ಅಂಕಣಗಳು

ಮತ ಎಣಿಕೆ ಕ್ರಮದಲ್ಲಿ ಬದಲಾವಣೆ ಅಗತ್ಯ

ಮತ ಎಣಿಕೆ ಕ್ರಮದಲ್ಲಿ ಬದಲಾವಣೆ ಅಗತ್ಯ
Published On :

ಚುನಾವಣೆಗಳಲ್ಲಿ ವಿದ್ಯುನ್ಮಾನ ಯಂತ್ರಗಳ ಬಳಕೆ ಜಾರಿಗೆ ಬಂದ ಮೇಲೆ, ಮತ ಎಣಿಕೆಯ ಸಮಯದಲ್ಲಿ ಮೊದಲಿಗೆ ಪ್ರತಿಯೊಂದು ಮತಗಟ್ಟೆಯಲ್ಲಿರುವ ವಿದ್ಯುನ್ಮಾನ ಯಂತ್ರದಲ್ಲಿ ಒಟ್ಟಾರೆ ಚಲಾವಣೆಯಾದ ಮತಗಳನ್ನು ಆ ಕೇಂದ್ರದ ಅಧಿಕಾರಿಯು ನೀಡುವ ವರದಿಯೊಡನೆ ತಾಳೆ ಹಾಕಲಾಗುತ್ತದೆ. ಈ ವರದಿಗೆ  ಮತಗಟ್ಟೆಯಲ್ಲಿದ್ದ ವಿವಿಧ ಅಭ್ಯರ್ಥಿಗಳ ಏಜೆಂಟ್ಗಳೂ ಸಹ ಮೊದಲೇ ದೃಢೀಕರಿಸಿರುತ್ತಾರೆ. ನಂತರ ಆ ಮತದಾನ ಕೇಂದ್ರದಲ್ಲಿ ವಿವಿಧ ಪಕ್ಷಗಳಿಗೆ ಸೇರಿದ ಅಭ್ಯರ್ಥಿಗಳು ಪಡೆದ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಅಂದರೆ ಪ್ರತಿಯೊಂದು ಮತಗಟ್ಟೆಗೆ ಸೇರಿದ ಮತದಾರರು ಯಾವ ಅಭ್ಯರ್ಥಿಗೆ ಅಥವಾ ಪಕ್ಷಕ್ಕೆ ಒಲವು ತೋರಿದ್ದಾರೆ ಎಂಬುದು ನಿಖರವಾಗಿ ತಿಳಿಯುತ್ತದೆ. ಇದು ಮೇಲ್ನೋಟಕ್ಕೆ ಉತ್ತಮವಾಗಿದ್ದರೂ ಸಹ, ನಿಜಕ್ಕೂ ಆಘಾತಕಾರಿ ಎಂದರೆ ತಪ್ಪಾಗಲಾರದು. ಹಿಂದೆ  ಬ್ಯಾಲಟ್ ಪೇಪರ್ ಬಳಕೆಯಾಗುತ್ತಿದ್ದಾಗ, ಮತ ಎಣಿಕೆ ಸಮಯದಲ್ಲಿ ವಿವಿಧ ಬೂತ್ಗಳಲ್ಲಿ ಚಲಾವಣೆಯಾದ ಬ್ಯಾಲಟ್ ಪೇಪರ್ಗಳನ್ನು ಮತಪೆಟ್ಟಿಗೆಯಿಂದ ಹೊರತೆಗೆದು ಅವುಗಳ ಮೊತ್ತವನ್ನು ಚುನಾವಣಾ ಅಧಿಕಾರಿಯ ವರದಿಯೊಡನೆ ತಾಳೆ ಹಾಕಲಾಗುತ್ತಿತ್ತು. ನಂತರ ಒಂದು ಕ್ಷೇತ್ರದಲ್ಲಿ ಅಂದರೆ ನೂರಾರು ಬೂತ್ಗಳಲ್ಲಿ ಚಲಾವಣೆಯಾದ ಬ್ಯಾಲಟ್ ಪೇಪರ್ಗಳನ್ನು ಒಟ್ಟಾಗಿ ಕಲೆಹಾಕಿ ಸೇರಿಸಿ, ನಂತರ ವಿವಿಧ ಅಭ್ಯರ್ಥಿಗಳಿಗೆ ದಕ್ಕಿದ ಮತಗಳನ್ನು ಎಣಿಕೆ ಮಾಡುತ್ತಿದ್ದರು. ಇದರಿಂದಾಗಿ ಯಾವುದೇ ಬೂತ್ ಅಥವಾ ಪ್ರದೇಶದಿಂದ ವಿವಿಧ ಅಭ್ಯರ್ಥಿಗಳಿಗೆ ದೊರೆತ ಮತಗಳ ಲೆಕ್ಕ ಸಿಗುತ್ತಿರಲಿಲ್ಲ. ಒಟ್ಟಾರೆ ಕ್ಷೇತ್ರದಲ್ಲಿ ದೊರೆತ ಮತಗಳ ಮಾಹಿತಿ ಮಾತ್ರ ಸಿಗುತ್ತಿತ್ತು.
ಈಚೆಗೆ, ನಾನೇ ಸ್ವತಃ ನೋಡಿರುವಂತೆ ಕೆಲವು ವಿಧಾನ ಸಭಾ ಸದಸ್ಯರು ಅಥವಾ ಕಾರ್ಪೋರೇಟರ್ಗಳು ತಮ್ಮ ಬಳಿಗೆ ಸಮಸ್ಯೆಗಳ ನಿವಾರಣೆ ಅಥವಾ ಸಹಾಯಕ್ಕಾಗಿ ಬರುವ ತಮ್ಮ ಕ್ಷೇತ್ರದ ಮತದಾರರಿಗೆ ಅವರು ತಮ್ಮನ್ನು ಬೆಂಬಲಿಸದ ಪ್ರದೇಶದಿಂದ ಬಂದಿದ್ದಾರೆ ಎಂದು ಗೊತ್ತಾದೊಡನೆ, ಅವರಿಗೆ ಯಾವುದೇ ರೀತಿಯ ಸಹಾಯ ನೀಡಲು ನಿರಾಕರಿಸುತ್ತಾರೆ. ಜೊತೆಗೆ ತಮಗೆ ಬೆಂಬಲ ನೀಡದ ಆ ಪ್ರದೇಶಗಳಲ್ಲಿ ತಾವು  ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಸಹ ಕೈಗೊಳ್ಳುವುದಿಲ್ಲವೆಂದು ಇದೇ ಜನ ಪ್ರತಿನಿಧಿಗಳು ಧಮಕಿ ಹಾಕುವುದನ್ನೂ ಸಹ ನಾನು ಕಣ್ಣಾರೆ ಕಂಡಿದ್ದೇನೆ. ಇದರಿಂದಾಗಿ ಅನೇಕ ಜನಪ್ರತಿನಿಧಿಗಳು ಈ ಮಾಹಿತಿಯನ್ನು ತಮಗೆ ಬೆಂಬಲ ನೀಡದ ಮತದಾರರ ಮೇಲೆ ದ್ವೇಷ ಸಾಧಿಸಲು ಅಥವಾ ಒಂದು ಬೆದರಿಕೆಯ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಈ ಹಿನ್ನಲೆಯಲ್ಲಿ, ಇನ್ನು ಮುಂದಾದರು ಚುನಾವಣಾ ಆಯೋಗವು ಮತ ಎಣಿಕೆ ಪ್ರಕ್ರಿಯೆಯಲ್ಲಿ ಸೂಕ್ತ ಬದಲಾವಣೆಗಳನ್ನು ತಂದು, ಪ್ರತಿಯೊಂದು ಬೂತ್ ಮಟ್ಟದಲ್ಲಿಚಲಾವಣೆಯಾದ ವಿವಿಧ ಪಕ್ಷಗಳ ಮತಗಳನ್ನು ಬಹಿರಂಗ ಪಡಿಸದೆ, ಒಟ್ಟಾರೆ ಚಲಾವಣೆಯಾದ ಮತಗಳ ಸಂಖ್ಯೆ ಸರಿಯಾಗಿದೆಯೇ ಎಂದು ಖಾತರಿ ಪಡಿಸಿಕೊಂಡರೆ ಸಾಕೆನಿಸುತ್ತದೆ. ಸರ್ಕಾರವು ಈ ಜನಹಿತ ಬದಲಾವಣೆ ಜಾರಿಗೆ ತರುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಸಹ ತಮ್ಮ ಬೆಂಬಲವನ್ನು ನೀಡುವುದು ಅತ್ಯವಶ್ಯಕವಾಗುತ್ತದೆ.

- ಬಿ.ಎಸ್. ಮನೋಹರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.