ಯೆನ್ ರಕ್ಷಣೆಗೆ ಅಮೇರಿಕಾ-ಜಪಾನ್ ಜಂಟಿ ಕಾರ್ಯಾಚರಣೆ, ಜಾಗತಿಕ ಹಣಕಾಸು ವ್ಯವಸ್ಥೆಗೆ ಎಚ್ಚರಿಕೆಯ ಗಂಟೆ (ಹಣಕ್ಲಾಸು)

ಕರೆನ್ಸಿ ಮಾರುಕಟ್ಟೆಯಲ್ಲಿ ಒಂದು ದೇಶದ ಕೇಂದ್ರ ಬ್ಯಾಂಕ್ ಅಥವಾ ಹಣಕಾಸು ಸಚಿವಾಲಯ ತನ್ನ ವಿದೇಶಿ ವಿನಿಮಯ ಮೀಸಲು ಬಳಸಿಕೊಂಡು ತನ್ನ ಕರೆನ್ಸಿಯನ್ನು ಖರೀದಿಸುವ ಅಥವಾ ಮಾರಾಟ ಮಾಡುವುದನ್ನು ಹಸ್ತಕ್ಷೇಪ ಎಂದು ಕರೆಯಲಾಗುತ್ತದೆ.
Japan PM- Donald Trump
ಜಪಾನ್ ಪ್ರಧಾನಿ- ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ online desk
Updated on

ಜಾಗತಿಕ ಆರ್ಥಿಕತೆಯಲ್ಲಿ ಕೆಲವೊಮ್ಮೆ ಒಂದು ದೇಶದ ಕರೆನ್ಸಿಯಲ್ಲಿ ಉಂಟಾಗುವ ಏರಿಳಿತವೇ ವಿಶ್ವದ ಹಣಕಾಸು ಮಾರುಕಟ್ಟೆಗಳನ್ನು ನಡುಗಿಸುತ್ತದೆ. ಇತ್ತೀಚೆಗೆ ಜಪಾನ್‌ನ ಕರೆನ್ಸಿಯಾದ ಯೆನ್ 40 ವರ್ಷಗಳಲ್ಲೇ ಅತ್ಯಂತ ದುರ್ಬಲ ಮಟ್ಟಕ್ಕೆ ಕುಸಿದಾಗ, ಜಪಾನ್ ಮತ್ತು ಅಮೆರಿಕ ಒಟ್ಟಾಗಿ ಮಾರುಕಟ್ಟೆಗೆ ಇಳಿದು ಯೆನ್‌ಗೆ ಬೆಂಬಲ ನೀಡಿದ ಘಟನೆ ಆರ್ಥಿಕ ಇತಿಹಾಸದಲ್ಲಿ ಮಹತ್ವದ ತಿರುವಾಗಿದೆ.

2011 ರ ನಂತರ ಮೊದಲ ಬಾರಿಗೆ ನಡೆದ ಈ ಜಂಟಿ ಹಸ್ತಕ್ಷೇಪವು ಕೇವಲ ಒಂದು ಯೆನ್ ಹಣವನ್ನು ರಕ್ಷಿಸುವ ಕ್ರಮವಾಗಿದೆ ಎಂದು ಕೊಂಡರೆ ಅದು ನಮ್ಮ ಅಜ್ಞಾನವನ್ನು ತೋರಿಸುತ್ತದೆ. ಇದೊಂದು ಜಾಗತಿಕ ಹಣಕಾಸು ಸ್ಥಿರತೆಯನ್ನು ಕಾಪಾಡುವ ರಾಜತಾಂತ್ರಿಕ ಹಾಗೂ ಆರ್ಥಿಕ ಸಂದೇಶ ಮತ್ತು ಅಮೇರಿಕಾದ ಸ್ವಾರ್ಥವೂ ಅಡಗಿದೆ ಎನ್ನುವುದನ್ನು ಜಗತ್ತಿಗೆ ಸಾರುತ್ತಿದೆ.

ಯೆನ್ ಕುಸಿತದ ಹಿಂದಿರುವ ನಿಜವಾದ ಕಾರಣವೇನು ?

ಒಂದು ದೇಶದ ಕರೆನ್ಸಿಯ ಮೌಲ್ಯವು ಅದರ ಆರ್ಥಿಕತೆಯ ಮೇಲಿನ ಜಾಗತಿಕ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ಅಮೆರಿಕ ಹಣದುಬ್ಬರ ನಿಯಂತ್ರಣಕ್ಕಾಗಿ ಬಡ್ಡಿದರಗಳನ್ನು ಹೆಚ್ಚಿಸುತ್ತಲೇ ಬಂದಿದೆ. ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿ ಸಿಗುವುದರಿಂದ ಡಾಲರ್ ಆಸ್ತಿಗಳತ್ತ ಹಣ ಹರಿಯಿತು. ಅಂದರೆ ಜಪಾನ್ ಸೇರಿದಂತೆ ಜಗತ್ತಿನ ಇತರ ದೇಶಗಳಲ್ಲಿನ ಹೂಡಿಕೆದಾರರು ಅಮೆರಿಕಾದತ್ತ ಮುಖ ಮಾಡಿದ್ದರು.

ಇನ್ನೊಂದೆಡೆ, ಜಪಾನ್ ಹಲವು ವರ್ಷಗಳಿಂದ ಅತಿ ಕಡಿಮೆ ಬಡ್ಡಿದರ ನೀತಿಯನ್ನು ಅನುಸರಿಸುತ್ತಿತ್ತು. ಈ ವರ್ಷ ಬಡ್ಡಿದರವನ್ನು ಒಂದು ಪ್ರತಿಶತಕ್ಕೆ ಏರಿಸಿದರೂ, ಅದು ಅಮೆರಿಕದ ಬಡ್ಡಿದರಕ್ಕಿಂತ ಬಹಳ ಕಡಿಮೆ. ಅಮೇರಿಕಾದಲ್ಲಿ ಫೆಡರಲ್ ಬಡ್ಡಿ ದರ ನಾಲ್ಕರ ಆಸುಪಾಸಿನಲ್ಲಿದೆ.ಇದರ ಪರಿಣಾಮವಾಗಿ ಅಂತರರಾಷ್ಟ್ರೀಯ ಹೂಡಿಕೆದಾರರು ಯೆನ್ ಮಾರಾಟ ಮಾಡಿ ಡಾಲರ್ ಖರೀದಿಸಿದರು. ಇದು ಯೆನ್ ಮೌಲ್ಯ ಕುಸಿತಕ್ಕೆ ನಾಂದಿ ಹಾಡಿತು. ಹೀಗಾಗಿ ಒಂದು ಡಾಲರ್‌ಗೆ 164 ಯೆನ್ ತಲುಪಿತು. ಗಮನಿಸಿ ಕರೆನ್ಸಿ ದುರ್ಬಲವಾಗುವುದು ಯಾವಾಗಲೂ ಕೆಟ್ಟದ್ದಲ್ಲ. ರಫ್ತು ಆಧಾರಿತ ಆರ್ಥಿಕತೆಗೆ ಕೆಲವೊಮ್ಮೆ ಅದು ಅನುಕೂಲವಾಗಬಹುದು. ಆದರೆ ಮೌಲ್ಯ ಅತಿವೇಗವಾಗಿ ಕುಸಿದರೆ ಆಮದು ವೆಚ್ಚ, ಹಣದುಬ್ಬರ ಮತ್ತು ಹೂಡಿಕೆದಾರರ ವಿಶ್ವಾಸಕ್ಕೆ ಹೊಡೆತ ಬೀಳುತ್ತದೆ. ಇದೇ ಪರಿಸ್ಥಿತಿ ಜಪಾನ್ ಎದುರಿಸುತ್ತಿತ್ತು.

ಜಪಾನ್‌ನ ದೀರ್ಘಕಾಲದ ಸಮಸ್ಯೆಗಳು ಕೂಡ ಯೆನ್ ಕುಸಿತಕ್ಕೆ ದೇಣಿಗೆ ನೀಡುತ್ತಿವೆ. ಹೀಗಾಗಿ ಯೆನ್ ಕುಸಿತವನ್ನು ಕೇವಲ ಬಡ್ಡಿದರದ ಅಂತರದಿಂದ ವಿವರಿಸಲು ಸಾಧ್ಯವಿಲ್ಲ. ಜಪಾನ್ ಹಲವು ದಶಕಗಳಿಂದ ಜನಸಂಖ್ಯಾ ಕುಸಿತ, ವಯೋವೃದ್ಧ ಸಮಾಜ, ಉತ್ಪಾದಕತೆಯ ನಿಧಾನಗತಿ ಮತ್ತು ಇಂಧನ ಆಮದು ಅವಲಂಬನೆ ಎಂಬ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ.ಕೆಲಸ ಮಾಡುವ ವಯಸ್ಸಿನ ಜನರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಕೈಗಾರಿಕೆಗಳಿಗೆ ಕಾರ್ಮಿಕರ ಕೊರತೆ ಉಂಟಾಗಿದೆ. ದೇಶೀಯ ಬೇಡಿಕೆಯೂ ನಿಧಾನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್ಥಿಕ ಬೆಳವಣಿಗೆಗೆ ವೇಗ ನೀಡುವುದು ನಿಜಕ್ಕೂ ಸುಲಭದ ಮಾತಲ್ಲ. ಇದರ ಜೊತೆಗೆ ಜಪಾನ್ ತನ್ನ ಬಹುಪಾಲು ತೈಲ ಮತ್ತು ಅನಿಲವನ್ನು ವಿದೇಶಗಳಿಂದ ಡಾಲರ್‌ನಲ್ಲಿ ಖರೀದಿಸುತ್ತದೆ. ಯೆನ್ ದುರ್ಬಲವಾದರೆ ಇಂಧನ ಆಮದು ದುಬಾರಿಯಾಗುತ್ತದೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚುತ್ತದೆ ಮತ್ತು ಸಾಮಾನ್ಯ ನಾಗರಿಕರ ಜೀವನ ವೆಚ್ಚವೂ ಏರಿಕೆಯಾಗುತ್ತದೆ.

Japan PM- Donald Trump
ಭಾರತಕ್ಕೆ 'ಸೇವಾ ಉತ್ಪಾದನಾ ಸೂಚ್ಯಂಕ' (ISP) ಏಕೆ ಅಗತ್ಯ? (ಹಣಕ್ಲಾಸು)

ಅಮೆರಿಕ ಏಕೆ ಮಧ್ಯಪ್ರವೇಶಿಸಿತು?

ಬುದ್ದಿವಂತ ಓದುಗರಲ್ಲಿ ಈ ವೇಳೆಗೆ ಇದು ಜಪಾನ್‌ನ ಸಮಸ್ಯೆಯಾಗಿದ್ದರೆ ಅಮೆರಿಕ ಏಕೆ ಮಧ್ಯಪ್ರವೇಶಿಸಿತು? ಎನ್ನುವ ಪ್ರಶ್ನೆ ಮೂಡಿರುತ್ತದೆ. ಇದಕ್ಕೆ ಉತ್ತರ ಸರಳ. ಇಂದಿನ ಜಾಗತಿಕ ಆರ್ಥಿಕತೆಯಲ್ಲಿ ಯಾವುದೇ ದೊಡ್ಡ ದೇಶದ ಹಣಕಾಸು ಅಸ್ಥಿರತೆ ಉಳಿದ ರಾಷ್ಟ್ರಗಳಿಗೂ ಪರಿಣಾಮ ಬೀರುತ್ತದೆ.ಮೊದಲ ನೋಟಕ್ಕೆ ಇದು ಜಪಾನ್ ಸಮಸ್ಯೆಯಂತೆ ಕಂಡರೂ, ಅಮೆರಿಕಕ್ಕೂ ಇದರಲ್ಲಿ ಸ್ವಾರ್ಥವಿದೆ.ಯೆನ್ ಅತಿಯಾಗಿ ದುರ್ಬಲವಾದರೆ ಜಪಾನಿನ ಸರ್ಕಾರಿ ಬಾಂಡ್‌ಗಳು ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗುತ್ತದೆ.

ಇಂದು ಜಗತ್ತಿನ ಅತಿದೊಡ್ಡ ಹೂಡಿಕೆದಾರರಲ್ಲಿ ಜಪಾನ್ ಪ್ರಮುಖ ದೇಶವಾಗಿದೆ. ಜಪಾನಿನ ಹೂಡಿಕೆದಾರರು ತಮ್ಮ ದೇಶದ ಆರ್ಥಿಕತೆಯನ್ನು ರಕ್ಷಿಸಲು ಅಮೆರಿಕದ ಸರ್ಕಾರಿ ಬಾಂಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಿದರೆ ಅಮೆರಿಕದ ಸಾಲ ಪಡೆಯುವ ವೆಚ್ಚವೂ ಹೆಚ್ಚಾಗುತ್ತದೆ. ಅಮೇರಿಕಾ ಈಗಾಗಲೇ ನಲವತ್ತು ಟ್ರಿಲಿಯನ್ ಸಾಲದ ಮೇಲೆ ಕುಳಿತಿದೆ. ವಾರ್ಷಿಕ 1 ಟ್ರಿಲಿಯನ್ ಹಣವನ್ನು ಬಡ್ಡಿಯ ರೂಪದಲ್ಲಿ ನೀಡಬೇಕಾಗಿದೆ. ಹೀಗೆ ಬಡ್ಡಿ ನೀಡಲು ಅಮೆರಿಕಕ್ಕೆ ಹೊಸ ಸಾಲ ಬೇಕಾಗಿದೆ ! ಇಂತಹ ಸ್ಥಿತಿಯಲ್ಲಿ ಜಪಾನೀ ಹೂಡಿಕೆದಾರರು ತಮ್ಮ ಡೆಟ್ ಬಾಂಡುಗಳನ್ನು ಮಾರುವುದು ಅಮೆರಿಕಕ್ಕೆ ಹುಟ್ಟಬಹುದಾದ ಸಂಭ್ಯಾವ ಹೊಸ ಸಾಲದ ಹಾದಿಯನ್ನು ಸಂಪೂರ್ಣವಾಗಿ ಮುಚ್ಚಿ ಬಿಡುತ್ತದೆ ! ಜಪಾನಿನ ಸಂಸ್ಥೆಗಳು ಅಮೆರಿಕದ ಸರ್ಕಾರಿ ಬಾಂಡ್‌ಗಳಲ್ಲಿ ಭಾರೀ ಹೂಡಿಕೆ ಮಾಡಿವೆ.

ಯೆನ್ ಮೇಲಿನ ಒತ್ತಡ ಮುಂದುವರಿದರೆ ಜಪಾನಿನ ಸಂಸ್ಥೆಗಳು ತಮ್ಮ ವಿದೇಶಿ ಆಸ್ತಿಗಳನ್ನು ಮಾರಾಟ ಮಾಡಿ ದೇಶಕ್ಕೆ ಹಣ ತರಬೇಕಾದ ಪರಿಸ್ಥಿತಿ ಬರಬಹುದು. ಅಂತಹ ಬೆಳವಣಿಗೆ ಅಮೆರಿಕದ ಬಾಂಡ್ ಮಾರುಕಟ್ಟೆಯನ್ನೂ ಸಂಪೂರ್ಣವಾಗಿ ಅಸ್ಥಿರಗೊಳಿಸುತ್ತದೆ. ಹೀಗಾಗಿ ಜಪಾನ್‌ನ ಸ್ಥಿರತೆ ಅಮೆರಿಕದ ಆರ್ಥಿಕ ಹಿತಾಸಕ್ತಿಗೂ ಸಂಬಂಧಿಸಿದೆ.ನಿಜವಾಗಿ ಹೇಳಬೇಕೆಂದರೆ ಅಮೇರಿಕಾ ತನ್ನ ಆರ್ಥಿಕತೆಯನ್ನು ರಕ್ಷಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದೆ. ಹೀಗಾಗಿ ಯೆನ್ ಸ್ಥಿರತೆ ಎಂದರೆ ಅಮೆರಿಕದ ಹಣಕಾಸು ಸ್ಥಿರತೆಯೂ ಹೌದು, ಜಾಗತಿಕ ವಿತ್ತ ಜಗತ್ತಿನ ಸ್ಥಿರತೆಯೂ ಹೌದು. ಏಕೆಂದರೆ ಮುಂದಿನ ಮಹಾಕುಸಿತವಾದರೆ ಅದು ಶುರುವಾಗುವುದು ಜಪಾನಿನ ಮೂಲಕ ಎನ್ನುವ ಮಾತುಗಳು ಈಗಾಗಲೇ ವಿತ್ತ ಜಗತ್ತಿನಲ್ಲಿ ಗಿರಕಿ ಹೊಡೆಯುತ್ತಿವೆ. ಜಪಾನ್ ಕುಸಿದರೆ ಅದು ಅಮೇರಿಕಾ ಕುಸಿತವಾದಂತೆ , ಈ ಎರಡೂ ದೇಶಗಳು ಕುಸಿದರೆ ಅದು ಜಾಗತಿಕ ವಿತ್ತ ಜಗತ್ತಿನ ಮೇಲೂ ಪರಿಣಾಮ ಬೀರುತ್ತದೆ.

Japan PM- Donald Trump
ಭಾರತದಲ್ಲಿ ಡೇಟಾ ಸೆಂಟರ್: ಲಾಭವೆಷ್ಟು? ನಷ್ಟವೆಷ್ಟು? (ಹಣಕ್ಲಾಸು)

ಜಂಟಿ ಹಸ್ತಕ್ಷೇಪ ಎಂದರೇನು?

ಕರೆನ್ಸಿ ಮಾರುಕಟ್ಟೆಯಲ್ಲಿ ಒಂದು ದೇಶದ ಕೇಂದ್ರ ಬ್ಯಾಂಕ್ ಅಥವಾ ಹಣಕಾಸು ಸಚಿವಾಲಯ ತನ್ನ ವಿದೇಶಿ ವಿನಿಮಯ ಮೀಸಲು ಬಳಸಿಕೊಂಡು ತನ್ನ ಕರೆನ್ಸಿಯನ್ನು ಖರೀದಿಸುವ ಅಥವಾ ಮಾರಾಟ ಮಾಡುವುದನ್ನು ಹಸ್ತಕ್ಷೇಪ ಎಂದು ಕರೆಯಲಾಗುತ್ತದೆ.

ಈ ಬಾರಿ ಜಪಾನ್ ತನ್ನ ವಿದೇಶಿ ವಿನಿಮಯ ಸಂಗ್ರಹದಲ್ಲಿದ್ದ ಅಮೆರಿಕನ್ ಡಾಲರ್‌ಗಳನ್ನು ಮಾರಾಟ ಮಾಡಿ ಯೆನ್ ಖರೀದಿಸಿತು. ಇದರಿಂದ ಮಾರುಕಟ್ಟೆಯಲ್ಲಿ ಯೆನ್‌ಗೆ ಬೇಡಿಕೆ ಹೆಚ್ಚಾಗಿ ಅದರ ಮೌಲ್ಯ ಸ್ಥಿರವಾಗಲು ಸಹಾಯವಾಯಿತು. ವಿಶೇಷವೆಂದರೆ ಅಮೆರಿಕ ಕೂಡ ಇದೇ ಕ್ರಮಕ್ಕೆ ಬೆಂಬಲ ನೀಡಿದ್ದು, ಎರಡೂ ರಾಷ್ಟ್ರಗಳು ಒಂದೇ ಗುರಿಯೊಂದಿಗೆ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸಿದವವು.ಬ್ಯಾಂಕ್ ಆಫ್ ಜಪಾನ್‌ನ ಅಂಕಿಅಂಶಗಳ ಪ್ರಕಾರ ಜಪಾನ್ ಸುಮಾರು ೫೯ ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಡಾಲರ್‌ಗಳನ್ನು ಮಾರಾಟ ಮಾಡಿ ಯೆನ್ ಖರೀದಿಸಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅನೇಕ ದೊಡ್ಡ ಹೂಡಿಕೆ ಸಂಸ್ಥೆಗಳು ಕರೆನ್ಸಿಗಳ ಏರಿಳಿತದಿಂದ ಲಾಭ ಗಳಿಸಲು ಪ್ರಯತ್ನಿಸುತ್ತವೆ. ಸರ್ಕಾರಗಳು ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಭಾವನೆ ಇದ್ದರೆ ಇಂತಹ ಗ್ಯಾಂಬಲಿಂಗ್ ವಹಿವಾಟು ಇನ್ನಷ್ಟು ಹೆಚ್ಚುತ್ತದೆ.ಆದರೆ ಜಪಾನ್ ಮತ್ತು ಅಮೇರಿಕಾ ಜಂಟಿ ಕ್ರಮವು ಈ ಊಹಾಪೋಹಗಾರರಿಗೆ ಎಚ್ಚರಿಕೆಯ ಸಂದೇಶ ನೀಡಿದೆ. ಸರ್ಕಾರಗಳು ಅಗತ್ಯವಿದ್ದಾಗ ಯಾವ ಕ್ಷಣದಲ್ಲಾದರೂ ಮಾರುಕಟ್ಟೆಗೆ ಇಳಿಯಬಹುದು ಎಂಬ ಭಯವೇ ಹಲವು ಬಾರಿ ನೇರ ಹಸ್ತಕ್ಷೇಪಕ್ಕಿಂತ ಹೆಚ್ಚು ಪರಿಣಾಮಕಾರಿ.

ಈ ಘಟನೆ ಮತ್ತೊಂದು ವಿಷಯವನ್ನು ಸ್ಪಷ್ಟಪಡಿಸಿದೆ. ಜಾಗತಿಕ ಆರ್ಥಿಕತೆಯಲ್ಲಿ ಕೇಂದ್ರ ಬ್ಯಾಂಕ್‌ಗಳು ಮತ್ತು ಸರ್ಕಾರಗಳು ಈಗ ಒಂಟಿಯಾಗಿ ಕೆಲಸ ಮಾಡುವ ಪರಿಸ್ಥಿತಿ ಇಲ್ಲ. ದೊಡ್ಡ ಹಣಕಾಸು ಆಘಾತಗಳನ್ನು ತಡೆಯಲು ದೇಶಗಳು ಪರಸ್ಪರ ಸಹಕಾರಕ್ಕೆ ಮುಂದಾಗುತ್ತಿವೆ.ಮುಂದಾಗದೆ ಅನ್ಯ ಮಾರ್ಗವಿಲ್ಲ.

Japan PM- Donald Trump
ಮಾರ್ಕ್ಸ್ ಕಾರ್ಡಿಗಿಂತ ಇವತ್ತು ಕ್ರೆಡಿಟ್ ಸ್ಕೋರ್ ಮುಖ್ಯ! (ಹಣಕ್ಲಾಸು)

ಭಾರತದ ಮೇಲೆ ಯಾವ ಪರಿಣಾಮವಾಗುತ್ತದೆ?

ಜಪಾನ್ ಭಾರತದ ಪ್ರಮುಖ ಹೂಡಿಕೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಮೆಟ್ರೋ ಯೋಜನೆಗಳು, ವೇಗದ ರೈಲು, ವಾಹನ ಉದ್ಯಮ, ಎಲೆಕ್ಟ್ರಾನಿಕ್ಸ್ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಜಪಾನ್‌ನ ಪಾತ್ರ ಮಹತ್ವದ್ದಾಗಿದೆ.ಯೆನ್ ಸ್ಥಿರವಾಗಿದ್ದರೆ ಜಪಾನಿನ ಕಂಪನಿಗಳಿಗೆ ವಿದೇಶಿ ಹೂಡಿಕೆ ಮುಂದುವರಿಸಲು ಅನುಕೂಲವಾಗುತ್ತದೆ.

ಇದು ಭಾರತದ ಕೈಗಾರಿಕೆಗಳಿಗೆ ಸಹಕಾರಿ. ಆದರೆ ಅದೇ ಸಮಯದಲ್ಲಿ ಯೆನ್ ಬಲಗೊಂಡರೆ ಜಪಾನ್‌ನಿಂದ ಆಮದು ಮಾಡುವ ಯಂತ್ರೋಪಕರಣಗಳ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಾಣಬಹುದು. ಆದರೂ ದೀರ್ಘಾವಧಿಯಲ್ಲಿ ಕರೆನ್ಸಿ ಸ್ಥಿರತೆ ವ್ಯಾಪಾರಕ್ಕೆ ಹೆಚ್ಚು ಅನುಕೂಲಕರ. ಇವತ್ತಿಗೆ ಎಲ್ಲಾ ದೇಶಗಳ ಆರ್ಥಿಕತೆಯೂ ಬೇರೆ ಬೇರೆ ದೇಶಗಳ ಆರ್ಥಿಕತೆಯ ಮೇಲೆ ಅವಲಂಬಿತವಾಗಿವೆ. ಹೀಗಾಗಿ ಜಪಾನ್ ಕುಸಿತ ಭಾರತದ ಮೇಲೂ ಅಲ್ಪ ಪ್ರಮಾಣದ ಹೊಡೆತ ನೀಡುವುದನ್ನು ತಪ್ಪಿಸಲಾಗುವುದಿಲ್ಲ.ಜಾಗತಿಕ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆ ಕಡಿಮೆಯಾದರೆ ಭಾರತದ ಷೇರು ಮಾರುಕಟ್ಟೆಗೂ ಧನಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ.

ಡಾಲರ್ ಸ್ವಲ್ಪ ದುರ್ಬಲವಾದಾಗ ಸಾಮಾನ್ಯವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಿಗೆ ಬೆಂಬಲ ಸಿಗುತ್ತದೆ. ಹೀಗಾಗಿ ಯೆನ್ ಸ್ಥಿರತೆ ಮತ್ತು ಡಾಲರ್ ಮೇಲಿನ ಒತ್ತಡ ಕಡಿಮೆಯಾಗುವುದು ಅಮೂಲ್ಯ ಲೋಹಗಳ ಹೂಡಿಕೆದಾರರಿಗೆ ಗಮನಿಸಬೇಕಾದ ಬೆಳವಣಿಗೆಯಾಗಿದೆ.ಆದರೆ ಗಮನಿಸಿ ಚಿನ್ನಬೆಳ್ಳಿಯ ಬೆಲೆಗಳು ಕೇವಲ ಕರೆನ್ಸಿಗಳಿಂದ ಮಾತ್ರ ನಿರ್ಧಾರವಾಗುವುದಿಲ್ಲ. ಅಮೆರಿಕದ ಬಡ್ಡಿದರ ನೀತಿ, ಜಾಗತಿಕ ಕೈಗಾರಿಕಾ ಬೇಡಿಕೆ, ಭೌಗೋಳಿಕ ಉದ್ವಿಗ್ನತೆ ಹಾಗೂ ಹೂಡಿಕೆದಾರರ ಮನೋಭಾವವೂ ಮಹತ್ವದ ಪಾತ್ರ ವಹಿಸುತ್ತವೆ.

ಜಪಾನ್ ಮತ್ತು ಅಮೆರಿಕ ಅಗತ್ಯವಿದ್ದರೆ ಮತ್ತೆ ಜಂಟಿಯಾಗಿ ಮಾರುಕಟ್ಟೆಗೆ ಇಳಿಯುವುದಾಗಿ ಸ್ಪಷ್ಟಪಡಿಸಿವೆ. ಇದು ಯೆನ್‌ಗೆ ತಾತ್ಕಾಲಿಕ ರಕ್ಷಣೆ ನೀಡಿದೆ. ಟ್ರಂಪ್ ಅಧಿಕಾರದಲ್ಲಿರುವವರೆಗೂ ಭಾರಿ ಕುಸಿತವನ್ನು ಆತ ಆಗಲು ಬಿಡುವುದಿಲ್ಲ. ಜಾಗತಿಕ ವಿತ್ತ ಜಗತ್ತಿನ ಕುಸಿತಕ್ಕೆ ಇದು ಮುನ್ನುಡಿ ಎನ್ನುವುದು ಮಾತ್ರ ಸುಳ್ಳಲ್ಲ. ಶಾಶ್ವತ ಪರಿಹಾರಕ್ಕಾಗಿ ಜಪಾನ್ ತನ್ನ ಉತ್ಪಾದಕತೆಯನ್ನು ಹೆಚ್ಚಿಸಬೇಕು, ಜನಸಂಖ್ಯಾ ಸವಾಲುಗಳನ್ನು ಎದುರಿಸಬೇಕು, ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳಿಗೆ ಉತ್ತೇಜನ ನೀಡಬೇಕು ಹಾಗೂ ದೇಶೀಯ ಬೇಡಿಕೆಯನ್ನು ಬಲಪಡಿಸಬೇಕು. ನೆನಪಿರಲಿ ಇದ್ಯಾವುದೂ ತಕ್ಷಣದಲ್ಲಿ ಆಗುವಂತಹುದಲ್ಲ. ಹೀಗಾಗಿ ಜಪಾನ್ ಕುಸಿತವನ್ನು ಮುಂದೂಡಲಾಗಿದೆ ಅಷ್ಟೇ.

ಕೊನೆ ಮಾತು: ಜಪಾನ್ ಮತ್ತು ಅಮೇರಿಕಾ ಜಂಟಿ ಕರೆನ್ಸಿ ಹಸ್ತಕ್ಷೇಪವು ಒಂದು ಮಹತ್ವದ ಸಂಗತಿಯನ್ನು ಜಗತ್ತಿನ ಮುಂದಿಟ್ಟಿದೆ. ಜಾಗತಿಕ ವಿತ್ತ ಜಗತ್ತು ಕುಸಿಯದಂತೆ ತಡೆಯಲು ದೇಶ ದೇಶಗಳ ನಡುವೆ ಇಂತಹ ಸಹಕಾರ ಇಂದಿಗೆ ಅನಿವಾರ್ಯ ಎನ್ನುವುದು ಆ ಸಂಗತಿ. ಇಂದಿನ ಜಾಗತಿಕ ಆರ್ಥಿಕತೆಯಲ್ಲಿ ಯಾವುದೇ ದೇಶ ಪ್ರತ್ಯೇಕ ದ್ವೀಪವಲ್ಲ. ಒಂದು ದೇಶದ ಕರೆನ್ಸಿ ಬಿಕ್ಕಟ್ಟು ಮತ್ತೊಂದು ದೇಶದ ಬಾಂಡ್ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಹರಿವು, ಚಿನ್ನಬೆಳ್ಳಿ ಬೆಲೆಗಳು ಹಾಗೂ ಜಾಗತಿಕ ವ್ಯಾಪಾರದ ಮೇಲೆಯೂ ಪರಿಣಾಮ ಬೀರುತ್ತದೆ.ಇವತ್ತಿನ ದಿನದಲ್ಲಿ ಹಣಕಾಸಿನ ವಿಶ್ವಾಸವನ್ನು ಕಾಪಾಡುವುದು ಎಲ್ಲಾ ದೇಶಗಳ ಕೇಂದ್ರ ಬ್ಯಾಂಕ್‌ನ ಪ್ರಮುಖ ಜವಾಬ್ದಾರಿಯಾಗಿದೆ. ಯೆನ್ ರಕ್ಷಣೆಗೆ ನಡೆದ ಈ ಐತಿಹಾಸಿಕ ಕ್ರಮವು ಮುಂದಿನ ದಿನಗಳಲ್ಲಿ ಜಾಗತಿಕ ಕರೆನ್ಸಿ ನಿರ್ವಹಣೆಯ ಹೊಸ ಮಾದರಿಯಾಗುವ ಸಾಧ್ಯತೆಯಿದೆ. ಆದರೆ ಇದೇ ಕ್ರಮವನ್ನು ಅಮೇರಿಕಾ ಚೀನಾ ಜೊತೆಗೂ ತೆಗೆದುಕೊಳ್ಳುತ್ತದೆಯೇ ? ಎನ್ನುವುದು ಟ್ರಿಲಿಯನ್ ಡಾಲರ್ ಪ್ರಶ್ನೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com