ಭಾರತದ ಕನಸುಗಳಿಗೆ ಕಾವಲಾಗುವ ಅಗ್ನಿ-3

ಅಗ್ನಿ-3 ಕುರಿತು ಅತ್ಯಂತ ಹೆಮ್ಮೆ ಮೂಡಿಸುವ ವಿಚಾರವೆಂದರೆ, ಇದನ್ನು ಸಂಪೂರ್ಣವಾಗಿ ಭಾರತೀಯ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳು ನಿರ್ಮಿಸಿದ್ದಾರೆ. ಇದನ್ನು ಯಾವುದೇ ವಿದೇಶೀ ಕಂಪನಿ ‌ನಿರ್ಮಿಸಿಲ್ಲ, ಅಥವಾ ಹೊರಗಿನಿಂದ ಇದಕ್ಕಾಗಿ ನಾವು ಯಾವುದೇ ತಂತ್ರಜ್ಞಾನವನ್ನು ತಂದಿಲ್ಲ.
Agni-3 (file photo)
ಅಗ್ನಿ-3 (ಸಂಗ್ರಹ ಚಿತ್ರ)online desk
Updated on

ಭಾರತ ಫೆಬ್ರವರಿ 6, 2026ರಂದು ಅಗ್ನಿ-3 ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಸುದ್ದಿಯನ್ನು ಕೇಳಿದಾಗ, ನನ್ನ ಮನದಲ್ಲಿ ಏನೋ ಒಂದು ವಿಶೇಷವಾದ ಭಾವನೆ ಮೂಡಿತ್ತು. ಇದು ದೂರದಲ್ಲೆಲ್ಲೋ ಇರುವ ಪ್ರಯೋಗಾಲಯಗಳ ಸಿಬ್ಬಂದಿಗಳು ನಡೆಸಿರುವ ಸಾಧನೆಯಲ್ಲ. ಇದು ಸಂಪೂರ್ಣವಾಗಿ ಭಾರತೀಯರ ಸಾಧನೆಯಾಗಿದ್ದು, ನಮ್ಮ ದೇಶ ಬಹಳ ಶಕ್ತಿಶಾಲಿಯಾಗಿ ಬೆಳೆದಿರುವುದರ, ನಮ್ಮ ದೇಶವನ್ನು, ನಮ್ಮ ಜನರನ್ನು ನಾವೇ ರಕ್ಷಿಸಲು ಸಾಧ್ಯವಾಗುವಂತಹ ಆಯುಧವನ್ನು ನಿರ್ಮಿಸಿದ್ದೇವೆ ಎಂದು ನೀಡಿರುವ ಸಂದೇಶವಾಗಿದೆ. ಈ ಪರೀಕ್ಷೆ ನಮಗೆಲ್ಲರಿಗೂ ಏಕೆ ಮುಖ್ಯವಾಗುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ಗಮನಿಸೋಣ.

ಓರ್ವ ಸೂಪರ್ ಹೀರೋಗೆ ತನ್ನ ಜನರನ್ನು ರಕ್ಷಿಸಲು ಹೇಗೆ ಖಡ್ಗ ಮತ್ತು ಗುರಾಣಿಗಳ ಅವಶ್ಯಕತೆ ಇದೆ ಎನ್ನುವುದನ್ನು ಕಲ್ಪಿಸಿಕೊಳ್ಳಿ. ನಮ್ಮ ದೇಶವೂ ಅಂತಹ ಒಂದು ಸೂಪರ್ ಹೀರೋ ಆಗಿದ್ದು, ಅಗ್ನಿ-3 ಅದರ ಪ್ರಮುಖ ಆಯುಧಗಳಲ್ಲಿ ಒಂದಾಗಿದೆ. ಅಗ್ನಿ-3 ಒಂದು ಇಂಟರ್‌ಮೀಡಿಯಟ್ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಅಂದರೆ, ಇದು ಏನಾದರೂ ಭಾರವಾದುದನ್ನು ಹೊತ್ತು, 3,000ದಿಂದ 3,500 ಕಿಲೋಮೀಟರ್ ತನಕ ಹಾರಬಲ್ಲ ಒಂದು ರಾಕೆಟ್. ಉದಾಹರಣೆಗೆ, ಒಂದು ಕ್ರಿಕೆಟ್ ಚೆಂಡನ್ನು ಬಲವಾಗಿ ಎಸೆಯುವುದನ್ನು ಕಲ್ಪಿಸಿಕೊಳ್ಳಿ. ಅದು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎರಡೂ ದೇಶಗಳ ಒಟ್ಟು ಅಂತರಕ್ಕಿಂತ ಹೆಚ್ಚು ದೂರ ಸಾಗುವುದನ್ನು ಊಹಿಸಿ. ಅಗ್ನಿ-3 ಕ್ಷಿಪಣಿ ಅಷ್ಟು ಬಲಶಾಲಿಯಾಗಿದೆ! 2011ರ ನಂತರ, ಇದು ಮೌನವಾಗಿಯೇ ನಮ್ಮ ದೇಶವನ್ನು ರಕ್ಷಿಸುತ್ತಿದ್ದು, ಒಂದು ಪ್ರಬಲ ಕಾವಲು ನಾಯಿಯ ರೀತಿ ಕಾರ್ಯಾಚರಿಸುತ್ತಾ, ಬೇರೆ ದೇಶಗಳು ನಮಗೆ ತೊಂದರೆ ಕೊಡುವ ಕುರಿತು ಆಲೋಚಿಸಲೂ ಹೋಗದಂತೆ ಎಚ್ಚರಿಸುತ್ತಿದೆ.

ಅಗ್ನಿ-3 ಕುರಿತು ಅತ್ಯಂತ ಹೆಮ್ಮೆ ಮೂಡಿಸುವ ವಿಚಾರವೆಂದರೆ, ಇದನ್ನು ಸಂಪೂರ್ಣವಾಗಿ ಭಾರತೀಯ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳು ನಿರ್ಮಿಸಿದ್ದಾರೆ. ಇದನ್ನು ಯಾವುದೇ ವಿದೇಶೀ ಕಂಪನಿ ‌ನಿರ್ಮಿಸಿಲ್ಲ, ಅಥವಾ ಹೊರಗಿನಿಂದ ಇದಕ್ಕಾಗಿ ನಾವು ಯಾವುದೇ ತಂತ್ರಜ್ಞಾನವನ್ನು ತಂದಿಲ್ಲ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಬುದ್ಧಿವಂತ ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಇದನ್ನು ವಿನ್ಯಾಸಗೊಳಿಸಿ, ಸಂಪೂರ್ಣವಾಗಿ ನಿರ್ಮಿಸಿದ್ದಾರೆ. ಇದು ಘನ ಇಂಧನದಲ್ಲಿ ಕಾರ್ಯಾಚರಿಸುವ ಕ್ಷಿಪಣಿಯಾಗಿದೆ. ಅಂದರೆ, ಇದನ್ನು ನೀವು ಬಳಸುವ ಮುನ್ನ ಮರುಪೂರಣ ನಡೆಸಲು ಅಗತ್ಯವಿಲ್ಲದ ಬ್ಯಾಟರಿಯೊಂದನ್ನು ಒಳಗೆ ಹೊಂದಿರುವುದಕ್ಕೆ ಹೋಲಿಸಬಹುದು. ಈ ಕ್ಷಿಪಣಿ ಅಂದಾಜು 16.7 ಮೀಟರ್ ಎತ್ತರವಿದ್ದು, ಎರಡು ಮಹಡಿಗಳ ಶಾಲಾ ಕಟ್ಟಡದಿಂದಲೂ ಎತ್ತರವಿದೆ! ಇದು ಅಂದಾಜು 48,300 ಕೆಜಿ ತೂಕ ಹೊಂದಿದೆ. ಅಂದರೆ, ಇದು ಹತ್ತು ದೊಡ್ಡ ಆನೆಗಳನ್ನು ಜೊತೆಯಾಗಿಟ್ಟ ತೂಕಕ್ಕೆ ಸಮನಾಗುತ್ತದೆ! ಈ ಕ್ಷಿಪಣಿ ಎರಡು ಹಂತದ ರಾಕೆಟ್ ಶಕ್ತಿಯನ್ನು ಬಳಸಲಿದ್ದು, ಎರಡೂ ಹಂತಗಳನ್ನು ಒಂದರ ನಂತರ ಒಂದರಂತೆ ಬಳಸುತ್ತಾ, ಆಗಸದತ್ತ ಹೆಚ್ಚು ವೇಗವಾಗಿ ಮತ್ತು ಎತ್ತರಕ್ಕೆ ಒಯ್ಯುತ್ತದೆ.

ನಿಜಕ್ಕೂ ನನಗೆ ಹೆಚ್ಚಿನ ಸಂಭ್ರಮ ಉಂಟುಮಾಡಿರುವುದು ಈ ಕ್ಷಿಪಣಿಯ 'ಸ್ಮಾರ್ಟ್‌ನೆಸ್'. ಇದು ಒಂದು ಸ್ಟೆಪ್ ಡೌನ್ ಇನರ್ಷ್ಯಲ್ ನ್ಯಾವಿಗೇಶನ್ ಸಿಸ್ಟಮ್ ಎನ್ನುವ ವ್ಯವಸ್ಥೆಯನ್ನು ಹೊಂದಿದೆ. ಹೆಸರು ಕೇಳುವಾಗ ಇದೇನೋ ಸಂಕೀರ್ಣವಾದ ವ್ಯವಸ್ಥೆ ಎನ್ನುವಂತೆ ಭಾಸವಾದರೂ, ಇದೊಂದು ಸುಂದರವಾದ ವ್ಯವಸ್ಥೆಯಾಗಿದೆ. ನೀವು ನಿಮ್ಮ ಫೋನ್ ಒಳಗಿರುವ ಏನನ್ನೂ ತಿರುಗಿಸದಿದ್ದರೂ, ನೀವು ಯಾವ ದಿಕ್ಕಿಗೆ ಮುಖ ಮಾಡಿದ್ದೀರಿ ಎನ್ನುವುದನ್ನು ನಿಮ್ಮ ಫೋನ್ ಯಾವಾಗಲೂ ತಿಳಿದಿರುತ್ತದೆ ಅಲ್ಲವೇ? ಇದೇ ರೀತಿಯಲ್ಲಿ ಕ್ಷಿಪಣಿಯೂ ಸಹ ತಾನು ಎತ್ತ ಸಾಗುತ್ತಿದ್ದೇನೆ ಎನ್ನುವುದನ್ನು ತಿಳಿದಿರುತ್ತದೆ. ಕ್ಷಿಪಣಿಯ ಒಳಗೆ ಅಳವಡಿಸಿರುವ ಸೆನ್ಸರ್‌ಗಳು ಪ್ರತಿಯೊಂದು ಚಲನೆಯನ್ನೂ ಗುರುತಿಸುತ್ತವೆ. ಇನ್ನು ಆಗಸದಿಂದ ಬರುವ ಜಿಪಿಎಸ್ ಸಂಕೇತಗಳು ಕ್ಷಿಪಣಿಗೆ ಹೆಚ್ಚುವರಿ ಮಾಹಿತಿಗಳನ್ನು ಒದಗಿಸಿ, ಅದು ಅತ್ಯಂತ ನಿಖರವಾಗಿ ತನ್ನ ಗುರಿಯ ಮೇಲೆ ದಾಳಿ ನಡೆಸುವಂತೆ ಖಾತ್ರಿಪಡಿಸುತ್ತವೆ. ಇದು ತನ್ನ ಗುರಿಯ 40 ಮೀಟರ್ ಅಂತರದ ಒಳಗೆ ದಾಳಿ ಮಾಡುತ್ತದೆ. ಇದನ್ನು ಒಂದು ಫುಟ್‌ಬಾಲ್‌ ಮೈದಾನದ ಆಚೆಯಿಂದ ಡಾರ್ಟ್‌ಗಳನ್ನು ಎಸೆದು, ಗುರಿಯ ಮಧ್ಯಭಾಗಕ್ಕೆ ಗುರಿಯಿಟ್ಟು ಪೂರ್ಣ ಅಂಕ ಗಳಿಸುವುದಕ್ಕೆ ಹೋಲಿಸಬಹುದು.

Agni-3 (file photo)
ಶತಮಾನದ ಒಪ್ಪಂದ: 3.25 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 114 ರಫೇಲ್ ಜೆಟ್ ಖರೀದಿಯ ಕಥೆ

ಇದರ ಇಂಜಿನಿಯರಿಂಗ್ ಸಹ ಅದ್ಭುತವೇ ಆಗಿದೆ. ಕ್ಷಿಪಣಿಯ ಮೊದಲ ಹಂತ ಒಂದು ವಿಶೇಷವಾದ, ಅತ್ಯಂತ ಗಟ್ಟಿಮುಟ್ಟಾದ 'ಮ್ಯಾರೇಜಿಂಗ್ ಸ್ಟೀಲ್' ಎನ್ನುವ ಉಕ್ಕನ್ನು ಹೊಂದಿದ್ದು, ಇದು ಅತ್ಯಂತ ತೀವ್ರವಾದ ಬಿಸಿ ಮತ್ತು ಒತ್ತಡವನ್ನು ಎದುರಿಸಿ, ಒಡೆದು ಹೋಗದೆ ಉಳಿಯುತ್ತದೆ. ಇದನ್ನು ಸೂಪರ್ ಹೀರೋಗಳಿಗೆ ರಕ್ಷಣೆ ನೀಡುವ ಸೂಟ್‌ಗೆ ಹೋಲಿಸಬಹುದು. ಇನ್ನು ಕ್ಷಿಪಣಿಯ ಎರಡನೇ ಹಂತ ಕಾರ್ಬನ್ ಫೈಬರ್ ಅನ್ನು ಬಳಸುತ್ತದೆ. ಇದು ಹಗುರವಾದರೂ, ಅತ್ಯಂತ ಬಲಶಾಲಿಯಾಗಿದ್ದು, ಕ್ಷಿಪಣಿ ಇನ್ನಷ್ಟು ವೇಗವಾಗಿ ಮುಂದೊತ್ತಿ ಸಾಗಲು ನೆರವಾಗುತ್ತದೆ. ಎರಡೂ ಹಂತಗಳು ಥ್ರಸ್ಟ್ ವೆಕ್ಟರ್ ಕಂಟ್ರೋಲ್ ಎನ್ನುವ ವ್ಯವಸ್ಥೆಯನ್ನು ಹೊಂದಿದ್ದು, ಇದು ಹಾರಾಟ ನಡೆಸುವಾಗಲೇ ಸ್ವಲ್ಪ ಮಟ್ಟಿಗೆ ಪಥ ಬದಲಾವಣೆ ನಡೆಸಬಲ್ಲದು. ಸೈಕಲ್ ಚಲಾಯಿಸುವ ಸಂದರ್ಭದಲ್ಲಿ ನೀವು ಹೇಗೆ ಅದನ್ನು ತಿರುಗಿಸಲು ದೇಹದ ತೂಕವನ್ನು ಬಳಸುತ್ತೀರೋ, ಅದೇ ರೀತಿಯಲ್ಲಿ ಇದು ಕಾರ್ಯಾಚರಿಸುತ್ತದೆ. ಈ ವಿಧಾನ ಕ್ಷಿಪಣಿಯನ್ನು ಸ್ಥಿರವಾಗಿಟ್ಟು, ಗುರಿಯ ಮೇಲೆ ಅತ್ಯಂತ ನಿಖರವಾಗಿ ದಾಳಿ ನಡೆಸಲು ನೆರವಾಗುತ್ತದೆ.

ನಿಜಕ್ಕೂ ವಿಚಾರ ಮುಖ್ಯವಾಗುವುದು ಇಲ್ಲಿ. ಈಗ ನಡೆದಿರುವ ಪರೀಕ್ಷೆ ಕೇವಲ ಒಂದು ದೊಡ್ಡ ಆಯುಧವನ್ನು ಮಾತ್ರ ಒದಗಿಸಿಲ್ಲ. ಇದು ಭಾರತ ತನ್ನ ಮೇಲೆ ತಾನು ನಂಬಿಕೆ ಇಟ್ಟಿದ್ದು, ತನ್ನ ಕಾಲ ಮೇಲೆ ತಾನು ನಿಲ್ಲಬಲ್ಲದು, ಮತ್ತು ತನ್ನ ಸುರಕ್ಷತೆಗಾಗಿ ಬೇರೆ ದೇಶಗಳ ಮೇಲೆ ಅವಲಂಬಿತವಾಗುವ ಅವಶ್ಯಕತೆ ಹೊಂದಿಲ್ಲ ಎನ್ನುವುದನ್ನು ಸಾಬೀತುಪಡಿಸಲಿದೆ. ಪ್ರತಿಬಾರಿ ನಮ್ಮ ವಿಜ್ಞಾನಿಗಳು ಇಂತಹ ಹೊಸ ಆಯುಧ ನಿರ್ಮಾಣದಲ್ಲಿ ಯಶಸ್ವಿಯಾದಾಗ, ಅವರು ನಾವು ಭಾರತೀಯರು ಸಮರ್ಥರು, ಬುದ್ಧಿವಂತರು, ಮತ್ತು ದೊಡ್ಡ ಕನಸುಗಳನ್ನು ಕಾಣಲು ಹೆದರದವರು, ಮತ್ತು ಆ ಕನಸುಗಳನ್ನು ನನಸಾಗಿಸುವವರು ಎನ್ನುವ ಸಂದೇಶವನ್ನೂ ರವಾನಿಸುತ್ತಾರೆ. ಇಂತಹ ಸಾಧನೆಯೇ ನಮ್ಮ ಮನಸ್ಸು ಸಂಭ್ರಮ, ಹೆಮ್ಮೆಯಿಂದ ತುಂಬುವಂತೆ ಮಾಡುತ್ತದೆ.

ನಮ್ಮ ರಕ್ಷಣಾ ವಿಜ್ಞಾನಿಗಳು, ನಮ್ಮ ಸೇನಾ ಪಡೆಗಳು, ಮತ್ತು ಈ ಕ್ಷಿಪಣಿಗಾಗಿ ಹಗಲು ರಾತ್ರಿಯೆನ್ನದೆ ದಿನಗಟ್ಟಲೆ ಕಾರ್ಯಾಚರಿಸುವ ಎಲ್ಲರೂ ನಮ್ಮ ಗೌರವ ಮತ್ತು ಶ್ಲಾಘನೆಗೆ ಅರ್ಹರಾಗಿದ್ದಾರೆ. ಭಾರತದ ನಡೆ ಕೇವಲ ಇನ್ನಷ್ಟು ಆಯುಧಗಳನ್ನು ನಿರ್ಮಿಸುವುದಕ್ಕೆ ಮಾತ್ರ ಸೀಮಿತವಲ್ಲ. ಬದಲಿಗೆ, ನಮ್ಮ ದೇಶವನ್ನು ಇನ್ನಷ್ಟು ಶಕ್ತಿಶಾಲಿಯಾಗಿಸಿ, ಶತ್ರುಗಳು ನಮಗೆ ತೊಂದರೆ ನೀಡುವ ಆಲೋಚನೆ ಮಾಡಲೂ ಹೆದರುವಂತೆ ಮಾಡುವುದಾಗಿದೆ. ಶಕ್ತಿಯ ಮೂಲಕ ಮಾತ್ರವೇ ಇಂದು ಶಾಂತಿಯ ಸ್ಥಾಪನೆ ಸಾಧ್ಯ. ಈ ಕ್ಷಿಪಣಿ ನಾವು ದಿನದಿಂದ ದಿನಕ್ಕೆ ಹೆಚ್ಚು ಶಕ್ತಿಯುತರಾಗುತ್ತಿದ್ದೇವೆ ಎನ್ನುವುದನ್ನು ನಮಗೆ ನೆನಪಿಸುತ್ತಲೇ ಇರುತ್ತದೆ.

ಆದ್ದರಿಂದಲೇ ಫೆಬ್ರವರಿ 6, 2026 ಬಹಳ ಮುಖ್ಯವಾಗಿದೆ. ಈ ದಿನ ಭಾರತ ಕೇವಲ ಒಂದು ಕ್ಷಿಪಣಿಯನ್ನು ಮಾತ್ರವೇ ಪರೀಕ್ಷಿಸಿಲ್ಲ. ಬದಲಿಗೆ, ಭಾರತ ಈಗ ಬೆಳೆದು ನಿಂತಿರುವುದಕ್ಕೆ ಸಾಕ್ಷಿಯಾಗಿದ್ದು, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಿದ್ಧರಾಗಿದ್ದೇವೆ ಎನ್ನುವುದನ್ನು ತೋರಿಸಿದೆ. ನಾವು ಭಾರತದಂತಹ ದೇಶದ ಪ್ರಜೆಗಳಾಗಿರುವುದಕ್ಕೆ ಹೆಮ್ಮೆ ಪಡೋಣ. ಜೈ ಹಿಂದ್.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com