ಹೂಡಿಕೆ, ಕಾರ್ಯತಂತ್ರ ದೃಷ್ಟಿಯಿಂದ ಶ್ರೀಲಂಕಾ ಭಾರತಕ್ಕೆ ಮುಖ್ಯ ಏಕೆ ಗೊತ್ತೇ? (ಹಣಕ್ಲಾಸು)

ಹಣಕ್ಲಾಸು-401 ರಂಗಸ್ವಾಮಿ ಮೂಕನಹಳ್ಳಿ
ಶ್ರೀಲಂಕಾ ಅಧ್ಯಕ್ಷ- ಪ್ರಧಾನಿ ನರೇಂದ್ರ ಮೋದಿ
ಶ್ರೀಲಂಕಾ ಅಧ್ಯಕ್ಷ- ಪ್ರಧಾನಿ ನರೇಂದ್ರ ಮೋದಿ online desk

ನಮ್ಮ ದೇಶದ ಇನ್ನೊಂದು ರಾಜ್ಯದಂತೆ ಭಾಸವಾಗುವ ಶ್ರೀಲಂಕಾ ತನ್ನದೇ ಆದ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಹೊಂದಿದೆ. 2 ಕೋಟಿ 20 ಲಕ್ಷ ಜನಸಂಖ್ಯೆ ಹೊಂದಿರುವ ಈ ದೇಶ ಭಾರತದ ಹಲವಾರು ರಾಜ್ಯಗಳಿಗಿಂತ ಜನಸಂಖ್ಯೆಯ ದೃಷ್ಟಿಯಿಂದ ಸಣ್ಣದು. ಈ ದೇಶದ ಮೇಲೆ ಕೆಲವೇ ಕೆಲವು ಅದರಲ್ಲೂ ರಾಜಪಕ್ಸೆ ಮನೆತನ ಪ್ರಬಲ ಹಿಡಿತವನ್ನು ಹೊಂದಿದೆ. ಭಾರತಕ್ಕೆ ಶ್ರೀಲಂಕಾ ರಕ್ಷಣೆಯ ದೃಷ್ಟಿಯಿಂದ ತುಂಬಾ ಮುಖ್ಯವಾಗುತ್ತದೆ.

ಚೀನಾ ಎನ್ನುವ ಸಮಯಸಾಧಕ ದೇಶ ಶ್ರೀಲಂಕಾದಲ್ಲಿ ಬಂದು ಕುಳಿತು ಬಿಟ್ಟರೆ ನಂತರ ಅದರ ಉಪಟಳವನ್ನು ತಡೆಹಿಡಿಯುವುದು ಸುಲಭದ ಮಾತಲ್ಲ. ಹೀಗಾಗಿ ಭಾರತಕ್ಕೆ ಶ್ರೀಲಂಕಾ ಬೇಕು. ಶ್ರೀಲಂಕನ್ನರಿಗೂ ಭಾರತ ಬೇಕು. ನೋಟದಲ್ಲಿ, ಊಟದಲ್ಲಿ, ಬದುಕುವ ರೀತಿಯಲ್ಲಿ ನಾವು ಅವರಿಗೆ ಹತ್ತಿರ. ಇದ್ಯಾವುದರಲ್ಲೂ ಚೀನಿಯರು ಶ್ರೀಲಂಕನ್ನರಿಗೆ ಸಹ್ಯವಾಗುವುದಿಲ್ಲ. ಆದರೂ ಒಂದಷ್ಟು ರಾಜಕೀಯ ಕಾರಣಗಳಿಂದ ಶ್ರೀಲಂಕಾವನ್ನು ನಾವು ನಿರ್ಲಕ್ಷಿಸಿದ್ದೆವು. ಇದೆ ಸಮಯಕ್ಕೆ ಕಾಯುತ್ತಿದ್ದ ಚೀನಾ ಶ್ರೀಲಂಕಾಕ್ಕೆ ಹಣವನ್ನು ಸಾಲದ ರೂಪದಲ್ಲಿ ನೀಡಿ, ಅದನ್ನು ಮೂಲಭೂತ ಸೌಕರ್ಯಕ್ಕೆ ಬಳಸಬೇಕು ಎದು ತಾಕೀತು ಮಾಡಿ, ಅದಕ್ಕೆ ಸಂಬಂಧಿಸಿದ ಎಲ್ಲಾ ಪ್ರಾಜೆಕ್ಟ್ ಗಳನ್ನೂ ತನ್ನ ತೆಕ್ಕೆಗೆ ಹಾಕಿಕೊಂಡಿತು. ತನ್ನ ನೌಕರರನ್ನು ಕರೆದು ತಂದು ಶ್ರೀಲಂಕಾದಲ್ಲಿ ಇಳಿಸಿತು.

ಕಣ್ಣೊರೆಸಲು ಒಂದಷ್ಟು ಶ್ರೀಲಂಕನ್ನರನ್ನು ಕೂಡ ಕೆಲಸಕ್ಕೆ ತೆಗೆದುಕೊಂಡಿತು. ಒಟ್ಟಾರೆ ಚೀನಾ ಮಾಡಿದ್ದು ಇಷ್ಟು-ಒಂದು ಕೈಲಿ ಹಣ ನೀಡಿತು, ಇನ್ನೊಂದು ಕೈಲಿ ಹಣವನ್ನು ವಾಪಸ್ಸು ಪಡೆಯಿತು. ಶ್ರೀಲಂಕಾ ಹೆಸರಿನಲ್ಲಿ ಸಾಲವೂ ಉಳಿಯಿತು. ಶ್ರೀಲಂಕಾ ಇಂದಿಗೂ ಅದಕ್ಕೆ ಬಡ್ಡಿ ಕಟ್ಟುತ್ತಿದೆ.

ನಿಮಗೆಲ್ಲಾ ಗೊತ್ತಿರಲಿ ಗಂಟೆ ಕಳೆದರೂ ಒಂದೆರೆಡು ವಾಹನ ಕೂಡ ಚಲಿಸದ ಹೈವೇ ಶ್ರೀಲಂಕಾಕ್ಕೆ ಏಕೆ ಬೇಕಿತ್ತು. ಕೊಲಂಬೋ ನಗರದಲ್ಲಿ ಭಂಡಾರನಾಯಕೆ ಏರ್ಪೋರ್ಟ್ ಇದೆ, ದಕ್ಷಿಣದಲ್ಲಿ ಇನ್ನೊಂದು ಏರ್ಪೋರ್ಟ್ ಕಟ್ಟಿದ್ದಾರೆ. ಅದು ವಾರದಲ್ಲಿ ಒಂದೆರೆಡು ದಿನ ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಭಣಗುಡುತ್ತದೆ. ಕೇವಲ ರಷ್ಯನ್ ಯಾತ್ರಿಗಳನ್ನು ಕೆಲವು ವಿಮಾನಗಳು ತಂದು ಇಲ್ಲಿ ಇಳಿಸುತ್ತದೆ. ಇಡೀ ಶ್ರೀಲಂಕಾದಲ್ಲಿ ಕಣ್ಣಿಗೆ ಎದ್ದು ಕಾಣುವುದು ಇದೆ ರೀತಿಯ ಪ್ರಯೋಜನಕ್ಕೆ ಬಾರದ ಕಾಮಗಾರಿಗಳು. ದೇಶದಲ್ಲಿ ಜನತೆಗೆ ಕೆಲಸ ನೀಡುವ, ಅವಕಾಶ ಸೃಷ್ಟಿಸುವ ಕೆಲಸವಾಲಾಗಿಲ್ಲ. ಬದಲಿಗೆ ಜನ ಸಾಮಾನ್ಯ ಇಲ್ಲಿಂದ ಕಾಲ್ಕೀಳುವುದು ಹೇಗೆ ಎನ್ನುವ ಯೋಚನೆಯಲ್ಲಿದ್ದಾನೆ. ಇದು ದೇಶದ ಅಭಿವೃದ್ಧಿಗೆ ಮಾರಕ. ರಾಜಪಕ್ಸ ಕುಟುಂಬದ ಹತ್ತಾರು ಸದ್ಯಸರು ದೇಶದ ಆಯಾಕಟ್ಟಿನಲ್ಲಿ ಭದ್ರವಾಗಿ ಕುಳಿತು, ಹಣ ಕೊಟ್ಟವರಿಗೆ ಜೈ ಎಂದದ್ದರ ಪರಿಣಾಮ ಇಂದು ಶ್ರೀಲಂಕಾ ಎದುರಿಸುತ್ತಿದೆ.

ಶ್ರೀಲಂಕಾ ಅಧ್ಯಕ್ಷ- ಪ್ರಧಾನಿ ನರೇಂದ್ರ ಮೋದಿ
ಶ್ರೀಲಂಕಾ ಹಣದುಬ್ಬರದ ಕಥೆ! (ಹಣಕ್ಲಾಸು)

2021ರ ವರೆಗೆ ಶ್ರೀಲಂಕಾ ದೇಶದ ಮೇಲೆ ಚೀನಾ ಹಿಡಿತವನ್ನು ಹೊಂದಿತ್ತು. ಅಂದರೆ ಹಣಕಾಸು, ಪ್ರಭಾವ ಇತರ ವಲಯದಲ್ಲಿ ಅದರ ಕೈ ಮೇಲಾಗಿತ್ತು. 2022 ರಲ್ಲಿ ಶ್ರೀಲಂಕಾ ದೇಶ ದೊಡ್ಡ ಮಟ್ಟದ ಹಣಕಾಸು ಬಿಕ್ಕಟ್ಟು ಎದುರಿಸುತ್ತದೆ. ಪೂರ್ಣ ದೇಶದಲ್ಲಿ ಆಹಾಕಾರ ಏಳುತ್ತದೆ. 1948ರಲ್ಲಿ ಬ್ರಿಟಿಷರಿಂದ ಸ್ವಂತಂತ್ರ ಪಡೆದ ನಂತರದ ಅತಿ ದೊಡ್ಡ ಸಮಸ್ಯೆಯ ಸುಳಿಯಲ್ಲಿ ಶ್ರೀಲಂಕಾ ಸಿಲುಕಿ ಕೊಳ್ಳುತ್ತದೆ. ನೀರು, ಆಹಾರ, ಗ್ಯಾಸ್, ಪೆಟ್ರೋಲ್ ಪ್ರತಿಯೊಂದಕ್ಕೂ ಶ್ರೀಲಂಕಾದಲ್ಲಿ ಪರದಾಟ ಶುರುವಾಗುತ್ತದೆ. ಆಗ ಶ್ರೀಲಂಕಾ ದೇಶದ ನೆರವಿಗೆ ಧಾವಿಸಿದ್ದು ಭಾರತ. ಕೆಲವೇ ವಾರಗಳಲ್ಲಿ ಆ ದೇಶವನ್ನು ಮರಳಿ ಸಾಮಾನ್ಯ ಸ್ಥಿತಿಗೆ ತರುವಲ್ಲಿ ಭಾರತದ ಪಾತ್ರ ಬಹು ದೊಡ್ಡದು. ಜೈ ಶಂಕರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಭಾರತ ಶ್ರೀಲಂಕಾ ಮರಳಿ ಟ್ರಾಕ್ ಗೆ ಬರಲು ಖರ್ಚು ಮಾಡಿದ್ದು ಹತ್ತಿರಹತ್ತಿರ ನಾಲ್ಕೂವರೆ ಬಿಲಿಯನ್ ಡಾಲರ್!

ಹೀಗಾಗಿ 2022 ರ ವರೆಗೆ ಚೀನಾದ ಮೇಲುಗೈ ಈಗ ಕಡಿಮೆಯಾಗಿದೆ 2024ರ ಫೆಬ್ರವರಿ ತಿಂಗಳ ಸಮಯದಲ್ಲಿ ಚೀನಾ ಮತ್ತು ಭಾರತ, ಶ್ರೀಲಂಕಾ ದೇಶದಲ್ಲಿ ಸಮಬಲವನ್ನು ಸಾಧಿಸಿವೆ. ಎಫ್ಡಿಐ ಅಂದರೆ ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಅಡಿಯಲ್ಲಿ ಭಾರತ ಎರಡು ಬಿಲಿಯನ್ ಡಾಲರ್ಗಿಂತ ಹೆಚ್ಚಿನ ಹಣವನ್ನು ಶ್ರೀಲಂಕಾದಲ್ಲಿ ಹೂಡಿಕೆ ಮಾಡಿದೆ. ಶ್ರೀಲಂಕಾ ದೇಶದ ಡೆಟ್ ಕ್ರೈಸಿಸ್ ಸರಿಪಡಿಸಲು ಮುಂದಾದ ಪ್ರಥಮ ದೇಶ ಭಾರತ. ಸಹಾಜವಾಗೇ ತಮ್ಮನ್ನೇ ಹೋಲುವ ಭಾರತೀಯರ ಬಗ್ಗೆ ಶ್ರೀಲಂಕನ್ನರಿಗೆ ಪ್ರೀತಿಯಿದೆ. ತಮ್ಮದೇ ದೇಶದ ರಾಜಪಕ್ಸ ಮನೆತನದ ಬಗ್ಗೆ ಅಷ್ಟೇ ಅಸಮಾಧಾನವಿದೆ. ಕೇವಲ 10 ತಿಂಗಳ ಹಿಂದೆ 2023 ರಲ್ಲಿ ಶ್ರೀಲಂಕ ಮತ್ತೆ ಆರ್ಥಿಕ ಕುಸಿತಕ್ಕೆ ಸಿಲುಕಿತ್ತು. ಆಗಲೂ ಶ್ರೀಲಂಕದ ನೆರವಿಗೆ ಪ್ರಥಮವಾಗಿ ಧಾವಿಸಿದ್ದು ಭಾರತ. ಅಂದರೆ ಭಾರತ ತಾನು ಹಿಂದೆ ಮಾಡಿದ ತಪ್ಪನ್ನು ಸರಿಪಡಿಸಿಕೊಂಡಿದೆ. ಶ್ರೀಲಂಕ ಜೊತೆಗಿನ ಉತ್ತಮ ಬಾಂಧವ್ಯ ದೀರ್ಘಕಾಲದಲ್ಲಿ ಭಾರತಕ್ಕೆ ಲಾಭವಾಗಲಿದೆ ಎನ್ನುವುದು ಗೊತ್ತಾಗಿದೆ.

ಶ್ರೀಲಂಕ ಕೂಡ ಚೀನಾಗಿಂತ ಭಾರತದ ಜೊತೆಗಿನ ವ್ಯಾಪಾರ, ವಹಿವಾಟು ಉತ್ತಮ ಎನ್ನುವ ನಿರ್ಧಾರಕ್ಕೆ ಬಂದಂತಿದೆ. 2021 ರ ವರೆಗೆ ಚೀನಿಯರ ಹೂಡಿಕೆ ಇಲ್ಲಿ ಹೆಚ್ಚಾಗಿತ್ತು. 2024ರ ಫೆಬ್ರವರಿ ವೇಳೆಗೆ ಚೀನಾ ಮತ್ತು ಭಾರತ ಇಲ್ಲಿ ಸಮಬಲವನ್ನು ಸಾಧಿಸಿವೆ. ಶ್ರೀಲಂಕಾಗೆ ಹಣ್ಣು, ತರಕಾರಿ, ಇಲೆಕ್ಟ್ರಾನಿಕ್ ಉಪಕರಣಗಳ ಜೊತೆಗೆ ಅತಿ ಮೂಲಭೂತ ವಸ್ತುವಾದ ಉಪ್ಪು ಕೂಡ ಭಾರತದಿಂದ ಸರಬರಾಜಾಗುತ್ತಿದೆ. ಇದರ ಜೊತೆಗೆ ಶ್ರೀಲಂಕಾದಲ್ಲಿ ಉತ್ಪನ್ನವಾದ ಅವರ ಬೇಡಿಕೆ ಪೂರೈಸಿ ರಫ್ತಿಗೆ ಇರಿಸಿದ 60ಪ್ರತಿಶತ ವಸ್ತುಗಳನ್ನು ಭಾರತ ಖರೀದಿಸುತ್ತಿದೆ. ಸಾರ್ಕ್ ದೇಶಗಳಲ್ಲಿ ಶ್ರೀಲಂಕ ಭಾರತದ ವಹಿವಾಟಿನಲ್ಲಿ ಪ್ರಥಮ ಸ್ಥಾನದಲ್ಲಿದೆ ಎನ್ನುವುದು ಸ್ಪಷ್ಟವಾಗಿ ಬದಲಾಗುತ್ತಿರುವ ನೀತಿಯನ್ನು ತೋರಿಸಸುತ್ತದೆ.

ಶ್ರೀಲಂಕಾ ಅಧ್ಯಕ್ಷ- ಪ್ರಧಾನಿ ನರೇಂದ್ರ ಮೋದಿ
ಭಾರತ ಸಿರಿವಂತವಾಗಿದೆ, ಶ್ರೇಷ್ಠವಾಗುವುದು ಬಾಕಿಯಿದೆ! (ಹಣಕ್ಲಾಸು)

ಭಾರತ ಅತಿ ಮುಖ್ಯವಾಗಿ ಶ್ರೀಲಂಕಾ ದೇಶದ ರಿನ್ಯೂವಬೆಲ್ ಎನೆರ್ಜಿ ಸೆಕ್ಟರ್ ನಲ್ಲಿ ಬಹಳಷ್ಟು ಹೂಡಿಕೆ ಮಾಡಿದೆ. ಭಾರತದ ಅದಾನಿ ಸಮೂಹ ಇದರಲ್ಲಿ ಹೂಡಿಕೆಯನ್ನು ಮಾಡಿದೆ. ಇದರಿಂದ ಭಾರತಕ್ಕೂ ಲಾಭ, ಶ್ರೀಲಂಕನ್ನರಿಗೂ ಕೆಲಸ ಸಿಕ್ಕ ಹಾಗಾಯ್ತು. ಶ್ರೀಲಂಕ ತೀರಾ ಇತ್ತೀಚಿಗೆ ಆಹಾರ, ಪೆಟ್ರೋಲಿಯಂ ಪದಾರ್ಥಗಳಿಗೆ ಪರದಾಡಿದ್ದು ನೆನಪಿದೆ ಅಲ್ಲವೇ? ಆಗ ಭಾರತದ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಅಲ್ಲಿನ ಸಂಕಷ್ಟಕ್ಕೆ ಸಹಾಯ ನೀಡಿತ್ತು. ಇದೀಗ ಶ್ರೀಲಂಕ ಸರಕಾರ ಮುಂದಿನ 20ವರ್ಷ ಅಂದರೆ 2044ರ ವರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಗೆ ಲೈಸೆನ್ಸ್ ರಿನ್ಯೂ ಮಾಡಿಕೊಟ್ಟಿದೆ. ಹೀಗಾಗಿ ಮುಂದಿನ ಇಪ್ಪತ್ತು ವರ್ಷ ಶ್ರೀಲಂಕೆಗೆ ತೈಲ ಸರಬರಾಜು ಮಾಡುವುದು ಭಾರತವೇ ಆಗಿರುತ್ತದೆ. ಗಮನಿಸಿ ನೋಡಿ ಶ್ರೀಲಂಕೆಯಲ್ಲಿ ಹಣದುಬ್ಬರ ಹೆಚ್ಚಾಗಿದೆ. ಭಾರತ ಮನಸ್ಸು ಮಾಡಿದ್ದರೆ ತೈಲವನ್ನು ಹೆಚ್ಚಿನ ಬೆಲೆಗೆ ಮಾರಿಕೊಳ್ಳಬಹುದಿತ್ತು, ಆದರೆ ಭಾರತದಲ್ಲಿ ಯಾವ ಬೆಲೆಗೆ ಪೆಟ್ರೋಲ್ ಸಿಗುತ್ತಿದೆ ಅದೇ ಬೆಲೆಗೆ ಶ್ರೀಲಂಕಾದಲ್ಲಿ ಕೂಡ ಸಿಗುತ್ತಿದೆ.

ಭಾರತದ ನ್ಯಾಷನಲ್ ಡೇರಿ ಡೆವಲಪ್ಮೆಂಟ್ ಬೋರ್ಡ್ ಮತ್ತು ಅಮುಲ್ ಶ್ರೀಲಂಕಾದ ದೇಶದ ಡೈರಿ ಉದ್ದಿಮೆಯನ್ನು ಪ್ರಗತಿ ಕಡೆಗೆ ಒಯ್ಯಲು ಅವರೊಂದಿಗೆ ಕೈ ಜೋಡಿಸಿವೆ. ಶ್ರೀಲಂಕಾ ದೇಶದೊಂದಿಗೆ ಮಾಡಿಕೊಂಡಿರುವ ಒಪ್ಪಂದಲ್ಲಿ ಅಮುಲ್ ಮತ್ತು ನತಯತ್ನ್ ಡೈರಿ ಡೆವಲಪ್ಮೆಂಟ್ ಜಂಟಿಯಾಗಿ 51 ಪ್ರತಿಶತ ಪಾಲುದಾರಿಕೆಯನ್ನು ಹೊಂದಿವೆ ಉಳಿದದ್ದು ಶ್ರೀಲಂಕಾ ಸರಕಾರದ ಬಳಿ ಇರಲಿದೆ. ಮುಂದಿನ ಐದು ವರ್ಷದಲ್ಲಿ ಶ್ರೀಲಂಕಾದಲ್ಲಿ ಕ್ಷೀರ ಕ್ರಾಂತಿ ಮಾಡುವುದು ಇದರ ಉದ್ದೇಶವಾಗಿದೆ. ಅಮುಲ್ ಸಹಕಾರಿ ತತ್ವವನ್ನು ಶ್ರೀಲಂಕಾ ದೇಶದಲ್ಲೂ ಮುಂದುವರಿಸುವ ಇಚ್ಚೆಯನ್ನು ಹೊಂದಲಾಗಿದೆ.

ಶ್ರೀಲಂಕಾ ಅಧ್ಯಕ್ಷ- ಪ್ರಧಾನಿ ನರೇಂದ್ರ ಮೋದಿ
ಚೀನಾ: ಕಮ್ಯುನಿಸ್ಟ್ ಅಥವಾ ಕ್ಯಾಪಿಟಲಿಸ್ಟ್? (ಹಣಕ್ಲಾಸು)

ಭಾರತೀಯ ಅಶೋಕ ಲೇಲ್ಯಾಂಡ್ ಶ್ರೀಲಂಕಾದಲ್ಲಿ ಭದ್ರವಾಗಿ ತಳ ಊರಿದೆ. ಲಂಕಾ ಅಶೋಕ ಲೇಲ್ಯಾಂಡ್ ಹೆಸರಿನಲ್ಲಿ ಇಲ್ಲಿನ ಆಟೋಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಮಾರ್ಕೆಟ್ ಶೇರ್ ಪಡೆದುಕೊಂಡಿದೆ, ಪ್ರಮುಖ ಆಟೋಮೊಬೈಲ್ ಸಂಸ್ಥೆಗಳಲ್ಲಿ ಇದು ಕೂಡ ಒಂದಾಗಿದೆ. ಇದರ ಪಾಲುದಾರತ್ವ ಕೂಡ ಶ್ರೀಲಂಕಾ ಸರಕಾರದ ಬಳಿಯಿದೆ. ಇದರ ಜೊತೆಗೆ ಹೋಟೆಲ್ ಉದ್ಯಮಗಳಲ್ಲಿ, ಟೂರಿಸಂ ಉದ್ಯಮಗಳಲ್ಲಿ ಕೂಡ ಭಾರತದ ಸಂಸ್ಥೆಗಳು ಇಲ್ಲಿ ಹೂಡಿಕೆಯನ್ನು ಮಾಡಿವೆ.

ಇನ್ನು ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಭಾರತದಿಂದ ಬರುವ ಪ್ರವಾಸಿಗರು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ನೂರರಲ್ಲಿ 20ಪ್ರತಿಶತಕ್ಕೂ ಹೆಚ್ಚಿನ ಪ್ರವಾಸಿಗರು ಭಾರತದಿಂದ ಬರುತ್ತಾರೆ. ಕೇವಲ ಪ್ರವಾಸಿಗರಾಗಿ ಬರುವುದಲ್ಲದೆ ಇಲ್ಲಿನ ಕೋಸ್ಟಲ್ ನಗರಗಳಲ್ಲಿ ಭಾರತೀಯರು ಡೆಸ್ಟಿನೇಷನ್ ವೆಡ್ಡಿಂಗ್ ಕೂಡ ಸಾಕಷ್ಟು ಮಾಡುತ್ತಿದ್ದಾರೆ. ನಾನು ಉಳಿದುಕೊಂಡಿದ್ದ ಪಂಚತಾರಾ ರೆಸಾರ್ಟ್ನಲ್ಲಿ ಕೂಡ ಒಂದು ಮದುವೆ ನಡೆಯುತ್ತಿತ್ತು. ಚೆನ್ನೈ ನಗರದಿಂದ ಸುಮಾರು 150ಕ್ಕೂ ಹೆಚ್ಚಿನ ಜನರು ಈ ರೆಸಾರ್ಟ್ನಲ್ಲಿ ಮದುವೆಗೆ ಸೇರಿದ್ದರು. ಭಾರತೀಯ ಮದುವೆ ಎಂದ ಮೇಲೆ ಆಗುವ ಖರ್ಚಿನ ಲೆಕ್ಕಾಚಾರ ಅದೆಷ್ಟು ದೊಡ್ಡದು ಎನ್ನುವುದನ್ನು ಲೆಕ್ಕಹಾಕಿ. ರಸ್ತೆಯಲ್ಲಿ ನಡೆಯುವಾಗ, ಪ್ರವಾಸಿ ತಾಣಗಳನ್ನು ನೋಡಲು ಹೋದಾಗ ಸ್ಥಳೀಯರು ನೀವು ಮದುವೆ ದಿಬ್ಬಣದ ಜೊತೆಗೆ ಬಂದಿರುವಿರಾ? ಎಂದು ನಮ್ಮನ್ನು ಕೇಳುತ್ತಿದ್ದರು ಎಂದರೆ ಇಲ್ಲಿ ಈ ರೀತಿಯ ಮದುವೆಗಳು ಅದೆಷ್ಟು ಸಾಮಾನ್ಯವಾಗಿವೆ ಎನ್ನುವುದರ ಅರಿವು ನಿಮಗಾದೀತು.

ಕೊನೆಮಾತು: ಸದ್ಯದ ಮಟ್ಟಿಗೆ ಭಾರತ ಶ್ರೀಲಂಕಾ ದೇಶದಲ್ಲಿ ಕಳೆದು ಹೋಗಿದ್ದ ತನ್ನ ಹಿಡಿತವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ. 2022 ಮತ್ತು 2023 ರಲ್ಲಿ ಶ್ರೀಲಂಕಾದಲ್ಲಿ ಅದ ಆರ್ಥಿಕ ಕುಸಿತದ ಸಮಯದಲ್ಲಿ ಚೀನಾ ಸಹಾಯಕ್ಕೆ ಧಾವಿಸುವ ಮುನ್ನ ಭಾರತ ಸಹಾಯ ಹಸ್ತ ನೀಡಿದ್ದು ಇಂದಿನ ಸ್ಥಿತಿಗೆ ಕಾರಣವಾಗಿದೆ. ಕೇವಲ ಸಹಾಯವಲ್ಲದೆ ಹೂಡಿಕೆಯನ್ನು ಸಹ ವಿಸ್ತರಿಸಿದೆ. ಐದು ವರ್ಷದ ಹಿಂದೆ ಭೇಟಿ ಕೊಟ್ಟಿದ್ದಾಗ ಭಾರತೀಯರ ಬಗ್ಗೆ ಮಡುವುಗಟ್ಟಿದ್ದ ಬೇಸರದ ಭಾವ ತಿಳಿಯಾಗಿದೆ. ಅಮುಲ್ ಬಂದಿದೆ, ನಿಮ್ಮ ಅದಾನಿ ನಮ್ಮಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಜನ ಸಾಮಾನ್ಯರು ಹೇಳುವಾಗ ಆಗುತ್ತಿದ್ದ ಖುಷಿ, ಚೀನಾವನ್ನು ಪೂರ್ಣವಾಗಿ ಶ್ರೀಲಂಕದಿಂದ ಹೊರಹಾಕಿದಾಗ ಇನ್ನಷ್ಟು ಹೆಚ್ಚಾಗುತ್ತದೆ. ಇನ್ನೈದು ವರ್ಷದಲ್ಲಿ ಅದೂ ಆಗಲಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com