ಕ್ರಿಕೆಟ್ ಕಿಟ್ ಮರೆತರೂ "ಅದನ್ನು" ಮಾತ್ರ ಮರೆಯುತ್ತಿರಲಿಲ್ಲವಂತೆ ದಂತಕಥೆ ಗವಾಸ್ಕರ್..!

ಭಾನುವಾರವಷ್ಚೇ 67ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಭಾರತ ಕ್ರಿಕೆಟ್ ಕಂಡ ಶ್ರೇಷ್ಟ ಕ್ರಿಕೆಟರ್ ಹಾಗೂ ದಂತಕಥೆ ಸುನಿಲ್ ಗವಾಸ್ಕರ್ ಅವರ ಕುತೂಹಲಕಾರಿ ರಹಸ್ಯವೊಂದನ್ನು ಅವರ ಸಹೋದರಿ ಬಿಚ್ಚಿಟ್ಟಿದ್ದಾರೆ.
ಸುನಿಲ್ ಗವಾಸ್ಕರ್ ಮತ್ತು ಪಾಲ್ರೇ ಜಿ ಬಿಸ್ಕಟ್ (ಸಂಗ್ರಹ ಚಿತ್ರ)
ಸುನಿಲ್ ಗವಾಸ್ಕರ್ ಮತ್ತು ಪಾಲ್ರೇ ಜಿ ಬಿಸ್ಕಟ್ (ಸಂಗ್ರಹ ಚಿತ್ರ)

ಮುಂಬೈ: ಭಾನುವಾರವಷ್ಚೇ 67ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಭಾರತ ಕ್ರಿಕೆಟ್ ಕಂಡ ಶ್ರೇಷ್ಟ ಕ್ರಿಕೆಟರ್ ಹಾಗೂ ದಂತಕಥೆ ಸುನಿಲ್ ಗವಾಸ್ಕರ್ ಅವರ ಕುತೂಹಲಕಾರಿ  ರಹಸ್ಯವೊಂದನ್ನು ಅವರ ಸಹೋದರಿ ಬಿಚ್ಚಿಟ್ಟಿದ್ದಾರೆ.

ಭಾರತ ಕ್ರಿಕೆಟ್ ತಂಡದ ದಂತಕಥೆ ಸುನಿಲ್ ಗವಾಸ್ಕರ್ ತಂಡದ ಬ್ಯಾಟಿಂಗ್ ಬೆನ್ನಲು ಎಂದರೆ ತಪ್ಪಾಗದು. ಅಂದಿನ ಕಾಲಕ್ಕೆ ಕೆಳಕ್ರಮಾಂಕದ ಆಟಗಾರರಿಗೆ ಇನ್ನಿಂಗ್ಸ್ ಆರಂಭಿಸುತ್ತಿದ್ದ  ಗವಾಸ್ಕರ್ ಅವರ ಆಟವೇ ಸ್ಪೂರ್ತಿಯಾಗುತ್ತಿತ್ತು. ಈ ಮಾತನನ್ನು ಹಲವು ಬಾರಿ ಇತರೆ ಆಟಗಾರರು ಒಪ್ಪಿಕೊಂಡಿದ್ದಾರೆ. ಆದರೆ ಇಂತಹ ಗಾವಸ್ಕರ್ ಚಾರ್ಜ್ ಆಗಲು ಬಿಸ್ಕಟ್ ಬೇಕಿತ್ತಂತೆ.  ಅದೂ ಕೂಡ ಪಾರ್ಲೇ ಜಿ ಬಿಸ್ಕಟ್...

ಸುನಿಲ್ ಗವಾಸ್ಕರ್ ಗೆ ಪಾರ್ಲೇ ಜಿ ಬಿಸ್ಕಟ್ ಎಷ್ಟು ಇಷ್ಟವೆಂದರೆ ಕ್ರಿಕೆಟ್ ನಿಮಿತ್ತ ಯಾವುದೇ ದೇಶಕ್ಕೆ ಅವರ ಬಟ್ಟೆ ಪ್ಯಾಕ್ ಆಗುವ ಮೊದಲು ಪಾರ್ಲೇ ಜಿ ಬಿಸ್ಕಟ್ ಪ್ಯಾಕ್ ಆಗುತ್ತಿತ್ತಂತೆ. ಈ  ವಿಚಾರವನ್ನು ಅವರ ಸ್ವತಃ ಅವರ ಸಹೋದರಿ ನೂತನ್ ಗವಾಸ್ಕರ್ ಅವರು ತಿಳಿಸಿದ್ದಾರೆ. ನಿನ್ನೆ ಮುಂಬೈನಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಆಯೋಜಿಸಿದ್ದ ಗವಾಸ್ಕರ್ ಜನ್ಮದಿನ  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೂತನ್ ಗವಾಸ್ಕರ್ ಅವರು, ಈ ಬಗ್ಗೆ ಮಾತನಾಡಿದ್ದಾರೆ.

"ಪ್ರತೀ ಬಾರಿ ವಿದೇಶಕ್ಕೆ ಕ್ರಿಕೆಟ್ ಆಡಲು ಹೋದರೆ ಗವಾಸ್ಕರ್ ಮೊದಲು ಪಾರ್ಲೇ ಜಿ ಬಿಸ್ಕಟ್ ಗಳನ್ನು ಪ್ಯಾಕ್ ಮಾಡಿಕೊಳ್ಳುತ್ತಿದ್ದರು. ಪ್ರತಿ ನಿತ್ಯ ಅವರಿಗೆ ಕಾಫಿಯೇ ಆಗಲಿ ಅಥವಾ ಟೀ ಆಗಲಿ  ಅದರೊಂದಿಗೆ ಪಾರ್ಲೇ ಜಿ ಬಿಸ್ಕಟ್ ಇರಲೇ ಬೇಕಿತ್ತು. ಒಮ್ಮೆ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತ್ತು. ಆದೊಂದು ಸುದೀರ್ಘ ಪ್ರವಾಸವಾಗಿತ್ತು. ಹೀಗಾಗಿ ಗವಾಸ್ಕರ್ ಗಾಗಿ  ಬಿಸ್ಕಟ್ ಕಳುಹಿಸಲು ಭಾರತ ತಂಡದ ವತಿಯಿಂದ ಯಾರೆಲ್ಲಾ ವಿಂಡೀಸ್ ಗೆ ಪ್ರವಾಸ ಬೆಳೆಸಿದ್ದರೋ ಅವರಿಗೆಲ್ಲಾ ಪಾರ್ಲೇ ಜಿ ಬಿಸ್ಕಟ್ ಪ್ಯಾಕೆಟ್ ಗಳನ್ನು ನೀಡಿ ಗವಾಸ್ಕರ್ ಗೆ ನೀಡಲು  ಹೇಳುತ್ತಿದ್ದೆವು" ಎಂದು ಆ ದಿನಗಳ ಕ್ಷಣಗಳನ್ನು ನೆನೆದಿದ್ದಾರೆ. ನಮ್ಮ ಸಂಬಂಧಿಕರು, ಪರಿಚಿತರು ಅಥವಾ ಯಾರೇ ಆಗಲಿ ವಿಂಡೀಸ್ ಗೆ ಪ್ರಯಾಣಿಸುತ್ತಿದ್ದಾರೆ ಎಂದು ತಿಳಿದರೆ ಸಾಕು ಅವರಿಗೆ  ಬಿಸ್ಕಟ್ ಪ್ಯಾಕ್ ನೀಡುತ್ತಿದ್ದೆವು. ಕೆಲವು ಬಾರಿ ವಿಂಡೀಸ್ ಗೆ ಪ್ರಯಾಣಿಸಿದ್ದ ಪತ್ರಕರ್ತರ ಕೈಯಲ್ಲೂ ಬಿಸ್ಕಟ್ ಪ್ಯಾಕ್ ನೀಡಿದ್ದ ವಿಚಾರವನ್ನು  ನೂತನ್ ಬಹಿರಂಗ ಪಡಿಸಿದ್ದಾರೆ.

ಆದರೆ ಈಗ ಗವಾಸ್ಕರ್ ಪಾರ್ಲೇ ಜಿ ಬಿಸ್ಕಟ್ ತಿನ್ನುವುದನ್ನು ಕಡಿಮೆ ಮಾಡಿದ್ದು, ಇದಕ್ಕೆ ಅವರ ಸಕ್ಕರೆ ಖಾಯಿಲೆ ಕಾರಣವಂತೆ. ಪಾರ್ಲೇ ಜಿ ಬಿಸ್ಕಟ್ ನಲ್ಲಿ ಸಕ್ಕರೆ ಅಂಶ ಅಧಿಕವಾಗಿದ್ದು,  ಆರೋಗ್ಯದ ದೃಷ್ಟಿಯಿಂದ ಅವರು ಬಿಸ್ಕಟ್ ತಿನ್ನುವುದ್ನು ಕಡಿಮೆ ಮಾಡಿದ್ದಾರೆ ಎಂದು ನೂತನ್ ಹೇಳಿದ್ದಾರೆ.

ವಿಂಡೀಸ್ ದೈತ್ಯ ಬೌಲರ್ ಗಳನ್ನೇ ಬೆಚ್ಚಿ ಬೀಳಿಸಿದ್ದ ಸನ್ನಿ
ಇನ್ನು ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಮುಂಬೈ ತಂಡದ ಓಪನಿಂಗ್ ಬ್ಯಾಟ್ಸಮನ್ ಶಿಶಿರ್ ಹತ್ತಂಗಡಿ ಅವರು ಮಾತನಾಡಿ, ಗವಾಸ್ಕರ್ ಹೇಗೆ ತಮ್ಮ ವೇಷ ಭೂಷಣದಿಂದ ಮಾಜಿ  ವಿಂಡೀಸ್ ಆಟಗಾರರನ್ನು ಬೆಚ್ಚಿ ಬೀಳಿಸಿದ್ದರು ಎಂಬ ಸಂಗತಿಯನ್ನು ಹೊರಹಾಕಿದರು. ಒಮ್ಮೆ ಖಾಸಗಿ ಕಾರ್ಯಕ್ರಮ ನಿಮಿತ್ತ ವಿಂಡೀಸ್ ತಂಡ ಭಾರತ ಪ್ರವಾಸ ಕೈಗೊಂಡಿತ್ತು. ಈ ವೇಳೆ  ವಿಂಡೀಸ್ ಪ್ರಮುಖ ಬೌಲರ್ ಗಳು ರವಿಶಾಸ್ತ್ರಿ ಅವರ ಮನೆಗೆ ಆಗಮಿಸಿದ್ದರು. ಆಗ ಗವಾಸ್ಕರ್ ಪೈಜಾಮ ಮತ್ತು ಕುರ್ತಾ ಧರಿಸಿ ಅಲ್ಲಿಗೆ ಆಗಮಿಸಿದರು. ಗವಾಸ್ಕರ್ ರನ್ನು ನೋಡಿದ್ದೇ ತಡ ಅಲ್ಲಿ  ಕುಳಿತಿದ್ದ ವಿಂಡೀಸ್ ದೈತ್ಯ ಬೌಲರ್ ಗಳು ಎದ್ದು ನಿಂತು ಗವಾಸ್ಕರ್ ರನ್ನು "ಹಾಯ್ ಮಾಸ್ಟರ್, ಹೌ ಆರ್ ಯು" ಗುರುಗಳೇ ಹೇಗಿದ್ದೀರಾ ಎಂದರಂತೆ. ಆರಂಭದಲ್ಲಿ ಕುಟುಂಬದ ಹಿರಿಯರು  ಎಂದು ಭಾವಿಸಿದ್ದ ವಿಂಡೀಸ್ ಆಟಗಾರರಾದ ಮೈಕೆಲ್ ಹೋಲ್ಡಿಂಗ್ , ಜೋಯಲ್ ಗಾರ್ನರ್, ಮಾಲ್ಕಮ್ ಮಾರ್ಷಲ್ ಮತ್ತು ಆಂಡಿ ರಾಬರ್ಟ್ಸ್ ಗವಾಸ್ಕರ್ ಉಡುಗೆ ನೋಡಿ ಬೆಚ್ಚಿ ಬಿದ್ದದ್ದರಂತೆ.

ಇನ್ನು ಕಾರ್ಯಕ್ರಮದಲ್ಲಿ ಭಾರತ ತಂಡದ ಮಾಜಿ ಆಟಗಾರ ಮಾಧವ್ ಆಪ್ಟೆ ಮತ್ತು ಮುಂಬೈ ಮಾಜಿ ಕ್ರಿಕೆಟಿಗ ವಾಸುದೇವ ಪರಂಜಪೆ ಅವರೂ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗವಾಸ್ಕರ್  ರೊಂದಿಗಿನ ತಮ್ಮ ಕ್ಷಣಗಳನ್ನು ಹಂಚಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com