
ರಾಜ್ ಕೋಟ್: ತಮ್ಮ 43ನೇ ಜನುಮ ದಿನವನ್ನಾಚರಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶೇಷ ಉಡುಗೊರೆಯೊಂದನ್ನು ನೀಡಿದ್ದು. ಸಚಿನ್ ಗೆ ವಿಶಿಷ್ಟ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ.
ನಿನ್ನೆ ರಾಜ್ ಕೋಟ್ ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ತಮ್ಮ ಟಿ20 ವೃತ್ತಿ ಜೀವನ ಮೊದಲ ಶತಕ ಭಾರಿಸಿದ ವಿರಾಟ್ ಕೊಹ್ಲಿ ಈ ಶತಕವನ್ನು ಕ್ರಿಕೆಟ್ ದೇವರಿಗೆ ಅರ್ಪಿಸುವ ಮೂಲಕ ವಿಶಿಷ್ಟವಾಗಿ ಜನುಮ ದಿನದ ಶುಭಾಶಯ ಕೋರಿದ್ದಾರೆ. ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ದಾಖಲೆಯ ಸರಾಸರಿ ಹೊಂದಿದ್ದಾರೆಯಾದರೂ, ಅದೇಕೋ ಈ ಮಾದರಿಯ ಕ್ರಿಕೆಟ್ ನಲ್ಲಿ ಶತಕ ಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ ನಿನ್ನೆ ರಾಜ್ ಕೋಟ್ ಮೈದಾನದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಅಬ್ಬರಿಸಿದ ವಿರಾಟ್ ಕೊಹ್ಲಿ ಕೇವಲ 63 ಎಸೆತದಲ್ಲಿ ಅಜೇಯ 100 ರನ್ ಗಳಿಸಿದರು.
ಏಷ್ಯಾಕಪ್ ನಲ್ಲಿ ಆರಂಭವಾದ ಕೊಹ್ಲಿ ರನ್ ವೇಗ ಟಿ20 ವಿಶ್ವಕಪ್ ನಲ್ಲಿಯೂ ಮುಂದುವರೆದು, ಇದೀಗ ಐಪಿಎಲ್ ನಲ್ಲಿಯೂ ಮುಂದುವರೆದಿದೆ. ಈ ಹಿಂದೆ ಸಾಕಷ್ಟು ಭಾರಿ ಶತಕದ ಹೊಸ್ತಿಲಲ್ಲಿ ಕೊಹ್ಲಿ ಔಟ್ ಆಗಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದರು. ಇದೀಗ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಫಾರ್ಮ್ ನಲ್ಲಿರುವ ಕೊಹ್ಲಿ ಅದನ್ನೇ ಮುಂದುವರೆಸಿಕೊಂಡು ಬಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಅಮೋಘ ಜನ್ಮ ದಿನದ ಕಾಣಿಕೆ ನೀಡಿದ್ದಾರೆ.
ಟಿ20 ಶತಕದಲ್ಲೂ ಸಚಿನ್-ಕೊಹ್ಲಿ ಸಾಮ್ಯತೆ
ಸಚಿನ್ ತೆಂಡುಲ್ಕರ್ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಐಪಿಎಲ್ ತಂಡದ ನಾಯಕ ರಾಗಿದ್ದಾಗಲೇ ಚೊಚ್ಚಲ ಶತಕ ಬಾರಿಸಿದ್ದಾರೆ. ಅಲ್ಲದೆ, ಇಬ್ಬರೂ ಆಟಗಾರರ ಚೊಚ್ಚಲ ಶತಕ, ಲೀಗ್‌ನ ಹೊಸ ಫ್ರಾಂಚೈಸಿ ತಂಡದ ವಿರುದ್ಧ ಬಂದಿದ್ದು ವಿಶೇಷ. 2011ರಲ್ಲಿ ಸಚಿನ್ (100*), ಕೊಚ್ಚಿ ಟಸ್ಕರ್ಸ್ ವಿರುದ್ಧ ಶತಕ ಬಾರಿಸಿದ್ದರೂ ಆ ಪಂದ್ಯದಲ್ಲಿ ಮುಂಬೈ ಸೋಲು ಕಂಡಿತ್ತು. ಇದೀಗ ವಿರಾಟ್ ಕೊಹ್ಲಿ ಕೂಡ ಐಪಿಎಲ್-9ರ ಆವೃತ್ತಿಯ ಹೊಸ ತಂಡ ಗುಜರಾತ್ ಲಯನ್ಸ್ ವಿರುದ್ಧ ಶತಕ ಬಾರಿಸಿದ್ದು, ಈ ಪಂದ್ಯದಲ್ಲಿಯೂ ಆರ್ ಸಿಬಿ ತಂಡ ಸೋತಿದೆ.
Advertisement