ಷೇರು ಮಾರುಕಟ್ಟೆ ಹೂಡಿಕೆಯೊಂದಿಗೆ ಜೊತೆಯಾಗುವ ರಿಸ್ಕ್ ಗಳ ಬಗ್ಗೆ ತಿಳಿಯಬೇಕಾದ ಅಂಶಗಳು... (ಹಣಕ್ಲಾಸು)

ಹಣಕ್ಲಾಸು-350ರಂಗಸ್ವಾಮಿ ಮೂನಕನಹಳ್ಳಿ
ಷೇರು ಮಾರುಕಟ್ಟೆ (ಸಾಂಕೇತಿಕ ಚಿತ್ರ)
ಷೇರು ಮಾರುಕಟ್ಟೆ (ಸಾಂಕೇತಿಕ ಚಿತ್ರ)
Updated on

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬೇರೆ ಯಾವುದೇ ವ್ಯಾಪಾರದಲ್ಲಿ ಹೂಡಿಕೆ ಮಾಡಿದಂತೆಯೇ, ಲಾಭವೂ ಆಗಬಹುದು ಅಥವಾ ನಷ್ಟವೂ ಸಂಭವಿಸಬಹುದು.  

ದೀರ್ಘಾವಾದಿಯ ಈಕ್ವಿಟಿ ಮೇಲಿನ ಹೂಡಿಕೆ ಮುಕ್ಕಾಲು ಪಾಲು ಲಾಭವನ್ನೇ ನೀಡುತ್ತದೆ. ಇಂದಿನ ದಿನಗಳಲ್ಲಿ ಇರುವ ಹಣದುಬ್ಬರವನ್ನ ಸಮರ್ಥವಾಗಿ ನಿರ್ವಹಿಸಲು ಇಂತಹ ಹೂಡಿಕೆಗಳನ್ನ ಮಾಡದೆ ಬೇರೆ ದಾರಿಯಿಲ್ಲ ಎನ್ನುವಂತಾಗಿದೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮುನ್ನ ಸಂಭಾವ್ಯ ಅಪಾಯಗಳನ್ನ ತಿಳಿದುಕೊಳ್ಳುವುದು ಒಳ್ಳೆಯದು. ನೆನಪಿರಲಿ ಈ ಜಗತ್ತಿನಲ್ಲಿ ನಾವು ಯಾವುದಕ್ಕೂ ಭಯಪಡುವ ಅವಶ್ಯಕತೆಯಿಲ್ಲ!

  1. ಆರ್ಥಿಕ ಕುಸಿತ: ಇದು ಬಹಳ ವಿಶಾಲವಾದ ಅರ್ಥವನ್ನ ನೀಡುತ್ತದೆ. ನಾವು ಹೂಡಿಕೆ ಮಾಡಿರುವ ಸಂಸ್ಥೆ ಸರಿಯಾಗೇ ಕಾರ್ಯ ನಿರ್ವಹಿಸುತ್ತಿದ್ದರೂ, ಒಟ್ಟಾರೆ ಸಮಾಜದಲ್ಲಿ ಹಣಕಾಸಿನ ಕೊರತೆ ಉಂಟಾದರೆ ಆಗ ಮಾರುಕಟ್ಟೆ ಕುಸಿತವನ್ನ ಕಾಣುತ್ತದೆ. ಸಮಾಜದಲ್ಲಿ ಸೇವೆ ಮತ್ತು ಸರಕಿನ ಮೇಲಿನ ಡಿಮ್ಯಾಂಡ್ ಕುಸಿತವಾದರೆ ಅದು ಒಟ್ಟಾರೆ ಜಿಡಿಪಿ ಕುಸಿತಕ್ಕೆ ಕಾರಣವಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಇದರ ಪರಿಣಾಮ ಬೀರುತ್ತದೆ. ಹಣದುಬ್ಬರ, ಬಡ್ಡಿ ದರ ಏರಿಕೆ ಅಥವಾ ಇಳಿಕೆ, ಹೀಗೆ ನೇರವಾಗಿ ಸಂಸ್ಥೆಯ ಯಾವುದೇ ತಪ್ಪುಗಳು ಇಲ್ಲದೆ ಇದ್ದರೂ ಕೂಡ ಷೇರಿನ ಒಟ್ಟಾರೆ ಮೌಲ್ಯ ಕುಸಿಯುವ ಸಾಧ್ಯತೆಯನ್ನ ಅಲ್ಲಗಳೆಯಲು ಬರುವುದಿಲ್ಲ. ಇಂದಿನ ಅಸ್ಥಿರ ದಿನಗಳಲ್ಲಿ ಈ ಮಾತು ಇನ್ನೂ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.
  2. ವಲಯವಾರು ಕುಸಿತ: ಸಮಾಜದಲ್ಲಿ ಇತರ ಎಲ್ಲಾ ವಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಕೆಲವೊಮ್ಮೆ ನಾವು ಹೂಡಿಕೆ ಮಾಡಿದ ವಲಯ ಮಾತ್ರ ಕುಸಿಯುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಷೇರಿನ ಮೌಲ್ಯ ಕುಸಿತ ಕಂಡು ನಷ್ಟ ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ. ಉದಾಹರಣೆಗೆ ನೋಡಿ ಆಟೋಮೊಬೈಲ್ ವಲಯದಲ್ಲಿ ಬೇಕಾಗುವ ಚಿಪ್ಗಳ ಕೊರತೆಯಿಂದ ಇವುಗಳ ಉತ್ಪಾದನೆಯಲ್ಲಿ ಗಣನೀಯವಾಗಿ ಕುಸಿತ ಉಂಟಾಗಿತ್ತು. ಕೊರೋನ ಕಾರಣ ಚೀನಾ ದೇಶದಲ್ಲಿ ಈ ಚಿಪ್ಗಳ ಉತ್ಪಾದನೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಈ ಸಮಯದಲ್ಲಿ ಜಗತ್ತಿನಾದ್ಯಂತ ಆಟೋಮೊಬೈಲ್ ವಲಯದಲ್ಲಿ ಇನ್ನಿಲ್ಲದ ಕುಸಿತ ಉಂಟಾಗಿತ್ತು. ಆದರೆ ಅದೇ ಸಮಯದಲ್ಲಿ ಟೆಕ್ನಾಲಜಿಗೆ ಸಂಬಂಧಿಸಿದ ಎಲ್ಲಾ ವ್ಯಾಪಾರಗಳೂ ಹೆಚ್ಚಿನ ಲಾಭವನ್ನ ತಂದು ಕೊಟ್ಟವು. ಇದೆ ರೀತಿ ಸೋಲಾರ್ ಪ್ಯಾನಲ್ ಉತ್ಪಾದನೆಗೆ ಬೇಕಾಗುವ ಮೂಲವಸ್ತುವಿನ ಕೊರತೆಯಿಂದ ಈ ವಲಯದಲ್ಲಿ ಕೂಡ ಬಹಳಷ್ಟು ಏರುಪೇರಾಗಿತ್ತು. ಹೀಗೆ ಸಮಾಜದ ಇತರ ವಲಯಗಳು ಲಾಭ ಮಾಡುತ್ತಿದ್ದರೂ ಒಂದಷ್ಟು ವಲಯಗಳು ಕುಸಿತ ಕಾಣುವ ಸಾಧ್ಯತೆಯಿರುತ್ತದೆ. ನಮ್ಮ ಹೂಡಿಕೆ ಎಲ್ಲಿದೆ ಎನ್ನುವುದು ಇಂತಹ ಸಮಯದಲ್ಲಿ ಬಹಳ ಮುಖ್ಯವಾಗುತ್ತದೆ.
  3. ಸಂಸ್ಥೆಯ ಆಡಳಿತ ಮಂಡಳಿಯ ತಪ್ಪುಗಳಿಂದ ಆಗುವ ಕುಸಿತ: ಷೇರುದಾರ ಸಂಸ್ಥೆಯ ನಿತ್ಯದ ಆಗುಹೋಗುಗಳನ್ನ ಗಮನಿಸಲು ಸಾಧ್ಯವಿಲ್ಲ. ಎಲ್ಲಾ ಷೇರುದಾರರೂ ನಾನೂ ಸಂಸ್ಥೆಯ ಪಾಲುದಾರ ಹಾಗಾಗಿ ನಾನೂ ಕೂಡ ಸಂಸ್ಥೆಯ ನಿರ್ಧಾರಗಲ್ಲಿ ಭಾಗಿಯಾಗುತ್ತೇನೆ ಎನ್ನುವುದು ಸಾಧ್ಯವಿಲ್ಲದ ಮಾತು. ಹೀಗಾಗಿ ಸಂಸ್ಥೆಯ ನಿರ್ವಹಹೆ ಭಾರವನ್ನ ಆಡಳಿತ ಮಂಡಳಿಗೆ ವಹಿಸಲಾಗುತ್ತದೆ. ಸಂಸ್ಥೆಯ ಅಳಿವು ಅಥವಾ ಉಳಿವು ಇವರ ಕೈಲಿರುತ್ತದೆ. ನಿತ್ಯವೂ ನೂರಾರು ನಿರ್ಧಾರಗಳನ್ನ ತೆಗೆದುಕೊಳ್ಳಬೇಕಾಗುತ್ತದೆ. ಅದರಲ್ಲಿ ಯಾವ ನಿರ್ಧಾರ ಕೂಡ ಸಂಸ್ಥೆಯ ಬೆಳವಣಿಗಗೆ ಮಾರಕವಾಗಬಹುದು. ಕೆಲವೊಂದು ನಿರ್ಧಾರಗಳು ಒಳ್ಳೆಯ ಉದ್ದೇಶದಿಂದ ತೆಗೆದುಕೊಂಡಿದ್ದರೂ ಅದು ಮಾರಕವಾಗಬಹುದು. ಯಾವ ನಿರ್ಧಾರವೂ ಒಳ್ಳೆಯದು ಅಥವಾ ಕೆಟ್ಟದ್ದು ಆಗಿರುವುದಿಲ್ಲ, ನಿರ್ಧಾರದ ಫಲಿತಾಂಶ ಆ ನಿರ್ಧಾರ ಉತ್ತಮವಾಗಿತ್ತೋ, ಇಲ್ಲವೋ  ತಿಳಿಸುತ್ತದೆ. ಇದರ ಜೊತೆಗೆ ಆಡಳಿತ ಮಂಡಳಿ ಎಂದರೆ ಕೇವಲ ಒಂದಿಬ್ಬರು ಮಾತ್ರ ಇರುವುದಿಲ್ಲ. ದೊಡ್ಡ ಸಂಸ್ಥೆಯಲ್ಲಿ ಹತ್ತಾರು ಜನರ ಕೈಯಲ್ಲಿ ಅಧಿಕಾರ ಹಂಚಿಯಾಗಿರುತ್ತದೆ. ಇದರಲ್ಲಿ ಎಲ್ಲರೂ ಸಂಸ್ಥೆಯ ಬಗ್ಗೆ ಅದೇ ಬದ್ಧತೆಯನ್ನ ಹೊಂದಿರಬೇಕು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ.
  4. ಹಣದುಬ್ಬರದಿಂದ ಆಗುವ ಕುಸಿತ: ಹಣದುಬ್ಬರ ಎನ್ನುವುದು ಎರಡು ಅಲುಗಿನ ಕತ್ತಿ ಇದ್ದಂತೆ, ಮೊದಲು ಇದು ಪದಾರ್ಥದ ಉತ್ಪಾದನೆಗೆ ಬೇಕಾಗುವ ಕಚ್ಚಾ ಪದಾರ್ಥಗಳ ಬೆಲೆಯನ್ನ ಏರಿಸುತ್ತದೆ. ಹೀಗಾಗಿ ಉತ್ಪಾದಿತ ಪದಾರ್ಥದ ಬೆಲೆಯಲ್ಲಿ ಹೆಚ್ಚಳವಾಗುತ್ತದೆ. ಕೆಲವೊಮ್ಮೆ ಪದಾರ್ಥದ ಬೆಲೆಯಲ್ಲಿ ಹೆಚ್ಚಳವಾದರೂ ಅದನ್ನ ಗ್ರಾಹಕನಿಗೆ ವರ್ಗಾಯಿಸುವ ಪರಿಸ್ಥಿತಿ ಇರುವುದಿಲ್ಲ. ಮಾರಾಟದಲ್ಲಿ ಕುಸಿತವಾದರೆ ಎನ್ನುವ ಭಯಕ್ಕೆ ಅಲ್ಪ ಪ್ರಮಾಣದ ಏರಿಕೆಯನ್ನ ಸಂಸ್ಥೆ ಭರಿಸುತ್ತದೆ, ಈ ಕಾರಣ ಲಾಭದಲ್ಲಿ ಕಡಿತ ಉಂಟಾಗುತ್ತದೆ. ಎರಡನೆಯದಾಗಿ ಹಣದುಬ್ಬರ ಗ್ರಾಹಕನ ಕೊಳ್ಳುವ ಶಕ್ತಿಯನ್ನ ಕಡಿಮೆ ಮಾಡುತ್ತದೆ. ಹೀಗಾಗಿ ಬೆಲೆಯಲ್ಲಿ ಹೆಚ್ಚಳವಾಗದಿದ್ದರೂ ಬೇಡಿಕೆಯಲ್ಲಿ ಕುಸಿತವಾಗುವ ಸಂಭಾವ್ಯತೆ ಇದ್ದೆ ಇರುತ್ತದೆ. ಕಾರಣ ಯಾವುದೇ ಇದ್ದರೂ ಸಂಸ್ಥೆಯ ಲಾಭದಲ್ಲಿ ಕುಸಿತವಾಗುತ್ತದೆ, ನಷ್ಟವೂ ಉಂಟಾಗಬಹುದು. ಹೀಗಾಗಿ ಹೂಡಿಕೆಗೆ ಮುಂಚೆ ಈ ಸಾಧ್ಯತೆಯ ಬಗ್ಗೆಯೂ ತಿಳಿದುಕೊಂಡಿರುವುದು ಒಳ್ಳೆಯದು.
  5. ಬಡ್ಡಿ ದರಗಳೂ ತಮ್ಮದೇ ಆದ ದೇಣಿಗೆ ನೀಡುತ್ತವೆ: ಗಮನಿಸಿ ಬ್ಯಾಂಕುಗಳು ಬಡ್ಡಿ ದರವನ್ನ ಏರಿಸಿದರೆ ಅದು ಎರಡು ಪರಿಣಾಮ ಬೀರುತ್ತದೆ. ಮೊದಲಿಗೆ ಬಡ್ಡಿ ದರ ಹೆಚ್ಚಾದಾಗ ಹೂಡಿಕೆದಾರ ಹೆಚ್ಚಿನ ಅಪಾಯವಿಲ್ಲದೆ ಹೆಚ್ಚು ಬಡ್ಡಿ ನೀಡುವ ಬ್ಯಾಂಕಿನ ಡೆಪಾಸಿಟ್ ಬಗ್ಗೆ ಗಮನ ನೀಡುತ್ತಾನೆ, ಸಹಜವಾಗೇ ಷೇರು ಮಾರುಕಟ್ಟೆಯಲ್ಲಿ ಹಣದ ಹರಿವು ಕಡಿಮೆಯಾಗುತ್ತದೆ. ಎರಡು- ಬಡ್ಡಿ ದರ ಏರಿಕೆ ಕಂಡರೆ ಅದು ಕಾಸ್ಟ್ ಆಫ್ ಡೆಟ್ನನ್ನ ಹೆಚ್ಚು ಮಾಡುತ್ತದೆ. ಅಂದರೆ ಸಾಲ ಹೆಚ್ಚು ದುಬಾರಿಯಾಗುತ್ತದೆ. ಸಂಸ್ಥೆ ತನ್ನ ಹೆಚ್ಚಿನ ಅಭಿವೃದ್ಧಿಗೆ ಮಾಡಿಕೊಂಡಿದ್ದ ಲೆಕ್ಕಾಚಾರಗಳು ಹಳಿ ತಪ್ಪುತ್ತವೆ. ಬಡ್ಡಿ ದರಗಳು ಕಡಿಮೆಯಾದರೆ ಮೇಲಿನ ಸಾಲುಗಳಲ್ಲಿ ಹೇಳಿದ ಎಲ್ಲವೂ ವಿರುದ್ದವಾಗುತ್ತದೆ. ಹೀಗಾಗಿ ನಮ್ಮ ಹೂಡಿಕೆ ಎಷ್ಟೇ ಸರಿಯಾಗಿದ್ದರೂ ಬಡ್ಡಿ ದರದ ಏರಿಕೆ ಅಥವಾ ಇಳಿಕೆ ಹೂಡಿಕೆಯ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
  6. ವಿನಿಮಯ ದರಗಳ ಏರಿಳಿತದ ಅಪಾಯ: ಇವತ್ತು ಜಗತ್ತು ಒಂದು ಪುಟಾಣಿ ಹಳ್ಳಿ ಎನ್ನುವಂತಾಗಿದೆ. ಹತ್ತಾರು ವಿಷಯಗಳಿಗೆ ಒಂದು ದೇಶ ಇನ್ನೊಂದು ದೇಶದ ಮೇಲೆ ಅವಲಂಬಿಸಿದೆ. ಹೀಗಾಗಿ ವ್ಯಾಪಾರ ವಹಿವಾಟು ಕೂಡ ವೃದ್ಧಿಯಾಗಿದೆ. ಆದರೆ ಜಗತ್ತಿನಾದ್ಯಂತ ಒಂದೇ ಹಣವಿರದ ಕಾರಣ, ಮುಕ್ಕಾಲು ಪಾಲು ದೇಶಗಳು ಅಮೆರಿಕಾದ ಡಾಲರ್ನನ್ನ ವಿನಿಮಯವಾಗಿ ಬಳಸುತ್ತವೆ. ಹೀಗೆ ಬಳಸುವುದರಿಂದ ಉಂಟಾಗುವ ದೊಡ್ಡ ಸಮಸ್ಯೆ ವಿನಿಮಯ ದರ. ಈ ವಿನಿಮಯ ದರ ಒಂದೇ ಆಗಿರುವುದಿಲ್ಲ, ಕ್ಷಣ ಕ್ಷಣಕ್ಕೆ ಇದು ಬದಲಾಗುತ್ತ ಇರುತ್ತದೆ. ಉದಾಹರಣೆ ನೋಡಿ , ಭಾರತದ ಸಂಸ್ಥೆ ಇರಾನ್ ದೇಶದ ಸಂಸ್ಥೆಗೆ 1 ಲಕ್ಷ ಡಾಲರ್ ನೀಡಬೇಕಾಗಿದೆ ಎಂದುಕೊಳ್ಳಿ. ಈ ಒಪ್ಪಂದ ಆದಾಗ ಭಾರತೀಯ ರೂಪಾಯಿ ಡಾಲರ್ಗೆ 70 ಎಂದುಕೊಂಡರೆ ಒಟ್ಟು 70 ಲಕ್ಷ ರೂಪಾಯಿ ಖರ್ಚು ಬರುತ್ತಿತ್ತು. ತಿಂಗಳ ನಂತರ ಹಣ ನೀಡುವ ಸಮಯದಲ್ಲಿ ಡಾಲರ್ ಬೆಲೆ 75 ರೂಪಾಯಿ ಎಂದುಕೊಂಡರೆ ನಾವು ಒಟ್ಟು ಕೊಟ್ಟದು 75 ಲಕ್ಷ ರೂಪಾಯಿಯಾಗುತ್ತದೆ. ಡಾಲರ್ನಲ್ಲಿ ಹೆಚ್ಚು ಕಡಿಮೆಯಾಗಿಲ್ಲ, ಅದು ಒಂದು ಲಕ್ಷವೇ ಇದೆ, ಆದರೆ ವಿನಿಮಯದಲ್ಲಿ ಆದ ವ್ಯತ್ಯಾಸದಿಂದ 5 ಲಕ್ಷ ರೂಪಾಯಿ ಭಾರತೀಯ ಸಂಸ್ಥೆಗೆ ನಷ್ಟವಾಯ್ತು. ಇದು ಲಾಭವನ್ನ ಕೂಡ ಉಂಟುಮಾಡಬಹುದು. ಆದರೆ ಇಂದಿನ ಅಸ್ಥಿರತೆಯಲ್ಲಿ ನಷ್ಟದ ಸಾಧ್ಯತೆಯೇ ಜಾಸ್ತಿ. ಇದರರ್ಥ ನೀವು ಹೂಡಿಕೆ ಮಾಡಿರುವ ಭಾರತೀಯ ಸಂಸ್ಥೆ ಯಾವ ತಪ್ಪು ಕೂಡ ಮಾಡದೆ ನಷ್ಟಕ್ಕೀಡಾಯಿತು. ಒಂದು ಹಂತದ ಹೆಡ್ಜಿಂಗ್ ಇದರಿಂದ ಆಗುವ ನಷ್ಟವನ್ನ ತಡೆಯುತ್ತದೆ. ಆಮದು ಮತ್ತು ರಫ್ತಿನ ವ್ಯಾಪಾರದಲ್ಲಿ ತೊಡಗಿರುವ ಸಂಸ್ಥೆಗಳಿಗೆ ಇದರಿಂದ ಹೆಚ್ಚಿನ ಹೊಡೆತ ಉಂಟಾಗುತ್ತದೆ.
  7. ದ್ರವ್ಯತೆಯ ಕೊರತೆ ಉಂಟಾಗಬಹುದು: ಗ್ರಾಹಕ ಮಾರುಕಟ್ಟೆಯಲ್ಲಿ ಪದಾರ್ಥಗಳು ಔಟ್ ಆಫ್ ಫ್ಯಾಷನ್ ಆಗುವ ಸಾಧ್ಯತೆಯನ್ನ ಅಲ್ಲಗೆಳೆಯಲು ಬಾರದು. ಈ ರೀತಿಯ ಪರಿಸ್ಥಿತಿ ಹೆಚ್ಚಾಗಿ ಟೆಕ್ಸ್ಟೈಲ್ ಮತ್ತು ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಕಾಣಬಹುದು. ಯಾವುದೋ ಒಂದು ಕಾರು ಅಥವಾ ಬಟ್ಟೆ ಟ್ರೇಡಿಂಗ್ನಲ್ಲಿರುತ್ತದೆ. ಸಂಸ್ಥೆಗಳು ಟ್ರೆಂಡ್ ಅನುಸರಿಸಿ ಬೇಕಾದಷ್ಟು ಉತ್ಪಾದನೆ ಮಾಡಿ ಸ್ಟಾಕ್ನಲ್ಲಿಡುತ್ತಾರೆ. ಎಲ್ಲವೂ ಸರಿಯಾಗೇ ಇರುತ್ತದೆ, ಆದರೆ ಅಕಸ್ಮಾತ್ ಬೇರೊಂದು ಇದಕ್ಕಿಂತ ದೊಡ್ಡ ಮಟ್ಟದ ಟ್ರೆಂಡ್ ಸೃಷ್ಟಿಮಾಡಿದರೆ ಅಲ್ಲಿಗೆ ಕಥೆ ಮುಗಿಯಿತು. ಪದಾರ್ಥ ಮಾರಾಟವಾಗದೆ ಸ್ಟಾಕ್ ನಲ್ಲಿ ಉಳಿದುಕೊಳ್ಳುತ್ತದೆ. ನೀವು ಸಂಸ್ಥೆಯ ಲೆಕ್ಕಪತ್ರ ನೋಡಿದರೆ ಚನ್ನಾಗೇ ಕಾಣುತ್ತದೆ ಆದರೆ ಮುಂದಿನ ತಯಾರಿಕೆಗೆ ಬೇಕಾಗುವ ಹಣ, ಲಿಕ್ವಿಡಿಟಿ ,ಅಥವಾ ದ್ರವ್ಯತೆ ಮಾತ್ರ ಇರುವುದಿಲ್ಲ. ಸಂಸ್ಥೆಯ ಲಾಭಂಶ ಜೊತೆಗೆ ಒಂದಷ್ಟು ಬಂಡವಾಳ ಕೂಡ ಸ್ಟಾಕ್ ರೂಪದಲ್ಲಿ ಕುಳಿತು ಬಿಡುತ್ತದೆ. ಹೀಗಾದಾಗ ಅನ್ಯ ಮಾರ್ಗವಿಲ್ಲದೆ ಹೊಸ ಸಾಲವನ್ನ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಸ್ಟಾಕ್ನಲ್ಲಿ ಕುಳಿತ ಪದಾರ್ಥವನ್ನ ಹೆಚ್ಚಿನ ಲಾಭವಿಲ್ಲದೆ ಅಥವಾ ನಷ್ಟದಲ್ಲಿ ಮಾರಬೇಕಾದ ಪರಿಸ್ಥಿತಿ ಹೆಚ್ಚಾಗಿರುತ್ತದೆ. ಹೀಗಾಗಿ ಎಲ್ಲವೂ ಸರಿಯಾಗಿದ್ದೂ ಕೂಡ ದ್ರವ್ಯತೆಯ ಕೊರತೆಯನ್ನ ತನ್ಮೂಲಕ ನಷ್ಟವನ್ನ ಅನುಭವಿಸಬೇಕಾಗುತ್ತದೆ.
  8. ಸರಕಾರದ ಪಾಲಿಸಿ ಬದಲಾವಣೆಯ ಅಪಾಯ: ಟೆಲಿಕಾಂ, ತಂಬಾಕು, ಕೆಮಿಕಲ್, ಫಾರ್ಮ ಸಂಸ್ಥೆಗಳು ಸರಕಾರದ ನಿಯಮಗಳ ಬದಲಾವಣೆಯಿಂದ ಹೆಚ್ಚಿನ ಪೆಟ್ಟು ತಿನ್ನುತ್ತವೆ. ಹೂಡಿಕೆದಾರ ಹೂಡಿಕೆ ಮಾಡುವ ಸಮಯದಲ್ಲಿ ಎಲ್ಲವೂ ಪರವಾಗಿ ಇದ್ದ ಪಾಲಿಸಿಗಳು ದಿನವೊಪ್ಪತ್ತಿನಲ್ಲಿ ಬದಲಾವಣೆ ಆಗಬಹುದು. ಹೀಗಾಗಿ ಹೂಡಿಕೆದಾರನಿಗೆ ಈ ರೀತಿಯ ಅಪಾಯದಿಂದ ಆಗುವ ನಷ್ಟದ ಬಗ್ಗೆ ಕೂಡ ಮಾಹಿತಿಯನ್ನ ಪಡೆದುಕೊಂಡಿರಬೇಕಾಗುತ್ತದೆ. ಈ ರೀತಿಯ ಬದಲಾವಣೆಗಳು ಸಂಸ್ಥೆ ನಡೆಯುತ್ತಿರುವ ದಿಕ್ಕನ್ನೇ ಬದಲಿಸಿ ಬಿಡುತ್ತದೆ. ಹೀಗಾಗಿ ಸಂಸ್ಥೆ ಕುಸಿಯಲೂಬಹುದು.
  9. ತೆರಿಗೆಯಲ್ಲಿ ಆಗುವ ವ್ಯತ್ಯಯಗಳ ಅಪಾಯ: ಇಂದಿನ ದಿನಗಳಲ್ಲಿ ಜಿಎಸ್ಟಿ ಹಲವಾರು ಪದಾರ್ಥಗಳ ಮೇಲೆ ಹೆಚ್ಚಳವಾಗಿದೆ. ಕೆಲವೊಂದು ಕಡಿಮೆಯೂ ಆಗಿದೆ. ಹೀಗಾಗಿ ಯಾವ ವಲಯದಲ್ಲಿ ಹೂಡಿಕೆಯಿದೆ ಎನ್ನುವುದು ಮುಖ್ಯವಾಗುತ್ತದೆ. ಜೊತೆಗೆ ಹಲವಾರು ವಲಯದ ಉತ್ಪನ್ನಗಳಿಗೆ, ಆಮದು, ರಫ್ತಿನ ಮೇಲೆ ಆಂಟಿ ಡಂಪಿಂಗ್ ಚಾರ್ಜಸ್, ಕಂಪೆನ್ಸಷನ್ ಸೆಸ್, ಸೇಫ್ ಗಾರ್ಡ್ ಡ್ಯೂಟಿ, ಹೀಗೆ ಹಲವು ಹೆಸರುಗಳಲ್ಲಿ ತೆರಿಗೆಯನ್ನ ಹಾಕಲಾಗುತ್ತದೆ. ಹೀಗಾಗಿ ತೆರಿಗೆಯ ನಂತರದ ಲಾಭಂಶ ಈ ವಲಯಗಳಲ್ಲಿ ಕಡಿಮೆಯಿರುತ್ತದೆ. ಹೂಡಿಕೆದಾರನ ಹಸ್ತಕ್ಷೇಪವಿಲ್ಲದೆ ಆಗುವ ಇಂತಹ ಬದಲಾವಣೆಗಳಿಂದ ಲಾಭದಲ್ಲಿ ಆಗುವ ವ್ಯತ್ಯಾಸದ ಅರಿವು ಇರಬೇಕಾಗುತ್ತದೆ. ಇಲ್ಲದಿದ್ದರೆ ಇವು ಹೂಡಿಕೆಗೆ ಅಪಾಯವನ್ನ ತಂದೊಡ್ಡುತ್ತವೆ.

ಕೊನೆಮಾತು: ಷೇರು ಮಾರುಕಟ್ಟೆಯಲ್ಲಿ ಎಲ್ಲವನ್ನೂ ಅಳೆದು ತೂಗಿ ಹೂಡಿಕೆ ಮಾಡಿದ್ದರೂ ಕೂಡ ಮೇಲೆ ಹೇಳಿದ ಯಾವ ಕಾರಣ ಕೂಡ ನಮ್ಮ ಹೂಡಿಕೆಗೆ ಅಪಾಯಕಾರಿಯಾಗಿ ಪರಿವರ್ತನೆಗೊಳ್ಳಬಹುದು. ಇಷ್ಟೆಲ್ಲಾ ಅಪಾಯವಿದೆ ಎಂದು ಹೂಡಿಕೆ ಮಾಡದೆ ಇದ್ದರೆ ಅದು ಮೇಲೆ ಹೇಳಿದ ಎಲ್ಲಾ ಅಪಾಯಗಳಿಗಿಂತ ದೊಡ್ಡ ಅಪಾಯವಾಗುತ್ತದೆ. ಏಕೆಂದರೆ ಮೇಲೆ ಹೇಳಿದ ಎಲ್ಲವೂ ಸಂಭಾವ್ಯತೆಯ ಆಧಾರದ ಮೇಲೆ ನಿಂತಿದೆ. ಅವುಗಳು ಘಟಿಸಲೇಬೇಕು ಎನ್ನುವಂತಿಲ್ಲ, ಆದರೆ ನಾವು ಹೆದರಿಕೆಯಿಂದ ಹೂಡಿಕೆ ಮಾಡದಿದ್ದರೆ ಹಣದುಬ್ಬರದ ಮುಂದೆ ಹೂಡಿಕೆಯಾಗದ ನಮ್ಮ ಹಣ ಮೌಲ್ಯ ಕಳೆದುಕೊಳ್ಳುವುದು ಮಾತ್ರ ಗ್ಯಾರಂಟಿ, ಇಲ್ಲಿ ಸಂಭಾವ್ಯತೆಯಿಲ್ಲ, ಇರುವುದು ನಿಖರತೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com