ಹಿಮ್ಮಡಿ ನೋವು: ಗಂಭೀರ ಸಮಸ್ಯೆಯಲ್ಲ, ಆದರೂ ಅಸಹನೀಯ... (ಕುಶಲವೇ ಕ್ಷೇಮವೇ)

ಹಿಮ್ಮಡಿ ನೋವು ಒಂದು ಸಾಮಾನ್ಯ ಸಮಸ್ಯೆ. ಒಂದಲ್ಲಾ ಒಂದು ಸಲ ಎಲ್ಲರೂ ಹಿಮ್ಮಡಿ ನೋವನ್ನು ಅನುಭವಿಸಿರುತ್ತಾರೆ.
ಹಿಮ್ಮಡಿ ನೋವು
ಹಿಮ್ಮಡಿ ನೋವು
Updated on

ಹಿಮ್ಮಡಿ ನೋವು ಒಂದು ಸಾಮಾನ್ಯ ಸಮಸ್ಯೆ. ಒಂದಲ್ಲಾ ಒಂದು ಸಲ ಎಲ್ಲರೂ ಹಿಮ್ಮಡಿ ನೋವನ್ನು ಅನುಭವಿಸಿರುತ್ತಾರೆ. ಮುಂಜಾನೆ ಏಳುವಾಗ, ಸ್ವಲ್ಪ ಹೊತ್ತು ಕುಳಿತು ಏಳುವಾಗ, ಹಿಮ್ಮಡಿಯಲ್ಲಿ ಅತೀವ ನೋವು ಕಂಡು ಕೆಲವು ಹೆಜ್ಜೆಗಳನ್ನು ನಡೆದ ಮೇಲೆ ಈ ನೋವು ಕಡಿಮೆಯಾಗುತ್ತದೆ. ಆದರೆ ಸಂಜೆಯಾಗುತ್ತಿದ್ದಂತೆ ನೋವು ಮತ್ತೆ ಹೆಚ್ಚಾಗಬಹುದು. ಮೂವತ್ತು ವರ್ಷ ದಾಟಿದವರಲ್ಲಿ ಮತ್ತು ದೇಹದ ತೂಕ ಹೆಚ್ಚಾಗಿರುವ ಮಹಿಳೆಯರಲ್ಲಿ ಸಾಮಾನ್ಯವಾಗಿ ಹಿಮ್ಮಡಿ ನೋವು ಕಾಣಿಸಿಕೊಳ್ಳುತ್ತದೆ. ಇದು ಅಷ್ಟೇನು ಗಂಭೀರ ಸಮಸ್ಯೆಯಲ್ಲ ಆದರೂ ನೋವು ಮತ್ತು ಕಷ್ಟದಿಂದ ತೊಂದರೆಯಾಗುತ್ತದೆ.

ಹಿಮ್ಮಡಿ ನೋವಿನಿಂದ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಸರಾಗವಾಗಿ ನಡೆದಾಡಲು ಆಗುವುದಿಲ್ಲ. ಕೆಲವೊಮ್ಮೆ ಸರಿಯಾಗಿ ಆರೈಕೆ ಮಾಡಿದರೆ ಹಿಮ್ಮಡಿಯಲ್ಲಿ ನೋವು ಸೌಮ್ಯವಾಗಿದ್ದು ಒಂದೆರಡು ದಿನಗಳಲ್ಲಿ ವಾಸಿಯಾಗುತ್ತದೆ. ಒಮ್ಮೊಮ್ಮೆ ದಿನಗಟ್ಟಲೇ ಈ ಸಮಸ್ಯೆ ಕಾಡಬಹುದು. ನಡೆಯುವಾಗ ಕೆಲವೊಮ್ಮೆ ಏಕಾಏಕಿ ನೋವು ಕಾಣಿಸಿಕೊಳ್ಳುತ್ತದೆ. ಹಲವು ಬಾರಿ ದೀರ್ಘ ಸಮಯದವರೆಗೆ ಕುಳಿತು ಎದ್ದ ನಂತರ ಹಿಮ್ಮಡಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಹಿಮ್ಮಡಿಯ ರಚನೆಯು ನಮ್ಮ ದೇಹದ ತೂಕವನ್ನು ಸುಲಭವಾಗಿ ಹೊತ್ತುಕೊಳ್ಳಲು ಸಹಕಾರಿಯಾಗಿದೆ. ನಾವು ನಡೆಯುವಾಗ ಅಥವಾ ಓಡುವಾಗ ಹಿಮ್ಮಡಿಯು ಭಾರವನ್ನು ತೆಗೆದುಕೊಳ್ಳುತ್ತದೆ. ಇದರಿಂದಾಗಿ ನಾವು ಸುಲಭವಾಗಿ ಮುಂದೆ ಸಾಗಲು ಸಾಧ್ಯವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಹಿಮ್ಮಡಿ ನೋವು ತೀವ್ರ ಮತ್ತು ಅಸಹನೀಯವಾಗಿರುತ್ತದೆ. ಆದರೆ ಇದರಿಂದ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವುದಿಲ್ಲ.

ಹಿಮ್ಮಡಿ ನೋವಿಗೆ ಕಾರಣಗಳು

ಹಿಮ್ಮಡಿ ನೋವಿನ ಸಮಸ್ಯೆಗೆ ಹಲವಾರು ಕಾರಣಗಳಿವೆ. ಕೊಬ್ಬು ಅಥವಾ ದೇಹದ ತೂಕ ಹೆಚ್ಚಾಗುವುದರಿಂದ ರಕ್ತ ಪೂರೈಕೆಯ ಮೇಲೆ ಪರಿಣಾಮ ಬೀರುವುದು ಸೇರಿದಂತೆ ಬೇರೆ ಬೇರೆ ಕಾರಣಗಳಿರಬಹುದು. ನೋವು ಹೆಚ್ಚಾಗಿದ್ದರೆ ವೈದ್ಯರನ್ನು ಕಾಣುವುದು ಒಳ್ಳೆಯದು. ಕೆಲವೊಮ್ಮೆ ಗಾಯಗಳು, ಉಳುಕು, ಮುರಿತ ಇತ್ಯಾದಿಗಳು ಹಿಮ್ಮಡಿ ನೋವನ್ನು ಉಂಟುಮಾಡುತ್ತವೆ. ಅಲ್ಲದೇ ಸಂಧಿವಾತ, ಟೆಂಡೈನಿಟಿಸ್, ಗೌಟ್, ಹೀಲ್ ಸ್ಪರ್ಸ್ ಸೇರಿದಂತೆ ಅನೇಕ ವೈದ್ಯಕೀಯ ಸಮಸ್ಯೆಗಳು ಹಿಮ್ಮಡಿ ನೋವನ್ನು ಉಂಟುಮಾಡುತ್ತವೆ.

ದೇಹದ ಗಾತ್ರ ಮತ್ತು ತೂಕ ಪಾದಗಳಿಗೆ ಹೋಲಿಸಿದರೆ ಹೆಚ್ಚಾಗಿದೆ. ಹಾಗಾಗಿ ಇಡೀ ದೇಹದ ತೂಕ ಪಾದ, ನಂತರ ಹಿಮ್ಮಡಿ ಮೇಲೆ ಬಿದ್ದರೆ ನೋವು ಕಾಣಿಸಿಕೊಳ್ಳುತ್ತದೆ. ಅಧಿಕ ತೂಕ ಹೊಂದಿರುವ ವ್ಯಕ್ತಿಯು ನಡೆಯುವಾಗ ಅಥವಾ ಓಡುವಾಗ ಹಿಮ್ಮಡಿಯ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಿದಾಗ ನೋವು ಉಂಟಾಗಬಹುದು. ಆಗ ತೂಕ ಇಳಿಸಿಕೊಳ್ಳಲು ಮತ್ತು ಹಿಮ್ಮಡಿ ಮೇಲೆ ಹೆಚ್ಚು ಒತ್ತಡ ಬೀಳದಂತೆ ಜಾಗ್ರತೆ ವಹಿಸಬೇಕು.

ಹಿಮ್ಮಡಿ ನೋವಿಗೆ ಪರಿಹಾರ

ದಿನನಿತ್ಯ ಮೃದು ಮತ್ತು ಹಿತಕರವೆನಿಸುವ ಚಪ್ಪಲಿಗಳನ್ನು ಬಳಸಬೇಕು. ಯುವಜನರಾಗಿದ್ದರೆ ಆಟದ ಸಮಯದಲ್ಲಿ ಉತ್ತಮ ಗುಣಮಟ್ಟದ ಬೂಟುಗಳನ್ನು ಹಾಕಿಕೊಳ್ಳಬೇಕು. ಬೂಟುಗಳು ಪಾದಗಳಿಗೆ ಸರಿಯಾಗಿ ಹೊಂದಿಕೊಳ್ಳಬೇಕು ಮತ್ತು ಅಡಿಭಾಗ ಆರಾಮದಾಯಕವಾಗಿರಬೇಕು. ಹಿಮ್ಮಡಿ ನೋವಿದ್ದರೆ ಅದರ ಪರಿಹಾರಕ್ಕೆಂದೇ ವಿಶೇಷ ಪಾದರಕ್ಷೆಗಳು ಲಭ್ಯವಿವೆ. ಅವುಗಳನ್ನು ಧರಿಸುವುದರಿಂದಲೂ ಸಮಸ್ಯೆ ಕಡಿಮೆಯಾಗುತ್ತದೆ.

ನೋವು ಇದ್ದಾಗ ಹಿಮ್ಮಡಿಗೆ ಸಾಕಷ್ಟು ವಿಶ್ರಾಂತಿ ನೀಡಬೇಕು. ಆರಾಮದಾಯಕವಾದ ಪಾದರಕ್ಷೆಗಳನ್ನು ಧರಿಸಬೇಕು. ಹೆಚ್ಚು ಹೊತ್ತು ನಿಲ್ಲಬಾರದು ಆಥವಾ ನಿಂತು ಕೆಲಸ ಮಾಡಬಾರದು. ಬರಿಗಾಲಿನಲ್ಲಿ ಗಟ್ಟಿಯಾದ ನೆಲದ ಮೇಲೆ ಹೆಚ್ಚು ಹೊತ್ತು ನಡೆಯಬಾರದು. ನಿರ್ದಿಷ್ಟ ಸ್ಥಳದಲ್ಲಿ ನೋವು ಹೆಚ್ಚಾಗಿದ್ದರೆ ಅಲ್ಲಿ ಹೆಚ್ಚು ಒತ್ತಡ ಹಾಕಬಾರದು. ಅತಿ ಹೈಹೀಲ್ಡ್ ಚಪ್ಪಲಿ ಅಥವಾ ಗಟ್ಟಿಯಾದ ಚಪ್ಪಲಿ ಒಳ್ಳೆಯದಲ್ಲ.

ಬೆಳಿಗ್ಗೆ ಏಳುವಾಗ ಅಥವಾ ಸ್ವಲ್ಪ ಸಮಯ ಕುಳಿತು ಮೇಲೆ ಏಳುವಾಗ ಪಾದವನ್ನು  ವರ್ತುಲಾಕಾರದಲ್ಲಿ ಮತ್ತು ಮುಂದೆ, ಹಿಂದೆ ತಿರುಗಿಸಿ ಹತ್ತು ಹೆಜ್ಜೆ ತುದಿಗಾಲಲ್ಲಿ ನಡೆದು ಅನಂತರ ಹಿಮ್ಮಡಿಯನ್ನು ನೆಲದ ಮೇಲೆ ಊರುವುದು ಒಳ್ಳೆಯದು. ಪಾದಗಳು ಒಡೆದಿದ್ದರೆ ಔಷಧಿ ಮುಲಾಮುಗಳಿಂದ ಅದನ್ನು ಗುಣಪಡಿಸಿಕೊಳ್ಳಬೇಕು. ಇದರ ಜೊತೆಗೆ ಹಿಮ್ಮಡಿ ನೋವು ಬಂದರೆ ಕಷ್ಟ.

ಹಿಮ್ಮಡಿ ನೋವಿನಿಂದ ತ್ವರಿತ ಉಪಶಮನ ಹೇಗೆ?

ಹಿಮ್ಮಡಿ ನೋವಿನಿಂದ ಪರಿಹಾರ ಪಡೆಯಲು ಇರುವ ಸುಲಭ ಉಪಾಯವೆಂದರೆ ಮಸಾಜು ಮಾಡುವುದು. ಕೊಬ್ಬರಿ ಎಣ್ಣೆ/ ನೀಲಗಿರಿ ಎಣ್ಣೆ/ ಔಷಧೀಯ ತೈಲ ಹಾಕಿ ಐದು ಅಥವಾ ಹತ್ತು ನಿಮಿಷಗಳ ಕಾಲ ಮಸಾಜು ಮಾಡುವುದರಿಂದ ನೋವು ಕಡಿಮೆ ಆಗುತ್ತದೆ. ನಿಯಮಿತವಾಗಿ ಮಸಾಜು ಮಾಡುತ್ತಿದ್ದರೆ ನೋವು ಮಾಯವಾಗಬಹುದು. ಪಾದಗಳಿಗೆ ಮಸಾಜು ಮಾಡಲು ಮೃದುವಾಗಿರುವ ಟೆನ್ನಿಸ್ ಅಥವಾ ಕ್ರಿಕೆಟ್ ಬಾಲನ್ನು ಬಳಸಬಹುದು.

ಎಕ್ಕದ ಎಲೆಯನ್ನು ಬಿಸಿ ಮಾಡಿ ಹಿಮ್ಮಡಿಯ ಮೇಲಿಟ್ಟು ಶಾಖ ತೆಗೆದುಕೊಳ್ಳುವುದರಿಂದ ಹಿಮ್ಮಡಿ ನೋವು ಕಡಿಮೆಯಾಗುತ್ತದೆ. ಸ್ವಲ್ಪ ನುಗ್ಗೆ ಸೊಪ್ಪನ್ನು ಬಿಸಿ ಮಾಡಿ ಅದನ್ನು ತೆಳು ಬಟ್ಟೆಯಲ್ಲಿ ಹಾಕಿ ನೋವಿರುವ ಭಾಗಕ್ಕೆ ಶಾಖ ಕೊಟ್ಟಿಕೊಂಡರೂ ನೋವು ಶಮನವಾಗುತ್ತದೆ.

ನೋವು ಹೆಚ್ಚಾಗಿದ್ದರೆ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪನ್ನು ಬೆರೆಸಿ ಅದರಲ್ಲಿ ಪಾದವನ್ನು 20 ನಿಮಿಷಗಳ ಕಾಲ ನೆನೆಸಿಡಬೇಕು. ನಂತರ ನೋವಿರುವ ಭಾಗಕ್ಕೆ ಮಾಯಿಶ್ಚರೈಸರ್ ಕ್ರೀಮನ್ನು ಹಚ್ಚಬೇಕು. ಅಲೋವಿರಾ ಜೆಲ್, ಬಾದಾಮಿ ಎಣ್ಣೆ. ಎಳ್ಳೆಣ್ಣೆ ಆಥವಾ ಜೇನುತುಪ್ಪ ಹಚ್ಚಿಕೊಂಡರೂ ಒಳ್ಳೆಯದೇ. ಲವಂಗದ ಎಣ್ಣೆಯಿಂದಲೂ ಮಸಾಜು ಮಾಡಿಕೊಳ್ಳಬಹುದು. ಮಲಗುವ ಮುನ್ನ ತೆಂಗಿನ ಎಣ್ಣೆಯನ್ನು ಒಡೆದ ಹಿಮ್ಮಡಿಗಳ ಮೇಲೆ ಹಚ್ಚಿ ಮಲಗಬೇಕು. ಇದರಿಂದಲೂ ನೋವು ಕಡಿಮೆಯಾಗುತ್ತದೆ.

ಐಸನ್ನು ಪುಡಿಮಾಡಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅದನ್ನು ತೆಳುವಾದ ಹತ್ತಿ ಟವಲ್ಲಿನಿಂದ ಸುತ್ತಿ ಸುಮಾರು 15 ನಿಮಿಷಗಳ ಕಾಲ ನೋವಿನ ಪ್ರದೇಶದ ಮೇಲೆ ಇರಿಸಿದರೆ ನೋವು ಉಪಶಮನವಾಗುತ್ತದೆ. ಆಯುರ್ವೇದದಲ್ಲಿ ಹಿಮ್ಮಡಿ ನೋವಿಗೆ ಉತ್ತಮ ಚಿಕಿತ್ಸೆಗಳಿವೆ. ನೋವು ಹೆಚ್ಚಾಗಿದ್ದರೆ ಪರಿಹಾರಕ್ಕಾಗಿ ಆಯುರ್ವೇದ ವೈದ್ಯರನ್ನು ಕಾಣಬಹುದು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com