ರಾಜಕಾರಣ ದಿನದಿಂದ ದಿನಕ್ಕೆ ಎತ್ತೆತ್ತಲೋ ಸಾಗುತ್ತಿದೆ. ನರೇಂದ್ರ ಮೋದಿಯವರ ವ್ಯಕ್ತಿತ್ವವನ್ನಂತೂ ಮಹಾದೇವನಿಗೇ ಹೋಲಿಸಲಾಗುತ್ತಿದೆ(ಹರ ಹರ ಮೋದಿ!); ಪಿ. ಚಿದಂಬರಂ ಅವರು ಗಾಂಧೀ ಮಾರ್ಗವನ್ನು ಹಿಡಿದು ಶಿವಗಂಗಾದ ಜನರ 'ಸೇವೆಯಲ್ಲೇ" ತಮ್ಮ ಜೀವನವನ್ನು ಸವೆಸುವುದಾಗಿ ಹೆದರಿಸುತ್ತಿದ್ದಾರೆ; ಶರದ್ ಪವಾರ್, "ಕಾನೂನು ಮುರಿದು ಎರಡೆರಡು ಬಾರಿ ಓಟ್ ಮಾಡಿ" ಎಂದು ತಮ್ಮ ಬೆಂಬಲಿಗರನ್ನು ನಾಚಿಕೆಬಿಟ್ಟು ಕೇಳುತ್ತಿದ್ದಾರೆ; ಧನಂಜಯ್ ಮುಂಡೆಯಂತೂ ತಮ್ಮ ಅಂಕಲ್ ಗೋಪಿನಾಥ್ ಮುಂಡೆಯವರಿಗೆ 1 ಲಕ್ಷ ಬೋಗಸ್ ವೋಟುಗಳನ್ನು ಆಯೋಜಿಸಿರುವುದಾಗಿ ಎದೆ ತಟ್ಟಿ ಹೇಳುತ್ತಿದ್ದಾರೆ. ಆದರೂ ಈ ಎಲ್ಲಾ ದೇಶಪ್ರೇಮಿಗಳು ನಿಶ್ಚಿಂತೆಯಿಂದ ಓಡಾಡುತ್ತಾ, ನಮ್ಮ ದೇಶವವನ್ನು ಔನತ್ಯದೆಡೆಗೆ ಒಯ್ಯಲು ಸಿದ್ಧತೆ ನಡೆಸಿದ್ದಾರಂತೆ.
ಇಂಥ ಕಿಡಿಗೇಡಿತನಗಳೇ ಇಂದು ಹೆಚ್ಚು ಸುದ್ದಿಯಾಗುತ್ತಿವೆ. ಆದರೆ ಹೆಚ್ಚು ಸುದ್ದಿಯಾಗದ, ಆದರೆ ಗಂಭೀರವಾಗಿ ಚಿಂತಿಸಬೇಕಾಗಿರುವ ವಿಷಯವೆಂದರೆ, ಹೆಚ್ಚುತ್ತಿರುವ ಧಾರ್ಮಿಕ ಧ್ರುವೀಕರಣ ಮತ್ತು ಹೊಸ ಆಯಾಮವನ್ನು ಪಡೆಯುತ್ತಿರುವ ಜಾತೀಯತೆ. ವರುಣ್ ಗಾಂಧಿಯವರು ಈಗ ಮುಸಲ್ಮಾನರ ಕೈಗಳನ್ನು ಕತ್ತರಿಸುವ ಮಾತನಾಡುತ್ತಿಲ್ಲ ಮತ್ತು ಅಕ್ಬರುದ್ದೀನ್ ಓವೈಸಿ, ತನ್ನ ಬೆಂಬಲಿಗರಿಗೆ 100 ಕೋಟಿ ಹಿಂದುಗಳನ್ನು 15 ನಿಮಿಷದಲ್ಲಿ ಮುಗಿಸಿ ಹಾಕುವ ಶಕ್ತಿಯಿದೆ ಎಂದು ಅಬ್ಬರಿಸುತ್ತಿಲ್ಲ ಎನ್ನುವುದಂತೂ ನಿಜ. ಆದರೆ ಇದರಿಂದ ಅಸಹ್ಯಕರ ಧಾರ್ಮಿಕವಾದಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್, "ನರೇಂದ್ರ ಮೋದಿಯನ್ನು ತುಂಡುತುಂಡು ಮಾಡುತ್ತೇನೆ" ಎಂದು ಪ್ರಮಾಣ ಮಾಡುತ್ತಾನೆ. ಕೇರಳದ ಪಾದ್ರಿಗಳು ಪಶ್ಚಿಮ ಘಟ್ಟಗಳಲ್ಲಿ ಜಲಿಯನ್ ವಾಲಾಬಾಗ್ನಂಥ ಹತ್ಯಾಕಾಂಡವನ್ನು ನಡೆಸುವುದಾಗಿ ಧಮಕಿ ಹಾಕುತ್ತಿದ್ದಾರೆ.
ಜಾತಿಯೇ ಚುನಾವಣೆಯ ದಿಕ್ಕನ್ನು ನಿರ್ಧರಿಸುವ ರಾಜ್ಯಗಳಲ್ಲಿ, ಈಗ ಕೆಲವು ಬದಲಾವಣೆಗಳಾಗುತ್ತಿವೆ. ಉತ್ತರ ಪ್ರದೇಶದ ನಗರ ಕೇಂದ್ರಗಳಲ್ಲಿ ಬ್ರಾಹ್ಮಣರು ಬಿಜೆಪಿಯ ಸಾಂಪ್ರದಾಯಿಕ ಓಟ್ಬ್ಯಾಂಕ್ಗಳಾಗಿದ್ದರು. ಮುರಳಿ ಮನೋಹರ್ ಜೋಶಿ ಮತ್ತ ಕಲ್ರಾಜ್ ಮಿಶ್ರಾರ ಕ್ಷೇತ್ರಗಳಲ್ಲಿ ಬ್ರಾಹ್ಮಣರ ಓಟ್ಗಳೇ ಮುಖ್ಯ ಪಾತ್ರ ವಹಿಸುತ್ತಿದ್ದವು. ಆದರೀಗ ನರೇಂದ್ರ ಮೋದಿ ಮತ್ತು ಅವರ ಗೆಳೆಯರ ಅನುಕೂಲಕ್ಕೆ ತಕ್ಕಂತೆ ಈ ಇಬ್ಬರು ನಾಯಕರನ್ನು ಹೊರಗಿಟ್ಟಿರುವುದಕ್ಕೆ, ಉತ್ತರಪ್ರದೇಶದ ಬ್ರಾಹ್ಮಣರು ಬುಸುಗುಟ್ಟುತ್ತಿದ್ದಾರೆ.
ಇನ್ನು ಬಿಹಾರದಲ್ಲಿ ಬಿಜೆಪಿ ಹಿಂದುಳಿದ ಜಾತಿಗಳಿಗೇ ಹೆಚ್ಚು ಒಲವು ತೋರಿಸುತ್ತಿದೆ ಎನ್ನುವ ಕಾರಣಕ್ಕೆ ಆ ಪಕ್ಷದ ಮೇಲೆ ಅಲ್ಲಿನ ಬ್ರಾಹ್ಮಣರು ಮತ್ತು ಭೂಮಿಹಾರ್ಗಳು ಸಿಟ್ಟುಮಾಡಿಕೊಂಡಿದ್ದಾರೆ. ಪ್ರಮುಖ ಕ್ಷೇತ್ರಗಳಲ್ಲಿ ಬಿಜೆಪಿಯ ನಾಯಕರು ಬಂಡಾಯದ ಬಾವುಟ ಹಾರಿಸಿದ್ದಾರೆ. ಅವರ ವಾದವಿಷ್ಟೆ- 'ಬಿಜೆಪಿ ಒಂದು ವೇಳೆ ಸಾಂಪ್ರದಾಯಿಕ ಮೇಲ್ವರ್ಗದ ಮತಬ್ಯಾಂಕನ್ನು ಕಡೆಗಣಿಸಿ ಹಿಂದುಳಿದ ವರ್ಗಗಳಿಗೇ ಹೆಚ್ಚು ಒತ್ತುಕೊಟ್ಟಿತೆಂದರೆ, ಪಕ್ಷ ಗಳಿಸುವುದಕ್ಕಿಂತ ಕಳೆದುಕೊಳ್ಳಲಿರುವುದೇ ಹೆಚ್ಚು".
ಹರ್ಯಾಣ ಬಿಜೆಪಿಯಲ್ಲಿರುವ ಅರ್ಧಕರ್ಧ ಅಭ್ಯರ್ಥಿಗಳು ಅನ್ಯ ಪಕ್ಷಗಳಿಂದ ಹಾರಿಬಂದವರೇ. ಆದರೂ ಜಾತಿಯನ್ನು ನೋಡಿ ಅವರನ್ನು ಒಳಕ್ಕೆ ಬಿಟ್ಟುಕೊಳ್ಳಲಾಗಿದೆ. ಇನ್ನು ರಾಜಸ್ಥಾನದಲ್ಲಿ ರಾಜಪೂತರು ಮತ್ತು ಜಾಟ್ಗಳ ನಡುವಿದ್ದ ಹಳೆಯ ವೈಷಮ್ಯ ಈಗ ಧಿಗ್ಗನೆ ಭುಗಿಲೆದ್ದಿದೆ. ರಜಪೂತರಾದ ಜಸ್ವಂತ್ ಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ ಎನ್ನುವ ಕಾರಣಕ್ಕೆ, ಈ ಎರಡೂ ಜಾತಿಗಳ ಮಂದಿ ಕಚ್ಚಾಡುತ್ತಿದ್ದಾರೆ. ಇನ್ನು ತಮಿಳುನಾಡಿನಲ್ಲಿ ಬಿಜೆಪಿ ಹುಟ್ಟುಹಾಕಿರುವ 5 ಪಕ್ಷಗಳ ಒಕ್ಕೂಟದಲ್ಲಿ, ವನಿಯಾರ್ ಜಾತಿಯ ಲಾಬಿ(ಪಿಎಮ್ಕೆಯಲ್ಲಿ) ಬಲಿಷ್ಠವಾಗಿದೆ. ಈ ಪಕ್ಷ ಆಧುನಿಕ ರೋಮಿಯೋ ಮತ್ತು ಜೂಲಿಯಟ್ರ ದುರಂತ ನಾಟಕಕ್ಕೆ ಕಳೆದ ವರ್ಷ ಕಾರಣವಾಗಿತ್ತು(ಇಳಾವರಸನ್ ಎನ್ನುವ ದಲಿತ ಯುವಕ ಮತ್ತು ದಿವ್ಯಾ ಎನ್ನುವ ವನಿಯಾರ್ ಜಾತಿಯ ಯುವತಿ ಆಳವಾದ ಪ್ರೇಮದಲ್ಲಿ ಸಿಲುಕಿ, ಮದುವೆಯಾದರು. ಇಳವರಸನ್ನನ್ನು ಹಾಡಹಗಲೇ ಕೊಲ್ಲಲಾಯಿತು ಮತ್ತು ಧರ್ಮಪುರಿ ಕ್ಷೇತ್ರವನ್ನು ಜಾತಿ ಆಧಾರದ ಮೇಲೆ ಇಬ್ಭಾಗ ಮಾಡಲಾಯಿತು.). ಈ ಘಟನೆಯಿಂದ ರೊಚ್ಚಿಗೆದ್ದಿರುವ ದಲಿತರು ಈ ಬಾರಿ ತಾವು ಜಾತಿಯಾಧಾರದ ಮೇಲೆಯೇ ಮತದಾನ ಮಾಡುವುದಾಗಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ.
ಸಂಘ ಪರಿವಾರ ಇಲ್ಲಿಯವರೆಗೂ ಬ್ರಾಹ್ಮಣರ ನೇತೃತ್ವದಲ್ಲಿ ಸಾಗಿಬಂದಿದೆ. ಆದರೆ ಈಗಲ್ಲಿ ಐತಿಹಾಸಿಕ ಬದಲಾವಣೆಯಾಗುತ್ತಿವೆ. ಇದೇ ಮೊದಲ ಬಾರಿಗೆ ಬಿಜೆಪಿ ಅದರಲ್ಲಿನ ಪ್ರಮುಖ ಹುದ್ದೆಗಳನ್ನು ಹಿಂದುಳಿದ ವರ್ಗದವರಿಗೆ ಬಿಟ್ಟುಕೊಟ್ಟಿದೆ. (1990ರಲ್ಲಿ ಉತ್ತರ ಪ್ರದೇಶದ ಮೇಲ್ವರ್ಗದವರು ಹಿಂದುಳಿದ ವರ್ಗದ ಕಲ್ಯಾಣ್ ಸಿಂಗ್ ಅವರನ್ನು ಮೈತ್ರಿಕೂಟದ ನಾಯಕನನ್ನಾಗಿ ಒಪ್ಪಿಕೊಂಡಿದ್ದರು. ಆದರೆ ಆ ಪ್ರಯೋಗ ಹೆಚ್ಚು ದಿನ ಉಳಿಯಲಿಲ್ಲ)
ಈಗ ಬಿಜೆಪಿ 'ಘಾಂಚಿ'ಗಳ(ಇತರೆ ಹಿಂದುಳಿದ ವರ್ಗ) ನಾಯಕನ ವಾಹನವಾಗಿ ಬದಲಾಗಿದೆ. ಹಾಗಿದ್ದರೆ ಈ ಬದಲಾವಣೆಗೆ ನರೇಂದ್ರ ಮೋದಿಯವರ ಲೆಕ್ಕಾಚಾರ ಕಾರಣವೇ? ಅವರು ರಚಿಸುತ್ತಿರುವ ಮಾರ್ಗಗಳು ಸಂಪೂರ್ಣವಾಗಿ ಹೊಸತಾಗಿವೆ. ಈ ಹಿಂದೆ ಮಾಯಾವತಿ ಸಾಮಾಜಿಕ ಮೈತ್ರಿಯೊಂದನ್ನು ದಲಿತರು ಮತ್ತು ಬ್ರಾಹ್ಮಣರ ಮೂಲಕ ರಚಿಸಿದ್ದರು. ಆದಾಗ್ಯೂ ಇದರಿಂದ ದಲಿತರಿಗೂ ಲಾಭವಾಗಲಿಲ್ಲ, ಬ್ರಾಹ್ಮಣರೂ ಸುಖಪಡಲಿಲ್ಲ. ಆದರೆ ಜಾತಿ ರೋಗ ಹತ್ತಿದ ಇಂಥ ಸಮಾಜದಿಂದ ಮಾಯಾವತಿಯವರಿಗಂತೂ ಸಖತ್ ಲಾಭವಾಗಿದ್ದು ಸುಳ್ಳಲ್ಲ. ಮೋದಿಯವರೂ ಇಂಥ ಮೈತ್ರಿಗಳನ್ನು, ಇಂಥ ಉದ್ದೇಶದಿಂದಲೇ ರಚಿಸುತ್ತಿದ್ದಾರಾ? ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು 1948ರಲ್ಲಿ ಅಂಬೇಡ್ಕರ್ ಅವರು ಕೇಳಿದ ಪ್ರಶ್ನೆಯಲ್ಲಿ ಹುಡುಕಬಹುದು. ಅವರು ಕೇಳಿದ್ದರು: "ಜಾತಿ ಮತ್ತು ಸಿದ್ಧಾಂತಗಳೆಂಬ ಶತ್ರುಗಳ ಜೊತೆಗೆ, ನಮ್ಮ ದೇಶದಲ್ಲಿ, ವೈವಿಧ್ಯಮಯ ಮತ್ತು ಎದುರಾಳಿ ರಾಜಕೀಯ ಸಿದ್ಧಾಂತಗಳೂ ಹುಟ್ಟಿಕೊಳ್ಳುತ್ತವೆ. ಭಾರತೀಯರು ದೇಶಕ್ಕಿಂತ ಪಂಥಕ್ಕೆ ಹೆಚ್ಚು ಬೆಲೆ ಕೊಡುತ್ತಾರೋ ಅಥವಾ ಪಂಥಕ್ಕಿಂತ ದೇಶಕ್ಕೋ?"
-ಟಿಜೆಎಸ್ ಜಾರ್ಜ್