ಅಂಕಣಗಳು

ಎಎನ್‌ಎಫ್‌ನೊಂದಿಗೆ ನನ್ನ ಮುಖಾಮುಖಿ

Published On :

ಇತ್ತೀಚೆಗೆ ಶೃಂಗೇರಿ ಸಮೀಪದ ತನಿಗೋಡು ತಪಾಸಣೆ ಕಟ್ಟೆಯಲ್ಲಿ ನಡೆದ ಎಎನ್‌ಎಫ್ ಕಾರ್ಯಾಚರಣೆಯಿಂದಾಗಿ ಕರ್ನಾಟಕದ ಸಜ್ಜನರಿಗೂ, ಬುದ್ಧಿವಂತರಿಗೂ 'ಸೆಕ್ಯುಲರ್‌' ಎನ್ನಿಸಿಕೊಳ್ಳಲು ಒಂದು ಸದವಕಾಶ ಒದಗಿದೆ. ವರ್ತಮಾನದಲ್ಲಿ ರಾಜಕೀಯ ಸಮ್ಮತ ಅಲ್ಲವಾದರೂ ಕೂಡಾ ಈ ಹಿಂದೆ ನನ್ನ ಮತ್ತು ಎಎನ್‌ಎಫ್ ನಡುವೆ ನಡೆದ ಎರಡು ಮುಖಾಮುಖಿಗಳ ಬಗ್ಗೆ ಹೇಳುವುದು ಸಮಂಜಸ ಎನ್ನಿಸುತ್ತದೆ.
ನಿತ್ಯಹರಿದ್ವರ್ಣ ಸೋಮೇಶ್ವರ ಅಭಯಾರಣ್ಯದ ಭಾಗಗಳಾದ ಹಂಜ, ಶಿರಂಗೂರು, ಮಡಾಮಕ್ಕಿ, ಮಾರ್ಮಣ್ಣು ಮುಂತಾದೆಡೆ ಆರೇಳು ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ನಡೆಸುತ್ತಿದ್ದ ಗಿಡ ನೆಡುವ ವಿಲಕ್ಷಣ ಕಾಮಗಾರಿಯನ್ನು ನೋಡಲು ಹೋಗಿದ್ದೆ. ನೋಡಿದೆ. ಫೋಟೋ ಕ್ಲಿಕ್ಕಿಸಿದೆ. ಹೊರಟೆ. ಮಡಾಮಕ್ಕಿ ಗ್ರಾಮದ ಬೋಗಿಬಚ್ಚಲು ಎಂಬಲ್ಲಿ ಕಾಡಿನ ಹಾದಿಯಲ್ಲಿ ಮೂವರು ಎಎನ್‌ಎಫ್ ಯೋಧರು ಎದುರಾದರು. ವಾಹನವಾಗಲಿ, ಆಯುಧಗಳಾಗಲಿ ನನ್ನ ಕಣ್ಣಿಗೆ ಬೀಳಲಿಲ್ಲ. ವಿಚಾರಿಸಿದರು. ಅಲ್ಲಿಯೇ 3 ಕಿ.ಮೀ ಆಚೆಗೆ ನನ್ನ ಮಾವನ ಮನೆ ಇದ್ದರೂ ಸುಳ್ಳು ಹೇಳದೆ, ಸತ್ಯವನ್ನೇ ಹೇಳಿದೆ. ಫೋಟೋ ನೋಡಿದರು. ನನ್ನನ್ನು ತಡೆದು ವಿಚಾರಿಸುವ ಮೊದಲು ಅವರಿಗೆ ನನ್ನ ಜಾತಿಮತ ತಿಳಿದಿರಲಿಲ್ಲ. ವಿಚಾರಿಸುವಾಗಲೂ ಅವನ್ನು ಕೇಳಲಿಲ್ಲ. 'ಈ ಕಾಮಗಾರಿಯ ಚಿತ್ರ ನಿಮಗ್ಯಾಕೆ?' ಎಂದೂ ಕೇಳಲಿಲ್ಲ. ನನ್ನ ಚೀಲವನ್ನು ತಡಕದೆ 'ಹೋಗಿ' ಎಂದರು. (ಇದಾಗುವ ಎರಡು ತಿಂಗಳ ಹಿಂದೆ, ಮಾಂಡಿ ಮೂರುಕೈ ಬಸ್ ನಿಲ್ದಾಣಕ್ಕೆ ಕಾಡಿನ ಕಾಲ್ದಾರಿ ಮೂಲಕ ಬಂದು ಸೇರಿದ, ಊರಿಗೆ ಹೊಸಬನಾದ ನನ್ನನ್ನು ಅವರು 'ಯಾರು ನೀವು? ಯಾರ ಮನೆಗೆ ಬಂದದ್ದು?' ಎಂದು ಕೇಳಿದ್ದುಂಟು.)
ಅದಾದ ಎರಡು ವರ್ಷಗಳ ಅನಂತರ, ಸೋಮೇಶ್ವರದ ಸಮೀಪ ಸೀತಾನದಿಯ ದಂಡೆಯ ಮೇಲಿರುವ ಒಂದು ಅಕ್ಕಿ ಗಿರಣಿಯಿಂದಾಗಿ ನದೀ ನೀರು ಕಲುಷಿತವಾಗುತ್ತಿದೆ ದಯವಿಟ್ಟು ಒಮ್ಮೆ ನೋಡಿ ಹೋಗಿ, ಯಾವುದಾದರೂ ಒಂದು ಪತ್ರಿಕೆಗೆ ಬರೆಯಿರಿ ಎಂದು ಆ ಊರಿನ ಒಂದಿಬ್ಬರು ಯುವಕರು ದುಂಬಾಲುಬಿದ್ದರು. ವಾರದ ಅನಂತರ ಒಂದು ದಿನ, ನದಿಯ ಪಾತ್ರದಲ್ಲಿಯೇ ಎರಡು ಕಿ.ಮೀ ನಡೆದು ಯಾರಿಗೂ ತಿಳಿಯದಂತೆ ಮಿಲ್ಲಿನ, ಅದು ಬಿಡುವ ಕಲುಷಿತ ನೀರಿನ, ನಾರುತ್ತಿರುವ ತೊರೆಯ ಚಿತ್ರಗಳನ್ನು ತೆಗೆದು, ರಸ್ತೆ ಸೇರಿದೆ. ಮಿಲ್ಲಿನಿಂದ ಅರ್ಧ ಕಿ.ಮೀ ಪೂರ್ವದಲ್ಲಿರುವ ಪರಿಚಿತರ ಅಂಗಡಿಯಲ್ಲಿ ಎಳನೀರು ಕುಡಿದು, ಅವರಿಂದಲೇ ಮಿನಿ ಬಸ್ಸನ್ನು ನಿಲ್ಲಿಸಿಕೊಂಡು ಉಡುಪಿಗೆ ಟಿಕೆಟ್ ತೆಗೆದೆ. ಅಲ್ಲಿಂದ ಹೊರಟ ಬಸ್ಸು ಹೆಬ್ರಿ ನಿಲ್ದಾಣ ಒಳಹೊಕ್ಕು ಹೊರಬಂದು ಇನ್ನೇನು ಪೋಲಿಸ್ ಸ್ಟೇಶನ್ ದಾಟಿತು ಎನ್ನುವಷ್ಟರಲ್ಲಿ ಎರಡು ಟಾಟಾ ಸುಮೋ ವಾಹನಗಳು ವೇಗವಾಗಿ ಬಂದು ಬಸ್ಸನ್ನು ಅಡ್ಡಗಟ್ಟಿ ನಿಂತವು. ಆಯುಧ ಹಿಡಿದ ಎಎನ್‌ಎಫ್ ಯೋಧರು ಇಳಿದು ಬಂದರು. ಒಬ್ಬ ಯೋಧ ಮತ್ತು ಇನ್ನೊಬ್ಬ ಸಾಮಾನ್ಯ ಧಿರಿಸಿನ ವ್ಯಕ್ತಿ ಬಸ್ಸನ್ನೇರಿದರು. ಆ ಯೋಧನ ಕೈಯಲ್ಲಿ ಆಯುಧವಿರಲಿಲ್ಲ. ಆ ವ್ಯಕ್ತಿ ಸೀದಾ ನನ್ನ ಬಳಿ ಬಂದು 'ಯಾರು ನೀವು?' ಎಂದು ಕೇಳುವ ತನಕ ಅವರ ಗುರಿ ನಾನು ಎಂಬುದು ನನಗೆ ತಿಳಿಯಲಿಲ್ಲ. ಆ ವ್ಯಕ್ತಿ ಎಎನ್‌ಎಫ್‌ನ ಸ್ಥಳೀಯ ಮಾಹಿತಿದಾರ. ಅವರ ಪರಿಚಯ ನನಗಾಯಿತು. ನನ್ನ ಪರಿಚಯ ಅವರಿಗಿರಲಿಲ್ಲ. ಕೇಳಿದರು. ವಿವರ ಹೇಳಿದೆ. ನನ್ನ ಗುರುತುಚೀಟಿ ನೋಡಿದರು. ಫೋಟೋಗಳನ್ನು ನೋಡಿದರು. ಯಾರಾದರೂ ಇಬ್ಬರು ಸ್ಥಳೀಯರ ಪರಿಚಯ ಕೇಳಿದರು. ಇಬ್ಬರ ಹೆಸರು, ದೂರವಾಣಿ ಸಂಖ್ಯೆ ಪಡೆದುಕೊಂಡರು. ನನ್ನನ್ನು ತಡೆದು ವಿಚಾರಿಸುವ ಮೊದಲು ಅವರಿಗೆ ನನ್ನ ಜಾತಿಮತ ತಿಳಿದಿರಲಿಲ್ಲ ಅನಂತರವೂ ಅವನ್ನು ಕೇಳಲಿಲ್ಲ. ಮಿಲ್ಲಿನ ಉಸಾಬರಿ ನಿಮಗ್ಯಾಕೆ ಎಂದು ಕೇಳಲಿಲ್ಲ. ಇದೆಲ್ಲ ಕೇವಲ 2-3 ನಿಮಿಷಗಳಲ್ಲಿ ನಡೆದುಹೋಯಿತು. ಚೀಲದಿಂದ ಕ್ಯಾಮೆರಾ ತೆಗೆಯುವಂತೆ ಹೇಳಿದರೇ ವಿನಃ ನನ್ನ ಚೀಲವನ್ನು ಅವರು ತಪಾಸಣೆ ನಡೆಸಲಿಲ್ಲ. ಅದರೊಳಗೆ ಅಡಕೆ ಇದೆಯೇ, ಆನೆ ಇದೆಯೇ ಎಂದು ನೋಡಲು ಕೈಯನ್ನಾಗಲೀ, ದೃಷ್ಟಿಯನ್ನಾಗಲೀ ತೂರಿಸಲಿಲ್ಲ. ಬೆವರಿನಿಂದ ಕೊಳೆಯಾದ ಬಟ್ಟೆ ಬಿಟ್ಟರೆ ನನ್ನಲ್ಲಿ ಅಡಗಿಸುವಂತಹುದು ಏನೂ ಇರಲಿಲ್ಲ ಆದುದರಿಂದ ನಾನು ಓಡಲಿಲ್ಲ.   
ತನಿಗೋಡಿನಲ್ಲಿ ನಡೆದದ್ದು ಎಎನ್‌ಎಫ್ ಕಾರ್ಯಾಚರಣೆ. ಆ ನಿರ್ದಿಷ್ಟ ಯೋಧನ ಕುಟುಂಬದ ಕಟ್ಟುಕಟ್ಟಳೆ-ಕಾಲಾವಧಿ ಸೇವೆಯೋ, ಹರಕೆಯೋ ಆಗಿರಲಿಲ್ಲ. ಹಾಗಿದ್ದೂ ಯೋಧನ ಹೆಸರನ್ನು ಮಾಧ್ಯಮದವರು ಪ್ರಕಟಿಸಿದ್ದು ಉಚಿತವೇ? ಇನ್ನು ಆತನ, ಆತನ ಸಂಸಾರದ ರಕ್ಷಣೆಯ ಹೊಣೆ ಯಾರದ್ದು?

 - ದೇವು ಹನೆಹಳ್ಳಿ ಬಾರಕೂರು, ಉಡುಪಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.