ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ ಇನ್ನ್ಮುಂದೆ ಒಂದೇನಾ?

ಜಾಗತಿಕ ಮಟ್ಟದಲ್ಲಿ ನಮ್ಮ ಇರುವಿಕೆ ತೋರ್ಪಡಿಸಲು, ಹಣಕಾಸು ವಿಷಯದಲ್ಲಿ ಇನ್ನಷ್ಟು ಬಲಿಷ್ಠರಾಗಲು. ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶ ಏನೆಂದರೆ ಬಲಿಷ್ಠವಾಗಿಸಲು ಈ ಕಸರತ್ತು ಏಕೆ ಮಾಡಬೇಕು?
ವಿಜಯಾ, ಬ್ಯಾಂಕ್ ಆಫ್ ಬರೋಡ ಮತ್ತು ದೇನಾ ಇನ್ನ್ಮುಂದೆ ಒಂದೇನಾ?
ವಿಜಯಾ, ಬ್ಯಾಂಕ್ ಆಫ್ ಬರೋಡ ಮತ್ತು ದೇನಾ ಇನ್ನ್ಮುಂದೆ ಒಂದೇನಾ?
ಜನವರಿ 2, 2019 ರಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬ್ಯಾಂಕ್ ಆಫ್ ಬರೋಡ, ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕುಗಳನ್ನ ವಿಲೀನ ಗೊಳಿಸುವ 'ಸ್ಕೀಮ್ ಆಫ್ ಅಮಾಲ್ಗಮೇಷನ್' ಗೆ ಒಪ್ಪಿಗೆ ನೀಡಿದೆ. ಇಂತಹ ಒಂದು ವಿಲೀನ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು ಸೆಪ್ಟೆಂಬರ್ 17, 2018ರಲ್ಲಿ ಆದರೆ ಏಪ್ರಿಲ್ 1, 2019ರಿಂದ ಇವುಗಳ ಸ್ಕೀಮ್ ಆಫ್ ಅಮಾಲ್ಗಮೇಷನ್ ಜಾರಿಗೆ ಬರಲಿದೆ. 
ಈ ರೀತಿಯ ಬ್ಯಾಂಕ್ಗಳ ವಿಲೀನ ಏಕೆ ಮಾಡಲಾಗುತ್ತೆ? 
ಜಾಗತಿಕ ಮಟ್ಟದಲ್ಲಿ ನಮ್ಮ ಇರುವಿಕೆ ತೋರ್ಪಡಿಸಲು, ಹಣಕಾಸು ವಿಷಯದಲ್ಲಿ ಇನ್ನಷ್ಟು ಬಲಿಷ್ಠರಾಗಲು. ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶ ಏನೆಂದರೆ ಬಲಿಷ್ಠವಾಗಿಸಲು ಈ ಕಸರತ್ತು ಏಕೆ ಮಾಡಬೇಕು? ಏಕೆಂದರೆ ನಾವು ಈಗ ಬಲಿಷ್ಠರಲ್ಲ ಎನ್ನುವುದ ಸೂಕ್ಷ್ಮವಾಗಿ ಒಪ್ಪಿಕೊಂಡು, ಬಲಿರಾಗುವುದರತ್ತ ನೆಡೆಯಲು.
ನೀರವ್ ಮೋದಿ ಮತ್ತು ಮಲ್ಯರಂತ ಅನೇಕರು ಬ್ಯಾಂಕುಗಳಿಗೆ ಕೊಡಬೇಕಾದ ಹಣವನ್ನ ಮರುಪಾವತಿಸದೆ ಇರುವುದರಿಂದ ಬ್ಯಾಂಕುಗಳ ಸ್ಥಿತಿ ಅಷ್ಟೇನೂ ಚನ್ನಾಗಿಲ್ಲ. ಹಾಗೆ ನೋಡಲು ಹೋದರೆ ಇಂತಹ ವಿಲೀನಗಳು ಭಾರತದಲ್ಲಿ ಮಾತ್ರ ಆಗುತ್ತಿಲ್ಲ ಯೂರೋಪಿನ ಬಹುತೇಕ ದೇಶಗಳಲ್ಲಿ ಬ್ಯಾಂಕುಗಳ ವಿಲೀನ ಕ್ರಿಯೆ ಸಾಮಾನ್ಯವಾಗಿ ಬಿಟ್ಟಿದೆ. ಆರ್ಥಿಕವಾಗಿ ಸಬಲವಲ್ಲದ ಬ್ಯಾಂಕ್ನನ್ನು ಸಬಲ ಬ್ಯಾಂಕಿನೊಂದಿಗೆ ವಿಲೀನ ಗೊಳಿಸುವುದು ಸಹಜ ಕ್ರಿಯೆಯಾಗಿದೆ. ಇಂತಹ ಪ್ರಕ್ರಿಯೆಯಿಂದ ಸಬಲವಲ್ಲದ ಬ್ಯಾಂಕ್ ನ್ನು ಮುಚ್ಚುವ ಬದಲು ಮತ್ತು ಅಲ್ಲಿನ ನೌಕರರಿಗೆ ಮತ್ತು ಗ್ರಾಹಕರಿಗೆ ಹೆಚ್ಚಿನ ತೊದರೆಯಿಲ್ಲದೆ ಹೊಸ ಹೆಸರಿನೊಂದಿಗೆ ಹಳೆಯ ವ್ಯವಸ್ಥೆಯಲ್ಲಿ ಮುಂದುವರಿಯಲು ಮಾಡಿದ ಒಂದು ಸಹಾಯವಷ್ಟೇ. ಈಗ ಈ ಮೂರು ಬ್ಯಾಂಕುಗಳ ವಿಲೀನದಿಂದ ಇವುಗಳ ಒಟ್ಟು ವಹಿವಾಟು 15 ಲಕ್ಷ ಕೋಟಿ ಮುಟ್ಟುತ್ತದೆ. ಇದರಿಂದ ಈ ಬ್ಯಾಂಕು ಭಾರತದ ಮೂರನೇ ಅತಿ ದೊಡ್ಡ ಬ್ಯಾಂಕು ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಲಿದೆ. 
ಯಾವ ಬ್ಯಾಂಕು ತನ್ನ ಡೆಪಾಸಿಟ್ ಮತ್ತು ಸಾಲ ಎರಡನ್ನೂ ವರ್ಗಾಯಿಸುತ್ತದೋ ಅಂತಹ ಬ್ಯಾಂಕ್ ನ್ನು ಟ್ರಾನ್ಸ್ ಫಾರೋರ್ ಬ್ಯಾಂಕು ಎನ್ನುತ್ತಾರೆ. ಯಾರು ಇದನ್ನ ಸ್ವೀಕರಿಸುತ್ತಾರೋ ಅಂತಹ ಬ್ಯಾಂಕ್ ನ್ನು ಟ್ರಾನ್ಸ್ ಫೆರಿ ಬ್ಯಾಂಕ್ ಎನ್ನುತ್ತಾರೆ. ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಗಳು ಬ್ಯಾಂಕ್ ಆಫ್ ಬರೋಡ ಬ್ಯಾಂಕಿಗೆ ಈ ರೀತಿ ತಮ್ಮ ವ್ಯವಹಾರವನ್ನ ವರ್ಗಾಯಿಸುತ್ತಿವೆ ಹೀಗಾಗಿ ಇವೆರಡನ್ನ ಟ್ರಾನ್ಸ್ ಫಾರೋರ್ ಬ್ಯಾಂಕು ಎನ್ನಬಹದು. ಬ್ಯಾಂಕ್ ಆಫ್ ಬರೋಡ ಇದನ್ನ ಸ್ವೀಕರಿಸುತ್ತದೆ ಹೀಗಾಗಿ ಇದನ್ನ ಟ್ರಾನ್ಸ್ ಫೆರಿ ಬ್ಯಾಂಕ್ ಎನ್ನಬಹದು. 
ಇವತ್ತು ಈ ರೀತಿಯ ಕಸರತ್ತು ನೆಡೆದಿದ್ದರೆ ಅದಕ್ಕೆ ಪರೋಕ್ಷವಾಗಿ ಹಿಂದಿನ ಆರ್ ಬಿಐ ಮುಖ್ಯಸ್ಥ ರಘುರಾಮ ರಾಜನ್ ಕಾರಣ, ಏನಿದು ಕೇಂದ್ರ ಸರಕಾರ ಹಸಿರು ನಿಶಾನೆ ನೀಡಿದೆ ಅಂದಿರಿ ಮತ್ತೆ ರಾಜನ್ ನ್ನು ಇಲ್ಲಿ ಎಳೆ ತಂದಿರಿ ಎನ್ನುವ ನಿಮ್ಮ ಪ್ರಶ್ನೆಗೆ ಇದೋ ಉತ್ತರ. 
ಮೋದಿ ಸ್ವಚ್ಛ ಭಾರತ್ ಅಭಿಯಾನ ಶುರು ಮಾಡಿದಂತೆ ರಾಜನ್ ಹಣಕಾಸು ವಲಯದಲ್ಲಿ ಸ್ವಚ್ಛ ಬ್ಯಾಲನ್ಸ್ ಶೀಟ್ ಅಭಿಯಾನ ಶುರು ಮಾಡಿದ್ದು ವಿತ್ತ ವಲಯದಲ್ಲಿ ಒಂದು ಕಣ್ಣು ನೆಟ್ಟ ಎಲ್ಲಾ ಓದುಗರಿಗೂ ತಿಳಿದ ವಿಷಯವೇ ಆಗಿರುತ್ತದೆ.  ಬ್ಯಾಂಕ್ಗಳು ವಸೂಲಾತಿ ಆಗದೆ ಉಳಿದ ಸಾಲವನ್ನು ನಾನ್ ಪರ್ಫಾಮಿಂಗ್ ಅಸ್ಸೆಟ್ ಎಂದು ವಿಂಗಡಿಸಿ ಅದನ್ನ ತಮ್ಮ ಬ್ಯಾಲನ್ಸ್ ಶೀಟ್ ನಲ್ಲಿ ತೋರಿಸುತ್ತಿದ್ದರು, ಮತ್ತು ಪ್ರಾಫಿಟ್ ಅಂಡ್ ಲಾಸ್ ಸ್ಟೇಟಮೆಂಟ್ ನಲ್ಲಿ ಈ ವರ್ಷ ಇಷ್ಟು ಲಾಭ ಎಂದು ತೋರಿಸುತ್ತಿದ್ದರು. ಪಿ ಅಂಡ್ ಎಲ್ ನೋಡಿದರೆ ಬ್ಯಾಂಕ್ಗಳು ಸಖತ್ ಲಾಭ ಮಾಡುತ್ತಿವೆ ಎನ್ನುವ ಚಿತ್ರ ಕಟ್ಟಿ ಕೊಡುತ್ತಿದ್ದವು, ಬ್ಯಾಲನ್ಸ್ ಶೀಟ್ ಮತ್ತೊಂದು ಕಥೆ ಹೇಳುತಿತ್ತು, ಇದನ್ನ ಅರ್ಥ ಮಾಡಿಕೊಳ್ಳಲು ಒಂದು ಸಣ್ಣ ಉದಾಹರಣೆ ನೋಡೋಣ. 
ಒಂದು ಬ್ಯಾಂಕ್ 2014 ರಲ್ಲಿ ತನ್ನ ಲಾಭ 200 ಕೋಟಿ ಎಂದು ಘೋಷಿಸುತ್ತದೆ, ಆ ವರ್ಷ ಅವರಲ್ಲಿ ವಸೂಲಾಗದೆ ಉಳಿದ ಸಾಲದ  ಮೊತ್ತ 1೦೦ ಕೋಟಿ ಎಂದುಕೊಳ್ಳಿ, ಇದೆ ರೀತಿ 2015 ರಲ್ಲಿ ಲಾಭ 250, ವಸೂಲಾಗದ ಸಾಲ 150,  ಮತ್ತು 2016 ರಲ್ಲಿ ಲಾಭ 3೦೦, ವಸೂಲಾಗ ಸಾಲ 250 ಕೋಟಿ ಎಂದುಕೊಳ್ಳಿ.  ಕೇವಲ ಪಿ ಅಂಡ್ ಎಲ್ ನೋಡಿದರೆ 2014ರಲ್ಲಿ 200, 2015 ರಲ್ಲಿ 250 ಮತ್ತು 2016 ರಲ್ಲಿ 3೦೦ ಕೋಟಿ ಲಾಭ ಎನ್ನುವ ಚಿತ್ರಣ ಕಟ್ಟಿ ಕೊಡುತ್ತೆ ಅಂದರೆ ಮೂರು ವರ್ಷದ ಒಟ್ಟು ಲಾಭ 750ಕೋಟಿ!
ನಮ್ಮ ಬ್ಯಾಂಕ್ಗಳು ಇಷ್ಟು ದಿನ ತೂರಿಸಿಕೊಂಡು ಬಂದದ್ದು ಇದನ್ನೇ ರಿಸರ್ವ್ ಬ್ಯಾಂಕ್ ಹೇಳಿದ್ದು ಸಾಕು ಈ ರೀತಿ ನಮಗೆ ನಾವೇ ಮೋಸ ಮಾಡಿ ಕೊಳ್ಳುವ ಆಟ, ವಸೂಲಾಗದೆ ಉಳಿದ ಸಾಲವನ್ನು ಬ್ಯಾಡ್ ಡೆಟ್ ಎಂದು ವಿಂಗಡಿಸಿ ನಿಮ್ಮ ಲಾಭದಲ್ಲಿ ಕಳೆಯುತ್ತಾ ಬನ್ನಿ ಎಂದು. ಉದಾಹರಣೆ ಮುಂದುವರಿಸೋಣ. 
ಒಟ್ಟು ಮೂರು ವರ್ಷದ ಲಾಭ 750 ಕೋಟಿಯಲ್ಲಿ ರಿಸರ್ವ್ ಬ್ಯಾಂಕ್ ಹೇಳಿದಂತೆ ಒಟ್ಟು ಮೂರು ವರ್ಷದ ವಸೂಲಾಗದ ಸಾಲದ ಮೊತ್ತ 650 ಕೋಟಿ ಕಳೆದರೆ ಉಳಿಯುವುದು 1೦೦ ಕೋಟಿ ಲಾಭ ಅದೂ ಮೂರು ವರ್ಷದಲ್ಲಿ! ಈಗ ವ್ಯತ್ಯಾಸ ತಿಳಿಯಿತೇ?! 
ರಿಸರ್ವ್ ಬ್ಯಾಂಕ್ ತೆಗೆದುಕೊಂಡ ಈ ಕಠಿಣ ಕ್ರಮದಿಂದ, ಜಗತ್ತಿನ ಇತರ ಬ್ಯಾಂಕ್ಗಳು ಬಿದ್ದರೂ ನಾವು ಸೂಪರ್ ಎಂದು ಮೆರೆಯುತ್ತಿದ್ದ ಭಾರತೀಯ ಬ್ಯಾಂಕ್ಗಳು ಇನ್ನಿಲದಂತೆ ನೆಲಕಚ್ಚಿದವು. ಅದರ ನೇರ ಪರಿಣಾಮ ಬ್ಯಾಂಕ್ ಷೇರ್ ಗಳು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡವು. 
ಸರಕಾರದ ಮುಂದೆ ದೊಡ್ಡ ಸವಾಲು ಎದುರಾಯಿತು, ಇಷ್ಟು ದಿನ ರೋಗ ಇದ್ದರೂ ಇಲ್ಲ ಎಂದುಕೊಂಡು ಸುಮ್ಮನಿದ್ದದ್ದಾಯಿತು, ರಿಸರ್ವ್ ಬ್ಯಾಂಕ್ ರೋಗ ಇದೆಯೆಂದು ಜಗಜಾಹೀರಾತು ಮಾಡಿಯಾಗಿತ್ತು, ಅದರ ನಡೆ ಸರಕಾರದ ವಿರುದ್ಧ, ಜಾಗತಿಕ ಮಟ್ಟದಲ್ಲಿ ಭಾರತದಲ್ಲಿ ಹೂಡಿಕೆ ಮಾಡುವರಿಗೆ ತಪ್ಪು ಸಂದೇಶ ರವಾನೆ ಮಾಡಿದ ಹಾಗೆ ಇತ್ಯಾದಿ ಅನ್ನಿಸಬಹದು ಆದರೆ ಮುಂದಿನ ವರ್ಷ ಭಾರತದ ಭವಿಷ್ಯಕ್ಕೆ ರಿಸರ್ವ್ ಬ್ಯಾಂಕ್ ತೆಗೆದು ಕೊಂಡ ನಿರ್ಧಾರ ಬಹಳ  ಒಳ್ಳೆಯದು. 
ಆರ್ ಬಿಐ ನ ಈ ನಡೆಯಿಂದ ಆಕಾಶದಿಂದ ಒಮ್ಮೆಲೇ ನೆಲಕ್ಕೆ ಇಳಿದ ಬ್ಯಾಂಕ್ಗಳ ಪರಿಸ್ಥಿತಿ ಬಿಗಡಾಯಿಸಿತು, ಸರಕಾರ ವಿಧಿ ಇಲ್ಲದೆ ಸಾವಿರಾರು  ಕೋಟಿ ರೂಪಾಯಿ ಬ್ಯಾಂಕ್ಗಳಲ್ಲಿ ಮರು ಬಂಡವಾಳ ಹೂಡಿಕೆ ಮಾಡಿ ಕುಸಿತವನ್ನು ತಡೆದಿದೆ. ಕುಸಿತ ತಡೆಯಲು ಗ್ರಾಹಕರ ಹಾಗೂ ಹೂಡಿಕೆದಾರರ ವಿಶ್ವಾಸ ಉಳಿಸಿಕೊಳ್ಳಲು ಸರಕಾರ ಮಾಡಿದ ಮೊದಲ ಕಸರತ್ತು ಸರಿಯಾಗಿಯೇ ಇತ್ತು, ಕುಸಿತದ ನಂತರದ ಬೆಳವಣಿಗೆಗೆ, ಅಭಿವೃದ್ಧಿಗೆ ಸರಕಾರ ತೆಗೆದುಕೊಂಡ ಎರಡೆನೆ ಹೆಜ್ಜೆ  ಬ್ಯಾಂಕಗಳ ವಿಲೀನ ಪ್ರಕ್ರಿಯೆ. 
ಹಾಗೆ ನೋಡಲು ಹೋದರೆ ಈ ಮೂರು ಬ್ಯಾಂಕುಗಳಲ್ಲಿ ವಿಜಯಾ ಬ್ಯಾಂಕು ಅತ್ಯಂತ ಅರೋಗ್ಯ ಸ್ಥಿತಿಯಲ್ಲಿರುವ ಬ್ಯಾಂಕು. ಇದರ ಅನುತ್ಪಾದಕ ಆಸ್ತಿ ಕೇವಲ 6.9 ಇದ್ದು ದೇನಾ ಬ್ಯಾಂಕ್ 22 ಪ್ರತಿಶತಕ್ಕೂ ಹೆಚ್ಚಾಗಿದೆ. ಹೀಗಾಗಿ ದೇನಾ ಬ್ಯಾಂಕ್ ಜನರಿಗೆ ಸಾಲ ಕೊಡುವ ಹಾಗಿಲ್ಲ. ಬ್ಯಾಂಕ್ ಆಫ್ ಬರೋಡ ಕೂಡ 12  ಪ್ರತಿಶತಕ್ಕಿಂತ ಹೆಚ್ಚಾಗಿದೆ. ಕೇಂದ್ರ ಸರಕಾರದ ಪ್ರಾಮ್ಟ್ ಕರೆಕ್ಟಿವ್ ಆಕ್ಷನ್ (PCA) ಅಡಿಯಲ್ಲಿ ಈ ಬ್ಯಾಂಕುಗಳನ್ನ ವಿಲೀನಗೊಳಿಸಲಾಗುತ್ತಿದೆ. 
ಇದೆಲ್ಲಾ ಸರಿ ಅರ್ಥ ಆಯ್ತು, ವಿಲೀನದಿಂದ ಬಲಿಷ್ಠ ಹೇಗಾಗುತ್ತಾರೆ, ಉಳಿತಾಯ ಹೇಗಾಗುತ್ತೆ? 
  1. ವಿಲೀನಗೊಳ್ಳಲಿರುವ ಎಲ್ಲಾ ಬ್ಯಾಂಕ್ಗಳ ಡೆಪಾಸಿಟ್ ಒಂದೇ ತಟ್ಟೆಯಲ್ಲಿ ತೂಗಲಾಗುತ್ತೆ, ಒಂದು ಬ್ಯಾಂಕ್ ಇನ್ನೊಂದು ಬ್ಯಾಂಕ್ನಿಂದ ಹಲವು ಬಾರಿ ಸಾಲ ಪಡೆಯುತ್ತವೆ. ಅದಕ್ಕೆ ಬಡ್ಡಿ ಕೂಡ ನೀಡುತ್ತವೆ, ವಿಲೀನದಿಂದ ಈ ಬ್ಯಾಂಕ್ಗಳ ನಡುವಿನ ಕೊಡು-ಕೊಳ್ಳುವಿಕೆ ಇಲ್ಲವಾಗುತ್ತದೆ. ನೇರವಾಗಿ ಗ್ರಾಹಕನಿಗೆ ಸಾಲ ಕೊಡಬಹುದು, ಹೆಚ್ಚು ಬಡ್ಡಿಯೂ ಸಂಪಾದಿಸಬಹುದು. ದೇನಾ ಬ್ಯಾಂಕಿನ ಗ್ರಾಹಕರಿಗೆ ಕೂಡ ಇದರಿಂದ ಸಾಲ ಸಿಗುತ್ತದೆ. 
  2. ಒಂದೇ ಏರಿಯಾದಲ್ಲಿ ವಿಜಯಾ, ದೇನಾ ಮತ್ತು ಬ್ಯಾಂಕ್ ಆಫ್ ಬರೋಡ  ಹೀಗೆ ಮೂರ್ನಾಲ್ಕು ಬ್ಯಾಂಕ್ ಇರುವುದು ನಾವು ಕಂಡಿದ್ದೇವೆ. ವಿಲೀನದಿಂದ ಮೂರು ಬ್ಯಾಂಕ್ ಬದಲು  ಒಂದೇ ಬ್ಯಾಂಕ್ ಕಾರ್ಯ ನಿರ್ವಹಿಸುತ್ತದೆ. ಖರ್ಚು ಕಡಿಮೆಯಾಗುತ್ತದೆ. 
  3. ಹೆಚ್ಚಿದ ಗ್ರಾಹಕ ಸಂಖ್ಯೆ, ಹೆಚ್ಚಿದ ವಹಿವಾಟು,  ಹಲವು ಕೆಲಸಗಳು ಒಂದು ಸೂರಿನಡಿ, ನಿಪುಣರ ಕ್ಷಮತೆ ಹಂಚಿಕೊಂಡು ಕೆಲಸ ಮಾಡುವುದರಿಂದ  ಸಾಲ ವಸೂಲಾತಿ ಮುಂತಾದ ಕಾರ್ಯಗಳು ಕ್ಷಮತೆ ಪಡೆಯುತ್ತವೆ. 
  4. ದೊಡ್ಡದಾದಷ್ಟು ಹಲವು ವಿಷಯಗಲ್ಲಿ, ವ್ಯವಹಾರಗಲ್ಲಿ ಹೆಚ್ಚಿನ ಚೌಕಾಸಿ ಮಾಡುವ ಶಕ್ತಿ ಬರುತ್ತದೆ, ಜಾಗತಿಕ ಮಟ್ಟದಲ್ಲಿ ನಾವು ಒಬ್ಬ ಆಟಗಾರರಾಗಿ ಹೊರ ಹೊಮ್ಮುವ ಸಾಧ್ಯತೆ ಕೂಡ ಇದೆ. 
  5. ಬ್ಯಾಂಕು ಮುಚ್ಚುವ ಬದಲು ವಿಲೀನವಾಗುವುದರಿಂದ ಮುಚ್ಚುವ ಭಯ ಹೊಂದಿದ್ದ ಬ್ಯಾಂಕಿನ ಕೆಲಸಗಾರರಿಗೆ ಅದೇ ವೇತನದಲ್ಲಿ ಕೆಲಸ ಮುಂದುವರಿಯುತ್ತದೆ. 
ಕೊನೆ ಮಾತು: ವಿಷಯ ಯಾವುದೇ ಇರಲಿ ಅದು ಒಂದಷ್ಟು ಜನರಿಗೆ ಖುಷಿ ನೀಡಿದರೆ ಅದೇ ಸಮಯದಲ್ಲಿ ಒಂದಷ್ಟು ಜನಕ್ಕೆ ದುಃಖ ನೀಡುತ್ತದೆ. ಇದು ಪ್ರಕೃತಿ ನಿಯಮ. ವಿಲೀನದಿಂದ ಜಾಗತಿಕವಾಗಿ ನಮ್ಮ ಬ್ಯಾಂಕ್ಗಳು ಸುಭದ್ರ ಸ್ಥಿತಿ ತಲುಪಬಹುದು. ವಿಲೀನದಿಂದ ಬ್ಯಾಂಕ್ ಉದ್ಯೋಗಿಗಳಿಗೆ ಬಹಳ ಕಷ್ಟವಾಗಲಿದೆ. 
ಮೊದಲೇ ಹೇಳಿದಂತೆ ಒಂದು ಏರಿಯಾದಲ್ಲಿ ಮೂರು ಬ್ಯಾಂಕ್ಗಳಿದ್ದವು ಎಂದು ಕೊಳ್ಳಿ ಪ್ರತಿ ಬ್ಯಾಂಕ್ ನಲ್ಲಿ 10 ನೌಕರರಿದ್ದಾರೆ ಎಂದುಕೊಳ್ಳಿ, ವಿಲೀನದಿಂದ 1 ಬ್ರಾಂಚ್ ಆ ಏರಿಯಾದಲ್ಲಿ ಉಳಿದುಕೊಳ್ಳುತ್ತದೆ, ಹೆಚ್ಚಿದ ವಹಿವಾಟು, ಕಾರ್ಯದ ಸಲುವಾಗಿ ಆ ಬ್ರಾಂಚ್ ನಲ್ಲಿ ಹತ್ತರ ಬದಲಿಗೆ 20 ನೌಕರರ ನಿಯಮಿಸಿದರು ಎಂದುಕೊಂಡರೂ ಉಳಿದ ಹತ್ತು ನೌಕರರು ದೂರದ ಊರಿಗೆ ವರ್ಗಾವಣೆಯ  ಭೀತಿ ಅನುಭವಿಸುತ್ತಾರೆ. 
ದೂರದೂರಿಗೆ ವರ್ಗಾವಣೆಯಾದ ಬ್ಯಾಂಕ್ ನೌಕರ ಹೊಸ ಬದಲಾವಣೆಗೆ ಒಗ್ಗಿಕೊಳ್ಳಲು ಪರದಾಡಬಹದು. ಕರ್ನಾಟಕ ಮೂಲದ ಬ್ಯಾಂಕು ಅಸ್ತಿತ್ವ ಕಳೆದುಕೊಂಡಿತು, ಕರ್ನಾಟಕ, ಕನ್ನಡದ ಆಸ್ಮಿತೆಗೆ ಇದರಿಂದ ಧಕ್ಕೆ ಎಂದು ಕನ್ನಡಿಗರು ಆಕ್ರೋಶಗೊಳ್ಳಬಹದು! ಹೀಗೆ ಒಂದು ನಿರ್ಧಾರ ಒಂದು ಕ್ರಿಯೆ ಹಲವು ಆಯಾಮಗಳನ್ನ ಹುಟ್ಟಿಹಾಕುತ್ತದೆ. ಇಲ್ಲಿ ಸರಿಯೇ? ತಪ್ಪೇ? ಎನ್ನುವುದಕ್ಕಿಂತ ಅಸ್ತಿತ್ವ, ಉಳಿಯುವಿಕೆ ಮುಖ್ಯವಾಗುತ್ತದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com