Credit Rating: ಭಾರತದ ಮೇಲೆ ನಿಯಂತ್ರಣ ಸಾಧಿಸಲು ಹವಣಿಸುವ ಶಕ್ತಿಗಳ ಮೇಲೆ ನಿಯಂತ್ರಣ ಸಾಧಿಸಬೇಕಿದೆ! (ಹಣಕ್ಲಾಸು)

ಜಾಗತಿಕವಾಗಿ 80 ಪ್ರತಿಶತ ಮಾರುಕಟ್ಟೆಯನ್ನು ಆಕ್ರಮಿಸಿ ಕೊಂಡಿರುವ ಮೂಡಿಸ್, ಸ್ಟ್ಯಾಂಡರ್ಡ್ ಅಂಡ್ ಪೂರ್ಸ್ ಮತ್ತು fitch ಎನ್ನುವ ಮೂರು ಸಂಸ್ಥೆಗಳು ಅಮೆರಿಕಾದ ಪಾರುಪತ್ಯದಲ್ಲಿವೆ. (ಹಣಕ್ಲಾಸು-423)
credit rating system
ಕ್ರೆಡಿಟ್ ರೇಟಿಂಗ್ ವ್ಯವಸ್ಥೆonline desk
Updated on

ಭಾರತದ ಮೇಲೆ ಮೊದಲಿನ ತ್ರಾಣವಿಲ್ಲದ ಪಾಶ್ಚಾತ್ಯ ದೇಶಗಳ ಒಕ್ಕೊಟ ಸಾದಾ ದಾಳಿ ಮಾಡುತ್ತಲೆ ಇರುತ್ತವೆ. ಇವುಗಳ ಬಳಿ ಇದ್ದ ದೊಡ್ಡ ಅಸ್ತ್ರಗಳನ್ನು ಬಳಸಿ ಅದು ಮುಂದುವರಿಯುತ್ತಿರುವ ದೇಶಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತದೆ. ನಾವು ಜಗತ್ತನ್ನು ಕೊರೋನಾಗಿಂತ ಮುಂಚೆ , ಕೊರೋನಾ ನಂತರ ಎಂದು ಎರಡು ಭಾಗವನ್ನಾಗಿ ವಿಭಾಗಿಸಬಹುದು. ಕೊರೋನಾ ಜಾಗತಿಕ ಸಂಸ್ಥೆಗಳ ಅದರಲ್ಲೂ ಈ ಪಾಶ್ಚಾತ್ಯರು ಸೇರಿ ಕಟ್ಟಿಕೊಂಡಿರುವ ಅನೇಕ ಸಂಸ್ಥೆಗಳ ನಿಜವಾದ ಬಣ್ಣವನ್ನು ಬಯಲು ಮಾಡಿತು. ವರ್ಲ್ಡ್ ಹೆಲ್ತ್ ಆರ್ಗನೈಸಷನ್ ಎನ್ನುವುದು ಅಮೇರಿಕಾ ಕೈಲಿದ್ದ ಕೀ ಕೊಟ್ಟರೆ ಕುಣಿಯುವ ಬೊಂಬೆಯನ್ನು ಚೀನಾ ಅದ್ಯಾವಾಗ ಕಸಿದು ಕೊಂಡಿತು ಗೊತ್ತೇ ಆಗಿರಲಿಲ್ಲ. ಅವರ ಪ್ಯಾರಾಮೀಟರ್ ಗಳು ಜನರ ಆರೋಗ್ಯವನ್ನು ಉತ್ತಮಗೊಳಿಸುವುದಕ್ಕಿಂತ ಫಾರ್ಮಗಳ ಜೇಬು ತುಂಬಿಸುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದೆ ಎನ್ನುವುದು ಇಂದು ಎಲ್ಲರಿಗೂ ತಿಳಿದಿರುವ ಸತ್ಯ.

ಅದೇ ರೀತಿ ಕ್ರೆಡಿಟ್ ರೇಟಿಂಗ್ ನೀಡುವ ಸಂಸ್ಥೆಗಳು ಕೂಡ ತಮಗೆ ಅನುಕೂಲವಾಗುವ ರೇಟಿಂಗ್ ನೀಡುತ್ತವೆ. ವೈಯಕ್ತಿಕವಾಗಿ ನಿಮ್ಮ ಹಣಕಾಸು ಪರಿಸ್ಥಿತಿ ಹೇಗಿದೆ? ಸಾಲ ಮರುಪಾವತಿ ಸರಿಯಾಗಿ ಮಾಡಿದ್ದೀರಾ? ಹೊಸ ಸಾಲ ಪಡೆಯಲು ಅರ್ಹತೆಯನ್ನು ಉಳಿಸಿಕೊಂಡಿದ್ದೀರಾ? ಇಂತಹವುಗಳನ್ನು ಪರಿಶೀಲಿಸಿ ಪ್ರತಿಯೊಬ್ಬರಿಗೂ ಕ್ರೆಡಿಟ್ ಸ್ಕೋರ್ ನೀಡುವ ಸಂಸ್ಥೆಗಳಿವೆ ಅಲ್ಲವೇ, ಹಾಗೆ ಸಂಸ್ಥೆಗಳಿಗೆ, ಅತಿ ದೊಡ್ಡ ಸಂಸ್ಥೆಗಳಿಗೆ ಅದರ ಜೊತೆಗೆ ದೇಶಕ್ಕೂ ಕ್ರೆಡಿಟ್ ರೇಟಿಂಗ್ ನೀಡುವ ಸಂಸ್ಥೆಗಳಿವೆ.

ಜಾಗತಿಕವಾಗಿ 80 ಪ್ರತಿಶತ ಮಾರುಕಟ್ಟೆಯನ್ನು ಆಕ್ರಮಿಸಿ ಕೊಂಡಿರುವ ಮೂಡಿಸ್, ಸ್ಟ್ಯಾಂಡರ್ಡ್ ಅಂಡ್ ಪೂರ್ಸ್ ಮತ್ತು fitch ಎನ್ನುವ ಮೂರು ಸಂಸ್ಥೆಗಳು ಅಮೆರಿಕಾದ ಪಾರುಪತ್ಯದಲ್ಲಿವೆ. ಈ ಸಂಸ್ಥೆಗಳು ಯಾವ ದೇಶದ ಕ್ರೆಡಿಟ್ ರೇಟಿಂಗ್ ಎಷ್ಟು ಎಂದು ಹೇಳುತ್ತವೆ. ಇದರ ಆಧಾರದ ಮೇಲೆ ಜಗತ್ತಿನ ಬೇರೆ ದೇಶಗಳು ಅಲ್ಲಿ ಹೂಡಿಕೆ ಮಾಡಬೇಕೆ ಬೇಡವೇ ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳುತ್ತವೆ. ಇದೆಲ್ಲವೂ ದಶಕಗಳಿಂದ ಯಾವುದೇ ಅಡ್ಡಿಯಿಲ್ಲದೆ ನಡೆದುಕೊಂಡು ಬರುತ್ತಿದೆ. ಆದರೆ ಗಮನಿಸಿ ನೋಡಿ, ಇವೆಲ್ಲವೂ ಅಮೆರಿಕನ್ ಬಂಡವಾಳಶಾಹಿಗಳನ್ನು ಇನ್ನಷ್ಟು ಬಲಶಾಲಿಯನ್ನಾಗಿಸುವ ಕುತಂತ್ರದ ಕೆಲಸದಲ್ಲಿ ತೊಡಗಿವೆ. ಭಾರತದಂತಹ ಬಲಾಢ್ಯ ದೇಶಕ್ಕೆ ಫಿಲಿಪೈನ್ಸ್ ಗಿಂತ ಕಡಿಮೆ ರೇಟಿಂಗ್ ಕೊಡುತ್ತಾರೆ ಎಂದರೆ ಇವೆಂತಹ ಖದೀಮ ಸಂಸ್ಥೆಗಳು ಎನ್ನುವುದರ ಅರಿವು ನಿಮಗಾದೀತು.

ಇನ್ನೊಂದು ಸ್ಯಾಂಕ್ಷನ್ ಎನ್ನುವ ಅಸ್ತ್ರ ಕೂಡ ಇವರ ಬಳಿಯಿದೆ. ಹಿಂದೆ ನಮ್ಮಲ್ಲಿ ತಪ್ಪು ಮಾಡಿದ ವ್ಯಕ್ತಿಯನ್ನು, ಕುಟುಂಬವನ್ನು ಬಹಿಷ್ಕಾರ ಹಾಕುತ್ತಿರಲಿಲ್ಲವೇ ಥೇಟ್ ಹಾಗೆ ವಿಶ್ವ ಮಾರುಕಟ್ಟೆಯನ್ನು ಅಮೆರಿಕಾ ಪಂಚಾಯತಿ ಲೆವೆಲ್ನಂತೆ ಇಷ್ಟು ದಿನ ಆಳಿ ಕೊಂಡು ಬಂದಿದೆ. ಇಲ್ಲಿ ತಪ್ಪು ಮಾಡುವ ಅವಶ್ಯಕತೆಯಿಲ್ಲ. ಯಾರೆಲ್ಲಾ ಅಮೆರಿಕಾದ ವ್ಯಾಪಾರೀ ನೀತಿಗೆ ಅನುಗುಣವಾಗಿಲ್ಲ ಅವರನ್ನು ಸ್ಯಾಂಕ್ಷನ್ ಹೆಸರಿನ ಮೂಲಕ ಬಲಿ ಹಾಕಲಾಗುತ್ತದೆ.

ಸಣ್ಣಪುಟ್ಟ ದೇಶಗಳು ಮೇಲಿನ ಎರಡು ಅಸ್ತ್ರಗಳಿಗೆ ಬಸವಳಿದು ಬಿಡುತ್ತವೆ. ಆದರೆ ಭಾರತದಂತಹ ಬಲಾಢ್ಯ ಆರ್ಥಿಕ ಶಕ್ತಿಗೆ, ಅದರಲ್ಲೂ ಡೊಮೆಸ್ಟಿಕ್ ಬಳಕೆ ಹೆಚ್ಚಿರುವ ಈ ಸಮಯದಲ್ಲಿ ಇದು ಕೆಲಸ ಮಾಡುವುದಿಲ್ಲ. ಹೀಗಾಗಿ ಇವರ ಬಳಿ ಇರುವ ಮೂರನೇ ಅಸ್ತ್ರ ಒಳ ಜಗಳ, ಆಂತರಿಕ ಗಲಭೆಯನ್ನು ಸೃಷ್ಟಿಸುವುದು. ಮೊದಲ ಎರಡು ಅಸ್ತ್ರಗಳನ್ನು ಅವರು ಸಮಯದಿಂದ ಸಮಯಕ್ಕೆ ಕಳೆದ ಹತ್ತು ವರ್ಷದಿಂದ ಪ್ರಯೋಗಿಸುತ್ತಲೆ ಬಂದಿದ್ದಾರೆ. ಈ ಹಿಂದೆಯೂ ಪ್ರಯೋಗಿಸಿದ್ದರು. ಆಗ ಕೆಲಸಕ್ಕೆ ಬರುತ್ತಿದ್ದ ಅಸ್ತ್ರ ಇಂದಿಗೆ ಕೆಲಸ ಮಾಡುತ್ತಿಲ್ಲ. ಎಲ್ಲವುದಕ್ಕಿಂತ ಮುಂಚೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗುತ್ತಿತ್ತು. ಇಂದಿಗೆ ಆ ತಲ್ಲಣಗಳು ಬಹಳಷ್ಟು ಲಯವನ್ನು ಕಂಡುಕೊಂಡಿವೆ.

credit rating system
ಹೊಸ ತಲೆಮಾರಿನ ಹುಡುಗರು ಎಲ್ಲಿ ಹೂಡಿಕೆ ಮಾಡ್ತಾ ಇದ್ದಾರೆ ಗೊತ್ತಾ? (ಹಣಕ್ಲಾಸು)

ಹೀಗಾಗಿ ಇವರು ತಮ್ಮ ಮೂರನೇ ಅಸ್ತ್ರ ಆಂತರಿಕ ಗಲಭೆಯನ್ನು ಸೃಷ್ಟಿಸುವುದರಲ್ಲಿ ವ್ಯಸ್ತರಾಗಿದ್ದರೆ. ಭಾರತ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ನಿಯಂತ್ರಣ ಸಾಧಿಸುವುದು ಇವರ ಹುನ್ನಾರ. ದೇಶವನ್ನು ವಿಭಜನೆ ಮಾಡುವುದು, ಕಮ್ಯುನಿಟಿಗಳ ನಡುವೆ ಜಗಳ ಸೃಷ್ಟಿ ಮಾಡುವುದು, ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡುವುದು ಇವರ ಉದ್ದೇಶ. ಅರಾಜಕ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಸುಲಭ. ಇವರು ಭಾರತದ ಮೇಲೆ ಹಿಡಿತ ಹೊಂದಲು ಏಕೆ ಬಯಸುತ್ತಾರೆ ಗೊತ್ತೇ? ಲೆಕ್ಕಕ್ಕೆ ಇಲ್ಲದ ಚೀನಾ ಎನ್ನುವ ದೇಶ ಕೇವಲ ಎರಡು ದಶಕದಲ್ಲಿ ಬೆಳೆದು ನಿಂತ ಪರಿಯನ್ನು ಅವರು ಕಂಡಿದ್ದಾರೆ. ಭಾರತೀಯರು ಜಾಗತಿಕ ಲೆಕ್ಕಾಚಾರದಲ್ಲಿ ನೋಡಿದರೆ ಹೆಚ್ಚು ಬುದ್ದಿವಂತರು. ಚೀನಾ ಉತ್ಪಾದನೆಯಿಂದ ಸಂಪತ್ತು ಗಳಿಸಿಕೊಂಡರೆ ಭಾರತ ಅದನ್ನು ಬುದ್ದಿ ಶಕ್ತಿಯಿಂದ ಗಳಿಸಿಕೊಳ್ಳುತ್ತಿದೆ. ಮುಂದಿನ ಎರಡು ದಶಕದಲ್ಲಿ ಭಾರತ ಮೊದಲ ಸ್ಥಾನದಲ್ಲಿ ಕುಳಿತು ಬಿಟ್ಟರೆ ಅದನ್ನು ಆ ಸ್ಥಾನದಿಂದ ಅಲುಗಾಡಿಸುವುದು ಸಾಧ್ಯವಿಲ್ಲದ ಮಾತು ಎನ್ನುವುದು ಅವರಿಗೆ ಗೊತ್ತಿದೆ. ಹೀಗಾಗಿ ಅವರು ಭಾರತವನ್ನು ನಿಯಂತ್ರಿಸಲು ಬಯಸುತ್ತಾರೆ. ಅವರಿಗೆ ಭಾರತದ ಕುಸಿತ ಬೇಕಿಲ್ಲ. ಅವರಿಗೆ ತನ್ನ ಅಧೀನದಲ್ಲಿರುವ ಭಾರತ ಬೇಕಿದೆ.

ಭಾರತದ ಜಿಡಿಪಿ 4, ಸದ್ಯಕ್ಕೆ ನಾಲ್ಕನೇ ಸ್ಥಾನದಲ್ಲಿದೆ. ಆದರೆ ನಿಜಕ್ಕೂ ನೋಡುವುದಾದರೆ ಭಾರತದ ಜಿಡಿಪಿ 10 ಟ್ರಿಲಿಯಂಗಿಂತ ಹೆಚ್ಚಿದೆ. ಅದು ಅವರಿಗೆ ಗೊತ್ತಿದೆ. ಒಂದು ಸಣ್ಣ ಉದಾಹರಣೆ ನೋಡೋಣ. ಭಾರತದಲ್ಲಿರುವ ಜನಸಂಖ್ಯೆ 140 ಕೋಟಿ. ಐದು ಕೋಟಿ ಹೆಜ್ಜೆ ಇರುತ್ತಾರೆ. ಆದರೂ ಲೆಕ್ಕಕ್ಕೆ 140 ಕೋಟಿ ಎಂದುಕೊಳ್ಳೋಣ. ಅದರಲ್ಲಿ 50 ಕೋಟಿ ಜನ ಯಾವುದೇ ಹಣವನ್ನು ಖರ್ಚು ಮಾಡುವುದಿಲ್ಲ ಎಂದುಕೊಳ್ಳೋಣ. ಉಳಿದ 90 ಕೋಟಿ ಜನರಲ್ಲಿ ಒಬ್ಬರು ದಿನಕ್ಕೆ 3 ಕಾಫಿ, ಎರಡು ಊಟ ಎಂದುಕೊಂಡರೂ ಕನಿಷ್ಠ 100 ರೂಪಾಯಿ ಖರ್ಚು ಮಾಡಬೇಕು. ಈಗ ನೀವು 90 ಕೋಟಿ*100 ರೂಪಾಯಿ ಲೆಕ್ಕ ಹಾಕಿ! ಇದರ ಜೊತೆಗೆ ಗುಟ್ಕಾ, ಸಿಗರೇಟು, ಪಾನ್ ಇತ್ಯಾದಿಗಳ ಲೆಕ್ಕ ಮಾಡಿ. ಇವತ್ತಿಗೆ ಸಣ್ಣ ಪುಟ್ಟ ದರ್ಶಿನಿಗಳಲ್ಲಿ ಕೂಡ ಕಾಫಿ 20 ರೂಪಾಯಿ ಆಗಿದೆ. ಆ ಲೆಕ್ಕಾಚಾರದಲ್ಲಿ ಮಧ್ಯಮವರ್ಗದ ಜನ ಕೇವಲ ಕಾಫಿಗೆ 100 ರೂಪಾಯಿ ಸುಲಭವಾಗಿ ವ್ಯಯಿಸುತ್ತಾರೆ. ಇದೆಲ್ಲವೂ ನಿತ್ಯದ ಖರ್ಚು. ಇದನ್ನು ತಿಂಗಳಿಗೆ, ವರ್ಷಕ್ಕೆ ಲೆಕ್ಕ ಹಾಕಿ ! ಜೂನ್ 2024ರ ಒಂದು ತಿಂಗಳ, ಹೌದು ಕೇವಲ ಒಂದು ತಿಂಗಳ ಜಿಎಸ್ಟಿ ಕಲೆಕ್ಷನ್ ಒಂದು ಲಕ್ಷ 74 ಸಾವಿರ ಕೋಟಿ ರೂಪಾಯಿ! ಈ ಸಂಖ್ಯೆ ಕಳೆದ ನಾಲ್ಕೈದು ವರ್ಷದಿಂದ ತೀವ್ರ ಏರಿಕೆಯನ್ನು ಕಾಣುತ್ತಿದೆ.

ಭಾರತದಲ್ಲಿ ಒಂದಲ್ಲ ಎಲ್ಲಾ ವಲಯಗಳು ಕೂಡ ಏರಿಕೆಯ ಹಂತದಲ್ಲಿದೆ. ಪಾಶ್ಚಾತ್ಯ ಎಕಾನಮಿ ನಿಂತ ನೀರಿನಂತಾಗಿದೆ. ಅವರ ಮುಂದಿನ ಭವಿಷ್ಯ ಮಂಕಾಗಿದೆ.ಇಷ್ಟು ವರ್ಷ ಅಧಿಪತ್ಯದ ರುಚಿ ಕಂಡ ಅವರಿಗೆ ಮುಂದಿನ ಅಧಿಪತ್ಯವನ್ನು ಭಾರತ ಮತ್ತು ಚೀನಾ ಅನುಭವಿಸುತ್ತವೆ ಎನ್ನುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಭಾರತವನ್ನು ಅತಂತ್ರಗೊಳಿಸುವ ಇನ್ನಷ್ಟು ಪ್ರಯತ್ನಗಳಾಗುವುದು ಮಾತ್ರ ನಿಲ್ಲುವುದಿಲ್ಲ.

ಭಾರತದಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳಲು ಬರುವುದಿಲ್ಲ. ಭಾರತೀಯ ಜಿಡಿಪಿಯ ೪೦ ಪ್ರತಿಶತ ದೇಣಿಗೆ ನೀಡುತ್ತಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಮೇಲೆ ತೆರಿಗೆ ಎನ್ನುವ ಭಾರವನ್ನು ಇಳಿಸುವ , ಅಥವಾ ಅವರಿಗೆ ಬೇಕಾದ ಪೂರಕ ವಾತಾವರಣ ಸೃಷ್ಟಿಯಾಗುವ ಕೆಲಸವಾಲಾಗುತ್ತಿಲ್ಲ. ಭಾರತೀಯ ಮಧ್ಯಮವರ್ಗಕ್ಕೆ ಅತಿ ಹೆಚ್ಚು ತೆರಿಗೆ ಭಾರವನ್ನು ಹೊರಿಸಲಾಗಿದೆ. ಸದ್ಯಕ್ಕೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಮತದಾರರು ಇದೆ ಮಧ್ಯಮವರ್ಗದ ಜನ ಎನ್ನುವುದನ್ನು ಸರಕಾರ ಮರೆಯಬಾರದು. ಇದು ಜನತೆಗೆ ಮಾಡುವ ಉಪಕಾರವಲ್ಲ. ಹೊರಗಿನ ಶಕ್ತಿಗಳು ನಮ್ಮನ್ನು ವಿಭಜಿಸಲು ಸಾಧ್ಯವಾಗುವುದು ಅಸಮಾಧಾನ ಹೆಚ್ಚಾದಾಗ ಮಾತ್ರ.

ಹೀಗಾಗಿ ಕೇಂದ್ರ ಸರಕಾರ ಕೇವಲ ಹೊರಗಿನ ಶತ್ರುಗಳನ್ನು ಮಟ್ಟ ಹಾಕುವುದನ್ನು ಮಾತ್ರ ಗಮನಿಸದೆ , ಬೆಂಬಲ ನೀಡಿದ ಜನರನ್ನು ಕೂಡ ವಿಸ್ವಾಸದಿಂದ ನಡೆಸಿಕೊಳ್ಳಬೇಕಿದೆ. ನಿಜ ಹೇಳಬೇಕೆಂದರೆ ಭಾರತೀಯ ಮಧ್ಯಮ ವರ್ಗ ಇಷ್ಟೊಂದು ತಾಳ್ಮೆಯಿಂದ ಯಾವ ಸರ್ಕಾರವನ್ನೂ ಬೆಂಬಲಿಸಿಲ್ಲ. ನಾಳೆ ದೇಶ ಬದಲಾಗುತ್ತದೆ, ಬದುಕು ಬದಲಾಗುತ್ತದೆ ಎನ್ನುವ ಆಶಾಭಾವದಲ್ಲಿ ಆತ ಬೆಂಬಲವನ್ನು ನೀಡುತ್ತಿದ್ದಾನೆ. ಆತನ ನಂಬಿಕೆಯಲ್ಲಿ ಸ್ವಲ್ಪ ಕೂಡ ಬದಲಾವಣೆಯಾದರೂ ಸಾಕು ಹೊರಗೆ ಹೊಂಚಿ ಹಾಕಿ ಕಾಯುತ್ತಿರುವ ವಿಭಜಕ ಶಕ್ತಿಗಳು ಭಾರತದಲ್ಲಿ ಅರಾಜಕತೆ ಸೃಷ್ಟಿಸುತ್ತಾರೆ. ಕಳೆದ ಹತ್ತು ವರ್ಷದಲ್ಲಿ ಗಳಿಸಿದ ಜಿಎಸ್ಟಿ , ಹೆಚ್ಚಾಗಿರುವ ಫಾರಿನ್ ಎಕ್ಸ್ಚೇಂಜ್ ರಿಸೆರ್ವ್ , ಜಾಗತಿಕವಾಗಿ ಹೆಚ್ಚಿರುವ ಭಾರತದ ವರ್ಚಸ್ಸು ಎಲ್ಲವೂ ಮಣ್ಣಾಗಲು ತಿಂಗಳು ಸಾಕು.

credit rating system
ಬಾಂಗ್ಲಾ ಕುಸಿತ ಭಾರತಕ್ಕೆ ಅಹಿತ! (ಹಣಕ್ಲಾಸು)

ಭಾರತದಲ್ಲಿನ ಕೇಂದ್ರ ಸರಕಾರ ತುರ್ತಾಗಿ ತನ್ನ ಜನರನ್ನು ಒಂದಾಗಿಸುವ ಕೆಲಸವನ್ನು ಮಾಡಬೇಕು. ಎಲ್ಲಾ ಬೇಡಿಕೆಗಳನ್ನು ಅಲ್ಲದಿದ್ದರೂ ನಿಜಕ್ಕೂ ಈಡೇರಿಸಬೇಕಾದ ಒಂದಷ್ಟು ಅಂಶದ ಬಗ್ಗೆ ಗಮನ ಹರಿಸಬೇಕು. ರೈತ , ಯೋಧನಿಗೆ ಸಿಕ್ಕ ಪಟ್ಟವನ್ನು ಸಣ್ಣಪುಟ್ಟ ಉದ್ಯಮಿಗಳಿಗೂ ಸಿಗುವಂತೆ ಮಾಡಬೇಕು. ಇಂದು ಸಣ್ಣ ಪುಟ್ಟ ವ್ಯಾಪಾರಿಗಳ ಬದುಕು ಸಂಬಳ ನೀಡುವುದರಲ್ಲಿ , ತೆರಿಗೆ ಕಟ್ಟುವುದರಲ್ಲಿ ಮುಗಿದು ಹೋಗುತ್ತಿದೆ. ಕಷ್ಟ ಮತ್ತು ಅಪಾಯವನ್ನು ಎದುರಿಸಿ ಉದ್ದಿಮೆ ಕಟ್ಟಿದವರಿಗೆ ಯಾವ ಲಾಭವೂ ಇಲ್ಲ , ಸಮಾಜದಲ್ಲಿ ಗೌರವವೂ ಇಲ್ಲ ಎನ್ನುವಂತಾಗಿದೆ. ಸರಕಾರ ಈ ಬಗ್ಗೆ ಗಮನ ಹರಿಸಲಿ.

ಕೊನೆಮಾತು: ಭಾರತದ ಜಿಎಸ್ಟಿ ಸಂಗ್ರಹಣೆಯೊಂದು ಸಾಕು ಭಾರತ ಸಾಗುತ್ತಿರುವ ಹಾದಿಯನ್ನು ಹೇಳಲು. ದಶಕದ ತಪಸ್ಸಿನ ಫಲ , ಜನರ ನಂಬಿಕೆ ಮತ್ತು ಬಲಿದಾನ ಮಣ್ಣಾಗದಂತೆ ಕಾಪಾಡುವ ದೊಡ್ಡ ಹೊಣೆಗಾರಿಕೆ ಕೇಂದ್ರ ಸರಕಾರದ ಮೇಲಿದೆ. ವಿಭಜಕ ಶಕ್ತಿಗಳು ಇನ್ನಷ್ಟು ಸಂಘಟಿತರಾಗಿ ಹೋರಾಟಕ್ಕೆ ಬರುತ್ತಾರೆ. ಎಚ್ಚರವಿರಲಿ!

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com