Narendra Modi- Donald Trump (file pic)
ನರೇಂದ್ರ ಮೋದಿ- ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)online desk

ಡೊನಾಲ್ಡ್ ಟ್ರಂಪ್ 100% ಸುಂಕಾಘಾತ: ಎದುರಿಸಲು ಶಕ್ತವಾಗಿದೆಯೇ ಭಾರತ? (ಜಾಗತಿಕ ಜಗಲಿ)

ಯುರೋಪ್ ಮತ್ತು ಭಾರತ ಸಾಕಷ್ಟು ಸಮಾನ ಗುರಿಗಳನ್ನು ಹೊಂದಿದ್ದು, ಚೀನಾದ ಬದಲಿಗೆ ಪಾಶ್ಚಾತ್ಯ ನೇತೃತ್ವದ ಜಾಗತಿಕ ವ್ಯವಸ್ಥೆಗೆ ಬೆಂಬಲ ನೀಡುತ್ತಿವೆ.
Published on

ಭಾರತದ ಕುರಿತ ತನ್ನ ಟೀಕೆಗಳನ್ನು ಕಡಿಮೆಗೊಳಿಸಿ, ಕೊಂಚ ಮೃದು ಧೋರಣೆ ಹೊಂದಿದಂತೆ ಕಂಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗ ಯುರೋಪಿಯನ್ ಒಕ್ಕೂಟ, ಜಿ7 ಮತ್ತು ಅಮೆರಿಕಾಗಳಿಗೆ ಭಾರತ ಮತ್ತು ಚೀನಾಗಳ ಮೇಲೆ 100% ಸುಂಕ ವಿಧಿಸುವಂತೆ ಆಗ್ರಹಿಸಿದ್ದಾರೆ. ಭಾರತ ಮತ್ತು ಚೀನಾಗಳು ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವುದಕ್ಕೆ ಈ ಕ್ರಮ ಎಂದು ಟ್ರಂಪ್ ಹೇಳಿದ್ದಾರೆ.

ಒಂದು ವೇಳೆ ಯುರೋಪ್ ಏನಾದರೂ ಮೊದಲು ಭಾರತ ಮತ್ತು ಚೀನಾಗಳ ಮೇಲೆ ಸುಂಕ ವಿಧಿಸಿದರೆ, ಅಮೆರಿಕಾ ಸಹ ಅದೇ ಪ್ರಮಾಣದ ಸುಂಕವನ್ನು ವಿಧಿಸುವುದಾಗಿ ಟ್ರಂಪ್ ಹೇಳಿದ್ದಾರೆ.

ಆದರೆ, ಟ್ರಂಪ್ ಹಂಚಿಕೆ ನಿಜಕ್ಕೂ ಕಾರ್ಯರೂಪಕ್ಕೆ ಬರುತ್ತದೆಯೇ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಜಿ7 ದೇಶಗಳು ಜಗತ್ತಿನ ಏಳು ಪ್ರಮುಖ, ಆಧುನಿಕ ಆರ್ಥಿಕತೆಗಳಾದ ಅಮೆರಿಕಾ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಫ್ರಾನ್ಸ್, ಇಟಲಿ, ಮತ್ತು ಜಪಾನ್‌ಗಳನ್ನು ಒಳಗೊಂಡಿದೆ. ಈ ದೇಶಗಳು ಜಾಗತಿಕ ವ್ಯಾಪಾರ, ಭದ್ರತೆ, ಆರ್ಥಿಕತೆ ಮತ್ತು ಅಭಿವೃದ್ಧಿ ವಿಚಾರಗಳಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸುತ್ತವೆ.

ಆದರೆ ವಾಸ್ತವವಾಗಿ, ಯುರೋಪಿಯನ್ ಒಕ್ಕೂಟ ತನಗೆ ಭಾರತದೊಡನೆ ಆತ್ಮೀಯವಾದ, ಬಲವಾದ ಸಹಯೋಗ ಹೊಂದುವ ಇಚ್ಛೆಯಿದೆ ಎಂದಿದ್ದು, ಈಗ ಅಮೆರಿಕಾ ಮತ್ತು ಚೀನಾಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿರುವಾಗ ಐರೋಪ್ಯ ಒಕ್ಕೂಟಕ್ಕೆ ಭಾರತದೊಡನೆ ಸಹಭಾಗಿತ್ವ ಮುಖ್ಯವಾಗಿದೆ.

ಐರೋಪ್ಯ ಒಕ್ಕೂಟ ಅಮೆರಿಕಾ - ಚೀನಾ ಅಂತರವನ್ನು ತಗ್ಗಿಸುವ ಗುಂಪುಗಳನ್ನು ನಿರ್ಮಿಸುವ ಬಯಕೆ ಹೊಂದಿದೆ. ಯುರೋಪ್ ತನ್ನ ಭದ್ರತೆ ಮತ್ತು ಆರ್ಥಿಕತೆಗಾಗಿ ಅಮೆರಿಕಾ ಮೇಲೆ ಅವಲಂಬನೆ ಹೊಂದಿದ್ದರೆ, ಚೀನಾದ ಜೊತೆ ಆಳವಾದ ವ್ಯಾಪಾರ ಸಂಬಂಧ ಹೊಂದಿದೆ.

ಯುರೋಪ್ ಮತ್ತು ಭಾರತ ಸಾಕಷ್ಟು ಸಮಾನ ಗುರಿಗಳನ್ನು ಹೊಂದಿದ್ದು, ಚೀನಾದ ಬದಲಿಗೆ ಪಾಶ್ಚಾತ್ಯ ನೇತೃತ್ವದ ಜಾಗತಿಕ ವ್ಯವಸ್ಥೆಗೆ ಬೆಂಬಲ ನೀಡುತ್ತಿವೆ.

ಐರೋಪ್ಯ ಒಕ್ಕೂಟ ಭಾರತದ ಎರಡನೇ ಅತಿದೊಡ್ಡ ವ್ಯಾಪಾರ ಸಹಯೋಗಿಯಾಗಿದ್ದು, ಭಾರತದ 10% ವ್ಯಾಪಾರ ಯುರೋಪಿಯನ್ ಒಕ್ಕೂಟದ ಜೊತೆಗೆ ನಡೆಯುತ್ತದೆ. ಈ ವ್ಯಾಪಾರವನ್ನು ಇನ್ನಷ್ಟು ವೃದ್ಧಿಸಲು ಸಾಕಷ್ಟು ಅವಕಾಶಗಳಿವೆ.

ಅದನ್ನು ಸಾಧಿಸಬೇಕಾದರೆ, ಭಾರತ ಮತ್ತು ಐರೋಪ್ಯ ಒಕ್ಕೂಟಗಳೆರಡೂ ಮುಕ್ತ ವ್ಯಾಪಾರ ಒಪ್ಪಂದವ‌ನ್ನು ನಿಧಾನಗೊಳಿಸಿರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬೇಕು. ಅದಕ್ಕಾಗಿ, ಐರೋಪ್ಯ ಒಕ್ಕೂಟದ ವ್ಯಾಪಾರ ಆಯುಕ್ತರಾದ ಮಾರೊಸ್ ಸೆಫ್ಕೊವಿಚ್ ಅವರು ಭಾರತದ ವಾಣಿಜ್ಯ ಸಚಿವರಾದ ಪಿಯೂಷ್ ಗೋಯಲ್ ಅವರನ್ನು ನವದೆಹಲಿಯಲ್ಲಿ ಸೆಪ್ಟೆಂಬರ್ 12ರಂದು ಭೇಟಿಯಾಗಿದ್ದಾರೆ.

ಯುರೋಪಿನ ಸರಾಸರಿ ವಯಸ್ಸು ಹೆಚ್ಚಾಗುತ್ತಿದ್ದು, ಅಲ್ಲಿಗೆ ಭಾರತ ಕುಶಲ ಉದ್ಯೋಗಿಗಳನ್ನು ಒದಗಿಸಬಲ್ಲದು. ಬಹಳಷ್ಟು ಮಧ್ಯಮ ಗಾತ್ರದ ಯುರೋಪಿಯನ್ ಕಂಪನಿಗಳು, ಅದರಲ್ಲೂ ಫಿನ್‌ಟೆಕ್ (ಹಣಕಾಸು ತಂತ್ರಜ್ಞಾನ) ಮತ್ತು ಸಂಶೋಧನಾ ಕಂಪನಿಗಳು ಭಾರತವನ್ನು ಉತ್ತಮ ಸಹಯೋಗಿಯಾಗಿ ಪರಿಗಣಿಸಿವೆ. ಯುರೋಪಿನ ರಕ್ಷಣಾ ಉದ್ಯಮದೊಡನೆಯೂ ಭಾರತಕ್ಕೆ ಸಹಯೋಗ ಹೊಂದುವ ಅವಕಾಶಗಳಿವೆ.

ರಷ್ಯನ್ ತೈಲ ಆಮದು ಮುಂದುವರಿಸುವುದಕ್ಕೆ ಶಿಕ್ಷೆಯ ರೂಪದಲ್ಲಿ ಭಾರತದ ಮೇಲೆ 100% ಹೆಚ್ಚುವರಿ ತೆರಿಗೆ (ಸುಂಕ) ವಿಧಿಸಬೇಕೆಂದು ಟ್ರಂಪ್ ಆಗ್ರಹಿಸುತ್ತಿದ್ದಾರೆ. ಅವರು ಭಾರತ ಮತ್ತು ಅಮೆರಿಕಾಗಳ ನಡುವಿನ ಮುಂದಿನ ಸುತ್ತಿನ ವ್ಯಾಪಾರ ಮಾತುಕತೆಗೆ ಮುನ್ನ ಭಾರತದ ಮೇಲೆ ಒತ್ತಡ ಹೇರುವ ಸಲುವಾಗಿ ಈ ಬೇಡಿಕೆ ಇರಿಸಿದ್ದಾರೆ.

ಕಳೆದ ತಿಂಗಳು, ಭಾರತ ತನ್ನ ಪ್ರಮುಖ ನಿಯಮಗಳು ಮತ್ತು ಮಿತಿಗಳಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲದ ಕಾರಣ ಅಮೆರಿಕಾ ಜೊತೆಗಿನ ವ್ಯಾಪಾರ ಮಾತುಕತೆಗಳನ್ನು ನಿಲ್ಲಿಸಿತ್ತು. ಈಗ ಟ್ರಂಪ್ ಇನ್ನಷ್ಟು ಸುಂಕದ ಬೆದರಿಕೆ ಒಡ್ಡಿ, ಭಾರತದ ಮೇಲೆ ಭಾರೀ ಒತ್ತಡ ಸೃಷ್ಟಿಸಲು ಪ್ರಯತ್ನ ಮುಂದುವರಿಸಿದ್ದಾರೆ.

ಇದು ಟ್ರಂಪ್ ಅವರ ಸಾಮಾನ್ಯವಾದ ಕಾರ್ಯ ವಿಧಾನವೇ ಹೌದು. ಅಂದರೆ, ಯಾವುದಾದರೂ ದೇಶದ ಮೇಲೆ ಅಪಾರ ಒತ್ತಡ ಸೃಷ್ಟಿಸಿ, ಆ ದೇಶ ಆತಂಕಕ್ಕೆ ಒಳಗಾಗಿ, ತಾನಾಗಿ ಮಾತುಕತೆಗೆ ಮುಂದೆ ಬರುವಂತೆ ಮಾಡುವುದು ಟ್ರಂಪ್ ಕಾರ್ಯತಂತ್ರ. ಈ ಪ್ರಕರಣದಲ್ಲಿ, ಶ್ವೇತ ಭವನ ತಾನು ಯಾವ ವಿಚಾರದಲ್ಲಿ ರಾಜಿಯಾಗಲು ಸಿದ್ಧವಿಲ್ಲ (ರೆಡ್ ಲೈನ್ಸ್) ಎನ್ನುವುದನ್ನು ಈ ಮೂಲಕ ಭಾರತಕ್ಕೆ ತಿಳಿಸುತ್ತಿರುವ ಸಾಧ್ಯತೆಗಳೂ ಇವೆ. ರಷ್ಯಾದಿಂದ ಭಾರತ ತೈಲ ಆಮದು ಮಾಡುವುದನ್ನೇ ಗುರಿಯಾಗಿಸಿಕೊಂಡು, ಅಮೆರಿಕಾ ಭಾರತದ ಜೊತೆಗಿನ ಮುಂದಿನ ಮಾತುಕತೆಗಳಿಗೆ ಸಿದ್ಧವಾಗುವ ಸಾಧ್ಯತೆಗಳಿವೆ.

ಡೊನಾಲ್ಡ್ ಟ್ರಂಪ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ, ಭಾರತಕ್ಕೆ ಅಮೆರಿಕಾದ ಮುಂದಿನ ರಾಯಭಾರಿಯಾಗಿ ಸೂಚಿಸಲ್ಪಟ್ಟಿರುವ, ಸರ್ಜಿಯೊ ಗೋರ್ ಅವರು ಸೆಪ್ಟೆಂಬರ್ 11, ಗುರುವಾರದಂದು ಭಾರತದ ಜೊತೆಗಿನ ಸಂಬಂಧದ ಕುರಿತು ಮಾತನಾಡಿದ್ದರು. ಭಾರತ ಮತ್ತು ಅಮೆರಿಕಾ ನಡುವಿನ ವ್ಯಾಪಾರ ವಿಚಾರಗಳು ಮುಂದಿನ ವಾರಗಳಲ್ಲಿ ನಡೆಯುವ ಮಾತುಕತೆಗಳಿಂದ ಪರಿಹಾರ ಕಾಣಬಹುದು ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

Narendra Modi- Donald Trump (file pic)
ಭಾರತದ ಸಾಮರ್ಥ್ಯ ಅರಿಯದೆ, ರಾಜಕೀಯ ಹಿನ್ನಡೆಗೆ ತುತ್ತಾದ 'ದೊಡ್ಡಣ್ಣ' ಅಮೆರಿಕಾ! (ಜಾಗತಿಕ ಜಗಲಿ)

ಆದರೆ, ಬಳಿಕ ಈ ಕುರಿತು ಮಾತನಾಡಿದ ಅವರು ಭಾರತದ ಜೊತೆಗೆ ವ್ಯಾಪಾರ ಒಪ್ಪಂದ ಏರ್ಪಡಬೇಕಾದರೆ, ಭಾರತ ಮೊದಲು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದ ಒಟ್ಟಾರೆ ತೈಲ ಆಮದಿನ 35 - 40% ತೈಲ ರಷ್ಯಾದಿಂದಲೇ ಆಮದಾಗುತ್ತಿದೆ. ಅಮೆರಿಕಾದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಸಹ ಯಾವುದೇ ಒಪ್ಪಂದ ಏರ್ಪಡಬೇಕಾದರೆ ಭಾರತ ರಷ್ಯನ್ ತೈಲ ಆಮದು ನಿಲ್ಲಿಸುವುದು ಪೂರ್ವ ನಿರ್ಧರಿತ ಷರತ್ತು ಎಂದಿದ್ದಾರೆ.

ಶ್ವೇತ ಭವನ ರಷ್ಯಾದ ತೈಲ ರಫ್ತಿನ ಆದಾಯವನ್ನು ಕಡಿತಗೊಳಿಸಲು ಉದ್ದೇಶಿಸಿದೆ. ಇದರ ಸಂಕೇತ ಎಂಬಂತೆ, ಜಪಾನ್ ರಷ್ಯನ್ ಕಚ್ಚಾ ತೈಲದ ಮೇಲೆ ಪ್ರತಿ ಬ್ಯಾರಲ್‌ಗೆ ಇದ್ದ ಗರಿಷ್ಠ ದರ ಮಿತಿಯನ್ನು 60 ಡಾಲರ್‌ನಿಂದ (5,280 ರೂಪಾಯಿ) 47.60 ಡಾಲರ್‌ಗೆ (4,189) ಇಳಿಸಿದೆ. ಇದಕ್ಕೆ ಕೆಲ ತಿಂಗಳ ಮೊದಲು, ಐರೋಪ್ಯ ಒಕ್ಕೂಟ ಮಾಸ್ಕೋ ಮೇಲಿನ ತನ್ನ 18ನೇ ನಿರ್ಬಂಧದ ಭಾಗವಾಗಿ ಈ ಕ್ರಮವನ್ನು ಕೈಗೊಂಡಿತ್ತು.

ರಷ್ಯಾದಿಂದ ನಡೆಸುತ್ತಿರುವ ತೈಲ ಆಮದು ಮತ್ತು ಅಮೆರಿಕಾದ ಜೊತೆಗಿನ ವ್ಯಾಪಾರ ಮಾತುಕತೆಗಳು ಎರಡು ಭಿನ್ನವಾದ, ಪ್ರತ್ಯೇಕವಾದ ವಿಚಾರಗಳು ಎಂದು ಭಾರತ ಸ್ಪಷ್ಟ ನಿಲುವು ಹೊಂದಿದೆ. ಆದ್ದರಿಂದಲೇ ಟ್ರಂಪ್ ಜಿ7 ಮತ್ತು ಐರೋಪ್ಯ ಒಕ್ಕೂಟಗಳಿಗೆ ಭಾರತದ ಮೇಲೆ ಒತ್ತಡ ಹೇರಲು 100% ಸುಂಕ ವಿಧಿಸುವಂತೆ ಕರೆ ನೀಡುತ್ತಿದ್ದಾರೆ.

ಐರೋಪ್ಯ ಒಕ್ಕೂಟದ ಪ್ರಧಾನ ಕಚೇರಿ ಇರುವ ಬ್ರುಸೆಲ್ಸ್ ನಲ್ಲಿ ಯುರೋಪಿಯನ್ ನಾಯಕರು ಉಕ್ರೇನಿನಲ್ಲಿ ಯುದ್ಧ ನಡೆಸುವ ರಷ್ಯಾದ ಆದಾಯವನ್ನು ಕಡಿಮೆಗೊಳಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಟ್ರಂಪ್ ವ್ಯಾಪಾರದ ಕ್ರಮಗಳು ಭಾರತದ ಜೊತೆಗಿನ ಯುರೋಪ್ ಸಂಬಂಧಕ್ಕೆ ಧಕ್ಕೆ ಉಂಟುಮಾಡುವುದು ಅವರಿಗೆ ಬೇಕಾಗಿಲ್ಲ. ಆದ್ದರಿಂದಲೇ ಭಾರತದ ಮೇಲೆ 100% ಸುಂಕ ಹೇರಬೇಕು ಎನ್ನುವ ಟ್ರಂಪ್ ಪ್ರಸ್ತಾಪವನ್ನು ಬ್ರುಸೆಲ್ಸ್ ತಳ್ಳಿಹಾಕುವ ಸಾಧ್ಯತೆಗಳಿವೆ.

ಯುರೋಪ್ ಅನುಸರಿಸುತ್ತಿರುವ ಕಾರ್ಯ ವಿಧಾನ ಈಗ ಟ್ರಂಪ್ ಅಹಂಕಾರವನ್ನು ನಿಭಾಯಿಸುತ್ತಾ ಸಾಗುವುದಾಗಿದೆ. ಐರೋಪ್ಯ ನಾಯಕರು ಕ್ಷಿಪ್ರವಾಗಿ ವಾಷಿಂಗ್ಟನ್‌ಗೆ ತೆರಳಿ, ಅಲಾಸ್ಕಾದಲ್ಲಿ ಪುಟಿನ್ ಜೊತೆ ಮಾತುಕತೆ ನಡೆಸಿದ್ದಕ್ಕಾಗಿ ಟ್ರಂಪ್ ಅವರನ್ನು ಅಭಿನಂದಿಸಿದರು. ಆದರೆ, ಈ ಮಾತುಕತೆಯಲ್ಲಿ ಎಲ್ಲೂ ಕದನ ವಿರಾಮ ಜಾರಿಗೆ ತರಲು ಟ್ರಂಪ್ ವಿಫಲವಾದುದನ್ನು ಅವರು ಪ್ರಸ್ತಾಪಿಸಲಿಲ್ಲ. ಯುದ್ಧ ನಿಲ್ಲಿಸಬೇಕು ಎನ್ನುವ ಟ್ರಂಪ್ ಪ್ರಸ್ತಾಪವನ್ನು ಪುಟಿನ್ ನಿರಾಕರಿಸಿದ್ದರು. ಯುರೋಪಿನ ನಾಯಕರು ಜಾಗರೂಕವಾಗಿ ಟ್ರಂಪ್‌ರನ್ನು ಹೊಗಳಿ, ಅವರು ಶಾಂತಿಗಾಗಿ ರಷ್ಯಾದ ಬೇಡಿಕೆಗಳಿಗೆ ಮಣಿಯದಂತೆ ಖಾತ್ರಿಪಡಿಸಿಕೊಂಡರು.

Narendra Modi- Donald Trump (file pic)
ನೇಪಾಳದ ಜೆನ್ ಜೀ (Gen-Z) ಕ್ರಾಂತಿ: ದಕ್ಷಿಣ ಏಷ್ಯಾದ ಪ್ರಜಾಪ್ರಭುತ್ವಗಳಿಗೆ ಕಾದಿದೆಯೇ ಭೀತಿ? (ಜಾಗತಿಕ ಜಗಲಿ)

ಕಳೆದ 80 ವರ್ಷಗಳ ಅವಧಿಯಲ್ಲಿ, ಇದೇ ಮೊದಲ ಬಾರಿಗೆ ತನ್ನ ಸ್ನೇಹಿತರು ಮತ್ತು ಶತ್ರುಗಳ ಕುರಿತು ಅಮೆರಿಕಾದ ವಿದೇಶಾಂಗ ನೀತಿ ಟ್ರಂಪ್ ಆಡಳಿತದಡಿ ಬದಲಾವಣೆ ಹೊಂದುತ್ತಿದೆ. ದೆಹಲಿಯಲ್ಲಿನ ಓರ್ವ ಪಾಶ್ಚಾತ್ಯ ರಾಜತಂತ್ರಜ್ಞರು ಅಮೆರಿಕಾ ಏಕಾಂಗಿಯಾಗಿ ಚೀನಾವನ್ನು ಎದುರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಅಮೆರಿಕಾಗೆ ಐರೋಪ್ಯ ಒಕ್ಕೂಟದ ನೆರವು ಅಗತ್ಯವಿದೆ ಎನ್ನುವುದು ಯುರೋಪಿಗೂ ತಿಳಿದಿದೆ ಎಂದಿದ್ದಾರೆ. ಈ ಕಾರಣದಿಂದಾಗಿ, ಯುರೋಪ್ ಇಂದಿಗೂ ಚರ್ಚೆ ನಡೆಸಬಹುದಾದ, ಚೌಕಾಸಿ ಮಾಡಬಹುದಾದ ಒಂದಷ್ಟು ವಿಚಾರಗಳಿವೆ.

ಟ್ರಂಪ್ ಜಗತ್ತಿನಲ್ಲಿ ನಡೆಯುವ ಸಂಕೀರ್ಣ ಮಾತುಕತೆಗಳನ್ನು ನಿರ್ವಹಿಸಲು ಭಾರತವೂ ಸಹ ತನ್ನ ರಾಜಿ ಮಾಡಿಕೊಳ್ಳಬಹುದಾದ ಮತ್ತು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲದ ವಿಚಾರಗಳನ್ನು ಖಚಿತಪಡಿಸಿಕೊಳ್ಳುತ್ತಿದೆ ಎನ್ನುವ ಭಾವನೆಗಳಿವೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com