

ದೇಶದ ಚುನಾವಣಾ ಪದ್ಧತಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದು ಅನೇಕರಿಗೆ ಸಿಂಹಸಪ್ನವಾಗಿದ್ದ ಆಗಿನ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ಅವತ್ತು ಹೇಳಿದ ಒಂದು ಮಾತು ಹೀಗಿತ್ತು – “ಇದು ಭಾರತದ ಚುನಾವಣಾ ಆಯೋಗ. ಭಾರತ ಸರಕಾರದ ಚುನಾವಣಾ ಆಯೋಗವಲ್ಲ”. ಶೇಷನ್ ಅವರ ಈ ಮಾತನ್ನು ಅನೇಕರು ಇವತ್ತಿಗೂ ಮರೆತಿಲ್ಲ. ಶೇಷನ್ ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ಸದಾ ಎತ್ತಿ ಹಿಡಿದವರು. ಭಾರತದ ಚುನಾವಣಾ ಆಯೋಗದಲ್ಲಿ ಈಗ ಬಿಕ್ಕಟ್ಟು ಉಂಟಾಗಿರುವುದನ್ನು ಕಂಡಾಗ ಶೇಷನ್ ಅವರ ಈ ಬಿರುನುಡಿ ನೆನಪಿಗೆ ಬರುತ್ತದೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿಷಯದಲ್ಲಿ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಹಾಗೂ ಇಬ್ಬರು ಆಯುಕ್ತರ ನಡುವೆ ತಲೆದೋರಿದ್ದ ಭಿನ್ನಾಭಿಪ್ರಾಯ ಬಯಲಾಗಿದೆ. ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್‌ಕುಮಾರ್ ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡು ಜಾರಿಗೊಳಿಸುತ್ತಿದ್ದಾರೆ ಎಂಬುದು ಇಬ್ಬರು ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರ ಆಕ್ಷೇಪ. ಹತ್ತು ತಿಂಗಳಲ್ಲಿ ಇಂತಹ ಒಂದೆರಡಲ್ಲ, ಬರೋಬ್ಬರಿ ಹದಿನಾಲ್ಕು ಅಕ್ಷೇಪಗಳು. ಇದು ದೇಶದಲ್ಲಿ ಗಂಭೀರ ಚರ್ಚೆ ಹುಟ್ಟು ಹಾಕಿದೆ. ಚಳವಳಿಯ ಎಚ್ಚರಿಕೆ ಮೊಳಗಿದೆ. ಆಯೋಗ ನಡೆಸಿರುವ ಇಡೀ ಎಸ್‌ಐಆರ್ ಪ್ರಕ್ರಿಯೆ ಹಾಗೂ ಎಸ್‌ಐಆರ್ ನಂತರ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯನ್ನೇ ರದ್ದುಪಡಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಆಯೋಗದ ಸ್ಪಷ್ಟೀಕರಣವನ್ನು ನಂಬುವ ಪರಿಸ್ಥಿತಿಯೇ ಇಲ್ಲ.
ಜನತಂತ್ರ ವ್ಯವಸ್ಥೆಯನ್ನು ಕಾಪಾಡಬೇಕಾದ ಚುನಾವಣಾ ಆಯೋಗದಲ್ಲೇ ಮುಖ್ಯ ಚುನಾವಣಾ ಆಯುಕ್ತರ ಸರ್ವಾಧಿಕಾರಿ ಧೋರಣೆ ಬೆಚ್ಚಿ ಬೀಳಿಸಿದೆ. ಜ್ಞಾನೇಶ್‌ಕುಮಾರ್ ನಡುವಳಿಕೆ ವಿರುದ್ಧ ಪ್ರತಿಪಕ್ಷಗಳ ನಾಯಕರು, ಪ್ರಜ್ಞಾವಂತರು ಧ್ವನಿ ಎತ್ತಿದ್ದಾರೆ. ಜ್ಞಾನೇಶ್‌ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ವಜಾಗೊಳಿಸಿ ಬಂಧಿಸಬೇಕು. ಸಂಸತ್ತಿನಲ್ಲಿ ಅವರಿಗೆ ವಾಗ್ದಂಡನೆ ವಿಧಿಸಬೇಕೆಂಬ ಒತ್ತಾಯ ಬಲವಾಗುತ್ತಿದೆ. ಆದರೆ, ಮುಖ್ಯ ಆಯುಕ್ತರನ್ನು ಅವರ ಹುದ್ದೆಯಿಂದ ವಜಾ ಮಾಡುವುದು ಅಥವಾ ವಾಗ್ದಂಡನೆ ವಿಧಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಕಾನೂನಿನ ಸುದೀರ್ಘ ಪ್ರಕ್ರಿಯೆಗಳಿವೆ. ಈ ಕುರಿತು 2023ರಲ್ಲೇ ಸಂಸತ್ತಿನಲ್ಲಿ ಮಸೂದೆ ಅಂಗೀಕಾರವಾಗಿ ಕಾಯ್ದೆಯಾಗಿದೆ. ಆಡಳಿತಾರೂಢ ಪಕ್ಷಗಳ ಸಂಸತ್ ಸದಸ್ಯರ ಬೆಂಬಲವಿಲ್ಲದಿದ್ದರೆ ಹುದ್ದೆಯಿಂದ ವಜಾಗೊಳಿಸುವುದು ಅಥವಾ ವಾಗ್ದಂಡನೆ ವಿಧಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಬಿಜೆಪಿ ತಳೆದಿರುವ ನಿಲುವನ್ನು ಕಂಡಾಗ ಈ ವಾಗ್ದಂಡನೆ ದೂರದ ಮಾತು.
ಫಾರಂ 6 ಎಂಬುದು ಮತದಾರರ ಪಟ್ಟಿಗೆ ಹೊಸ ಮತದಾರರನ್ನು ಸೇರಿಸಲು ಇರುವ ಅರ್ಜಿ. ಎಸ್‌ಐಆರ್ ಸಂದರ್ಭದಲ್ಲಿ ಇದಕ್ಕೆ ಬದಲಾವಣೆ ತರಲಾಗಿದೆ. ಅರ್ಜಿದಾರರು ಅಥವಾ ಅವರ ಫೋಷಕರು ಅಥವಾ ಅಜ್ಜ, ಅಜ್ಜಿಯ ಹೆಸರು 2002ರಲ್ಲಿ ನಡೆದಿದ್ದ ಎಸ್‌ಐಆರ್ ಮತದಾರರ ಪಟ್ಟಿಯಲ್ಲಿ ಇತ್ತೇ ಎಂಬ ಪ್ರಶ್ನೆಯನ್ನು ಫಾರಂ 6ರಲ್ಲಿ ಈಗ ಸೇರಿಸಲಾಗಿದೆ. ಕೇಂದ್ರ ಸರಕಾರದ 1960ರ ಮತದಾರರ ನೋಂದಣಿ ನಿಯಮಗಳಿಗೆ ತಿದ್ದುಪಡಿ ತರದೇ ಫಾರಂ 6ರಲ್ಲಿ ಈ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬುದು ಆಯುಕ್ತರಾದ ಸಂಧು ಹಾಗೂ ಜೋಶಿ ಅವರ ಅಭಿಪ್ರಾಯ. ಮುಖ್ಯ ಆಯುಕ್ತರ ಈ ನಿರ್ಧಾರ ಅನಧಿಕೃತ ಮತ್ತು ಕಾನೂನು ಬಾಹಿರ ಎಂದು ಇಬ್ಬರು ಆಯುಕ್ತರು ಹೇಳಿರುವುದು ಚರ್ಚೆಗೆ ದಾರಿ ಮಾಡಿದೆ. ಮುಖ್ಯ ಆಯುಕ್ತರ ರಹಸ್ಯ ಕಾರ್ಯಸೂಚಿ ಬಗ್ಗೆ ಅನುಮಾನದ ಹುತ್ತ ಎಬ್ಬಿಸಿದೆ.
ಎಸ್‌ಐಆರ್ ಪ್ರಕ್ರಿಯೆಯನ್ನು ಬಿಜೆಪಿ ಪರವಾಗಿಯೇ ನಡೆಸಲಾಯಿತೇ ಎಂಬ ಶಂಕೆ ಬಲವಾಗಲು ಆಯೋಗದ ಇಬ್ಬರು ಆಯುಕ್ತರ ಆಕ್ಷೇಪಗಳು ಇಂಬು ನೀಡಿವೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮುನ್ನ ಎಸ್‌ಐಆರ್ ಪ್ರಕ್ರಿಯೆ ನಡೆಯಿತು. ಆ ವೇಳೆ ಪಟ್ಟಿಯಲ್ಲಿ ಹೆಸರು ಮರುಸೇರ್ಪಡೆ ಮಾಡುವಂತೆ ನ್ಯಾಯಾಂಗ ಅಧಿಕಾರಿಗಳು ಆದೇಶ ನೀಡಿದರು. ಆಗ ಚುನಾವಣಾ ಆಯೋಗ ಇದಕ್ಕೆ ಮೇಲ್ಮನವಿ ಸಲ್ಲಿಸಿತು. ಆಯೋಗದ ಪರವಾಗಿ ಹೀಗೆ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿದವರು ಯಾರು ಎಂಬುದು ಆಯುಕ್ತ ಸಂಧು ಅವರ ಪ್ರಶ್ನೆ. ತಮಗೆ ಹಾಗೂ ಜೋಶಿ ಅವರಿಗೆ ಈ ಕುರಿತು ಮಾಹಿತಿಯೇ ಇರಲಿಲ್ಲ ಎಂಬುದು ಸಂಧು ಅವರ ಹೇಳಿಕೆ. ಇದು ನಿಜಕ್ಕೂ ಗಂಭೀರವಾದ ಸಂಗತಿ. ಜ್ಞಾನೇಶ್‌ಕುಮಾರ್ ಇದಕ್ಕೆ ಉತ್ತರಿಸಬೇಕು.
ಮತದಾರರ ಪಟ್ಟಿಯ ದತ್ತಾಂಶಗಳನ್ನು ಕೇಂದ್ರೀಕರಣ ಮಾಡಲಾಗುತ್ತಿದೆ ಎಂಬುದು ಇಬ್ಬರು ಆಯುಕ್ತರ ಮುಖ್ಯ ಆಕ್ಷೇಪ. ಮತದಾರರಿಗೆ ಸಂಬಂಧಪಟ್ಟ ಎಲ್ಲ ಮಾಹಿತಿಗಳು ತಳಮಟ್ಟದಲ್ಲಿ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ ಮಟ್ಟದಲ್ಲಿ ಇರುತ್ತದೆ. ಮತದಾರರ ಹೆಸರು ಸೇರ್ಪಡೆ, ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವುದು, ತಿದ್ದುಪಡಿ ಮಾಡುವ ಅಧಿಕಾರ ಅವರಿಗೆ ಇರುತ್ತದೆ. ಈಗ ಇದು ಬದಲಾಗಿದೆ. ಸಹಾಯಕ ಚುನಾವಣಾ ಅಧಿಕಾರಿಗಳ ಅಧಿಕಾರವನ್ನು ಆಯೋಗ ಹೇಗೆ ಕಸಿದುಕೊಂಡಿತು? ಇಬ್ಬರು ಆಯುಕ್ತರ ಗಮನಕ್ಕೆ ಬರದೇ ಮುಖ್ಯ ಆಯುಕ್ತರು ಅನೇಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಇದನ್ನು ಚುನಾವಣಾ ಆಯುಕ್ತರು ಮುಖ್ಯ ಆಯುಕ್ತರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಾಗಿದ್ದರೆ, ಮುಖ್ಯ ಆಯುಕ್ತರು ಸರ್ವ ಸ್ವತಂತ್ರರೇ? ಖಂಡಿತಾ ಇಲ್ಲ.
ಚುನಾವಣಾ ಆಯೋಗ ಒಂದು ಸ್ವಾಯತ್ತ ಸಂಸ್ಥೆ. ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರು ಆಯುಕ್ತರು ಈ ಮೂವರೂ ಸಮಾನರು. ಇಬ್ಬರು ಆಯುಕ್ತರಿಗೆ ಇರುವ ಅಧಿಕಾರವೇ ಮುಖ್ಯ ಆಯುಕ್ತರಿಗೆ ಇರುವುದು. ಮುಖ್ಯ ಆಯುಕ್ತರು ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ನಿರ್ಧಾರ ಕೈಗೊಳ್ಳುವಾಗ ಭಿನ್ನಾಭಿಪ್ರಾಯ ತಲೆದೋರಿದರೆ ಬಹುಮತಕ್ಕೆ ತಲೆಬಾಗಬೇಕು ಎಂದು 2023ರ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ ಕಾಯ್ದೆ ಹೇಳುತ್ತದೆ. ಸರ್ವಾನುಮತದ ನಿರ್ಣಯ ಸಾಧ್ಯವಾಗದಿದ್ದರೆ ಬಹುಮತದಿಂದ ನಿರ್ಣಯಕ್ಕೆ ಒಪ್ಪಬೇಕು. ಆಯೋಗದ ಯಾವುದೇ ವಿಷಯದಲ್ಲಿ ಇಬ್ಬರು ಆಯುಕ್ತರ ಭಿನ್ನಮತ ಇದ್ದರೆ ಅದೇ ಬಹುಮತ. ಹಾಗಿದ್ದರೂ ನಿರ್ಧಾರ ಹೇಗಾಯಿತು? ಚುನಾವಣಾ ಆಯೋಗ ಜ್ಞಾನೇಶ್‌ಕುಮಾರ್ ಅವರ ಒನ್ ಮ್ಯಾನ್ ಶೋ ಆಗಿದೆಯೇ?
ಚುನಾವಣಾ ಆಯೋಗ ಕೆಲವು ನಿರ್ಧಾರಗಳನ್ನು ಬಹುಮತದಿಂದ ಕೈಗೊಂಡಿಲ್ಲ. ಹೀಗಿರುವಾಗ ಇಂತಹ ನಿರ್ಧಾರಗಳು ಹೇಗೆ ಮಾನ್ಯವಾಗುತ್ತವೆ ಎಂಬ ಪ್ರಶ್ನೆ ಇದೆ. ಸಂಧು ಹಾಗೂ ಜೋಶಿ ಅವರು ಮುಖ್ಯ ಆಯುಕ್ತರ ಏಕಪಕ್ಷೀಯ ಧೋರಣೆಯನ್ನು ತಾವು ಆಕ್ಷೇಪಿಸಿರುವುದನ್ನು ಏಕೆ ಬಹಿರಂಗಪಡಿಸಲಿಲ್ಲ? ತಮ್ಮ ಆಕ್ಷೇಪದ ನಂತರವೂ ಮುಖ್ಯ ಆಯುಕ್ತರು ಕೈಗೊಂಡ ನಿರ್ಧಾರ ಜಾರಿಯಾದಾಗ ದೇಶದ ಗಮನಕ್ಕೆ ಇದನ್ನು ಏಕೆ ತರಲಿಲ್ಲ? ಎಂಬ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕಿದೆ.
ಯಾವುದೇ ಚುನಾವಣೆ ಇರಬಹುದು, ಮತದಾರರ ಪಟ್ಟಿ ಎಂಬುದು ಬಹಳ ಮುಖ್ಯವಾದ ದಾಖಲೆ. ಮತದಾರರ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಮತದಾನಕ್ಕೆ ಅವಕಾಶ. ಅಂತಹ ಮತದಾರರ ಪಟ್ಟಿಯನ್ನು ಸಿದ್ದಪಡಿಸುವಾಗ ನಿಯಮ ಮೀರಿದರೆ ಹೇಗೆ? ಪಾರದರ್ಶಕತೆ ಬೇಡವೇ? ಬಹುಮತಕ್ಕೆ ತಲೆಬಾಗಬೇಡವೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಸಬೇಕಾದ ಆಯೋಗದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ. ಬಹುಮತಕ್ಕೆ ಕಿಮ್ಮತ್ತೇ ಇಲ್ಲ ಎಂದರೆ ಆಯೋಗ ನಡೆಸುವ ಚುನಾವಣೆ ಬಗ್ಗೆ ನಂಬಿಕೆ, ವಿಶ್ವಾಸ ಹುಟ್ಟುವುದಾದರೂ ಹೇಗೆ?
ಬಿಹಾರ, ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದ್ದಾಗ ಪ್ರತಿಪಕ್ಷಗಳು ಕೆಲವು ಪ್ರಶ್ನೆಗಳನ್ನು ಮುಂದಿಟ್ಟವು. ಆಗ ಇದಕ್ಕೆ ಉತ್ತರಿಸುವ ಬದಲು ಈ ರೀತಿ ಪ್ರಶ್ನೆ ಮಾಡುವುದೇ ತಪ್ಪು ಎಂಬ ರೀತಿ ಚುನಾವಣಾ ಆಯೋಗ ವರ್ತಿಸಿತ್ತು. ಚುನಾವಣಾ ಆಯೋಗ ಹಾಗೂ ಪ್ರತಿಪಕ್ಷಗಳ ನಡುವಿನ ಈ ಸಂಘರ್ಷದಲ್ಲಿ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನೇ ಆಗ ಪ್ರತಿಪಕ್ಷಗಳು ಪ್ರಶ್ನಿಸಿದ್ದವು. ಆಗಲೇ ವಿರೋಧಪಕ್ಷಗಳ ಇಂಡಿಯಾ ಕೂಟವು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಂಸತ್ತಿನಲ್ಲಿ ವಾಗ್ದಂಡನೆ ಗೊತ್ತುವಳಿ ಮಂಡಿಸಲು ಚಿಂತನೆ ನಡೆಸಿತ್ತು. ಈಗ ಆಯೋಗದ ಬಿಕ್ಕಟ್ಟು ಬಯಲಾದ ನಂತರ ವಾಗ್ದಂಡನೆ ಗೊತ್ತುವಳಿ ಕುರಿತು ಪ್ರತಿಪಕ್ಷಗಳು ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿದ್ದ ಎಸ್.ವೈ.ಖುರೇಷಿ ಅವರು ಈ ಹಿಂದೆ ತಮ್ಮ ಒಂದು ಲೇಖನದಲ್ಲಿ ಹೀಗೆ ಬರೆದಿದ್ದರು- “ ಪಾರದರ್ಶಕತೆ ಎಂಬುದು ಅಪೇಕ್ಷೆಯಷ್ಟೇ ಅಲ್ಲ, ಅದು ಅಗತ್ಯ ಕೂಡ”.
ಭಾರತದ ಚುನಾವಣಾ ಆಯೋಗ ಈಗ ವಿಶ್ವಾಸಾರ್ಹತೆಯ ಪ್ರಶ್ನೆಯನ್ನು ಎದುರಿಸುತ್ತಿದೆ.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com