ಲ್ಯಾಕ್ಸ್ ಎರೋಸಿವ್ ಗ್ಯಾಸ್ಟ್ರೈಟಿಸ್ ಸಮಸ್ಯೆ (ಕುಶಲವೇ ಕ್ಷೇಮವೇ)

ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಉಂಟಾಗುವ ಗ್ಯಾಸ್ಟ್ರೈಟಿಸ್ ಸಮಸ್ಯೆ
LAX Erosive Gastritis
ಲ್ಯಾಕ್ಸ್ ಎರೋಸಿವ್ ಗ್ಯಾಸ್ಟ್ರೈಟಿಸ್ ಸಮಸ್ಯೆ
Updated on: 

ಇಂದಿನ ಜೀವನಶೈಲಿ ಮತ್ತು ಬದಲಾದ ಆಹಾರ ಪದ್ಧತಿಯು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅಂತಹ ಒಂದು ಪ್ರಮುಖ ಸಮಸ್ಯೆಯೇ 'ಲ್ಯಾಕ್ಸ್ ಎರೋಸಿವ್ ಗ್ಯಾಸ್ಟ್ರೈಟಿಸ್'. ಇದು ಹೊಟ್ಟೆಯ ಒಳಪದರದಲ್ಲಿ ಉಂಟಾಗುವ ಉರಿಯೂತ ಮತ್ತು ಸವೆತ. ಇದರಿಂದಾಗಿ ದಿನವಿಡೀ ಅಜೀರ್ಣ, ಹೊಟ್ಟೆ ಉರಿ ಮತ್ತಿತರ ಸಮಸ್ಯೆಗಳುಂಟಾಗಿ ನಮ್ಮ ದೈನಂದಿನ ಚಟುವಟಿಕೆಗಳೇ ಅಸ್ತವ್ಯಸ್ತವಾಗಬಹುದು.

ಲ್ಯಾಕ್ಸ್ ಎರೋಸಿವ್ ಗ್ಯಾಸ್ಟ್ರೈಟಿಸ್ ಎಂದರೇನು?

ನಾವು ಸೇವಿಸುವ ಆಹಾರ ಜೀರ್ಣವಾಗಲು ಹೊಟ್ಟೆಯಲ್ಲಿ ಆಮ್ಲ ಉತ್ಪತ್ತಿಯಾಗುತ್ತದೆ. ಈ ಆಮ್ಲದಿಂದ ಹೊಟ್ಟೆಗೆ ಹಾನಿಯಾಗದಂತೆ ಅದರ ಒಳಪದರದ ಮೇಲೆ ಲೋಳೆಯಂತಹ ರಕ್ಷಣಾತ್ಮಕ ಪದರವಿರುತ್ತದೆ. ಈ ಪದರಕ್ಕೆ ಹಾನಿಯಾದಾಗ ಹೊಟ್ಟೆಯ ಆಮ್ಲವು ಒಳಪದರವನ್ನು ಕೆರಳಿಸಿ ಸವೆತವನ್ನು ಉಂಟುಮಾಡಬಹುದು. ಈ ಸ್ಥಿತಿಯನ್ನು ಲ್ಯಾಕ್ಸ್ ಎರೋಸಿವ್ ಗ್ಯಾಸ್ಟ್ರೈಟಿಸ್ ಎಂದು ಕರೆಯಲಾಗುತ್ತದೆ.

ಲ್ಯಾಕ್ಸ್ ಎರೋಸಿವ್ ಗ್ಯಾಸ್ಟ್ರೈಟಿಸ್ ಯಾವುದೇ ವಯಸ್ಸಿನ ವಯಸ್ಕರಲ್ಲಿ ಕಾಣಿಸಿಕೊಳ್ಳಬಹುದು. ಕೆಲವು ಔಷಧಗಳನ್ನು ನಿಯಮಿತವಾಗಿ ಸೇವಿಸುವವರು, ವಯಸ್ಸಾದವರು, ಅತಿಯಾಗಿ ಮದ್ಯಪಾನ ಮಾಡುವವರು ಮತ್ತು ಕೆಲವು ಸೋಂಕುಗಳಿಂದ ಬಳಲುವವರಿಗೆ ಇದರ ಅಪಾಯ ಹೆಚ್ಚಾಗಿರುತ್ತದೆ.

ಲ್ಯಾಕ್ಸ್ ಎರೋಸಿವ್ ಗ್ಯಾಸ್ಟ್ರೈಟಿಸ್ ಸಮಸ್ಯೆಗೆ ಕಾರಣವೇನು?

ಈ ರೋಗದ ಪ್ರಮುಖ ಕಾರಣಗಳಲ್ಲಿ ಒಂದು ಹೆಲಿಕೋಬ್ಯಾಕ್ಟರ್ ಪೈಲೋರಿ ಎಂಬ ಬ್ಯಾಕ್ಟೀರಿಯಾದ ಸೋಂಕು. ಇದನ್ನು ಎಚ್. ಪೈಲೋರಿ ಎಂದು ಕರೆಯಲಾಗುತ್ತದೆ. ಈ ಬ್ಯಾಕ್ಟೀರಿಯಾ ಹೊಟ್ಟೆಯಲ್ಲಿದ್ದು ದೀರ್ಘಕಾಲ ಉರಿಯೂತವನ್ನು ಉಂಟುಮಾಡಬಹುದು. ಕೆಲವೊಮ್ಮೆ ಇದು ಹೊಟ್ಟೆಯಲ್ಲಿ ಹುಣ್ಣುಗಳಿಗೂ ಕಾರಣವಾಗುತ್ತದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಈ ಸೋಂಕು ಹೆಚ್ಚು ಕಂಡುಬರುತ್ತದೆ. ಅತಿಯಾದ ಮದ್ಯಪಾನ, ಪಿತ್ತರಸವು ಹೊಟ್ಟೆಯೊಳಗೇ ಇರುವುದು ಮತ್ತು ದೊಡ್ಡ ಶಸ್ತ್ರಚಿಕಿತ್ಸೆ ಅಥವಾ ಗಂಭೀರ ಸೋಂಕಿನಂತಹ ದೈಹಿಕ ಸಮಸ್ಯೆಗಳೂ ಹೊಟ್ಟೆಯ ಒಳಪದರಕ್ಕೆ ಹಾನಿ ಮಾಡಬಹುದು. ಭಾರತೀಯ ಆಹಾರದಲ್ಲಿನ ಖಾರ, ಉಪ್ಪಿನಕಾಯಿ, ಚಟ್ನಿ, ಎಣ್ಣೆಯಲ್ಲಿ ಕರಿದ ತಿಂಡಿಗಳು ಮತ್ತು ಹೆಚ್ಚು ಕಾಫಿ ಕುಡಿಯುವುದು ಕೆಲವರಲ್ಲಿ ಲಕ್ಷಣಗಳನ್ನು ಹೆಚ್ಚಿಸಬಹುದು.

ಲ್ಯಾಕ್ಸ್ ಎರೋಸಿವ್ ಗ್ಯಾಸ್ಟ್ರೈಟಿಸ್ ಲಕ್ಷಣಗಳು

ಈ ಕಾಯಿಲೆಯ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಕೆಲವರಿಗೆ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿರಬಹುದು. ಇನ್ನು ಕೆಲವರಿಗೆ ಹೊಟ್ಟೆಯ ಮೇಲ್ಭಾಗದಲ್ಲಿ ಉರಿ ಅಥವಾ ನೋವು, ಅಜೀರ್ಣ, ವಾಕರಿಕೆ, ವಾಂತಿ, ಹಸಿವು ಕಡಿಮೆಯಾಗುವುದು ಅಥವಾ ಸ್ವಲ್ಪ ಆಹಾರ ಸೇವಿಸಿದರೂ ಹೊಟ್ಟೆ ತುಂಬಿದ ಅನುಭವವಾಗಬಹುದು. ಕೆಲವು ಆಹಾರಗಳು ಅಥವಾ ಔಷಧಗಳನ್ನು ಸೇವಿಸಿದ ಬಳಿಕ ತೊಂದರೆ ಹೆಚ್ಚಾಗಬಹುದು. ಗಂಭೀರ ಸಂದರ್ಭಗಳಲ್ಲಿ ಹೊಟ್ಟೆಯ ಒಳಪದರದ ಸವೆತದಿಂದ ರಕ್ತಸ್ರಾವ ಉಂಟಾಗಬಹುದು. ಕಪ್ಪು ಬಣ್ಣದ ಮಲ, ರಕ್ತದ ವಾಂತಿ ಅಥವಾ ಕಾಫಿ ಪುಡಿಯಂತೆ ಕಾಣುವ ವಾಂತಿ, ತಲೆಸುತ್ತು, ಅತಿಯಾದ ದೌರ್ಬಲ್ಯ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.

LAX Erosive Gastritis
ಸ್ವಯಂ ವೈದ್ಯ: ಕ್ಷಣಿಕ ಪರಿಹಾರ, ದೀರ್ಘಕಾಲ ಅಪಾಯ (ಕುಶಲವೇ ಕ್ಷೇಮವೇ)

ರೋಗನಿರ್ಣಯಕ್ಕಾಗಿ ವೈದ್ಯರು ರೋಗಿಯ ಲಕ್ಷಣಗಳು ಮತ್ತು ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸುತ್ತಾರೆ. ಅಗತ್ಯವಿದ್ದರೆ ಎಂಡೋಸ್ಕೋಪಿ ಪರೀಕ್ಷೆ ಮಾಡಲಾಗುತ್ತದೆ. ಎಚ್. ಪೈಲೋರಿ ಸೋಂಕು ಪತ್ತೆಹಚ್ಚಲು ಮಲ ಪರೀಕ್ಷೆ ಅಥವಾ ಉಸಿರಾಟದ ಪರೀಕ್ಷೆಯನ್ನೂ ಮಾಡಬಹುದು.

ಲ್ಯಾಕ್ಸ್ ಎರೋಸಿವ್ ಗ್ಯಾಸ್ಟ್ರೈಟಿಸ್ ಸಮಸ್ಯೆಗೆ ಚಿಕಿತ್ಸೆ

ಚಿಕಿತ್ಸೆಯು ಕಾಯಿಲೆಯ ಮೂಲ ಕಾರಣವನ್ನು ಅವಲಂಬಿಸಿರುತ್ತದೆ. ಹೊಟ್ಟೆಯ ಆಮ್ಲದ ಉತ್ಪಾದನೆಯನ್ನು ಕಡಿಮೆ ಮಾಡುವ ಪ್ರೋಟಾನ್ ಪಂಪ್ ಇನ್‌ಹಿಬಿಟರ್‌ಗಳಂತಹ ಔಷಧಗಳನ್ನು ವೈದ್ಯರು ಸೂಚಿಸಬಹುದು. ಎಚ್. ಪೈಲೋರಿ ಸೋಂಕು ದೃಢಪಟ್ಟರೆ ಸಾಮಾನ್ಯವಾಗಿ ಆ್ಯಂಟಿಬಯಾಟಿಕ್‌ಗಳು ಮತ್ತು ಆಮ್ಲ ಕಡಿಮೆ ಮಾಡುವ ಔಷಧಗಳ ಸಂಯೋಜನಾ ಚಿಕಿತ್ಸೆ ನೀಡಲಾಗುತ್ತದೆ. ಲಕ್ಷಣಗಳು ಕಡಿಮೆಯಾದರೂ ವೈದ್ಯರು ಸೂಚಿಸಿದ ಚಿಕಿತ್ಸೆಯನ್ನು ಪೂರ್ಣಗೊಳಿಸಬೇಕು. ಸ್ವಯಂ ವೈದ್ಯ ಎಂದಿಗೂ ಮಾಡಿಕೊಳ್ಳಬಾರದು.

ಈ ರೋಗವನ್ನು ತಡೆಗಟ್ಟುವ ಕ್ರಮಗಳೆಂದರೆ ಅಗತ್ಯವಿಲ್ಲದ ನೋವು ನಿವಾರಕ ಔಷಧಗಳ ಬಳಕೆಯನ್ನು ನಿಲ್ಲಿಸುವುದು, ಮದ್ಯಪಾನವನ್ನು, ಧೂಮಪಾನ ತ್ಯಜಿಸುವುದು ಅಥವಾ ಮಿತಿಗೊಳಿಸುವುದು ಮತ್ತು ಸಮತೋಲಿತ ಆಹಾರ ಸೇವಿಸುವುದು. ಇಡ್ಲಿ, ದೋಸೆ, ಅನ್ನ, ಚಪಾತಿ, ಬೇಳೆಕಾಳುಗಳು, ತಾಜಾ ತರಕಾರಿಗಳು, ಹಣ್ಣುಗಳು, ಹಸಿರು ಸೊಪ್ಪುಗಳು, ಹಾಲು, ಮೊಸರು, ತುಪ್ಪ ಮತ್ತು ಮಜ್ಜಿಗೆಯನ್ನು ನಿಯಮಿತವಾಗಿ ಹಿತಮಿತವಾಗಿ ಸೇವಿಸಿದರೆ ಅರೋಗ್ಯಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳೂ ಸಿಗುತ್ತವೆ. ಯಾವ ಆಹಾರ ಸೇವಿಸಿದಾಗ ತೊಂದರೆ ಹೆಚ್ಚಾಗುತ್ತದೆ ಎಂಬುದನ್ನು ಗಮನಿಸಿ ಅಂತಹ ಆಹಾರವನ್ನು ಕಡಿಮೆ ಮಾಡಬಹುದು. ಶುದ್ಧ ನೀರು ಕುಡಿಯುವುದು, ಕೈಗಳನ್ನು ಸ್ವಚ್ಛವಾಗಿ ತೊಳೆಯುವುದು ಮತ್ತು ಆಹಾರದ ನೈರ್ಮಲ್ಯ ಕಾಪಾಡುವುದೂ ಉತ್ತಮ ಅಭ್ಯಾಸಗಳು.

LAX Erosive Gastritis
ರಾಬ್ಡೋಮಯೋಲಿಸಿಸ್ ಎಂಬ ಗಂಭೀರ ಆರೋಗ್ಯ ಸಮಸ್ಯೆ (ಕುಶಲವೇ ಕ್ಷೇಮವೇ)

ಆಯುರ್ವೇದದ ಪ್ರಕಾರ ಅತಿಯಾದ ಖಾರ, ಹುಳಿ, ಉಪ್ಪಿನ ಆಹಾರ, ಅನಿಯಮಿತ ಆಹಾರ ಸೇವನೆ ಮತ್ತು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡುವ ಅಭ್ಯಾಸಗಳು ಪಿತ್ತದೋಷವನ್ನು ಹೆಚ್ಚಿಸಬಹುದು. ಇದರಿಂದ ಹೊಟ್ಟೆಯ ಉರಿ, ಹುಳಿ ತೇಗು, ಅಜೀರ್ಣ ಮತ್ತು ವಾಕರಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭಗಳಲ್ಲಿ ಆಹಾರದಲ್ಲಿ ಮಿತವಾದ ಖಾರ, ಸಮಯಕ್ಕೆ ಸರಿಯಾಗಿ ಊಟ, ಸಾಕಷ್ಟು ನೀರು ಮತ್ತು ವೈಯಕ್ತಿಕ ಆರೋಗ್ಯಕ್ಕೆ ಹೊಂದುವ ಆಹಾರ ಪದ್ಧತಿಯನ್ನು ಅನುಸರಿಸಲು ಆಯುರ್ವೇದ ಸಲಹೆ ನೀಡುತ್ತದೆ.

ಕೊನೆಮಾತು: ಒಟ್ಟಾರೆಯಾಗಿ ಹೇಳುವುದಾದರೆ ಹೊಟ್ಟೆಯ ಉರಿ ಅಥವಾ ಅಜೀರ್ಣವನ್ನು ಸಾಮಾನ್ಯ ಸಮಸ್ಯೆಯೆಂದು ನಿರ್ಲಕ್ಷಿಸಬಾರದು. ರಕ್ತದ ವಾಂತಿ, ಕಪ್ಪು ಮಲ, ಮೂರ್ಛೆ ಬರುವ ಅನುಭವ ಅಥವಾ ತೀವ್ರ ಹೊಟ್ಟೆನೋವು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ತೆರಳಬೇಕು. ಚಿಕಿತ್ಸೆ ಪಡೆದರೂ ಸಮಸ್ಯೆ ಮುಂದುವರಿದರೆ ಜಠರ ಮತ್ತು ಜೀರ್ಣಾಂಗ ತಜ್ಞರನ್ನು ಸಂಪರ್ಕಿಸಬೇಕು. ಸರಿಯಾದ ರೋಗನಿರ್ಣಯ, ಸೂಕ್ತ ಔಷಧೋಪಚಾರ ಮತ್ತು ಮೂಲ ಕಾರಣದ ಚಿಕಿತ್ಸೆಯಿಂದ ಎರೋಸಿವ್ ಗ್ಯಾಸ್ಟ್ರೈಟಿಸ್ ಅನ್ನು ಬಹುತೇಕ ಸಂದರ್ಭಗಳಲ್ಲಿ ಯಶಸ್ವಿಯಾಗಿ ನಿಯಂತ್ರಿಸಬಹುದು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com