ಎದೆ ಉರಿ, ಬಾಯಿಯಲ್ಲಿ ಹುಳಿ ರುಚಿ; ಹಯಾಟಸ್ ಹರ್ನಿಯಾ ಲಕ್ಷಣಗಳಾಗಿರಬಹುದು (ಕುಶಲವೇ ಕ್ಷೇಮವೇ)

ವಯಸ್ಸಾದ ಮೇಲೆ ಆಹಾರವನ್ನು ಬಾಯಿರುಚಿಗಿಂತ ಹೆಚ್ಚಾಗಿ ದೇಹದ ಮತ್ತು ಆರೋಗ್ಯದ ಪೋಷಣೆಗೆ ಸೇವಿಸಬೇಕು. ಒಮ್ಮೆಲೇ ಅತಿಯಾಗಿ ತಿನ್ನಬಾರದು.
hiatus hernia
ಹಯಾಟಸ್ ಹರ್ನಿಯಾonline desk
Updated on

ಒಂದು ದಿನ ಸಂಜೆ ನನ್ನ ಕ್ಲಿನಿಕ್ಕಿಗೆ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರು ಬಂದು ಊಟ ಮಾಡಿದ ನಂತರ ಎದೆಯಲ್ಲಿ ಉರಿ ಮತ್ತು ಮಲಗಿದಾಗ ಉರಿಯು ಹೆಚ್ಚಾಗುತ್ತದೆ. ಜೊತೆಗೆ ಆಹಾರವನ್ನು ನುಂಗಲು ಆಗುತ್ತಿಲ್ಲ ಮತ್ತು ಬಾಯಲ್ಲಿ ಆಗಾಗ ಹುಳಿ ರುಚಿಯ ಸಂವೇದನೆ ಇದೆ ಎಂದು ಸಮಸ್ಯೆ ಹೇಳಿಕೊಂಡರು.

ನಾನು ಅವರನ್ನು ಚೆಕ್ ಮಾಡಿ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಹೇಳಿದೆ. ಎಂಡೋಸ್ಕೋಪಿ ಆದ ಮೇಲೆ ಅವರ ದೀರ್ಘಕಾಲಿಕ ಜಡಜೀವನಶೈಲಿ ಮತ್ತು ಸ್ಥೂಲಕಾಯದ ವಿವರಗಳನ್ನು ತಿಳಿದುಕೊಂಡ ನಂತರ ಅವರಿಗೆ ಹಯಾಟಸ್ ಹರ್ನಿಯಾ ಸಮಸ್ಯೆ ಇದೆ ಎಂದು ತಿಳಿದುಬಂತು. ಅವರಿಗೆ ಸೂಕ್ತ ಔಷಧಿ-ಚಿಕಿತ್ಸೆ ವಿವರಗಳನ್ನು ನೀಡಿ ಕಳಿಸಿಕೊಟ್ಟೆ.

ಹಯಾಟಸ್ ಹರ್ನಿಯಾ ಸಮಸ್ಯೆಯ ಲಕ್ಷಣಗಳು

ಕೆಲವು ಜನರಿಗೆ ಆಗಾಗ ಹೊಟ್ಟೆಯ ಭಾಗ ಎದೆಯನ್ನು ಮೇಲೆ ತಳ್ಳಿದಂತೆ ಅನುಭವವಾಗುತ್ತದೆ. ಅದರಲ್ಲಿ ಹಿರಿಯರಿಗೆ ಹೀಗಾಗುವುದು ಉಂಟು. ಇದು ಹಯಾಟಸ್ ಹರ್ನಿಯಾ ಸಮಸ್ಯೆಯ ಲಕ್ಷಣ. ಜಡ ಜೀವನಶೈಲಿ ಮತ್ತು ಸ್ಥೂಲಕಾಯ ಇದ್ದರೆ ಇದು ಸಾಮಾನ್ಯ ಎನ್ನುವಂತಾಗಿದೆ. ಈ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು.

ನಮ್ಮ ಎದೆಯನ್ನು ಮತ್ತು ಹೊಟ್ಟೆಯನ್ನು ತೆಳುವಾದ ವಪೆ (ಡಯಾಫ್ರಾಮ್) ಎಂಬು ಸ್ನಾಯು ಪದರವು ಪ್ರತ್ಯೇಕಿಸುತ್ತದೆ. ಹಯಾಟಸ್ ಹರ್ನಿಯಾ ಸಮಸ್ಯೆ ಉಂಟಾದಾಗ ಹೊಟ್ಟೆಯ ಭಾಗ ಡಯಾಫ್ರಾಮ್ ಮೂಲಕ ಎದೆಯ ಕುಹರದೊಳಗೆ ಮೇಲಕ್ಕೆ ತಳ್ಳಿದಂತಾಗಿ ನೋವು ಕಾಣಿಸಿಕೊಳ್ಳುತ್ತದೆ. ಎದೆ ಉರಿ ಮಲಗಿದಾಗ ಉಲ್ಬಣಗೊಳ್ಳುತ್ತದೆ. ಹೊಟ್ಟೆಯ ಆಮ್ಲವು ಅನ್ನನಾಳಕ್ಕೆ ಹರಿದಾಗ ಉರಿಯುವ ಸಂವೇದನೆಯನ್ನು ಉಂಟುಮಾಡುತ್ತದೆ. ಗಂಟಲಿನಲ್ಲಿ ಆಹಾರ ಸಿಕ್ಕಿಹಾಕಿಕೊಂಡ ಭಾವನೆಯಿಂದಾಗಿ ಘನ ಆಹಾರವನ್ನು ನುಂಗಲು ತೊಂದರೆಯಾಗುತ್ತದೆ. ರಾತ್ರಿಯ ಹೊತ್ತು ಬಾಯಿಯಲ್ಲಿ ಹುಳಿ ರುಚಿಯ ಸಂವೇದನೆ ಉಂಟಾಗುತ್ತದೆ. ಕೆಲವೊಮ್ಮೆ ಗಂಟಲು ಮತ್ತು ಶ್ವಾಸನಾಳಕ್ಕೆ ಆಮ್ಲದ ಕಿರಿಕಿರಿಯಿಂದ ಬಾಯಿಯ ಒರಟುತನ ಮತ್ತು ಒಣ ಕೆಮ್ಮು ಬರಬಹುದು. ಆಹಾರ ಸೇವಿಸಿದ ನಂತರ ಹೊಟ್ಟೆಯ ಮೇಲ್ಭಾಗದಲ್ಲಿ ತುಂಬಿದ ಅಥವಾ ಒತ್ತಡದ ಅನುಭವ ಕೂಡ ಆಗಬಹುದು.

ಹಯಾಟಸ್ ಹರ್ನಿಯಾ ಸಮಸ್ಯೆಗೆ ಜೀವನಶೈಲಿ ಮಾರ್ಪಾಡುಗಳಿಂದ ಪರಿಹಾರ

ಕೆಲವು ಪ್ರಮುಖ ಜೀವನಶೈಲಿ ಮಾರ್ಪಾಡುಗಳನ್ನು ಮಾಡಿಕೊಳ್ಳುವುದರಿಂದ ಈ ಸಮಸ್ಯೆಗೆ ಪರಿಹಾರ ಸಾಧ್ಯ ಮೊದಲಿಗೆ ಅತಿಯಾಗಿ ತಿನ್ನುವುದನ್ನು ಬಿಡಬೇಕು. ವಯಸ್ಸಾದ ಮೇಲೆ ಆಹಾರವನ್ನು ಬಾಯಿರುಚಿಗಿಂತ ಹೆಚ್ಚಾಗಿ ದೇಹದ ಮತ್ತು ಆರೋಗ್ಯದ ಪೋಷಣೆಗೆ ಸೇವಿಸಬೇಕು. ಒಮ್ಮೆಲೇ ಅತಿಯಾಗಿ ತಿನ್ನಬಾರದು. ಮಸಾಲೆಯುಕ್ತ, ಆಮ್ಲೀಯ ಅಥವಾ ಕೊಬ್ಬಿನ ಪದಾರ್ಥಗಳಂತಹ ಪ್ರಚೋದಕ ಆಹಾರಗಳನ್ನು ಹೆಚ್ಚಾಗಿ ತಿನ್ನಬಾರದು. ಅತಿ ಸಿಹಿ, ಖಾರದ ಮತ್ತು ಜಂಕ್ ಫುಡ್ಡಿನಿಂದ ದೂರ ಇರಬೇಕು. ಊಟ ಮಾಡಿದ ತಕ್ಷಣ ಮಲಗಬಾರದು. ರಾತ್ರಿಯಲ್ಲಿ ಹೊತ್ತಾದ ಮೇಲೆ ಏನೂ ತಿನ್ನಬಾರದು. ಕಾಫೀ, ಟೀ, ಕೂಲ್ ಡ್ರಿಂಕುಗಳ ಸೇವನೆ ಸಲ್ಲದು.

ಒಂದು ಲೀಟರ್ ನೀರಿಗೆ ಒಂದು ಚಮಚ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಇದನ್ನು ಸ್ವಲ್ಪ ಆರಿದ ನಂತರ ನಿಧಾನವಾಗಿ ಆಗಾಗ ಸೇವಿಸಿದರೆ ಉತ್ತಮ. ದಿನನಿತ್ಯದ ಆಹಾರದಲ್ಲಿ ಮತ್ತು ಪುಡಿಗಳನ್ನು ಮಾಡುವಾಗ ಜೀರಿಗೆ ಪುಡಿಯನ್ನು ಬಳಸಬೇಕು. ಪ್ರತಿದಿನ ಮೂರರಿಂದ ನಾಲ್ಕು ಲೀಟರ್ ನೀರನ್ನು ಕುಡಿಯಬೇಕು. ಜೀರ್ಣಕ್ರಿಯೆಗೆ ಸಂಕೀರ್ಣವಾದ ಅಲಸಂದೆ ಮತ್ತು ಕಡ್ಲೆಕಾಳನ್ನು ಸೇವಿಸುವುದು ಬೇಡ. ರಾತ್ರಿಯ ಹೊತ್ತು ಅಥವಾ ಬೇರೆಯ ಹೊತ್ತು ಹುಳಿ ಮಜ್ಜಿಗೆ ಅಥವಾ ಮೊಸರು ಸೇವಿಸಬಾರದು. ತಾಜಾ ಮಜ್ಜಿಗೆ ಮತ್ತು ತಾಜಾ ಮೊಸರನ್ನು ಸೇವಿಸಬಹುದು. ತೀರಾ ಹೊಟ್ಟೆ ತುಂಬುವಂತೆ ಯಾವ ಹೊತ್ತಾಗಲೀ ಆಹಾರ ಸೇವಿಸಬಾರದು.

ವೈದ್ಯರ ಬಳಿಗೆ ಹೋದರೆ ಅವರು ಈ ಸಮಸ್ಯೆಗೆ ಹೊಟ್ಟೆಯ ಆಮ್ಲದ ಪರಿಣಾಮವನ್ನು ತಟಸ್ಥಗೊಳಿಸಲು ಔಷಧಿಗಳನ್ನು ಶಿಫಾರಸು ಮಾಡುತ್ತಾರೆ. ಸಮಸ್ಯೆ ತೀವ್ರವಾಗಿದ್ದರೆ ಮತ್ತು ಬಹುಕಾಲ ಕಾಡುತ್ತಿದ್ದರೆ ಅಪರೂಪದ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಬಹುದು.

hiatus hernia
ಲೇಸರ್ ಚಿಕಿತ್ಸೆ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು... (ಕುಶಲವೇ ಕ್ಷೇಮವೇ)

ಈ ಸಮಸ್ಯೆಯಿಂದ ಪಾರಾಗಲು ಎಲ್ಲರೂ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬೇಕು. ಆದ್ದರಿಂದ ದೈನಂದಿನ ದಿನಚರಿಯಲ್ಲಿ ವಾಕಿಂಗ್, ಯೋಗ ಮತ್ತು ವ್ಯಾಯಾಮಗಳನ್ನು ಮಾಡುವಂತಹ ದೈಹಿಕ ಚಟುವಟಿಕೆಯನ್ನು ಸೇರಿಸಿ. ದೇಹದ ಚಯಾಪಚಯ ಕ್ರಿಯೆ (ಮೆಟಾಬಾಲಿಸಂ) ಉತ್ತಮಪಡಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಕಾರ್ಡಿಯೋ, ಶಕ್ತಿ ತರಬೇತಿ ಮತ್ತು ಯೋಗದಂಥ ವ್ಯಾಯಾಮಗಳನ್ನು ಮಾಡಿ. ಜೊತೆಗೆ ಅತಿಯಾಗಿ ಆಹಾರ ಸೇವಿಸದೇ ಹೊಟ್ಟೆಯ ಒತ್ತಡವನ್ನು ಕಡಿಮೆ ಮಾಡುವುದು ಪ್ರಮುಖವಾಗಿದೆ. ಸಾಕಷ್ಟು ಜೀವಸತ್ವಗಳು ಮತ್ತು ಖನಿಜಾಂಶಗಳಿರುವ ಆಹಾರ ಸೇವೆನೆ ಮುಖ್ಯ. ನಾರಿನಂಶವಿರುವ (ಫೈಬರ್) ಆಹಾರಗಳನ್ನು ಅಂದರೆ ಹುರುಳಿಕಾಯಿ, ಗೆಡ್ಡೆಕೋಸು, ಎಲೆಕೋಸು, ಕ್ಯಾರೆಟ್, ಬ್ರೊಕೊಲಿ, ಬೀಟ್ರೂಟುಗಳನ್ನು ನಿಯಮಿತವಾಗಿ ಸೇವಿಸಬೇಕು. ತಾಜಾ ತರಕಾರಿಗಳು, ಹಸಿರು ಸೊಪ್ಪು ಮತ್ತು ಹಣ್ಣುಗಳಿರುವ ಸಮತೋಲಿತ ಆಹಾರ ಸೇವನೆಯು ಈ ಸಮಸ್ಯೆಯನ್ನು ತಡೆಯುವಲ್ಲಿ ಸಹಕಾರಿ.

hiatus hernia
ಮಾಸ್ಟೊಸೈಟೋಸಿಸ್ ಸಮಸ್ಯೆ (ಕುಶಲವೇ ಕ್ಷೇಮವೇ)

ನಿರಂತರ ಕೆಮ್ಮು ಅಥವಾ ಮಲಬದ್ಧತೆಯ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸುವುದು ಹೊಟ್ಟೆಯ ಮೇಲೆ ಪದೇ ಪದೇ ಬೀಳುವ ಒತ್ತಡವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಿ. ಇವೆರಡೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಮಾರುಕಟ್ಟೆಯಲ್ಲಿ ಸಿಗುವ ಜಂಕ್ ಫುಡ್ಡಿನ ಸಹವಾಸ ಬೇಡವೇ ಬೇಡ ಎಂದು ದೂರವಿರಿ. ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಮೃದುವಾದ ವ್ಯಾಯಾಮಗಳನ್ನು ಮಾಡುವುದು ಅಪೇಕ್ಷಿತ.

ಒಟ್ಟಾರೆ ಹೇಳುವುದಾದರೆ ಹಯಾಟಸ್ ಹರ್ನಿಯಾ ತೀವ್ರವಾದ ಸಮಸ್ಯೆಯಲ್ಲ. ಉತ್ತಮ ಜೀವನಶೈಲಿಯ ಅಭ್ಯಾಸಗಳಿಗೆ ಗಮನ ಕೊಟ್ಟರೆ ಇದರ ಪರಿಹಾರ ಸುಲಭಸಾಧ್ಯ. ತೀವ್ರತರವಾದ ಪ್ರಕರಣಗಳಿಗೆ ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸಾ ಹಸ್ತಕ್ಷೇಪದ ಅಗತ್ಯವಿರಬಹುದು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು, ಆಹಾರ ಸೇವನೆ ವೇಳೆ ಎಚ್ಚರಿಕೆಯಿಂದ ಇರುವುದು ಮತ್ತು ಹೊಟ್ಟೆಯ ಮೇಲೆ ಒತ್ತಡವನ್ನು ತಪ್ಪಿಸುವಂತಹ ತಡೆಗಟ್ಟುವ ಕ್ರಮಗಳು ಹಯಟಸ್ ಹರ್ನಿಯಾದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com