ವಿತ್ತ ಜಗತ್ತು 2024 ರಲ್ಲಿ ಹೇಗಿರಲಿದೆ? ಇಣುಕು ನೋಟ ಇಲ್ಲಿದೆ! (ಹಣಕ್ಲಾಸು)

ಹಣಕ್ಲಾಸು-394-ರಂಗಸ್ವಾಮಿ ಮೂಕನಹಳ್ಳಿ
೨೦೨೪ ವಿತ್ತ ಜಗತ್ತು
೨೦೨೪ ವಿತ್ತ ಜಗತ್ತು

ಮುಂದಿನ ವರ್ಷ ಹೇಗಿರುತ್ತೆ? ಎನ್ನುವುದು ಪ್ರತಿಯೊಬ್ಬ ನಾಗರೀಕನಿಗೂ ಕುತೂಹಲವಿರುತ್ತದೆ. ನನ್ನ ಭವಿಷ್ಯ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳುವ ಹಂಬಲ ಕೂಡ ಇದ್ದೆ ಇರುತ್ತದೆ. ಇದು ಆ ರೀತಿಯ ಭವಿಷ್ಯವಾಣಿಯಲ್ಲ. ಆದರೆ ಪ್ರತಿಯೊಬ್ಬ ನಾಗರಿಕನ ಭವಿಷ್ಯವನ್ನು ಬದಲಿಸಬಲ್ಲ ಲೆಕ್ಕಾಚಾರದ, ಅಂಕಿಅಂಶಗಳು ಹೇಳುವ ಮಾತು. ಜಾಗತಿಕವಾಗಿ 2024 ರಲ್ಲಿ ವಿತ್ತ ಜಗತ್ತು ಹೇಗಿರಲಿದೆ ಎನ್ನುವುದನ್ನು ಸ್ವಲ್ಪ ವಿಶ್ಲೇಷಿಸುವ ಪ್ರಯತ್ನವನ್ನು ಮಾಡೋಣ.

ಆರ್ಬಿಸಿ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆ ಹೇಳುವ ಪ್ರಕಾರ 2024 ರಲ್ಲಿ ಜಾಗತಿಕವಾಗಿ ವಿತ್ತ ಜಗತ್ತು ರಿಸೆಶನ್ ಗೆ ತುತ್ತಾಗುವ ಸಾಧ್ಯತೆ ಎಪ್ಪತ್ತು ಪ್ರತಿಶತ. ವರ್ಷದ ಮೊದಲಲ್ಲೇ ಇದನ್ನು ನಾವು ಕಾಣಬಹುದು ಎನ್ನುತ್ತದೆ. ಈ ರೀತಿಯ ಆರ್ಥಿಕ ಹಿಂಜರಿತಕ್ಕೆ ಕಾರಣಗಳನ್ನು ಕೂಡ ಆ ಸಂಸ್ಥೆ ನೀಡಿದೆ. ಒಂದೇ ಸಮನೆ ಏರುತ್ತ ಬಂದಿರುವ ಅಮೆರಿಕಾದ ಫೆಡರಲ್ ಬಡ್ಡಿ ದರ ಈ ಕುಸಿತಕ್ಕೆ ಪ್ರಮುಖ ಕಾರಣವಾಗಲಿದೆ. ಅಮೇರಿಕಾದಲ್ಲಿ ಹೆಚ್ಚಾಗಿರುವ ಹಣದುಬ್ಬರವನ್ನು ಕಡಿಮೆ ಗೊಳಿಸುವ ಸಲುವಾಗಿ ಬಡ್ಡಿದರವನ್ನು ಏರಿಸುತ್ತಾ ಬಂದಿದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಏರಿದ ಬಡ್ಡಿ ದರ ಇನ್ನೊಂದು ಸುತ್ತಿನ ಹಣದುಬ್ಬರಕ್ಕೆ ಕಾರಣವಾಗಿದೆ. ಹೀಗಾಗಿ ಹಣದುಬ್ಬರವನ್ನು ಕಡಿಮೆ ಮಾಡಬೇಕೆಂದು ಏರಿಸಿದ ಬಡ್ಡಿ ದರವೆ ಮುಳುವಾಗುವ ಸಾಧ್ಯತೆಗಳು ಬಹಳ ಹೆಚ್ಚಾಗಿವೆ. ಅಲ್ಲದೆ ಪ್ರತಿ ಬ್ಯುಸಿನೆಸ್ಗೆ ಒಂದು ಸೈಕಲ್, ಅಥವಾ ಒಂದು ಕರ್ವ್ ಎನ್ನುವುದನ್ನು ಮಾಡಿಕೊಂಡಿರಲಾಗುತ್ತದೆ. 

ಅದರ ಪ್ರಕಾರ ಎರಡು ವರ್ಷ ಹತ್ತು ತಿಂಗಳ ಕರ್ವ್ ಮತ್ತು ಮೂರು ವರ್ಷ ಹತ್ತು ತಿಂಗಳ ಕರ್ವ್ ಎರಡೂ ಮುಂದೆ ಆರ್ಥಿಕ ಹಿಜರಿತವಿದೆ ಎನ್ನುವುದನ್ನು ಹೇಳುತ್ತಿವೆ. ಅಂದರೆ ಗಮನಿಸಿ ಎಕಾನಮಿ ಎನ್ನುವುದು ಹೇಗೆ ನಡೆಯುತ್ತದೆ. ಅದರಲ್ಲಾಗುವ ಬದಲಾವಣೆಗಳನ್ನು ಕರ್ವ್ ಮೂಲಕ ಗಮನಿಸಿ ದಾಖಲಿಸಿ ಇಡಲಾಗುತ್ತದೆ. ಇವು ಅಂಕಿಅಂಶಗಳ ಆಧಾರದ ಮೇಲೆ , ಇಂತಹ ಸನ್ನಿವೇಶದಲ್ಲಿ ಮನುಷ್ಯ ಹೇಗೆ ವರ್ತಿಸುತ್ತಾನೆ ಎನ್ನುವುದನ್ನು ಕೂಡ ಲೆಕ್ಕ ಹಾಕಿ ಸೃಷ್ಟಿಸಲಾಗಿರುವ ಕರ್ವ್ಗಳು. ಇವುಗಳ ಪ್ರಕಾರ 2024 ರಲ್ಲಿ ಆರ್ಥಿಕ ಹಿಂಜರಿತ ಗ್ಯಾರಂಟಿ.

ನಮ್ಮ ಸಮಾಜ ಸಸ್ಟೈನಬಲ್ ಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಎಲ್ಲಿಯವರೆಗೆ ಹೆಚ್ಚಿನ ಒತ್ತಡವನ್ನು ಸಮಾಜ ತಡೆದುಕೊಳ್ಳಬಲ್ಲದು ? ಅಂದರೆ ಗಮನಿಸಿ ಎಲ್ಲದಕ್ಕೂ ಒಂದು ಗರಿಷ್ಟ ಕ್ಯಾಪಾಸಿಟಿ ಎನ್ನುವುದು ಇರುತ್ತದೆ. ಆ ಮಿತಿಯನ್ನು ಮೀರಿ ನಾವು ಹೆಚ್ಚು ಕಾಲ ಏನನ್ನೂ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ ಒಂದು ಲಾರಿ 20-25 ಟನ್ ತೂಕವನ್ನು ಹೊರಬಲ್ಲದು ಎಂದರೆ ಅದಕ್ಕಿಂತ ಐದತ್ತು ಟನ್ ಕಡಿಮೆ ಲೋಡ್ ಹಾಕಿರಬೇಕು. ಅದರ ಬದಲಿಗೆ ನಾವು 30-35 ಟನ್ ತೂಕವನ್ನು ಹಾಕಿದರೆ ಅವಘಡ ತಪ್ಪಿದ್ದಲ್ಲ. ನಮ್ಮ ಸಮಾಜದಲ್ಲಿ ಆಗಿರುವು ಇದೆ, ವರ್ಷಾನುಗಟ್ಟಲೆ ಓವರ್ ಲೋಡ್ ತಡೆದುಕೊಂಡಿರುವ ಆರ್ಥಿಕತೆ ಕುಸಿತ ಕಾಣುವುದು ಅತಿ ಸಹಜ. ಕೂಲ್ ಡೌನ್ ಆಗಲು ವೇಗವನ್ನಾದರೂ ತಗ್ಗಿಸ ಬೇಕಲ್ಲವೇ? ಆರ್ಥಿಕ ಹಿಂಜರಿತ ಅಥವಾ ರಿಸೆಶನ್ ಎಂದರೆ ಇನ್ನೇನೂ ಅಲ್ಲ ಅದು ನಮ್ಮ ಆರ್ಥಿಕತೆಯ ವೇಗಕ್ಕೆ ಕಡಿವಾಣ ಹಾಕುವ ಸ್ಪೀಡ್ ಬ್ರೇಕರ್.

ಜಗತ್ತಿನಾದ್ಯಂತ ಸೆಂಟ್ರಲ್ ಬ್ಯಾಂಕುಗಳು ಕೋವಿಡ್ಗೆ ಮೊದಲಿದ್ದ ಹಣದುಬ್ಬರವನ್ನು ಮರಳಿ ತರಲು ಹರಸಾಹಸವನ್ನು ಪಡುತ್ತಿವೆ. ಈ ರಿಸೆಶನ್ ಜ್ವರ ಬಂದಾಗ ಮಾತ್ರೆ ತೆಗೆದುಕೊಂಡಂತೆ ಒಳಿತೇ ಆಗಲಿದೆ ಎಂದು ನನ್ನ ಭಾವನೆ. ಈ ಹಿಂಜರಿತದಿಂದ ಮಾರುಕಟ್ಟೆಯಲ್ಲಿ ಹಣದುಬ್ಬರ ಮತ್ತು ಲೇಬರ್ ಮಾರುಕಟ್ಟೆಯಲ್ಲಿ ವೇತನ ಹೆಚ್ಚಳದ ಕೂಗು ಸ್ವಲ್ಪ ಕಡಿಮೆಯಾಗುತ್ತದೆ. ಇದು ಒಟ್ಟಾರೆ ಹಣದುಬ್ಬರವನ್ನು ಕಡಿಮೆ ಮಾಡುವುದರಲ್ಲಿ ಒಂದಷ್ಟು ಸಹಕಾರಿಯಾಗಲಿದೆ.

ಹೌದು 2024 ರ ಮೊದಲರ್ಧದಲ್ಲಿ ಆರ್ಥಿಕ ಹಿಂಜರಿತ ತಪ್ಪಿಸುವುದು ಕಷ್ಟಸಾಧ್ಯ. ಗಮನಿಸಿ ಇದು ಕುಸಿತವಲ್ಲ, ಕೇವಲ ಹಿಂಜರಿಕೆ. ಅಂದರೆ ಇದು ಕೇವಲ ಒಂದಷ್ಟು ವಾರಗಳಿಗೆ, ಹೆಚ್ಚೆಂದರೆ ಒಂದಷ್ಟು ತಿಂಗಳು ಮಾತ್ರ ಇರಲಿದೆ. ಸಮಾಜದ ಒಂದು ವರ್ಗಕ್ಕೆ ರಿಸೆಶನ್ ಆಗಿತ್ತು ಎಂದು ಕೂಡ ತಿಳಿಯುವುದಿಲ್ಲ. ರಿಸೆಶನ್ ಆಗಿತ್ತು ಎಂದು ಎಲ್ಲರಿಗೂ ತಿಳಿಯುವುದರೊಳೆಗೆ ಅದು ಬಂದು ಹೋಗಿರುತ್ತದೆ. ಹೀಗಾಗಿ ಇದರ ಬಗ್ಗೆ ನಾವು ಹೆಚ್ಚು ಚಿಂತೆ ಮಾಡಬೇಕಾದ ಅವಶ್ಯಕತೆಯಿಲ್ಲ. ಆದರೂ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಗಮನವಿರಲಿ.

ಹಣದುಬ್ಬರ

ಜಾಗತಿಕವಾಗಿ ಹಣದುಬ್ಬರ ಎಲ್ಲಾ ದೇಶಗಳನ್ನೂ ಹೈರಾಣು ಮಾಡಿದೆ. ಕೋವಿಡ್ ನಂತರದ ಬೆಲೆಯೇರಿಕೆ ಬಹಳ ದೇಶಗಳ ಅರ್ಥ ವ್ಯವಸ್ಥೆಯನ್ನು ಬದಲು ಮಾಡಿ ಬಿಟ್ಟಿವೆ. ಅಮೇರಿಕಾ , ಯೂರೋಪು ಸೇರಿದಂತೆ ಬಹಳ ದೇಶಗಳಲ್ಲಿ ಆಹಾರ ಪದಾರ್ಥಗಳ ಮೇಲಿನ ಬೆಲೆಯೇರಿಕೆ 50-80 ಪ್ರತಿಶತ ಮುಟ್ಟಿದೆ ಎಂದರೆ ಹಣದುಬ್ಬರದ ತೊಂದರೆ ಎಷ್ಟು ದೊಡ್ಡದು ಎನ್ನವುದರ ಅರಿವಾದೀತು. 2024 ರಲ್ಲಿ ಕೂಡ ಹಣದುಬ್ಬರ ತನ್ನ ಓಟವನ್ನು ಮುಂದವರಿಸಲಿದೆ. ರಿಸೆಶನ್ ಇದಕ್ಕೆ ಸ್ವಲ್ಪ ಮಟ್ಟಿನ ಕಡಿವಾಣ ಹಾಕಬಹುದು. ಉಳಿದಂತೆ 2024 ರಲ್ಲೂ ಹಣದುಬ್ಬರದ ಕಾಟ ಇದ್ದೆ ಇರುತ್ತದೆ.

ಡೆಫ್ಲೇಷನ್ ಅಥವಾ ಹಣದುಬ್ಬರದಿಳಿತ

ಡೆಫ್ಲೇಷನ್ ಎನ್ನುವ ಹೊಸ ಸನ್ನಿವೇಶ ಚೀನಾಕ್ಕೆ ಎದುರಾಗಿದೆ. ಇದು ಹಣದುಬ್ಬರಕ್ಕೆ ವಿರುದ್ಧವಾದದ್ದು. ಹಣದುಬ್ಬರದಲ್ಲಿ ಬೇಡಿಕೆ ಕುಸಿಯುವುದಿಲ್ಲ ಆದರೆ ಸೇವೆ ಮತ್ತು ಸರುಕಿನ ಬೆಲೆ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ಜನರಿಗೆ ಅದನ್ನು ಕೊಳ್ಳುವ ಶಕ್ತಿ ಕುಗ್ಗುತ್ತದೆ. ಈ ಕಾರಣ ಡಿಮ್ಯಾಂಡ್ ಕುಸಿತವಾಗುತ್ತದೆ. ಬೆಲೆಯೇರಿಕೆಯನ್ನು ತಡೆದು ಬಿಟ್ಟರೆ ಸಾಕು ಮಾರುಕಟ್ಟೆ ಮತ್ತೆ ಹಳಿಗೆ ಬರುತ್ತದೆ. ಹೀಗಾಗಿ ಇದು ಲೆಕ್ಕಾಚಾರದ ಪ್ರಕಾರ ಇದ್ದುದರಲ್ಲಿ ಸುಲಭವಾಗಿ ನಿಯಂತ್ರಣಕ್ಕೆ ತರಬಹುದು. ಆದರೆ ಡೆಫ್ಲೇಷನ್ ಹಾಗಲ್ಲ. ಇಲ್ಲಿ ಬೆಲೆಯೇರಿಕೆ ಇರುವುದಿಲ್ಲ ಎಲ್ಲವೂ ಕೈಗೆಟಕುವ ದರದಲ್ಲಿ ಸಿಗುತ್ತದೆ. ಆದರೆ ಡಿಮ್ಯಾಂಡ್ ಕುಸಿತಕಾಣುತ್ತದೆ. ಜನರಿಗೆ ಕೊಳ್ಳುವುದರಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಎಲ್ಲವೂ ಸಿಗುತ್ತಿದೆ , ಬೆಲೆಯೂ ಕೈಗೆಟುಕುವ ಮಟ್ಟದಲ್ಲಿದೆ ಆದರೂ ಪದಾರ್ಥವನ್ನು ಕೊಳ್ಳದ ಸನ್ನಿವೇಶವನ್ನು ಡೆಫ್ಲೇಷನ್ ಎನ್ನಲಾಗುತ್ತದೆ. ಇದು ಹಣದುಬ್ಬರಕ್ಕಿಂತ ದೊಡ್ಡ ಸಮಸ್ಯೆ. ಜಪಾನ್ ಇದರಲ್ಲಿ ಸಿಲುಕಿ ಇದೀಗ ಇದರಿಂದ ಹೊರಬರುತ್ತಿದೆ. ಚೀನಾ ಇದೀಗ ಇದರ ಕಬಂಧ ಬಾಹುಗಳಿಗೆ ಸಿಲುಕಿದೆ. ಚೀನಾದಲ್ಲಿ ಆರ್ಥಿಕತೆ ಕುಸಿದರೆ ಅದರ ಪರಿಣಾಮ ಜಗತ್ತಿನ ಮೇಲೂ ಆಗಲಿದೆ.

ಭಾರತದಲ್ಲಿ ನಡೆಯಲಿರುವ ಮಹಾಚುನಾವಣೆ ಜಾಗತಿಕ ವಿತ್ತ ಜಗತ್ತಿನ ದಿಕ್ಸೂಚಿ ಕೂಡ ಆಗಲಿದೆ

ಈಗಷ್ಟೆ ರಾಜ್ಯ ಚುನಾವಣೆಗಳಲ್ಲಿ ಕೇಂದ್ರ ಸರಕಾರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ ಜಯಭೇರಿ ಬಾರಿಸಿದೆ. ಅದರ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಕಂಡಿದ್ದೇವೆ. 2024 ರ ಏಪ್ರಿಲ್ ಮೇಯಲ್ಲಿ ನಡೆಯಲಿರುವ ಈ ಚುನಾವಣೆ ಕೇವಲ ಭಾರತದ ಭವಿಷ್ಯದ ದೃಷ್ಟಿಯಿಂದ ಮಾತ್ರವಲ್ಲ, ಜಾಗತಿಕ ವಿತ್ತ ಜಗತ್ತಿನ ದೃಷ್ಟಿಯಲ್ಲೂ ಬಹಳ ಮುಖ್ಯವಾಗಲಿವೆ. ಕಳೆದ ಹತ್ತು ವರ್ಷದಲ್ಲಿ ರಾಷ್ಟೀಯ ಮತ್ತು ಅಂತರರಾಷ್ಟ್ರೀಯ  ಮಟ್ಟದಲ್ಲಿ ಆಗಿರುವ ಬದಲಾವಣೆಗಳು, ಒಪ್ಪಂದಗಳು ಇನ್ನೊಂದು ಹಂತಕ್ಕೆ ಏರಲು ಈ ಚುನಾವಣೆ ಫಲಿತಾಂಶ ಸಹಾಯ ಮಾಡಲಿದೆ. ಭಾರತದ ಚುನಾವಣೆ ಫಲಿತಾಂಶ ಜಗತ್ತಿನ ಜಿಯೋ ಪೊಲಿಟಿಕಲ್ ಪರಿಭಾಷೆಯನ್ನು ಬದಲಿಸಲಿದೆ. ಹೀಗಾಗಿ ಭಾರತದ ಈ ಚುನಾವಣೆ ಭಾರತಕಷ್ಟೆ ಅಲ್ಲ ಇಡೀ ವಿಶ್ವಕ್ಕೆ ಮುಖ್ಯವಾಗಲಿದೆ.

ಒಟ್ಟಾರೆ ಮುಂದಿನ ವರ್ಷದಲ್ಲಿ...

  1. ಒಂದಷ್ಟು ಆರ್ಥಿಕ ಹಿಂಜರಿತವನ್ನು ನಾವು ಕಾಣಬಹುದು. ಅದು ಭಾರತದಲ್ಲಿ ಸೃಷ್ಟಿಯಾದದ್ದು ಎನ್ನುವುದಕ್ಕಿಂತ ಯೂರೋಪು ಮತ್ತು ಅಮೆರಿಕಾದದಿಂದ ಸಿಕ್ಕ ಉಡುಗೊರೆ ಎನ್ನಬಹುದು.
  2. ಚೀನಾ ಒಂದಷ್ಟು  ಆರ್ಥಿಕವಾಗಿ ಚೇತರಿಕೆ ಕಾಣಲಿದೆ. ಡೆಫ್ಲೇಷನ್ ನಿಂದ ಸ್ವಲ್ಪ ಮಟ್ಟಿಗೆ ಹೊರಬಂದರೂ ಅದು ಸಾಧನೆ.
  3. ಯೂರೋಪಿನ ಹಲವಾರು ದೇಶಗಳಲ್ಲಿ ರಿಯಲ್ ಎಸ್ಟೇಟ್ ಕುಸಿತ ಮುಂದುವರಿಯುತ್ತದೆ.
  4. ಪಾಲಿಸಿಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳು ಬಹಳವಿರುವ ಕಾರಣ ಮತ್ತು ಈ ರೀತಿಯ ಬದಲಾವಣೆ ಆದರೆ ಕೆನಡಾ ಮತ್ತು ಅಮೆರಿಕದಲ್ಲಿ ಒಂದಷ್ಟು ಚೇತರಿಕೆಯನ್ನು ಕಾಣಬಹುದು.
  5. ದೀರ್ಘಕಾಲದಿಂದ ತನ್ನ ಮೂಲ ಮೌಲಕ್ಕಿಂತ ಹೆಚ್ಚಾಗಿದ್ದ ಅಮೆರಿಕನ್ ಡಾಲರ್ ಮೌಲ್ಯ ಜಗತ್ತಿನ ಪ್ರಮುಖ ಕರೆನ್ಸಿಗಳ ಮುಂದೆ ಕುಸಿತ ಕಾಣುವ ಸಂಭವವಿದೆ. ಇದು ಬಹಳ ದೇಶಗಳ ಕರೆಂಟ್ ಅಕೌಂಟ್ ಡೆಫಿಸೀಟ್ಗೆ ದಾರಿಯಾಗಲಿದೆ.
  6. ಭಾರತದಲ್ಲಿ ಷೇರು ಮಾರುಕಟ್ಟೆ ಚುನಾವಣೆಯ ಫಲಿತಾಂಶಕ್ಕೆ ತಕ್ಕಂತೆ ವರ್ತಿಸಲಿದೆ.

ಕೊನೆ ಮಾತು: ಭಾರತದಲ್ಲಿ ಈ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣೆ ಇದೆ. ಈ ಚುನಾವಣೆಯ ಫಲಿತಾಂಶದ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಈಗಿರುವ ಕೇಂದ್ರ ಸರಕಾರವೇ ಮುಂದುವರಿದರೆ ಮುಂದಿನ ಐದು ವರ್ಷದಲ್ಲಿ ಭಾರತದ ಓಟವನ್ನು ತಡೆಯುವುದು ಸಾಧ್ಯವಿಲ್ಲ. ಜಾಗತಿಕವಾಗಿ ಭಾರತಕ್ಕೆ ಸಿಕ್ಕಿರುವ ಸ್ಥಾನಮಾನ ಇನ್ನಷ್ಟು ಬಲವಾಗಲು, ಮತ್ತಷ್ಟು ಹೆಚ್ಚಿನ ಬಲವನ್ನು ಪಡೆದುಕೊಳ್ಳಲು ಚುನಾವಣೆ ಫಲಿತಾಂಶ ಸಹಾಯ ಮಾಡಲಿದೆ. ಜಗತ್ತಿನ ಲೆಕ್ಕಾಚಾರದಲ್ಲಿ ಸ್ವಲ್ಪ ಆಚೀಚೆ ಆಗಬಹುದು, ಆದರೆ ಭಾರತದ ಭವಿಷ್ಯ ಪೂರ್ತಿ ನಿಂತಿರುವುದು 2024 ರ ಚುನಾವಣೆ ಫಲಿತಾಂಶದ ಆಧಾರದ ಮೇಲೆ ಮಾತ್ರ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com