ಅವಮಾನ, ನೋವು, ಹತಾಶೆ ಮತ್ತು ಗೆಲುವಿನ ಪ್ರತೀಕವೇ ಆ ನಾಲ್ಕು ಸಿಕ್ಸರ್..!

ದುಬೈನಲ್ಲಿ ಪ್ರಾಕ್ಟಿಸ್ ನಲ್ಲಿ ತೊಡಗಿದ್ದ ವೇಳೆ ಜೆರ್ಸಿಕೊಳ್ಳಲು ಹಣವಿಲ್ಲದೇ ಪರದಾಡಿದ್ದ ವಿಚಾರವನ್ನು ಸಾಮಿ ಭಾವೋದ್ವೇಗದಿಂದ ಹೇಳಿಕೊಂಡಿದ್ದರು.
ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ (ಸಂಗ್ರಹ ಚಿತ್ರ)
ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ (ಸಂಗ್ರಹ ಚಿತ್ರ)

ಕೋಲ್ಕತಾ: ಈಡನ್ ಗಾರ್ಡನ್ ನಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಕೊನೆಯ ಓವರ್ ನಲ್ಲಿ ವೆಸ್ಟ್ ಇಂಡೀಸ್ ತಂಡದ ಕಾರ್ಲೋಸ್ ಬ್ರಾತ್ ವೇಟ್ ಸಿಡಿಸಿದ ನಾಲ್ಕು ಸಿಕ್ಸರ್  ಗಳು ವಿಶ್ವದ ಗಮನ ಸೆಳೆದಿದ್ದು, ಈ ನಾಲ್ಕು ಸಿಕ್ಸರ್ ಗಳು ಟೂರ್ನಿಗೂ ಮೊದಲು ವಿಂಡೀಸ್ ತಂಡ ಅನುಭವಿಸಿದ ಅವಮಾನ, ನೋವು, ಹತಾಶೆ ಮತ್ತು ಗೆಲುವಿನ ಎಂಬ ಭಾವನೆ ಕೂಡ ಮೂಡುತ್ತಿವೆ.

ಇಂತಹುದೊಂದು ಚರ್ಚೆ ಹುಟ್ಟುಹಾಕಿರುವುದು ವೆಸ್ಟ್ ಇಂಡೀಸ್ ತಂಡದ ನಾಯಕ ಡರೇನ್ ಸಾಮಿ. ಪಂದ್ಯದ ಬಳಿಕ ಮಾತನಾಡಿದ್ದ ಸಾಮಿ ತಮ್ಮದೇ ಕ್ರಿಕೆಟ್ ಮಂಡಳಿ ವಿರುದ್ಧ ಆಕ್ರೋಶ  ವ್ಯಕ್ತಪಡಿಸಿದ್ದರು. ದುಬೈನಲ್ಲಿ ಪ್ರಾಕ್ಟಿಸ್ ನಲ್ಲಿ ತೊಡಗಿದ್ದ ವೇಳೆ ಜೆರ್ಸಿಕೊಳ್ಳಲು ಹಣವಿಲ್ಲದೇ ಪರದಾಡಿದ್ದ ವಿಚಾರವನ್ನು ಭಾವೋದ್ವೇಗದಿಂದ ಹೇಳಿಕೊಂಡಿದ್ದರು. ನಿಜಕ್ಕೂ ವಿಂಡೀಸ್ ಆಟಗಾರರ ಈ  ಕಥೆಯ ಜಾಲವನ್ನು ಕೆದಕಿದರೆ ಅಲ್ಲಿ ನೋವಿನ ಕಥೆಗಳ ಸರಪಳಿಯೇ ಬಿಚ್ಚಿಕೊಳ್ಳುತ್ತದೆ.

ವಿಂಡೀಸ್ ಮಂಡಳಿಯ ವೇತನ ತಾರತಮ್ಯದಿಂದ ತೀವ್ರ ನೊಂದಿದ್ದ ವಿಂಡೀಸ್ ಆಟಗಾರರು, ಟಿ20 ವಿಶ್ವಕಪ್ ತೊರೆಯುವ ಕುರಿತು ಚಿಂತನೆಯಲ್ಲಿ ತೊಡಗಿದ್ದರು. ಈ ನಡುವೆ ಆಟಗಾರರ ನಡೆ ಕುರಿತು  ಮಂಡಳಿಯಲ್ಲಿರುವ ಕೆಲ ಹಿರಿಯ ಆಟಗಾರರ ವಿರುದ್ಧ ವಾಗ್ದಾಳಿ ಮಾಡುವ ಮೂಲಕ ಅವರನ್ನು ಮತ್ತಷ್ಟು ರೊಚ್ಚಿಗೇಳುವಂತೆ ಮಾಡಿದ್ದರು. ವಿಂಡೀಸ್ ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ತಿಕ್ಕಾಟ ಯಾವ  ಮಟ್ಟಕ್ಕೆ ಹೋಗಿತ್ತು ಎಂದರೆ ಟಿ20 ವಿಶ್ವಕಪ್ ನಂತಹ ಪ್ರಮುಖ ಟೂರ್ನಿಯಿಂದಲೇ ಆಟಗಾರರು ಹೊರಗುಳಿಯು ನಿರ್ಧಾರ ಮಾಡಬೇಕಾಯಿತು. ಆದರೆ ಹಿರಿಯ ಆಟಗಾರರ ಸಂಧಾನ ಮತ್ತು ವೆಸ್ಟ್  ಇಂಡೀಸ್ ಅಧ್ಯಕ್ಷರ ಸ್ಪೂರ್ತಿಯ ಸಲಹೆಗಳು ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿತ್ತು. ಕೇವಲ ಪಾಲ್ಗೊಳ್ಳುವುದು ಮಾತ್ರವೇ ಅಲ್ಲ, ಇದೀಗ ವೆಸ್ಟ್ ಇಂಡೀಸ್ ತಂಡ ವಿಶ್ವ ವಿಜೇತರು.  ಬಲಾಢ್ಯ ತಂಡಗಳನ್ನೇ ಮಣಿಸಿ 2ನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡ ವಿಶ್ವದ ಮೊದಲ ತಂಡ ಎಂಬ ಕೀರ್ತಿಗೂ ಭಾಜನವಾಗಿದೆ.

ಇಷ್ಟಕ್ಕೂ ವಿಂಡೀಸ್ ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ನಡುವಿನ ಸಮಸ್ಯೆಯಾದರೂ ಏನು?
ವಿಂಡೀಸ್ ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ನಡುವಿನ ತಿಕ್ಕಾಟ ಇಂದು ನಿನ್ನೆಯದಲ್ಲ. ಬದಲಿಗೆ ಈ ತಿಕ್ಕಾಟಕ್ಕೆ ಎರಡೂವರೆ ದಶಕಗಳ ಇತಿಹಾಸವೇ ಇದೆ. 90ರ ದಶಕದಿಂದ ಆರಂಭವಾದ ತಿಕ್ಕಾಟ  ಇಂದಿಗೂ ನಡೆದುಕೊಂಡು ಬಂದಿದೆ. ವಿಂಡೀಸ್ ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ನಡುವಿನ ವಿವಾದಗಳಲ್ಲೇ ಪ್ರಮುಖವಾದದ್ದು ಎಂದರೆ ವೇತನಕ್ಕೆ ಸಂಬಂಧಿಸಿದ್ದು. ವಿಂಡೀಸ್ ಕ್ರಿಕೆಟ್ ಮಂಡಳಿ  ಆಟಗಾರರಿಗೆ ನೀಡಬೇಕಾದ ವೇತನವನ್ನು ಸರಿಯಾದ ನಿಟ್ಟಿನಲ್ಲಿ ನೀಡುತ್ತಿಲ್ಲ ಎಂಬ ಆರೋಪ ದಶಕಗಳಿಂದಲೂ ಕೇಳಿಬರುತ್ತಿದೆ. ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಆರು ಎಸೆತಗಳಲ್ಲಿ 6  ಸಿಕ್ಸರ್ ಭಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದ ಸರ್ ಗಾರ್ಫೀಲ್ಡ್ ಸಾಬರ್ಸ್ ಮತ್ತು ವಿಶ್ವ ಕ್ರಿಕೆಟ್ ಕಂಡ ಅತ್ಯಂತ ಹೆಮ್ಮೆಯ ಕ್ರಿಕೆಟಿಗ ಮತ್ತು ಟೆಸ್ಟ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ  ವೈಯುಕ್ತಿಕ 400 ರನ್ ಗಳ ಸಿಡಿಸಿ ದಾಖಲೆ ಬರೆದ ಬ್ರಿಯಾನ್ ಲಾರಾ, ವಿವಿಯನ್ ರಿಚರ್ಡ್ಸ್ ಮತ್ತು ಆಟಗಾರನಾಗಿ ಮತ್ತು ರೆಫರಿಯಾಗಿ ಕಾರ್ಯನಿರ್ವಹಿಸಿದ್ದ ಕ್ಲೈವ್ ಲಾಯ್ಡ್  ಕೂಡ ಮಂಡಳಿಯ  ವೇತನ ತಾರತಮ್ಯದಿಂದ ಬಳಲಿದವರೇ. ಈ ಹಿಂದೆಯೂ ಸಾಕಷ್ಟು ಬಾರಿ ಸೌಮ್ಯ ಸ್ವಭಾವದ ಲಾರಾ ಕೂಡ ವಿಂಡೀಸ್ ಮಂಡಳಿ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು.

ಇನ್ನು ಈ ಹಿಂದೆ ಶ್ರೀಲಂಕಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸರ್ ಗಾರ್ಫೀಲ್ಡ್ ಸಾಬರ್ಸ್ ಅವರು ಕಣ್ಣೀರು ಹಾಕುವ ಮೂಲಕ ವಿಂಡೀಸ್ ಮಂಡಳಿ ವಿರುದ್ಧದ ತಮ್ಮ ನೋವನ್ನು ಹೊರಹಾಕಿದ್ದರು.  ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಆಟಗಾರರನ್ನು ನಡೆಸಿಕೊಳ್ಳುತ್ತಿರುವ ಕುರಿತು ಮಾತನಾಡಿದ್ದ ಸಾಬರ್ಸ್, ಮಂಡಳಿ ಆಟಗಾರರನ್ನು ತೀರಾ ತುಚ್ಛವಾಗಿ ನೋಡುತ್ತಿದೆ. ವೆಸ್ಟ್ ಇಂಡೀಸ್ ಗಾಗಿ ಕ್ರಿಕೆಟ್  ಆಡಿದ್ದೇವೆಯೇ ಹೊರತು ನಮ್ಮ ವೈಯುಕ್ತಿಕ ದಾಖಲೆಗಾಗಿ ನಾವು ಎಂದೂ ಕ್ರಿಕೆಟ್ ಆಡಿದವರಲ್ಲ. ವಿಂಡೀಸ್ ಮಂಡಳಿಯಲ್ಲಿ ಕ್ರಿಕೆಟ್ ಗಾಗಿ ದುಡಿಯುವ ಕೈಗಳು ಕಾಣುತ್ತಿಲ್ಲ ಎಂದು ಸಾಬರ್ಸ್  ನೋವಿನಿಂದ ಹೇಳಿದ್ದರು.

ಇನ್ನು ಹಾಲಿ ಚಾಂಪಿಯನ್ ವೆಸ್ಟ್ ತಂಡದ ವಿಚಾರಕ್ಕೆ ಬರುವುದಾದರೆ ಸಾಮಿ ನೇತೃತ್ವದ ವಿಂಡೀಸ್ ಪಡೆ ತಿಕ್ಕಾಟಕ್ಕೂ ಕೂಡ ಸಾಕಷ್ಟು ಇತಿಹಾಸವಿದೆ. 2010ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ  ವೆಸ್ಟ್ ಇಂಡೀಸ್ ತಂಡ ಮಂಡಳಿಯೊಂದಿಗಿನ ಇದೇ ವೇತನ ತಿಕ್ಕಾಟದಿಂದಾಗಿ ಸರಣಿಯಲ್ಲಿ ಅರ್ಧಕ್ಕೇ ಮೊಟಕುಗೊಳಿಸಿ ವಿಂಡೀಸ್ ಗೆ ಹಾರಿತ್ತು. ಇದು ವೆಸ್ಟ್ ಇಂಡೀಸ್ ಮತ್ತು ಆಟಗಾರರ ನಡುವಿನ  ವಿವಾದ ತಾರಕಕ್ಕೇರುವಂತೆ ಮಾಡಿತ್ತು. ಆ ಬಳಿಕ ಕ್ರಿಸ್ ಗೇಯ್ಲ್, ಸಾಮಿ, ಬ್ರಾವೋ, ಪೊಲ್ಲಾರ್ಡ್ ರಂತಹ ಹಿರಿಯ ಆಟಗಾರರನ್ನೇ ವಿಂಡೀಸ್ ಕ್ರಿಕೆಟ್ ಮಂಡಳಿ ಕ್ರಿಕೆಟ್ ನಿಂದ ದೂರ ಇಟ್ಟು ಕಿರಿಯ  ಆಟಗಾರರೊಂದಿಗೆ ಕ್ರಿಕೆಟ್ ಆಡಿಸಿತ್ತು. ತನ್ನನ್ನು ಪ್ರಶ್ನಿಸುವವರನ್ನು ವಿಂಡೀಸ್ ಮಂಡಳಿ ಕ್ರಿಕೆಟ್ ನಿಂದಲೇ ದೂರ ಮಾಡುವ ಮೂಲಕ ಆಟಗಾರರನ್ನು ತನ್ನ ಕಪಿಮುಷ್ಛಿಯಲ್ಲಿಟ್ಟುಕೊಳ್ಳುವ ಪ್ರಯತ್ನ  ಮಾಡಿತ್ತು.

ಆದರೆ ಈ ವೇಳೆ ಆಟಗಾರರ ಶಕ್ತಿ ಪರಿಚಯಿಸಿದ್ದು ಭಾರತ ಮತ್ತು ಭಾರತೀಯ ಕ್ರಿಕೆಟ್ ಮಂಡಳಿ. ಐಪಿಎಲ್ ಎಂಬ ಬೃಹತ್ ಟೂರ್ನಿಯನ್ನು ಆಯೋಜಿಸುವ ಮೂಲಕ ವಿಂಡೀಸ್ ಆಟಗಾರರಿಗೆ ಪರ್ಯಾಯ  ಎನ್ನುವಷ್ಟರ ಮಟ್ಟಿಗೆ ಐಪಿಎಲ್ ವಿಂಡೀಸ್ ಆಟಗಾರರ ಕೈಹಿಡಿದಿತ್ತು. ಇದನ್ನರಿತ ವಿಂಡೀಸ್ ಮಂಡಳಿ ಮತ್ತೆ ಆಟಗಾರರೊಂದಿಗೆ ಸಂಧಾನ ಮಾಡಿಕೊಳ್ಳುತ್ತಿದೆಯಾದರೂ, ಅದು ತಾತ್ಕಾಲಿಕ ಮಾತ್ರ. ಈಗ್ಗೆ  2015ರಲ್ಲಿ ವಿವಾದ ತಾರಕ್ಕೇರಿದಾಗ ದ್ವಿತೀಯ ದರ್ಜೆಯ ಆಟಗಾರರನ್ನು ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಸುವ ಮೂಲಕ ಹಿರಿಯ ಆಟಗಾರರಿಗೆ ಅವಮಾನ ಮಾಡಿತ್ತು. ವಿಂಡೀಸ್ ಮಂಡಳಿಯ ಈ  ತಂತ್ರಗಾರಿಕೆ ತಿರುಗುಬಾಣವಾಗಿ ಆ ಸರಣಿಯಲ್ಲಿ ವಿಂಡೀಸ್ ತಂಡ ಹೀನಾಯವಾಗಿ ಸೋಲುಕಂಡಿತ್ತು. ಇಂತಹುದೇ ಪರಿಸ್ಥಿತಿ ಈ ಬಾರಿ ಟಿ20 ವಿಶ್ವಕಪ್ ನಲ್ಲಿಯೂ ಎದುರಾಗುವ ಸಂಭವವಿತ್ತು. ಆದರೆ  ದೇಶಕ್ಕಾಗಿ ಆಡಿದ ವಿಂಡೀಸ್ ಆಟಗಾರರು ಮಂಡಳಿಯ ಮೇಲಿನ ತಮ್ಮ ನೋವು, ಹತಾಶೆ, ಅವಮಾನ ಮತ್ತು ಆಕ್ರೋಶವನ್ನು ಬಚ್ಚಿಟ್ಟಿದ್ದರು. ಅದು ಒಮ್ಮೆಲೇ ಸ್ಫೋಟಗೊಂಡಿದ್ದು ಮಾತ್ರ ಫೈನಲ್  ಪಂದ್ಯದಲ್ಲಿ ಎದುರಾದ ಇಂಗ್ಲೆಂಡ್ ವಿರುದ್ಧ. ಪ್ರಮುಖವಾಗಿ ಪಂದ್ಯದ ಕೊನೆಯ ಓವರ್ ನಲ್ಲಿ.

ಪಂದ್ಯ ಸೋಲುವ ಭೀತಿ ಎದುರಿಸುತ್ತಿದ್ದ ವೆಸ್ಟ್ ಇಂಡೀಸ್ ತಂಡ ಕೊನೆಯ ಹಂತದಲ್ಲಿ ಸತತ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕೊನೆಯ ಓವರ್ ನಲ್ಲಿ ವಿಂಡೀಸ್ ಗೆ 19  ರನ್ ಗಳ ಅವಶ್ಯಕತೆ ಇತ್ತು. ಕ್ರೀಸ್ ನಲ್ಲಿ ಇದ್ದದ್ದು ಆಗಷ್ಟೇ ಕ್ರೀಸ್ ಗೆ ಆಗಮಿಸಿದ್ದ ಕೆಳಕ್ರಮಾಂಕದ ಬ್ಯಾಟ್ಸಮನ್ ಬ್ರಾತ್ ವೇಟ್. ಅಮೋಘ ಆಟವಾಡಿದ್ದ ಸಾಮುಯೆಲ್ಸ್ ಮತ್ತೊಂದು ಬದಿಯಲ್ಲಿದ್ದರು.  ಅಷ್ಟೇನೂ ಅನುಭವವಿಲ್ಲದ ಬ್ರಾತ್ ವೇಟ್ ಆ ಓವರ್ ನ ಮೊದಲ ಎಸೆತವನ್ನು 1 ರನ್ ತೆಗೆದುಕೊಳ್ಳುವ ಮೂಲಕ ಸಾಮುಯೆಲ್ಸ್ ಗೆ ಗೆಲುವಿನ ರನ್ ಗಳಿಸಲು ಅವಕಾಶ ನೀಡುತ್ತಾರೆ ಎಂದು  ಭಾವಿಸಲಾಗಿತ್ತು. ಆದರೆ ತಮ್ಮ ಮನದಾಳದಲ್ಲಿದ್ದ ಅವಮಾನ, ನೋವು, ಹತಾಶೆ ಮತ್ತು ಗೆಲುವಿನ ಬಯಕೆಯನ್ನು ಒಮ್ಮೆಲೆ ಹೊರಹಾಕಿದ್ದ ಬ್ರಾತ್ ವೇಟ್ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ಸಿಕ್ಸರ್  ಸಿಡಿಸುವ ಮೂಲಕ ವಿಂಡೀಸ್ ಚಾಂಪಿಯನ್ ಪಟ್ಟ ತಂದಿತ್ತರು.

ವಿಂಡೀಸ್ ಕ್ರಿಕೆಟ್ ನಲ್ಲಿ ಇಂತಹ ಘಟನೆಗಳು ಪದೇ ಪದೇ ಕೇಳಿಬರುತ್ತಿವೆ. ಇದೀಗ ವಿಂಡೀಸ್ ಕ್ರಿಕೆಟ್ ಮಂಡಳಿ ಆಟಗಾರರೊಂದಿಗಿನ ಸಂಧಾನಕ್ಕೆ ಮುಂದಾಗಿದೆಯಾದರೂ ಅದೂ ಕೂಡ ತಾತ್ಕಾಲಿಕ  ಎಂಬ ಮಾತು ಕೇಳಿಬರುತ್ತಿವೆ. ಇದು ಕೇವಲ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಸಮಸ್ಯೆ ಮಾತ್ರವಲ್ಲ. ಇಂತಹ ಸಾಕಷ್ಟು ಸಮಸ್ಯೆಗಳು ಭಾರತ, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ವಿಶ್ವದ ನಾನಾ  ಕ್ರಿಕೆಟ್ ಮಂಡಳಿಗಳನ್ನು ಪೀಡಿಸುತ್ತಿವೆ. ಕ್ರಿಕೆಟ್ ನ ಗಂಧಗಾಳಿಯೇ ತಿಳಿಯದ ಮಂದಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಕ್ರಿಕೆಟ್ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತಿದ್ದಾರೆ. ಆದರೆ  ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಾತ್ರ ಈ ಬಗ್ಗೆ ದಿವ್ಯ ಮೌನ ವಹಿಸಿದೆ. ಎಷ್ಟೇ ಆದರೂ ಐಸಿಸಿ ಆಡಳಿತ ಮಂಡಳಿಯಲ್ಲಿರುವವರೂ ಮೇಲ್ಕಂಡ ಮಂಡಳಿಗಳಿಂದ ಬಂದ ಸದಸ್ಯರಲ್ಲವೇ...

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com