತದೆಯೇ ವಿನಃ ಸಂಶೋಧನೆ ಅಲ್ಲ. ವೆಂಡಿಯ ಪುಸ್ತಕದ ಮುಖಪುಟಗಳನ್ನೇ ಗಮನಿಸಿದರೂ ಆಕೆಯ ವ್ಯಾಖ್ಯಾನಗಳ ಅಡಿಪಾಯ ಮನದಟ್ಟಾಗಿಬಿಡುತ್ತದೆ. ಇಂಥ ಕಲ್ಪಿತ ರೋಚಕತೆಯನ್ನೇ ಪಾಂಡಿತ್ಯವೆಂದೂ, ಇದೇ ಪರ್ಯಾಯ ವ್ಯಾಖ್ಯಾನವೆಂದೂ ಕೊಂಡಾಡುವವರ ಬಗ್ಗೆ ಆಕ್ರೋಶಕ್ಕಿಂತ ಹೆಚ್ಚಾಗಿ ಅನುಕಂಪ ಪಡದೇ ವಿಧಿಯಿಲ್ಲ.
ಹಾಗಾದರೆ ಹಿಂದೂ ತತ್ವಗಳ ಬಗ್ಗೆ ಪುರೋಹಿತಶಾಹಿಗಳು ಮತ್ತು ಮನುವಾದಿಗಳು ತುತ್ತೂರಿ ಊದುವುದನ್ನೇ ಕೇಳಿಕೊಂಡಿರಬೇಕಾ- ಅಂತ ಉದಾರವಾದಿಗಳು ಬೊಬ್ಬಿರಿಯುತ್ತಾರೆ. ಅಂಥ ಅನಿವಾರ್ಯತೆ ಏನಿಲ್ಲ. ವೆಂಡಿಯಂಥ ಪ್ರಚಾರಗಣಕ್ಕೆ ಹೊರತಾದ ನಿಜ ಸಂಶೋಧಕರು ಪಶ್ಚಿಮದಲ್ಲೇ ಇದ್ದಾರೆ. ಅವರು ಹಿಂದೂ ಹಾಗೂ ಪೂರ್ವದೇಶಗಳ ನಂಬಿಕೆಯ ನೆಲೆಗಳನ್ನು ಕೇವಲ 'ರಾಸಲೀಲೆ'ಯ ಆಸಕ್ತಿಗೆ ಸೀಮಿತವಾಗಿಸದೇ ವಿಜ್ಞಾನದ ಅಲೆಯಾಗಿಯೂ ಪರಿಭಾವಿಸಿ ನೋಡಿದ್ದಾರೆ. ಉದಾರವಾದಿಗಳೆಂದುಕೊಂಡವರು, ಸಂಪ್ರದಾಯವಾದಿಗಳೆನ್ನುವವರು, ಹಣೆಪಟ್ಟಿಗಳಿಲ್ಲದವರು ಎಲ್ಲರೂ ಅತ್ತಲೊಂದು ಗಮನ ಹರಿಸಲೇಬೇಕು.
---
ಸುಮ್ಮನೇ ಓದಿಕೊಳ್ಳೋಣ: ಆಳವಾದ ಧ್ಯಾನದಲ್ಲಿ ಮನಸ್ಸು ಸಂಪೂರ್ಣ ಎಚ್ಚರವಾಗಿರುತ್ತದೆ. ಅಂಥದೊಂದು ವಾಸ್ತವಕ್ಕೆ ಎದುರಾದ ಸಂದರ್ಭದಲ್ಲೂ ನಮ್ಮ ಇಂದ್ರಿಯಗಳು ಶಬ್ದ, ಸುತ್ತಲಿನ ಜಗತ್ತಿನಲ್ಲಿ ಆಗುತ್ತಿರಬಹುದಾದ ದೃಶ್ಯಾವಳಿ ಇವೆಲ್ಲವನ್ನೂ ದಾಖಲಿಸುತ್ತವಾದರೂ ಅವನ್ನು ವಿಶ್ಲೇಷಿಸುವ ಕೆಲಸಕ್ಕೆ ಹೋಗದೇ ಗಮನ ಚದುರದ ಸ್ಥಿತಿ ಇರುತ್ತದೆ. ಇದು ಒಬ್ಬ ಯೋಧನ ಮನಸ್ಸಿಗೆ ಹೊರತಾದ ಪ್ರಕ್ರಿಯೆಯಲ್ಲ. ಸುತ್ತಲಿನದನ್ನು ಗಮನಿಸುತ್ತಲೇ ಕೇಂದ್ರ ಗಮನವನ್ನು ಒಂದಿಂಚೂ ಅಲ್ಲಾಡಿಸದೇ ಇರುತ್ತಾನಾತ. ಇದನ್ನು ಝೆನ್ ಮಾಸ್ಟರ್‌ಗಳು ತಮ್ಮ ಧ್ಯಾನ ಪದ್ಧತಿಯ ವಿವರಣೆಯನ್ನಾಗಿ ಬಳಸುತ್ತಾರೆ. ಅವರ ಪ್ರಕಾರ- 'ಶಿಕನ್-ತಜಾ ಎಂಬುದು ಉದ್ವೇಗರಹಿತ, ಗಾಬರಿ ಇಲ್ಲದ, ನಿದ್ರೆ ಅಲ್ಲದ ಅತಿ ಮೇಲ್ಮಟ್ಟದ ಅರಿವಿನ ಸ್ಥಿತಿ. ಅದು ಸಾವಿನೆದುರು ನಿಂತಿರುವ ಯೋಧನ ಮನೋಭೂಮಿಕೆ. ಪ್ರಾಚೀನ ಜಪಾನ್‌ನ ಅಖಾಡವೊಂದರಲ್ಲಿ ನೀವು ಮುಖಾಮುಖಿ ಕತ್ತಿ ವರಸೆಯಲ್ಲಿ ತೊಡಗಿದ್ದೀರಿ ಎಂದುಕೊಳ್ಳೋಣ. ನಿಮ್ಮ ಎದುರಾಳಿಯನ್ನು ಸೂಕ್ಷ್ಮವಾಗಿ ದಿಟ್ಟಿಸುತ್ತ ಸರ್ವಸನ್ನದ್ಧರಾಗಿ ನಿಂತಿರುತ್ತೀರಿ. ಒಂದು ಚಿಟಿಕೆ ಕ್ಷಣದ ಮಟ್ಟಿಗೆ ಗಮನ ತಪ್ಪಿದರೂ ಎದುರಾಳಿಯ ಖಡ್ಗ ಎದೆಗೆ ನಾಟೀತು. ನಿಮ್ಮ ಸೆಣಸಾಟವನ್ನು ನೋಡಲು ಸುತ್ತಲೂ ಜನ ಸೇರಿದ್ದಾರೆ. ನೀವು ಕುರುಡರಲ್ಲವಾದ್ದರಿಂದ ಅವರೆಲ್ಲರನ್ನೂ ಕಣ್ಣಮೂಲೆಯಲ್ಲಿ ಗಮನಿಸುತ್ತಿದ್ದೀರಿ. ನೀವು ಕಿವುಡರಲ್ಲವಾದ್ದರಿಂದ ಆ ನೆರೆದ ಜನಗಳ ಗೌಜಿಯನ್ನೂ ಕೇಳಿಸಿಕೊಳ್ಳುತ್ತಿದ್ದೀರಿ. ಆದರೆ ಕೆಲವೇ ಸೆಕೆಂಡುಗಳಿಗೂ ಆ ವಿದ್ಯಮಾನ ನಿಮ್ಮ ಕೇಂದ್ರ ಗಮನವನ್ನು ತನ್ನತ್ತ ಎಳೆದುಕೊಳ್ಳುವುದಿಲ್ಲ.'
ಧ್ಯಾನಸ್ಥ ಸ್ಥಿತಿಗೆ ಹಾಗೂ ಯೋಧನ ಮನೋಭೂಮಿಕೆಗೆ ಈಮಟ್ಟಿಗಿನ ಸಾಮ್ಯವಿರುವುದರಿಂದಲೇ ಪೂರ್ವದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬದುಕಿನಲ್ಲಿ ಸೈನಿಕನ ಚಿತ್ರಣ ಪ್ರಮುಖ ಪಾತ್ರವಹಿಸುತ್ತದೆ. ಭಾರತದ ಧಾರ್ಮಿಕ ಗ್ರಂಥ 'ಭಗವದ್ಗೀತೆ' ನಡೆಯುವುದೇ ಯುದ್ಧಭೂಮಿಯಲ್ಲಿ. ಚೀನಾ ಮತ್ತು ಜಪಾನ್‌ಗಳ ಪರಂಪರೆಯಲ್ಲಿ ಕದನ ಕಲೆ ಹಾಸುಹೊಕ್ಕಾಗಿದೆ.
----
ವೆಂಡಿಯಂಥವರಿಗೆ ಕೇವಲ ಕೊಲೆಯ ಉತ್ಸಾಹವಾಗಿ ಕಾಣುವ ಭಗವದ್ಗೀತೆ, ಅಮೆರಿಕದ ಭೌತಶಾಸ್ತ್ರಜ್ಞ ಫ್ರಿಟ್ಜಾಫ್ ಕಾಪ್ರಾ ಗ್ರಹಿಕೆಗೆ ದಕ್ಕಿರುವ ಬಗೆ ಇದು! ಯುನಿವರ್ಸಿಟಿ ಆಫ್ ವಿಯೆನ್ನಾದಲ್ಲಿ ಪಿಎಚ್‌ಡಿ ಪಡೆದಿರುವ ಕಾಪ್ರಾ 'ಹೈಎನರ್ಜಿ ಫಿಸಿಕ್ಸ್'ಗೆ ಸಂಬಂಧಿಸಿದಂತೆ ಹಲವು ಸಂಶೋಧನೆಗಳನ್ನು ಕೈಗೊಂಡವರು. ಇದೀಗ ಕ್ಯಾಲಿಫೋರ್ನಿಯಾದ ಸೆಂಟರ್ ಫಾರ್ ಇಕೊಲಿಟ್ರಸಿ ಸಂಸ್ಥೆಯ ನಿರ್ದೇಶಕರಾಗಿರುವ ಎಪ್ಪತ್ತೈದರ ಪ್ರಾಯದ ಮಾಗಿದ ಜೀವ ಕಾಪ್ರಾ, ಆಧುನಿಕ ವಿಜ್ಞಾನವನ್ನು ಪೌರಾತ್ಯ ಫಿಲಾಸಫಿಗಳ ಜತೆ ಹೋಲಿಸಿ ಜಗತ್ತಿಗೆ ಅನನ್ಯ ಹೊಸನೋಟಗಳನ್ನು ಕೊಟ್ಟಿದ್ದಾರೆ. ಪ್ರಾಚೀನ ನಾಗರಿಕತೆಯ ದೇಶಗಳಾದ ಭಾರತ, ಜಪಾನ್, ಚೀನಾಗಳಲ್ಲಿ ವಿಶ್ವದ ಕುರಿತಾದ ದೃಷ್ಟಿಕೋನ ಹೇಗೆ ಹರಳುಗಟ್ಟಿತ್ತು ಎಂಬುದರ ಅನ್ವೇಷಣೆಯೇ ಇವರ ಬರಹಗಳ ಜೀವಾಳ. ಹಿಂದೂ, ಬೌದ್ಧ ಹಾಗೂ ಟಾವೋ ಧರ್ಮಗಳು ತಮ್ಮದೇ ಭಿನ್ನ ಮಾರ್ಗಗಳಲ್ಲಿ ಇವತ್ತಿನ ಆಧುನಿಕ ವಿಜ್ಞಾನದ ವಿಶ್ವಪ್ರಜ್ಞೆಯನ್ನು ಇನ್ನಷ್ಟು ನಿಖರವಾಗಿ ಕಂಡುಕೊಂಡಿದ್ದ ಅದ್ಭುತವನ್ನು ಅಕ್ಷರಗಳಲ್ಲಿ ಕಟ್ಟಿಕೊಡುತ್ತ ಹೋಗುತ್ತಾರೆ ಕಾಪ್ರಾ. 1975ರಷ್ಟು ಹಿಂದೆಯೇ ಬಂದ 'ದ ಟಾವೋ ಆಫ್ ಫಿಸಿಕ್ಸ್' ಎಂಬ ಇವರ ಗ್ರಂಥ ಹಿಂದೂ ಧರ್ಮದ ವೈಜ್ಞಾನಿಕ ಝಲಕನ್ನು ವಿಶಿಷ್ಟವಾಗಿ ಪರಿಚಯಿಸುತ್ತದೆ. ದ ಟರ್ನಿಂಗ್ ಪಾಯಿಂಟ್, ದ ವೆಬ್ ಆಫ್ ಲೈಫ್ ಇತ್ಯಾದಿ ಗ್ರಂಥಗಳನ್ನೂ ಬರೆದಿರುವ ಅವರ ಇತ್ತೀಚಿನ ಕೃತಿ, 'ದ ಸೈನ್ಸ್ ಆಫ್ ಲಿಯೊನಾರ್ಡೊ: ಇನ್‌ಸೈಡ್ ದ ಮೈಂಡ್ ಆಫ್ ದ ಗ್ರೇಟ್ ಜೀನಿಯಸ್ ಆಫ್ ದ ರೆನೆಸಾನ್ಸ್.'
ಪರ್ಯಾಯ ವ್ಯಾಖ್ಯಾನಗಳನ್ನು ಪಡೆಯುವ ಪ್ರಾಮಾಣಿಕ ಮನಸ್ಸಿನವರು ಇಂಥವರನ್ನು ಓದಿಕೊಂಡರೆ ಸಾಕು. ಬೇಟಾ ಡಿಕೆ, ಬಬಲ್ ಚೇಂಬರ್ ಇತ್ಯಾದಿ ವೈಜ್ಞಾನಿಕ ಪರಿಭಾಷೆಗಳನ್ನು ಸಾಮಾನ್ಯ ಓದುಗರಿಗೆ ವಿವರಿಸುತ್ತ, ವಿಜ್ಞಾನವು ಗುರುತಿಸುವ ಈ ಕಣಗಳ ಆಟದ ಮಾದರಿ ಚಿತ್ರವು ಶಿವನ ತಾಂಡವ ನೃತ್ಯವನ್ನು ಹೇಗೆಲ್ಲ ಹೋಲುತ್ತದೆ ಎಂಬ ಪುಳಕವನ್ನು ತೆರೆದಿರಿಸುತ್ತಾರೆ ಕಾಪ್ರಾ. ಹತ್ತು ಲಕ್ಷಕ್ಕೂ ಮೀರಿ ಬಿಕರಿಯಾದ ಅವರ ಮೊದಲ ಪುಸ್ತಕ 'ದ ಟಾವೋ ಆಫ್ ಫಿಸಿಕ್ಸ್'ನ ಪ್ರಾಸ್ತಾವಿಕ ನುಡಿಗಳಲ್ಲೇ ನಮ್ಮ ಶಿವ ಹೀಗೆ ಕುಣಿದಿದ್ದಾನೆ-
'ಐದು ವರ್ಷಗಳ ಹಿಂದಾದ ಸುಂದರ ಅನುಭವವೊಂದು ನನ್ನನ್ನು ಈ ಪುಸ್ತಕ ಬರೆಯುವ ಪ್ರಯಾಣಕ್ಕೆ ಪ್ರೇರೇಪಿಸಿತು. ಅದೊಂದು ಸಾಯಂಕಾಲ ಸಮುದ್ರದ ಪಕ್ಕದಲ್ಲಿ ಅಲೆಗಳ ಹೊರಳಾಟವನ್ನು ನೋಡುತ್ತ ಕುಳಿತಿದ್ದೆ. ನನ್ನದೇ ಉಸಿರಿನ ಲಯವನ್ನು ಆಸ್ವಾದಕ್ಕೆ ತಂದುಕೊಳ್ಳುತ್ತಿರಬೇಕಾದರೆ ನನ್ನ ಇಡೀ ಪರಿಸರವೇ ಬೃಹತ್ ವಿಶ್ವನೃತ್ಯ (ಕಾಸ್ಮಿಕ್ ಡಾನ್ಸ್)ದಲ್ಲಿ ತೊಡಗಿಕೊಂಡಿರುವುದು ತಟ್ಟನೇ ಅನುಭವಕ್ಕೆ ಬಂತು. ಒಬ್ಬ ಭೌತಶಾಸ್ತ್ರಜ್ಞನಾಗಿ ನನಗೆ ನನ್ನ ಸುತ್ತಲಿನ ಮರಳು, ಬಂಡೆ, ನೀರು, ಗಾಳಿಗಳೆಲ್ಲ ಕಂಪನವುಳ್ಳ ಮಾಲೆಕ್ಯೂಲ್ಸ್ ಹಾಗೂ ಅಣುಗಳಿಂದ ಆಗಿವೆ ಎಂಬ ಸಂಗತಿ ತಿಳಿದಿರುವಂಥದ್ದೇ. ಈ ಅಣುಗಳು, ಒಂದನ್ನೊಂದು ಘರ್ಷಿಸಿ ನಾಶ-ಹೊಸಸೃಷ್ಟಿಗೊಳಗಾಗಿರುವ ಕಣಗಳಿಂದ (ಪಾರ್ಟಿಕಲ್ಸ್) ಆಗಿವೆ. ಭೂಮಿಯ ವಾತಾವರಣವು ಅನುಕ್ಷಣವೂ ವಿಶ್ವಕಿರಣ (ಕಾಸ್ಮಿಕ್ ರೇ)ಗಳ ಹೊಡೆತಕ್ಕೆ ಸಿಕ್ಕಿದೆ, ಭಾರೀ ಶಕ್ತಿಯ ಈ ಕಣಗಳು ಇಲ್ಲಿನ ಗಾಳಿಯನ್ನು ಪ್ರವೇಶಿಸುತ್ತಲೇ ಬಹುಮುಖಿ ವಿದಳನಕ್ಕೆ ಒಳಗಾಗುತ್ತವೆ ಎಂಬುದೂ ಗೊತ್ತಿರುವಂಥದ್ದೇ. ಆದರೆ ಈವರೆಗೆ ಇವನ್ನೆಲ್ಲ ಗ್ರಾಫ್, ಡಯಾಗ್ರಾಮ್ ಹಾಗೂ ಗಣಿತದ ಸಿದ್ಧಾಂತಗಳ ಮೂಲಕವಷ್ಟೇ ಅರಿವಿಗೆ ತಂದುಕೊಂಡಿದ್ದೆ. ಆದರೆ ಆ ಕ್ಷಣದಲ್ಲಿ ಹೊರ ಅವಕಾಶದಿಂದ ಬಂದ ಶಕ್ತಿಯ ಪ್ರವಾಹವನ್ನು ನಾನು 'ಕಂಡೆ'. ಕಣಗಳು ಲಯಬದ್ಧವಾಗಿ ನಾಶ- ಹೊಸಹುಟ್ಟನ್ನು ಕಾಣುತ್ತಿದ್ದವು. ಈ ಶಕ್ತಿಯ ವಿರಾಟ್ ನೃತ್ಯದಲ್ಲಿ ನನ್ನ ದೇಹದ್ದೂ ಸೇರಿದಂತೆ ಎಲ್ಲ ಅಣುಗಳೂ ಭಾಗವಹಿಸಿದ್ದನ್ನು 'ಕಂಡೆ'. ಅದರ ಶಬ್ದವನ್ನು 'ಕೇಳುತ್ತ' ಆ ಲಯಕ್ಕೆ ಬೆಸೆದುಕೊಂಡೆ. ಆ ಕ್ಷಣದಲ್ಲೇ ನನಗಿದು ಹಿಂದುಗಳ ಆರಾಧ್ಯ ದೈವವಾದ ಶಿವನ ನೃತ್ಯ ಎಂಬುದು ಪಕ್ಕಾ ಆಗಿಹೋಯಿತು!
ಭೌತಶಾಸ್ತ್ರದಲ್ಲಿ ಸಂಶೋಧನೆ ಕೈಗೊಳ್ಳುತ್ತಲೇ ಪೌರಾತ್ಯ ರಾಷ್ಟ್ರಗಳ ಅನುಭಾವಿಕ ಪರಂಪರೆ ಕುರಿತೂ ಆಸಕ್ತಿ ಇರಿಸಿಕೊಂಡಿದ್ದವನು ನಾನು. ಝೆನ್ ಒಗಟುಗಳು ಕ್ವಾಂಟಮ್ ಸಿದ್ಧಾಂತದ ಒಗಟುಗಳನ್ನು ಹೋಲುತ್ತಿದ್ದವು. ಪ್ರಾರಂಭದಲ್ಲಿ ಬೌದ್ಧಿಕ ಕಸರತ್ತಿಗಿರಲಿ ಎಂಬಂತೆ ಶುರು ಮಾಡಿಕೊಂಡಿದ್ದಾಗಿತ್ತಿದು.
ನಂತರದಲ್ಲಿ ಶಿವನ ನೃತ್ಯದ ಅನುಭವಕ್ಕೆ ತೆರೆದುಕೊಳ್ಳುತ್ತಲೇ ಜಗತ್ತಿನ ಬಗ್ಗೆ ಆಧುನಿಕ ವಿಜ್ಞಾನವು ರೂಪಿಸುತ್ತಿರುವ ದೃಷ್ಟಿಯು ಪೌರಾತ್ಯ ರಾಷ್ಟ್ರಗಳ ಅನುಭವ ಪರಂಪರೆಗೆ ಸಂವಾದಿಯಾಗಿದೆ ಎಂಬುದು ಸ್ಪಷ್ಟವಾಯಿತು. ಈ ಸಾಮ್ಯಗಳ ಬಗ್ಗೆ ಹಲವು ಸಂಶೋಧನಾ ಬರಹಗಳನ್ನು ಪ್ರಕಟಿಸಿದ ನಂತರ ಈ ಪುಸ್ತಕ ರೂಪುಗೊಳ್ಳುತ್ತಿದೆ..'
---
ವೆಂಡಿ, ಡುಂಢಿಗಳೆಲ್ಲ ಏನಕೇನ ಪ್ರಕಾರದ ಪ್ರಚಾರ ಪಡೆಯಲು ಹೊರಟಾಗಲೆಲ್ಲ ಫ್ರಿಟ್ಜಾಫ್ ಕಾಪ್ರಾರಂಥವರನ್ನು ದೊಡ್ಡಧ್ವನಿಯಲ್ಲಿ ನೆನಪಿಸಿಕೊಳ್ಳುವುದೇ ಸಮಾಜವನ್ನು ಶಾಂತವಾಗಿಸುವ ಉತ್ತಮ ಮಾರ್ಗವಾಗಬಹುದು.
- ಚೈತನ್ಯ ಹೆಗಡೆ
cchegde@gmail.com