ಡೌನ್ ಸಿಂಡ್ರೋಮ್ (ಕುಶಲವೇ ಕ್ಷೇಮವೇ)

ಮಕ್ಕಳಲ್ಲಿ ಕಂಡುಬರುವ ಆನುವಂಶಿಕ ಕಾಯಿಲೆಗಳಲ್ಲಿ ಡೌನ್ ಸಿಂಡ್ರೋಮ್ ಒಂದಾಗಿದೆ. ಇದು ವರ್ಣತಂತು (ಕ್ರೋಮೋಸೋಮ್) ಸಂಖ್ಯೆ 21ರ ಹೆಚ್ಚುವರಿ ಪ್ರತಿಯಿಂದ ಉಂಟಾಗುವ ಅಸ್ವಸ್ಥತೆಯಾಗಿದೆ. 
ಡೌನ್ ಸಿಂಡ್ರೋಮ್
ಡೌನ್ ಸಿಂಡ್ರೋಮ್

ಮಕ್ಕಳಲ್ಲಿ ಕಂಡುಬರುವ ಆನುವಂಶಿಕ ಕಾಯಿಲೆಗಳಲ್ಲಿ ಡೌನ್ ಸಿಂಡ್ರೋಮ್ ಒಂದಾಗಿದೆ. ಇದು ವರ್ಣತಂತು (ಕ್ರೋಮೋಸೋಮ್) ಸಂಖ್ಯೆ 21ರ ಹೆಚ್ಚುವರಿ ಪ್ರತಿಯಿಂದ ಉಂಟಾಗುವ ಅಸ್ವಸ್ಥತೆಯಾಗಿದೆ. 

ಸಾಮಾನ್ಯವಾಗಿ ಒಂದು ಮಗುವಿನಲ್ಲಿ 46 ವರ್ಣತಂತುಗಳಿರುತ್ತವೆ. ಆದರೆ ಡೌನ್ ಸಿಂಡ್ರೋಮ್ ಹೊಂದಿರುವ ಮಗು 47 ವರ್ಣತಂತುಗಳನ್ನು ಹೊಂದಿರುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ‘ಟ್ರಿಸೋಮಿ 21’ ಎಂದು ಕರೆಯುತ್ತಾರೆ. ಈ ಒಂದು ಹೆಚ್ಚಿನ ವರ್ಣತಂತುವಿನಿಂದ ಹಲವಾರು ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ದೋಷಗಳು ಕಂಡುಬರುತ್ತವೆ. ಲಘು ಅಥವಾ ಮಧ್ಯಮ ಪ್ರಮಾಣದ ಬೌದ್ಧಿಕ ಅಸಾಮರ್ಥ್ಯ ಉಂಟಾಗಬಹುದು. ಈ ಸ್ಥಿತಿಯು ಗಂಭೀರವಾಗಿದ್ದರೂ, ಮಾಹಿತಿ ಮತ್ತು ಸರಿಯಾದ ತಿಳುವಳಿಕೆ ಕೊರತೆಯಿಂದಾಗಿ ಅನೇಕ ಮಕ್ಕಳು ಬಳಲುತ್ತಿದ್ದಾರೆ. 

ಈ ಅಸಹಜತೆಗೆ ಇದುವರೆಗೂ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಹೆರಿಗೆಯ ಸಮಯದಲ್ಲಿ ತಾಯಿಯ ವಯಸ್ಸು ಡೌನ್ ಸಿಂಡ್ರೋಮ್ ಇರುವ ಮಗುವಿಗೆ ಜನನ ನೀಡುವ ಅಪಾಯವನ್ನು ಹೆಚ್ಚಿಸುತ್ತದೆ. 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಸಮಸ್ಯೆ ಇರುವ ಮಕ್ಕಳಿಗೆ ಜನ್ಮ ನೀಡುವ ಸಾಧ್ಯತೆ ಹೆಚ್ಚು ಎಂದು ತಿಳಿಯಲಾಗಿದೆ. ಡೌನ್ ಸಿಂಡ್ರೋಮಿನ ಲಕ್ಷಣಗಳು ಮತ್ತು ತೀವ್ರತೆ ಒಂದು ಮಗುವಿಗಿಂತ ಇನ್ನೊಂದು ಮಗುವಿಗೆ ಭಿನ್ನವಾಗಿರಬಹುದು. ಕೆಲವು ಮಕ್ಕಳು ತುಂಬ ಆರೋಗ್ಯವಂತವಾಗಿದ್ದರೆ, ಇನ್ನುಳಿದವರು ದೈಹಿಕ ಅಥವಾ ಬೌದ್ಧಿಕ ಬೆಳವಣಿಗೆಯಲ್ಲಿ ಗಂಭೀರ ಸಮಸ್ಯೆಗಳನ್ನು ಹೊಂದಿರಬಹುದು.

ಸಾಮಾನ್ಯವಾದ ದೈಹಿಕ ಬೆಳವಣಿಗೆಯನ್ನು ಹೊಂದಿರುವ ಮಕ್ಕಳಿಗೆ ಹೋಲಿಸಿದಲ್ಲಿ ಡೌನ್ ಸಿಂಡ್ರೋಮ್ ಹೊಂದಿರುವ ಮಕ್ಕಳ ಬೆಳವಣಿಗೆಯ ಹಂತಗಳು ನಿಧಾನಗತಿಯವಾಗಿರುತ್ತವೆ. ಡೌನ್ ಸಿಂಡ್ರೋಮ್ ನ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ: ಚಪ್ಪಟೆಯಾದ ಮುಖ-ವಿಶೇಷವಾಗಿ ಮೂಗಿನ ಏಣು, ಮೇಲ್ಗಡೆಗೆ ವಾಲಿರುವ ಕಣ್ಣುಗಳು; ಗಿಡ್ಡ ಕುತ್ತಿಗೆ ಮತ್ತು ಚಿಕ್ಕ ಕಿವಿಗಳು; ಬಾಯಿಂದ ಮುಂಚಾಚಿದಂತೆ ತೋರುವ ನಾಲಿಗೆ; ಸದೃಢವಲ್ಲದ ಮಾಂಸಖಂಡಗಳು, ಸಡಿಲವಾದ ಕೀಲುಗಳು ಮತ್ತು ಅತಿಯಾದ ಬಾಗುವಿಕೆ; ಅಗಲವಾದ, ಚಿಕ್ಕದಾದ ಬೆರಳುಗಳು, ಚಿಕ್ಕ ಕೈಗಳು ಮತ್ತು ಪಾದಗಳು; ಕುಬ್ಜತೆ ಮತ್ತು ಕಣ್ಣಿನ ಪಾಪೆಯಲ್ಲಿ ಚಿಕ್ಕಚಿಕ್ಕ ಬಿಳಿಬಣ್ಣದ ಚುಕ್ಕೆಗಳು.

ಈ ಲಕ್ಷಣಗಳ ಕುರಿತಾಗಿ ವೈದ್ಯರು ಮತ್ತು ಪರಿಣತ ತಜ್ಞರು ಮಕ್ಕಳನ್ನು ಕೂಲಂಕುಷವಾಗಿ ಗಮನಿಸಿ ಅವಶ್ಯಕವಿರುವ ಚಿಕಿತ್ಸೆ ಅಥವಾ ಥೆರಪಿಗಳನ್ನು ನೀಡುತ್ತಾರೆ. ಡೌನ್ ಸಿಂಡ್ರೋಮ್ ಹೊಂದಿರುವ ಮಕ್ಕಳು ಕಿವುಡುತನ, ಕಿವಿಯಲ್ಲಿ ಸೋಂಕು, ಕಣ್ಣಿನ ತೊಂದರೆಗಳು, ಜನ್ಮದಾರಭ್ಯದಿಂದ ಕಾಣಿಸಿಕೊಳ್ಳಬಹುದಾದ ಹೃದಯದ ತೊಂದರೆ; ಥೈರಾಯ್ಡ್; ಶಸ್ತ್ರಚಿಕಿತ್ಸೆ ಅವಶ್ಯಕವಿರಬಹುದಾದ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು, ರಕ್ತಹೀನತೆ, ಶೈಶವದಲ್ಲಿ ಅಥವಾ ಬಾಲ್ಯದ ಆರಂಭದಲ್ಲಿ ಲ್ಯುಕೇಮಿಯಾ ಮತ್ತು ಸ್ಥೂಲಕಾಯದಂತಹ ಸಂಕೀರ್ಣತೆಗಳನ್ನು ತೋರಬಹುದು. ಮಗು ಗರ್ಭಾವಸ್ಥೆಯಲ್ಲಿರುವಾಗ ಅಥವಾ ಜನಿಸಿದ ಕೂಡಲೇ ತಜ್ಞವೈದ್ಯರು ಡೌನ್ ಸಿಂಡ್ರೋಮ್ ಪತ್ತೆಮಾಡುವುದು ಸಾಧ್ಯವಿದೆ. ಬಸಿರಿನ ಸಂದರ್ಭದಲ್ಲಿ ಇದಕ್ಕಾಗಿರುವ ಪರೀಕ್ಷೆಯನ್ನು ಮಾಡಿಸಿಕೊಂಡರೆ ಅನುಕೂಲ. ಗರ್ಭಾವಸ್ಥೆಯಲ್ಲಿ ಸ್ಕ್ರೀನಿಂಗ್ ಮತ್ತು ರೋಗಪತ್ತೆ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಮಗು ಜನಿಸಿದ ನಂತರ ಅದಕ್ಕೆ ಅಸಹಜ ಲಕ್ಷಣಗಳಿದ್ದರೆ ವೈದ್ಯರು ಡೌನ್ ಸಿಂಡ್ರೋಮ್ ಪರೀಕ್ಷೆ ಮಾಡಬಹುದು.

ಡೌನ್ ಸಿಂಡ್ರೋಮ್ ಮಕ್ಕಳ ಪೋಷಕರ ಪಾತ್ರ

ಪೋಷಕರಿಗೆ ತಮ್ಮ ಮಗುವಿಗೆ ಡೌನ್ ಸಿಂಡ್ರೋಮ್ ಸಮಸ್ಯೆ ಇದೆ ಎಂದು ತಿಳಿದ ತಕ್ಷಣ ಕಷ್ಟವಾದರೂ ವಾಸ್ತವವನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕು. ಅವರ ಆರೈಕೆಯಲ್ಲಿ ಕ್ರಮೇಣ ತೊಡಗಿಕೊಳ್ಳಬೇಕು. ಅದು ಚಟುವಟಿಕೆಯಿಂದ ಕೂಡಿದ ಉತ್ತಮ ಜೀವನವನ್ನು ನಡೆಸುವಂತಾಗಲು ಬೇಕಾದ ಎಲ್ಲ ಸಹಾಯಗಳನ್ನೂ ಮಾಡತೊಡಗುತ್ತಾರೆ. 

ವಾಸ್ತವ ಸಂಗತಿಯನ್ನು ಅರಿತ ನಂತರ ತಮ್ಮ ಪ್ರೀತಿಯ ಮಗುವಿಗೆ ಲಭ್ಯವಿರುವ ಅತ್ಯುತ್ತಮ ಚಿಕಿತ್ಸೆ ಮತ್ತು ಅರೈಕೆಯ ವಿಧಾನಗಳನ್ನು ಒದಗಿಸುವುದು ಪಾಲಕರು ತೆಗೆದುಕೊಳ್ಳುವುದು ಮೊದಲ ಹೆಜ್ಜೆ. ಅವರು ಇದೇ ರೀತಿಯ ತೊಂದರೆಯನ್ನು ಅನುಭವಿಸುತ್ತಿರುವ ಇತರ ಮಕ್ಕಳ ಪೋಷಕರನ್ನು ಭೇಟಿ ಮಾಡಿ ಸಪೋರ್ಟ್ ಗ್ರೂಪ್ ಮಾಡಿಕೊಳ್ಳಬಹುದು. ಬಹುತೇಕ ಮಕ್ಕಳು ತಮ್ಮ ದೈನಂದಿನ ಚಟುವಟಿಕೆಗಳನ್ನು ಸ್ವತಂತ್ರವಾಗಿ ನಿಭಾಯಿಸುವುದನ್ನು ನಿಧಾನವಾಗಿಯಾದರೂ ಕಲಿತುಕೊಳ್ಳುತ್ತಾರೆ. ಮುಖ್ಯವಾಹಿನಿಯ ಶಾಲೆಗೆ ಹೋಗಿ ಓದಿ ಬರೆದು ಮಾಡುತ್ತಾರೆ. ಕೆಲಸಕ್ಕೆ ಸೇರುತ್ತಾರೆ ಸಂತೋಷದಿಂದ ಜೀವನ ಸಾಗಿಸುತ್ತಾರೆ. ಇದಕ್ಕೆಲ್ಲ ಪೋಷಕರು ನೆರವಾಗಬೇಕು. ಅವರಲ್ಲಿ ವಿಶ್ವಾಸ ತುಂಬಬೇಕು. 

ಡೌನ್ ಸಿಂಡ್ರೋಮ್ ಹೊಂದಿರುವ ಬಹುತೇಕ ಮಕ್ಕಳು ಸಾಮಾನ್ಯವಾದುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಬುದ್ಧಿಮತ್ತೆಯನ್ನು ಹೊಂದಿರುತ್ತಾರೆ ಮತ್ತು ಕೆಲವು ವಿಶೇಷ ಕೌಶಲಗಳು ಹಾಗೂ ಪ್ರತಿಭೆಗಳಿಂದ ಕೂಡಿರುತ್ತಾರೆ. ಈ ರೀತಿಯ ಪ್ರತಿಭೆಗಳನ್ನು ಗುರುತಿಸಿ ಅವರು ಅದರಲ್ಲಿ ಹೆಚ್ಚು ಹೆಚ್ಚು ತೊಡಗುವಲ್ಲಿ ಪಾಲಕರು ಸಹಾಯ ಮಾಡಬಹುದು. ಪ್ರಪಂಚದಾದ್ಯಂತ ಪ್ರತಿ ಒಂದು ಸಾವಿರ ಮಕ್ಕಳಲ್ಲಿ ಒಂದು ಮಗು ಈ ಸಮಸ್ಯೆಯಿಂದ ಪ್ರಭಾವಿತವಾಗಿದೆ. ಈ ಸಮಸ್ಯೆಯು ಭಾರತದಲ್ಲಿ ಪ್ರತಿ ವರ್ಷ 1.3 ಲಕ್ಷ ಮಕ್ಕಳನ್ನು ಬಾಧಿಸುತ್ತಿದೆ. ಆದ್ದರಿಂದ ಈ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲು ವರ್ಲ್ಡ್ ಡೌನ್ ಸಿಂಡ್ರೋಮ್ ದಿನವನ್ನು ಪ್ರತಿ ವರ್ಷ ಮಾರ್ಚ್ 21ರಂದು ವಿಶ್ವ ಆರೋಗ್ಯ ಸಂಸ್ಥೆಯು ಆಚರಿಸುತ್ತಾ ಬಂದಿದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com