ಬೈಪೋಲಾರ್ ಡಿಸಾರ್ಡರ್ ಎಂಬ ಮಾನಸಿಕ ಅಸ್ವಸ್ಥತೆ (ಕುಶಲವೇ ಕ್ಷೇಮವೇ)
ಬೈಪೋಲಾರ್ ಡಿಸಾರ್ಡರ್ ಇರುವ ವ್ಯಕ್ತಿಗಳ ಮನಸ್ಸಿನ ಸ್ಥಿತಿಯು ಉನ್ಮಾದ ಮತ್ತು ಖಿನ್ನತೆಗಳ ನಡುವೆ ಹೊಯ್ದಾಡುತ್ತಾ ಇರುತ್ತದೆ. ಆದ್ದರಿಂದಲೇ ಈ ಕಾಯಿಲೆಗೆ ಬೈಪೋಲಾರ್ ಡಿಸಾರ್ಡರ್ (ದ್ವಿಧ್ರುವೀ ಮಾನಸಿಕ ಅವ್ಯವಸ್ಥೆ) ಎಂಬ ಹೆಸರು ಬಂದಿದೆ.
Published: 02nd September 2023 11:03 AM | Last Updated: 02nd September 2023 07:33 PM | A+A A-

ಬೈಪೋಲಾರ್ ಡಿಸಾರ್ಡರ್ (ಸಾಂಕೇತಿಕ ಚಿತ್ರ)
ಬೈಪೋಲಾರ್ ಡಿಸಾರ್ಡರ್ ಅಥವಾ ದ್ವಿಧ್ರುವೀ ಮಾನಸಿಕ ಅಸ್ವಸ್ಥತೆ ಒಂದು ಗಂಭೀರ ಮಾನಸಿಕ ಆನಾರೋಗ್ಯ ಸ್ಥಿತಿ. ಇದು ವ್ಯಕ್ತಿಯ ಮನಸ್ಥಿತಿ, ಶಕ್ತಿ ಮತ್ತು ಚಟುವಟಿಕೆಯ ಮಟ್ಟದ ಮೇಲೆ ಗಹನವಾದ ಪರಿಣಾಮ ಬೀರುತ್ತದೆ. ಬೈಪೋಲಾರ್ ಡಿಸಾರ್ಡರ್ ಇರುವ ಜನರು ತೀವ್ರವಾದ ಗರಿಷ್ಠ ಉನ್ಮಾದ ಮತ್ತು ಖಿನ್ನತೆಯನ್ನು ಅನುಭವಿಸುತ್ತಾರೆ. ಸರಳವಾಗಿ ಹೇಳುವುದಾದರೆ ಇದೊಂದು ಅಸ್ವಾಭಾವಿಕವಾದ ಮತ್ತು ತೀವ್ರ ಸ್ವರೂಪದ ಚಿತ್ತ ಚಾಂಚಲ್ಯವನ್ನುಂಟುಮಾಡುವ ಅಸಾಮಾನ್ಯ ಮಾನಸಿಕ ಅಸ್ವಸ್ಥತೆ.
ಬೈಪೋಲಾರ್ ಡಿಸಾರ್ಡರ್ ಲಕ್ಷಣಗಳು
ಬೈಪೋಲಾರ್ ಡಿಸಾರ್ಡರ್ ಇರುವ ವ್ಯಕ್ತಿಗಳ ಮನಸ್ಸಿನ ಸ್ಥಿತಿಯು ಉನ್ಮಾದ ಮತ್ತು ಖಿನ್ನತೆಗಳ ನಡುವೆ ಹೊಯ್ದಾಡುತ್ತಾ ಇರುತ್ತದೆ. ಆದ್ದರಿಂದಲೇ ಈ ಕಾಯಿಲೆಗೆ ಬೈಪೋಲಾರ್ ಡಿಸಾರ್ಡರ್ (ದ್ವಿಧ್ರುವೀ ಮಾನಸಿಕ ಅವ್ಯವಸ್ಥೆ) ಎಂಬ ಹೆಸರು ಬಂದಿದೆ. ಇದರಲ್ಲಿ ಮೊದಲಿಗೆ ಖಿನ್ನತೆ ಇಲ್ಲವೇ ಉನ್ಮಾದ ಕಾಣಿಸಿಕೊಳ್ಳಬಹುದು. ನಂತರ ಈ ಸ್ಥಿತಿಗಳು ಆಗಾಗ ಮರುಕಳಿಸುತ್ತಿರುತ್ತವೆ. ಈ ಎರಡು ಸ್ಥಿತಿಗಳ ನಡುವೆಯೇ ಅವರ ದೈನಂದಿನ ಸಾಮಾನ್ಯ ಜೀವನ ನಡೆಯುತ್ತಿರುತ್ತದೆ. ಆದರೆ ಮನಸ್ಥಿತಿ ಏರುಪೇರಿನ ಸಂದರ್ಭದಲ್ಲಿ ಮಾತ್ರ ಜೀವನ ಸ್ತಬ್ದವಾಗಿರುತ್ತದೆ. ಈ ಮಾನಸಿಕ ಅಸ್ವಸ್ಥತೆಯ ಅವಧಿ ಕೆಲವು ವಾರಗಳಿಂದ, ತಿಂಗಳುಗಳವರೆಗೆ ಇರುವುದರಿಂದ ವೃತ್ತಿ, ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಏರುಪೇರುಗಳನ್ನು ಎದುರಿಸುತ್ತಾರೆ.
ಇದನ್ನೂ ಓದಿ: ಡೆಂಗ್ಯೂ ಜ್ವರ (ಕುಶಲವೇ ಕ್ಷೇಮವೇ)
ಖಿನ್ನತೆಯ ಸ್ಥಿತಿಯಲ್ಲಿದ್ದಾಗ ಎಲ್ಲದರಲ್ಲೂ ನಿರಾಸಕ್ತಿ, ನಿರುತ್ಸಾಹ, ಅಶಕ್ತಿ, ಬೇಜಾರು ಹಾಗೂ ಕಾರಣವಿಲ್ಲದೇ ದುಃಖ ಉಂಟಾಗುತ್ತದೆ. ಏನೂ ಬೇಡ, ಯಾರ ಸಹವಾಸವೂ ಬೇಡ ಏಕಾಂತವೇ ಹಿತವೆನಿಸುತ್ತದೆ. ಜೊತೆಗೆ ಹತಾಶೆ, ಭವಿಷ್ಯದ ಬಗ್ಗೆ ನಿರಾಶೆ, ಅಸಹಾಯಕತೆ ಮತ್ತು ಅಪರಾಧಿ ಭಾವನೆಗಳು ಕಾಡುತ್ತವೆ. ಸಾವು ಮತ್ತು ಆತ್ಮಹತ್ಯಾ ಯೋಚನೆಗಳೂ ಬರಬಹುದು. ನಿದ್ರಾಹೀನತೆ, ಹಸಿವು ಆಗದಿರುವುದು ಮತ್ತು ಲೈಂಗಿಕ ನಿರಾಸಕ್ತಿ ಸಾಮಾನ್ಯ. ಹೀಗಿದ್ದಾಗ ಅವರ ವೃತ್ತಿ ಹಾಗೂ ಕೌಟುಂಬಿಕ ಜೀವನ ಹದಗೆಡುತ್ತವೆ. ಇದಕ್ಕೆ ವಿರುದ್ಧವಾಗಿ ಕೆಲವೊಮ್ಮೆ ಕಾರಣವಿಲ್ಲದೇ ಅತಿ ಆನಂದವಾಗಿರುವುದು, ಅತಿಯಾಗಿ ಖುಷಿಕೊಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಬೇರೆಯವರೊಂದಿಗೆ ಅತ್ಯಾಪ್ತವಾಗಿ ಇರುವುದು ಕಂಡುಬರುತ್ತದೆ. ಇದಲ್ಲದೇ ನಿದ್ರೆ ಮಾಡುವ ಅವಧಿಯಲ್ಲಿ ಬದಲಾವಣೆ, ಆಯಾಸ ಅಥವಾ ಶಕ್ತಿಯ ಕೊರತೆ ಆಗಾಗ ಕಂಡುಬರುತ್ತದೆ. ಹಾಗೆಯೇ ವಿನಾ ಕಾರಣ ನೆಗೆಟಿವ್ ಯೋಚನೆಗಳು ಉದಾಹರಣೆಗೆ ತನ್ನಿಂದ ಯಾರಿಗೂ ಪ್ರಯೋಜನವಿಲ್ಲ, ಬದುಕಿಗೆ ಅರ್ಥವಿಲ್ಲ, ಪ್ರಪಂಚ ಸುಧಾರಿಸುವುದಿಲ್ಲ ಮತ್ತು ತನಗೆ ಯಾರೂ ಇಲ್ಲ ಎಂಬಂಥಹ ಭಾವನೆಗಳು ಬಂದು ಮನಸ್ಸಿನಲ್ಲಿ ಬೇರೂರುತ್ತವೆ. ಬಹುಬೇಗ ಈ ಭಾವನೆಗಳು ಹೋಗುವುದಿಲ್ಲ. ಇದೆಲ್ಲಾ ಈ ರೋಗದ ಲಕ್ಷಣಗಳು.
ಬೈಪೋಲಾರ್ ಡಿಸಾರ್ಡರ್ ಗುಣಪಡಿಸಬಹುದೇ?
ಬೈಪೋಲಾರ್ ಡಿಸಾರ್ಡರ್ ಹೃದಯ ತೊಂದರೆ ಅಥವಾ ಮಧುಮೇಹದಂತೆಯೇ ದೀರ್ಘ ಸಮಯ ಕಾಡುವ ಮಾನಸಿಕ ಅಸ್ವಸ್ಥತೆ. ಜೀವನಪೂರ್ತಿ ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕಾದ ಅವಶ್ಯಕತೆಯಿರುತ್ತದೆ. ಸೂಕ್ತ ರೋಗ ನಿರ್ಣಯ ಮತ್ತು ಚಿಕಿತ್ಸೆಯಿಂದ ವ್ಯಕ್ತಿಗಳು ಉತ್ತಮವಾದ ಮತ್ತು ಆರೋಗ್ಯಯುತ ಜೀವನ ನಡೆಸಬಹುದು. ಚಿಕಿತ್ಸೆಯು ರೋಗಲಕ್ಷಣಗಳ ತೀವ್ರತೆ ಮತ್ತು ಮರುಕಳಿಸುವಿಕೆಯನ್ನು ಕಡಿಮೆ ಮಾಡುತ್ತದೆ. ಜಗತ್ತಿನಾದ್ಯಂತ ಶೇಕಡಾ 2-4ರಷ್ಟು ಜನ ಇದರಿಂದ ಬಳಲುತ್ತಿದ್ದಾರೆ. ಯುವಜನರೂ ಸೇರಿದಂತೆ ಎಲ್ಲಾ ವಯಸ್ಸಿನ ಜನರನ್ನೂ ಇದು ಕಾಡಬಹುದು. ಮನಸ್ಥಿತಿಯ ಏರುಪೇರುಗಳು ಹೆಚ್ಚಾದಾಗ ಹಾಗೂ ಅದರಿಂದ ದೈನಂದಿನ ಜೀವನಕ್ಕೆ ತೊಂದರೆಯಾದರೆ ತಕ್ಷಣ ಮನೋವೈದ್ಯರನ್ನು ಸಂಪರ್ಕಿಸಬೇಕು. ಬೈಪೋಲಾರ್ ರೋಗವೆಂದು ನಿರ್ಧಾರವಾದರೆ ವೈದ್ಯರ ಸಲಹೆಯಂತೆ ಕೆಲವು ಪರೀಕ್ಷೆಗಳಿಗೊಳಪಟ್ಟು ಔಷಧೋಪಚಾರ ತೆಗೆದುಕೊಳ್ಳಬೇಕು.
ಬೈಪೋಲಾರ್ ಡಿಸಾರ್ಡರ್ ಗೆ ಚಿಕಿತ್ಸೆ
ಬೈಪೋಲಾರ್ ಡಿಸಾರ್ಡರಿನ ಚಿಕಿತ್ಸೆಯು ಸಾಮಾನ್ಯವಾಗಿ ಔಷಧಿ ಮತ್ತು ಚಿಕಿತ್ಸೆಯ ಸಂಯೋಜನೆಯನ್ನು ಒಳಗೊಂಡಿರುತ್ತದೆ. ಮನೋವೈದ್ಯರಲ್ಲಿಗೆ ಹೋದರೆ ಮನಸ್ಸಿನ ಸ್ಥಿತಿಯನ್ನು ಸ್ಥಿರಗೊಳಿಸಲು ಮೂಡ್ ಸ್ಟೆಬಿಲೈಸರ್‌ಗಳು, ಆಂಟಿ ಸೈಕೋಟಿಕ್ಸ್ ಮತ್ತು ಖಿನ್ನತೆ-ಶಮನಕಾರಿಗಳಂತಹ ಔಷಧಿಗಳನ್ನು ನೀಡುತ್ತಾರೆ. ಕೆಲವರಿಗೆ ಕಾಗ್ನಿಟಿವ್-ಬಿಹೇವಿಯರಲ್ ಥೆರಪಿ ಸಲಹೆ ಮಾಡಿದರೆ ಅದು ಮನಸ್ಸಿನ ಸ್ಥಿತಿ ನಿಭಾಯಿಸುವ ಕೌಶಲ್ಯಗಳನ್ನು ಕಲಿಯಲು ಮತ್ತು ಅವರ ರೋಗಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕಂಜಕ್ಟಿವೈಟಿಸ್ ಅಥವಾ ಮದ್ರಾಸ್ ಐ (ಕುಶಲವೇ ಕ್ಷೇಮವೇ)
ಬೈಪೋಲಾರ್ ಡಿಸಾರ್ಡರನ್ನು ನಿಯಂತ್ರಿಸಲು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಸೇವನೆ ಮತ್ತು ಸಾಕಷ್ಟು ನಿದ್ದೆ ಮಾಡುವುದನ್ನು ಇದು ಒಳಗೊಂಡಿರುತ್ತದೆ. ಜೊತೆಗೆ ಅಹಿತಕರ ಚಟಗಳು, ಮಾದಕ ದ್ರವ್ಯ ಮತ್ತು ಮದ್ಯಪಾನಗಳಿಂದ ದೂರವಾಗಿರಬೇಕು. ರೋಗಿಗಳಿಗೆ ಮನೆಯವರ ಪ್ರೀತಿ, ವಿಶ್ವಾಸ ಮತ್ತು ಆರೈಕೆಗಳು ಬಹಳ ಮುಖ್ಯ.
ವೈದ್ಯರು ರೋಗಲಕ್ಷಣಗಳು ಮತ್ತು ಚಿಕಿತ್ಸೆಯ ಬಗ್ಗೆ ರೋಗಿಗಳ ಪ್ರೀತಿಪಾತ್ರರೊಂದಿಗೆ ಮುಕ್ತವಾಗಿ ಸಂವಹನ ಮಾಡುವುದು ಬಹಳ ಮುಖ್ಯವಾಗಿದೆ. ಒಟ್ಟಾರೆ ಹೇಳುವುದಾದರೆ ನಿಯಮಿತ ಶಿಸ್ತಿನ ಜೀವನ, ದೈಹಿಕ ಚಟುವಟಿಕೆ, ಆರೋಗ್ಯಕರ ಆಹಾರ ಪದ್ಧತಿ, ಸಂಗೀತ ಕೇಳುವುದು, ಉತ್ತಮ ಪುಸ್ತಕಗಳನ್ನು ಓದುವುದು, ತೋಟಗಾರಿಕೆಯಂತಹ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು, ಯೋಗ, ಪ್ರಾಣಾಯಾಮ, ದುಶ್ಚಟಗಳಿಂದ ದೂರ ಉಳಿಯುವುದು ಮತ್ತು ಒತ್ತಡರಹಿತ ಜೀವನಶೈಲಿ ಅಗತ್ಯ.
ಬೈಪೋಲಾರ್ ಡಿಸಾರ್ಡರ್ ಕುರಿತು ಇದೂ ತಿಳಿದಿರಲಿ
ಈ ರೋಗಿಗಳಿಗೆ ಆರೈಕೆ ಮಾಡುವವರು ಅಥವಾ ಅವರನ್ನು ನೋಡಿಕೊಳ್ಳುವವರೂ ಕೂಡ ಹೆಚ್ಚಿನ ಒತ್ತಡ ಹಾಗೂ ಭಾವನಾತ್ಮಕ ತೊಂದರೆಗಳಿಗೆ ಒಳಗಾಗುತ್ತಾರೆ. ಬಹುತೇಕವಾಗಿ ಮಹಿಳಾ ಆರೈಕೆದಾರರು ಪುರುಷರಿಗಿಂತಲೂ ಹೆಚ್ಚು ಒತ್ತಡ, ದಣಿವು ಮತ್ತು ತಲ್ಲಣಗಳನ್ನು ಅನುಭವಿಸುತ್ತಾರೆ. ಈ ಕಾರಣಗಳಿಗಾಗಿ ಅವರಲ್ಲಿ ಖಿನ್ನತೆಯುಂಟಾಗುವ ಅಪಾಯವಿದೆ. ಆರೈಕೆದಾರರು ಅವರ ಪ್ರೀತಿಪಾತ್ರರ ಆರೈಕೆಗೆ ಎಷ್ಟು ಕಾಳಜಿ ವಹಿಸುತ್ತಾರೆಂದರೆ ಅವರ ಸ್ವಂತ ಜೀವನದ ಬಗ್ಗೆ ಲಕ್ಷ್ಯ ವಹಿಸುವುದನ್ನೂ ಮರೆತುಬಿಡುತ್ತಾರೆ. ಆದ್ದರಿಂದ ಆರೈಕೆದಾರರು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕುರಿತಾಗಿ ಕಾಳಜಿ ತೆಗೆದುಕೊಳ್ಳುವುದು ಅತಿ ಅವಶ್ಯವಾಗಿದೆ.
ಇದನ್ನೂ ಓದಿ: ಡಿಸ್ಲೆಕ್ಸಿಯಾ: ಇದು ಕಾಯಿಲೆ ಅಲ್ಲ; ಆತಂಕ ಬೇಡ, ಕಾಳಜಿ ಇರಲಿ (ಕುಶಲವೇ ಕ್ಷೇಮವೇ)
ಆಯುರ್ವೇದದಲ್ಲಿ ಮಾನಸಿಕ ಒತ್ತಡವನ್ನು ಸೂಕ್ತವಾಗಿ ನಿರ್ವಹಿಸಲು ಬ್ರಾಹ್ಮಿ, ಜ್ಯೋತಿಷ್ಮತಿ ಮುಂತಾದ ಗಿಡಮೂಲಿಕೆಗಳಿಂದ ತಯಾರಾದ ಔಷಧಿಗಳಿವೆ. ಜೊತೆಗೆ ಶಿರೋಧಾರಾ ಮತ್ತು ಶಿರೋಪಿಚು ಚಿಕಿತ್ಸೆಗಳೂ ಲಭ್ಯವಿವೆ.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com