ಸ್ಕೋಲಿಯೋಸಿಸ್ (ಕುಶಲವೇ ಕ್ಷೇಮವೇ)

ಸರಳವಾಗಿ ಹೇಳುವುದಾದರೆ ಸ್ಕೋಲಿಯೋಸಿಸ್ ಕಶೇರುಖಂಡದ (ಬೆನ್ನಿನ) ಅಸಹಜ ವಕ್ರತೆಯಾಗಿದೆ. ಈ ಸ್ಥಿತಿಯಲ್ಲಿ ಬೆನ್ನುಮೂಳೆಯು ಸಾಮಾನ್ಯವಾಗಿ ಭುಜದ ಮೇಲ್ಭಾಗದಲ್ಲಿ ವಕ್ರವಾಗಿದ್ದು ಕೆಳಗಿನ ಭಾಗದಲ್ಲಿ ತಿರುವು ಹೊಂದಿರುತ್ತದೆ.
ಸ್ಕೋಲಿಯೋಸಿಸ್ (ಸಾಂಕೇತಿಕ ಚಿತ್ರ)
ಸ್ಕೋಲಿಯೋಸಿಸ್ (ಸಾಂಕೇತಿಕ ಚಿತ್ರ)

ಕೆಲವು ಸಲ ನಾವು ಒಂದೆಡೆ ಬಾಗಿರುವಂತಹ ದೇಹವಿರುವ ಜನರನ್ನು ಕಾಣುತ್ತೇವೆ. ಅವರು ಬೆನ್ನನ್ನು ಬಾಗಿಸಿ ನಡೆಯುತ್ತಿರುವುದಿಲ್ಲ. ಅವರು ಇರುವುದೇ ಹಾಗೆ ಎಂದು ಅವರನ್ನು ಕೇಳಿದರೆ ನಮಗೆ ಗೊತ್ತಾಗುತ್ತದೆ. ಹೀಗೆ ದೇಹ ಬಾಗಿರುವ ಸ್ಥಿತಿಗೆ ಸ್ಕೋಲಿಯೋಸಿಸ್ ಎಂದು ಕರೆಯುತ್ತಾರೆ. ಗ್ರೀಕ್ ಭಾಷೆಯಲ್ಲಿ ಸ್ಕೋಲಿಯೋಸಿಸ್ ಎಂದರೆ ಬಾಗಿದ ಸ್ಥಿತಿ ಎಂದರ್ಥ. ಆದ್ದರಿಂದ ಈ ಅನಾರೋಗ್ಯಕರ ಸ್ಥಿತಿಗೆ ಈ ಹೆಸರು ಬಂದಿದೆ. ಇದೊಂದು ಚಿಕಿತ್ಸೆಯ ಅಗತ್ಯವಿರುವ ಸ್ಥಿತಿಯಾಗಿದ್ದು, ಇದರಲ್ಲಿ ಬೆನ್ನುಮೂಳೆಯು ಒಂದು ಪಾರ್ಶ್ವದಿಂದ ಇನ್ನೊಂದು ಪಾರ್ಶ್ವಕ್ಕೆ ವಕ್ರಾಕೃತಿಯನ್ನು ತಳೆದಿರುತ್ತದೆ.

ಸ್ಕೋಲಿಯೋಸಿಸ್ ಎಂದರೇನು?

ಸರಳವಾಗಿ ಹೇಳುವುದಾದರೆ ಸ್ಕೋಲಿಯೋಸಿಸ್ ಕಶೇರುಖಂಡದ (ಬೆನ್ನಿನ) ಅಸಹಜ ವಕ್ರತೆಯಾಗಿದೆ. ಈ ಸ್ಥಿತಿಯಲ್ಲಿ ಬೆನ್ನುಮೂಳೆಯು ಸಾಮಾನ್ಯವಾಗಿ ಭುಜದ ಮೇಲ್ಭಾಗದಲ್ಲಿ ವಕ್ರವಾಗಿದ್ದು ಕೆಳಗಿನ ಭಾಗದಲ್ಲಿ ತಿರುವು ಹೊಂದಿರುತ್ತದೆ. ಅಂದರೆ ಬೆನ್ನುಮೂಳೆ ಇಂಗ್ಲೀಷಿನ ‘ಎಸ್’ ಅಥವಾ ‘ಸಿ’ ಅಕ್ಷರಗಳ ಆಕಾರದಲ್ಲಿರುತ್ತದೆ. ಸ್ಕೋಲಿಯೋಸಿಸ್ ಹೆಚ್ಚಾಗಿ ಕಂಡುಬರುವುದಿಲ್ಲ. ಆದರೆ ಕೆಲವು ಜನರು ಬೆನ್ನುಮೂಳೆಯ ವಕ್ರತೆಯ ಕಾರಣದಿಂದಾಗಿ ಒಂದು ಬದಿಗೆ ವಾಲಬಹುದು ಅಥವಾ ಅಸಮಾನವಾದ ಭುಜಗಳು ಅಥವಾ ಸೊಂಟವನ್ನು ಹೊಂದಿರುತ್ತಾರೆ. ಈ ರೋಗಿಗಳು ವೈದ್ಯರನ್ನು ಕಂಡಾಗ ಅವರು ವಕ್ರತೆಯ ತೀವ್ರತೆಯನ್ನು ಅವಲಂಬಿಸಿ ಬೆನ್ನುಮೂಳೆಯ ಮತ್ತು ದೈಹಿಕ ಚಿಕಿತ್ಸೆಯ ಸಲಹೆ ಮಾಡಬಹುದು. ಸ್ಕೋಲಿಯೋಸಿಸ್ ಇರುವ ಕೆಲವು ಜನರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ನಿರಂತರ ಅಸ್ವಸ್ಥತೆ, ಉಸಿರಾಟದ ತೊಂದರೆಗಳು ಮತ್ತು ವ್ಯಾಯಾಮ ಮಾಡುವ ಸಾಮರ್ಥ್ಯ ಕಡಿಮೆಯಾಗುವಂತಹ ಅಡ್ಡ ಪರಿಣಾಮಗಳು ಸ್ಕೋಲಿಯೋಸಿಸ್ ಇರುವ ಜನರಿಗೆ ಕಾಣಿಸಿಕೊಳ್ಳಬಹುದು.

ಬಾಲ್ಯ ಅಥವಾ ಹದಿಹರೆಯದಲ್ಲಿ ಸ್ಕೋಲಿಯೋಸಿಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಮತ್ತು ಇದರ ಲಕ್ಷಣಗಳು ರೋಗಿಗಳ ವಯಸ್ಸನ್ನು ಅವಲಂಬಿಸಿ ಬದಲಾಗುತ್ತವೆ. ಶಿಶುಗಳಲ್ಲಿಯೂ ಇದು ಕಾಣಿಸಿಕೊಳ್ಳಬಹುದು. ಯಾವುದೇ ಚಿಕಿತ್ಸೆಯಿಲ್ಲದೆ ಸ್ಕೋಲಿಯೋಸಿಸ್ ಇರುವ ಮಗು ದುರ್ಬಲ ಹೃದಯ ಮತ್ತು ಶ್ವಾಸಕೋಶದ ಸಮಸ್ಯೆಗಳನ್ನು ನಂತರ ಅನುಭವಿಸುವ ಸಾಧ್ಯತೆಯಿದೆ. ತೀವ್ರತರವಾದ ಪ್ರಕರಣಗಳಲ್ಲಿ, ಹೃದಯ ಮತ್ತು ಶ್ವಾಸಕೋಶದ ಅಸ್ವಸ್ಥತೆಗಳು ಉಂಟಾಗುತ್ತವೆ. ಸ್ಕೋಲಿಯೋಸಿಸ್ ಭಾರತದಲ್ಲಿ ಸುಮಾರು 5 ಮಿಲಿಯನ್ (50 ಲಕ್ಷ) ಜನರ ಮೇಲೆ ಪರಿಣಾಮ ಬೀರಿದೆ (ಅಂದರೆ ಜನಸಂಖ್ಯೆಯ 0.4%). ಎಕ್ಸ್ ರೇ, ಸಿಟಿ, ಎಂಆರ್‌ಐ ಮತ್ತು ಮೂಳೆಗಳನ್ನು ಸ್ಕ್ಯಾನ್ ಮಾಡುವುದರ ಮೂಲಕ ಈ ರೋಗದ ಇರುವಿಕೆಯನ್ನು ಕಂಡುಹಿಡಿಯಬಹುದು.

ಸ್ಕೋಲಿಯೋಸಿಸ್ ವಿಧಗಳು

ಸ್ಕೋಲಿಯೋಸಿಸ್ಸಿನಲ್ಲಿ ಇಡಿಯೋಪಥಿಕ್ ಸ್ಕೋಲಿಯೋಸಿಸ್, ಜನ್ಮಜಾತ ಸ್ಕೋಲಿಯೋಸಿಸ್, ನರಸ್ನಾಯು ಸ್ಕೋಲಿಯೋಸಿಸ್ ಮತ್ತು ಕ್ಷೀಣವಾಗುವ ಸ್ಕೋಲಿಯೋಸಿಸ್ ಎಂಬ ವಿಧಗಳಿವೆ. ಬಹುತೇಕ ಪ್ರಕರಣಗಳಲ್ಲಿ ಅಂದರೆ ಪ್ರತಿ ಹತ್ತು ಪ್ರಕರಣಗಳಲ್ಲಿ ಎಂಟಕ್ಕೆ ಇದಕ್ಕೆ ಕಾರಣ ಏನು ಎಂಬುದು ತಿಳಿಯುವುದಿಲ್ಲ. ಇದು ಕೆಟ್ಟ ಭಂಗಿ, ವ್ಯಾಯಾಮ ಅಥವಾ ಆಹಾರದಂತಹ ವಿಷಯಗಳೊಂದಿಗೆ ಸಂಬಂಧ ಹೊಂದಿಲ್ಲ. ಈ ಪರಿಸ್ಥಿತಿಗೆ ಕಾರಣ ತಿಳಿದಿಲ್ಲದಿದ್ದರೆ ಅದನ್ನು ಇಡಿಯೋಪಥಿಕ್ ಸ್ಕೋಲಿಯೋಸಿಸ್ ಎಂದು ಕರೆಯಲಾಗುತ್ತದೆ.

ಇಡಿಯೋಪಥಿಕ್ ಸ್ಕೋಲಿಯೋಸಿಸ್ ಹದಿಹರೆಯದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಇದರ ಲಕ್ಷಣಗಳು ಸೊಂಟ ಒಂದು ಬದಿ ಇನ್ನೊಂದು ಬದಿಗಿಂತ ದೊಡ್ಡದಾಗಿರುವುದು, ಪಕ್ಕೆಲುಬುಗಳ ಅಸಮಾನ ಎತ್ತರ, ದೇಹ ಒಂದು ಬದಿಗೆ ವಾಲಿರುವಂತೆ ಕಾಣುವುದು, ಭುಜಗಳ ಅಸಮಾನತೆ ಮತ್ತು ಒಂದು ಕಾಲು ಇನ್ನೊಂದು ಕಾಲಿಗಿಂತ ಉದ್ದ ಅಥವಾ ಕಡಿಮೆ ಇರುವುದು. ಸ್ಕೋಲಿಯೋಸಿಸ್ ಬೆನ್ನು ನೋವನ್ನು ಉಂಟುಮಾಡಬಹುದು. ಅನೇಕ ಜನರಿಗೆ ಇಂತಹ ಸಮಸ್ಯೆ ಇದೆ ಎಂದು ಗೊತ್ತೇ ಇರುವುದಿಲ್ಲ. ಗೊತ್ತಾದಾಗ ಕೆಲವರು ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮಗಳನ್ನು ಮಾಡಿ ಜೀವನವನ್ನು ಸುಧಾರಣೆ ಮಾಡಿಕೊಂಡು ಬದುಕುತ್ತಾರೆ. ಈ ಸಮಸ್ಯೆ ಇರುವ ಬಹುತೇಕ ಜನರು ಸಾಧಾರಣವಾಗಿ ಎಲ್ಲರಂತೆಯೇ ನಡೆಯಬಹುದು. ಇದಕ್ಕೆ ಚಿಕಿತ್ಸೆ ಪಡೆಯಲೇಬೇಕು. ಇಲ್ಲದಿದ್ದರೆ ಸಮಸ್ಯೆ ತೀವ್ರವಾಗುತ್ತದೆ.

ಸ್ಕೋಲಿಯೋಸಿಸ್‌ಗೆ ಚಿಕಿತ್ಸೆ

ಸೌಮ್ಯವಾದ ಸ್ಕೋಲಿಯೋಸಿಸ್‌ಗೆ ಚಿಕಿತ್ಸೆ ಅಗತ್ಯವಿಲ್ಲದಿರಬಹುದು. ವೈದ್ಯರ ಸಲಹೆ ಮೇರೆಗೆ ಮುಂಡದ ಸುತ್ತಲೂ ಪಟ್ಟಿಯನ್ನು ಧರಿಸುವುದು ಇನ್ನೂ ಬೆಳೆಯುತ್ತಿರುವ ಮಕ್ಕಳಲ್ಲಿ ವಕ್ರತೆಯನ್ನು ಕ್ಷೀಣಿಸುವುದನ್ನು ತಡೆಯಲು ಸಹಾಯ ಮಾಡುತ್ತದೆ. ಮಕ್ಕಳು ದಿನದ 24 ಗಂಟೆಗಳ ಕಾಲ ಪ್ಲಾಸ್ಟಿಕ್ಕಿನಿಂದ ಮಾಡಿದ ಇಂತಹ ಪಟ್ಟಿಗಳನ್ನು ಧರಿಸುತ್ತಾರೆ. ಇವುಗಳಿಂದ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುವುದಿಲ್ಲ. ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಬೆನ್ನುಮೂಳೆಯ ಮೂಳೆಗಳ ನಡುವಿನ ಅಂತರವನ್ನು ಮೂಳೆ ತುಣುಕುಗಳು ಅಥವಾ ಅಂತಹುದೇ ಬೇರೆಯ ವಸ್ತುಗಳೊಂದಿಗೆ ತುಂಬುತ್ತಾರೆ. ಮೂಳೆಗಳು ಪರಸ್ಪರ ಒಂದೇ ಸಮನಾಗಿ ಬೆಳೆಯುವವರೆಗೆ ಅಥವಾ ಸೇರಿಕೊಳ್ಳುವವರೆಗೆ ತೊಂದರೆಯಾಗದಂತೆ ಲೋಹದಿಂದ ಅವುಗಳನ್ನು ಹಿಡಿದಿಡುತ್ತಾರೆ. ಶಸ್ತ್ರಚಿಕಿತ್ಸೆಯು ಬೆನ್ನುಮೂಳೆಯ ವಕ್ರತೆಯನ್ನು ಕಡಿಮೆ ಮಾಡಬಹುದು ಮತ್ತು ಪರಿಸ್ಥಿತಿಯು ಹದಗೆಡದಂತೆ ತಡೆಯಬಹುದು. ಸ್ಕೋಲಿಯೋಸಿಸ್ ಚಿಕಿತ್ಸೆಯನ್ನು ಆಸ್ಪತ್ರೆಗಳಲ್ಲಿ ಮೂಳೆ ವೈದ್ಯರು ಮತ್ತು ವೃತ್ತಿಪರರ ತಂಡದಿಂದ ನಡೆಸಲಾಗುತ್ತದೆ. ಚಿಕಿತ್ಸೆಯನ್ನು ಬೇಗ ಪ್ರಾರಂಭಿಸಿದರೆ ಪರಿಹಾರ ಸಾಧ್ಯ, ತೀವ್ರ ಸಮಸ್ಯೆ ಇದ್ದರೆ ವೈದ್ಯರು ತಿಳಿಸಿದಂತೆ ಸಕ್ರಿಯ ಜೀವನಶೈಲಿಯನ್ನು ರೂಢಿಸಿಕೊಂಡು ಈ ಪರಿಸ್ಥಿತಿಯ ನಿರ್ವಹಣೆ ಮಾಡಬಹುದು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com