ಬ್ಯಾಂಕಿಂಗ್ ಬೇಕೇ ಬೇಕು! ಆದರೆ ಬ್ಯಾಂಕು ಬೇಕಾ ?

ಜಗತ್ತಿನ ಬಹುಪಾಲು ದೇಶಗಳ ಬ್ಯಾಂಕಿಂಗ್ ವ್ಯವಸ್ಥೆ ಕುಸಿದಾಗ ನಾವೆಲ್ಲಾ ನಮ್ಮ ಬೆನ್ನು ಚಪ್ಪರಿಸಿಕೊಂಡು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಗುಣಗಾನ ಮಾಡಿದ್ದೆವು ನೆನೆಪಿದೆಯಾ? ಆದರೆ....
ಬ್ಯಾಂಕಿಂಗ್ ಬೇಕೇ ಬೇಕು! ಆದರೆ  ಬ್ಯಾಂಕು ಬೇಕಾ ?
ಬ್ಯಾಂಕಿಂಗ್ ಬೇಕೇ ಬೇಕು! ಆದರೆ ಬ್ಯಾಂಕು ಬೇಕಾ ?
ಜಗತ್ತಿನ ಬಹುಪಾಲು ದೇಶಗಳ ಬ್ಯಾಂಕಿಂಗ್ ವ್ಯವಸ್ಥೆ ಕುಸಿದಾಗ ನಾವೆಲ್ಲಾ ನಮ್ಮ ಬೆನ್ನು ಚಪ್ಪರಿಸಿಕೊಂಡು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಗುಣಗಾನ ಮಾಡಿದ್ದೆವು ನೆನೆಪಿದೆಯಾ? ನಮ್ಮಲ್ಲಿ ಅನುತ್ಪಾದಕ ಆಸ್ತಿಯನ್ನ (ನಾನ್ ಪರ್ಫಾರ್ಮಿಂಗ್ ಅಸೆಟ್) ನಷ್ಟ ಎಂದು ತೋರಿಸದೆ ಅದನ್ನ ಬಹುಕಾಲ ಬ್ಯಾಲೆನ್ಸ್ ಶೀಟ್ ನಲ್ಲಿ ಉಳಿಸಿಕೊಂಡು ಬರುತ್ತಿದ್ದೆವು ಹೀಗಾಗಿ ಜನ ಸಾಮಾನ್ಯನಿಗೆ ಬ್ಯಾಂಕ್ಗಳ ನಿಜ ಸ್ಥಿತಿಯ ಅರಿವಾಗುತ್ತಲೇ ಇರಲಿಲ್ಲ. ಅಲ್ಲದೆ ಜಗತ್ತಿನ ಎದುರು ಕೂಡ ನಮ್ಮ ವಿತ್ತ ವ್ಯವಸ್ಥೆ ಸದೃಢ ಎನ್ನುವ ಭಾವನೆ ಬಿತ್ತುತ್ತಿದ್ದೆವು. ಆದರೇನು ಯಾವುದೆ ಒಬ್ಬ ವೃತ್ತಿಪರ ವ್ಯಕ್ತಿಗೆ ಈ ಸಂಖ್ಯೆಗಳನ್ನ ನೋಡಿದ ತಕ್ಷಣ ನಾವು ಎಲ್ಲಿ ನಿಂತಿದ್ದೇವೆ ಎನ್ನುವುದರ ಅರಿವಾಗುತ್ತಿತ್ತು. 
ನಮ್ಮ ರಿಸರ್ವ್ ಬ್ಯಾಂಕ್ ನ ಹಿಂದಿನ ಮುಖ್ಯಸ್ಥ ರಘುರಾಮ ರಾಜನ್ ಇಂತಹ ಅನುತ್ಪಾದಕ ಆಸ್ತಿಯನ್ನ ಬ್ಯಾಲನ್ಸಶೀಟ್ ನಿಂದ ಪ್ರಾಫಿಟ್ ಅಂಡ್ ಲಾಸ್ ಗೆ ತನ್ನಿ ಎಂದರು ಅಂದರೆ ಬ್ಯಾಲೆನ್ಸ್ ಶೀಟ್ ಸ್ವಚ್ಛ ಮಾಡುವುದು. ಒಂದು ಸಣ್ಣ ಉದಾಹರಣೆ ಹೇಳಿ ಬಿಡುತ್ತೇನೆ ನೋಡಿ. ನಮ್ಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವಾರ್ಷಿಕ ಲಾಭವನ್ನ ನೂರು ರೂಪಾಯಿ ಎಂದು ಘೋಷಿಸಿತು ಎಂದುಕೊಳ್ಳಿ ಗ್ರಾಹಕರಿಗೆ ಮತ್ತು ಹೂಡಿಕೆದಾರರಿಗೆ ತಮ್ಮ ಬ್ಯಾಂಕ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವ ಭಾವನೆ ಬರುತ್ತದೆ. ಗಮನಿಸಿ ಕೊಟ್ಟ ಸಾಲ ಮರಳಿ ಪಡೆಯಲು ಆಗದೆ ಉಳಿದ ಹಣದ ಮೊತ್ತ ಹಲವು ವರ್ಷಗಳಿಂದ ಒಂದೆಡೆ ಸೇರಿ ಅದರ ಮೊತ್ತ ನೂರಿಪ್ಪತ್ತು ರೂಪಾಯಿ ಇದ್ದರೆ ಆಗ ಲಾಭವೆಲ್ಲಿ ಬಂತು? ಬ್ಯಾಂಕ್ ಆ ವರ್ಷ ಇಪ್ಪತ್ತು ರೂಪಾಯಿ ಲಾಸ್ ನಲ್ಲಿರುತ್ತದೆ. ನಮ್ಮ ಬಹುತೇಕ ಬ್ಯಾಂಕ್ಗಳ ಕಥೆ ಇದು. 
ಅಕ್ಟೋಬರ್ 24, 2017 ರಂದು ಭಾರತ ಸರಕಾರ 2.11 ಲಕ್ಷ ಕೋಟಿ ರೂಪಾಯಿ ಬ್ಯಾಂಕ್ಗಳಿಗೆ ಹಣ ಹೂಡುವುದಾಗಿ ಹೇಳಿಕೆ ನೀಡಿದೆ. ಭಾರತ ಸರಕಾರ ಅಂತಲ್ಲ ಜಗತ್ತಿನ ಯಾವುದೇ ಸರಕಾರವಿರಲಿ ಹೀಗೆ ಬ್ಯಾಂಕ್ನಲ್ಲಿ ಬಂಡವಾಳ ಹೂಡುವುದು ಗ್ರಾಹಕನ ವ್ಯವಸ್ಥೆಯ ಮೇಲಿನ ನಂಬಿಕೆಯನ್ನ ಭದ್ರಗೊಳಿಸಲು ಅಷ್ಟೆ. ಇರಲಿ. ಇದಾದ ಮಾರನೆ ದಿನ ಚೀಫ್ ಎಕನಾಮಿಕ್ ಅಡ್ವೈಸರ್ ಅರವಿಂದ್ ಸುಬ್ರಮಣಿಯನ್ 'ಬದಲಾದ ಭಾರತದ ಇಂದಿನ ಸ್ಥಿತಿ ಮತ್ತು ಭವಿಷ್ಯದ ದೃಷ್ಟಿಯಿಂದ ನಾವು 5-7 ದೊಡ್ಡ ಬ್ಯಾಂಕ್ಗಳನ್ನ ಹೊಂದಿದ್ದರೆ ಸಾಕು' ಎಂದಿದ್ದಾರೆ. ಅರ್ಥ ಇಷ್ಟೇ ಚೀನಾ ದೇಶಕ್ಕೆ ಸೆಡ್ಡು ಹೊಡೆದು ಅಂತರರಾಷ್ಟ್ರಿಯ ಮಾರುಕಟ್ಟೆಯಲ್ಲಿ ನಮ್ಮ ಛಾಪು ಮೂಡಿಸಲು ಆರ್ಥಿಕ ಸಬಲತೆ ಇಲ್ಲದೆ ಸಾಧ್ಯವೆ ಇಲ್ಲ. ಹಾಗೆ ನೋಡಲು ಹೋದರೆ ಚೀನಾದ ನಾಲ್ಕು ದೊಡ್ಡ ಬ್ಯಾಂಕ್ಗಳು ಜಗತ್ತಿನ ಅತಿ ದೊಡ್ಡ ಬ್ಯಾಂಕ್ಗಳ ಪಟ್ಟಿಯಲ್ಲೂ ಬರುತ್ತವೆ. ನಮ್ಮ ಬ್ಯಾಂಕ್ಗಳು ಜಗತ್ತಿನ ಐವತ್ತು ದೊಡ್ಡ ಬ್ಯಾಂಕ್ಗಳ ಪಟ್ಟಿಯಲ್ಲಿ ಬರಲು ಕೂಡ ಹೆಣಗುತ್ತವೆ. ಇದಕ್ಕೆ ಕಾರಣ ನಮ್ಮಲ್ಲಿ ಬ್ಯಾಂಕಿಂಗ್ ವ್ಯವಹಾರ ನೂರಾರು ಸಣ್ಣ ಪುಟ್ಟ ಬ್ಯಾಂಕ್ ಮತ್ತು ನಾನ್ ಬ್ಯಾಂಕಿಂಗ್ ಸಂಸ್ಥೆಗಳ ಅಡಿಯಲ್ಲಿ ಹರಡಿ ಹಂಚಿ ಹೋಗಿರುವುದು. 
ಹೇಗೆ ನೋಡಿದರೂ ಮುಂದಿನ ದಶಕದಲ್ಲಿ ಉಳಿದು ಬೆಳೆಯಲು ಸಾಧ್ಯವಾಗುವುದು ಕೇವಲ ಐದರಿಂದ ಆರು ಬ್ಯಾಂಕ್ಗಳಿಗೆ ಮಾತ್ರ. ಉಳಿದವು ಅವನತಿ ಕಾಣುತ್ತವೆ ಇಲ್ಲವೆ ವಿಲೀನವಾಗಿ ಹೋಗುತ್ತವೆ. ನಮ್ಮ ದೇಶದಲ್ಲಿ ವ್ಯವಸ್ಥೆಗೆ ನೀರಿನಲ್ಲಿ ಪಾಚಿಯಂತೆ ಅಂಟಿಕೊಂಡು ಇರುವ ಪ್ರವೃತ್ತಿ ಹೆಚ್ಚು. ಸ್ಟೇಟ್ ಬ್ಯಾಂಕ್ ನೊಂದಿಗೆ ಉಳಿದ ಸ್ಟೇಟ್ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಗೆ ಸಿಕ್ಕ ವಿರೋಧ ನಮ್ಮ ಕಣ್ಣ ಮುಂದಿದೆ. ಒಳಿತಿಗಾಗಿ ಶೀಘ್ರ ಬದಲಾವಣೆ ಮತ್ತು ಹೊಂದಾವಣಿಕೆ ಅತ್ಯಂತ ಅವಶ್ಯಕ. 
ನಾವು ಹೊಟ್ಟೆ ಪಾಡಿಗಾಗಿ ಕೆಲಸ ಮಾಡುತ್ತೇವೆ ಒಂದಷ್ಟು ಹಣ ಬದಲಾಗಿ ಗಳಿಸುತ್ತೇವೆ. ಮತ್ತು ನಮ್ಮ ಉಳಿವು ಮತ್ತು ಬೆಳವಣಿಗಾಗಿ ಅದನ್ನ ಬಳಸುತ್ತೇವೆ. ಉಳಿದ ಹಣವನ್ನ ಎಲ್ಲಿಡುವುದು? ಅಕಸ್ಮಾತ್ ಹಣದ ಕೊರತೆ ಎದುರಾದರೆ ಯಾರನ್ನ ಕೇಳುವುದು? ಯಾರೋ ಗೊತ್ತಿಲ್ಲದ ವ್ಯಕ್ತಿಯ ನಂಬಿ ವ್ಯವಹಾರ ನೆಡೆಸುವುದು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರ ನೀಡಿದ್ದು ಬ್ಯಾಂಕ್ ಅರ್ಥಾತ್ ಬ್ಯಾಂಕಿಂಗ್ ವ್ಯವಸ್ಥೆ. ಹೌದು ಇಂದಿಗೂ ಎಂದೆಂದಿಗೂ ನಮಗೆ ಬ್ಯಾಂಕಿಂಗ್ ವ್ಯವಸ್ಥೆ ಬೇಕೇ ಬೇಕು ಆದರೆ ಬ್ಯಾಂಕ್ ಬೇಕೇ? ಎನ್ನುವ ಪ್ರಶ್ನೆ ಮುಖ್ಯವಾಗಿ ಉದ್ಭವಿಸಲು ಕಾರಣಗಳು ಹಲವು ಅವುಗಳಲ್ಲಿ ಪ್ರಮುಖವಾದವು ಇವು. 
  • ಕುಸಿಯುತ್ತಿರುವ ಬಡ್ಡಿ ದರ ಹೂಡಿಕೆದಾರರನ್ನ ಬ್ಯಾಂಕ್ ನಿಂದ ವಿಮುಖರನ್ನಾಗಿ ಮಾಡುತ್ತಿದೆ. ಬೇರೆ ದಾರಿಯಿಲ್ಲದೆ ಬೇರೆ ಹೂಡಿಕೆ ದಾರಿಯನ್ನ ಅವರು ನೋಡಿಕೊಳ್ಳಬೇಕು. 
  •  ನಮ್ಮ ಹಿಂದಿನ ಯಶಸ್ವಿ ಬ್ಯಾಂಕ್ ಏನು ಮಾಡುತಿತ್ತು ಗೊತ್ತೆ? ಹಣವನ್ನ ಠೇವಣಿ ಪಡೆಯುವುದು ಮತ್ತು ಅದನ್ನ ಬೇರೆಯವರಿಗೆ ಸಾಲ ಕೊಡುವುದು ಮಧ್ಯದಲ್ಲಿ ಒಂದಷ್ಟು ಹಣ ಮಾಡುವುದು... ಬದಲಾದ ಸನ್ನಿವೇಶದಲ್ಲಿ ಈ ಕ್ರಿಯೆಯನ್ನ ಬ್ಯಾಂಕ್ ನ ಸಹಾಯವಿಲ್ಲದೆ ಹೊಸ ತಂತ್ರಜ್ಞಾನದ ಸಹಾಯದಿಂದ ಆರಾಮಾಗಿ ನೆಡೆಸಬಹುದು. 
  • ಗ್ರಾಹಕ ಬ್ಯಾಂಕ್ ನಿಂದ ಪಡೆಯುವ ಸೇವೆಗೆ ಹಾಕುವ ಸರ್ವಿಸ್ ಚಾರ್ಜ್ ಗಳಿಂದ ಬೇಸೆತ್ತು ಹೋಗಿದ್ದಾನೆ. ತಂತ್ರಜ್ಞಾನದ ಸಹಾಯದಿಂದ ತಾನೆ ಎಲ್ಲಾ ವಹಿವಾಟನ್ನ ನೆಡೆಸಬಹದು. ಬ್ಯಾಂಕಿಗೆ ಹೋಗುವ ಸಮಯದ ಜೊತೆಗೆ ಹಣದ ಉಳಿತಾಯ ಕೂಡ ಆಗುತ್ತದೆ. ಯೂರೋಪಿನಲ್ಲಿ ಇಂತಹ ಬ್ಯಾಂಕ್ಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ. 
  • ಇದು ಡಿಜಿಟಲ್ ಯುಗ ನಮ್ಮ ಖರ್ಚುಗಳು ನಾವು ಯಾರು? ನಮ್ಮ ಸಂಸ್ಕಾರವೇನು? ನಮ್ಮ ಹವ್ಯಾಸಗಳೇನು? ಎನ್ನುವುದ ತಿಳಿಸಿ ಹೇಳುತ್ತವೆ. ಗಮನಿಸಿ ನೀವು ಜಿಮ್ ಗೆ ಹಣ ಪಾವತಿಸಿದರೆ ನೀವು ಫಿಟ್ನೆಸ್ಗೆ ಪ್ರಾಮುಖ್ಯತೆ ಕೊಡುವರು ಅಂತ ಅರ್ಥ, ಪುಸ್ತಕ ಕೊಂಡರೆ ಪುಸ್ತಕ ಪ್ರೇಮಿ.. ಹೀಗೆ ನೀವು ಮಾಡುವ ಖರ್ಚು ನೀವ್ಯಾರೆಂದು ಹೇಳುತ್ತದೆ. ನಮ್ಮ ಟ್ರಡಿಷನಲ್ ಬ್ಯಾಂಕ್ ಈ ಕೆಲಸ ಮಾಡುವುದಿಲ್ಲ. 
  • ನಮ್ಮ ಖರ್ಚಿನ ರೀತಿ ನೀತಿ ಅಭ್ಯಾಸಿಸಿ ನಮಗೆ ಯಾವುದು ಸರಿ ಎಲ್ಲಿ ಹೆಚ್ಚಿನ ಡಿಸ್ಕೌಂಟ್ ಸಿಗುತ್ತೆ. ಅಥವಾ ಎಲ್ಲಿ ಯಾವ ವಸ್ತುವ ಕೊಳ್ಳಬಹದು ಎನ್ನುವ ಮಾಹಿತಿ ನಮ್ಮ ಈಗಿನ ಬ್ಯಾಂಕ್ಗಳು ನೀಡುತ್ತಿಲ್ಲ. ಮುಂಬರುವ ದಿನಗಳಲ್ಲಿ ಇವೆಲ್ಲಾ ನಮ್ಮ ಕೈ ಬೆರಳ ತುದಿಯಲ್ಲಿ ನಮಗೆ ಸಿಗಲಿವೆ. 
  • ಎಲ್ಲಕ್ಕೂ ಮುಖ್ಯವಾಗಿ ಗ್ರಾಹಕನಿಗೆ ಏನು ಬೇಕು ಅನ್ನವುದನ್ನ ಅಧ್ಯಯನ ಮಾಡಬೇಕು. ನಮ್ಮ ಇಂದಿನ ಬ್ಯಾಂಕ್ಗಳ ಸೋಲು ಪ್ರಮುಖವಾಗಿ ಆಗಿರುವುದು ಇಲ್ಲಿ. 
ಭಾರತದ ಮಟ್ಟಿಗಂತೂ ಯುವ ಸಮುದಾಯ ಮೊಬೈಲ್ ಅನ್ನು ಆಗಲೇ ಬ್ಯಾಂಕ್ ಮಾಡಿಕೊಂಡಿದೆ, ಯಾವುದೇ ಬ್ಯಾಂಕ್ಗೆ ಹೋಗಿ ಯುವ ಜನತೆ ಕಣ್ಣಿಗೆ ಬೀಳುವುದಿಲ್ಲ ಅಲ್ಲೇನಿದ್ದರೂ ಇನ್ನೂ ತಂತ್ರಜ್ಞಾನವನ್ನ ತಮ್ಮದಾಗಿಸಿಕೊಂಡಿಲ್ಲದ ಜನರದ್ದೇ ಬೀಡು. ಬ್ಯಾಂಕ್ ನಿರ್ವಹಿಸುವ ಎಲ್ಲಾ ಕಾರ್ಯವನ್ನ ಇಂದು ನಾವು ನಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಬಳಸಿ ಮಾಡಬಹುದಾಗಿದೆ ಹೀಗಾಗಿ ಬ್ಯಾಂಕ್ ಏಕೆ ಬೇಕು? ಮಧ್ಯವರ್ತಿಯಂತೆ ಕೆಲಸ ಮಾಡುವ ಬ್ಯಾಂಕ್ ನ ಬೌತಿಕ ಇರುವಿಕೆ ಏಕೆ ಬೇಕು?  ಮುಂಬರುವ ದಿನಗಳಲ್ಲಿ ಬೇಕೋ ಬೇಡವೋ ಬ್ಯಾಂಕ್ಗಳು ಇದ್ದವು ಎಂದು ಹೇಳಬೇಕಾದ ಪರಿಸ್ಥಿತಿ ಬರಲಿದೆ. 
ಹೀಗೆ ಹತ್ತಾರು ವಿಷಯಗಳ ಪಟ್ಟಿ ಮಾಡಬಹದು ಇಲ್ಲಿ ಇವುಗಳ ಉದ್ದೇಶವಿಷ್ಟೇ ಮೇಲೆ ಪಟ್ಟಿ ಮಾಡಿದ ಅಂಶಗಳನ್ನ ಸಾಕಾರ ಮಾಡಲು ಬ್ಯಾಂಕ್ನ ಅವಶ್ಯಕತೆ ಖಂಡಿತ ಇಲ್ಲ ಅವಶ್ಯಕತೆ ಇರುವುದು ತಂತ್ರಜ್ಞಾನ ಮತ್ತು ಅದರ ಸರಿ ಬಳಕೆಯದು. ಮುಂಬರುವ ದಿನಗಳಲ್ಲಿ ಚೀಫ್ ಫೈನಾನ್ಸಿಯಲ್ ಆಫೀಸರ್ ಜಾಗವನ್ನ ಚೀಫ್ ಡೇಟಾ ಆಫೀಸರ್ ಆಕ್ರಮಿಸಲಿದ್ದಾನೆ. ಮುಂದಿನ ದಿನಗಳಲ್ಲಿ ಡೇಟಾದ್ದೆ ಸಾಮ್ರಾಜ್ಯ.! ಮೊದಲೇ ಹೇಳಿದಂತೆ ನಮ್ಮ ಖರ್ಚು ವೆಚ್ಚ ನಾವ್ಯಾರೆಂದು ಜಗತ್ತಿಗೆ ತಿಳಿಸುತ್ತದೆ. ನಮ್ಮ ಪ್ರತಿ ಟ್ರಾನ್ಸಾಕ್ಷನ್ ಬೇಕೋ ಬೇಡವೋ ಅಚ್ಚಳಿಯದೆ ನಮ್ಮ ಖಾತೆಗಳಲ್ಲಿ ಉಳಿಯಲಿವೆ. ಡಾರ್ವಿನ್ 'ಬಲಿಷ್ಠವಾದವುಗಳು ಉಳಿವು' ಎನ್ನವುದನ್ನ ಜೀವ ಸಂಕುಲಕ್ಕೆ ಸಂಬಂಧಿಸಿದಂತೆ ಹೇಳಿದ್ದು ಆದರೆ ಅದು ಇದೀಗ ಎಲ್ಲೆಡೆ ಲಾಗೂ ಆಗುತ್ತಿದೆ. ಬ್ಯಾಂಕ್ಗಳ ಅಳಿವು ಉಳಿವು ಅವು ಎಷ್ಟು ಬೇಗ ಮತ್ತು ಹೇಗೆ ತಂತ್ರಜ್ಞಾನವನ್ನ ತಮ್ಮದಾಗಿಸಿಕೊಳ್ಳುತ್ತವೆ ಎನ್ನುವುದರ ಮೇಲೆ ನಿಂತಿದೆ. 
ಮೇಲೆ ಪಟ್ಟಿ ಮಾಡಿದ್ದೆಲ್ಲಾ ನಾವೆಂದುಕೊಂಡಷ್ಟು ವೇಗವಾಗಿ ಆಗದೆ ಹೋಗಬಹದು ಅಥವಾ ಆಗಿಯೂ ಬಿಡಬಹದು ಅದಕ್ಕೂ ಮುಖ್ಯವಾಗಿ ನಮಗೆ ಬೇಕಿರುವುದು ಬ್ಯಾಂಕಿಂಗ್ ವ್ಯವಸ್ಥೆಯೇ ಹೊರತು ಬ್ಯಾಂಕ್ ಅಲ್ಲ. ವಸ್ತು ಸ್ಥಿತಿ ಹೀಗಿರುವಾಗ ಭವಿಷ್ಯದಲ್ಲಿ ಉತ್ತಮ ಬ್ಯಾಂಕಿಂಗ್ ವ್ಯವಸ್ಥೆ ಒದಗಿಸುವ ನಾಲ್ಕಾರು ಬ್ಯಾಂಕ್ಗಳು ಸಾಕಲ್ಲವೇ? ಹತ್ತಾರು ಬ್ಯಾಂಕು ನಮಗೇಕೆ ಬೇಕು?
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com