

ಆರ್‌ಎನ್ ಜೊ ಡಿಕ್ರೂಜ್.
ತಮಿಳು ಸಾಹಿತಿ, ಸಾಕ್ಷ್ಯಚಿತ್ರ ನಿರ್ಮಾಪಕ ಹಾಗೂ ಹಡಗು ಉದ್ಯಮದಲ್ಲಿ ತೊಡಗಿಕೊಂಡವರು. 'ಕೊರ್ಕೈ' ಎಂಬ ತಮ್ಮ ತಮಿಳು ಕಾದಂಬರಿಗೆ 2013ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರಕ್ಕೆ ಭಾಜನರಾದವರು. ಇವರ ಬಗ್ಗೆ ಲಭ್ಯ ಮಾಹಿತಿಗಳನ್ನು ಓದುತ್ತಿದ್ದರೆ ಒಂದಂಶ ಸ್ಪಷ್ಟವಾಗುತ್ತದೆ. ಬರವಣಿಗೆಯನ್ನು ಯಾವತ್ತೋ ನಿಲ್ಲಿಸಿ, ಅಧ್ಯಯನದ ಯಾವ ಶ್ರಮವನ್ನೂ ವಹಿಸದೇ, ಮೈಕಿಗೆ ಬಾಯಿಟ್ಟು ರಾಜಕೀಯ ಭಾಷಣ ಮಾಡುವುದನ್ನೇ ಸಾಹಿತ್ಯಸೇವೆ ಎಂದುಕೊಂಡಿರುವ ಕರುನಾಡಿನ ಹಲವು 'ಸಾಹಿತಿ'ಗಳ ಸಾಲಿನವರೇನೂ ಇವರಲ್ಲ. ಬಹುಶಃ ಇದೇ ಕಾರಣಕ್ಕೇನೋ, ಇವರಿಗೆ ಇತ್ತೀಚೆಗಾದ ಅನ್ಯಾಯವನ್ನು ಯಾವ 'ಪ್ರಗತಿಪರ'ರೂ ಖಂಡಿಸಲಿಲ್ಲ. ಅಮೆರಿಕದ ಯೂನಿವರ್ಸಿಟಿಗಳಲ್ಲಿ ಕುಳಿತು ಭಾರತದ ಬಗ್ಗೆ ಮಾತನಾಡುವ ಪ್ರೊಫೆಸರ್‌ಗಳು ಹಾಗೂ ಬರವಣಿಗೆ ನಿಲ್ಲಿಸಿರುವ ಸಾಹಿತಿಗಳ ವಿಷಯದಲ್ಲಿ ಮಾಧ್ಯಮಲೋಕ ನೀಡುವ ಪ್ರಚಾರವು ಇವರ ಸಾಹಿತ್ಯ ಕೃಷಿಗೆ ಸಂಬಂಧಿಸಿದ ಅನಪೇಕ್ಷಿತ ವಿದ್ಯಮಾನವೊಂದಕ್ಕೆ ದೊರೆಯಲೇ ಇಲ್ಲ. ಜೊ ಕೂಡ ಅಷ್ಟೆ, ನಮ್ಮ ಹಲವು ಸಾಹಿತಿಗಳಂತೆ ಆ ಬಗ್ಗೆ ಬೊಬ್ಬಿರಿಯುತ್ತ ಕೂರಲೂ ಇಲ್ಲವೆನ್ನಿ.
ಇಷ್ಟಕ್ಕೂ ಆದದ್ದೇನು?
2004ರಲ್ಲಿ ಇವರ ಪ್ರಥಮ ಕಾದಂಬರಿ ಪ್ರಕಟವಾಗಿತ್ತು. ಕಡಲಿಂದ ಸುತ್ತುವರಿದ ಲೋಕ ಎಂಬರ್ಥದ ಶೀರ್ಷಿಕೆ ಹೊಂದಿರುವ ಆ ಕಾದಂಬರಿಗೆ ಉತ್ತಮ ವಿಮರ್ಶೆಗಳು ಬಂದಿವೆಯಲ್ಲದೇ ತಮಿಳು ಸಾಹಿತ್ಯದಲ್ಲಿ ಜನಪ್ರಿಯತೆಯೂ ದಕ್ಕಿದೆ. ಜೊ ಮೀನುಗಾರರ ಕುಟುಂಬದಿಂದ ಬಂದವರು. ಆ ಶ್ರಮ ಸಂಸ್ಕೃತಿಯ ಕತೆ ಹೇಳುವುದರಲ್ಲೇ ಅವರಿಗೆ ಆಸಕ್ತಿ. ಮೀನುಗಾರನೊಬ್ಬನ ದೃಷ್ಟಿಕೋನದಿಂದ ಬದುಕನ್ನು ತೆರೆದಿರಿಸಿದ ಕಾದಂಬರಿ ಅದಾಗಿತ್ತು. ಹತ್ತು ವರ್ಷಗಳ ನಂತರ ಅದು ಇಂಗ್ಲಿಷ್‌ಗೆ ಅನುವಾದಗೊಳ್ಳುವ ಅವಕಾಶ ತೆರೆದುಕೊಂಡಿತು. ದೆಹಲಿ ಮೂಲದ ನವಯಾನ ಎಂಬ ಪ್ರಕಾಶನ ಸಂಸ್ಥೆ ಅದನ್ನು ಪ್ರಕಟಣೆಗೆ ಎತ್ತಿಕೊಂಡಿತು. ವಿ. ಗೀತಾ ಎಂಬ ಸ್ತ್ರೀವಾದಿಯೊಬ್ಬರು ಆ ಕೃತಿಯನ್ನು ಅನುವಾದಕ್ಕೆ ಎತ್ತಿಕೊಂಡಿದ್ದರು. ಎಲ್ಲವೂ ಸುಸೂತ್ರವಾಗಿದ್ದರೆ ನಾವೆಲ್ಲರೂ ಆ ಆಂಗ್ಲಕೃತಿಯನ್ನು ಓದಿ, ಮೀನುಗಾರರ ಬದುಕಿನ ಹೃದ್ಯ ತುಣುಕುಗಳನ್ನು, ಭಾವತಲ್ಲಣಗಳನ್ನು ಅಕ್ಷರ ಮುಖೇನ ನಮ್ಮೊಳಗೆ ಇಳಿಸಿಕೊಳ್ಳಬಹುದಾಗಿತ್ತು. ಆದರೆ ಹಾಗಾಗಲಿಲ್ಲ. ಕೃತಿಯೊಂದು ಮುಗ್ಗರಿಸಿದ್ದೇಕೆ ಎಂಬುದರ ಕಾರಣ ಹುಡುಕಿದರೆ, ತಮ್ಮನ್ನು ತಾವು 'ಉದಾರವಾದಿ'ಗಳೆಂದು ಕರೆದುಕೊಳ್ಳುವ, ಅಭಿವ್ಯಕ್ತಿ ಸ್ವಾತಂತ್ರ್ಯದ ಪುರೋಹಿತರು ತಾವೆಂದು ಬಿಂಬಿಸಿಕೊಳ್ಳುತ್ತಿರುವ ಸಾಹಿತ್ಯ ಲೋಕದವರ ತಾಲಿಬಾನಿ ಮನಸ್ಥಿತಿ ಜಾಹೀರಾಗುತ್ತದೆ.
ಆರ್‌ಎನ್ ಜೊ ಡಿಕ್ರೂಜ್ ಏಪ್ರಿಲ್ 9ರಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಬರೆದುಕೊಳ್ಳುತ್ತಾರೆ- 'ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗುವುದಕ್ಕೆ ಸೂಕ್ತ ವ್ಯಕ್ತಿಯಾಗಿದ್ದಾರೆ. ಅವರು ಅಧಿಕಾರಕ್ಕೆ ಬಂದರೆ ಕರಾವಳಿಯ ಜನರೂ ಸೇರಿದಂತೆ ಕಡೆಗಣಿಸಲಾದ ವರ್ಗಗಳಿಗೆ ಬಲ ಸಿಗುತ್ತದೆ.'
ಅಷ್ಟೇ! ನವಯಾನ ಪ್ರಕಾಶನವು ಅನುವಾದ ಒಪ್ಪಂದವನ್ನೇ ರದ್ದು ಮಾಡಿಬಿಟ್ಟಿತು. 'ಮೋದಿಯಂಥ ಫ್ಯಾಸಿಸ್ಟ್ ಹಾಗೂ ವಿಭಜಕ ಶಕ್ತಿಯನ್ನು ಅನುಮೋದಿಸಿರುವ ಲೇಖಕರ ಕೃತಿಯನ್ನು ನಾವು ಪ್ರಕಟಿಸುವುದಿಲ್ಲ' ಇದು ಆ ಪ್ರಕಾಶನ ಸಂಸ್ಥೆ ಕೊಟ್ಟ ಕಾರಣ!
ಸ್ವಾಮಿ! ಜೊ ಅವರದ್ದು ಸಾಹಿತ್ಯಕ ಕೃತಿ. ಆ ಆಧಾರದಲ್ಲೇ ಅಲ್ಲವೇ ಇವರು ಪ್ರಕಟಣೆಗೆ ಮುಂದಾಗಿದ್ದು? ಪುಸ್ತಕ ಹೇಳುತ್ತಿದ್ದದ್ದು ಮೀನುಗಾರರ ಕತೆಯನ್ನೇ ಹೊರತು ಚಾಯ್‌ವಾಲಾಗಳದ್ದೇನೂ ಅಲ್ಲ. ಜೊ ಅವರು ವೈಯಕ್ತಿಕವಾಗಿ ಮೋದಿ ಕುರಿತು ಹೊಂದಿರುವ ಒಲವಿಗೂ ಅವರ ಸಾಹಿತ್ಯ ಕೃತಿಗೂ ಏನು ಸಂಬಂಧ? ಇದೇ ಪರಿಸ್ಥಿತಿ ತಮ್ಮ 'ಸೆಕ್ಯುಲರ್' ಗಣದ, ಕಾಂಗ್ರೆಸ್-ಎಡಪಕ್ಷಗಳನ್ನು ಬೆಂಬಲಿಸುವ ಸಾಹಿತಿಗೇನಾದರೂ ಒದಗಿದ್ದರೆ 'ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ' ಎಂದು ಪ್ರಗತಿಪೀಠ, ಜ್ಞಾನಪೀಠಗಳಲ್ಲಿ ಪ್ರತಿಷ್ಠಾಪಿಸಿಕೊಂಡಿರುವವರೆಲ್ಲ ದೇಶವಿಡೀ ಬೊಬ್ಬೆ ಎಬ್ಬಿಸುತ್ತಿದ್ದರಲ್ಲವೇ? ಕಾನೂನು ಹೋರಾಟದಲ್ಲಿ ಬಸವಳಿದಿದ್ದರಿಂದ ವೆಂಡಿಯ ಪುಸ್ತಕವನ್ನು ಹಿಂದಕ್ಕೆ ಪಡೆಯಬೇಕಾಯಿತಾದರೂ, ಆ ಅಂಶವನ್ನು ಮರೆಮಾಚಿ, 'ಅಭಿಪ್ರಾಯ ಸ್ವಾತಂತ್ರ್ಯ' ಸತ್ತುಹೋಯಿತು ಅಂತ ಗಲಾಟೆ ಮಾಡಿದವರೆಲ್ಲ ಈಗ ತಮ್ಮ ಆತ್ಮಸಾಕ್ಷಿಯನ್ನು ಸಾಯಿಸಿಕೊಂಡಿದ್ದಾರೆಯೇ?
ಜೊ ಅವರು ರೋಮನ್ ಕ್ಯಾಥೊಲಿಕ್ ಆಗಿದ್ದರೂ ತಮ್ಮ ಕಾದಂಬರಿಗಳಲ್ಲಿ ಮತಾಂತರ ಪೂರ್ವದ ದೇಸಿಬೇರುಗಳನ್ನು ಹುಡುಕುತ್ತಿರುವುದು ಅಕ್ಷರಲೋಕದ 'ಉದಾರವಾದಿ' ಗಣಕ್ಕೆ ಸರಿ ಬಂದಿಲ್ಲವೆಂದು ತೋರುತ್ತದೆ! ಹಾಗಾಗಿಯೇ 'ತಮ್ಮವರಲ್ಲದ' ಜೊ ಬಗ್ಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ವಕಾಲತ್ತು ವಹಿಸುವುದೇಕೆ ಎಂದು ಹಿಂದೆ ಸರಿದಂತಿದೆ. ಈ ಹಿಂದೆ ಇವರ ಪುಸ್ತಕಗಳನ್ನು ಚರ್ಚ್‌ನವರು ಸುಟ್ಟುಹಾಕಿದ, ಕೆಲವರು ಮುಗಿಸಿಬಿಡುವೆವೆಂದು ಹೆದರಿಸಿದ ವಿದ್ಯಮಾನಗಳೂ ಜೊ ಬದುಕಿನಲ್ಲಿ ಆಗಿವೆ. ಕ್ರೈಸ್ತ ಧರ್ಮಕ್ಕೆ ಮತಾಂತರವಾದ ನಂತರ ತಮ್ಮ ಸ್ಥಳೀಯ ಸಂಸ್ಕೃತಿಯಿಂದ ದೂರವಾಗಿ ಮೀನುಗಾರ ಸಮುದಾಯ ಎದುರಿಸುತ್ತಿರುವ ತಲ್ಲಣವನ್ನು ತಮ್ಮ ಕೃತಿಗಳಲ್ಲಿ ಬಿಚ್ಚಿಡುವ ಜೊ, 'ಇಂಡಿಯನ್ ಎಕ್ಸ್‌ಪ್ರೆಸ್'ಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳುತ್ತಾರೆ- '1532ರಲ್ಲಿ ಮೂರ್‌ಗಳು ತಮಿಳುನಾಡು ತೀರ ಪ್ರದೇಶವನ್ನು ಆಕ್ರಮಿಸಿದರು. ಮುರುಗನ್ ದೇವಾಲಯವನ್ನು ಕೆಡವಿ, ಸ್ಥಳೀಯ ಸಂಪನ್ಮೂಲದ ಲಾಭ ಪಡೆಯುವುದಕ್ಕೆ ಗೋದಾಮೊಂದನ್ನು ನಿರ್ಮಿಸುವುದು ಅವರ ಉದ್ದೇಶವಾಗಿತ್ತು. ಪರಾಥವರ್ ಸಮುದಾಯಕ್ಕೆ ಸೇರಿದ 2 ಸಾವಿರ ಮಂದಿ ಆಕ್ರಮಣದಲ್ಲಿ ಮಡಿದರು. ಆಗ ಅಸಹಾಯಕರಾದ ನಾವು ಕಲ್ಲಿಕೋಟೆಗೆ ಆಗಷ್ಟೇ ಬಂದಿಳಿದಿದ್ದ ಪೋರ್ಚುಗೀಸರ ಸಹಾಯ ಕೇಳಿದೆವು. ನಾವು ನಿಮಗೆ ಶಸ್ತ್ರ ಪೂರೈಸುತ್ತೇವೆ, ಪ್ರತಿಯಾಗಿ ನಮ್ಮ ಮತವನ್ನು ಅಪ್ಪಿಕೊಳ್ಳಬೇಕು ಅಂತ ಪೋರ್ಚುಗೀಸರು ಹೇಳಿದರು. ಅದಾಗಲೇ ನೂರಾರು ದೇವತೆಗಳನ್ನು ಪೂಜಿಸುತ್ತಿದ್ದ ನಮ್ಮವರಿಗೆ ಮತ್ತೊಬ್ಬ ದೇವರ ಆರಾಧನೆ ತುಂಬ ವ್ಯತ್ಯಾಸವೇನೂ ಅನ್ನಿಸಲಿಲ್ಲ. ಅವರಿಗೆ ಆ ಮಟ್ಟದ ಪ್ರೌಢಿಮೆ ಇತ್ತು. ಆದರೆ ನಂತರದ ತಲೆಮಾರು ಮಾತ್ರ ಧರ್ಮದ ಸಂಸ್ಥೀಕರಣಕ್ಕೆ ಒಳಗಾಯಿತು.' ಇವೆಲ್ಲ ನಮ್ಮ 'ಉದಾರವಾದಿ'ಗಳಿಗೆ ಪ್ರಿಯವಾದೀತಾದರೂ ಹೇಗೆ?
'ನನ್ನ ಕೃತಿ ಇಂಗ್ಲಿಷ್‌ಗೆ ಭಾಷಾಂತರವಾಗಲಿ ಎಂಬ ಕಾರಣಕ್ಕೆ ನನ್ನದಲ್ಲದ ಸಿದ್ಧಾಂತಕ್ಕೆ ಜೋತುಬೀಳಲಾರೆ. ಚಹಾ ಮಾರುವವನೊಬ್ಬ ದೇಶದ ಪ್ರಧಾನಿಯಾಗುವುದಾದರೆ ಅದು ಭಾರತದ ಪ್ರಜಾಪ್ರಭುತ್ವದ ಜಯ ಎಂದೇ ನನ್ನ ಪ್ರತಿಪಾದನೆ. ಇದಕ್ಕೆ ಗಾಬರಿಗೆ ಬಿದ್ದಂತೆ ಪ್ರತಿಕ್ರಿಯಿಸಿರುವವರು ಉದಾರವಾದದ ಸೋಗಿನಲ್ಲಿರುವ ಅಕ್ಷರಲೋಕದ ಮೂಲಭೂತವಾದಿಗಳು' ಅಂದಿದ್ದಾರೆ ಜೊ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವಾದರೂ ಗೌರವಿಸೋಣ.
***
ಇನ್ನೊಂದು ವರ್ತಮಾನದಲ್ಲಿ ಅಸ್ಸಾಮಿನಲ್ಲಿ 32 ಮುಸ್ಲಿಮರು ಹತ್ಯೆಯಾಗಿದ್ದಾರೆ. ಹಾಗಂತ ಅದೇನೂ ಹೊಸತಲ್ಲ. ಅಸ್ಸಾಮ್ ಸಮಸ್ಯೆ ಲಾಗಾಯ್ತಿನಿಂದ ಇದೆಯಾದರೂ ಸ್ಥಳೀಯ ಬೋಡೋಗಳು ಶಸ್ತ್ರಸಜ್ಜಿತರಾಗಿ ಈ ಪರಿ ಸಂಘರ್ಷದಲ್ಲಿ ತೊಡಗಿಸಿಕೊಂಡಿರುವ ನಮೂನೆ ಕಳೆದೊಂದು ದಶಕದ್ದು. ಇದರ ವಿವರಗಳಿಗೆ ಹೋಗುವುದಕ್ಕೆ ಮುಂಚೆ ಪ್ರಶ್ನೆಯೊಂದನ್ನು ಕೇಳಿಕೊಳ್ಳಬೇಕಿದೆ. ಇದೇ ವಿದ್ಯಮಾನ ಎನ್‌ಡಿಎ ಆಡಳಿತದ ಯಾವುದಾದರೂ ರಾಜ್ಯದಲ್ಲಿ ಆಗಿದ್ದರೆ ಪ್ರತಿಕ್ರಿಯೆ ಹೇಗಿರುತ್ತಿತ್ತು? ಮುಸ್ಲಿಮರನ್ನು ಸರ್ಕಾರವೇ ಹತ್ಯೆ ಮಾಡಿಸುತ್ತಿದೆ, ಈ ದೇಶದಲ್ಲಿ ಸೆಕ್ಯುಲರಿಸಮ್ ಸರ್ವನಾಶವಾಗುತ್ತಿದೆ, ಇದು ಜನಾಂಗೀಯ ಮೂಲೋತ್ಪಾಟನೆ, ಮುಖ್ಯಮಂತ್ರಿ ನರಹಂತಕ... ಹೀಗೆಲ್ಲ ಆಕ್ರೋಶಗಳು ಹಾರಾಡದೇ ಇರುತ್ತಿದ್ದವೇ? 'ಕೋಮುವಾದ'ದ ವಿರುದ್ಧ ಎಲ್ಲ 'ಸೆಕ್ಯುಲರ್' ಶಕ್ತಿಗಳು ಹಾಗೂ ಬುದ್ಧಿಜೀವಿ ಗಣ ಒಟ್ಟಾಗುತ್ತಿರಲಿಲ್ಲವೇ? ಆದರೆ ಆಶ್ಚರ್ಯ ನೋಡಿ. 2001ರಿಂದಲೂ ಅಸ್ಸಾಮ್‌ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮುಖ್ಯಮಂತ್ರಿ ತರುಣ್ ಗೊಗೊಯ್ ಸೆಕ್ಯುಲರ್ ಕಟಕಟೆಯಲ್ಲಿ ನಿಲ್ಲುವುದೇ ಇಲ್ಲ. ಇಪ್ಪತ್ತು- ಮೂವತ್ತರ ಲೆಕ್ಕದಲ್ಲಿ ಕಳೆದೊಂದು ದಶಕದಿಂದ ಆವಾಗಾವಾಗ ಆಗುತ್ತಿರುವ ಸಾವು ನೋವುಗಳಿಗೆ ಅವರನ್ನೇಕೆ ನೇರ ಹೊಣೆಯನ್ನಾಗಿಸುವುದಿಲ್ಲ? ಹಂತಕ, ಸೆಕ್ಯುಲರ್ ಚೌಕಟ್ಟನ್ನು ಛಿದ್ರ ಮಾಡುತ್ತಿರುವ ವ್ಯಕ್ತಿ ಎಂಬೆಲ್ಲ ರಣಭೀಕರ ವಿಶೇಷಣಗಳು ತರುಣ್ ಗೊಗೊಯ್‌ಗೇಕೆ ಸಂದಾಯವಾಗುವುದಿಲ್ಲ? ದಶಕಗಳ ಅವ್ಯಾಹತ ಅಕ್ರಮ ವಲಸೆಯೇ ಸ್ಥಳೀಯ ಬೋಡೊಗಳಲ್ಲಿ ಅಸುರಕ್ಷತೆ ತುಂಬಿ ಅವರಲ್ಲಿ ಉಗ್ರ ಸಂಘಟನೆಗಳು ಹುಟ್ಟಿಕೊಳ್ಳುವುದಕ್ಕೆ ಕಾರಣವಾಗಿಸಿತು ಎಂಬುದು ಸರಳ ಸತ್ಯ. ಬಂಗಾಳಿ ಮಾತನಾಡುವ ಮುಸ್ಲಿಮರೆಲ್ಲ ಅಕ್ರಮ ವಲಸಿಗರಲ್ಲ, ಅಕ್ರಮ ವಲಸಿಗರೆಲ್ಲ ಕಿರಿಕಿರಿ ಕೊಡುವವರಲ್ಲ, ಅವರೂ ಹೊಟ್ಟಾಪಾಡಿಗೆ ಬಂದಿದ್ದಲ್ಲವೇ ಎಂಬೆಲ್ಲ ಪೊಳ್ಳು ವಾದಗಳಲ್ಲಿ ಕಾಲ ಕಳೆಯುತ್ತಿರುವವರು ಮೂವತ್ತು ವರ್ಷಗಳಲ್ಲಿ 1700 ಅಕ್ರಮ ವಲಸಿಗರನ್ನು ಗುರುತಿಸಿ ಹಿಂದಕ್ಕೆ ಕಳುಹಿಸಿರುವ ದಾಖಲೆ ತೋರಿಸುತ್ತಿರುವುದೇ ಸಾಧನೆಯೇ? ಸಂಘರ್ಷ, ಸಾವು-ನೋವು ತಪ್ಪಿಸುವುದಕ್ಕೆ ಅಸ್ಸಾಂ ಸರ್ಕಾರ, ಕೇಂದ್ರ ಸರ್ಕಾರಗಳು ಮಾಡಿದ್ದೇನು? ಅಕ್ರಮ ವಲಸೆಯಲ್ಲಿ ಮುಸ್ಲಿಂ ಮತಬ್ಯಾಂಕ್ ಕಂಡು ಮೊದಲು ಸುಮ್ಮನಿದ್ದರು. ನಂತರ ಹಾಗೆ ಅಕ್ರಮವಾಗಿ ನೆಲೆ ನಿಂತವರೇ ಬದ್ರುದ್ದೀನ್ ಅಜ್ಮಲ್‌ನಂಥವರ ನೇತೃತ್ವದಲ್ಲಿ ರಾಜಕೀಯ ಧ್ವನಿ ಕಂಡುಕೊಂಡಾಗ ಕಾಂಗ್ರೆಸ್, ಬೋಡೋಗಳ ತುಷ್ಟೀಕರಣಕ್ಕೂ ಮುಂದಾಯಿತು. ಇವತ್ತಿಗೆ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಆಡಳಿತಾರೂಢ ಕಾಂಗ್ರೆಸ್‌ನ ಮೈತ್ರಿಪಕ್ಷ. ಹೀಗಿರುವಾಗ ಅಲ್ಲಿನ ಹಿಂಸಾಚಾರಕ್ಕೆ, ಸಾವುನೋವುಗಳಿಗೆ ಹೊಣೆಹೊರಬೇಕಾದವರು ಯಾರು? ಸುಮ್ಮನೇ ರಾಜಕೀಯ ಮಾಡಿಕೊಂಡು ವಾಸ್ತವದಲ್ಲಿ 'ಹಂತಕ' ಸ್ಥಾನದಲ್ಲಿರುವವರು ಯಾರು? ಗುಜರಾತ್ ವಿದ್ಯಮಾನಗಳಲ್ಲಿ ಸೆಕ್ಯುಲರ್ ಗಣಕ್ಕೆ ಇರುವ ಆಸಕ್ತಿ ಅಸ್ಸಾಮ್ ಕುರಿತೇಕಿಲ್ಲ?
***
'ಬೆಂಗಳೂರ್ ಮಿರರ್'ನಲ್ಲಿ ಪ್ರಕಟಗೊಂಡ ಸುದ್ದಿಯೊಂದರ ಸಾರಾಂಶ: ತನ್ನ ಮನೆಯ ಹತ್ತಿರ ಮಸೀದಿ ನಿರ್ಮಾಣಕ್ಕೆ ಮುಸ್ಲಿಂ ನಾಗರಿಕರೊಬ್ಬರು ವಿರೋಧಿಸುತ್ತಾರೆ. ಸುಮ್ಮನಿರದಿದ್ದರೆ ನಿನ್ನನ್ನು ಕೊಂದುಬಿಡುತ್ತೇವೆ ಅಂತ ಅದೇ ಸಮುದಾಯಕ್ಕೆ ಸೇರಿದ ರಾಜಕೀಯ ಧುರೀಣರು ಎಚ್ಚರಿಸುತ್ತಾರೆ. ಅವರ ಮನೆ ಮೇಲೆ ಕಲ್ಲುಗಳು ಬೀಳುತ್ತವೆ. ಹೊರಗೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಲಾಗುತ್ತದೆ. ಇವನ್ನೆಲ್ಲ ವಿವರಿಸಿ, ತನಗೆ ಪ್ರಾಣಾಪಾಯವಿರುವ ಬಗ್ಗೆ ಆ ವ್ಯಕ್ತಿ ಪೊಲೀಸರಿಗೆ ದೂರು ನೀಡುತ್ತಾರೆ. ಗೃಹಮಂತ್ರಿಗಳನ್ನೂ ಭೇಟಿ ಮಾಡಿ ಆತಂಕ ಹೇಳಿಕೊಂಡಿದ್ದಾಯಿತು. ಅವೆಲ್ಲದರ ನಡುವೆಯೇ ನಗರದ ಅಂಬೇಡ್ಕರ್ ಕಾಲೇಜ್ ಎದುರು ಆ ವ್ಯಕ್ತಿಯನ್ನು ಇರಿದು ಕೊಲ್ಲಲಾಗುತ್ತದೆ. ಮಸೀದಿ ನಿರ್ಮಾಣಕ್ಕೆ ವಿರೋಧಿಸಿದ್ದರಿಂದಲೇ ತಂದೆಯ ಸಾವಾಯಿತು ಎನ್ನುತ್ತಿರುವ ಅವರ ಇಬ್ಬರು ಮಕ್ಕಳಿಗೆ ಏನೂ ಆಗಿಲ್ಲವೆಂಬಂತೆ ವ್ಯವಸ್ಥೆ ತಣ್ಣಗೆ ಪ್ರತಿಕ್ರಿಯಿಸುತ್ತಿದೆ.
ಇದೇನಾದರೂ ಹಿಂದೂಧರ್ಮದಲ್ಲಾಗಿದ್ದರೆ ಸಮಸ್ತ ಬುದ್ಧಿಜೀವಿಗಣ ಎದ್ದುನಿಲ್ಲುತ್ತಿತ್ತಲ್ಲವೇ? ಮನುಷ್ಯನ ಗೋರಿಯ ಮೇಲೆ ಪೂಜಾಸ್ಥಳ ಕಟ್ಟುವುದು ಯಾವ ನಾಗರಿಕತೆ ಎಂದು ಪ್ರತಿಭಟಿಸುತ್ತಿತ್ತಲ್ಲವೇ? ಹಿಂದೂಧರ್ಮದ ಜಾಯಮಾನವೇ ಇಷ್ಟು ಎಂಬ ತೀರ್ಪು ಕೊಟ್ಟು, ಜೀವವಿರೋಧಿ ಧರ್ಮ ಏಕಾದರೂ ಇರಬೇಕು ಅನ್ನದೇ ಬಿಡುತ್ತಿದ್ದರೇ? ಧಾರ್ಮಿಕ ವ್ಯಕ್ತಿಗಳು ಮಾನವೀಯತೆಯನ್ನು ಕೊಂದು ತಮ್ಮ ವೈಭವ ಮೆರೆಯುವುದಕ್ಕೆ ಹೋದರೆ ಖಂಡಿತ ಪ್ರತಿಭಟಿಸಲೇಬೇಕು. ಆದರೆ 'ಪ್ರಗತಿಪರ'ರೆನಿಸಿಕೊಂಡವರು ಅಲ್ಲೂ ಧರ್ಮಸೂಕ್ಷ್ಮ ಮೆರೆಯುವುದೇಕೆ?
***
ದಿನನಿತ್ಯ 'ಉದಾರವಾದಿ'ಗಳ ಧೋರಣೆ ಕುರಿತು ಇಂಥ ಪ್ರಶ್ನೆಗಳು ಬಿಚ್ಚಿಕೊಳ್ಳುತ್ತಲೇ ಇರುತ್ತವೆ. ಅವರು ಮಾತ್ರ ಇವ್ಯಾವುದಕ್ಕೂ ಉತ್ತರಿಸದೇ ಜಗತ್ತಿನ ಎಲ್ಲ ಅನಿಷ್ಟಗಳಿಗೆ ಬಾಬರಿ ಮಸೀದಿ ಉರುಳಿದ್ದು ಮತ್ತು ಗೋದ್ರೋತ್ತರ ಹಿಂಸಾಕಾಂಡಗಳೇ ಕಾರಣ ಅಂತ ತೀರ್ಪು ಕೊಡುತ್ತಾರೆ.
- ಚೈತನ್ಯ ಹೆಗಡೆ
cchegde@gmail.com