90 ದಿನಗಳ ಮುತ್ತಿಗೆ: Hormuz ಇಲ್ಲದೆ ಎಷ್ಟು ಕಾಲ ನಡೆದೀತು ಜಗತ್ತು? (ಜಾಗತಿಕ ಜಗಲಿ)

ಇರಾನ್ ಜೊತೆ ಅಮೆರಿಕ ಮತ್ತು ಇಸ್ರೇಲ್‌ಗಳ ಯುದ್ಧ ಆರಂಭಗೊಂಡು ಈಗಾಗಲೇ ಬಹುತೇಕ 90 ದಿನಗಳಾಗಿದ್ದು, ಇದರ ಪರಿಣಾಮವಾಗಿ ಈ ಪ್ರಮುಖ ತೈಲ ಮತ್ತು ಅನಿಲ ಮಾರ್ಗ ಬಹುತೇಕ ಮುಚ್ಚಲ್ಪಟ್ಟಿದೆ.
Hormuz
ಹಾರ್ಮೊಜ್ ಜಲಸಂಧಿonline desk
Updated on

ಹಿಂದೆ, 1967ರಲ್ಲಿ, ಈಜಿಪ್ಟ್ ಮತ್ತು ಇಸ್ರೇಲ್ ನಡುವೆ ಒಂದು ಯುದ್ಧ ಆರಂಭಗೊಂಡಿತು. ಅದರ ಪರಿಣಾಮವಾಗಿ, ಇದ್ದಕ್ಕಿದ್ದಂತೆ ಪ್ರಸಿದ್ಧ ಸೂಯೆಜ್ ಕಾಲುವೆ ಮುಚ್ಚಲ್ಪಟ್ಟಿತು. ಆ ಸಮಯದಲ್ಲಿ, 15 ಹಡಗುಗಳು ಕಾಲುವೆಯೊಳಗೆ ಸಿಲುಕಿಕೊಂಡವು. ಹಡಗುಗಳ ನಾವಿಕರು ಲಂಗರು ಇಳಿಸಿ, ಯುದ್ಧ ಸದ್ಯದಲ್ಲೇ ಮುಕ್ತಾಯ ಕಾಣಬಹುದು ಎಂದು ಅಲ್ಲೇ ಕಾಯತೊಡಗಿದರು.

ಆ ಯುದ್ಧ ಕೇವಲ ಆರು ದಿನಗಳಲ್ಲಿ ಮುಕ್ತಾಯ ಕಂಡು, ಬಳಿಕ 'ಆರು ದಿನಗಳ ಯುದ್ಧ' ಎಂಬ ಹೆಸರಿನಲ್ಲೇ ಕರೆಯಲ್ಪಟ್ಟಿತು. ಆದರೆ, ಎಲ್ಲರಿಗೂ ಆಘಾತವಾಗುವಂತೆ, ಸೂಯೆಜ್ ಕಾಲುವೆ ಮಾತ್ರ ಎಂಟು ವರ್ಷಗಳ ಸುದೀರ್ಘ ಅವಧಿಗೆ ಮುಚ್ಚಿತ್ತು. ಕೊನೆಗೂ 1975ರಲ್ಲಿ ಕಾಲುವೆಯ ಒಳಗಿದ್ದ ಹಡಗುಗಳಿಗೆ ಸಾಗಲು ಅನುಮತಿ ನೀಡಿದಾಗ, ಕೇವಲ ಎರಡು ಹಡಗುಗಳು ಮಾತ್ರವೇ ಸಂಚರಿಸಲು ಸಮರ್ಥವಾಗಿದ್ದವು. ಇನ್ನುಳಿದ ಹಡಗುಗಳು ಸಂಪೂರ್ಣವಾಗಿ ತುಕ್ಕು ಹಿಡಿದು, 'ಯಲ್ಲೋ ಫ್ಲೀಟ್' ಎನ್ನುವ ಅಡ್ಡ ಹೆಸರು ಸಂಪಾದಿಸಿದವು. ಹಾಗೆಂದು ಇತಿಹಾಸ ಯಥಾವತ್ತಾಗಿ ಪುನರಾವರ್ತನೆಗೊಳ್ಳುವುದಿಲ್ಲ. ಬದಲಿಗೆ, ಅದು ಹೊಸದಾದ ರೂಪದಲ್ಲಿ ಮರಳುತ್ತದೆ. ಈಗ ಹೊರ್ಮುಸ್ ಜಲಸಂಧಿಯಲ್ಲೂ ಅಂತಹದ್ದೇ ಬೆಳವಣಿಗೆ ನಡೆದರೆ ಏನಾಗಬಹುದು ಊಹಿಸಿಕೊಳ್ಳಿ. ಬಹಳಷ್ಟು ಕಡಿಮೆ ಜನರು ಅಂತಹ ಒಂದು ದೊಡ್ಡ ಅಪಾಯದ ಸಾಧ್ಯತೆ ಇದೆ ಎಂದು ಭಾವಿಸಿದ್ದು, ವೈಯಕ್ತಿಕವಾಗಿ ನಾನೂ ಹೊರ್ಮುಸ್ ಜಲಸಂಧಿಯಲ್ಲಿ ಇಂತಹ ಗಂಭೀರ ತೊಂದರೆ ಉಂಟಾಗಬಹುದು ಎಂದು ನಿರೀಕ್ಷಿಸುತ್ತಿಲ್ಲ.

ಆದರೆ, ಇರಾನ್ ಜೊತೆ ಅಮೆರಿಕ ಮತ್ತು ಇಸ್ರೇಲ್‌ಗಳ ಯುದ್ಧ ಆರಂಭಗೊಂಡು ಈಗಾಗಲೇ ಬಹುತೇಕ 90 ದಿನಗಳಾಗಿದ್ದು, ಇದರ ಪರಿಣಾಮವಾಗಿ ಈ ಪ್ರಮುಖ ತೈಲ ಮತ್ತು ಅನಿಲ ಮಾರ್ಗ ಬಹುತೇಕ ಮುಚ್ಚಲ್ಪಟ್ಟಿದೆ. ಇದೊಂದು ಕಾರಣವೇ ಊಹಿಸಲು ಸಾಧ್ಯವಿಲ್ಲದ ಘಟನೆ ನಡೆಯಬಹುದು ಎಂದು ಆತಂಕ ಹೊಂದಲು ಸಾಕಾಗಬಹುದು. ಏಕೆಂದರೆ, ಹಿಂದೆಯೂ ಇಂತಹ ಬೆಳವಣಿಗೆಗಳು ನಡೆದಿವೆ. ಬಹುಶಃ ಇದನ್ನೊಂದು ಐತಿಹಾಸಿಕ ವೈಜ್ಞಾನಿಕ ಕಥೆ ಎನ್ನಬಹುದೇನೋ!

ಸದ್ಯದ ಮಟ್ಟಿಗೆ ಅಮೆರಿಕ ಮತ್ತು ಇರಾನ್ ಎರಡೂ ಉದ್ವಿಗ್ನತೆಯನ್ನು ಕಡಿಮೆಗೊಳಿಸಲು ಪ್ರಯತ್ನ ನಡೆಸುತ್ತಿದ್ದು, ಪಾಕಿಸ್ತಾನ ಉಭಯ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಿದೆ. ಉಭಯ ಪಕ್ಷಗಳಿಗೂ ಜಗತ್ತಿನ ತೈಲ ಮತ್ತು ಅನಿಲ ಪೂರೈಕೆಯ ಅತ್ಯಂತ ಮಹತ್ವದ ರಕ್ತನಾಳದಂತಿರುವ ಹೊರ್ಮುಸ್ ಜಲಸಂಧಿ ತೆರೆಯಬೇಕಿದೆ. ಅಷ್ಟಿದ್ದರೂ, ಒಂದು ಸರಳವಾದ, ಒಂದು ಪುಟದ ಒಪ್ಪಂದ ತಕ್ಷಣವೇ ಪರಿಸ್ಥಿತಿಯನ್ನು ಶಾಂತಗೊಳಿಸಿ, ಸುರಕ್ಷತೆ ಖಾತ್ರಿಪಡಿಸಲು ಸಾಧ್ಯವಿಲ್ಲ. ಉಭಯ ದೇಶಗಳ ನಡುವಿನ ಆಳವಾದ ಅಪನಂಬಿಕೆ ಮತ್ತು ಪರಿಹರಿಸಲಾಗದ ಉದ್ವಿಗ್ನತೆಗಳು ಹಲವು ತಿಂಗಳ ಕಾಲ ತೊಂದರೆ ನೀಡಬಲ್ಲದು.

ಇದೇ ಕಾರಣಕ್ಕಾಗಿ ಯುಎಇ ಮೌನವಾಗಿಯೇ ಅತ್ಯಂತ ಕೆಟ್ಟ ಪರಿಸ್ಥಿತಿಗೆ ಸಜ್ಜಾಗುತ್ತಿದೆ. ಅದು ಹೊರ್ಮುಸ್ ಜಲಸಂಧಿಯನ್ನು ಸ್ಪರ್ಶಿಸದೆಯೇ ತೈಲ ಸಾಗಾಣಿಕೆ ನಡೆಸುವ ಎರಡನೇ ಪೈಪ್‌ಲೈನ್ ನಿರ್ಮಾಣ ಯೋಜನೆಯನ್ನು ವೇಗಗೊಳಿಸುತ್ತಿದ್ದು, ಇದು 2027ರಲ್ಲಿ ಆರಂಭಗೊಳ್ಳುವ ನಿರೀಕ್ಷೆಗಳಿವೆ. ರಾಜತಾಂತ್ರಿಕರು ಶಾಂತಿ ಮಾತುಕತೆ ನಡೆಸುತ್ತಿದ್ದರೂ, ಅಬು ಧಾಬಿ ಮಾತ್ರ ಹೊರ್ಮುಸ್ ಜಲಸಂಧಿ ಜನರು ಅಂದುಕೊಳ್ಳುವುದಕ್ಕಿಂತಲೂ ಹೆಚ್ಚು ಕಾಲದ ತನಕ ಅಪಾಯಕಾರಿಯಾಗಿಯೇ ಮುಂದುವರಿಯಲಿದೆ ಎಂದು ಭಾವಿಸಿದಂತಿದೆ.

ಇಷ್ಟಾದರೂ, ತೈಲ ಮತ್ತು ಆರ್ಥಿಕ ಜಗತ್ತಿನ ತಜ್ಞರು ಆತಂಕಕ್ಕೆ ಒಳಗಾಗಿಲ್ಲ. ಇತ್ತೀಚಿನ ಬ್ಲೂಮ್‌ಬರ್ಗ್ ಅಭಿಪ್ರಾಯ ಲೇಖನದ ಪ್ರಕಾರ, ಬಹಳಷ್ಟು ಜನರು ಹೊರ್ಮುಸ್ ಜಲಸಂಧಿ ಮುಂದಿನ ತಿಂಗಳಲ್ಲಿ ತೆರೆಯಬಹುದು ಎಂದು ಭಾವಿಸಿದ್ದಾರೆ. ಇನ್ನೂ ಮುಂದೆ ಹೋದರೆ, ಜುಲೈ ತಿಂಗಳಲ್ಲಿ ಮುಕ್ತವಾಗಬಹುದು ಎನ್ನುವುದು ಅವರ ಅಭಿಪ್ರಾಯ. ಇದರ ಹಿಂದಿರುವ ಲೆಕ್ಕಾಚಾರವೂ ಸರಳವಾಗಿದೆ. ಒಂದು ವೇಳೆ ಜಲಸಂಧಿ ಸುದೀರ್ಘ ಅವಧಿಗೆ ಮುಚ್ಚಿಯೇ ಇದ್ದರೆ, ಬೆಲೆಗಳು ವಿಪರೀತ ಹೆಚ್ಚಾಗಿ, ಸಂಪೂರ್ಣ ಜಾಗತಿಕ ಆರ್ಥಿಕತೆಗೆ ಹೊಡೆತ ನೀಡಲಿದೆ. ಏನಾದರೂ ಒಂದು ವಿಚಾರ ಶಾಶ್ವತವಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದರೆ, ಅದು ಕ್ರಮೇಣ ನಿಂತುಬಿಡುತ್ತದೆ ಎಂದು ಅಮೆರಿಕನ್ ಅರ್ಥಶಾಸ್ತ್ರಜ್ಞ ಹರ್ಬರ್ಟ್ ಸ್ಟೀನ್ ಹಿಂದೊಮ್ಮೆ ಹೇಳಿದ್ದರು. ಹೊರ್ಮುಸ್ ಜಲಸಂಧಿಯ ಕುರಿತು ವಾಲ್ ಸ್ಟ್ರೀಟ್ ಸಹ ಇದೇ ಅಭಿಪ್ರಾಯ ಹೊಂದಿದೆ.

Hormuz
ವ್ಯಾಪಾರ ಕೊರತೆ ಸರಿದೂಗಿಸಲು ಚಿನ್ನದ ತೆರಿಗೆ ಹೆಚ್ಚಳ ಪರಿಹಾರವೇ? (ಜಾಗತಿಕ ಜಗಲಿ)

ಆದರೆ, ನೈಜ ಸಮಸ್ಯೆ ಏನು ಗೊತ್ತೇ? ಹೊರ್ಮುಸ್ ಜಲಸಂಧಿಯ ಮುಚ್ಚಿಗೆ ಇನ್ನೂ ರಾಜಿ ಮಾಡಿಕೊಳ್ಳುವಷ್ಟರ ಮಟ್ಟಿನ ನೋವು ಉಂಟುಮಾಡಿಲ್ಲ. ಡೊನಾಲ್ಡ್ ಟ್ರಂಪ್ ಷೇರು ಮಾರುಕಟ್ಟೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಆ ಕ್ಷೇತ್ರದಲ್ಲಿ ಮಾತ್ರ ಆಶ್ಚರ್ಯಕರವಾಗಿ ಇರಾನ್ ಯುದ್ಧ ದುಬಾರಿಯಾಗಿಲ್ಲ. ಅಮೆರಿಕದ ಬಹುದೊಡ್ಡ ಕಂಪನಿಗಳ ಆರೋಗ್ಯದ ಪ್ರತಿಫಲನ ಎನ್ನಬಹುದಾದ ಎಸ್&ಪಿ 500 ತನ್ನ ದಾಖಲೆಯ ಗರಿಷ್ಠ ಪ್ರಮಾಣದ ಬಳಿ ಇದ್ದು, ವಾಸ್ತವವಾಗಿ ಯುದ್ಧ ಆರಂಭಗೊಂಡ ಬಳಿಕ ಬಹುತೇಕ 10% ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆಗಳು ಏರಿಕೆಯಾಗಿದ್ದರೂ, ಅವು 2022ರ ಗರಿಷ್ಠ ದರಕ್ಕಿಂತ ಇಂದಿಗೂ ಕಡಿಮೆಯೇ ಇವೆ. ಇನ್ನು ಅಮೆರಿಕನ್ ಆರ್ಥಿಕತೆಯೂ ಬಲವಾಗಿ ಬೆಳವಣಿಗೆ ಹೊಂದುತ್ತಿದೆ. ಮನೆಯಲ್ಲಿ ಇಷ್ಟು ಕಡಿಮೆ ಯುದ್ಧದ ಆಘಾತ ಉಂಟಾಗಿರುವಾಗ, ವಾಷಿಂಗ್ಟನ್ ರಾಜಿಗೆ ಮುಂದಾಗಲು ಯಾವುದೇ ಅವಸರ ಹೊಂದಿಲ್ಲ.

ಇನ್ನೊಂದೆಡೆ ಇರಾನ್ ಬಹಳಷ್ಟು ಹೆಚ್ಚು ನೋವು ತಿಂದಿದೆಯಾದರೂ, ಬಾಗಲು ಸಿದ್ಧವಿಲ್ಲ. ಅಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದ್ದು, ಆಹಾರ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಇನ್ನು ಇರಾನಿನ ಕರೆನ್ಸಿಯಂತೂ ವೇಗವಾಗಿ ಕುಸಿಯುತ್ತಿದೆ. ಅಮೆರಿಕದ ನೌಕಾ ದಿಗ್ಬಂಧನದ ಪರಿಣಾಮವಾಗಿ, ಇರಾನ್ ತೈಲ ಉತ್ಪಾದನೆಯನ್ನೂ ಕಡಿತಗೊಳಿಸುವ ಒತ್ತಡಕ್ಕೆ ಸಿಲುಕಿದೆ. ಇಷ್ಟೆಲ್ಲ ಆದರೂ, ಒಂದು ದೇಶ ತನ್ನ ಉಳಿವಿನ ಪ್ರಶ್ನೆ ಎದುರಾದಾಗ ಎಂತಹ ಗಂಭೀರ ಒತ್ತಡವನ್ನು ಬೇಕಾದರೂ ಎದುರಿಸಿ, ಸಹಿಸಿ ನಿಲ್ಲಬಲ್ಲದು ಎನ್ನುವುದನ್ನು ಇತಿಹಾಸ ಮತ್ತೆ ಮತ್ತೆ ಸಾಬೀತುಪಡಿಸಿದೆ. ಆದ್ದರಿಂದ, ಈಗ ಉಭಯ ಬದಿಗಳೂ ಮೌನವಾಗಿಯೇ ಕಾದು ಕುಳಿತಿದ್ದು, ತನ್ನ ಎದುರಾಳಿ ಮೊದಲು ಬಾಗುವಂತಾಗಲಿ ಎಂದು ಆಶಿಸುತ್ತಿವೆ.

ಈ ಶಾಂತಿಯ ಕೆಳಗೆಲ್ಲೋ ಒಂದು ನಿಧಾನವಾದ ಬಿಕ್ಕಟ್ಟೂ ವೃದ್ಧಿಸುತ್ತಿದೆ. ಸಾಮಾನ್ಯವಾಗಿ ಹೊರ್ಮುಸ್ ಜಲಸಂಧಿಯ ಮೂಲಕ ಹಾದುಹೋಗುವ ಬಹುತೇಕ 20 ಮಿಲಿಯನ್ ಬ್ಯಾರಲ್‌ಗಳಷ್ಟು ತೈಲದ ನಷ್ಟವನ್ನು ಜಗತ್ತು ಹೇಗೋ ಸಹಿಸಿಕೊಂಡಿದೆ.

ಅದೃಷ್ಟವಶಾತ್, ಯುದ್ಧಕ್ಕೆ ಮುನ್ನವೂ ತೈಲ ಪೂರೈಕೆ ಸಾಕಷ್ಟು ಹೆಚ್ಚಾಗಿಯೇ ಇತ್ತು. ಸೌದಿ ಅರೇಬಿಯಾ ಮತ್ತು ಯುಎಇಗಳು ಬೈಪಾಸ್ ಪೈಪ್‌ಲೈನ್‌ಗಳನ್ನು ಬಳಸಿಕೊಂಡಿದ್ದು, ಶ್ರೀಮಂತ ದೇಶಗಳು ತಮ್ಮ ಸಂಗ್ರಹದ ತೈಲ ಬಿಡುಗಡೆಗೊಳಿಸಿದವು. ಚೀನಾ ತನ್ನ ಆಮದು ಕಡಿತಗೊಳಿಸಿದರೆ, ಬಡ ರಾಷ್ಟ್ರಗಳು ತೈಲ ಬೆಲೆ ಹೆಚ್ಚಾದಂತೆ ಇಂಧನ ಬಳಕೆ ಕಡಿತಗೊಳಿಸಿದವು. ಹಾಗೆಂದು ಈ ಕ್ರಮಗಳೇನು ಶಾಶ್ವತ ಪರಿಹಾರಗಳಲ್ಲ. ಪ್ರತಿಯೊಂದು ದಿನವೂ ಸಮಸ್ಯೆ ಹತ್ತಿರಾಗುತ್ತಿದೆ.

ಒಂದು ವೇಳೆ ಹೊರ್ಮುಸ್ ಜಲಸಂಧಿ ಇನ್ನಷ್ಟು ದೀರ್ಘಕಾಲ ಸ್ಥಗಿತಗೊಂಡೇ ಇದ್ದರೆ, ಆಗ ಸರ್ಕಾರಗಳೂ ತುರ್ತು ಇಂಧನ ಬಳಕೆಯ ಮಿತಿ ವಿಧಿಸಬೇಕಾಗಿ ಬರಬಹುದು. ಅಥವಾ, ಬೆಲೆಗಳು ವಿಪರೀತವಾಗಿ ಹೆಚ್ಚಿ, ಜನರು ಇಂಧನ ಖರೀದಿಸುವುದನ್ನೇ ನಿಲ್ಲಿಸಬಹುದು.

Hormuz
ಸ್ಫೋಟವಿಲ್ಲ, ಬ್ಲೇಡ್‌ಗಳೇ ಜೀವಾಳ: ಟರ್ಕಿಯ 'ಫ್ಲೈಯಿಂಗ್ ಜಿನ್ಸು' ಕ್ಷಿಪಣಿ (ಜಾಗತಿಕ ಜಗಲಿ)

ಇಂತಹ ಬೆಳವಣಿಗೆ ಜಗತ್ತನ್ನು ಯಾತನಾಮಯವಾಗಿ ನಿಧಾನಗೊಳಿಸೀತು. ಇದು 1973 ಮತ್ತು 1979ರ ಆಘಾತಗಳಂತೆಯೇ ಕಾಣಿಸಿಕೊಳ್ಳಬಹುದು. ಹೊಸ ಪೈಪ್‌ಲೈನ್‌ಗಳು ಮತ್ತು ಹೊಸ ತೈಲ ಮೂಲಗಳು ಕ್ರಮೇಣ ಕಾಣಿಸಿಕೊಳ್ಳಬಹುದು. ಆದರೆ, ಅವುಗಳ ನಿರ್ಮಾಣಕ್ಕೆ ಹಲವು ವರ್ಷಗಳೇ ಬೇಕಾಗುತ್ತವೆ. ಅದರಲ್ಲೂ ಕತಾರ್ ಸಮಸ್ಯೆಗೆ ಸಿಲುಕಿದ್ದು, ಅದಕ್ಕೆ ಹೊರ್ಮುಸ್ ಜಲಸಂಧಿಯ ಹೊರತಾಗಿ ತನ್ನ ನೈಸರ್ಗಿಕ ಅನಿಲವನ್ನು ರಫ್ತು ಮಾಡಲು ಬೇರೆ ಮಾರ್ಗವೇ ಇಲ್ಲ.

ದೀರ್ಘಕಾಲದ ತನಕ ಹೊರ್ಮುಸ್ ಜಲಸಂಧಿ ಮುಚ್ಚಿರುವುದು ಗಂಭೀರವಾಗಿ ಪರಿಗಣಿಸಬೇಕಾದ ಆತಂಕ. ಆದ್ದರಿಂದಲೇ ಒಂದು ತಾತ್ಕಾಲಿಕವಾದ, ಪರಿಣಾಮಕಾರಿಯಲ್ಲದ ಒಪ್ಪಂದವೇ ಈಗ ಏರ್ಪಡುವ ಸಾಧ್ಯತೆಗಳಿದ್ದು, ಯುದ್ಧವನ್ನು ದೀರ್ಘಕಾಲ ಎಳೆಯುವುದಕ್ಕಿಂತ ಅದುವೇ ಪರಿಣಾಮಕಾರಿಯಾಗಿದೆ. ಆದರೆ, 'ಯಲ್ಲೋ ಫ್ಲೀಟ್' ಇಂದಿಗೂ ಒಂದು ಎಚ್ಚರಿಕೆಯಂತಿದೆ.

ಕೆಲವೊಂದು ಬಾರಿ ಅನಿರೀಕ್ಷಿತ ಬೆಳವಣಿಗೆಗಳೂ ಸಹಜ ಎನಿಸುವಂತಾಗುತ್ತದೆ. ನಾವು ಎಲ್ಲವೂ ಒಳ್ಳೆಯದಾಗಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡರೂ, ಅತ್ಯಂತ ಕೆಟ್ಟದಾದ ವಿದ್ಯಮಾನ ನಡೆದರೆ ಏನಾಗಬಹುದು ಎಂದು ನಿರೀಕ್ಷಿಸಲೂಬಹುದು.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com