ಯುಗಾದಿಯ ನೆಪದಲ್ಲಿ ಹೇಗಿದ್ರೂ ಮೂರು ದಿನ ರಜೆ ಇದೆ. ಶುಕ್ರವಾರ ರಾತ್ರಿಯೇ ಹೊರಟುಬಿಡು. ನಾಲ್ಕು ದಿನ ಮೊದಲೇ ಟಿಕೆಟ್ ಬುಕ್ ಮಾಡಿಸು...' ಇಂಥದೊಂದು ಸಲಹೆಯನ್ನು ಅಮ್ಮ, ಫೆಬ್ರವರಿ ತಿಂಗಳಲ್ಲಿಯೇ ಕೊಟ್ಟಿದ್ದರು. ಈ ಮೊದಲು ಎರಡು ಮೂರು ಬಾರಿ ಟಿಕೆಟ್ ಸಿಕ್ಕದೆ ಸಂಕಟಪಟ್ಟಿದ್ದು ನೆನಪಿದ್ದುದರಿಂದ ತಡ ಮಾಡದೇ ಹತ್ತಿರದ ಸೆಂಟರ್ಗೆ ಹೋಗಿ ಟಿಕೆಟ್ ಬುಕ್ ಮಾಡಿದ್ದಾಯ್ತು. ಅಂತೂ ಭರ್ತಿ ಮೂರು ದಿನ ಈ ಬೆಂಗಳೂರಿಂದ ದೂರ ಇರಬಹುದು. ಅಂದುಕೊಳ್ಳುತ್ತಲೇ ಪಿ.ಜಿ.ಗೆ ಬಂದರೆ-ನಮ್ಮ ಓನರ್ ಆಂಟಿಯ ಎದುರು ಕುಳಿತಿದ್ದ ಮಹಾಲಕ್ಷ್ಮಿ ನಿರ್ಧಾರದ ದನಿಯಲ್ಲಿ ಹೇಳಿಬಿಟ್ಟಳು.
'ನಿಮ್ಮ ಹತ್ರ ಎಂಥದಮ್ಮಾ ಮುಚ್ಚುಮರೆ? ಹೇಳ್ತೀನಿ ಕೇಳಿ: ನನ್ನ ಮನಸ್ಸು ಒಡೆದು ಹೋಗಿದೆ. ಅಷ್ಟರಮಟ್ಟಿಗೆ 'ಅವಳು' ಬೇಸರ ಮಾಡಿಬಿಟ್ಟಿದ್ದಾಳೆ. ಅದು ನನ್ನ ಗಂಡನ ಮನೆ ನಿಜ. ಆದರೆ 'ಅವಳು' ಇರುವ ಮನೆಗೆ ಹೋಗಲೇಬಾರದು ಅಂತ ತೀರ್ಮಾನ ಮಾಡಿಬಿಟ್ಟಿದ್ದೀನಿ. ಹೋದ ವರ್ಷವೂ ಹೋಗಲಿಲ್ಲ. ಈ ವರ್ಷ ಕೂಡ ಹೋಗುವುದಿಲ್ಲ'.
ಮಹಾಲಕ್ಷ್ಮಿ ನಮ್ಮ ಓನರ್ ಆಂಟಿಯ ಹಳೇ ಫ್ರೆಂಡು. ಆಕೆಯ ಗಂಡ, ಹಾಸನ ಜಿಲ್ಲೆಯವರು. ನಾಲ್ಕು ಮಂದಿ ಸೋದರರಿದ್ದ ತುಂಬು ಕುಟುಂಬ ಅವರದು. ಈ ಪೈಕಿ, ಕಿರಿಯವನು ವ್ಯವಸಾಯ ಮಾಡಿಕೊಂಡು ಊರಲ್ಲಿದ್ದ. ಉಳಿದವರು, ನೌಕರಿಯ ಕಾರಣದಿಂದ ಬೇರೆ ಬೇರೆ ನಗರಗಳಲ್ಲಿ ಇದ್ದರು. ಆ ಮನೆಗೆ, ಮಹಾಲಕ್ಷ್ಮಿಯೇ ಮೊದಲ ಸೊಸೆ. ಗಂಡನ ಮನೆಗೆ ಹೋಗುವುದೇ ಇಲ್ಲ ಎಂದು ಮಹಾಲಕ್ಷ್ಮಿ ಹೇಳುತ್ತಿದ್ದುದಕ್ಕೂ ಕಾರಣವಿತ್ತು. ಏನೆಂದರೆ, ಮೂರು ವರ್ಷದ ಹಿಂದೆ ಹಬ್ಬಕ್ಕೆ ಹೋದ ಸಂದರ್ಭದಲ್ಲಿ ತುಂಬಾ ಆಯಾಸವಾಗಿದೆ ಎಂಬ ಕಾರಣ ಹೇಳಿ, ಯಾವುದೇ ಕೆಲಸ ಮಾಡದೆ ಮಹಾಲಕ್ಷ್ಮಿ ಮಲಗಿ ಬಿಟ್ಟಳಂತೆ. ಆಗ, ಸಹಜವಾಗಿಯೇ ಬೇಸರಗೊಂಡ ಊರಲ್ಲೇ ಬದುಕುತ್ತಿದ್ದ ಓರಗಿತ್ತಿ, ತನ್ನ ಗೆಳತಿಯರೊಂದಿಗೆ ಮಾತಾಡುತ್ತಾ- ಸಿಟಿಯಲ್ಲಿ ಇರುವವರು ಮಹಾರಾಣಿ ಥರ ಸೇವೆ ಮಾಡಿಸಿಕೊಳ್ಳೋಕೇ ಊರಿಗೆ ಬರ್ತಾರೇನೋ ಅನ್ಸುತ್ತೆ. ಅವರಿಗೆ ಯಾವಾಗ್ಲೂ ಒಂದಲ್ಲ ಒಂದು ಥರದ ಸಂಕಟ. ಹಬ್ಬದ ದಿನ ವಿಪರೀತ ಕೆಲಸ ಇದೆ ಅಂತ ಗೊತ್ತಿದ್ರೂ ಆರಾಮಾಗಿ ಮಲಗಿದ್ದಾರೆ. ಅವರು ಒಬ್ಬರಿಗೆ ಮಾತ್ರಾನಾ ಸುಸ್ತಾಗೋದು? ಈ ಕಗ್ಗಾಡಿನಂಥ ಊರಲ್ಲಿ ವರ್ಷ ಪೂರ್ತಿ ಸಾಯ್ತೀವಲ್ಲ, ನಮಗೆ ಸುಸ್ತಾಗಲ್ವ?' ಅಂದಳಂತೆ. ಈ ಮಾತುಗಳೆಲ್ಲ ಅವತ್ತೇ ಸಂಜೆಯ ವೇಳೆಗೆ ಆ ಊರಿನ ಹತ್ತಾರು ಹೆಂಗಸರಿಗೆ ಗೊತ್ತಾಯಿತು. ಅವರಲ್ಲಿ ಒಬ್ಬಳು, ಆ ಮಾತುಗಳಿಗೆ ಸಾಕಷ್ಟು ಉಪ್ಪು-ಖಾರ ಹಾಕಿ, ಅದನ್ನು ಮಹಾಲಕ್ಷ್ಮಿಗೆ ಹೇಳಿಬಿಟ್ಟಳು.
ಮೊದಲೇ ಮುಂಗೋಪಿಯಾಗಿದ್ದ ಮಹಾಲಕ್ಷ್ಮಿ, ಊರಲ್ಲಿ ಏನೂ ಮಾತಾಡಲಿಲ್ಲ. ಬೆಂಗಳೂರಿಗೆ ಬಂದವಳೇ ಫೋನ್ ಮಾಡಿ ಸರಿಯಾಗಿಯೇ ಕ್ಲಾಸ್ ತಗೊಂಡಳು. 'ದೊಡ್ಡವರ ಬಗ್ಗೆ ಹೇಗೆ ಮಾತಾಡಬೇಕು ಅಂತ ಗೊತ್ತಿಲ್ವೇನೆ ನಿಂಗೆ? ಆ ಮನೆಗೆ ಮೊದಲು ಬಂದವಳು ನಾನೇ ವಿನಃ ನೀನಲ್ಲ, ನೆನಪಿಟ್ಕೋ' ಅಂದಳು. ಈ ಜಗಳದ ಸುದ್ದಿ ಮಹಾಲಕ್ಷ್ಮಿಯ ಅತ್ತೆ, ಮಾವ, ಮೈದುನರ ಕಿವಿಗೂ ಬಿತ್ತು. ಅವರು, ವರ್ಷಪೂರ್ತಿ ಹಳ್ಳೀಲಿ ಬಿಸಿಲು, ಮಳೆಯ ಮಧ್ಯೆಯೇ ಒದ್ದಾಡುವ ಆ ಹುಡುಗಿಗೆ ನೀವು ಸ್ವಲ್ಪವಾದ್ರೂ ಸಹಾಯ ಮಾಡಬೇಕು ಅಲ್ವಾ? ಎಂದರು. ಆಗಂತೂ ಮಹಾಲಕ್ಷ್ಮಿ ಮತ್ತಷ್ಟು ರಾಂಗ್ ಆದಳು. ಎಲ್ಲರೂ ಸೇರಿಕೊಂಡು ನನ್ನನ್ನು ಟಾರ್ಗೆಟ್ ಮಾಡ್ತಿದಾರೆ ಅಂದಳು. ಅದರ ಮುಂದುವರಿದ ಭಾಗವಾಗಿಯೇ, ಗಂಡನ ಊರಿಗೆ ಹೋಗುವುದೇ ಇಲ್ಲ ಎಂದು ಶಪಥ ಮಾಡಿದ್ದು...
ನಮ್ಮ ಓನರ್ ಆಂಟಿ ಏನೂ ಮಾತಾಡಲಿಲ್ಲ. ನಿನ್ನ ಮನಸು ಹೇಗೆ ಹೇಳುತ್ತೋ ಹಾಗೆ ಮಾಡು ಅಂದರು. ಆಗ ಎದ್ದು ಹೋದ ಮಹಾಲಕ್ಷ್ಮಿ, ಸಂಜೆಯಲ್ಲಿ ಮತ್ತೆ ಬಂದಳು. ಕಾಫಿ ಕುಡಿಯುತ್ತಾ, ಅದೂ ಇದೂ ಮಾತಾಡುತ್ತಿದ್ದ ಓನರ್ ಆಂಟಿ, ತೀರಾ ಆಕಸ್ಮಿಕ ಎಂಬಂತೆ ಕೇಳಿಬಿಟ್ಟರು:'ಲಕ್ಷ್ಮೀ, ನಿಮ್ಮ ಅಕ್ಕ ಹೇಗಿದ್ದಾಳೆ? ಈ ಹೊತ್ತಿಗೆ ನಿಮ್ಮ ಮಧ್ಯೆ ರಾಜಿ ಆಗಿರಬೇಕಲ್ವಾ....?' ಆರೇಳು ತಿಂಗಳ ಹಿಂದೆ ಯಾವುದೋ ವಿಷಯಕ್ಕೆ ಅಕ್ಕ-ತಂಗಿಯರ ಮಧ್ಯೆ ಜಗಳವಾಗಿತ್ತು. ಆಗಲೂ ಅಷ್ಟೆ: ಮುಂಗೋಪದ ಮಹಾಲಕ್ಷ್ಮಿ ಸಾಸಿವೆಯಂತೆ ಸಿಡಿದು, ಇವತ್ತೇ ಲಾಸ್ಟ್. ಮುಂದೆ ಈ ಜನ್ಮದಲ್ಲಿ ಯಾವತ್ತೂ ನಿನ್ನ ಜೊತೆ ಮಾತಾಡಲಾರೆ ಅಂದು ಬಿಟ್ಟಿದ್ದಳು. ಎಲ್ಲ ವಿವರವನ್ನೂ ಅವಳೇ ಓನರ್ ಆಂಟಿಗೆ ಹೇಳಿದ್ದರಿಂದ, ಅದು ನಮಗೂ ಗೊತ್ತಾಗಿತ್ತು. 'ಅಕ್ಕ-ತಂಗಿ ಅಂದ ಮೇಲೆ ಜಗಳ ಆಡದೇ ಇರೋಕಾಗುತ್ತಾ ಆಂಟೀ. ಬೈದವಳು ನನ್ನ ಅಕ್ಕ ತಾನೆ? ನಾನೆ ಮುಂದಾಗಿ ಮಾತಾಡಿಸಿಬಿಟ್ಟೆ. ಅಕ್ಕ ಚೆನ್ನಾಗಿದ್ದಾಳೆ. ಮುಂದಿನ ವಾರ ಬರ್ತೇನೆ ಅಂದಿದ್ದಾಳೆ' ಎಂದಳು.
ಎರಡು ನಿಮಿಷ ಮೌನವಾಗಿದ್ದ ನಮ್ಮ ಓನರ್ ಆಂಟಿ, ನಂತರ ಹೀಗೆಂದರು: 'ಲಕ್ಷ್ಮೀ, ಈ ಜನ್ಮದಲ್ಲೆಂದೂ ಅಕ್ಕನ ಮನೆಗೆ ಹೋಗಲ್ಲ ಅಂದಿದ್ದವಳು ನೀನು. ಅಂಥವಳು, ಅಕ್ಕ-ತಂಗೀರ ಮಧ್ಯೆ ಜಗಳ ಬರೋದಿಲ್ವಾ? ಅಂತಿದ್ದೀಯಾ. ಈಗ ಯೋಚನೆ ಮಾಡು. ಊರಲ್ಲಿರುವ ನಿನ್ನ ವಾರಗಿತ್ತಿ, ವರಸೆಯಿಂದ ತಂಗಿಯೇ ಆಗಬೇಕು ತಾನೆ? ಯಾವುದೋ ಕಹಿ ಸಂದರ್ಭದಲ್ಲಿ ಅವಳು ಆಡಿರುವ ಮಾತನ್ನು ಕ್ಷಮಿಸಲು ಆಗಲ್ವಾ? ಅವಳು ತಂಗಿಯೇ ಅಲ್ಲ. ಅವಳು ನನ್ನ ಶತ್ರು ಎಂಬ ಭಾವನೆ ನಿನ್ನ ಮನಸಲ್ಲಿ ಗಟ್ಟಿಯಾಗಿ ಕೂತುಬಿಟ್ಟಿದೆ. ಅದನ್ನು ಮನಸ್ಸಿಂದ ತೆಗೆದು ಹಾಕು. ಖುಷಿಯಾಗಿ ಊರಿಗೆ ಹೋಗು. ಎಲ್ಲರೊಂದಿಗೆ ಸಂತೋಷದಿಂದ ಮಾತಾಡು, ಒಳಗಿನ ಕಿಚ್ಚು ಇವತ್ತಲ್ಲ ನಾಳೆ ನಮ್ಮನ್ನೇ ಸುಟ್ಟು ಬಿಡುತ್ತೆ, ನೆನಪಿರಲಿ...' ಅಂದರು. ಆಗ, ಏನೊಂದೂ ಮಾತಾಡದೆ ಎದ್ದು ಹೋದ ಮಹಾಲಕ್ಷ್ಮಿ, ಎರಡು ದಿನಗಳ ನಂತರ ಬಂದು-'ನಿಮ್ಮಂಥವರು ನಾಲ್ಕು ಜನ ಎಲ್ಲಾ ಕಡೆ ಇದ್ರೆ ಕುಟುಂಬಗಳು ಒಡೆದು ಹೋಗಲ್ಲ ಆಂಟೀ. ಎರಡು ದಿನ ಮೊದಲೇ ಊರಿಗೆ ಹೋಗ್ತೇನೆ. ಅಲ್ಲೊಬ್ಬಳು ತಂಗಿ ಇದ್ದಾಳಲ್ಲ...' ಎನ್ನುತ್ತ ನಕ್ಕಳು.
ಅಂದಹಾಗೆ, ಯುಗಾದಿಯ ಒಂದು ಸಿಹಿ ನೆನಪು ಕೇಳಿ: ಬೇವು-ಬೆಲ್ಲದ ಮಿಶ್ರಣವನ್ನು ತಿನ್ನುವ ಮುನ್ನ ಶತಾಯುಃ ವಜ್ರದೇಹಾಯ ಸರ್ವ ಸಂಪತ್ಕರಾಯಚ ಸರ್ವಾರಿಷ್ಟ ವಿನಾಶಾಯ ನಿಂಬ ಕಂದಳ ಭಕ್ಷಣಂ॥ ಎಂಬ ಶ್ಲೋಕ ಹೇಳಬೇಕಿತ್ತು. ಅದರರ್ಥ ಹೀಗಿದೆ: ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅನಿಷ್ಟ ನಿವಾರಣೆಗಾಗಿಯೂ ಬೇವು-ಬೆಲ್ಲ ಸೇವನೆ ಮಾಡುತ್ತೇನೆ! ಮಂತ್ರ ಹೇಳಿದ್ದು ಮುಗಿದಾಕ್ಷಣ ಬೇವು ಬೆಲ್ಲವನ್ನು ಅಗಿಯುವ ಬದಲು ಗುಳುಂ ಎಂದು ನುಂಗಿ ಕಹೀ ಎಂದು ಮುಖ ಕಿವುಚುತ್ತಿದ್ದೆವು. ಈ ಸಿಹಿ ನೆನಪನ್ನು ಜೊತೆಗಿಟ್ಟುಕೊಂಡೇ ಊರಿನ ಬಸ್ ಹತ್ತುತ್ತಿದ್ದೇನೆ.
ಎಲ್ಲರಿಗೂ ಯುಗಾದಿಯ ಶುಭಾಶಯಗಳು.
- ನಾನು ಪ್ರಣತಿ