

ರಾಬ್ಡೋಮಯೋಲಿಸಿಸ್ ಎಂದರೆ ದೇಹದ ಸ್ನಾಯುಗಳ ಕೋಶಗಳು ತೀವ್ರವಾಗಿ ಹಾನಿಗೊಳಗಾಗಿ ಅಥವಾ ಒಡೆದುಹೋಗಿ ಅವುಗಳ ಒಳಗೆ ಇರುವ ಕೆಲವು ಪದಾರ್ಥಗಳು ರಕ್ತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುವ ಗಂಭೀರ ಆರೋಗ್ಯ ಸಮಸ್ಯೆ. ಈ ರೋಗ ಬಂದಾಗ ಮುಖ್ಯವಾಗಿ ಮಯೋಗ್ಲೋಬಿನ್ ಪ್ರೋಟಿನ್, ಕ್ರಿಯೇಟಿನ್ ಕಿನೇಸ್ ಕಿಣ್ವ ಮತ್ತು ಇತರ ಸ್ನಾಯುಕೋಶದ ಅಂಶಗಳು ರಕ್ತದಲ್ಲಿ ಬಹುವಾಗಿ ಸೇರುತ್ತವೆ. ಮಯೋಗ್ಲೋಬಿನ್ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುವುದರಿಂದ ತೀವ್ರವಾದ ಸಂದರ್ಭಗಳಲ್ಲಿ ಮೂತ್ರಪಿಂಡಗಳ ಕಾರ್ಯ ಕುಸಿಯಬಹುದು. ಆದ್ದರಿಂದ ರಾಬ್ಡೋಮಯೋಲಿಸಿಸ್ಸನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಅಗತ್ಯ.
ಯಾರಿಗಾದರೂ ಈ ಸಮಸ್ಯೆ ಬರಬಹುದು. ಆದರೂ ಹೊಸದಾಗಿ ಅತಿ ಕಠಿಣ ಜಿಮ್ ವರ್ಕೌಟ್ ಮಾಡುವವರು, ಅಪ್ರತಿಮ ಕ್ರೀಡಾಪಟುಗಳು, ಅಪಘಾತಕ್ಕೊಳಗಾದವರು, ದೀರ್ಘಕಾಲ ರೋಗಗಳಿಂದ ಬಳಲುತ್ತಾ ಮಲಗಿರುವ ವೃದ್ಧರು ಮತ್ತು ಮಾದಕ ವಸ್ತುಗಳಿಗೆ ದಾಸರಾದವರಲ್ಲಿ ಈ ರೋಗ ಬರುವ ಸಾಧ್ಯತೆ ಹೆಚ್ಚು.
ಈ ಸಮಸ್ಯೆಗೆ ಹಲವು ಕಾರಣಗಳಿವೆ. ಅತಿಯಾದ ಅಥವಾ ದೇಹಕ್ಕೆ ಹೊಸದಾದ ತೀವ್ರ ವ್ಯಾಯಾಮ ಒಂದು ಪ್ರಮುಖ ಕಾರಣ. ಬಹಳ ಸಮಯ ಓಡುವುದು, ಭಾರವಾದ ತೂಕ ಎತ್ತುವುದು, ತೀವ್ರವಾದ ಜಿಮ್ಮಿನಲ್ಲಿ ವ್ಯಾಯಾಮ ಮಾಡುವುದು ಅಥವಾ ದೀರ್ಘಕಾಲ ವಿಶ್ರಾಂತಿ ಇಲ್ಲದೆ ದೈಹಿಕ ಶ್ರಮ ಮಾಡುವುದು ಕೆಲವೊಮ್ಮೆ ಸ್ನಾಯುಗಳಿಗೆ ಹೆಚ್ಚಿನ ಹಾನಿ ಉಂಟುಮಾಡಬಹುದು. ಅಪಘಾತ, ಸ್ನಾಯುಗಳಿಗೆ ನೇರ ಗಾಯ, ಕಟ್ಟಡದ ಅವಶೇಷಗಳಡಿ ಸಿಲುಕುವುದು ಅಥವಾ ದೇಹದ ಒಂದು ಭಾಗದ ಮೇಲೆ ದೀರ್ಘಕಾಲ ಒತ್ತಡ ಬೀಳುವುದರಿಂದಲೂ ಇದು ಸಂಭವಿಸಬಹುದು. ತೀವ್ರ ಬಿಸಿಲು ಮತ್ತು ಶಾಖಾಘಾತ (ಹೀಟ್ ಸ್ಟ್ರೋಕ್), ಕೆಲವು ಸೋಂಕುಗಳು, ಕೆಲವು ಔಷಧಿಗಳು, ಅತಿಯಾದ ಮದ್ಯಪಾನ ಮತ್ತು ಕೆಲವು ಮಾದಕ ವಸ್ತುಗಳ ಬಳಕೆಯೂ ಕಾರಣವಾಗಬಹುದು.ರಾಬ್ಡೋಮಯೋಲಿಸಿಸ್‌ನ ಪ್ರಮುಖ ಲಕ್ಷಣಗಳಲ್ಲಿ ಸ್ನಾಯುಗಳಲ್ಲಿ ತೀವ್ರ ನೋವು, ಸ್ನಾಯುಗಳ ಬಿಗಿತ ಅಥವಾ ಊತ, ದೇಹದ ಬಲಹೀನತೆ ಮತ್ತು ಅಸಾಮಾನ್ಯ ದಣಿವು ಸೇರಿವೆ. ಸಾಮಾನ್ಯವಾಗಿ ಕಾಲುಗಳು, ತೊಡೆಗಳು, ಭುಜಗಳು ಅಥವಾ ಕೈಗಳ ಸ್ನಾಯುಗಳಲ್ಲಿ ನೋವು ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಮತ್ತೊಂದು ಪ್ರಮುಖ ಲಕ್ಷಣವೆಂದರೆ ಮೂತ್ರದ ಬಣ್ಣ ಗಾಢ ಕಂದು ಅಥವಾ ಕೋಲಾ ಬಣ್ಣದಂತೆ ಕಾಣುವುದು. ಕೆಲವರಲ್ಲಿ ಮೂತ್ರದ ಪ್ರಮಾಣವೂ ಕಡಿಮೆಯಾಗಬಹುದು. ವಾಕರಿಕೆ, ವಾಂತಿ, ದೇಹದಲ್ಲಿ ನೀರಿನ ಕೊರತೆ, ಹೃದಯ ಬಡಿತದಲ್ಲಿ ಬದಲಾವಣೆ ಅಥವಾ ಗೊಂದಲವೂ ಉಂಟಾಗಬಹುದು. ಆದರೆ ಪ್ರತಿಯೊಬ್ಬರಲ್ಲೂ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ರಾಬ್ಡೋಮಯೋಲಿಸಿಸ್ ಪತ್ತೆಹಚ್ಚಲು ವೈದ್ಯರು ಸಾಮಾನ್ಯವಾಗಿ ರಕ್ತ ಪರೀಕ್ಷೆ ಮಾಡುತ್ತಾರೆ. ಅದರಲ್ಲಿ ಕ್ರಿಯೇಟಿನ್ ಕಿನೇಸ್ ಪ್ರಮಾಣ ಹೆಚ್ಚಿರುವುದು ಪ್ರಮುಖ ಸೂಚನೆಯಾಗಿದೆ. ಜೊತೆಗೆ ಮೂತ್ರಪಿಂಡಗಳ ಕಾರ್ಯವನ್ನು ತಿಳಿಯಲು ಕ್ರಿಯೇಟಿನಿನ್, ಯೂರಿಯಾ ಮುಂತಾದ ಪರೀಕ್ಷೆಗಳನ್ನು ಮಾಡಬಹುದು. ರಕ್ತದಲ್ಲಿನ ಪೊಟ್ಯಾಸಿಯಂ, ಕ್ಯಾಲ್ಸಿಯಂ ಮತ್ತು ಇತರ ಎಲೆಕ್ಟ್ರೋಲೈಟ್‌ಗಳ ಮಟ್ಟವನ್ನೂ ಪರಿಶೀಲಿಸಲಾಗುತ್ತದೆ. ಮೂತ್ರ ಪರೀಕ್ಷೆಯ ಮೂಲಕ ಮಯೋಗ್ಲೋಬಿನ್‌ನ ಪರಿಣಾಮವನ್ನು ಅಂದಾಜು ಮಾಡಬಹುದು.
ಇದು ಸಂಪೂರ್ಣವಾಗಿ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವ ಕಾಯಿಲೆಯಾಗಿದೆ. ರೋಗಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕು. ಮೂತ್ರಪಿಂಡಗಳ ಮೂಲಕ ಮೈಯೋಗ್ಲೋಬಿನನ್ನು ವೇಗವಾಗಿ ಹೊರಹಾಕಲು ರಕ್ತನಾಳದ ಮೂಲಕ ಹೆಚ್ಚಿನ ಪ್ರಮಾಣದ ಐವಿ ದ್ರವಗಳನ್ನು ಅಥವಾ ಸಲೈನನ್ನು ನಿರಂತರವಾಗಿ ಹಾಯಿಸಲಾಗುತ್ತದೆ. ರಕ್ತದಲ್ಲಿನ ಪೊಟ್ಯಾಸಿಯಮ್ ಮಟ್ಟದ ಅಪಾಯಕಾರಿ ಏರಿಳಿತಗಳನ್ನು ತಡೆಯಲು ನಿರಂತರ ತಪಾಸಣೆ ಅಗತ್ಯವಿರುತ್ತದೆ. ಒಂದು ವೇಳೆ ಮೂತ್ರಪಿಂಡಗಳು ಕೆಲಸ ನಿಲ್ಲಿಸಿದರೆ ತಾತ್ಕಾಲಿಕವಾಗಿ ಡಯಾಲಿಸಿಸ್ ಮಾಡಬೇಕಾಗುತ್ತದೆ. ಹಾಗೂ ಇದಕ್ಕೆ ಮೂಲ ಕಾರಣವಾಗಿರುವ ಔಷಧಿಗಳನ್ನು ನಿಲ್ಲಿಸುವುದು ಅಥವಾ ಶಸ್ತ್ರಚಿಕಿತ್ಸೆ ಮಾಡುವುದು ಚಿಕಿತ್ಸೆಯ ಪ್ರಕ್ರಿಯೆಯಲ್ಲಿ ಸೇರಿರುತ್ತದೆ. ವೈದ್ಯರ ನಿರಂತರ ಮೇಲ್ವಿಚಾರಣೆಯಲ್ಲಿ ರೋಗಿಯನ್ನು ಇರಿಸುವುದು ಅತ್ಯಂತ ಅವಶ್ಯಕವಾಗಿರುತ್ತದೆ.
ಚಿಕಿತ್ಸೆಯ ಮುಖ್ಯ ಉದ್ದೇಶ ಸ್ನಾಯು ಹಾನಿಗೆ ಕಾರಣವಾದ ಪರಿಸ್ಥಿತಿಯನ್ನು ನಿಯಂತ್ರಿಸುವುದು ಮತ್ತು ಮೂತ್ರಪಿಂಡಗಳನ್ನು ರಕ್ಷಿಸುವುದಾಗಿದೆ. ಪರಿಸ್ಥಿತಿಯ ತೀವ್ರತೆಯನ್ನು ಅವಲಂಬಿಸಿ ಆಸ್ಪತ್ರೆಯಲ್ಲಿ ಶಿರೆಯ ಮೂಲಕ ದ್ರವಗಳನ್ನು ನೀಡಬಹುದು. ದೇಹದಲ್ಲಿ ಸಾಕಷ್ಟು ದ್ರವ ಇರುವಂತೆ ನೋಡಿಕೊಳ್ಳುವುದು ಮೂತ್ರಪಿಂಡಗಳ ಮೇಲೆ ಮಯೋಗ್ಲೋಬಿನ್‌ನ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಾರಣವಾದ ಔಷಧಿ ಅಥವಾ ಇತರ ಸಮಸ್ಯೆಯನ್ನು ಗುರುತಿಸಿ ವೈದ್ಯರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ತೀವ್ರವಾದ ಸಂದರ್ಭಗಳಲ್ಲಿ ಮೂತ್ರಪಿಂಡಗಳ ಕಾರ್ಯ ಬಹಳ ಕುಸಿದರೆ ಡಯಾಲಿಸಿಸ್ ಅಗತ್ಯವಾಗಬಹುದು. ರಾಬ್ಡೋಮಯೋಲಿಸಿಸ್ ತಡೆಯಲು ಏಕಾಏಕಿ ಅತಿಯಾದ ವ್ಯಾಯಾಮ ಆರಂಭಿಸುವುದನ್ನು ತಪ್ಪಿಸಬೇಕು. ವ್ಯಾಯಾಮದ ಪ್ರಮಾಣವನ್ನು ನಿಧಾನವಾಗಿ ಹೆಚ್ಚಿಸಬೇಕು. ಬಿಸಿಲಿನಲ್ಲಿ ಅಥವಾ ಬಿಸಿ ವಾತಾವರಣದಲ್ಲಿ ಹೆಚ್ಚು ದೈಹಿಕ ಶ್ರಮ ಮಾಡುವಾಗ ಸಾಕಷ್ಟು ನೀರು ಕುಡಿಯಬೇಕು ಮತ್ತು ದೇಹಕ್ಕೆ ವಿಶ್ರಾಂತಿ ನೀಡಬೇಕು. ದೇಹದ ಸಾಮರ್ಥ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡುವುದನ್ನು ನಿಲ್ಲಿಸುವುದು ಮುಖ್ಯ.
ವ್ಯಾಯಾಮ ಅಥವಾ ದೈಹಿಕ ಶ್ರಮದ ನಂತರ ಅಸಾಮಾನ್ಯವಾಗಿ ತೀವ್ರವಾದ ಸ್ನಾಯು ನೋವು, ತೀವ್ರ ದೌರ್ಬಲ್ಯ ಅಥವಾ ಗಾಢ ಕಂದು ಬಣ್ಣದ ಮೂತ್ರ ಕಂಡುಬಂದರೆ ಅದನ್ನು ಸಾಮಾನ್ಯ ದಣಿವು ಎಂದು ನಿರ್ಲಕ್ಷಿಸಬಾರದು. ಇಂತಹ ಸಂದರ್ಭದಲ್ಲಿ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಸೂಕ್ತ. ಶೀಘ್ರವಾಗಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಹೆಚ್ಚಿನ ಜನರು ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು.