ಜಗತ್ತಿನ AI ಉದ್ದಿಮೆಯನ್ನೇ ಅಲ್ಲಾಡಿಸಿರುವ ಚೀನಾದ DeepSeek ಕಂಪನ! ಭಾರತಕ್ಕೇನಿದೆ ಪಾಠ? (ತೆರೆದ ಕಿಟಕಿ)

ಯಾವ ಎನ್ವಿಡಿಯಾ ಕಂಪನಿ ಎಐಗೆ ಬೇಕಾದ ಚಿಪ್ ತಯಾರಿಕೆಯಲ್ಲಿನ ನಾಯಕತ್ವದ ಕಾರಣದಿಂದ ಜಗತ್ತಿನ ಅತಿ ಮೌಲ್ಯಯುತ ಕಂಪನಿಗಳಲ್ಲಿ ಒಂದಾಗಿತ್ತೋ, ಅದರ ಕಿರೀಟವು ಕಳಚಿ, ಒಂದೇ ದಿನದಲ್ಲಿ ಹತ್ತಿರ-ಹತ್ತಿರ 600 billion dollar ಮೌಲ್ಯವನ್ನು ಕಳೆದುಕೊಂಡ ಕಂಪನಿ ಎಂದು ಇತಿಹಾಸದಲ್ಲಿ ಹೆಸರು ಬರೆಸಿಕೊಂಡಿತು.
China's Deekseek- India (file pic)
ಚೀನಾದ ಡೀಪ್ ಸೀಕ್- ಭಾರತ (ಸಾಂಕೇತಿಕ ಚಿತ್ರ)online desk
Updated on

ಅದೊಂದೇ ಒಂದು ವಿದ್ಯಮಾನ ಇಡೀ ಜಗತ್ತಿನ ಆರ್ಥಿಕ ಭವಿಷ್ಯದ ಹಾದಿಯನ್ನೇ ಬದಲಾಯಿಸಿಬಿಟ್ಟಿದೆ! ಈಗೆರಡು ದಿನಗಳಿಂದ ಅಮೆರಿಕವೂ ಸೇರಿದಂತೆ ಇಡೀ ವಿಶ್ವವು ಚೀನಾದ ಕಡೆ ನಿಬ್ಬೆರಗಾಗಿ ನೋಡುತ್ತ ನಿಂತುಬಿಟ್ಟಿದೆ. ಆರ್ಥಿಕ ಮಂದಗತಿಯಿಂದ ಸ್ಪರ್ಧಾತ್ಮಕ ಓಟದಲ್ಲಿ ಹಿಂದೆ ಬಿದ್ದಂತಾಗಿದ್ದ ಚೀನಾ, ಇದೊಂದೇ ಬೆಳವಣಿಗೆಯಿಂದ ಮುಂಚೂಣಿಗೆ ಬಂದು ನಿಂತುಬಿಟ್ಟಿದೆ. ಪಾಶ್ಚಾತ್ಯ ಕೇಂದ್ರೀತ ಇಡೀ ಟೆಕ್ ಲೋಕವೇ ಕಂಪಿಸಿಹೋಗಿದೆ.

ಹೌದು. ಇನ್ಯಾವುದರ ಬಗ್ಗೆ ಮಾತನಾಡುವುದಕ್ಕೆ ಸಾಧ್ಯ? ಸೃಜನಾತ್ಮಕ ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಚೀನಾದ DeepSeek ಎಂಬ ಕಂಪನಿ ಧುತ್ತನೇ ಪ್ರತ್ಯಕ್ಷವಾಗಿ ಈವರೆಗಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಥಾನಕವನ್ನೇ ಬದಲಿಸಿರುವ ಕತೆ ಇದು. ಚೀನಾದಲ್ಲಿ 2023ರಲ್ಲಷ್ಟೇ ಸ್ಥಾಪಿತವಾಯಿತು ಎನ್ನಲಾಗಿರುವ ಡೀಪ್ ಸೀಕ್ ಎಂಬ ಕಂಪನಿ, ಜನವರಿ 10ಕ್ಕೆ ತನ್ನದೊಂದು ಚಾಟ್ ಬಾಟ್ ಅನ್ನು ಲಭ್ಯವಾಗಿಸುತ್ತದೆ. ಅಂದರೆ, ಕೇಳಿದ್ದಕ್ಕೆ ಉತ್ತರಿಸುವ ಹಾಗೂ ವಿಷಯ ಸೃಷ್ಟಿಸಿಕೊಡುವ Chat GPT ಮಾದರಿಯದ್ದೇ ತಂತ್ರಾಂಶ. ವಾರದ ಹಿಂದೆ ಅದು ಅಮೆರಿಕದ ಆ್ಯಪಲ್ ಸ್ಟೋರ್ ನಲ್ಲಿ ಅತಿಹೆಚ್ಚು ಡೌನ್ಲೋಡ್ ಮಾಡಿಕೊಂಡಿರುವ ತಂತ್ರಾಂಶವೆಂಬ ಹೆಗ್ಗಳಿಕೆ ಪಡೆದುಕೊಂಡು, Open AI ನ ಚಾಟ್ ಜಿಪಿಟಿಯನ್ನು ಹಿಂದಿಕ್ಕುತ್ತದೆ. ಅರ್ಥಾತ್, ತಾರ್ಕಿಕವಾಗಿ ವಿಷಯ ಸೃಷ್ಟಿಯಲ್ಲಿ ಡೀಪ್ ಸೀಕ್ ಕಂಪನಿಯ R1 ತಂತ್ರಾಂಶವು ಚಾಟ್ ಜಿಪಿಟಿಗಿಂತ ಉತ್ತಮವಾಗಿರುವುದರಿಂದಲೇ ಅಮೆರಿಕದ ಬಳಕೆದಾರರಿಂದ ಈ ಮನ್ನಣೆ ಸಿಕ್ಕಿತು. ಅದು ಕತೆಯ ಆರಂಭ ಮಾತ್ರ. 

ಒಪನ್ ಎಐಗೆ ಹೋಲಿಸಿದರೆ ಇದು ಶೇ. 10ರಿಂದ 20 ಪಟ್ಟು ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಂಡಿರುವುದಾಗಿ ಡೀಪ್ ಸೀಕ್ ಹೇಳಿಕೊಂಡಿತು. ಅದಕ್ಕಿಂತ ಮುಖ್ಯವಾಗಿ, ಈ ಎಐ ತಂತ್ರಾಂಶದ ಅಭಿವೃದ್ಧಿಗೆ ಬೇಕಾದ ಗ್ರಾಫಿಕ್ ಪ್ರಾಸೆಸಿಂಗ್ ಯುನಿಟ್ ಗಳಲ್ಲಿ ಬಳಸಿರುವ ಚಿಪ್ ಹಳೆಯ ವಿನ್ಯಾಸದ್ದೇ ಹೊರತು, Nvidiaದ ಸುಧಾರಿತ ಚಿಪ್ ಗಳು ಅಲ್ಲ ಎಂದು ಡೀಪ್ ಸೀಕ್ ಹೇಳಿತು. ಇದೊಂದು ಹೇಳಿಕೆಯೇ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ‘ರಕ್ತಪಾತ’ವನ್ನೇ ಮಾಡಿಬಿಟ್ಟಿತು. ಯಾವ ಎನ್ವಿಡಿಯಾ ಕಂಪನಿ ಎಐಗೆ ಬೇಕಾದ ಚಿಪ್ ತಯಾರಿಕೆಯಲ್ಲಿನ ನಾಯಕತ್ವದ ಕಾರಣದಿಂದ ಜಗತ್ತಿನ ಅತಿ ಮೌಲ್ಯಯುತ ಕಂಪನಿಗಳಲ್ಲಿ ಒಂದಾಗಿತ್ತೋ, ಅದರ ಕಿರೀಟವು ಕಳಚಿ, ಒಂದೇ ದಿನದಲ್ಲಿ ಹತ್ತಿರ-ಹತ್ತಿರ 600 ಬಿಲಿಯನ್ ಡಾಲರ್ ಮೌಲ್ಯವನ್ನು ಕಳೆದುಕೊಂಡ ಕಂಪನಿ ಎಂದು ಇತಿಹಾಸದಲ್ಲಿ ಹೆಸರು ಬರೆಸಿಕೊಂಡಿತು. 

ಚಿಪ್ ಯುದ್ಧವನ್ನೇ ಬದಲಿಸಿಬಿಟ್ಟಿರುವ ಚೀನಾದ ಯಶಸ್ಸು

ಇತ್ತೀಚಿನ ವರ್ಷಗಳಲ್ಲಿ ಚೀನಾವು ಬ್ಯಾಟರಿ ತಂತ್ರಜ್ಞಾನಕ್ಕೆ ಬೇಕಾದ ಲೀಥಿಯಂ ಥರದ ಅಪರೂಪದ ಸಂಪನ್ಮೂಲದ ಕ್ರೋಢೀಕರಣದಲ್ಲಿ ಮೇಲುಗೈ ಸಾಧಿಸಿಕೊಂಡಿತ್ತು. ಇದರದ್ದೇ ಮುಂದುವರಿದ ಭಾಗವಾಗಿ ಯಂತ್ರ ಕಲಿಕೆ ಆಧಾರದಲ್ಲಿ ಸ್ವಯಂಚಾಲಿತ- ಚಾಲಕರಹಿತ ವಾಹನಗಳ ತಂತ್ರಜ್ಞಾನದ ಅನ್ವೇಷಣೆಯಲ್ಲೂ ಅಮೆರಿಕದ ಟೆಸ್ಲಾದಂಥ ಕಂಪನಿಗಳಿಗೆ ಪೈಪೋಟಿ ಕೊಟ್ಟುಕೊಂಡಿತ್ತು. ಆದರೆ, ಇಂಥ ಎಲ್ಲ ತಂತ್ರಜ್ಞಾನಗಳ ಮುಂದುವರಿಕೆಗೆ ಬೇಕಿದ್ದದ್ದು ಅತಿಸೂಕ್ಷ್ಮ ವಿನ್ಯಾಸದ ಚಿಪ್ -ಸೆಮಿಕಂಡಕ್ಟರ್ ಗಳು. ಯಾವುದೇ ಎಐ ಮಾದರಿಯ ಅಭಿವೃದ್ಧಿಗೆ ದೊಡ್ಡಮಟ್ಟದ ಮಾಹಿತಿ ಸಂಸ್ಕರಣ ಕೇಂದ್ರಗಳು ಬೇಕಾಗುತ್ತವೆ. ಮುಖ್ಯವಾಗಿ ಅವು ನಿಂತಿರುವುದು ಅತಿವೇಗದಲ್ಲಿ ಲೆಕ್ಕಾಚಾರ -ಮಾಹಿತಿ ಸಂಸ್ಕರಣೆಗಳನ್ನು ಮಾಡಬಲ್ಲ ಗ್ರಾಫಿಕ್ ಪ್ರಾಸೆಸಿಂಗ್ ಯೂನಿಟ್ ಗಳ ಮೇಲೆ. ಈ ಜಿಪಿಯುಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಚಿಪ್ ಗಳನ್ನು ಅಳವಡಿಸಬೇಕಿರುತ್ತದೆ.

ಇಂಥದೊಂದು ಚಿಪ್ ತಯಾರಿಕೆಯಲ್ಲಿ ಜಾಗತಿಕ ಮುಂಚೂಣಿ ಕಾಯ್ದುಕೊಂಡಿರುವುದು ಅಮೆರಿಕದ ಎನ್ವಿಡಿಯ. ಇನ್ನು, ಚಿಪ್ ಹಾಗೂ ಸೆಮಿಕಂಡಕ್ಟರ್ ವಿನ್ಯಾಸಗಳಲ್ಲಿ ಅಗ್ರಗಣ್ಯ ಎನಿಸಿರುವುದು ತೈವಾನ್. ಚೀನಾವು ಯಾವತ್ತಿಗೂ ಇದನ್ನು ತನ್ನ ಭಾಗವೆಂದೇ ಪ್ರತಿಪಾದಿಸಿಕೊಂಡುಬಂದಿದೆ. ಆದರೆ ರಕ್ಷಣಾ ವಿಭಾಗದಲ್ಲಿ ಅಮೆರಿಕವು ತೈವಾನಿಗೆ ನೀಡಿರುವ ಶ್ರೀರಕ್ಷೆಯಿಂದಾಗಿ ಚೀನಾವು ಅದನ್ನು ಆಕ್ರಮಿಸುವ ಸಾಹಸಕ್ಕಿನ್ನೂ ಹೋಗಿಲ್ಲ. ಅಮೆರಿಕದ ಎಐ ತಂತ್ರಜ್ಞಾನಕ್ಕೆ ಮುಖ್ಯ ಪೂರೈಕೆ ಜಾಲವಾಗಿರುವ ತೈವಾನ್ ಮೇಲೆ ಇಂದಲ್ಲ ನಾಳೆ ಚೀನಾವು ಮಿಲಿಟರಿ ದಾಳಿ ಮಾಡಬಹುದು ಹಾಗೂ ಇದರಲ್ಲಿ ಅಮೆರಿಕದ ಪ್ರತಿಕ್ರಿಯೆ ಆಧರಿಸಿ ಇದೊಂದು ವೈಶ್ವಿಕ ಸಂಘರ್ಷವೇ ಆಗಿಬಿಡಬಹುದು ಎಂದೆಲ್ಲ ಈವರೆಗೆ ವಿಶ್ಲೇಷಣೆಗಳಿದ್ದವು.

ಅತ್ತ, ಅಮೆರಿಕವು ತೈವಾನ್ ಹಾಗೂ ಅಮೆರಿಕದ ಚಿಪ್ ವಿನ್ಯಾಸದ ಕಂಪನಿಗಳು ತಮ್ಮ ಅತಿ ಸುಧಾರಿತ ಕ್ಷಮತೆಯ ಚಿಪ್ ಗಳನ್ನು ಚೀನಾಕ್ಕೆ ಮಾರುವುದನ್ನು ಪ್ರತಿಬಂಧಿಸುವ ಮೂಲಕ ಆ ದೇಶದ ಎಐ ಅಭಿವೃದ್ಧಿಯನ್ನು ತಡೆಯುವ ಜಾಗತಿಕ ಆಟವೊಂದನ್ನು ಹೆಣೆದಿತ್ತು. ಅಲ್ಲದೇ, ಎನ್ವಿಡಿಯಾ ಆಗಲೀ ಮತ್ಯಾವುದೇ ಕಂಪನಿ ಆಗಲೀ ಚಿಪ್ ವಿನ್ಯಾಸಕ್ಕೆ ಬಳಸುವ ಯಂತ್ರವನ್ನು ಜಗತ್ತಿನ ಏಕಮೇವ ಮೂಲದಿಂದ ಪಡೆಯುವ ಸ್ಥಿತಿ ಇವತ್ತಿಗೂ ಇದೆ. ಅದೆಂದರೆ ಡಚ್ ಕಂಪನಿ ಎಎಸ್ಎಮ್ಎಲ್. ಇಲ್ಲೂ ಸಹ ಪಾಶ್ಚಾತ್ಯ ನಿಯಂತ್ರಣವೇ ಇದ್ದಿದ್ದರಿಂದ ಚೀನಾಕ್ಕೆ ಎಐ ಅಭಿವೃದ್ಧಿಯಲ್ಲಿ ಹಿನ್ನಡೆ ಆಗಿತ್ತು.

China's Deekseek- India (file pic)
Maha Kumbh 2025: ಕುಂಭಮೇಳ ಬಗ್ಗೆ "ಬುದ್ಧಿಜೀವಿ" ವಿಶ್ಲೇಷಣೆಗಳಿಗೆ ಪ್ರತಿಕ್ರಿಯೆ ಬೇಕಿಲ್ಲ, ಆದರೆ… (ತೆರೆದ ಕಿಟಕಿ)

ಆದರೀಗ, ಎಐ ತಂತ್ರಾಂಶ ಅಭಿವೃದ್ಧಿ ಹಾಗೂ ಯಂತ್ರ ಕಲಿಕೆಗಳಿಗೆ ವಾಸ್ತವದಲ್ಲಿ ಅಷ್ಟು ಸುಧಾರಿತ ಚಿಪ್ ಗಳ ಅವಶ್ಯವೇ ಇಲ್ಲ ಎಂದು ಸಾಧಿಸುವ ಮೂಲಕ ಚೀನಾವು ಈ ಚಿಪ್ ಯುದ್ಧದ ಸನ್ನಿವೇಶವನ್ನೇ ಬದಲಿಸಿಬಿಟ್ಟಿದೆ. ಎಐ ಚಿಪ್-ಡೇಟಾ ಸೆಂಟರ್ ಮೂಲಸೌಕರ್ಯಾಭಿವೃದ್ಧಿಗೆ ನೂರಾರು ಕೋಟಿ ಡಾಲರುಗಳನ್ನು ನೀರಿನಂತೆ ಖರ್ಚು ಮಾಡುತ್ತಿದ್ದ ಅಮೆರಿಕದ ತಂತ್ರಜ್ಞಾನ ದಿಗ್ಗಜರೆಲ್ಲ ಈಗ ತಾತ್ಕಾಲಿಕವಾಗಿ ಮುಗ್ಗರಿಸಿವೆ. ಹಾಗೆಂದೇ ಅಮೆರಿಕದ ಶೇರು ಮಾರುಕಟ್ಟೆಯಲ್ಲಿ ಕೇವಲ ಎನ್ವಿಡಿಯಾ ಮಾತ್ರವಲ್ಲದೇ ಮೆಟಾ, ಅಲ್ಪಾಬೆಟ್, ಮೈಕ್ರೊಸಾಫ್ಟ್ ಎಲ್ಲದರ ಶೇರುಮೌಲ್ಯಗಳೂ ಆಘಾತ ಕಂಡವು. ಖುದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಅಮೆರಿಕದ ತಂತ್ರಜ್ಞಾನ ಉದ್ದಿಮೆಗಳು ಇದನ್ನೊಂದು ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಬೇಕು” ಎಂದಿರುವುದು ಚೀನಾದ ಯಶಸ್ಸನ್ನು ಪುಷ್ಟೀಕರಿಸುವಂತಿದೆ. 

ಭಾರತ ಆಯ್ದುಕೊಳ್ಳಬೇಕಾದ ಪಾಠವೇನು?

ಸದ್ಯದ ಎಐ ತಂತ್ರಜ್ಞಾನ ಪೈಪೋಟಿಯಲ್ಲಿ ಅಮೆರಿಕ-ಚೀನಾಗಳಿಗೆ ಹೋಲಿಕೆಯಾಗಬಲ್ಲ ಯಾವ ಹಂತವನ್ನೂ ಭಾರತ ತಲುಪಿಲ್ಲ. ಆದರೆ, ಅನ್ವೇಷಣಾಮತಿಯನ್ನು ದುಡಿಸಿಕೊಂಡಿದ್ದೇ ಆದರೆ ಈಗಿರುವ ಎಲ್ಲ ಸಮೀಕರಣಗಳ ಹೊರಗಿದ್ದುಕೊಂಡೂ ಅನೂಹ್ಯ ರೀತಿಯಲ್ಲಿ ಸ್ಪರ್ಧಾಕಣವನ್ನು ಪ್ರವೇಶಿಸಿಬಿಡಬಹುದು ಎಂಬುದನ್ನು ಚೀನಾದ ಡೀಪ್ ಸೀಕ್ ತೋರಿಸಿಕೊಟ್ಟಿದೆ. ಇವಕ್ಕೆಲ್ಲ ಬೇಕಿರುವುದು ರೀಸರ್ಚ್ ಆ್ಯಂಡ್ ಡಿವಲಪ್ಮೆಂಟ್ ವಿಭಾಗದಲ್ಲಿ ತುಡಿತ. ಭಾರತದ ತಂತ್ರಜ್ಞಾನ ವಲಯ, ಕಲಿಕಾ ಕೇಂದ್ರಗಳು, ಹಾಗೂ ಸಾರ್ವಜನಿಕ ಜನಮಾನಸದಲ್ಲಿ ಹೀಗೊಂದು ಸಂಶೋಧನೆ ಮತ್ತು ಅಭಿವೃದ್ಧಿಗೆ ಬೇಕಾದ ತಪಸ್ಸಿನ ಕೊರತೆ ಕಾಣುತ್ತಿದೆ. 

ಇತ್ತೀಚಿನ ದಶಕಗಳಲ್ಲಿ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಚೀನಾವು ತನ್ನ ಪಾಲನ್ನು ಪಡೆದುಕೊಂಡಿದ್ದು ವಸ್ತು ಉತ್ಪಾದನೆಯಲ್ಲಿ ಜಗತ್ತಿನ ಕಾರ್ಖಾನೆ ತಾನಾಗುವುದರ ಮೂಲಕ. ಇತ್ತ, ಭಾರತ ಸಹ ಸಾಫ್ಟ್ವೇರ್ ಸೇವೆಯ ರಫ್ತಿನಲ್ಲಿ ಜಗತ್ತಿನ ಫ್ಯಾಕ್ಟರಿ ತಾನೆಂಬ ರೀತಿಯಲ್ಲಿ ಸ್ಥಾನ ಸೃಷ್ಟಿಸಿಕೊಂಡಿತು. ಇವೆರಡೂ ಆಯಾ ದೇಶಗಳಿಗೆ ಒಂದು ಹಂತದಲ್ಲಿ ಅಗತ್ಯವಿದ್ದ ಸಂಗತಿಗಳೇ. ಜಗತ್ತಿಗೆ ನಾವು ಕೂಲಿಗಳಾಗಿಬಿಟ್ಟೆವು ಎಂದು ಪ್ರಾರಂಭಿಕ ಹಂತದಲ್ಲೇ ಈ ಮಾದರಿಗಳನ್ನು ಜರೆಯುವುದರಲ್ಲಿ ಅರ್ಥವಿಲ್ಲ.

ಆದರೆ ಆಳಾಗಿದ್ದವನು ತನ್ನ ಕೌಶಲವೃದ್ಧಿ ಮೂಲಕ ಅರಸನಾಗುವ ಹಾದಿಯಲ್ಲಿ ಸಾಗಬೇಕಲ್ಲ. ಈ ನಿಟ್ಟಿನಲ್ಲಿ ಚೀನಾಕ್ಕಿರುವ ತೀವ್ರ ತುಡಿತ ಭಾರತದಲ್ಲಿ ಕಾಣುತ್ತಿಲ್ಲ. ತಾನು ಕಡಿಮೆ ದರದಲ್ಲಿ ವಸ್ತುಗಳನ್ನು ಉತ್ಪಾದಿಸಿಕೊಡುವುದರ ಮೂಲಕವೇ ಆರ್ಥಿಕ ಪ್ರಾಬಲ್ಯ ಮೆರೆಯುವನೆಂಬ ಸೂತ್ರಕ್ಕೆ ಈಗಲೂ ಚೀನಾ ಜೋತುಬಿದ್ದಿದ್ದರೆ ಅಮೆರಿಕವು ಶುರುಮಾಡಿರುವ ವ್ಯಾಪಾರ ಯುದ್ಧವು, ಹಲವು ಬಗೆಯ ಪ್ರತಿಬಂಧಗಳ ಮೂಲಕ ಚೀನಾವನ್ನು ಬಡವಾಗಿಸಿಬಿಡುತ್ತಿತ್ತು. ಸೂಕ್ತ ಸಮಯಕ್ಕೆ ಚೀನಾ ಎಐ ಥರದ ಮೂಲ ತಂತ್ರಜ್ಞಾನಾಭಿವೃದ್ಧಿಯಲ್ಲಿ ಜಲಕ್ ತೋರಿಸಿ ಜಾಗತಿಕ ಆರ್ಥಿಕ ಕಥನದಲ್ಲಿ ತನ್ನನ್ನು ತಾನು ಪ್ರಸ್ತುತವನ್ನಾಗಿಸಿಕೊಂಡಿದೆ.

ಇತ್ತ, ಭಾರತದಲ್ಲಿ ಸಾಫ್ಟ್ವೇರ್ ಕಂಪನಿಗಳಿಗೆ ಭವಿಷ್ಯದ ಎಐ ಚಿತ್ರಣವು ಗೋಡೆ ಬರಹದಷ್ಟೇ ಸ್ಪಷ್ಟವಾಗಿದೆಯಾದರೂ ನಮ್ಮದೇ ಉತ್ಪನ್ನಗಳನ್ನು ಸೃಷ್ಟಿಸಿ ಹೊಸ ಆಟದಲ್ಲಿ ಭಾಗಿಯಾಗುವ ಕ್ಷಮತೆ ಕಾಣುತ್ತಿಲ್ಲ. ಅದಾಗಲೇ ಇರುವ ಮಾದರಿಯಲ್ಲೇ ಉದ್ಯೋಗ ಕಡಿತದ ಮೂಲಕವೋ, ಡಾಲರ್ ವಿನಿಮಯದ ಆಟದಲ್ಲೋ ಹೆಚ್ಚಿನ ಆದಾಯ ಮತ್ತು ಲಾಭಗಳನ್ನು ತೋರಿಸಿ ಶೇರುಮೌಲ್ಯ ಹೆಚ್ಚಿಸಿಕೊಳ್ಳುವುದರಲ್ಲಿ ಮಾತ್ರವೆ ಹೆಚ್ಚಿನವರು ಆಸಕ್ತರಾಗಿರುವಂತಿದೆ. 2025ರ ವಿತ್ತೀಯ ವರ್ಷದಲ್ಲಿ ಇನ್ಫೊಸಿಸ್ ನ ಲಾಭ 6,086 ಕೋಟಿ ರುಪಾಯಿಗಳು. ಹಿಂದಿನ ವಿತ್ತೀಯ ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದ ಫಲಿತಾಂಶಕ್ಕೆ ಹೋಲಿಸಿದರೆ ಇದು ಶೇ. 11ರ ಬೆಳವಣಿಗೆ. ಇದೇ ಅವಧಿಯಲ್ಲಿ ವಿಪ್ರೊದ ಕ್ರೋಢೀಕೃತ ನೆಟ್ ಪ್ರಾಫಿಟ್ 3,353 ಕೋಟಿ ರುಪಾಯಿಗಳಷ್ಟಾಗಿದ್ದು ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸುಮಾರು ಶೇ. 24ರಷ್ಟು ಏರಿಕೆ. ಇವೆಲ್ಲ ಖುಷಿಯ ಸಂಗತಿಗಳೇ ಆದರೂ ಈ ಲಾಭವನ್ನು ರೀಸರ್ಚ್ ಮತ್ತು ಡೆವಲಪ್ಮೆಂಟ್ ವಿಭಾಗದಲ್ಲಿ ಶಿಸ್ತುಬದ್ಧವಾಗಿ ವ್ಯಯಿಸಿದರೆ ಮಾತ್ರವೇ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತವೆ, ಚೀನಾದ ಡೀಪ್ ಸೀಕ್ ಥರದಲ್ಲೇ ಇಲ್ಲಿಯೂ ಯಾವುದೋ ಅಚ್ಚರಿ ಅನಾವರಣವಾಗಬಹುದು. ಆದರೆ ಈ ನಿಟ್ಟಿನಲ್ಲಿ ಸದ್ಯಕ್ಕಂತೂ ಸಮಾಧಾನಕರ ಉತ್ತರಗಳು ಸಿಗುತ್ತಿಲ್ಲ. 

ಈ ಕಂಪನಿಗಳನ್ನು ಕೇವಲ ಉದಾಹರಣೆ ನಿಮಿತ್ತವಾಗಿ ತೆಗೆದುಕೊಳ್ಳಲಾಗಿದೆ. ಹಾಗೆ ನೋಡಿದರೆ ಭಾರತದ ಅಕಾಡೆಮಿಕ್ ವಲಯವೂ ರೀಸರ್ಚ್ ವಿಚಾರದಲ್ಲಿ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಸಾರ್ವಜನಿಕರಾಗಿ ನಮ್ಮ ಜನಮಾನಸದ ಮಟ್ಟವೂ ಅಷ್ಟರಲ್ಲೇ ಇದೆ. ರೀಲ್ಸ್ ಮತ್ತು ಟಿವಿ ರಿಯಾಲಿಟಿ ಶೋಗಳನ್ನೇ ಚರ್ಚಿಸಿಕೊಂಡಿರುವ ನಮ್ಮಂತಹ ಜನಸಮೂಹದಿಂದ ಮಹಾಅನ್ವೇಷಣೆಗಳು ಸಾಕಾರವಾಗಲು, ಅಂಥದೊಂದು ವಾತಾವರಣ ನಿರ್ಮಿತಗೊಳ್ಳಲು ಸಾಧ್ಯವೇ? ವಿಜ್ಞಾನಿಗಳು, ಅನ್ವೇಷಕರು, ಸಂಶೋಧಕರು ಇವರೆಲ್ಲ ನಮಗೆ ಹೀರೋಗಳು ಆಗುವುದು ಯಾವಾಗ ಎಂಬ ಪ್ರಶ್ನೆಯೂ ಇಲ್ಲಿ ಮುಖ್ಯವಾಗುತ್ತದೆ. 

ಇತ್ತೀಚೆಗೆ ಭಾರತದ ಸಾಫ್ಟ್ವೇರ್ ಪ್ರಾಡಕ್ಟ್ ಕಂಪನಿಯಾಗಿರುವ ಜೊಹೊದ ಶ್ರೀಧರ ವೆಂಬು ಸಿಇಒ ಸ್ಥಾನದಿಂದ ನಿರ್ಗಮಿಸಿದ್ದಾರೆ. ಆ ಜಾಗಕ್ಕೆ ಬೇರೆಯವರನ್ನು ನೇಮಿಸಿ, ತಮ್ಮನ್ನು ತಾವು ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ “ಚೀಫ್ ಸೈಂಟಿಸ್ಟ್” ವಿಭಾಗದಲ್ಲಿ ಇರಿಸಿಕೊಂಡಿರುವ ವೆಂಬು, ಬದಲಾಗುತ್ತಿರುವ ಎಐ ಕೇಂದ್ರಿತ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಕಂಪನಿಗಳು ಪ್ರಸ್ತುತತೆ ಉಳಿಸಿಕೊಳ್ಳಬೇಕಿದ್ದರೇ ಇದುವೇ ಮಾರ್ಗ ಎಂದು ಹೇಳಿದ್ದಾರೆ.  ಇಂಥ ಉದಾಹರಣೆಗಳು ಭಾರತದಲ್ಲಿ ಹೆಚ್ಚಾದರಷ್ಟೇ ವಿಕಸಿತ ಭಾರತದ ಸ್ವಪ್ನ ಸಾಕಾರವಾದೀತು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com