ಆನೆಕಾಲು ರೋಗ (ಕುಶಲವೇ ಕ್ಷೇಮವೇ)

ಆನೆಕಾಲು ರೋಗ ಪಸರಿಸುವುದು ಕ್ಯೂಲೆಕ್ಸ್ ಎಂಬ ಸೊಳ್ಳೆ. ಈ ಸೊಳ್ಳೆಯಲ್ಲಿ ಫೈಲೇರಿಯಾ ಎಂಬು ಸೂಕ್ಷ್ಮಾಣುಜೀವಿ ಜಂತುಹುಳ ಸೇರಿಕೊಂಡಿರುತ್ತದೆ.
ಆನೆಕಾಲು ರೋಗ
ಆನೆಕಾಲು ರೋಗ

ಆನೆಕಾಲು ರೋಗ (ಲಿಂಫಾಟಿಕ್ ಫೈಲೇರಿಯಾಸಿಸ್/ಎಲಿಫೆಂಟಿಯಾಸಿಸ್) ಸೊಳ್ಳೆ ಕಡಿತದ ಮೂಲಕ ಮನುಷ್ಯರಿಗೆ ಹರಡುವ ಪರಾವಲಂಬಿ ಸೂಕ್ಷ್ಮಾಣುಜೀವಿ ಸೋಂಕು. ಈ ಸೋಂಕು ತೋಳುಗಳು, ಕಾಲುಗಳು ಮತ್ತು ಜನನಾಂಗಗಳಲ್ಲಿ ಊತವನ್ನು ಉಂಟುಮಾಡಬಹುದು. ಕಾಲುಗಳು ಊದಿಕೊಂಡು ಆನೆಗಳ ಕಾಲುಗಳಂತೆ ಕಾಣುತ್ತವೆ. ಆದ್ದರಿಂದಲೇ ಈ ರೋಗಕ್ಕೆ ಆನೆಕಾಲು ರೋಗ ಎಂಬ ಹೆಸರು ಬಂದಿದೆ. ಈ ರೋಗ ದುಗ್ಧರಸ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ನೋವು, ತೀವ್ರ ಅಂಗವೈಕಲ್ಯ ಮತ್ತು ಸಾಮಾಜಿಕ ಕಳಂಕವನ್ನು ಉಂಟುಮಾಡುತ್ತದೆ.

ಆನೆಕಾಲು ರೋಗ ಹೇಗೆ ಬರುತ್ತದೆ?
ಆನೆಕಾಲು ರೋಗ ಪಸರಿಸುವುದು ಕ್ಯೂಲೆಕ್ಸ್ ಎಂಬ ಸೊಳ್ಳೆ. ಈ ಸೊಳ್ಳೆಯಲ್ಲಿ ಫೈಲೇರಿಯಾ ಎಂಬು ಸೂಕ್ಷ್ಮಾಣುಜೀವಿ ಜಂತುಹುಳ ಸೇರಿಕೊಂಡಿರುತ್ತದೆ. ಜನರಿಗೆ ಈ ಸೊಳ್ಳೆಯು ಕಚ್ಚಿದಾಗ ದೇಹದೊಳಕ್ಕೆ ಪ್ರವೇಶಿಸಿ ಅದು ದುಗ್ಧರಸ ಗ್ರಂಥಿಗಳಲ್ಲಿ ಶೇಖರಣೆಯಾಗಿ, ರಕ್ತ ಪರಿಚಲನೆಯಾಗದೆ ಅಲ್ಲಿಂದ ಮುಂದಿನ ದೇಹದ ಭಾಗ ಸಂಪೂರ್ಣವಾಗಿ ಊದಿಕೊಳ್ಳತೊಡಗುತ್ತದೆ. ದೇಹದೊಳಗಿರುವ ಹುಳ ಸಾವನ್ನಪ್ಪಿದರೂ ದೇಹದ ಊತ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಮುಖ್ಯವಾಗಿ ಕಾಲು, ಕೈ, ಎದೆಯ ಭಾಗಳಲ್ಲಿ ಊದುವಿಕೆ ಕಾಣಿಸಿಕೊಳ್ಳುತ್ತದೆ.

ತೆರೆದ ಚರಂಡಿಗಳು, ರಾಡಿ ಹಾಗೂ ಕೊಳಕು ಪ್ರದೇಶಗಳಲ್ಲಿ ವಾಸಿಸುವ ಈ ಸೊಳ್ಳೆ ವಾಸಿಸುತ್ತದೆ. ರಾತ್ರಿ ಹೊತ್ತಿನಲ್ಲಿ ಕ್ರಿಯಾಶೀಲವಾಗುವ ಕ್ಯೂಲೆಕ್ಸ್ ಸೊಳ್ಳೆಯು ಜನರನ್ನು ಕಚ್ಚಿದರೆ ರಕ್ತದಲ್ಲಿ ಈ ರೋಗದ ಲಕ್ಷಣಗಳು ಕಂಡು ಬರುತ್ತವೆ. ನಮ್ಮ ರಾಜ್ಯದಲ್ಲಿ ಕೆಲವೆಡೆ ನೇಕಾರರು ರಾತ್ರಿಯಿಡಿ ನೇಕಾರಿಕೆ ಕೈಗೊಳ್ಳುತ್ತಿದ್ದುದರಿಂದ ಸೊಳ್ಳೆಗಳು ಕಚ್ಚಿ ರೋಗದ ಬಾಧೆಗೊಳಗಾಗಿದ್ದರು. ಈ ರೋಗ ಬರಲು ಕೆಲವು ತಿಂಗಳುಗಳಿಂದ ಹಲವಾರು ವರ್ಷಗಳವರೆಗೆ ಸೊಳ್ಳೆಗಳು ಕಚ್ಚುತ್ತಲೇ ಇರಬೇಕು. ರೋಗಕಾರಕ ಸೊಳ್ಳೆ ಕಡಿತಕ್ಕೆ ಒಳಗಾಗಿ ಮೂರು ವರ್ಷಗಳಿಂದ ಹಿಡಿದು ಹತ್ತು ವರ್ಷಗಳ ತನಕ ಈ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.

ಆನೆಕಾಲು ರೋಗವನ್ನು ಪತ್ತೆ ಮಾಡುವುದು ಹೇಗೆ?
ರಾತ್ರಿ ವೇಳೆಯಲ್ಲಿ ಮಾತ್ರ ಈ ರೋಗವನ್ನು ಕಂಡು ಹಿಡಿಯಬಹುದಾಗಿದೆ. ಏಕೆಂದರೆ ಈ ಸೂಕ್ಷ್ಮಾಣುಜೀವಿಗಳು ರಾತ್ರಿ ವೇಳೆಯಲ್ಲಿ ಮಾತ್ರ ರಕ್ತ ಸಂಚಾರದಲ್ಲಿ ಕಾಣಿಸಿಕೊಳ್ಳುವುದರಿಂದ, ರಾತ್ರಿ 8.00 ರಿಂದ ಮಧ್ಯರಾತ್ರಿ 12.00 ರವರೆಗೆ ರಕ್ತ ಸಂಗ್ರಹಿಸಿ, ಸೂಕ್ಷ್ಮದರ್ಶಕದ ಸಹಾಯದಿಂದ ಪರೀಕ್ಷೆ ಮಾಡಿದಾಗ ಮಾತ್ರ ಈ ರೋಗದ ಸೋಂಕು ತಿಳಿಯುತ್ತದೆ. ಪ್ರಾರಂಭದಲ್ಲೇ ಚಿಕಿತ್ಸೆ ಪಡೆದರೆ ಈ ರೋಗದ ಬಾಹ್ಯ ಲಕ್ಷಣಗಳನ್ನು ಹಾಗೂ ಈ ರೋಗವು ಇತರರಿಗೆ ಹರಡುವುದನ್ನು ತಡೆಗಟ್ಟಬಹುದು.

ಪ್ರಪಂಚದಾದ್ಯಂತ 44 ದೇಶಗಳಲ್ಲಿ 882 ದಶಲಕ್ಷಕ್ಕೂ ಹೆಚ್ಚು ಜನರು ಈ ರೋಗದಿಂದ ನರಳುತ್ತಿದ್ದಾರೆ. ಭಾರತದಲ್ಲಿ ಇದರ ಶೇಕಡಾ 40ರಷ್ಟು ರೋಗಿಗಳು ಇದ್ದಾರೆ. ಈ ರೋಗ ಭಾರತದಲ್ಲಿ ಗಂಭೀರವಾದ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಹದಿನಾರು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ 256 ಜಿಲ್ಲೆಗಳ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಈ ರೋಗವು ಹರಡಿದೆ. ಬಡವರೇ ಈ ಸೋಂಕುರೋಗಕ್ಕೆ ಹೆಚ್ಚಾಗಿ ತುತ್ತಾಗಿದ್ದಾರೆ. ಈ ಸೋಂಕು ಬಾಲ್ಯದಲ್ಲಿ ಪ್ರಾರಂಭವಾಗುತ್ತದೆ ಮತ್ತು ಕ್ರಮೇಣ ಹೆಚ್ಚಾಗುತ್ತದೆ. ಭಾರತವು 2027ರ ವೇಳೆಗೆ ಈ ರೋಗವನ್ನು ಸಂಪೂರ್ಣವಾಗಿ ತೊಡೆದುಹಾಕುವ ಗುರಿಯನ್ನು ಹಾಕಿಕೊಂಡು ಈ ದಿಸೆಯಲ್ಲಿ ಸತತ ಕಾರ್ಯನಿರತವಾಗಿದೆ.

ಆನೆಕಾಲು ರೋಗದ ಲಕ್ಷಣಗಳು
ಈ ಉರಿಯೂತ ರೋಗದ ಲಕ್ಷಣಗಳು ತೋಳುಗಳು, ಕಾಲುಗಳು ಮತ್ತು/ಅಥವಾ ಜನನಾಂಗಗಳಲ್ಲಿ ಊತ, ಬಾಧಿತ ಪ್ರದೇಶಗಳಲ್ಲಿ ದಪ್ಪನಾದ ಮತ್ತು ಗಟ್ಟಿಯಾದ ಧರ್ಮ, ನೋವು ಮತ್ತು ಅಸ್ವಸ್ಥತೆ, ಬಾಧಿತ ಪ್ರದೇಶಗಳಲ್ಲಿ ಪುನರಾವರ್ತಿತ ಸೋಂಕುಗಳು, ದುರ್ಬಲ ಚಲನಶೀಲತೆ. ಈ ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಚಿಕಿತ್ಸೆಯು ರೋಗಲಕ್ಷಣಗಳನ್ನು ನಿರ್ವಹಿಸಲು ಮತ್ತು ತೊಡಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಆನೆಕಾಲು ರೋಗಕ್ಕೆ ಚಿಕಿತ್ಸೆ
ಹಲವಾರು ಆಂಟಿಪ್ಯಾರಾಸಿಟಿಕ್ ಔಷಧಿಗಳು ಆನೆಕಾಲು ಉರಿಯೂತವನ್ನು ಉಂಟುಮಾಡುವ ಹುಳುಗಳನ್ನು ಕೊಂದು ರೋಗಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡಬಹುದು. ತೀವ್ರತರವಾದ ಪ್ರಕರಣಗಳಲ್ಲಿ ಹೆಚ್ಚುವರಿ ಅಂಗಾಂಶವನ್ನು ತೆಗೆದುಹಾಕಲು ಮತ್ತು ಚಲನಶೀಲತೆಯನ್ನು ಸುಧಾರಿಸಲು ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು. ರೋಗಬಾಧಿತ ಜಾಗಗಳನ್ನು ಆಗಾಗ ಶುದ್ಧಮಾಡಬೇಕು. ಮುಲಾಮು ಹಚ್ಚಬೇಕು. ವೈದ್ಯರು ಹೇಳುವ ವ್ಯಾಯಾಮಗಳನ್ನು ತಪ್ಪದೇ ಮಾಡಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಸೊಳ್ಳೆಗಳನ್ನು ನಿಯಂತ್ರಣ ಮಾಡುವುದು ಆನೆ ಉರಿಯೂತವನ್ನು ತಡೆಗಟ್ಟುವಲ್ಲಿ ಪ್ರಮುಖವಾಗಿದೆ. ಸೊಳ್ಳೆ ಪರದೆಗಳ ಬಳಕೆ, ಕೀಟ ನಿವಾರಕ ಮತ್ತು ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸುವುದರ ಮೂಲಕ ಇದನ್ನು ಸಾಧಿಸಬಹುದು. ಮನೆಯಲ್ಲಿ ಮತ್ತು ಸುತ್ತಮುತ್ತಲ ಪರಿಸರದಲ್ಲಿ ಉತ್ತಮ ನೈರ್ಮಲ್ಯವನ್ನು ಸದಾಕಾಲ ಪಾಲಿಸಬೇಕು. ಕೈಗಳನ್ನು ನಿಯಮಿತವಾಗಿ ತೊಳೆಯಬೇಕು. ಕಲುಷಿತ ನೀರಿನಲ್ಲಿ ಈಜುವುದನ್ನು ತಪ್ಪಿಸಬೇಕು ಏಕೆಂದರೆ ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವು ಲಸಿಕೆಗಳು ಕೆಲವು ವಿಧದ ಪರಾವಲಂಬಿ ಸೋಂಕುಗಳಿAದ ರಕ್ಷಿಸಬಹುದು, ಆದ್ದರಿಂದ ವ್ಯಾಕ್ಸಿನೇಷನ್ ಆಯ್ಕೆಗಳ ವೈದ್ಯರಿಂದ ಮಾಹಿತಿ ಪಡೆದು ಅವುಗಳನ್ನು ತಪ್ಪದೇ ತೆಗೆದುಕೊಳ್ಳಬೇಕು. ಜನರು ವಾಸಿಸುವ ಮನೆಗಳ ಕಿಟಕಿ ಬಾಗಿಲುಗಳಿಗೆ ಕೀಟ ತಡೆಗಟ್ಟುವ ಜಾಲರಿಗಳನ್ನು ಅಳವಡಿಸುವುದು ಮತ್ತು ಮನೆ ಸುತ್ತಮುತ್ತಲಿನ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡುವುದು ಬಹಳ ಮುಖ್ಯ.

ಕಾಸರಗೋಡಿನ ಚರ್ಮರೋಗತಜ್ಞ ಎಸ್ ಆರ್ ನರಹರಿ ಈ ಕಾಯಿಲೆಗೊಂದು ಸಂಯೋಜಿತ ಚಿಕಿತ್ಸಾವಿಧಾನವೊಂದನ್ನು ಕಂಡುಹಿಡಿದು ಬಲೂನಿನಂತೆ ಊದಿಕೊಂಡ ಕಾಲುಗಳಿಂದ ಬಳಲುತ್ತಿದ್ದವರ ಹೊರೆಯನ್ನೆಲ್ಲ ಕಳಚಿಸಿ ಖುಷಿಯಿಂದ ಓಡಾಡುವಂತೆ ಮಾಡಿದ್ದಾರೆ. ತಾವೇ ಸ್ಥಾಪಿಸಿರುವ ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್ ಡರ್ಮಟಾಲಜಿಯಲ್ಲಿ (ಐಎಡಿ) ಈ ಚಿಕಿತ್ಸೆ ನೀಡುತ್ತಿದ್ದಾರೆ. ಪರಂಪರಾಗತ ಆಯುರ್ವೇದ ಮತ್ತು ಯೋಗ ಪದ್ಧತಿಗಳಲ್ಲಿ ಲಭ್ಯವಿರುವ ರೋಗ ಉಪಶಮನದ ಕ್ರಮಗಳನ್ನು, ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ಔಷಧಿಗಳನ್ನು ಅಲೊಪಥಿ ವಿಧಾನದೊಂದಿಗೆ ಬೆರೆಸಿ ಆನೆಕಾಲು ರೋಗಕ್ಕೆ ಸಂಯೋಜಿತ ಚಿಕಿತ್ಸಾ ಪದ್ಧತಿಯೊಂದನ್ನು ರೂಪಿಸಿರುವುದು ಡಾ. ನರಹರಿ ಅವರ ಹೆಗ್ಗಳಿಕೆ. ಹೆಚ್ಚಿನ ವಿವರಗಳಿಗಾಗಿ ರೋಗಿಗಳು ಮತ್ತು ಆಸಕ್ತರು www.iad.org.in ಜಾಲತಾಣವನ್ನು ಸಂಪರ್ಕಿಸಬಹುದು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com