

ಇರಾನ್ ಮತ್ತು ಒಮಾನ್ ದೇಶಗಳ ನಡುವೆ ಒಂದು ಕಿರಿದಾದ ಗೇಟ್ ಇರುವುದನ್ನು ಕಲ್ಪಿಸಿಕೊಳ್ಳಿ. ಈ ಯುದ್ಧ ಆರಂಭಗೊಳ್ಳುವ ಮುನ್ನ, ಆ ಗೇಟ್ ಮೂಲಕ ಪ್ರತಿದಿನವೂ 20ರಿಂದ 21 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಹಾದುಹೋಗುತ್ತಿತ್ತು. ಆ ಗೇಟ್ ಬೇರೆ ಯಾವುದೂ ಅಲ್ಲ. ಜಾಗತಿಕ ತೈಲ ಪೂರೈಕೆಯ ಪ್ರಮುಖ ಕವಾಟದಂತಿರುವ ಹೊರ್ಮುಸ್ ಜಲಸಂಧಿ. ಯಾವಾಗ ಈ ಕವಾಟ ಬಿಗಿಯಾಗುತ್ತದೋ, ಆಗ ಜಗತ್ತಿನಾದ್ಯಂತ ತೈಲ ಬೆಲೆ ಹೆಚ್ಚಳವಾಗುತ್ತದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಮೇ ತಿಂಗಳ ಬಳಿಕ, ತನ್ನ ನೌಕಾಪಡೆ 2,000ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳ ಸಂಚಾರಕ್ಕೆ ಭದ್ರತೆ ನೀಡಿದ್ದು, ಒಂದು ಬಿಲಿಯನ್ ಬ್ಯಾರಲ್‌ಗೂ ಹೆಚ್ಚು ತೈಲ ಸಾಗಾಟವಾಗಿದೆ. ಇದು ಪ್ರತಿದಿನ ಅಂದಾಜು ಏಳು ಮಿಲಿಯನ್ ಬ್ಯಾರಲ್‌ಗೆ ಸಮನಾಗಿದೆ ಎಂದು ಅಮೆರಿಕನ್ ನೌಕಾಪಡೆ ಹೇಳಿಕೊಂಡಿದೆ. ಆದರೆ, ಇದು ಸಾಮಾನ್ಯ ಸ್ಥಿತಿಯಲ್ಲಿ ಸಾಗಾಟವಾಗುವ ತೈಲದ ಕೇವಲ ಮೂರನೇ ಒಂದು ಭಾಗವಷ್ಟೇ ಆಗಿದೆ.
ಫೆಬ್ರವರಿ ತಿಂಗಳ ಕೊನೆಯ ಭಾಗದಲ್ಲಿ ಅಮೆರಿಕ ಮತ್ತು ಇಸ್ರೇಲ್‌ಗಳು ಇರಾನ್ ವಿರುದ್ಧ ಯುದ್ಧಕ್ಕೆ ತೆರಳಿದವು. ಜೂನ್ ತಿಂಗಳಲ್ಲಿ ಉಭಯ ಪಕ್ಷಗಳೂ ಜಂಟಿ ಶಾಂತಿ ಒಪ್ಪಂದವಾದ 'ಎಂಒಯು'ಗೆ ಸಹಿ ಹಾಕಿದವು. ಆದರೆ, ಜುಲೈ ತಿಂಗಳು ಬಂದಾಗ ಜೂನ್ ತಿಂಗಳ ಒಪ್ಪಂದ ಕುಸಿದು ಬಿತ್ತು. ಇದಕ್ಕೆ ಒಪ್ಪಂದದ ಐದನೇ ಷರತ್ತಿನ ಕುರಿತ ಭಿನ್ನಾಭಿಪ್ರಾಯ ಮುಖ್ಯ ಕಾರಣವಾಗಿತ್ತು.
ಆ ಷರತ್ತಿನ ಪ್ರಕಾರ, ಇರಾನ್ ಮುಂದಿನ 60 ದಿನಗಳ ಕಾಲ ಯಾವುದೇ ಶುಲ್ಕ ಪಡೆದುಕೊಳ್ಳದೆ ವ್ಯಾಪಾರಿ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕಿತ್ತು. ಆ ಅವಧಿಯ ಬಳಿಕ, ಹೊರ್ಮುಸ್ ಜಲಸಂಧಿಯ ಉಭಯ ಬದಿಗಳಲ್ಲಿರುವ ಇರಾನ್ ಮತ್ತು ಒಮಾನ್‌ಗಳು ಕುಳಿತು ಚರ್ಚೆ ನಡೆಸಿ, ಅಲ್ಲಿ ಹಡಗುಗಳು ಹೇಗೆ ಸಂಚರಿಸಬೇಕು ಎನ್ನುವುದನ್ನು ನಿರ್ಧರಿಸಬೇಕು ಎಂದು ಸೂಚಿಸಲಾಯಿತು. ಇದಕ್ಕಾಗಿ ಇತರ ಗಲ್ಫ್ ದೇಶಗಳನ್ನು ಸಂಪರ್ಕಿಸಿ, ಅಂತಾರಾಷ್ಟ್ರೀಯ ಕಾನೂನುಗಳನ್ನು ಅನುಸರಿಸಬೇಕು ಎನ್ನಲಾಗಿತ್ತು. ಇದು ಎರಡು ದೇಶಗಳಿಗೆ ಹೆಚ್ಚಿನ ಧ್ವನಿ ನೀಡಿತ್ತಾದರೂ, ಅನಿಯಮಿತ ಅಥವಾ ಶಾಶ್ವತ ನಿಯಂತ್ರಣ ಒದಗಿಸಲಿಲ್ಲ. ಎರಡು ಕುಟುಂಬಗಳು ಕೊಂಚ ಅಸ್ಪಷ್ಟವಾದ ಗಡಿಯೊಂದರ ಆಧಾರದಲ್ಲಿ ಒಂದು ಹಳ್ಳಿಯ ಭೂಮಿಯನ್ನು ಹಂಚಿಕೊಳ್ಳುವುದನ್ನು ಊಹಿಸಿಕೊಳ್ಳಿ. ಎರಡು ಕುಟುಂಬಗಳೂ ಆ ಅಸ್ಪಷ್ಟ ಗಡಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಗ್ರಹಿಸುತ್ತವೆ.
ಹೊರ್ಮುಸ್ ಜಲಸಂಧಿಯ ದಕ್ಷಿಣ ಭಾಗದಲ್ಲಿ ಹೊಸದಾದ ಸಾಗಾಣಿಕಾ ಮಾರ್ಗವನ್ನು ತೆರೆಯಲು ಪ್ರಯತ್ನ ನಡೆಸುವ ಮೂಲಕ ಅಮೆರಿಕ ಜೂನ್ ತಿಂಗಳ ಒಪ್ಪಂದವನ್ನು ಜುಲೈ ಆರಂಭದಲ್ಲಿ ಮುರಿಯಿತು ಎಂದು ಇರಾನ್ ಆರೋಪಿಸಿತು. ಅಂದಿನಿಂದಲೂ ಒಪ್ಪಂದದ ಐದನೇ ವಿಧಿಯನ್ನು ಜಾರಿಗೊಳಿಸುವುದು ಇರಾನಿನ ಪ್ರಮುಖ ಗುರಿಯಾಗಿತ್ತು. ಅದು ಒಮಾನ್ ಜೊತೆ ಸಾಗಾಣಿಕಾ ನಿಯಮಗಳನ್ನು ರೂಪಿಸುತ್ತಿದ್ದು, ತನ್ನ ಷರತ್ತುಗಳನ್ನು ಮುರಿದಿವೆ ಎನ್ನುವ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸುತ್ತಿದೆ. ಒಂದು ವೇಳೆ ಇರಾನ್ ಅಂದುಕೊಂಡಂತೆ ನಡೆದರೆ, ಅದು ಸೂಪರ್ ಪವರ್ ಆದ ಅಮೆರಿಕವನ್ನೂ ತನ್ನ ಮಾತು ಕೇಳುವಂತೆ ಮಾಡಿತು ಎಂದಾಗಬಹುದು. ಅದು ಭವಿಷ್ಯದ ಪರಮಾಣು ಮಾತುಕತೆಗಳಲ್ಲೂ ಇರಾನಿಗೆ ಹೆಚ್ಚಿನ ಶಕ್ತಿ ನೀಡಬಹುದು. ಅಮೆರಿಕದ ಅಹಂಕಾರದ ವಿರುದ್ಧ ಎನ್ನುವ ಅದರ ಹಳೆಯ ಪ್ರಯತ್ನಕ್ಕೆ ಹೊಸ ಶಕ್ತಿ ಸಿಗಬಹುದು. 2015ರ ಪರಮಾಣು ಒಪ್ಪಂದದಿಂದ ಅಮೆರಿಕ ತಾನಾಗಿಯೇ ಹೊರನಡೆದದ್ದನ್ನು ಇರಾನ್ ಮರೆತಿಲ್ಲ.
ಸೆಪ್ಟೆಂಬರ್ 24ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಏಳು ದಿನಗಳ ಯೋಜನೆಯೊಂದನ್ನು ಪ್ರಸ್ತಾಪಿಸಿದರು. ಅಮೆರಿಕ ಇರಾನಿನ ತೈಲದ ಮೇಲಿನ ವ್ಯಾಪಾರ ನಿಷೇಧಗಳನ್ನು ಅಥವಾ ನಿರ್ಬಂಧಗಳನ್ನು ಹಿಂಪಡೆಯಬೇಕು. ಇದರೊಡನೆ, ವಿದೇಶೀ ಬ್ಯಾಂಕುಗಳಲ್ಲಿ ಮುಟ್ಟುಗೋಲಾಗಿರುವ ಇರಾನಿನ ಅಂದಾಜು 12 ಬಿಲಿಯನ್ ಡಾಲರ್ ಹಣವನ್ನು ಬಿಡುಗಡೆಗೊಳಿಸಬೇಕು. ಇರಾನಿನ ವ್ಯಾಪಾರವನ್ನು ತಡೆಗಟ್ಟುವ ಸಲುವಾಗಿ ಅಮೆರಿಕ ನಿಯೋಜಿಸಿರುವ ಯುದ್ಧ ನೌಕೆಗಳ ತಡೆಯನ್ನು ನಿವಾರಿಸಬೇಕು. ಇಸ್ರೇಲ್ ಲೆಬನಾನ್‌ನಲ್ಲಿ ತನ್ನ ಯುದ್ಧವನ್ನು ನಿಲ್ಲಿಸಬೇಕು. ಇಷ್ಟಾದರೆ, ಏಳನೇ ದಿನ ಇರಾನ್ ಹೊರ್ಮುಸ್ ಜಲಸಂಧಿಯನ್ನು ತೆರೆಯಲಿದೆ. ಇದು ಬಹುಶಃ ಪರಮಾಣು ವಿಚಾರದ ಮಾತುಕತೆಗೆ ಹಾದಿ ಮಾಡಿಕೊಡಲಿದೆ ಎಂದು ಅರಾಘ್ಚಿ ಹೇಳಿದ್ದರು. ಅಮೆರಿಕ ಇರಾನಿನ ವಾಯು ಸಾಗಾಣಿಕೆಯನ್ನು ನಿಷೇಧಿಸಿ, ಆಗಸ್ಟ್ ತಿಂಗಳಿನಿಂದಲೇ ಜಾರಿಗೆ ತಂದಿದ್ದ ಸಂಕಷ್ಟಗಳನ್ನು ಇನ್ನಷ್ಟು ಕಠಿಣಗೊಳಿಸಿದ ಬೆನ್ನಲ್ಲಿ ಅರಾಘ್ಚಿ ಈ ಪ್ರಸ್ತಾಪವನ್ನು ಮುಂದಿಟ್ಟರು.
ಇದು ಬಹುತೇಕ ಜೂನ್ ತಿಂಗಳ ಒಪ್ಪಂದವೇ ಆಗಿದ್ದು, ಕೊಂಚ ವೇಗದ ಸಮಯವನ್ನು ಅನುಸರಿಸುತ್ತಿತ್ತು. ಜೂನ್ ತಿಂಗಳ ಒಪ್ಪಂದವನ್ನು ಇರಾನ್ ತನ್ನ ಗೆಲುವು ಎಂದೇ ಪರಿಗಣಿಸಿದ್ದರಿಂದ, ಈಗ ಒಪ್ಪಂದ ಹೊಸದೋ, ಹಳೆಯದೋ ಎನ್ನುವುದು ಅದಕ್ಕೆ ಮುಖ್ಯವಾಗುವುದಿಲ್ಲ. ಆದರೆ, ಸೆಪ್ಟೆಂಬರ್ 26ರ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದಕ್ಕೆ ನಿರಾಕರಿಸಿದ್ದಾರೆ. ಅಮೆರಿಕದ ಅಧ್ಯಕ್ಷರ ಅರ್ಧ ಅವಧಿ ಪೂರ್ಣಗೊಂಡ ಬಳಿಕ, ಅಮೆರಿಕದ ಸಂಸತ್ತಾದ ಕಾಂಗ್ರೆಸ್‌ಗೆ ಸದಸ್ಯರನ್ನು ಆರಿಸುವ ಮಧ್ಯಂತರ ಚುನಾವಣೆ ನಡೆದ ಬಳಿಕ ಬಾಂಬ್ ದಾಳಿ ಮತ್ತೆ ಮುಂದುವರಿಯುವ ಕುರಿತು ಟ್ರಂಪ್ ಸುಳಿವು ನೀಡಿದ್ದಾರೆ. ಆದರೆ, ಈ ಚುನಾವಣೆಯಿಂದ ತನ್ನ ಯೋಜನೆಯಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ ಎಂದು ಟ್ರಂಪ್ ವಿಶ್ವಸಂಸ್ಥೆಯಲ್ಲಿ ಹೇಳಿದ್ದಾರೆ.
ಇನ್ನು ನ್ಯೂಯಾರ್ಕ್ ನಗರದಲ್ಲಿ ಟ್ರಂಪ್ ಇರಾನನ್ನು ನಾಶಪಡಿಸುವ ಬೆದರಿಕೆ ಒಡ್ಡಿದರೆ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ತಾವು ಕೊನೆಯ ಉಸಿರಿನ ತನಕವೂ ಹೋರಾಡುವುದಾಗಿ ಘೋಷಿಸಿದ್ದರು. ಇಷ್ಟಾದರೂ, ಉಭಯ ದೇಶಗಳ ನಡುವಿನ ಸಂಪರ್ಕ ಕೊಂಡಿಗಳು ಪರಸ್ಪರ ಸಂದೇಶ ರವಾನಿಸಿವೆ. ಚುನಾವಣೆಗೂ ಮುನ್ನ ಒಪ್ಪಂದ ಏರ್ಪಡುವುದು ಉತ್ತಮ ಎಂದು ಅರಾಘ್ಚಿ ಅಭಿಪ್ರಾಯ ಪಟ್ಟಿದ್ದರೂ, ಈ ಕುರಿತು ಇರಾನ್ ಯಾವುದೇ ಅವಸರದಲ್ಲಿಲ್ಲ ಎಂದಿದ್ದಾರೆ. ಈ ಯುದ್ಧದ ಪರಿಣಾಮವಾಗಿ ತೈಲ ಬೆಲೆಗಳು ಗಣನೀಯವಾಗಿ ಹೆಚ್ಚಳವಾಗಿ, ಟ್ರಂಪ್ ಜನಪ್ರಿಯತೆಗೆ ಧಕ್ಕೆ ಉಂಟಾಗಿದೆ.
ಮಾತುಕತೆಯ ಮೇಜಿನಲ್ಲಿ ತನ್ನನ್ನು ದುರ್ಬಲಗೊಳಿಸುವುದು ಅಮೆರಿಕದ ಉದ್ದೇಶ ಎಂದು ಇರಾನ್ ಭಾವಿಸಿದೆ. ಆದರೆ, ಇರಾನಿನ ಗಲ್ಫ್ ನೆರೆ ರಾಷ್ಟ್ರಗಳೂ ತೊಂದರೆಗೆ ಸಿಲುಕಿವೆ. ಮಾರ್ಚ್ ತಿಂಗಳ ಕದನದಲ್ಲಿ ಹಾನಿಗೊಳಗಾದ 80ಕ್ಕೂ ಹೆಚ್ಚು ಇಂಧನ ನೆಲೆಗಳ ದುರಸ್ತಿಗೆ 50 ಬಿಲಿಯನ್ ಡಾಲರ್‌ಗೂ ಹೆಚ್ಚು ಮೊತ್ತ ಬೇಕಾಗುತ್ತದೆ ಎಂದು ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ ಹೇಳಿದೆ. ಹೊಸದಾದ ದಾಳಿಗಳು ನಡೆಯದಿದ್ದರೂ, ಗಲ್ಫ್ ದೇಶಗಳ ಆರ್ಥಿಕತೆಗಳ ಹೊರಹರಿವು ಮುಂದಿನ ಐದು ವರ್ಷಗಳ ಕಾಲ ಇಳಿಕೆ ಕಾಣಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಭಿಪ್ರಾಯ ಪಟ್ಟಿದೆ. ಆಗಸ್ಟ್ ತಿಂಗಳಲ್ಲಿ ಅರಬ್ ನಾಯಕರು ಟ್ರಂಪ್ ಶಾಂತಿ ಪ್ರಯತ್ನಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು ಎಮ್ನಲಾಗಿದೆ. ಅಮೆರಿಕ ಹಾನಿಗಳ ದುರಸ್ತಿಗೆ 10 ಬಿಲಿಯನ್ ಡಾಲರ್ ನಿಧಿಯ ಪ್ರಸ್ತಾವನೆ ಇರಿಸಿದ್ದು, ಹೊರ್ಮುಸ್ ಜಲಸಂಧಿಯ ಮೇಲಿನ ಅವಲಂಬನೆ ಕಡಿಮೆಗೊಳಿಸುವ ಯೋಜನೆ ನೀಡಿತ್ತು. ಸೌದಿ ಅರೇಬಿಯಾದ ಇನ್ನೊಂದು ಸಮುದ್ರ ಮಾರ್ಗವೂ ದಾಳಿಗೆ ಸಿಲುಕಿರುವುದರಿಂದ, ಅದು ಇದ್ದಕ್ಕಿದ್ದಂತೆ ಹೊರ್ಮುಸ್ ಜಲಸಂಧಿಯನ್ನು ಬಿಟ್ಟುಬಿಡಲು ಸಾಧ್ಯವಿಲ್ಲ. ಯೆಮೆನ್‌ನ ಹೌತಿ ಬಂಡುಕೋರರು ಸೌದಿಯ ಹಡಗುಗಳನ್ನು ಇನ್ನೊಂದು ಸಮುದ್ರ ಮಾರ್ಗವಾದ ಬಾಬ್ ಎಲ್ ಮಾಂದೆಬ್‌ನಲ್ಲಿ ತಡೆಗಟ್ಟಿದ್ದು, ಇರಾಕಿ ಮಿಲಿಟರಿ ಡ್ರೋನ್‌ಗಳು ಸೌದಿಯ ಈಸ್ಟ್ - ವೆಸ್ಟ್ ತೈಲ ಪೈಪ್‌ಲೈನ್ ಮೇಲೆ ದಾಳಿ ನಡೆಸಿವೆ. ಇನ್ನೂ ಕಲ್ಲಿನ ದಾಳಿ ನಡೆಯುತ್ತಿರುವಾಗ ಯಾರೂ ಮನೆಯ ದುರಸ್ತಿ ನಡೆಸಲು ಪ್ರಯತ್ನಿಸುವುದಿಲ್ಲ. ಇನ್ನು ಬಾಂಬ್ ದಾಳಿ ಪುನರಾರಂಭಗೊಳ್ಳಲಿದೆಯೇ ಎಂದು ಅಮೆರಿಕವೂ ಹೇಳುವುದಿಲ್ಲ. ಆದರೆ, ಇರಾನ್ ಸ್ಪಷ್ಟವಾದ ಯೋಜನೆ ಹೊಂದಿರುವುದರಿಂದ ಅದು ನೀಡುವ ಎಚ್ಚರಿಕೆಗೆ ಹೆಚ್ಚಿನ ತೂಕವಿದೆ.
ಇನ್ನು ಸಮುದ್ರದಲ್ಲಿ ಉಭಯ ಪಕ್ಷಗಳೂ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸುವುದನ್ನು ಮುಂದುವರಿಸಿವೆ. ಇರಾನ್ ತನ್ನ ಪ್ರಮುಖ ಮಿಲಿಟರಿ ಪಡೆಯಾದ, ಮತ್ತು ಜಲಸಂಧಿಯ ಸಂಚಾರವನ್ನು ಬಹುತೇಕ ನಿರ್ವಹಿಸುತ್ತಿರುವ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಜೊತೆ ಸಹಕರಿಸದ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸುತ್ತಿದೆ. ಇನ್ನು ಅಮೆರಿಕ ತನ್ನ ನಿರ್ಬಂಧವನ್ನು ಮೀರಿ ಸಾಗಲು ಪ್ರಯತ್ನಿಸುವ ನೌಕೆಗಳ ಮೇಲೆ ದಾಳಿ ನಡೆಸುತ್ತಿದೆ. ಇರಾನಿನ ಸಂದೇಶ ಸ್ಪಷ್ಟ: ಜಲಸಂಧಿಯ ಮೂಲಕ ತೈಲ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಸಾಗುತ್ತಿದೆ. ಇನ್ನು ಸಮುದ್ರ ರಕ್ಷಣೆ ಒದಗಿಸುವುದು ಅಮೆರಿಕಕ್ಕೆ ಸಾಕಷ್ಟು ದುಬಾರಿಯಾಗುತ್ತಿದೆ.
ಆದರೆ, ಇದೆಲ್ಲದರ ಭಾರ ಸಾಮಾನ್ಯ ಇರಾನಿಯನ್ ಕುಟುಂಬಗಳ ಹೆಗಲ ಮೇಲೆ ಬೀಳುತ್ತಿದೆ. ಅವರು ಈಗಾಗಲೇ ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಜೀವನ ನಡೆಸುತ್ತಿದ್ದಾರೆ. ಹಲವಾರು ವರ್ಷಗಳ ಕಾಲ, ಇರಾನ್ ಸರ್ಕಾರ ತನ್ನ ವಿದೇಶಾಂಗ ನೀತಿಯನ್ನು ಜಾರಿಗೊಳಿಸುವ ಸಲುವಾಗಿ ಇಂತಹ ಸಂಕಷ್ಟಗಳನ್ನು ಒಪ್ಪಿಕೊಂಡಿತ್ತು. ಈ ಶತಮಾನದುದ್ದಕ್ಕೂ ಇರಾನ್ ನಿರ್ಬಂಧಗಳು, ಅಡೆತಡೆಗಳನ್ನು ಎದುರಿಸಿ ಬದುಕುಳಿದಿದೆ. ಅದು ಈಗ ಬದಲಾಗುತ್ತಿರುವ ಟ್ರಂಪ್ ಮನಸ್ಥಿತಿಯನ್ನು ಎದುರಿಸಲೂ ಸಜ್ಜಾಗುತ್ತಿರುವಂತಿದೆ. ಜನವರಿ ತಿಂಗಳ ಬಳಿಕ, ಇರಾನನ್ನು ನಾಶಪಡಿಸುವ ಬೆದರಿಕೆಗಳು ಜನರನ್ನು ಒಗ್ಗೂಡಿಸಿದ ಪರಿಣಾಮವಾಗಿ, ಇರಾನಿನಲ್ಲಿ ಪ್ರತಿಭಟನೆಗಳು ನಿಂತಿವೆ. ಇರಾನಿನ ನಿಲುವು ಬದಲಾಗಬಹುದು ಎನ್ನುವ ಒಂದಷ್ಟು ಸಂಕೇತಗಳು ಲಭಿಸಿವೆ. ಇರಾನ್ ಚುನಾವಣೆಯ ಕುರಿತು ಮಾತನಾಡುತ್ತಿರುವುದು ಟ್ರಂಪ್ ಮೇಲೆ ಸಣ್ಣ ಅವಧಿಯ ಒತ್ತಡ ತಂತ್ರವಾಗಲಿದೆಯೇ ಹೊರತು, ಹೊಸದಾದ ಸುದೀರ್ಘ ಆಟವಲ್ಲ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com