ಉಗುರುಸುತ್ತು: ಲಕ್ಷಣಗಳು ಮತ್ತು ಮನೆಮದ್ದು (ಕುಶಲವೇ ಕ್ಷೇಮವೇ)

ಉಗುರುಸುತ್ತು (ಪ್ಯಾರಾನೈಕಿಯಾ) ಒಂದು ಸಾಮಾನ್ಯ ಸಮಸ್ಯೆ. ಉಗುರುಸುತ್ತು ಎಂದರೆ ಕೈ ಮತ್ತು ಕಾಲುಗಳ ಒಂದು ಬೆರಳಿನ ಅಥವಾ ಬೆರಳುಗಳ ಉಗುರಿನ ಸುತ್ತಲಿನ ಚರ್ಮವು ಕೆಂಪಾಗಿ ಊದಿಕೊಂಡು ಕೀವಿನಿಂದ ತುಂಬಿಕೊಳ್ಳುವ ಹಾಗೂ ನೋವಿನಿಂದ ಕೂಡಿರುವ ಸೋಂಕು.
ಉಗುರುಸುತ್ತು
ಉಗುರುಸುತ್ತು

ಉಗುರುಸುತ್ತು (ಪ್ಯಾರಾನೈಕಿಯಾ) ಒಂದು ಸಾಮಾನ್ಯ ಸಮಸ್ಯೆ. ಉಗುರುಸುತ್ತು ಎಂದರೆ ಕೈ ಮತ್ತು ಕಾಲುಗಳ ಒಂದು ಬೆರಳಿನ ಅಥವಾ ಬೆರಳುಗಳ ಉಗುರಿನ ಸುತ್ತಲಿನ ಚರ್ಮವು ಕೆಂಪಾಗಿ ಊದಿಕೊಂಡು ಕೀವಿನಿಂದ ತುಂಬಿಕೊಳ್ಳುವ ಹಾಗೂ ನೋವಿನಿಂದ ಕೂಡಿರುವ ಸೋಂಕು. ಸಾಮಾನ್ಯವಾಗಿ ಕೈಯ ಹೆಬ್ಬೆರಳಿನಲ್ಲಿ ಇದು ಕಾಣಿಸಿಕೊಳ್ಳುತ್ತದೆ. 

ಉಗುರುಸುತ್ತಿನ ಲಕ್ಷಣಗಳು
ಕೆಲವರಿಗೆ ಉಗುರುಸುತ್ತು ಕೆಲ ದಿನಗಳಲ್ಲಿ ವಾಸಿಯಾಗಬಹುದು ಮತ್ತು ಇತರರಿಗೆ ಕೆಲವು ವಾರಗಳ ತನಕ ಕಾಡಬಹುದು. ಕೆಲವೊಮ್ಮೆ ಮುಳ್ಳು ತಾಗಿ ಅಥವಾ ಗಾಯವಾಗುವುದರಿಂದ ಬ್ಯಾಕ್ಟೀರಿಯಾ ರೋಗಾಣುಗಳ ಸೋಂಕಾಗಿ ತೀವ್ರ ಉಗುರುಸುತ್ತು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ನೀರಿನ ಗುಳ್ಳೆಗಳು ಕೂಡ ಏಳುತ್ತವೆ ಮತ್ತು ಕೆಲವು ಸಲ ಸೋಂಕು ಹೆಚ್ಚಾದರೆ ಇತರೆ ಬೆರಳುಗಳಿಗೂ ಹರಡುತ್ತದೆ. ಕಲುಷಿತ ನೀರಿನಲ್ಲಿ ಬಹಳ ಹೊತ್ತು ಕೆಲಸ ಮಾಡಿದಾಗ ಸೂಕ್ಷ್ಮಾಣುಜೀವಿಗಳು ಬೆರಳಿನ ಒಳಗೆ ಸೇರಿಕೊಂಡು ಅಥವಾ ಮಕ್ಕಳು ಮಣ್ಣಿನಲ್ಲಿ ಆಡುವಾಗ ಮುಳ್ಳುಗಳು ಉಗುರೊಳಗೆ ಸೇರಿಕೊಂಡು ಗಾಯವಾಗಿ ಅದು ಉಗುರುಸುತ್ತಿಗೆ ಕಾರಣವಾಗಬಹುದು. 

ಉಗುರುಸುತ್ತು ಸೋಂಕಿರುವ ಜಾಗದಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಆ ಭಾಗವನ್ನು ಸ್ವಲ್ಪ ಮುಟ್ಟಿದರೆ ಅಥವಾ ಏನಕ್ಕಾದರೂ ತಗುಲಿದರೆ ಅಸಾಧ್ಯ ನೋವಾಗುತ್ತದೆ. ಕೀವು ತುಂಬಿದ ಚಿಕ್ಕ ಗುಳ್ಳೆಯೂ ಕೆಲವೊಮ್ಮೆ ಕಾಣಿಸಿಕೊಳ್ಳುತ್ತದೆ. ಕೆಲವು ಪ್ರಕರಣಗಳಲ್ಲಿ ಸೋಂಕು ಅಕ್ಕಪಕ್ಕದ ಬೆರಳುಗಳಿಗೂ ಹರಡುತ್ತದೆ. ಉಗುರುಸುತ್ತು ಸಮಸ್ಯೆ ಉಗುರಿನ ಅಂದವನ್ನು ಕೆಡಿಸುವುದು ಮಾತ್ರವಲ್ಲದೇ, ಸಹಿಸಲಾಗದ ನೋವು ಹಾಗೂ ಸೆಳೆತದಿಂದ ಯಾವುದೇ ರೀತಿಯ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.

ಉಗುರುಸುತ್ತಿನಲ್ಲಿ ಎರಡು ವಿಧಗಳಿವೆ - ಅಲ್ಪಾವಧಿ ಮತ್ತು ಧೀರ್ಘಾವಧಿ. ಅಲ್ಪಾವಧಿ ವಿಧದಲ್ಲಿ ಬೆರಳಿನ ಸುತ್ತ ಗಾಯವಾದ ಮೇಲೆ ಇದ್ದಕ್ಕಿದ್ದ ಹಾಗೆ ಊತ ಮತ್ತು ತೀವ್ರ ನೋವು ಶುರುವಾಗುತ್ತದೆ. ಐದರಿಂದ ಹತ್ತು ದಿನಗಳಲ್ಲಿ ಇದು ಸರಿಹೋಗುತ್ತದೆ. ಧೀರ್ಘಾವಧಿ ಉಗುರುಸುತ್ತು ವಾಸಿಯಾಗಲು ಬಹಳ ಸಮಯ ಹಿಡಿಯುತ್ತದೆ. ಇದರಲ್ಲಿ ನೋವು ಮತ್ತು ಊತ ಸ್ವಲ್ಪ ಸ್ವಲ್ಪವೇ ಹೆಚ್ಚಾಗಿರುತ್ತದೆ. 

ಉಗುರುಸುತ್ತು ಬಂದಾಗ ನೀರು, ಸೋಪ್, ಡಿಟಜೆರ್ಂಟ್, ಮೆಟಲ್ ಸ್ಕ್ರಬ್ಬಿಂಗ್, ಸ್ಕೌರಿಂಗ್ ಪ್ಯಾಡ್ಗಳು, ಸ್ಕೌರಿಂಗ್ ಪೌಡರ್ ಮತ್ತು ಇತರ ರಾಸಾಯನಿಕಗಳಂತಹ ಕಿರಿಕಿರಿ ಉಂಟುಮಾಡುವ ವಸ್ತುಗಳನ್ನು ಮುಟ್ಟುವಾಗ ಕೈಗವಸುಗಳನ್ನು ಧರಿಸಬೇಕು. ದಿನಕ್ಕೆ 2-3 ಬಾರಿ 15 ನಿಮಿಷಗಳವರೆಗೆ ಬಿಸಿ ನೀರಿನಲ್ಲಿ ನೋವಿರುವ ಬೆರಳುಗಳನ್ನು ಇಡುವುದರಿಂದಲೂ ಸಹ ಸಹಾಯವಾಗಬಹುದು. ಜೊತೆಗೆ ಬಿಸಿ ಶಾಖವನ್ನು ಕೊಡುವುದರಿಂದ ಊತ ಮತ್ತು ನೋವನ್ನು ಕಡಿಮೆ ಮಾಡಬಹುದು. 

ಉಗುರುಸುತ್ತಿಗೆ ಮನೆಮದ್ದು

ಉಗುರುಸುತ್ತಿಗೆ ಸಾಮಾನ್ಯವಾಗಿ ಮನೆಯಲ್ಲೇ ಚಿಕಿತ್ಸೆ ನೀಡಬಹುದು. 

  • ನಿಂಬೆಹಣ್ಣಿನ ರಸ ಮತ್ತು ಅರಿಷಿಣಪುಡಿಯನ್ನು ಸೇರಿಸಿ ಆ ಮಿಶ್ರಣವನ್ನು ತೊಂದರೆ ಉಗುರುಸುತ್ತಿರುವ ಭಾಗಕ್ಕೆ ಹಚ್ಚಿಕೊಳ್ಳಬೇಕು.
  • ಮೆಣಸಿನಕಾಳನ್ನು ಹಾಲಿನೊಂದಿಗೆ ಅರೆದು ಪೇಸ್ಟ್ ಮಾಡಿ ಉಗುರುಸುತ್ತಿಗೆ ಹಚ್ಚುವುದು ಹೆಚ್ಚು ಪರಿಣಾಮಕಾರಿ. 
  • ಬೇವಿನಸೊಪ್ಪನ್ನು ಉಪ್ಪಿನೊಂದಿಗೆ ಅರೆದು ಪೇಸ್ಟ್ ಮಾಡಿ ಅದನ್ನು ನೋವಿರುವ ಭಾಗಕ್ಕೆ ಹಚ್ಚಿ ಶುದ್ಧವಾದ ಬಟ್ಟೆಯನ್ನು ಒಂದೆರಡು ದಿನಗಳ ಕಾಲ ಕಟ್ಟಿಕೊಂಡರೆ ಉಗುರುಸುತ್ತು ವಾಸಿಯಾಗುತ್ತದೆ. 
  • ಅರಿಷಿಣ ಪುಡಿ ಮತ್ತು ಮೊಸರನ್ನು ಬೆರೆಸಿ ಉಗುರುಸುತ್ತು ಆಗಿರುವ ಭಾಗಕ್ಕೆ ಹಚ್ಚಿದರೆ ನೋವು ಉಪಶಮನವಾಗುತ್ತದೆ. 
  • ಬೆಳ್ಳುಳ್ಳಿಯನ್ನು ಜಜ್ಜಿ ಸೋಂಕು ಉಂಟಾಗಿರುವ ಹೆಬ್ಬೆರಳಿನ ಭಾಗಕ್ಕೆ ಹಚ್ಚುವುದರಿಂದ ಮತ್ತು ಸುಮಾರು 30 ನಿಮಿಷಗಳು ಕಳೆದ ನಂತರ ತೊಳೆದುಕೊಳ್ಳುವುದರಿಂದ ಸುಲಭವಾಗಿ ಪರಿಹಾರ ಸಿಗುತ್ತದೆ. 
  • ಸಾಮಾನ್ಯವಾಗಿ ಔಷಧಿ ಅಂಗಡಿಗಳಲ್ಲಿ ಸಿಗುವ ಆಪಲ್ ಸೈಡರ್ ವಿನೆಗರ್ ಮತ್ತು ಬಿಸಿ ನೀರನ್ನು ಒಂದೇ ಪ್ರಮಾಣದಲ್ಲಿ ಬೆರೆಸಿ ನೋವಿರುವ ಬೆರಳುಗಳನ್ನು 30 ನಿಮಿಷಗಳವರೆಗೆ ಇಡುವುದರಿಂದಲೂ ಸಹ ಸೋಂಕನ್ನು ಕಡಿಮೆ ಮಾಡಬಹುದು.
  • ಬೇವಿನ ಎಲೆ ಮತ್ತು ಅಗಸೆ ಬೀಜವನ್ನು ಅರೆದು ಪೇಸ್ಟ್ ತಯಾರಿಸಿ ಅದನ್ನು ಉಗುರುಸುತ್ತು ಆದ ಭಾಗಕ್ಕೆ ಹಚ್ಚಬೇಕು. 
  • ಗೋರಂಟಿ (ಮದರಂಗಿ) ಸೊಪ್ಪನ್ನು ನುಣ್ಣಗೆ ಅರೆದು ಉಗುರುಸುತ್ತಿಗೆ ಹಚ್ಚಿದರೆ ತಂಪಾದ ಅನುಭವವಾಗಿ ನೋವು ಕಡಿಮೆಯಾಗುತ್ತದೆ. 
  • ಒಂದು ನಿಂಬೆಹಣ್ಣಿಗೆ ಸೋಂಕು ಉಂಟಾಗಿರುವ ಬೆರಳು ಹೋಗುವಂತೆ ರಂಧ್ರ ಮಾಡಿ ಅದಕ್ಕೆ ಎರಡು ಕಾಳುಮೆಣಸು, ಅರಿಷಿಣ ಮತ್ತು ಏಲಕ್ಕಿ ಕುಟ್ಟಿ ಪುಡಿಮಾಡಿ ಹಾಕಿ ಅದಕ್ಕೆ ಬಾಧಿತ ಬೆರಳನ್ನು ಒಂದೆರಡು ದಿನಗಳ ಕಾಲ ಆಗಾಗ ಮೂರು-ನಾಲ್ಕು ಗಂಟೆಗಳ ಇಟ್ಟುಕೊಂಡರೆ ಉಗುರುಸುತ್ತು ವಾಸಿಯಾಗುತ್ತದೆ. 
  • ಎಕ್ಕದ ಎಲೆಯ ಹಾಲನ್ನು ಉಗುರುಸುತ್ತಿಗೆ ಹಚ್ಚುತ್ತಿದ್ದರೆ ಈ ಸಮಸ್ಯೆಯು ಕಡಿಮೆಯಾಗುತ್ತದೆ.
  • ಒಂದು ಚಮಚ ತೆಂಗಿನೆಣ್ಣೆ, ಒಂದು ಚಮಚ ಅರಶಿನ ಪುಡಿ ಈ ಎರಡರ ಮಿಶ್ರಣವನ್ನು ಬಿಸಿ ಮಾಡಿ ಉಗುರು ಸುತ್ತಾದ ಬೆರಳಿಗೆ ಲೇಪಿಸಿದರೆ ಕಡಿಮೆಯಾಗುತ್ತದೆ. 

ಸಕ್ಕರೆ ಕಾಯಿಲೆ ಇರುವವರಿಗೆ ಉಗುರುಸುತ್ತಾದರೆ ವೈದ್ಯರಿಗೆ ತೋರಿಸಬೇಕು. ಸಕ್ಕರೆಯ ಮಟ್ಟ ಪರೀಕ್ಷಿಸಿಕೊಂಡು ಚಿಕಿತ್ಸೆ ತೆಗೆದುಕೊಳ್ಳಬೇಕು. 

ಸಾಮಾನ್ಯವಾಗಿ ವೈದ್ಯರಿಗೆ ಉಗುರುಸುತ್ತನ್ನು ತೋರಿಸಿದರೆ ಊದಿಕೊಂಡ ಸ್ಥಳದಲ್ಲಿ ಶುದ್ಧ ಸೂಜಿಯಿಂದ ಚುಚ್ಚಿ  ಕೀವನ್ನು ಹೊರತೆಗೆಯುತ್ತಾರೆ. ನಂತರ ಜೀವಿರೋಧಕ (ಆಂಟಿಬಯಾಟಿಕ್) ಔಷಧಿಗಳಿಂದ ಚಿಕಿತ್ಸೆ ಮಾಡುತ್ತಾರೆ. ಅದು ದೀರ್ಘಕಾಲದ್ದಾದರೆ, ಸೂಕ್ತ ಅಣಬೆನಾಶಕ (ಶಿಲೀಂಧ್ರನಾಶಕ) ಚಿಕಿತ್ಸೆ ಹಾಗೂ ಇತರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಹೇಳುತ್ತಾರೆ. ಸರಿಯಾದ ಚಿಕಿತ್ಸೆ ತೆಗೆದುಕೊಂಡ ನಂತರವೂ ಕೂಡ ಬೆರಳುಗಳನ್ನು ಶುಷ್ಕವಾಗಿ ಮತ್ತು ಗಾಯವಾಗದೆ ಇರುವಂತೆ ನೋಡಿಕೊಳ್ಳಬೇಕು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com