ಮತ್ತೆ ಆಪರೇಷನ್ ಕಮಲ ಎಂಬ ಪ್ರಾಯೋಜಿತ ನಾಟಕ! (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ಶಾಸಕರ ಪಕ್ಷಾಂತರ ಪರ್ವ ರಾಜ್ಯದಲ್ಲಿ ಮತ್ತೆ ಆರಂಭವಾಗಲಿದೆಯ? ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಉರುಳಿಸಲು ದಿಲ್ಲಿಯಲ್ಲಿ ಬಿಜೆಪಿ ಕೇಂದ್ರ ನಾಯಕರ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿರುವುದು ನಿಜವಾ?
ಸಿಎಂ ಸಿದ್ದರಾಮಯ್ಯ-ಡಿಸಿಎಂ ಶಿವಕುಮಾರ್, ಮಾಜಿ ಸಿಎಂ ಯಡಿಯೂರಪ್ಪ
ಸಿಎಂ ಸಿದ್ದರಾಮಯ್ಯ-ಡಿಸಿಎಂ ಶಿವಕುಮಾರ್, ಮಾಜಿ ಸಿಎಂ ಯಡಿಯೂರಪ್ಪ

ಶಾಸಕರ ಪಕ್ಷಾಂತರ ಪರ್ವ ರಾಜ್ಯದಲ್ಲಿ ಮತ್ತೆ ಆರಂಭವಾಗಲಿದೆಯ? ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಉರುಳಿಸಲು ದಿಲ್ಲಿಯಲ್ಲಿ ಬಿಜೆಪಿ ಕೇಂದ್ರ ನಾಯಕರ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿರುವುದು ನಿಜವಾ? ಅಥವಾ ಇವೆಲ್ಲ ಕಾಂಗ್ರೆಸ್ ಪ್ರಾಯೋಜಿತ ನಾಟಕವಾ?

ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ,ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕೆಲವು ರಾಜಕೀಯ ನಾಯಕರು ಆಡುತ್ತಿರುವ ಮಾತುಗಳನ್ನು ನೋಡಿದರೆ ಸರ್ಕಾರವನ್ನು ಉರುಳಿಸಲು ತಂತ್ರ ರೂಪಿತವಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಾಣುವ ಸಂಗತಿ. ಸಾಧ್ಯಾಸಾಧ್ಯತೆಗಳನ್ನು ನೋಡಿದರೆ ಇಂತಹ ಪ್ರಯತ್ನಗಳು  ನಿಜವಾದರೂ ಸರ್ಕಾರಕ್ಕೆ ಅಪಾಯ ತರುವಷ್ಟರ ಮಟ್ಟಿಗೆ ಗಂಭೀರವಾಗಿಲ್ಲ.  

ರಾಜ್ಯಸರ್ಕಾರವನ್ನು ಉರುಳಿಸಿ ಮತ್ತೆ ಅಧಿಕಾರಕ್ಕೆ ಏರಲು ಸನ್ನಾಹ ನಡೆಸಿರುವ ಬಿಜೆಪಿ, ದಿಲ್ಲಿ ಮಟ್ಟದಲ್ಲಿ ಅದಕ್ಕಾಗಿ ಸಂಚು ನಡೆಸಿದ್ದು, ಕಾಂಗ್ರೆಸ್ ಶಾಸಕರಿಗೆ ಹಣ ಮತ್ತು ಅಧಿಕಾರದ ಆಮಿಷ ಒಡ್ಡಲಾಗುತ್ತಿದೆ. ಮುಂಬೈನಲ್ಲಿ ಇತ್ತೀಚೆಗೆ ಬಿಜೆಪಿ ನಾಯಕರೊಬ್ಬರು ರಾಜ್ಯದ ಕೆಲವು ಕಾಂಗ್ರೆಸ್ ಶಾಸಕರನ್ನು ಭೇಟಿ ಆಗಿರುವ ಮಾಹಿತಿಗಳೂ ತನ್ನ ಬಳಿ ಇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ದಿಲ್ಲಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದಾರೆ. ಅದು ರಾಷ್ಟ್ರ ಮಟ್ಟದಲ್ಲೂ ದೊಡ್ಡ ಸುದ್ದಿಯಾಗಿದೆ.ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಕುರಿತಂತೆ ರಾಜ್ಯ ಪೊಲೀಸ್ ಗುಪ್ತ ದಳ ಮಾಹಿತಿ ನೀಡಿದೆ ಎಂದೂ ತಿಳಿಸಿದ್ದಾರೆ.

ಈ ಹೇಳಿಕೆಯನ್ನು ಸಮರ್ಥಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರ ಉರುಳಿಸಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದೂ ಆರೋಪಿಸಿದ್ದಾರೆ. ಇದಕ್ಕೆ ಧ್ವನಿಗೂಡಿಸಿರುವ ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ನ 45 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದೂ ಹೇಳಿದ್ದಾರೆ. ರಾಜ್ಯದಲ್ಲಿ ಸರ್ಕಾರದ ಕಾರ್ಯ ನಿರ್ವಹಣೆ, ಅಭಿವೃದ್ಧಿ ಯೋಜನೆಗಳಿಗಿಂತ ಪಕ್ಷಾಂತರ ವಿಚಾರ ಕುರಿತ ಸುದ್ದಿಗಳೆ ವ್ಯಾಪಕವಾಗಿ ಚರ್ಚೆ ಆಗುತ್ತಿವೆ. ಆದರೆ ಈ ಬೆಳವಣಿಗೆಯ ಒಳ ಹೊಕ್ಕು ನೋಡಿದರೆ ಬೇರೆಯದೇ ಚಿತ್ರಣ ಸಿಗುತ್ತದೆ.

ವರ್ಗಾವಣೆಯೆ ಸಾಧನೆ:

136 ಶಾಸಕರ ಬಹುಮತದೊಂದಿಗೆ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಇದೀಗ ಆರು ತಿಂಗಳು. ಈ ಅವಧಿಯಲ್ಲಿ ಉಚಿತ ವಿದ್ಯುತ್ ಪೂರೈಕೆ ಮತ್ತು ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಗ್ಯಾರಂಟಿಗಳು ಬಿಟ್ಟರೆ ಉಳಿದಂತೆ ಚುನಾವಣಾ ಪೂರ್ವ ಭರಸೆಗಳು ಪೂರ್ಣವಾಗಿ ಜಾರಿ ಆಗಿಲ್ಲ. ಈ ಅವಧಿಯಲ್ಲಿ ಅಧಿಕಾರಿಗಳ ವರ್ಗಾವಣೆ ಭರಾಟೆ, ಅದಕ್ಕೆ ಸಂಬಂಧಿಸಿದ ಆರೋಪಗಳು, ಆದೇಶ ಜಾರಿಯಲ್ಲಿ ವೈಫಲ್ಯಗಳನ್ನು ಸರಿಪಡಿಸಲು ಇನ್ನೂ ಸಾಧ್ಯವಾಗಿಲ್ಲ. ಗುತ್ತಿಗೆದಾರರ ಬಿಲ್ ಪಾವತಿ ಸೇರಿದಂತೆ ಅನೇಕ ವಿವಾದಗಳು ಬಗೆಹರಿದಿಲ್ಲ. ದಿನಕ್ಕೊಂದು ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ವಿರುದ್ಧ ಆಡಳಿತ ಪಕ್ಷದ ಶಾಸಕರೇ ಮುನಿಸಿಕೊಂಡಿದ್ದಾರೆ. ಅವರನ್ನು ಸಮಧಾನಗೊಳಿಸುವುದೇ ದೊಡ್ಡ ಕೆಲಸವಾಗಿದೆ. ಇಷ್ಟೆಲ್ಲ ಗೊಂದಲಗಳು ಒಂದು ಕಡೆಯಾದರೆ, ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಆಗುತ್ತಿಲ್ಲ. ಆಡಳಿತಾತ್ಮಕ ಮತ್ತು ರಾಜಕೀಯವಾಗಿ ಸರ್ಕಾರ ನಿಖರ ದಾರಿಯಲ್ಲಿ ಸಾಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಬರುತ್ತಿದೆ. 

ಇಂತಹ ಸನ್ನಿವೇಶದಲ್ಲೇ ಸರ್ಕಾರ ಅಸ್ಥಿರತೆಯ ಭಯ ಎದುರಿಸುತ್ತಿದೆ. ಈ ಬಾರಿಯ ಚುನಾವಣೆ ಫಲಿತಾಂಶ ಬಿಜೆಪಿಗೆ ಬಹು ದೊಡ್ಡ ಆಘಾತ ಆಗಿರುವುದಂತೂ ಸತ್ಯ. ಸ್ವತಹಾ ಪ್ರಧಾನಿ ಮೋದಿಯವರ ಜನಪ್ರಿಯತೆಯೂ ರಾಜ್ಯದಲ್ಲಿ ನೆರವಾಗಲಿಲ್ಲ. ಆಂತರಿಕ ಕಲಹ, ಜಾತಿ ಲೆಕ್ಕಚಾರ, ದುರ್ಬಲ ನಾಯಕತ್ವ, ಅರೆ ಬೆಂದ ರಾಜಕೀಯ ತಂತ್ರಗಳ ಪರಿಣಾಮ ಚುನಾವಣೆಯಲ್ಲಿ ಸೋತ ಪಕ್ಷಕ್ಕೆ ವಾಸ್ತವವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ  ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೇರುವ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆಗಳು ಕಳೆದ ಆರು ತಿಂಗಳಿನಿಂದಲೂ ದಿಲ್ಲಿ ಮಟ್ಟದಲ್ಲಿ ನಡೆಯುತ್ತಿದ್ದು ಅದರಲ್ಲಿ ಹೊಸದೇನೂ ಇಲ್ಲ. ಆದರೆ ಕಮಲಪಕ್ಷದ ನಾಯಕರಿಗೆ ವಿಶ್ವಾಸ ಮೂಡಿಸಬಲ್ಲ ಸಮರ್ಥ ನಾಯಕ ರಾಜ್ಯದಲ್ಲಿ ಇಲ್ಲದಿರುವುದೇ ದೊಡ್ಡ ತಲೆ ನೋವಾಗಿದೆ.  

ಇದಕ್ಕೆ ನಿದರ್ಶನ ಎಂಬಂತೆ ವಿಧಾನಸಭೆ ರಚನೆಯಾಗಿ ಆರು ತಿಂಗಳು ಆಗುತ್ತಾ ಬಂದರೂ ಇನ್ನೂ ವಿಪಕ್ಷ ನಾಯಕನ ಆಯ್ಕೆ ಮಾಡದೇ ಪಕ್ಷದ ನಾಯಕರು ನಗೆಪಾಟಲಿಗಿಡಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಜೆಡಿಎಸ್ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳಲು ಹೆಜ್ಜೆ ಇಟ್ಟಿರುವ ಕೇಂದ್ರ ನಾಯಕರ ನಿರ್ಧಾರ ಬಿಜೆಪಿಯ ರಾಜ್ಯ ನಾಯಕರಿಗೇ ಇಷ್ಟವಿಲ್ಲ. ಈ ಕುರಿತಂತೆ ಪ್ರತ್ಯೇಕ ಲೆಕ್ಕಾಚಾರಗಳು ಬಿಜೆಪಿಯ ವಿವಿಧ ಗುಂಪುಗಳಲ್ಲಿ ನಡೆಯುತ್ತಿದೆ. ಮೈತ್ರಿಯೇ ಅಂತಿಮವಾದರೆ ಲೋಕಸಭಾ ಚುನಾವಣೆಯಲ್ಲಿ ಅದು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ದೊಡ್ಡ ಸಮಸ್ಯೆಯಾಗುವ ಸಾಧ್ಯತೆಗಳೂ ಇವೆ. ಇವೆಲ್ಲವನ್ನು ಸರಿಪಡಿಸಿಕೊಳ್ಳಲು ಬಿಜೆಪಿ ಕೇಂದ್ರ ನಾಯಕತ್ವಕ್ಕೆ ಇನ್ನೂ ಸಾಧ್ಯವಾಗಿಲ್ಲ.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿದ ನಂತರ ಪಕ್ಷ ಅವರಂತಹ ಮತ್ತೊಬ್ಬ ಸಮರ್ಥ ನಾಯಕನ ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಕೇಂದ್ರ ನಾಯಕರೇ ಕೈ ಹಾಕಿದರೂ ಅದು ಸ್ಥಳೀಯವಾಗಿ ಯಶಸ್ಸು ಕಾಣುವ ಸಾಧ್ಯತೆಗಳು ಇಲ್ಲ. ಜಾತಿ ಲೆಕ್ಕಾಚಾರ ಗಣನೆಗೆ ತೆಗೆದುಕೊಂಡರೂ ಎಲ್ಲ ವರ್ಗಗಳ ವಿಶ್ವಾಸ ಗಳಿಸ ಬಲ್ಲ ನಾಯಕರೆ ಬಿಜೆಪಿಯಲ್ಲಿ ಇಲ್ಲ. ಕೆಲವು ಪ್ರಮುಖ  ಹಿರಿಯ ನಾಯಕರಿಗೆ ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉರುಳುವುದು ವೈಯಕ್ತಿಕವಾಗಿ ಬೇಕಾಗಿಲ್ಲ. ಈ ಸನ್ನಿವೇಶ ಅರಿತಿರುವ ಬಿಜೆಪಿ ಕೇಂದ್ರ ನಾಯಕತ್ವಕ್ಕೆ ಆಡಳಿತ ಪಕ್ಷದಲ್ಲಿ ಏನೇ ಅಸಮಧಾನಗಳಿದ್ದರೂ ಅದು ಸರ್ಕಾರವನ್ನು ಉರುಳಿಸಲು ತನಗೆ ಸಾಧ್ಯವಾಗುವುದಿಲ್ಲ ಎಂಬ ಅಂಶ ಮನವರಿಕೆ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಉರುಳಿಸಿದರೆ ಅದರಿಂದ ನಷ್ಟಗಳೇ ಜಾಸ್ತಿ ಎಂಬ ಆತಂಕವೂ ನಾಯಕರನ್ನು ಕಾಡುತ್ತಿದೆ. 

ಇದೇ ಡಿಕೆಶಿ ತಂತ್ರ! 

ಇದೆಲ್ಲ ಗೊತ್ತಿದ್ದೂ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಸರ್ಕಾರ ಉರುಳಿಸುವ ಪಿತೂರಿ ಆರೋಪ ಮಾಡಿದ್ದೇಕೆ ಎಂದು ಪರಿಶೀಲಿಸಿದರೆ ಅದು ಜನ ಸಾಮಾನ್ಯರ ಗಮನವನ್ನು ಬೇರೆ ಕಡೆಗೆ ಸೆಳೆಯುವ ರಾಜಕೀಯ ತಂತ್ರ ಎಂಬುದು ಗೊತ್ತಾಗುತ್ತದೆ. ನೆರೆಯ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆ ನಡೆದಿರುವ ಈ ಹೊತ್ತಿನಲ್ಲಿ ಇಂಥದೊಂದು ರಾಜಕೀಯ ದಾಳ ಉರುಳಿಸಿದರೆ ರಾಷ್ಟ್ರ ಮಟ್ಟದಲ್ಲಿ ಅದೊಂದು ದೊಡ್ಡ ಸುದ್ದಿ ಆಗುತ್ತದೆ ಎಂಬ ಸಂಗತಿ ಗೊತ್ತಿದ್ದೇ ಆವರು ಅದನ್ನು ಪ್ರಯೋಗಿಸಿದ್ದಾರೆ.

ಎರಡೂವರೆ ವರ್ಷಗಳ ನಂತರ ಅಥವಾ ಅದಕ್ಕೂ ಮುನ್ನ ಮುಖ್ಯಮಂತ್ರಿ ಗಾದಿ ಮೇಲೆ ಕೂರಬೇಕೆಂದು ನಿಶ್ಚಯಿಸಿರುವ ಶಿವಕುಮಾರ್ ಗೆ ಪಕ್ಷದಲ್ಲೇ ತೀವ್ರ ವಿರೋಧಗಳು ಇವೆ. ಹಲವು ಅಸಮಾಧಾನಗಳಿದ್ದಾಗ್ಯೂ ಬೇರೆ ಬೇರೆ ಕಾರಣಗಳಿಗೆ ಸಿದ್ದರಾಮಯ್ಯ ನಾಯಕತ್ವವನ್ನು ಕಾಂಗ್ರೆಸ್ ನ ಹೆಚ್ಚು ಸಂಖ್ಯೆಯ ಶಾಸಕರು ಒಪ್ಪಿಕೊಂಡು ಅವರ ಬೆಂಬಲಕ್ಕೆ ನಿಂತಿದ್ದಾರೆ. ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಹೇಳುತ್ತಿರುವುದು ಹೊಸದಾಗಿ ಆಯ್ಕೆಯಾಗಿರುವ ಕೆಲವೇ ಯುವ ಶಾಸಕರು ಮಾತ್ರ. ಇದೇ ಶಾಸಕರು ಬಿಜೆಪಿ ತಮಗೆ ಆಮಿಷ ಒಡ್ಡುತ್ತಿದೆ ಎಂದು ಹುಯಿಲೆಬ್ಬಿಸಿದ್ದಾರೆ. ವಾಸ್ತವವಾಗಿ ನೋಡಿದರೆ ಬಿಜೆಪಿ ಸರ್ಕಾರ ರಚಿಸಲು ಕನಿಷ್ಟ 45 ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಪಕ್ಷಾಂತರ ಮಾಡಬೇಕು. ಆದರೆಅಷ್ಟು ಪ್ರಮಾಣದ ಶಾಸಕರು ರಾಜೀನಾಮೆ ನೀಡಿ ಅಥವಾ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಸಿಡಿದೆದ್ದು ಹೊರ ಬರುವ ಪರಿಸ್ಥಿತಿ ಸದ್ಯಕ್ಕೆ ಇಲ್ಲ. 

ಹೆಚ್ಚುಪಾಲು ಸಂಖ್ಯೆಯ ಶಾಸಕರಿಗೆ ತಮ್ಮ ರಾಜಕೀಯ ಭವಿಷ್ಯದ ಪ್ರಶ್ನೆಯೂ ಇದರಲ್ಲಿ ಅಡಗಿದೆಯಾದ್ದರಿಂದ ಅಂತಹ ದಿಢೀರ್ ಕ್ರಾಂತಿ ನಡೆಯುವ ಯಾವುದೇ ಸೂಚನೆಗಳು ಇಲ್ಲ. ಬಹು ಮುಖ್ಯವಾಗಿ ಕಾಂಗ್ರೆಸ್ ನ ಅಧಿಕ ಸಂಖ್ಯೆಯ ಶಾಸಕರಿಗೆ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯೇ ನೇರ ಎದುರಾಳಿ. ಆಮಿಷಕ್ಕೆ ಒಪ್ಪಿ ರಾಜಿ ಆದರೆ ಸ್ಥಳೀಯವಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾದ ಅಪಾಯಗಳ ಬಗ್ಗೆ ಅರಿವಿದೆ. 

ರಾಜ್ಯ ಬಿಜೆಪಿಯೇ ಅಸ್ಥಿರತೆ ಎದುರಿಸುತ್ತಿರುವಾಗ ಅಲ್ಲಿ ಹೋದರೆ ತಮ್ಮ ಹಿತಾಸಕ್ತಿ ಕಾಯುವ ನಾಯಕರೇ ಇಲ್ಲ. ಹಿರಿಯ ನಾಯಕ ಯಡಿಯೂರಪ್ಪನವರ ಮಾತಿಗೆ ಹೈಕಮಾಂಡ್ ಮಟ್ಟದಲ್ಲಿ ಈಗ ಮನ್ನಣೆ ಸಿಗುತ್ತಿಲ್ಲ. ಈ ಸನ್ನಿವೇಶದಲ್ಲಿ ಇದ್ದಲ್ಲೇ ಇರುವುದು ಒಳಿತು ಎಂಬ ನಿರ್ಧಾರ ಕಾಂಗ್ರೆಸ್ ನ ಹೆಚ್ಚಿನ ಸಂಖ್ಯೆಯ ಶಾಸಕರದ್ದು. ಬಿಜೆಪಿಯ ಸುಮಾರು ಎಂಟಕ್ಕೂ ಹೆಚ್ಚು ಶಾಸಕರು ಪಕ್ಷ ತೊರೆದು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಮತ್ತೆ ಉಪ ಚುನಾವಣೆ ಎದುರಿಸುವ  ಭೀತಿಯೂ ಅವರನ್ನು ಕಾಡುತ್ತಿದೆ. ಆದರೆ ಕೆಲವು ಪ್ರಭಾವಿ ಮಾಜಿ ಶಾಸಕರು, ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ.

ಕುಮಾರಸ್ವಾಮಿ ಪರದಾಟ

ಇನ್ನು ಜೆಡಿಎಸ್ ನ 19 ಶಾಸಕರನ್ನು ಹಿಡಿದಿಟ್ಟುಕೊಳ್ಳುವುದೇ ಕುಮಾರಸ್ವಾಮಿಗೆ ದೊಡ್ಡ ಸಮಸ್ಯೆಯಾಗಿದೆ. ಬಿಜೆಪಿ ಜತೆಗಿನ ಮೈತ್ರಿ ಕುರಿತ ನಿರ್ಧಾರಕ್ಕೆ ಪಕ್ಷದ ಹೆಚ್ಚುಪಾಲು ಶಾಸಕರ ವಿರೋಧವಿದೆ. ಜೆಡಿಎಸ್ ನ್ನು ಸಂಪೂರ್ಣ ದುರ್ಬಲಗೊಳಿಸಲು ಕಂಕಣ ತೊಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆ ಪಕ್ಷದ ಏಳಕ್ಕೂ ಹೆಚ್ಚು ಶಾಸಕರನ್ನು ಕಾಂಗ್ರೆಸ್ ಗೆ ಸೆಳೆಯುವ ಮೂಲಕ ಅನರ್ಹತೆ ಸಮಸ್ಯೆಯಿಂದ ಅವರನ್ನುಪಾರು ಮಾಡುವ ತಂತ್ರಕ್ಕೆ ಮುಂದಾಗಿದ್ದಾರೆ. ಇದು ಗೊತ್ತಾಗೇ ಕುಮಾರಸ್ವಾಮಿ ತಮ್ಮ ಪಕ್ಷದ ಶಾಸಕರನ್ನು ಹಿಡಿದಿಡುವ ಪ್ರಯತ್ನ ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಈ ಎಲ್ಲ ಬೆಳವಣಿಗೆಗಳು ಉಪ ಮುಖ್ಯಮಂತ್ರಿ ಶಿವಕುಮಾರ್ ಸುತ್ತಲೇ ಸುತ್ತುತ್ತಿವೆ. 

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com