ಇದು ಯಾವ ಸ್ವಾರ್ಥಕ್ಕೂ ಹುಟ್ಟಿರಲಿಲ್ಲ

ಕರ್ನಾಟಕದ ಇದುವರೆಗಿನ ಚುನಾವಣೆಗಳನ್ನು ಅವಲೋಕಿಸಿದಾಗ ಈ ಬಾರಿಯ ಚುನಾವಣೆ ಹಲವು ವಿಶೇಷತೆಗಳನ್ನು ಕಂಡಿತು. ಪರಸ್ಪರ ಕೆಸರೆರಚಾಟಗಳು, ಗೊಂದಲಗಳು, ಕಾನೂನಿನ ಹಿಡಿತದಿಂದ ನುಸುಳುವ ತಂತ್ರಗಳನ್ನು ಹೆಣೆಯುವುದು, ಕೊನೆಗೆ ಕರ್ತವ್ಯಭ್ರಷ್ಟರಾಗಬಾರದೆಂದು ಮನಸ್ಸಿಲ್ಲದ ಮನಸ್ಸಿನಿಂದ ವೋಟು ಹಾಕುವುದು. ಚುನಾವಣೆಗಳೆಂದರೆ ಇಷ್ಟೇ ಎಂದು ಆಂದುಕೊಂಡಿದ್ದ ದೊಡ್ಡ ವರ್ಗವೊಂದು ಈ ಬಾರಿ ಕಾಣೆಯಾಗಿತ್ತು. ಅಂದರೆ ಇದುವರೆಗಿನ ಚುನಾವಣೆಗಳಿಗಿಂತ ಈ ಬಾರಿ ಮೊದಲ ಮತದಾರರು ಹೆಚ್ಚಿಗೆ ಕಂಡುಬಂದರು. ಹೆಚ್ಚಿನ ಸಂಖ್ಯೆಯಲ್ಲಿ ಯುವಜನಾಂಗ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತು. ಹಲವು ವಿನೂತನ ಕಾರ್ಯಕ್ರಮಗಳು ಈ ಚುನಾವಣೆಯಲ್ಲಿ ಗಮನ ಸೆಳೆದವು. ಚುನಾವಣಾ ಘೋಷಣೆಗೂ ಮೊದಲು ರಾಜ್ಯದ ಹಲವು ಭಾಗಗಳಲ್ಲಿ ಬೈಕ್ ರ್ಯಾಲಿಗಳು, ಉತ್ಸವಗಳು ನಡೆದವು.
ಇವೆಲ್ಲಕ್ಕೂ ಕಾರಣ ಒಂದು ಮೋದಿ ಅಲೆ ಮತ್ತು ಇನ್ನೊಂದು ನಮೋ ಬ್ರಿಗೇಡ್.
ರಾಜಕೀಯೇತರ ಸಂಘಟನೆಯೊಂದು ಈ ಪರಿಯಲ್ಲಿ ಕೆಲಸ ಮಾಡಬಹುದೇ ಎಂದು ಕೆಲವರು ಆಚ್ಚರಿ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಇದೊಂದು ರಾಜಕೀಯ ಪಕ್ಷವೋ ಎಂಬಂತೆ ಕಟುಟೀಕೆಯನ್ನೂ ಮಾಡಿದ್ದರು. ಯುವಕರಲ್ಲಿ ರಾಜಕೀಯ ಪ್ರಜ್ಞೆಯನ್ನು ಹುಟ್ಟುಹಾಕಿದ 'ನಮೋ ಬ್ರಿಗೇಡ್' ಇದೀಗ ತನ್ನ ಮಾತಿನಂತೆ ಚುನಾವಣಾ ಪ್ರಕ್ರಿಯೆಗಳ ನಂತರ ಅದರ ವಿಸರ್ಜನೆಯನ್ನು ಮಾಡಿದೆ. ಈ ಹೊತ್ತಿನಲ್ಲಿ ಯಶಸ್ಸಿನ ವಾರಸುದಾರರಾಗಲು ಕೆಲವರು ಹೊರಟಂತಿದೆ. ಆದರೆ ಸಮಾನ ಮನಸ್ಕ ಸಂಘಟನೆಯ ಯಶಸ್ಸು ಯಾರಿಗೆ ಸಿಗಬೇಕಾಗಿದೆ? ರಾಮಾಯಣ ಯುದ್ಧದ ಯಶಸ್ಸಿಗೆ ಕಾರಣರಾರು ಎಂದಷ್ಟೇ ಕ್ಷುಲ್ಲಕವಾದ ಸಂಗತಿ ಇದು. ಹೇಗೆ ಲಂಕೆಗೆ ದಾರಿ ತೋರಿಸಿದವರು, ಸೇತುವೆ ಕಟ್ಟಿದವರು, ಅಳಿಲು ಕೂಡಾ ಯಶಸ್ಸಿನ ಪಾಲುದಾರರೋ ಹಾಗೆಯೇ ನಮೋ ಬ್ರಿಗೇಡಿನ ಯಶಸ್ಸಿಗೆ ಎಲ್ಲರೂ ಪಾಲುದಾರರೇ. ಕಾರ್ಯಕರ್ತರೆಲ್ಲರೂ ಪಾಲುದಾರರೇ. ನಮೋ ಬ್ರಿಗೇಡಿನಲ್ಲಿ ಎಲ್ಲರೂ ಇದ್ದರು. ಸಾಮಾನ್ಯ ನಾಗರಿಕನಿದ್ದ. ಬೀಡಿ ಕಾರ್ಮಿಕ, ಕಟ್ಟಡ ಕಾರ್ಮಿಕ, ಮೇಸ್ತ್ರಿ ಇದ್ದ. ಅಟೋ ಚಾಲಕನಿದ್ದ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರು. ವೈದ್ಯ-ಎಂಜಿನಿಯರ್ಗಳೂ ಇದ್ದರು. ಆದರೆ ನಮೋ ಬ್ರಿಗೇಡಿನ ಎಲ್ಲಾ ಕೆಲಸಗಳನ್ನು ಎಲ್ಲರೂ ಮಾಡಿದರು. ಖರ್ಚನ್ನು ಅವರವರೇ ನೋಡಿಕೊಂಡರು. ಹಲವು ಯುವಕರು ಬೆಂಗಳೂರಿನಂಥ ಮಹಾನಗರಗಳಿಂದ ತಮ್ಮ ಕೆಲಸ ಬಿಟ್ಟು ನಮೋ ಬ್ರಿಗೇಡ್ನ ಭಾಗವಾದರು. ತಿಂಗಳುಗಳವರೆಗೆ ನಡೆದ ನಮ್ಮ ರಥಯಾತ್ರೆಯಲ್ಲಿ ಬಾಬಾರದ ವ್ಯಕ್ತಿಯೊಬ್ಬರೂ ಮೋದಿ ಆಭಿಮಾನಕ್ಕಾಗಿ ಚಾಲಕರಾಗಿ ಬಂದರು. ರಾಜ್ಯದ ಮೂಲೆಮೂಲೆಗಳಲ್ಲೂ 'ನಮೋ ಬ್ರಿಗೇಡ್'ನ ಘಟಕಗಳಿದ್ದರೂ ಅಲ್ಲೆಲ್ಲೂ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಎನ್ನುವಂಥ ಹುದ್ದೆ ಅಥವಾ ಜವಾಬ್ದಾರಿಗಳನ್ನು ಯಾರೂ ತೆಗೆದುಕೊಳ್ಳಲಿಲ್ಲ. ಅದರಲ್ಲಿ ಎಲ್ಲರೂ ಸ್ವಯಂಸೇವಕರೇ, ಕಾರ್ಯಕರ್ತರೇ. ಯುವಕರು ಹುದ್ದೆ ಅಥವಾ ಜವಾಬ್ದಾರಿಗಳ ಹಂಗಿಲ್ಲದೆ ಕೆಲಸ ಮಾಡಬಲ್ಲರು ಎಂಬುದನ್ನು ನಮೋ ಬ್ರಿಗೇಡ್ ತೋರಿಸಿಕೊಟ್ಟಿತು. ಇತ್ತೀಚಿನ ಯಾವ ಸಂಘಟನೆಗೆ ಇದು ಸಾಧ್ಯವಾಗಿದೆ?
ನಮೋ ಬ್ರಿಗೇಡಿನ ಹುಟ್ಟನ್ನು ದೈವಾನುಗ್ರಹವೆಂದೇ ಹೇಳಬೇಕು. ಪೂಜ್ಯ ಕಾಶೀಮಠಾಧೀಶರಾದ ಶಿಮದ್ ಸುಧೀಂದ್ರ ತೀರ್ಥರ ಚಾತುರ್ಮಾಸದ ಸಮಯದಲ್ಲಿ ನಾನು ನನ್ನ ಇನ್ನೋವಾ ಕಾರಿನ ಗಾಜಿಗೆ ಅವರ ಚಿತ್ರರುವ ಸ್ಟಿಕ್ಕರನ್ನು ಅಂಟಿಸಿದ್ದೆ. ಚಾತುರ್ಮಾಸ ಮುಗಿದ ಮೇಲೆ ಆ ಸ್ಟಿಕ್ಕರನ್ನು ತೆಗೆಯಬೇಕಿತ್ತು. ಅದೇ ಹೊತ್ತಿಗೆ ಭಾಜಪದಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಚರ್ಚೆಗಳು ಬಿರುಸಾಗಿ ನಡೆಯುತ್ತಿದ್ದವು. ಗುಜರಾತಿನ ನರೇಂದ್ರ ಮೋದಿಯವರೇ ಅಭ್ಯರ್ಥಿಯಾಗಬೇಕು ಎಂಬ ಕೂಗು ಕೇಳಿಬರತೊಡಗಿತು. ದೇಶಾದ್ಯಂತ ಯುವಕರು ಮೋದಿಯವರ ಅಭಿಮಾನಿಗಳಾಗಿರುವಂತೆಯೇ ನಮ್ಮ ಗೆಳೆಯರೂ ಅವರ ಅಭಿಮಾನಿಗಳಾಗಿದ್ದೆವು. ಸ್ವಾಮೀಜಿಯವರ ಸ್ಟಿಕ್ಕರ್ ಅಂಟಿಸಿದ ಜಾಗದಲ್ಲಿ ಮೋದಿಯವರ ಸ್ಟಿಕ್ಕರ್ ಅಂಟಿಸಿದರೆ ಹೇಗೆ ಎಂಬ ಯೋಚನೆ ಅಚಾನಕ್ಕಾಗಿ ಹೊಳೆಯಿತು. ತಕ್ಷಣವೇ ಅದು ಕಾರ್ಯರೂಪಕ್ಕೂ ಬಂತು. ಫೇಸ್ಬುಕ್ಕಿನಲ್ಲಿ ಅದನ್ನು ಹಾಕಿಯೂ ಆಯಿತು. ನೋಡನೋಡುತ್ತಲೇ ಎರಡೇ ಎರಡು ದಿನದಲ್ಲಿ ಲಕ್ಷಾಂತರ ಲೈಕ್ಗಳು, ಶೇರ್ಗಳಾದವು. ಅಂತರ್ಜಾಲದಲ್ಲಿನ ಕ್ಲಿಕ್ಗಳು ಪರಿವರ್ತನೆ ಉಂಟುಮಾಡಿಬಿಡುತ್ತವೆಯೇ ಎಂದು ಕೆಲವು ಜನರು ಹೇಳಿದ್ದರು. ಏಕೆ ಸಾಧ್ಯವಿಲ್ಲ ಎಂದು ನಾವು ಸಮಾನ ಮನಸ್ಕರು ಚರ್ಚಿಸಿದೆವು. ಸರ್ವಾಧಿಕಾರಗಳನ್ನೇ ಕಿತ್ತೊಗೆದ ಸಾಮಾಜಿಕ ಜಾಲತಾಣಗಳನ್ನು ಶಕ್ತಿಯಾಗಿಸಬಹುದು ಎಂದು ಚಿಂತಿಸಿದೆವು. ಆ ಕ್ಲಿಕ್ಗಳನ್ನು ಒಟ್ಟು ಸೇರಿಸಿದೆವು. ನರೇಂದ್ರ ಮೋದಿಯವರಿಗಿದ್ದ ಜನಪ್ರಿಯತೆ ಬೃಹತ್ ಜನಸಮೂಹವನ್ನು ಒಂದುಗೂಡಿಸಿತ್ತು. ನಮ್ಮ ಕರೆಗೆ ಅಂದು ಕ್ಲಿಕ್ ಹೊಡೆದ ಸಾವಿರಾರು ಯುವಕರು ಬಂದರು. ಅದೇ 'ನಮೋ ಬ್ರಿಗೇಡ್' ಆಯಿತು. ಇದು ಪ್ರಾರಂಭವಾಗಿದ್ದು ಆಕಸ್ಮಿಕ ಎನಿಸಬಹುದು. ಆದರೆ ಅನಿರೀಕ್ಷಿತವಂತೂ ಅಲ್ಲ. ಒಂದು ಸ್ಟಿಕ್ಕರ್ ಅದಕ್ಕೆ ನಿಮಿತ್ತವಾಗಿತ್ತೇ ಹೊರತು ಅದರ ಶಕ್ತಿ ಯುವಕರ ಉತ್ಸಾಹವೇ ಆಗಿತ್ತು. ಪೂಜ್ಯ ಸ್ವಾಮೀಜಿಯವರ ಸ್ಟಿಕ್ಕರ್ ಅಂಟಿಸಿದ್ದ ಜಾಗದಲ್ಲಿ ಮೋದಿಯವರ ಸ್ಟಿಕ್ಕರ್ ಅಂಟಿಸಿದ್ದು ಭಾವನಾತ್ಮಕವಾಗಿಯೂ ನಮಗೆ ಶಕ್ತಿ-ಉತ್ಸಾಹಗಳನ್ನು ಕೊಟ್ಟಿದ್ದು ಸತ್ಯ.
ಕಾರ್ಯರೂಪಕ್ಕೆ ಇಳಿದ 'ನಮೋ ಬ್ರಿಗೇಡ್'ಗೆ ನಾಡಿನ ಮಾಧ್ಯಮಗಳು ಯೋಗ್ಯ ಪ್ರಚಾರವನ್ನೇ ಕೊಟ್ಟವು. ಯುವಕರು ದಿನೇದಿನೇ 'ನಮೋ ಬ್ರಿಗೇಡ್ನತ್ತ' ಧಾವಿಸತೊಡಗಿದರು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಘಟಕಗಳನ್ನು ಆರಂಭಿಸುತ್ತೇವೆ ಎಂಬ ಕರೆಗಳೂ ಬರತೊಡಗಿದವು. ಯುವಕರನ್ನು ಅಂತರ್ಜಾಲದಿಂದ ಹೊರಗೆ ತರುವ ಕೆಲಸ ಆಗಬೇಕಾಗಿತ್ತು. ಹಾಗಾಗಿ ರಾಜ್ಯಾದ್ಯಂತ ಕಾರ್ಯಕ್ರಮಗಳಾದವು. ದಿನ ಕಳೆದಂತೆ ನಮೋ ಬ್ರಿಗೇಡ್ ಖ್ಯಾತವಾಗತೊಡಗಿತು.
'ನಮೋ ಬ್ರಿಗೇಡ್' ಒಂದು ರೀತಿಯಲ್ಲಿ ನರೇಂದ್ರ ಮೋದಿಯವರ ಅಭಿಮಾನಿಗಳ ಸಂಘ. ಆದರೆ ನಮ್ಮ ಅಭಿಮಾನವೆಲ್ಲವೂ ತತ್ವಾಧಾರಿತವಾಗಿಯೇ ಇತ್ತು. ಇದು ಹೊರನೋಟಕ್ಕೆ ವ್ಯಕ್ತಿಯೊಬ್ಬನನ್ನು ಬೆಂಬಲಿಸುವ ಸಂಘಟನೆಯಾಗಿ ಕಂಡರೂ ವಾಸ್ತವವಾಗಿ 'ನಮೋ ಬ್ರಿಗೇಡ್' ಅಪ್ಪಟ ತತ್ವ ನಿಷ್ಠ ಸಂಘಟನೆ. ನಾವು ಯಾರಿಂದಲೂ ಹಣ ಕೇಳಲಿಲ್ಲ. ಎಲ್ಲವನ್ನೂ ಕಾರ್ಯಕರ್ತರೇ ವಹಿಸಿಕೊಂಡರು. ಹೀಗೆಯೇ ಹಲವು ಕಾರ್ಯಾಗಾರಗಳು, ಚಿಂತನ ಸಭೆಗಳು, ಮಾರ್ಗದರ್ಶನ ಸಭೆಗಳು, ಕಾರ್ಯಕರ್ತರ ಪ್ರವಾಸಗಳ ಮೂಲಕ ಯುವಕರಿಗೆ ಮತದಾನದ ಅರಿವನ್ನು 'ನಮೋ ಬ್ರಿಗೇಡ್' ಮೂಡಿಸಿತು. ಇದರಲ್ಲಿ ನಾವು ನರೇಂದ್ರ ಮೋದಿಯವರನ್ನು ಬೆಂಬಲಿಸುತ್ತಿದ್ದರೂ ನಾವು ಕೆಲವು ಕಟ್ಟುಪಾಡುಗಳನ್ನು ಹಾಕಿಕೊಂಡೆವು. ಭಾಜಪದೊಂದಿಗೆ ಆಗಲೀ, ಅಭ್ಯರ್ಥಿಗಳ ಜೊತೆಗಾಗಲೀ ಯಾವುದೇ ಸಂಬಂಧವನ್ನು ಇಟ್ಟುಕೊಳ್ಳಲಿಲ್ಲ. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲಿಲ್ಲ. ನಮ್ಮ ಕಾರ್ಯಕರ್ತರ್ಯಾರೂ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಚುನಾವಣೆ ನೀತಿಸಂಹಿತೆ ಜಾರಿಯಾದ ದಿನದಂದೇ ನಮ್ಮ ಕೆಲಸ ಮುಗಿದುಹೋಗಿತ್ತು. ಹಳ್ಳಿಹಳ್ಳಿಗಳಿಗೂ ನರೇಂದ್ರ ಮೋದಿಯವರ ಮಹತ್ವ ಮುಟ್ಟಬೇಕು ಎಂಬ ಆಶಯ ಈಡೇರಿತ್ತು.
ಇದೀಗ ನಮೋ ಬ್ರಿಗೇಡ್ ಮುಗಿದ ಅಧ್ಯಾಯ. ಒಳ್ಳೆಯದು ಇದ್ದಲ್ಲಿ ಕೆಟ್ಟದ್ದು ಇದ್ದೇ ಇರುತ್ತದೆ ಎನ್ನುವುದು ಪ್ರಕೃತಿ ನಿಯಮ. ನಮ್ಮ ಕಾರ್ಯಕರ್ತರು ಒಂದು ಉದ್ದೇಶ, ಒಂದು ಧ್ಯೇಯ ಸಾಧನೆಗಾಗಿ, ಒಂದು ಗುರಿಗಾಗಿ ಶ್ರಮಿಸುತ್ತಿದ್ದರೆ ಕೆಲವರು ಸ್ವಾರ್ಥಸಾಧನೆಗಾಗಿ ಸಂಘಟನೆ ಸೇರಿಕೊಂಡರೋ ಎನಿಸುತ್ತದೆ. ಪದವಿ, ಸಂಪಾದನೆಗಾಗಿ ಸಾಮಾಜಿಕ ಸಂಘಟನೆಗಳನ್ನೂ ಬಳಸಿಕೊಳ್ಳುವ ಕಾಲದಲ್ಲಿ ಪ್ರಾಮಾಣಿಕ ಸಂಘಟನೆಗಳೂ ಇರುತ್ತವೆ ಎಂಬುದನ್ನು ನಮೋ ಬ್ರಿಗೇಡ್ ತೋರಿಸಿದರೆ ಇದೀಗ ಅದರ ಮೇಲೂ ಅಪಪ್ರಚಾರ ಆರಂಭವಾಗಿದೆ.
ರಾವಣ ವಧೆಯಾಗಿ ರಾಮ ಪಟ್ಟಾಭಿಷೇಕವಾದಾಗ ಆಂಜನೇಯನಿಗೆ ಹಲವು ಆಯ್ಕೆಗಳಿದ್ದವು. ಆತ ವಾನರ ಪ್ರಮುಖನೂ ಆಗಬಹುದಿತ್ತು, ಸ್ವರ್ಣಲಂಕೆಯಲ್ಲೂ ಆತ ಇರಬಹುದಿತ್ತು. ಆಯೋಧ್ಯೆಯಲ್ಲೂ ಆತ ಬಯಸಿದ್ದರೆ ಉನ್ನತ ಹುದ್ದೆ ಸಿಗಬಹುದಿತ್ತು. ಆದರೆ ಹನುಮ ರಾಮಸೇವಕನಾಗಿಯೇ ಉಳಿದ. ಯಾರು ಏನೇ ಅಂದರೂ ಅಚಲನಾಗಿ ಉಳಿದ. ಅತೃಪ್ತ ಮನಸ್ಸುಗಳು ಹಳಿದುಕೊಳ್ಳುತ್ತಿವೆ. ನಮಗೆ ಹನುಮ ಪ್ರೇರಣೆಯಾಗುತ್ತಾನೆ.
- ನರೇಶ್ ಶೆಣೈ
ನಮೋ ಬ್ರಿಗೇಡ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


