ಸ್ವಪಕ್ಷೀಯ ಶಾಸಕರ ಅಸಮಾಧಾನದ ಬೇಗುದಿ ಮುಗಿದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಟ್ಟುಸಿರು ಬಿಡುತ್ತಿರುವ ಸಂದರ್ಭದಲ್ಲೇ ಸರ್ಕಾರದ ವಿರುದ್ಧ ಗುತ್ತಿಗೆದಾರರು ಸಮರ ಆರಂಭಿಸಿದ್ದಾರೆ. ಈ ಹಿಂದೆ ಬೆಂಗಳೂರು ನಗರವೂ ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆಸಿದ ಕಾಮಗಾರಿಗಳ ಬಿಲ್ ಹಣ ಬಿಡುಗಡೆ ಮಾಡಲು ಕಮಿಷನ್ ನೀಡುವಂತೆ ಒತ್ತಾಯ ಮಾಡಲಾಗುತ್ತಿದೆ ಎಂಬ ಆರೋಪದೊಂದಿಗೆ ಈ ಸಮರ ಆರಂಭವಾಗಿದೆ.
ಗುತ್ತಿಗೆದಾರರ ಪೈಕಿ ಕೆಲವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೃಷಿ ವಿರುದ್ಧ ನೇರ ಆರೋಪ ಮಾಡಿರುವುದು ,ಇದೇ ಅವಕಾಶವನ್ನು ಬಳಸಿಕೊಂಡ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ. ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದು ಅದರ ಸಂಬಂಧ ಸಿಐಡಿ ತನಿಖೆ ಆರಂಭವಾಗಿದೆ.
ಮತ್ತೊಂದು ಕಡೆ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಸದಸ್ಯರ ನಾಮಕರಣ ವಿಚಾರವೂ ಕಾಂಗ್ರೆಸ್ ನಲ್ಲಿ ಮತ್ತೆ ಅತೃಪ್ತಿ ಹುಟ್ಟುಹಾಕಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆನೋವಾಗುವ ಸಾಧ್ಯತೆಗಳು ಕಂಡು ಬರುತ್ತಿವೆ.
ಯಾವುದೇ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ತನ್ನದೇ ಕಾರ್ಯಕ್ರಮಗಳನ್ನೊಳಗೊಂಡ ಮುಂಗಡ ಪತ್ರವನ್ನು ವಿಧಾನಮಂಡಲದ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆಯುವುದು ಸಾಂವಿಧಾನಿಕ ಕರ್ತವ್ಯ. ಅದಕ್ಕೂ ಮೊದಲು ಅಧಿಕಾರದಲ್ಲಿದ್ದ ಇನ್ನೊಂದು ರಾಜಕೀಯ ಪಕ್ಷ ತನ್ನ ಅಧಿಕಾರವಧಿಯಲ್ಲಿ ಬಜೆಟ್ ಮಂಡಿಸಿ ಒಪ್ಪಿಗೆ ಪಡೆದಿದ್ದರೂ ನಂತರ ಚುನಾವಣೆಯಲ್ಲಿ ಗೆದ್ದು ಬಂದು ಅಧಿಕಾರಕ್ಕೇರುವ ಪಕ್ಷ ತನ್ನದೇ ಆದ ಕಾರ್ಯಕ್ರಮಗಳನ್ನೊಳಗೊಂಡ ಬಜೆಟ್ ಮಂಡಿಸಿ ಜಾರಿಗೆ ತರುವುದು , ಹಿಂದಿನ ಸರ್ಕಾರ ಕೈಗೊಂಡಿದ್ದ ಕೆಲವೊಂದು ಯೋಜನೆಗಳು, ಕಾರ್ಯಕ್ರಮಗಳನ್ನು ಕೈಬಿಡುವುದು ಸ್ವಾಭಾವಿಕ. ಅದೊಂದು ಸಹಜ ರಾಜಕೀಯ ಪ್ರಕ್ರಿಯೆ.
ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ಶೇ.40 ರ ಕಮಿಷನ್ ಆರೋಪ ಮಾಡಿತ್ತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಆಗ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಬಿಜೆಪಿ ವಿರುದ್ಧ ಹೋರಾಟ ನಡೆಸಿತಷ್ಟೇ ಅಲ್ಲ, ಚುನಾವಣೆಯಲ್ಲೂ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸ್ಪರ್ಧೆ ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರ ಬಂದು ಮೂರು ತಿಂಗಳು ಕಳೆದಿದೆ. ಮುಂಗಡ ಪತ್ರದ ಮಂಡನೆಯೂ ಆಗಿ ಅನುಮೋದನೆಯೂ ದೊರಕಿದೆ. ಇದೇ ಸಂದರ್ಭದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದು ವಿವಾದದ ಮೂಲ. ಬೆಂಗಳೂರು ನಗರದ ಉಸ್ತುವಾರಿ ಹೊತ್ತಿರವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಕಾಮಗಾರಿಳಲ್ಲಿ ಅಕ್ರಮ ನಡೆದಿದೆ ಎಂದು ಶಂಕಿಸಿ ತನಿಖೆಗೆ ಮುಂದಾಗಿರುವುದಷ್ಟೇ ಅಲ್ಲ. ಸಂಶಯಾಸ್ಪದ ಎಂದು ಕಂಡು ಬಂದ ಕಾಮಗಾರಿಗಳ ಬಿಲ್ ಪಾವತಿ ತಡೆ ಹಿಡಿಯುವಂತೆ ಸೂಚಿಸಿದ್ದಾರೆ. ಇದು ಈಗ ರಾಜಕೀಯ ವಿವಾದವಾಗಿ ಮಾರ್ಪಟ್ಟಿದೆ. ತನಿಖಾ ವರದಿ ಬರುವ ಮುನ್ನವೇ ಕಾಮಗಾರಿ ನಡೆಸಿದ ಗುತ್ತಿಗೆದಾರರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದು ಆರೋಪಗಳನ್ನೂ ಮಾಡಿದ್ದಾರೆ.
ಇದೆಲ್ಲ ಏನೇ ಇರಲಿ. ಇಡೀ ಪ್ರಕರಣದ ಆಳಕ್ಕೆ ಇಳಿದರೆ ತಮ್ಮ ಬಾಕಿ ಇರುವ ಬಿಲ್ ಹಣ ಬಿಡುಗಡೆ ಆಗದಿದ್ದಾಗ ಮೂರು ವರ್ಷಗಳ ಕಾಲ ಸುಮ್ಮನಿದ್ದ ಗುತ್ತಿಗೆದಾರರು ಇದ್ದಕ್ಕಿದಂತೆ ಈಗ ಸರ್ಕಾರದ ವಿರುದ್ಧ ಆಯ್ದ ಸಚಿವರ ವಿರುದ್ಧ ಹೋರಾಟಕ್ಕೆ ಇಳಿದಿರುವುದರ ಹಿನ್ನಲೆ ನೋಡಿದರೆ ಈ ಹೋರಾಟದ ಹಿಂದೆ ರಾಜಕೀಯ ಶಕ್ತಿಗಳ ಬೆಂಬಲ ಇರುವುದು ಕಂಡು ಬರುತ್ತದೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಘೋಷಿಸಿರುವ ಹೊಸ ಯೋಜನೆಗಳ ಕಾರ್ಯಾರಂಭವೇ ಇನ್ನೂ ಆಗಿಲ್ಲ. ಒಂದು ಯೋಜನೆ ಘೋಷಣೆಯಾಗಿ ಕಾರ್ಯಾರಂಭ ಆಗುವವರೆಗೆ ಸರ್ಕಾರದ ಮಟ್ಟದಲ್ಲಿ ಹಲವು ಆಡಳಿತಾತ್ಮಕ ಪ್ರಕ್ರಿಯೆಗಳು ನಡೆಯುತ್ತವೆ. ಅವೆಲ್ಲ ಪೂರ್ಣಗೊಂಡು ಕಾಮಗಾರಿಗೆ ಚಾಲನೆ ಸಿಗಬೇಕಾದರೆ ಕನಿಷ್ಟವೆಂದರೂ ಮೂರು ತಿಂಗಳ ಅವಧಿ ಹಿಡಿಯುತ್ತದೆ. ಈಗಿನ ಸರ್ಕಾರದ ವಿಚಾರಕ್ಕೆ ಬಂದರೆ ಸಂಪನ್ಮೂಲದ ಲಭ್ಯತೆ ಆಧರಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿರುವುದರಿಂದ ಹೊಸ ಕಾಮಗಾರಿಗಳಿಗೆ ಇನ್ನೂ ಹಣ ಬಿಡುಗಡೆ ಆಗಿಲ್ಲ. ಸರ್ಕಾರ ಇನ್ನೂ ತನ್ನ ಜನಪ್ರಿಯ ಗ್ಯಾರಂಟಿ ಯೋಜನೆಗಳ ಜಾರಿಯ ಗೊಂದಲದಲ್ಲೇ ಇದೆ. ಅದೇ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಅಭಿವೃದ್ದಿ ಕಾಮಗಾರಿಗಳ ಕಡೆ ಗಮನ ಹರಿದಿಲ್ಲ.ತಮ್ಮ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ವಿಚಾರದಲ್ಲೂ ವಿಳಂಬ ಆಗುತ್ತಿರುವ ಬಗ್ಗೆ ಇತ್ತೀಚೆಗೆ ಆಡಳಿತ ಪಕ್ಷದ ಶಾಸಕರೇ ತಗಾದೆ ತೆಗೆದಿದ್ದು ಅವರನ್ನು ಸಿಎಂ ಸಿದ್ದರಾಮಯ್ಯ ತಣ್ಣಗಾಗಿಸಿದ್ದಾರೆ. ಗುತ್ತಿಗೆದಾರರು ಕೇಳುತ್ತಿರುವಂತೆ ಹಳೇ ಕಾಮಗಾರಿಗಳ ಬಿಲ್ ಹಣ ಬಿಡುಗಡೆ ಮಾಡಲು ಕೆಲವು ಕಾನೂನಾತ್ಮಕ ಸಮಸ್ಯೆಗಳಿವೆ. ಕಳಪೆ ಕಾಮಗಾರಿ ದೂರುಗಳು ಸೇರಿದಂತೆ ಇನ್ನಿತರೆ ಅಕ್ರಮಗಳ ಬಗ್ಗೆ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಹಣ ಬಿಡುಗಡೆ ಮಾಡಿದರೆ ಸರ್ಕಾರ ದ್ವಂದ್ವ ನೀತಿ ಅನುಸರಿಸಿದಂತಾಗುತ್ತದೆ. ಆದರೂ ಸಮರ್ಪಕವಾಗಿ ನಡೆದಿರುವ ಕಾಮಗಾರಿಗಳ ಬಿಲ್ ಹಣವನ್ನು ಮಂಜೂರು ಮಾಡುವಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಉಪ ಮುಖ್ಯಮಂತ್ರಿ ಶಿವಕುಮಾರ್ ಹೇಳಿದ್ದಾರೆ.ಇದನ್ನು ಕೇಳಲು ಗುತ್ತಿಗೆದಾರರು ತಯಾರಾಗಿಲ್ಲ.ವರ ಬೆಂಬಲಕ್ಕೆ ಬಿಜೆಪಿ ನಿಂತಿದೆ. ಪರೋಕ್ಷವಾಗಿ ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡಾ ಬೆಂಬಲಿಸಿದ್ದಾರೆ. ರಾಜ್ಯಪಾಲರ ಕಚೇರಿಯನ್ನೂ ಈ ವಿವಾದಕ್ಕೆ ಎಳೆದು ತರಲಾಗಿದೆ. ಹೀಗಾಗಿ ಇದೊಂದು ರಾಜಕೀಯ ವಿವಾದವಾಗಿದೆ.
ಮತ್ತೊಂದು ಕಡೆ ವಿಧಾನ ಪರಿಷತ್ತಿಗೆ ನೂತನ ಸದಸ್ಯರ ನಾಮಕರಣ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಕ್ಕಿದ್ದಾರೆ. ಸಚಿವ ಸಂಪುಟದಲ್ಲೂ ಈ ವಿಚಾರ ಪ್ರತಿಧ್ವನಿಸಿದೆ. ಮಾಜಿ ಸಚಿವ ಎಂ.ಆರ್. ಸೀತಾರಾಂ, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭೆ ಮಾಜಿ ಉಪ ಸಭಾಪತಿ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಆಲಿ ಖಾನ್ ಹಾಗೂಜಾರಿ ನಿರ್ದೇಶನಾಲಯದ ಮಾಜಿ ನಿರ್ದೇಶಕ ಸುಧಾಮ್ ದಾಸ್ ಅವರ ನಾಮಕರಣ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಕೆಲವೊಂದು ಆಕ್ಷೇಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಸರ್ಕಾರಕ್ಕೆ ವಿವರಣೆ ಕೇಳಿ ಪತ್ರ ಬರೆದಿದ್ದಾರೆ. ಬಹು ಮುಖ್ಯವಾಗಿ ಸುಧಾಮ್ ದಾಸ್ ನಾಮಕರಣಕ್ಕೆ ಕಾಂಗ್ರೆಸ್ ನಲ್ಲೇ ಅಪಸ್ವರ ಕೇಳಿ ಬಂದಿದೆ. ಆದರೆ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಆಪ್ತರಾಗಿದ್ದಾರೆ. ಹೀಗಾಗಿ ಅವರ ಹೆಸರನ್ನು ಬಿಡುವಂತಿಲ್ಲ.ಇನ್ನುಳಿದಂತೆ ಸೀತಾರಾಂ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರಿಗೆ ಭಿನ್ನಮತ ಇದ್ದಂತಿಲ್ಲ. ಸಮಸ್ಯೆ ಆಗಿರುವುದು ಮನ್ಸೂರ್ ಆಲಿಖಾನ್ ವಿಚಾರದಲ್ಲಿ . ಮುಖ್ಯಮಂತ್ರಿ ಸಿದ್ದರಾಮಯ್ಯಅವರು ತಮ್ಮ ಬೆಂಬಲಿಗರಾದ ಹೆಸರಾಂತ ಚಲನ ಚಿತ್ರ ಕಲಾವಿದೆ ಹಾಗೂ ಮಾಜಿ ಸಚಿವೆ ಶ್ರೀಮತಿ ಉಮಾಶ್ರೀಯವರನ್ನು ಪರಿಷತ್ತಿಗೆ ನಾಮಕರಣ ಮಾಡಲು ಉತ್ಸುಕರಾಗಿದ್ದಾರೆ. ಮನ್ಸೂರ್ ಆಲಿಖಾನ್ ವಿಚಾರದಲ್ಲೂ ಅವರಿಗೆ ಒಲವಿದ್ದಂತೆ ಇಲ್ಲ. ಈ ಸುಳಿವು ಅರಿತ ಅಲ್ಪ ಸಂಖ್ಯಾತ ಮುಖಂಡರು ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ತಮ್ಮ ಸಮುದಾಯಕ್ಕೆ ಪರಿಷತ್ತಿನಲ್ಲಿ ಪ್ರಾತಿನಿಧ್ಯ ನೀಡಲೇಬೇಕೆಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್ ಮೇಲೆ ಒತ್ತಡ ಹಾಕಿದ್ದಾರೆ.
ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಕ್ಕಾಗಿ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಯಿತು ಎಂಬ ವಾದವನ್ನು ಈ ಮುಖಂಡರು ಮುಂದಿಟ್ಟಿದ್ದಾರೆ.ಇದು ಸಹಜವೂ ಆಗಿದೆ. ಅಹಿಂದ ಸಿದ್ಧಾಂತವನ್ನು ಪ್ರತಿಪಾದಿಸುತ್ತಲೇ ಬಂದು ಅದನ್ನು ತಮ್ಮ ಮತ ಬ್ಯಾಂಕಾಗಿ ಪರಿವರ್ತಿಸಿಕೊಂಡಿರುವ ಸಿದ್ದರಾಮಯ್ಯ ಅವರಿಗೆ ಇದು ನುಂಗಲಾರದ ತುತ್ತಾಗಿದೆ. ಮನ್ಸೂರ್ ಆಲಿಖಾನ್ ಹೆಸರು ಕೈಬಿಟ್ಟರೆ ಮುಸ್ಲಿಮರು ಅಸಮಾಧಾನಗೊಳ್ಳುತ್ತಾರೆ ಇದು ಮುಂಬರುವ ಲೋಕಸಭೆ ಚುನಾವಣೆ ಮೇಲೂ ಪರಿಣಾಮ ಬೀರಬಹುದು. ಅದರಿಂದ ಪಕ್ಷಕ್ಕೆ ನಷ್ಟ. ಜೊತೆಗೆ ಪಕ್ಷದೊಳಗೇ ಇರುವ ತಮ್ಮ ವಿರೋಧಿಗಳು ಇದನ್ನೇ ತನ್ನ ವಿರುದ್ಧದ ರಾಜಕೀಯಕ್ಕೆ ಅಸ್ತ್ರ ಮಾಡಿಕೊಳ್ಳಬಹುದು ಎಂಬ ಆತಂಕ ಇನ್ನೊಂದು ಕಡೆ ಹೀಗಾಗಿ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಕ್ಕಿದ್ದಾರೆ.
ಹಿಂದಿನ ಹಲವು ಸಂದರ್ಭಗಳಲ್ಲಿ ಪರಿಷತ್ ಗೆ ಸದಸ್ಯರ ನಾಮಕರಣ ವಿಚಾರದಲ್ಲಿ ಸರ್ಕಾರ ಮತ್ತು ರಾಜಭವನದ ನಡುವೆ ಜಟಾಪಟಿಗಳೂ ನಡೆದ ಉದಾಹರಣೆಗಳಿವೆ. ಸರ್ಕಾರ ಶಿಫಾರಸು ಮಾಡಿದ ಹೆಸರುಗಳನ್ನು ರಾಜ್ಯಪಾಲರು ತಿರಸ್ಕರಿಸಿ ವಾಪಸು ಹಿಂದಕ್ಕೆ ಕಳಿಸಿದ ಪ್ರಸಂಗಗಳೂ ನಡೆದಿವೆ. ಅಂತಹ ಸನ್ನಿವೇಶ ಮತ್ತೆ ಎದುರಾದರೆ ಪಕಕ್ಷಕ್ಕೆ ಮುಜುಗುರದ ವಾತಾವರಣ ಉಂಟಾಗುತ್ತದೆ. ಬಹು ಮುಖ್ಯವಾಗಿ ಜೆಡಿಎಸ್ ಪಕ್ಷ ರಾಜಕೀಯ ಲಾಭ ಪಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಮುಖ್ಯಮಂತ್ರಿಯಾಗಿ ತಾವೇ ಅಧಿಕಾರದಲ್ಲಿರುವಾಗ ತನ್ನ ಬೆಂಬಲಿಗರೊಬ್ಬರಿಗೆ ಪರಿಷತ್ ಸದಸ್ಯ ಸ್ಥಾನ ಕಲ್ಪಿಸಲು ಸಾಧ್ಯವಾದರೆ ಬೆಂಬಲಿಗರ ಅದರಲ್ಲೂ ಹಿಂದುಳಿದ ವರ್ಗದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹೀಗಾಗಿ ಮುಖ್ಯಮಂತ್ರಿಗೆ ಈ ವಿಚಾರದಲ್ಲಿ ಸ್ಪಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಪ್ರಶ್ನಾತೀತರಾಗಿದ್ದರು. ಈಗ ಸನ್ನಿವೇಶ ಬದಲಾಗಿದೆ. ಹಾಗೆಯೇ ಅವರ ಆಡಳಿತ ಶೈಲಿಯೂ ಬದಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳ ಕಚೇರಿಯಿಂದ ಹೊರ ಬೀಳುತ್ತಿರುವ ಅಧಿಕಾರಿಗಳ ವರ್ಗಾವಣೆ ಪಟ್ಟಿಯಲ್ಲಿನ ಗೊಂದಲಗಳೇ ಸಾಕ್ಷಿ.
ಯಗಟಿ ಮೋಹನ್
yagatimohan@gmail.com
Advertisement