

ಮಕ್ಕಳಿಗೀಗ ಬೇಸಿಗೆ ರಜೆ. ಪ್ರವಾಸ ಹೋಗುವ ಕಾಲ. ಸಮುದ್ರ, ನೀರು ಎಂದರೆ ಮಕ್ಕಳಿಗೂ ಪಂಚಪ್ರಾಣ. ನೀರಲ್ಲಿನ ಮೋಜಾಟಕ್ಕೆ ಅವರನ್ನು ಕರೆದುಕೊಂಡು ಹೋದರಂತೂ ವರ್ಷಗಳ ಕಾಲ ಅವರ ಮನದಲ್ಲಿ ಖುಷಿಯ ನೆನಪು ಹಸಿರು. ಹೀಗಾಗಿಯೇ ಪಾಲಕರು ಸಾಮಾನ್ಯವಾಗಿ ಧಗೆ ಇದ್ದರೂ ಕರಾವಳಿಯತ್ತ ಪ್ರವಾಸ ಹೋಗಲು ಮನಸ್ಸು ಮಾಡುವುದು. ನಮ್ಮ ಕರಾವಳಿ ತೀರಗಳಲ್ಲಿ ಕೆಲದಿನಗಳಿಂದ ಮಳೆಯೂ ಬೀಳುತ್ತಿದೆ, ವಾತಾವರಣವೂ ಕೊಂಚ ತಣ್ಣಗಿದೆ.
ಗೊತ್ತಿರಲಿ, ಸಮುದ್ರ ಕೇವಲ ಜಲರಾಶಿಯಷ್ಟೇ ಅಲ್ಲ. ಅದು ನಿಗೂಢಗಳ ಸಂಗಮ. ಸಮುದ್ರದ ನೀರಿನ ತಾಪಮಾನ ಮತ್ತು ನೀರಿನ ಮಟ್ಟದಲ್ಲಿ ತುಸು ಏರಿಳಿತವಾದರೂ ದೇಶದೇಶಗಳ ಆರ್ಥಿಕತೆಯೇ ಏರುಪೇರು. ರೈತರು ಕಂಗಾಲು. ಅನ್ನ, ಆಶ್ರಯ ಕೊಡುವ ವಸುಂಧರೆಯೂ ನಲುಗಿಬಿಡುತ್ತಾಳೆ. ವಿಜ್ಞಾನಿಗಳಿಗೂ ಸಮುದ್ರದ ತಾಪಮಾನದ ಮಟ್ಟ ಸದಾ ಕುತೂಹಲದ ವಿಷಯ. ಆ ಕುರಿತು ಅವರದ್ದೊಂದು ಕಣ್ಣು ಯಾವತ್ತೂ ನೆಟ್ಟೇ ಇರುತ್ತದೆ. ಪೆಸಿಫಿಕ್ ಸಮುದ್ರದ ಇಂಥದ್ದೇ ವಿದ್ಯಮಾನ ಎಲ್ನಿನೋ. ಈ ಬಗ್ಗೆ ಹಿಂದಿನ ವಾರವಷ್ಟೇ ಒಂದಷ್ಟು ಮಾಹಿತಿ ನೀಡಲಾಗಿತ್ತು. ಅದರ ವಿಸ್ತೃತ ರೂಪ. ಎಲ್ನಿನೋ ಹೆಸರು ಕೇಳಿದರೇ ಸಾಕು, ಪಾಶ್ಚಾತ್ಯ ರಾಷ್ಟ್ರಗಳು ತಲ್ಲಣಿಸಿಬಿಡುತ್ತವೆ.
ಎಲ್ನಿನೋ ಎಂದರೆ ಪೆಸಿಫಿಕ್ ಸಾಗರದ ನೀರು ನಿರ್ದಿಷ್ಟ ಪ್ರದೇಶದಲ್ಲಿ ಬಿಸಿಯಾಗುವುದು. ಈ ಮಹಾಸಾಗರದ ಪೂರ್ವದಲ್ಲಿನ ಭೌಗೋಳಿಕ ತಾಪಮಾನ ಮತ್ತು ಪಶ್ಚಿಮದಲ್ಲಿ ವಾಯುಮಂಡಲದ ಉಷ್ಣತೆಯಲ್ಲಿ ಏಕಕಾಲದಲ್ಲಿ ಏರಿಳಿತಗಳು ಸಂಭವಿಸುವ ಕ್ರಿಯೆ. ಆಗ ಒಂದು ಭಾಗದಲ್ಲಿ ತಂಪು ಹವೆ, ಇನ್ನೊಂದೆಡೆ ಉರಿ. ಈ ರೀತಿಯ ತೂಗಾಟ ಹೇಗೆ ಸಾಧ್ಯ ಎನ್ನುವುದು ಇನ್ನೂ ಅಧ್ಯಯನದ ಹಂತದಲ್ಲೇ ಇದೆ. ಆದರೆ ವಿಜ್ಞಾನಿಗಳು ಮತ್ತು ಹವಾಮಾನ ತಜ್ಞರು ಎಲ್ನಿನೋ ಯಾವಾಗ ಸಂಭವಿಸಬಹುದು ಎನ್ನುವುದನ್ನು ಅಂದಾಜಿಸುವಷ್ಟರ ಮಟ್ಟಿಗೆ ಮುನ್ನಡೆ ಸಾಧಿಸಿದ್ದಾರೆ. ಉಷ್ಣವಲಯದಲ್ಲಿ ಇದು ಅಪರೂಪಕ್ಕೊಮ್ಮೆ ಸಂಭವಿಸುವ ಸಹಜ ಪ್ರಕ್ರಿಯೆ ಅಂತಲೇ ಭಾವಿಸಿಕೊಳ್ಳೋಣ. ಈಗೀಗ ಇದಕ್ಕೆ ಮಹತ್ವ ಬಂದಿರುವುದು ಏಕೆಂದರೆ ನೀರು ಬಿಸಿಯಾಗುವ ಪ್ರಕ್ರಿಯೆ ಅಸಮಂಜಸವಾಗಿರುವುದು. ನಮ್ಮ ಋತುಮಾನಗಳಲ್ಲಿ ಏರಿಳಿತವಾದರೆ ಏನಾಗಬಹುದು ಎನ್ನುವುದನ್ನು ಸ್ವಲ್ಪ ಊಹಿಸಿ. ಎಲ್ನಿನೋ ಕಥೆಯೂ ಹಾಗೆಯೇ.
ಸಾಮಾನ್ಯವಾಗಿ ಶರತ್ಕಾಲದಲ್ಲಿ ಸಂಭವಿಸುವ ಪ್ರಕ್ರಿಯೆ ಇದು. ಜಾಗತಿಕ ತಾಪಮಾನ ನಿರಂತರವಾಗಿ ಹೆಚ್ಚುತ್ತಲೇ ಇರುವುದರಿಂದ ಎಲ್ನಿನೋದ ವೇಳಾಪಟ್ಟಿಯೂ ಬದಲಾಗಿದೆ. ಎಲ್ನಿನೋ ಸಂಭವಿಸಿದಾಗ ಒಂದು ದೇಶದಲ್ಲಿ ಪ್ರವಾಹ, ಇನ್ನೊಂದು ರಾಷ್ಟ್ರದಲ್ಲಿ ಬರ, ಇನ್ನೆಲ್ಲಿಯೋ ಬೆಳೆದು ನಿಂತ ಫಸಲು ಹರೋಹರ! ಎಲ್ನಿನೋದಿಂದ ಸಮುದ್ರ ತಾಪಮಾನ ಏರುವುದು ಕೇವಲ 0.5 ಡಿಗ್ರಿ ಸೆಲ್ಷಿಯಸ್ನಷ್ಟು. ನೀರು ಬಿಸಿಯಾಗುವುದಷ್ಟೇ ಅಲ್ಲ, ಜತೆಯಲ್ಲೇ ನೀರಿನ ಮಟ್ಟವೂ ಹೆಚ್ಚುತ್ತದೆ. ಉಷ್ಣತೆ ಕೇವಲ ಕೇವಲ ಅರ್ಧ ಡಿಗ್ರಿ ಹೆಚ್ಚಿದರೆ ಎಷ್ಟೆಲ್ಲ ಅನಾಹುತಗಳು! ಒಮ್ಮೆ ಬಿಸಿ ನೀರು ಭೂಮಟ್ಟ ತಲುಪಿತು ಅಂತಾದರೆ ಹವಾಮಾನದ ಮೇಲೆ ಪರಿಣಾಮ ಬಿದ್ದೇ ಬೀಳುತ್ತದೆ. ಆ ಪ್ರದೇಶದಲ್ಲಿನ ಋತುಮಾನವೇ ಬದಲಾಗಿಬಿಡುತ್ತದೆ. ಮಳೆಗಾಲದ ನಿರೀಕ್ಷಿಸುತ್ತಿದ್ದ ದೇಶಗಳು ಭೀಕರ ಬರಕ್ಕೆ ತುತ್ತಾಗಿಬಿಡಬಹುದು. ಇನ್ನೆಲ್ಲೋ ಮರುಭೂಮಿಯಲ್ಲಿ ಇದ್ದಕ್ಕಿದ್ದಂತೆ ಧಾರಾಕಾರ ಮಳೆ ಬೀಳಬಹುದು. ಅಲ್ಲೆಲ್ಲೋ ಪ್ರವಾಹ ಉಕ್ಕೇರಬಹುದು.
ಈ ಘಟನಾವಳಿಯಿಂದ ಹೆಚ್ಚಿನ ನಷ್ಟ ಅನುಭವಿಸುವುದು ಉತ್ತರ ಮತ್ತು ದಕ್ಷಿಣ ಅಮೆರಿಕದ ದೇಶಗಳು. ಅಲ್ಲಿನ ಬೆಳೆ ಪದ್ಧತಿ, ಆರ್ಥಿಕತೆ ಎಲ್ಲವೂ ತಿರುವುಮುರುವಾಗಿಬಿಡುತ್ತವೆ. ಎಲ್ನಿನೋ ಜಾಗತಿಕ ಮಹತ್ವ ಪಡೆಯಲು ಇದೂ ಕಾರಣವಾಗಿರಬಹುದು. ಇದರ ಪರಿಣಾಮ ಆಫ್ರಿಕನ್ ದೇಶಗಳಿಗಷ್ಟೇ ಸೀಮಿತವಾಗಿದ್ದರೆ ಯಾರೂ ತಲೆಬಿಸಿ ಮಾಡಿಕೊಳ್ಳುತ್ತಿರಲಿಲ್ಲವೇನೊ. 17 ವರ್ಷ ಹಿಂದೆ ಸಂಭವಿಸಿದ್ದ ಎಲ್ನಿನೋದಿಂದ ಜಗತ್ತಿನಾದ್ಯಂತ ನೂರು ಕೋಟಿ ಅಮೆರಿಕನ್ ಡಾಲರ್ಗೂ ಅಧಿಕ ನಷ್ಟವಾಗಿದೆ ಎಂದರೆ ಹಾನಿಯ ಆಗಾಧತೆ ಎಷ್ಟೆನ್ನುವುದು ಅರಿವಾಗುತ್ತದೆ.
ಎಲ್ನಿನೋ ಘಟಿಸುವುದು ಪೆಸಿಫಿಕ್ ಸಮುದ್ರದಲ್ಲಿ. ಆದರೆ, ಅದರ ಮುನ್ಸೂಚನೆ ಸಿಗುವುದು ಹಿಂದೂ ಮಹಾಸಾಗರದಲ್ಲಿ. ಹಿಂದೂ ಮಹಾಸಾಗರ ಆವರಿಸಿಕೊಂಡಿರುವ ಪ್ರದೇಶದಲ್ಲಿ ತಾಪಮಾನ ದಿಢೀರ್ ಏರಿಕೆ ಕಂಡಿದೆ ಅಂತಾದರೆ ಅದು ಎಲ್ನಿನೋದ ಆಗಮನದ ಮೊದಲ ಮುನ್ಸೂಚನೆ. ಹೀಗಾಗಿಯೇ ನಮಗದು ಪ್ರಮುಖ ಸಂಗತಿ. ಇದು ನಮ್ಮ ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತದೆ. ಪಶ್ಚಿಮ ಪೆಸಿಫಿಕ್ನಲ್ಲಿ ಮಳೆ ಮಾರುತಗಳು ದುರ್ಬಲವಾಗುತ್ತವೆ ಅಥವಾ ಪೂರ್ವದತ್ತ ಚಲಿಸುತ್ತವೆ. ಬಿಸಿ ನೀರು ಪೆಸಿಫಿಕ್ ಸಾಗರದಿಂದ ಹಿಂದೂ ಮಹಾಸಾಗರದತ್ತ ಚಲಿಸುತ್ತದೆ, ಈ ಪ್ರಕ್ರಿಯೆಯಲ್ಲಿ ಬಿಸಿ ನೀರ ಮಳೆ ಕೂಡ ಆಗಬಹುದು! ಇದು ಸಹ ಇನ್ನೊಂದು ಸೂಚನೆ.
1997ರ ಮೇ ತಿಂಗಳಿನಲ್ಲಿ ಎಲ್ನಿನೋ ಸಂಭವಿಸಿತ್ತು. ಈಗ ಮತ್ತೆ ಎಲ್ನಿನೋ ಆಗಮನದ ನಿರೀಕ್ಷೆ. ಇನ್ನೇನು ಮೂರ್ನಾಲ್ಕು ತಿಂಗಳಲ್ಲಿ ಬಂದೇಬಿಡಬಹುದು. ಅದಾಗಲೇ ವಿಜ್ಞಾನಿಗಳು, ಹವಾಮಾನ ತಜ್ಞರು ಜಾಗೃತರಾಗಿಬಿಟ್ಟಿದ್ದಾರೆ. ಹಿಂದಿನ ಸಲಕ್ಕಿಂತ ಈ ಸಲದ ಎಲ್ನಿನೋ ಹೇಗಿರಬಹುದು ಎನ್ನುವ ಜಿಜ್ಞಾಸೆಗೆ ಬಿದ್ದಿದ್ದಾರೆ. ಜಾಗತಿಕ ತಾಪಮಾನ ನಿರಂತರವಾಗಿ ಏರುತ್ತಲೇ ಇರುವುದರಿಂದ ಕಳೆದ ಬಾರಿಗಿಂತ ಈ ಸಲ ಭಯಂಕರ ಪರಿಣಾಮ ಬೀರಲಿದೆ, ಪೆಸಿಫಿಕ್ ಸಾಗರದ ವ್ಯಾಪ್ತಿಯ ದೇಶಗಳ ಹವಾಮಾನ ಪರಿಸ್ಥಿತಿ ಪೂರ್ತಿ ಬದಲಾಗಬಹುದು ಎನ್ನುವುದು ವಿಜ್ಞಾನಿಗಳ ಅಂದಾಜು. ಸಮುದ್ರ ನೀರು ಎಷ್ಟು ಬಿಸಿಯಾಗಿದೆ ಎನ್ನುವುದನ್ನು ಆಧರಿಸಿ ಅದರ ಪರಿಣಾಮ ಊಹಿಸಬಹುದು ಎನ್ನುವ ಚರ್ಚೆಗಳೂ ಶುರುವಾಗಿವೆ. ಮುಂದಿನ 30 ವರ್ಷಗಳ ಹವಾಮಾನ ಮೇಲೆ ಪ್ರತಿಕೂಲ ಪರಿಣಾಮ ಎಂಬ ವಾದಗಳೂ ಕೇಳಿಬರುತ್ತಿವೆ.
ಎಲ್ನಿನೋ ನಮಗೆ ಸಂಬಂಧಿಸಿದ್ದಲ್ಲ ಎಂದು ನಾವು ಕಣ್ಮುಚ್ಚಿ ಕೂರುವಂತಿಲ್ಲ. ವೈಶಾಖದ ಬೇಗೆಯಲ್ಲಿ ತತ್ತರಿಸುತ್ತಿರುವ ನಾವು ಮುಂಗಾರು ಸ್ವಾಗತಿಸಲು ಸಜ್ಜಾಗುತ್ತಿದ್ದೇವೆ. ಇನ್ನೊಂದೆಡೆ ಕೆಲವೇ ದಿನಗಳಲ್ಲಿ ದೇಶದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಇವೆರಡರ ಮೇಲೆಯೂ ಎಲ್ನಿನೋ ಪ್ರಭಾವ ಇದ್ದೇ ಇದೆ. ಈ ವರ್ಷ ಎಲ್ನಿನೋ ಸಂಭವಿಸುವ ಸಾಧ್ಯತೆ ಇರುವುದರಿಂದ ಭಾರತದಲ್ಲಿ ಮುಂಗಾರು ಹಂಗಾಮಿನಲ್ಲಿ ಸರಾಸರಿಗಿಂತ ತುಸು ಕಡಿಮೆ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಶೇ.95ರಷ್ಟು ಮಳೆ ಬೀಳಬಹುದು ಎನ್ನುವುದು ಇಲಾಖೆ ಅಂದಾಜು. ಪರಿಣಾಮ ನಮ್ಮ ಕೃಷಿ ಕ್ಷೇತ್ರ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸಬೇಕಾದ ಸನ್ನಿವೇಶ ಎದುರಾಗಲಿದೆ. ಈಗಾಗಲೇ ಅಂತರ್ಜಲ ಕುಸಿತ ಮತ್ತು ಹವಾಮಾನ ಏರುಪೇರಿನ ಸಮಸ್ಯೆ ದೇಶವನ್ನು ಪೀಡಿಸುತ್ತಿದ್ದು ಈ ಬಗ್ಗೆ ಅಮೆರಿಕ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳು ಹುಯಿಲೆಬ್ಬಿಸಿದೆ. ಎಲ್ನಿನೋ ಪರಿಣಾಮ ಇನ್ನಷ್ಟು ನಮ್ಮನ್ನು ಕಂಗೆಡಿಸುವ ಸಾಧ್ಯತೆ ಇದೆ. ಅಮೆರಿಕದಂಥ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನೇ ಪೀಡಿಸಿದ ಈ ನೈಸರ್ಗಿಕ ಪರಿಣಾಮ ಭಾರತದಂಥ ಅತಿಸೂಕ್ಷ್ಮ ದೇಶದ ಕೃಷಿ, ಆರ್ಥಿಕತೆ ಮೇಲೆ ಗಾಢ ಪರಿಣಾಮ ಬೀರುವುದು ನಿಸ್ಸಂಶಯ.
ಏಕೆಂದರೆ, ಅಮೆರಿಕದ ಅಂತರಿಕ್ಷ ಸಂಸ್ಥೆ ನಾಸಾ ನಡೆಸಿದ ಉಪಗ್ರಹ ಅಧ್ಯಯನದ ಪ್ರಕಾರ, 2002-08ರ ಅವಧಿಯಲ್ಲಿ ಭಾರತದಲ್ಲಿ ಅದರಲ್ಲೂ ದೇಶದ ಉತ್ತರ ಭಾಗದಲ್ಲಿನ ಅಂತರ್ಜಲ ಮಟ್ಟ ಗಣನೀಯ ಕುಸಿತ ಕಂಡಿದೆ. ಸಾಕಷ್ಟು ಮಳೆ ಸರಾಸರಿಯನ್ನು ಹೊಂದಿರುವ ಈಶಾನ್ಯ ಭಾರತದಲ್ಲೂ ಅಂತರ್ಜಲ ಮಟ್ಟ ವರ್ಷಕ್ಕೆ ನಾಲ್ಕು ಸೆಂ.ಮೀ.ನಷ್ಟು ಕುಸಿಯುತ್ತಿದೆ ಎಂಬುದು ನಿಜಕ್ಕೂ ಆತಂಕಕಾರಿ ಸಂಗತಿ. ಈ ಅವಧಿಯಲ್ಲಿ 109 ಕ್ಯೂಬಿಕ್ ಕಿಲೋಮೀಟರ್ಗೂ ಹೆಚ್ಚು ಅಂತರ್ಜಲ ಬರಿದಾಗಿದೆ. ಎಲ್ನಿನೋ ಪರಿಣಾಮದ ಬರದ ಆತಂಕ ನಿಜವಾದರೆ ಈ ವರ್ಷ ದೇಶದ 114 ದಶಲಕ್ಷಕ್ಕೂ ಹೆಚ್ಚು ಮಂದಿ ಗಂಭೀರ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುವ ಭಯವಿದೆ. ದೇಶದ ಪ್ರಮುಖ 81ಕ್ಕೂ ಹೆಚ್ಚು ಜಲಮೂಲಗಳು ಈ ಬಾರಿ ನೀರಿನ ಕೊರತೆ ಎದುರಿಸುವ ಸಂಭವ ಇದೆ.
ಇದಾವುದಕ್ಕೂ ನಾವು ಚಿಂತೆ ಮಾಡಬೇಕಾದ್ದಿರಲಿಲ್ಲ. ಭಾರತದಂಥ ದೇಶಕ್ಕೂ ಬರ ಭಾರವೆನಿಸಲು ಇನ್ನೊಂದು ಕಾರಣವಿದೆ. ನಾವು ವೈವಿಧ್ಯಮಯ ಕೃಷಿ ಪದ್ಧತಿಯನ್ನು ಲಾಗಾಯ್ತಿನಿಂದಲೂ ಅನುಸರಿಸಿಕೊಂಡು ಬಂದವರು. ಯಾವಾಗ ಹಸಿರು ಕ್ರಾಂತಿ ಎಂಬ ಭ್ರಮೆ ನಮ್ಮಲ್ಲಿ ಹೊಕ್ಕಿತೋ ಅಂದಿನಿಂದ ಪರ್ಯಾಯ ಬೆಳೆಗಳ ಗೊಡವೆಗೇ ಹೋಗಿಲ್ಲ. ನೀರಾವರಿ ಯೋಜನೆಗಳು ರೂಪಿತವಾಗುವುದೇ ನಮ್ಮಲ್ಲಿ ಭತ್ತ, ಕಬ್ಬಿನಂಥ ಹೆಚ್ಚು ನೀರು ಬೇಡುವ ಬೆಳೆಗಳಿಗಾಗಿ ಎಂಬಂತಾಗಿ ಬಿಟ್ಟಿದೆ. ಕಡಿಮೆ ನೀರಿನಿಂದಲೂ ಬೆಳೆಯಬಹುದಾದ ಬೆಳೆಗಳ ಅವಗಣನೆಯೇ ರೈತರನ್ನು, ಪರೋಕ್ಷವಾಗಿ ದೇಶವನ್ನು ಬರದ ಸಂಕಷ್ಟಕ್ಕೆ ಈಡುಮಾಡಿದೆ. ಇದು ಅಂತರ್ಜಲವನ್ನು ಅಪಾಯದ ಮಟ್ಟಕ್ಕೆ ಕೊಂಡೊಯ್ಯುತ್ತಿದೆ.
ಅಂತರ್ಜಲ ಆರಿ ಹೋಗುತ್ತಿದೆ ಎನ್ನುವ ಹೊತ್ತಿಗೇ, ಇದಕ್ಕಿಂತಲೂ ಭೀಕರ ಇನ್ನೊಂದು ಸಮಸ್ಯೆ ನಮ್ಮೆದುರು ಧುತ್ತನೆ ನಿಂತಿದೆ. ಅದು ನೀರಿನ ಆವಿಯುದ್ದು. ಹೌದು, ಭಾರತದ ಬಹುತೇಕ ನೀರು ವೃಥಾ ಆವಿಯಾಗಿ ಹೋಗುತ್ತಿದೆ. ನಮ್ಮ ಪ್ರಮುಖ ಜಲಮೂಲ ಅಂದರೆ ಅದು ಮಳೆ ಹಾಗೂ ಹಿಮಾಲಯ ಶ್ರೇಣಿಯಲ್ಲಿನ ಮಂಜುಗಡ್ಡೆಗಳು. ಮಂಜುಗಡ್ಡೆ ಕರಗುವುದರಿಂದ ವಾರ್ಷಿಕ ಎಷ್ಟು ನೀರು ದೊರೆಯುತ್ತದೆ ಎಂಬುದಕ್ಕೆ ನಿಖರ ಅಂಕಿ ಅಂಶಗಳು ಲಭ್ಯವಿಲ್ಲ. 43 ಸಾವಿರ ಚದರ ಕಿ.ಮೀ.ನಷ್ಟು ಪ್ರದೇಶ ಮಂಜುಗಡ್ಡೆಗಳಿಂದ ಆವೃತವಾಗಿದೆ. ಇದರಿಂದ ಅಂದಾಜು 3,870 ಕ್ಯೂಬಿಕ್ ಕಿ.ಮೀ.ನಷ್ಟು ನೀರು ವರ್ಷಕ್ಕೆ ಸಿಗುತ್ತಿದೆ. ಇದರಲ್ಲಿ ಭಾರತಕ್ಕೆ ಲಭ್ಯವಿರುವುದು 10 ಸಾವಿರ ಚದರ ಕಿ.ಮೀ. ಪ್ರದೇಶದ 200 ಕ್ಯೂಬಿಕ್ ಕಿ.ಮೀ.ನಷ್ಟು ನೀರು ಮಾತ್ರ. ಒಟ್ಟಾರೆ ಮಳೆ ಮತ್ತು ಮಂಜಿನಿಂದ ನಾವು ಅಂದಾಜು 4 ಸಾವಿರ ಶತಕೋಟಿ ಕ್ಯೂಬಿಕ್ ಮೀಟರ್ನಷ್ಟು ನೀರನ್ನು ಪಡೆಯುತ್ತಿದ್ದೇವೆ. ಇದರಲ್ಲಿ ಶೇ.50ರಷ್ಟು ಆವಿಯಾಗಿ ಹೋಗುತ್ತದೆ. 1912ರಿಂದ 1964 ಹಾಗೂ 1965ರಿಂದ 2006ರ ಅವಧಿಯಲ್ಲಿ ದೇಶದ ಮಳೆ ಸರಾಸರಿ ಶೇ. 4ರಷ್ಟು ಕುಸಿದಿದೆ.
ಆದರೆ ಆ ಪೈಕಿ ಬಳಕೆಗೆ ದಕ್ಕುತ್ತಿರುವ ಮಳೆ ನೀರಿನ ಪ್ರಮಾಣ ಶೇ.12ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಮಳೆ ಸಂಗ್ರಹ ಹಾಗೂ ಬಳಕೆಯ ನಿಟ್ಟಿನಲ್ಲಿ ನಮ್ಮ ನಿರ್ಲಕ್ಷ್ಯ ಇದಕ್ಕೆ ಮೊದಲ ಪ್ರಮುಖ ಕಾರಣವಾಗಿದ್ದರೆ, ಮಳೆ ಸುರಿಯುವ ಒಟ್ಟೂ ಅವಧಿಯಲ್ಲಿನ ಕುಸಿತವೂ ಇನ್ನೊಂದು ಮುಖ್ಯ ಕಾರಣ. ಇದರ ಒಟ್ಟಾರೆ ಪ್ರತಿಫಲನ ಬರ ಎದುರಿಸುವಲ್ಲಿನ ನಮ್ಮ ವೈಫಲ್ಯದಲ್ಲಿ ಕಾಣುತ್ತಿದೆ.
ವಿಶೇಷ ಗೊತ್ತೆ? ದೇಶದ ಒಟ್ಟಾರೆ ಕೃಷಿಯ ಶೇ.60ರಷ್ಟು ಒಣ ಭೂಮಿಯಲ್ಲೇ ನಡೆಯುತ್ತಿದೆ. ಈ ದೃಷ್ಟಿಯಿಂದ ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ, ಬರನಿರೋಧಕ ಬೆಳೆಗಳ ಬಗ್ಗೆಯೇ ನಾವು ಹೆಚ್ಚು ಯೋಚಿಸುವುದು ಅನಿವಾರ್ಯ. ಹಾಗೆನ್ನುವಾಗ ಬರದಂಥ ಸಂದರ್ಭದಲ್ಲಿ ನಮಗೆ ಉತ್ತರವಾಗಿ ನಿಲ್ಲಬಲ್ಲವು ನವಣೆ, ಸಜ್ಜೆ ಇತ್ಯಾದಿಗಳು ಮಾತ್ರ. ಭತ್ತವನ್ನು ನಾವು ವಾರ್ಷಿಕ 1200ರಿಂದ 1300 ಮಿ.ಮೀ. ಮಳೆ ಸರಾಸರಿ ಇರುವ ಪ್ರದೇಶದಲ್ಲಿ ಮಾತ್ರ ಬೆಳೆಯಬಹುದು. ಆದರೆ ನವಣೆ, ಸಜ್ಜೆ, ಜವೆ, ಜೋಳ ಇತ್ಯಾದಿಗಳಿಗೆ 350ರಿಂದ 500 ಮಿ.ಮೀ. ಮಳೆ ಸರಾಸರಿ ಇದ್ದರೆ ಸಾಕು.
ಇದು ಗೊತ್ತಿದ್ದೂ ನಾವು ಬರ ಬಂದಾಗಲೂ ಅಂತರ್ಜಲವನ್ನು ಹೀರಿಯಾದರೂ ಸರಿ ಭತ್ತವನ್ನೇ ಬೆಳೆಯುತ್ತೇವೆ ಎಂಬ ಹಠಕ್ಕೆ ಬೀಳುತ್ತೇವೋ ಗೊತ್ತಿಲ್ಲ. ಧಾನ್ಯಗಳ ಸಸಿಗಳ ಬೇರು ಅತ್ಯಂತ ಆಳಕ್ಕೆ ಇಳಿಯಬಲ್ಲ ಶಕ್ತಿಯನ್ನು ಹೊಂದಿವೆ. ಅದೇ ರೀತಿ ಇದರ ದಟ್ಟ ಹರವು ವಾತಾವರಣದಲ್ಲಿ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳಬಲ್ಲದು. ಭತ್ತದ ಕಣಜವೆಂದು ಕರೆಸಿಕೊಳ್ಳುವ ಪಂಜಾಬ್ನಲ್ಲೂ 1960ಕ್ಕೂ ಮುನ್ನ ಭತ್ತ ಪ್ರಚಲಿತದಲ್ಲಿರಲಿಲ್ಲ.
ಅಂಥದ್ದೊಂದು ಬದಲಾವಣೆ ಬಂದದ್ದು 70ರ ದಶಕದಲ್ಲಿ. ಆಹಾರ ಸ್ವಾವಲಂಬನೆಯ ಸಾಧನೆಗೆ ಸರಕಾರ ಹೆಚ್ಚಿನ ಒತ್ತು ಕೊಡಲಾರಂಭಿಸಿದ್ದೇ ಕೃಷಿಗೆ ನೀರಿನ ಬೇಡಿಕೆ ಹೆಚ್ಚಲು ಕಾರಣವಾಯಿತು ಎಂಬುದರಲ್ಲಿ ಎರಡು ಮಾತಿಲ್ಲ.
ಇನ್ನು ಮೇಲ್ನೋಟಕ್ಕೆ ಆರ್ಥಿಕವಾಗಿ ಅಂಥ ಪರಿಣಾಮವನ್ನೇನೂ ಬೀರದು. ಏಕೆಂದರೆ ದಾಖಲೆಗಳ ಪ್ರಕಾರ ದೇಶದಲ್ಲಿ ಕಳೆದ ನಾಲ್ಕು ವರ್ಷ ಉತ್ತಮ ಮಳೆಯಾಗಿದೆ. ಕೃಷಿಗೆ ಅಗತ್ಯ ನೀರಿನ ಮಟ್ಟ ಕಾಪಿಟ್ಟುಕೊಳ್ಳುವ ಹೊಣೆ ತೋರಬೇಕಿದೆ. ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಇನ್ನಷ್ಟು ಆತಂಕಕಾರಿ ಮಟ್ಟ ತಲುಪದಂತೆ ಎಚ್ಚರವಹಿಸಬೇಕು. ಗೋದಾಮುಗಳಲ್ಲಿ ಆಹಾರ ಧಾನ್ಯಗಳ ದಾಸ್ತಾನು ವ್ಯವಸ್ಥಿತ ಬಳಕೆ ಆಗಬೇಕು. ಹೀಗಾಗಿ ಮಳೆ ಕೊಂಚ ಕಡಿಮೆಯಾದರೂ ಗಾಬರಿಯಾಗುವ ಅಗತ್ಯವೇನಿಲ್ಲ ಎನ್ನುವುದು ಆರ್ಥಿಕ ತಜ್ಞರ ಅಭಿಮತ.
ಆದರೆ ಹೊಸ ಸರ್ಕಾರ ತನ್ನ ಜನಪ್ರಿಯ ಕಾರ್ಯಕ್ರಮಗಳ ಭಾಗವಾಗಿ ಗೋದಾಮಿನಲ್ಲಿರುವ ಆಹಾರ ಧಾನ್ಯಗಳನ್ನು ಬಡವರಿಗೆ ವಿತರಿಸುವ ನಿರ್ಧಾರ ಕೈಗೊಂಡರೆ, ಸಮುದ್ರ ನೀರಿನ ಮಟ್ಟ ನಿರೀಕ್ಷೆಗಿಂತಲೂ ಬಿಸಿಯಾಗಿ ಅಂದುಕೊಂಡಿದ್ದಕ್ಕಿಂತ ಕಡಿಮೆ ಮಳೆಯಾದರೆ, ಇವೆರಡೂ ಅಥವಾ ಯಾವುದಾದರೂ ಒಂದು ವಿದ್ಯಮಾನ ಘಟಿಸಿದರೂ ಭಾರತೀಯ ಆರ್ಥಿಕತೆಯೂ ಏರುಪೇರಾಗುತ್ತದೆ ಎನ್ನುವುದು ನಿಸ್ಸಂದೇಹ.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in