ಮೋದಿ ಭಾರತದಲ್ಲಿ ಸಾವರ್ಕರ್ ನೆನಪು
ಇತಿಹಾಸ ಕೆಲವೊಮ್ಮೆ ಭಿನ್ನ ಸಿದ್ಧಾಂತ ಹೊಂದಿದ್ದರೆಂಬ ಮಾತ್ರಕ್ಕೆ ಕೆಲವರನ್ನು ಅಸ್ಪೃಶ್ಯರನ್ನಾಗಿ, ವಿಲನ್ ಎಂಬ ಸಂಶಯ ಬರುವಂತೆ ಮಾಡಿಬಿಡುತ್ತದೆ. ಇತಿಹಾಸದ ದಾಖಲೀಕರಣ ಮಾಡುವವರ ಕಾಲದ ತುರ್ತುಗಳು, ಪ್ರಭುತ್ವದಲ್ಲಿದ್ದು ಚರಿತ್ರೆಯನ್ನು ಬರೆಸುತ್ತಿರುವವರಿಗೆ ಖುಷಿಗೊಳಿಸಬೇಕಾದ ದರ್ದು ಎಲ್ಲವೂ ಇರುತ್ತವೆ.
ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಈಗ ಇತಿಹಾಸದ ಭವ್ಯತೆಯಲ್ಲಿ ಸ್ಥಾನ ಪಡೆಯುವುದಕ್ಕೆ ಹೊಸ್ತಿಲಿನಲ್ಲಿ ನಿಂತಿದ್ದಾರೆ. ಇಂಗ್ಲೆಂಡ್ ನೆನಪಲ್ಲಿಡುವ ಮಾರ್ಗರೇಟ್ ಥ್ಯಾಚರ್ ಅವರಂತೆ, ಜರ್ಮನಿಗೆ ಒದಗಿದ ಬಿಸ್ಮಾರ್ಕ್ ಅವರಂತೆ ಶತಮಾನದ ನಂತರದ ಪೀಳಿಗೆ ಭಾರತದ ವಿಷಯದಲ್ಲಿ ಮೋದಿಯವರನ್ನು ನೆನಪಿಸಿಕೊಳ್ಳುವಂತೆ ಹಾದಿಯೊಂದನ್ನು ನಿರ್ಮಿಸಿಹೋಗುವ ಐತಿಹಾಸಿಕ ಅವಕಾಶ ಮೋದಿ ಅವರ ಮುಂದೆ ತೆರೆದುಕೊಂಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಚರಿತ್ರೆ ಸ್ವಲ್ಪವೇ ಹೊರಳಿದ್ದರೆ ಏನಾಗುತ್ತಿತ್ತು ಅಂತ ಯೋಚಿಸೋಣ. 2002ರಲ್ಲಿ ಆದ ಗೋದ್ರೋತ್ತರ ಗಲಭೆಗೆ ಮೋದಿಯವರೇ ಹೊಣೆ ಅಂತ ಜಾಗತಿಕ ಮಾಧ್ಯಮ ಹಾಗೂ ಅಭಿಪ್ರಾಯ ನಿರೂಪಣೆಯ ಸ್ಥಾನದಲ್ಲಿರುವವರು, ವಿರೋಧಿಗಳು ಎಲ್ಲ ಇನ್ನಿಲ್ಲದ ತೀವ್ರತೆಯಲ್ಲಿ ಧ್ವನಿ ಮೊಳಗಿಸಿದ್ದು ಹೌದಷ್ಟೇ. ಪಕ್ಷದಲ್ಲೂ ಮುಖ್ಯಮಂತ್ರಿ ಸ್ಥಾನದಿಂದ ಅವರ ರಾಜೀನಾಮೆ ಪಡೆದುಬಿಡೋಣ ಎಂಬ ಚಿಂತನೆಗಳೂ ಬಂದಿದ್ದವಲ್ಲ. ಆ ಭಯಾನಕ ಒತ್ತಡಕ್ಕೆ ಧೃತಿಗೆಟ್ಟು ಮೋದಿ ರಾಜಕೀಯ ಜೀವನದಿಂದ ಹಿಂದೆ ಸರಿದಿದ್ದರೆ ಇತಿಹಾಸ ಅವರನ್ನು ಹೇಗೆ ನೆನಪಿಡುತ್ತಿತ್ತು? ಸಂಶಯವೇ ಇಲ್ಲ! ಹಿಂದೂ ಉನ್ಮತ್ತ, ಅನ್ಯಮತೀಯರ ಕಗ್ಗೊಲೆ ಮಾಡಿದವ, ಭಾರತ ಇದುವರೆಗೆ ಕಂಡಿರದಿದ್ದ ಹೃದಯವಿಹೀನ ಮುಖ್ಯಮಂತ್ರಿ ಎಂದೇ ಅಕಾಡೆಮಿಕ್ ಉಲ್ಲೇಖಗಳು ಗಟ್ಟಿ ಮಾಡುತ್ತಿದ್ದವು. ಅವರು ಪ್ರಧಾನಿಯಾಗುವವರೆಗೂ ಅಂಥ ನರಹಂತಕನೆಂದು ಬಿಂಬಿಸುವ ಪ್ರಯತ್ನಗಳು ನಡೆದೇ ಇದ್ದವು. ಇನ್ನು ಇತಿಹಾಸಕಾರರು ಎಷ್ಟೇ ಲಾಗಾ ಹೊಡೆದರೂ ನರೇಂದ್ರ ಮೋದಿಯವರನ್ನು ಅವರಿಗೆ ಬೇಕಾದ ನೇತ್ಯಾತ್ಮಕ ನೆಲೆಯಲ್ಲಿ ಚಿತ್ರಿಸಲಾಗದು. ಅಂಥ ಹಂತ ಅವರು ತಲುಪಿಯಾಗಿದೆ.
ಇವತ್ತು ಜನ್ಮದಿನ ಹೊಂದಿರುವ ವೀರ್ ಸಾವರ್ಕರ್ (28 ಮೇ 1883- 26 ಫೆಬ್ರವರಿ 1966) ಅವರಿಗೆ ಮೋದಿಯವರಿಗೆ ಸಿಕ್ಕಂಥ ಅವಕಾಶ ದೊರಕಿಸಿಕೊಳ್ಳಲಾಗದೇ ಇದ್ದಿದ್ದರಿಂದ ಅವರನ್ನು ಹೆಚ್ಚಿನ ವಾಮಪಂಥೀಯ ಇತಿಹಾಸಕಾರರೆಲ್ಲ 'ಸಂಶಯಾಸ್ಪದ ವಿಲನ್' ಎಂಬರ್ಥದ ಚಿತ್ರಣದಲ್ಲಿ ಬಂಧಿಯಾಗಿಸಿರುವುದಕ್ಕೆ ಸಾಧ್ಯವಾಯಿತೇ ಎಂಬ ಪ್ರಶ್ನೆ ಏಳುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೌಮ್ಯವಾದಿ ಗಾಂಧಿ-ನೆಹರು ಅವರನ್ನೆಲ್ಲ ಬಂಧನ ಸಂದರ್ಭದಲ್ಲಿ ಅರಮನೆಯಂಥ ನಿರ್ಮಿತಿಗಳಲ್ಲಿ ಸಕಲ ಸೌಲಭ್ಯಗಳೊಂದಿಗೆ ನೋಡಿಕೊಳ್ಳುತ್ತಿದ್ದ ಬ್ರಿಟಿಷ್ ಸರ್ಕಾರ ಸಾವರ್ಕರ್ ಅವರನ್ನು ಅಂಡಮಾನ್- ನಿಕೋಬಾರ್ನ ಅತಿಕ್ರೂರ ಕರಿನೀರಿನ ಶಿಕ್ಷೆಗೆ ಒಳಪಡಿಸಿತು. ಅವರು 'ಹಿಂದೂ ರಾಷ್ಟ್ರವಾದ' ಎಂದರು. ಆ ಕಾರಣಕ್ಕಾಗಿಯೇ ನೆಹರು- ಗಾಂಧಿಗಳಿಗೆ ಇವರು ಅಷ್ಟೇನೂ ತಮ್ಮವರಲ್ಲ ಎನಿಸಿದರು. ಸ್ವಾತಂತ್ರ್ಯ ಭಾರತದಲ್ಲಿ ಗಾಂಧಿಹತ್ಯೆಯ ಆರೋಪ ಅವರನ್ನು ಜರ್ಜರಿತರನ್ನಾಗಿಸಿತು. ಅದರಲ್ಲಿ ನಿಷ್ಕಳಂಕಿತರಾಗಿಯೇ ಹೊರಬಂದರು. ಅವರು ಪ್ರತಿಪಾದಿಸಿದ ಹಿಂದೂರಾಷ್ಟ್ರ ಎಂದರೆ ಕೇವಲ ಹಿಂದೂಗಳು ಮಾತ್ರ ಬದುಕಿರಬೇಕು ಎಂಬುದೇನೂ ಆಗಿರಲಿಲ್ಲ. ಯಹೂದಿಗಳು ತಮ್ಮದೊಂದು ದೇಶ ಕಟ್ಟಿಕೊಂಡಂತೆ ಭಾರತವು ಈ ನೆಲಕ್ಕೆ ನಿಷ್ಠೆ ಉಳ್ಳ ಎಲ್ಲರನ್ನೂ ಒಳಗೊಂಡು ಹಿಂದೂರಾಷ್ಟ್ರವಾಗಿ ತಲೆ ಎತ್ತಬೇಕು ಎಂಬ ಬಯಕೆ ಅವರದ್ದಾಗಿತ್ತು. ಇವತ್ತು ಬಹುತೇಕ ಭಾರತ ಅರ್ಥ ಮಾಡಿಕೊಂಡಿರುವ ಸತ್ಯವಾದ- ಮುಸ್ಲಿಂರ ಓಲೈಕೆಯಿಂದ ಏನೂ ಆಗುವುದಿಲ್ಲ, ಬದಲಿಗೆ ಅವರಿಗೆ ಸಮಾನ ಅವಕಾಶ ಕೊಡುವುದರಲ್ಲಿ ಅಭ್ಯುದಯವಿದೆ- ಎಂಬುದನ್ನು ಆ ಹೊತ್ತಿಗೇ ಪ್ರತಿಪಾದಿಸಿದವರು ಅವರು. ಈಗ ಕೇಸರಿ ಪಾಳೆಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿರುವ ಹಂತದಲ್ಲಿ, 'ಎಲ್ಲರಿಗೂ ನ್ಯಾಯ, ಆದರೆ ಯಾರಿಗೂ ಓಲೈಕೆ ಇಲ್ಲ' ಎಂದರೆ ಹೆಚ್ಚಿನವರು ಹೌದೌದು ಎನ್ನುತ್ತಾರೆ. ಮೊನ್ನೆಯವರೆಗೆ ಮೋದಿ ಪ್ರಧಾನಿಯಾದರೆ ರಕ್ತ ಹರಿದುಬಿಡುತ್ತದೆ ಅಂತ ಹೆದರಿಸುತ್ತಿದ್ದ ಬುದ್ಧಿಜೀವಿಗಳೆಲ್ಲ ಈಗ ನಮೋ ಎಂದು ರಾಗ ಬದಲಿಸುತ್ತಿದ್ದಾರೆ. ಆದರೆ ಬಲಪಂಥೀಯ ಎಂದು ಕರೆಸಿಕೊಳ್ಳುತ್ತಿದ್ದ ವಾದ ಸರಣಿಯನ್ನು ಅವತ್ತಿನ ಕಾಲಘಟ್ಟದಲ್ಲಿ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ನಿಕೃಷ್ಟವಾಗಿ ಕಾಣುತ್ತಿತ್ತಾದ್ದರಿಂದ ಸಾವರ್ಕರ್ ಅವರಿಗೆ ಸಿಗಬೇಕಾದ ಸ್ಥಾನ ಸಿಗದೇ ಹೋಯಿತಾ? ಏಕೆಂದರೆ ಅವರ ಹಿಂದೂರಾಷ್ಟ್ರದ ವಿವರಣೆಗಳಿಗೆ ಕಣ್ಣುಹಾಯಿಸಿದರೆ ಅವರು ಹಿಂದೂಧರ್ಮದಲ್ಲಿ ಜಾತಿ ಬೇಡ ಎಂದು ಹೋರಾಡಿದ್ದು ತಿಳಿದುಬರುತ್ತದೆ. ಕರಿನೀರಿನ ಶಿಕ್ಷೆಗೆ ಒಳಗಾಗಿ ಜೈಲಿನ ಚಿತ್ರಹಿಂಸೆಯ ವಾತಾವರಣದಲ್ಲಿ ಇದ್ದಾಗಲೂ ಅವರು ಅಲ್ಲಿನ ಬಂಧಿಗಳ ಕಣ್ಣೀರು ಒರೆಸುವುದರಲ್ಲಿ, ಅವರ ಪರವಾದ ನ್ಯಾಯ ಒತ್ತಾಯದಲ್ಲಿ, ಧಾರ್ಮಿಕ ಭಿನ್ನತೆ ಅಳಿಸುವ ಸಾಮರಸ್ಯದ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದ ವಿವರಗಳು ಸಿಗುತ್ತ ಹೋಗುತ್ತವೆ. ಜೈಲಿನಲ್ಲಿದ್ದುಕೊಂಡೇ ಹಿಂದುತ್ವದ ಬಗ್ಗೆ, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಕೃತಿರಚನೆ ಮಾಡುತ್ತ ಹೋದರು ಸಾವರ್ಕರ್.
ಇಷ್ಟೆಲ್ಲ ಧೀಶಕ್ತಿ ಹೊಂದಿದ್ದ ವ್ಯಕ್ತಿಯೊಬ್ಬ ಕೇವಲ ಕಟ್ಟರ್ಪಂಥೀಯ ನಾಯಕನಾಗಿದ್ದಿರುವುದಕ್ಕೆ ಸಾಧ್ಯವಿಲ್ಲ. ಅವರ ಎಲ್ಲ ವಿಚಾರಗಳನ್ನೂ ಒಪ್ಪಿಕೊಳ್ಳಲಾಗದ ಪ್ರಬಲ ಆಕ್ಷೇಪಗಳು ಹಲವಿರಬಹುದು. ಅಂಥ ಗೊಂದಲ ಎಲ್ಲರ ಬಗೆಗೂ ಇದೆಯಲ್ಲವೇ? ಮಾತೆತ್ತಿದರೆ ಗಾಂಧಿ ಎನ್ನುವ ಬುದ್ಧಿಜೀವಿಗಳು ಗಾಂಧಿ ಪ್ರತಿಪಾದನೆಯ ಗೋಹತ್ಯೆ ನಿಷೇಧ, ಮದ್ಯಪಾನ ನಿಷೇಧಗಳನ್ನೆಲ್ಲ ಸಂಪೂರ್ಣ ಒಪ್ಪಿಕೊಂಡಿಲ್ಲವಲ್ಲ. ಅವರ್ಯಾರಿಗೂ ತೋರದ ನಿಷ್ಠುರವನ್ನು ಅದೇಕೋ ಚರಿತ್ರೆ ಬರೆಯುವ ಬೌದ್ಧಿಕ ವರ್ಗ ಸಾವರ್ಕರ್ ಬಗ್ಗೆ ಮಾತ್ರ ತೋರಿಸಿದೆ. 2004ರಲ್ಲಿ ಯುಪಿಎ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಮಣಿಶಂಕರ್ ಅಯ್ಯರ್, ಅಂಡಮಾನ್- ನಿಕೋಬಾರ್ನ ಸೆಲ್ಯುಲಾರ್ ಜೈಲಿನಲ್ಲಿದ್ದ ಸಾವರ್ಕರ್ ಸಂದೇಶದ ಫಲಕವನ್ನು ತೆರವು ಮಾಡಿಸುವ ಅಸಹಿಷ್ಣು- ಕರಾಳ ಬುದ್ಧಿ ತೋರುತ್ತಾರೆ. ಅದೇ ಮಣಿಶಂಕರ್ ಅಯ್ಯರ್ ಈ ಚುನಾವಣೆಯ ಪ್ರಾರಂಭದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಲಾಯಕ್ಕಿಲ್ಲ, ಅವರ ಯೋಗ್ಯತೆ ಏನಿದ್ದರೂ ಚಹಾ ಮಾರುವುದಕ್ಕೆ ಸೀಮಿತ ಅಂದಿದ್ದರು. ನಂತರ ಏನಾಯಿತೆಂಬುದು ನಮ್ಮ ಕಣ್ಮುಂದಿದೆ. ಮೋದಿ ಭಾರತದ ಪ್ರಜೆಗಳು ಇತಿಹಾಸ ಒಂದು ಕಾಲಘಟ್ಟದಲ್ಲಿ ಯಾರನ್ನೆಲ್ಲ 'ಸಂಶಯಾಸ್ಪದ ವಿಲನ್'ಗಳಂತೆ ನೋಡಿತ್ತೋ ಅವರು ನಿಜಕ್ಕೂ ಏನಾಗಿದ್ದರು ಎಂಬ ಬಗ್ಗೆ ಮೋದಿ ಉದಾಹರಣೆಯ ಸ್ಫೂರ್ತಿಯೊಂದಿಗೇ ಅಧ್ಯಯನಕ್ಕೆ ಇಳಿಯಬಹುದಾಗಿದೆ.
- ಚೈತನ್ಯ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

