ಒಡೆದ ಮನೆ ಬಿಜೆಪಿಯಲ್ಲಿ ನಿಲ್ಲದ ದಾಯಾದಿ ಕಲಹ! (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್ಮನೆಯೊಂದು ಮೂರು ಬಾಗಿಲು. ಚುನಾವಣಾ ಫಲಿತಾಂಶದ ನಂತರ ರಾಜ್ಯ ಬಿಜೆಪಿ ಎದುರಿಸುತ್ತಿರುವ ಸ್ಥಿತಿ ಇದು. ಗೆದ್ದು ಅಧಿಕಾರಕ್ಕೆ ಬರುವ ಪ್ರಚಂಡ ಆತ್ಮವಿಶ್ವಾಸದಲ್ಲಿದ್ದ  ಪಕ್ಷದ ನಾಯಕರಿಗೆ ಸೋಲಿನ ವಾಸ್ತವವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.
ಬಿಜೆಪಿ ಸಾಂದರ್ಭಿಕ ಚಿತ್ರ
ಬಿಜೆಪಿ ಸಾಂದರ್ಭಿಕ ಚಿತ್ರ

ಮನೆಯೊಂದು ಮೂರು ಬಾಗಿಲು. ಚುನಾವಣಾ ಫಲಿತಾಂಶದ ನಂತರ ರಾಜ್ಯ ಬಿಜೆಪಿ ಎದುರಿಸುತ್ತಿರುವ ಸ್ಥಿತಿ ಇದು. ಒಂದೂವರೆ ತಿಂಗಳ ಹಿಂದಷ್ಟೆ ಗೆದ್ದು ಅಧಿಕಾರಕ್ಕೆ ಬರುವ ಪ್ರಚಂಡ ಆತ್ಮವಿಶ್ವಾಸದಲ್ಲಿದ್ದ  ಪಕ್ಷದ ನಾಯಕರಿಗೆ ಸೋಲಿನ ವಾಸ್ತವವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರಿಂದ ಪುಟಿದೆದ್ದು  ಕಾಂಗ್ರೆಸ್ ಸರ್ಕಾರದ ವಿರುದ್ಧ  ಮುಂದಿನ ಹೋರಾಟಕ್ಕೆ ಕಾರ್ಯ ತಂತ್ರ ರೂಪಿಸಿಬೇಕಾದ ಪಕ್ಷದಲ್ಲಿ ಈಗ ಸೂತಕದ ಛಾಯೆ ತುಂಬಿಕೊಂಡಿದೆ. ಇದೇ ವೇಳೆ ಚುನಾವಣೆಯಲ್ಲಿ ಕರುಣಾಜನಕ ಸೋಲಿಗೆ ಆಯ್ದ ಕೆಲವು ನಾಯಕರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡು ದೂಷಿಸುವ ರಾಜಕಾರಣ ಬಿಜೆಪಿಯಲ್ಲಿ ಆರಂಭವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದಿದ್ದು, ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಹೆಜ್ಜೆ ಇಟ್ಟಿದೆ. 

ಮತ್ತೊಂದು ಕಡೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕದ  ಪ್ರಮುಖ ಶಾಸಕರು ಸಚಿವ ಸ್ಥಾನ ದೊರಕಿಯೂ ಪ್ರಮುಖ ಖಾತೆ ವಂಚಿತರಾದ  ಹಿರಿಯ ಸಚಿವರು ಮೌನವಾಗಿದ್ದುಕೊಂಡೇ ಮುಂದಿನ ಸಮರಕ್ಕೆ ಸಿದ್ಧವಾಗುತ್ತಿದ್ದಾರೆ. ಆಡಳಿತ ಪಕ್ಷದಲ್ಲಿ ಕುದಿಯುತ್ತಿರುವ ಅತೃಪ್ತಿ ಇನ್ನೂ ಜ್ವಾಲಾಮುಖಿಯಾಗಿ ಸ್ಫೊಟಗೊಳ್ಳುವ ಹಂತಕ್ಕೆ ಮುಟ್ಟಿಲ್ಲ. ಆದರೆ ಪ್ರಮುಖ ಪ್ರತಿಪಕ್ಷವಾಗಿ ಸರ್ಕಾರದ ವಿರುದ್ಧ, ತನ್ನ ಹೋರಾಟದ ರೂಪುರೇಷೆಗಳನ್ನು ಹೆಣೆಯಬೇಕಾಗಿದ್ದ ಬಿಜೆಪಿಗೆ ರಾಜ್ಯ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಯಾರು ಎಂಬುದನ್ನು ನಿರ್ಧರಿಸಲು ಇನ್ನೂ ಸಾಧ್ಯವಾಗುತ್ತಿಲ್ಲ. 

ಸಾಮಾನ್ಯವಾಗಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆಯುವ ವಿಧಾನಸಭೆಯ ಮೊದಲ ಅಧಿವೇಶನಕ್ಕೆ ಮುನ್ನವೇ ಪ್ರತಿಪಕ್ಷದ ನಾಯಕರು ಯಾರು ಎಂಬುದು ತೀರ್ಮಾನವಾಗುವುದು ಪದ್ಧತಿ. ಆದರೆ ಮೊದಲ ಅಧಿವೇಶನ ಮುಗಿದು ಸಭಾಧ್ಯಕ್ಷರ ಆಯ್ಕೆ ನಂತರವೂ ಬಿಜೆಪಿಗೆ ಇನ್ನೂ ಸದನದಲ್ಲಿ ತನ್ನ ನಾಯಕರು ಯಾರೆಂದು ನಿರ್ಧರಿಸಲು ಸಾಧ್ಯವಾಗಿಲ್ಲ. ಇದಕ್ಕೆ ಆ ಪಕ್ಷದಲ್ಲಿ ಫಲಿತಾಂಶದ ನಂತರ ಮೂಡಿರುವ ಅತೃಪ್ತಿ, ಗುಂಪುಗಾರಿಕೆ ಕಾರಣ. ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಕೆಲವೊಂದು ಹೆಸರುಗಳು ಚರ್ಚೆ ಆಗುತ್ತಿವೆಯಾದರೂ ಸರ್ವ ಸಮ್ಮತ ಅಭಿಪ್ರಾಯ ಸಾಧ್ಯವಾಗುತ್ತಿಲ್ಲ.

ಈ ಗೊಂದಲಗಳು ಮುಂದುವರಿದಿರುವ ಸಂದರ್ಭದಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಮೈಸೂರಿನ ಸಂಸದ ಪ್ರತಾಪ ಸಿಂಹ ಸೇರಿದಂತೆ ಕೆಲವರು ``ಚುನಾವಣೆಯಲ್ಲಿ ಕೆಲವು ನಾಯಕರು ನಡೆಸಿದ ಹೊಂದಾಣಿಕೆ ರಾಜಕಾರಣದಿಂದಾಗಿ ಬಿಜೆಪಿ ಸೋಲು ಅನುಭವಿಸಿತು ‘’ ಎಂದು ದೋಷಾರೋಪಣೆಗಿಳಿದಿದ್ದಾರೆ. ನೇರವಾಗಿ ಯಾವುದೇ ನಾಯಕರನ್ನು ಹೆಸರಿಸಿಲ್ಲವಾದರೂ ಈ ಇಬ್ಬರ ಗುರಿಯೂ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂಬ ಬಗ್ಗೆ ಯಾವುದೇ ಅನುಮಾನಗಳೂ ಉಳಿದಿಲ್ಲ. 

ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದ ಸಿ.ಟಿ.ರವಿ ಕಾಂಗ್ರೆಸ್ ನ ತಮ್ಮಯ್ಯ ಅವರ ಎದಿರು ಸೋತಿದ್ದಾರೆ. ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಪದವಿಗೇರುವ ಮಹತ್ವಾಕಾಂಕ್ಷೆ ಹೊತ್ತಿದ್ದ ಅವರ ಕನಸು ಭಗ್ನವಾಗಿದೆ. ತನ್ನ ಜತೆಯಲ್ಲೇ ಇದ್ದು ಒಟ್ಟಾಗಿ ರಾಜಕೀಯ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದ ಒಂದು ಕಾಲದ ಜತೆಗಾರನ ವಿರುದ್ಧವೇ ಸೋತಿರುವುದು ಅವರನ್ನು ಕಂಗೆಡಿಸಿದೆ. 

ಇದರ ಜತೆಗೇ ಪಕ್ಷದೊಳಗಿರುವ ಕೆಲವರೇ ಪಿತೂರಿ ಮಾಡಿ ತನ್ನ ಸೋಲಿಗೆ ಕಾರಣರಾಗಿದ್ದಾರೆ ಎಂಬ ಅನುಮಾನವೂ ಅವರನ್ನು ಹೊಕ್ಕಿದೆ. ಹೀಗಾಗಿ ಸಹಜವಾಗೇ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಆದರೆ ತನ್ನ ವಿರುದ್ಧ ಪಿತೂರಿ ಮಾಡಿದವರು ಯಾರು ಎಂಬ ಸಂಗತಿಯನ್ನು ಅವರು ಬಹಿರಂಗವಾಗಿ ಹೊರ ಹಾಕಿಲ್ಲ.  

ಬಿಜೆಪಿಯ ಆಂತರಿಕ ಮೂಲಗಳ ಪ್ರಕಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪಕ್ಷದ ವರಿಷ್ಠರಿಗೆ ಅವರು ಮೌಖಿಕ ದೂರು ಕೊಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ.  ಚುನಾವಣೆಯ ಸೋಲಿನ ನಂತರ ಈಗ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅವರಿಗೆ ಆ ಆಸೆಯೂ ಕೈಗೂಡುವ ಸಾಧ್ಯತೆಗಳು ಕಾಣುತ್ತಿಲ್ಲ. ಯಾಕೆಂದರೆ ಮೊದಲಿನಿಂದಲೂ ತಮ್ಮ ವಿರುದ್ಧ ತೊಡೆ ತಟ್ಟಿದ್ದ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಲು ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದು ಚುನಾವಣೆಯಲ್ಲಿ ಸೋತ ವ್ಯಕ್ತಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುವುದು ಉಚಿತವಲ್ಲ ಎಂಬ ಅಭಿಪ್ರಾಯವನ್ನು ವರಿಷ್ಠರಿಗೆ ಮುಟ್ಟಿಸಿದ್ದಾರೆ.

ಈ ಸಂಗತಿ ತಿಳಿದು ರವಿ ಈಗ ಚುನಾವಣಾ ಹೊಂದಾಣಿಕೆ ವಿಚಾರ ತೆಗೆದು ಸುದ್ದಿಯಾಗಿದ್ದಾರೆ. ಇದೇ ವಿಚಾರದಲ್ಲಿ ಅವರನ್ನು ಸಂಸದ ಪ್ರತಾಪ ಸಿಂಹ ಕೂಡಾ ಬೆಂಬಲಿಸಿದ್ದಾರೆ.ಮೇಲ್ನೋಟಕ್ಕೆ ಸಾಮಾನ್ಯ ಸಂಗತಿಯಾದರೂ  ಈ ಬೆಳವಣಿಗೆಯ ಒಳ ಹೊಕ್ಕು ನೋಡಿದರೆ ಈ ಇಬ್ಬರ ಹೇಳಿಕೆಯ ಹಿಂದೆಯೂ ಬಿಜೆಪಿಯ ಪ್ರಭಾವಿಗಳ  ಪ್ರಚೋದನೆ ಇರುವುದು ಗೋಚರಿಸುತ್ತದೆ. 

ಬಹು ಮುಖ್ಯವಾಗಿ ರಾಜ್ಯ ರಾಜಕಾರಣದ ಮೇಲೆ ಹಿಡಿತ ಸಾಧಿಸಲು ಸತತ ಪ್ರಯತ್ನ ನಡೆಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ಸಿ.ಟಿ.ರವಿ ಹಾಗೂ ಪ್ರತಾಪ ಸಿಂಹ ಪರಮಾಪ್ತರು. ಈ ಇಬ್ಬರ ಮೂಲಕವೇ ತಮ್ಮ ರಾಜಕೀಯ ದಾಳಗಳನ್ನು ಉರುಳಿಸುವ ಮೂಲಕ ಯಡಿಯೂರಪ್ಪ ವಿರುದ್ಧ ಸಮರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂಬುದನ್ನು ಹೆಸರು ಬಹಿರಂಗ ಪಡಿಸಲು ಒಲ್ಲದ ಬಿಜೆಪಿಯ ನಾಯಕರೊಬ್ಬರು ಹೇಳುತ್ತಾರೆ. ಚುನಾವಣೆಗೆ ಮುನ್ನ ಯಡಿಯೂರಪ್ಪ ಮತ್ತು ಸಂತೋಷ್ ನಡುವೆ ಹೊಂದಾಣಿಕೆಯ ಮಾತುಕತೆಗಳು ನಡೆದಿತ್ತಾದರೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಇಬ್ಬರ ನಡುವೆ ಸಹಮತ ಮೂಡಿರಲಿಲ್ಲ. 

ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ಫಲಿತಾಂಶದಿಂದೀಚೆಗೆ ಯಾವುದೇ ರಾಜ್ಯ ನಾಯಕರನ್ನು ಹತ್ತಿರ ಸೇರಿಸುತ್ತಿಲ್ಲ,  ರಾಜ್ಯದ ರಾಜಕಾರಣದ ವಿಚಾರದಲ್ಲಿ ತನ್ನ ನಿಲುವನ್ನು ಮುಗುಮ್ಮಾಗೇ ಇರಿಸಿಕೊಂಡಿದೆ. ಇದೇ ಕಾರಣಕ್ಕೆ ಉಭಯ ಸದನಗಳ ಪ್ರತಿಪಕ್ಷದ ನಾಯಕರ ಆಯ್ಕೆ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ತೀವ್ರ ಆಸಕ್ತಿ ತೋರಿಸುತ್ತಿಲ್ಲ.

ಸಂತೋಷ್ ಮತ್ತು ಪ್ರಲ್ಹಾದ ಜೋಶಿ ತಮ್ಮ ವಿರುದ್ಧ ಆರಂಭಿಸಿರುವ ಜಂಟಿ ಕಾರ್ಯಾಚರಣೆ ವಿರುದ್ಧ ತಿರುಗಿ ಬಿದ್ದಿರುವ ಯಡಿಯೂರಪ್ಪ ಮೊದಲು ವಿಧಾನಸಭೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನೇ ಪರಿಗಣಿಸಬೇಕೆಂದು ಸೂಚಿಸಿದ್ದರು.

ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತಂಡವನ್ನು ಸಮರ್ಥವಾಗಿ ಎದುರಿಸಲು ಅವರೇ ಸೂಕ್ತ ಎಂದು ಪಟ್ಟು ಹಿಡಿದಿದ್ದರು. ಆದರೆ ಬಸವರಾಜ ಬೊಮ್ಮಾಯಿ ಮೂಲ ಬಿಜೆಪಿಯವರಲ್ಲ ಮತ್ತು ಸಂಘಪರಿವಾರದ ಹಿನ್ನೆಲೆಯವರಲ್ಲ ಎಂಬ ಕಾರಣ ಒಡ್ಡಿದ ಸಂತೋಷ್ ಪ್ರಲ್ಹಾದ ಜೋಶಿ ತಂಡ ಈ ಸ್ಥಾನಕ್ಕೆ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರ ಹೆಸರನ್ನು ಮುಂದೆ ಬಿಟ್ಟಿದೆ. ಆ ಮೂಲಕ ಯಡಿಯೂರಪ್ಪ ಅವರಿಗೆ ಎದುರಾಗಿ ಅವರ ವಿರೋಧಿ ನಾಯಕನಾಗಿ ನೆಲೆ ನಿಲ್ಲಿಸುವ ರಾಜಕೀಯ ತಂತ್ರ ಇದಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಯಡಿಯೂರಪ್ಪ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಮತಗಳನ್ನೂ ಪಡೆಯಲು ಒಕ್ಕಲಿಗರೊಬ್ಬರಿಗೆ ಪ್ರತಿಪಕ್ಷದ ನಾಯಕನ ಸ್ಥಾನ ನೀಡಬೇಕೆಂದು ಒತ್ತಡ ಹಾಕಿದ್ದಾರೆ. 

ಇಲ್ಲೂ ಅವರ ವಿರೋಧಿ ತಂಡ ಮಾಜಿ ಸಚಿವ ಮಲ್ಲೇಶ್ವರಂ ಶಾಸಕ ಹಾಗೂ ಮಾಜಿ ಸಚಿವ ಡಾ. ಅಶ್ವತ್ಥ ನಾರಾಯಣ ಹೆಸರು ಸೂಚಿಸಿದ್ದರೆ, ಯಡಿಯೂರಪ್ಪ ಮಾಜಿ ಸಚಿವ ಆರ್.ಅಶೋಕ್ ಪರ ಬ್ಯಾಟ್ ಬೀಸಿದ್ದಾರೆ. ಈ ವಿಚಾರದಲ್ಲೂ ಸಹಮತ ಮೂಡಿಲ್ಲ. ಅಶೋಕ್ ಪಕ್ಷದ ಹಿರಿಯ ಶಾಸಕರು, ಅಲ್ಲದೇ ಈಗಿನ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಇನ್ನೊಂದು ಕ್ಷೇತ್ರ ಪದ್ಮನಾಭನಗರದಿಂದ ಪುನರಾಯ್ಕೆ ಆಗಿದ್ದಾರೆ. 

ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಹು ದೊಡ್ಡ ರಿಸ್ಕ್ ತೆಗೆದುಕೊಂಡರೂ ಒಂದು ಕ್ಷೇತ್ರದಲ್ಲಿ ಪುನರಾಯ್ಕೆ ಆಗುವ ಮೂಲಕ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಹೀಗಾಗಿ ಅವರಿಗೆ ನ್ಯಾಯ ಒದಗಿಸಬೇಕೆಂದರೆ ಪ್ರತಿಪಕ್ಷದ ನಾಯಕನ ಸ್ಥಾನ ನೀಡಬೇಕು ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಹಾಗೆ ನೊಡಿದರೆ ಆರ್. ಅಶೋಕ್ ಯಡಿಯೂರಪ್ಪನವರಿಗೆ ಆಪ್ತರಾದರೂ ಪಕ್ಷದಲ್ಲಿ ನಿರ್ದಿಷ್ಟ ಗುಂಪುಗಳ ಜತೆ ಗುರುತಿಸಿಕೊಳ್ಳದೇ ತಟಸ್ಥ ನೀತಿ ಅನುಸರಿಸುತ್ತಲೇ ಬಂದಿದ್ದಾರೆ. ಈ ಇಬ್ಬರನ್ನು ಹೊರತು ಪಡಿಸಿದರೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಕೇಳಿ ಬರುತ್ತಿರುವ ಇನ್ನೆರಡು ಹೆಸರುಗಳೆಂದರೆ ಕಾರ್ಕಳದ ಯುವ ನಾಯಕ ಸುನಿಲ್ ಕುಮಾರ್ ಹಾಗೂ ರಾಜಾಜಿ ನಗರದ ಸುರೇಶ್ ಕುಮಾರ್ ಅವರದ್ದು. ಇಬ್ಬರೂ ಸಂಘ ಪರಿವಾರದ ಹಿನ್ನಲೆಯಿಂದ ಬಂದವರು. ಸುನಿಲ್ ಕುಮಾರ್ ಗೆ ಬಿ.ಎಲ್. ಸಂತೋಷ್ ಕೃಪಾಶೀರ್ವಾದ ಇದ್ದರೆ, ಸುರೇಶ್ ಕುಮಾರ್ ಬೆಂಬಲಕ್ಕೆ ಯಡಿಯೂರಪ್ಪ ನಿಂತಿದ್ದಾರೆ. ವಿಧಾನ ಪರಿಷತ್ ನಲ್ಲಿ ಮಾಜಿ ಸಚಿವ, ಹಿರಿಯ ಮುಖಂಡ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಪಕ್ಷದ ನಾಯಕರಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಸುನಿಲ್ ಕುಮಾರ್ ಹೆಸರು ಪರಿಗಣನೆಗೆ ಬರುವುದು ಕಷ್ಟ. ಇಬ್ಬರೂ ಹಿಂದುಳಿದ ವರ್ಗಕ್ಕೆ ಸೇರಿದ್ದು ಕರಾವಳಿ ಭಾಗವನ್ನೇ ಪ್ರತಿನಿಧಿಸುತ್ತಿದ್ದಾರೆ.

ಸುರೇಶ್ ಕುಮಾರ್ ಅವರಿಗೆ ಈ ಬಾರಿ ಚುನಾವಣೆಗೆ ಪಕ್ಷದ ಟಿಕೆಟ್  ಕೈತಪ್ಪುವ ಸೂಚನೆಗಳಿತ್ತು ಆದರೆ ಕಡೇ ಗಳಿಗೆಯಲ್ಲಿ ಯಡಿಯೂರಪ್ಪ ಜತೆಗಿನ ಅವರ ಭೇಟಿ ಫಲಪ್ರದವಾಯಿತು. ಇಷ್ಟಕ್ಕೂ ಅವರ ಹೆಸರನ್ನೇ ಯಡಿಯೂರಪ್ಪ ಪ್ರಸ್ತಾಪಿಸಲು ಕಾರಣವೂ ಇದೆ. ಒಂದು ವೇಳೆ ಅಶೋಕ್ ಗೆ ನಾನಾ ಕಾರಣಗಳಿಗಾಗಿ ವಿಪಕ್ಷ ನಾಯಕನ ಸ್ಥಾನ ತಪ್ಪಿದಲ್ಲಿ ಸುರೇಶ್ ಕುಮಾರ್ ರನ್ನು ಅಲ್ಲಿ ಪ್ರತಿಷ್ಠಾಪಿಸಿದರೆ ಸಂಘ, ಹಿರಿತನ ಇವೆರಡಕ್ಕೂ ಪ್ರಾಧಾನ್ಯತೆ ಸಿಕ್ಕಿ ಸಂತೋಷ್ ಗ್ಯಾಂಗನ್ನು ಮೂಲೆಗೊತ್ತಿದಂತಾಗುತ್ತದೆ.  ಅಶೋಕ್ ವಿಪಕ್ಷ ಸ್ಥಾನ ವಂಚಿತರಾದರೆ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದು ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವುದು ಯಡಿಯೂರಪ್ಪ ತಂತ್ರ. ಅವರು ಉರುಳಿಸಿರುವ ಪಗಡೆ ದಾಳಕ್ಕೆ ಹೈಕಮಾಂಡ್ ನಾಯಕರೇ ಸುಸ್ತು ಹೊಡೆದಿದ್ದಾರೆ. ಗೊಂದಲ ಸದ್ಯಕ್ಕೆ ಇತ್ಯರ್ಥವಾಗುವ ಸೂಚನೆಗಳಿಲ್ಲ.

ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com