ನಾಳೆಯಿಂದ ಟಿ20 ವಿಶ್ವಕಪ್ ಪ್ರಧಾನ ಸುತ್ತಿನ ಪಂದ್ಯಗಳು

ಮಂಗಳವಾರದಿಂದ ವಿಶ್ವಕಪ್ ಟಿ20 ಟೂರ್ನಿಯ ಪ್ರಧಾನ ಸುತ್ತಿನ ಪಂದ್ಯಗಳು ಆರಂಭವಾಗಲಿದ್ದು, ವಿಶ್ವಕಪ್ ಗಾಗಿ ವಿಶ್ವದ 10 ಬಲಾಢ್ಯ ತಂಡಗಳು..
ನಾಗ್ಪುರಕ್ಕೆ ಆಗಮಿಸಿದ ಟೀಂ ಇಂಡಿಯಾ
ನಾಗ್ಪುರಕ್ಕೆ ಆಗಮಿಸಿದ ಟೀಂ ಇಂಡಿಯಾ

ನಾಗ್ಪುರ: ಮಂಗಳವಾರದಿಂದ ವಿಶ್ವಕಪ್ ಟಿ20 ಟೂರ್ನಿಯ ಪ್ರಧಾನ ಸುತ್ತಿನ ಪಂದ್ಯಗಳು ಆರಂಭವಾಗಲಿದ್ದು, ವಿಶ್ವಕಪ್ ಗಾಗಿ ವಿಶ್ವದ 10 ಬಲಾಢ್ಯ ತಂಡಗಳು ಪರಸ್ಪರ ಸೆಣಸಲು ಸಜ್ಜಾಗಿ  ನಿಂತಿವೆ.

ಇನ್ನು ನಾಳೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಅತಿಥೇಯ ಭಾರತ ಕ್ರಿಕೆಟ್ ತಂಡ ನೂಜಿಲೆಂಡ್ ತಂಡವನ್ನು ಎದುರಿಸಲಿದ್ದು, ನಾಗ್ಪುರದ ವಿದರ್ಭ ಕ್ರಿಕೆಟ್ ಸ್ಟೇಡಿಯಂ (ವಿಸಿಎ) ಮೈದಾನದಲ್ಲಿ  ಪಂದ್ಯ ನಡೆಯಲಿದೆ. ಈಗಾಗೇಲೇ ವಿಸಿಎ ಕ್ರೀಡಾಂಗಣ ಈ ಆರಂಭಿಕ ಪಂದ್ಯಕ್ಕೆ ಸಕಲ ರೀತಿಯಲ್ಲಿಯೂ ಸಜ್ಜಾಗಿದ್ದು, ಪಿಚ್ ಸಂಪೂರ್ಣ ಸನ್ನದ್ಧವಾಗಿದೆ. ಈ ಬಾರಿ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿ  ವರ್ತಿಸಲಿದೆ ಎಂದು ಐಸಿಸಿ ತಿಳಿಸಿದ್ದು, ಪ್ರೇಕ್ಷಕರು ರನ್‌ಮಳೆಯನ್ನೇ ನಿರೀಕ್ಷಿಸಬಹುದು ಎಂದು ಹೇಳಿದೆ. ಇನ್ನು ನಾಳಿನ ಪಂದ್ಯದಲ್ಲಿ ಪಾಲ್ಗೊಳ್ಳುವ ಭಾರತ ಮತ್ತು ನ್ಯೂಜಿಲೆಂಡ್ ತಂಜಗಳು ಈಗಾಗಲೇ ನಾಗ್ಪುರ ತಲುಪಿದ್ದು, ಇಂದು ಅಭ್ಯಾಸ ನಡೆಸಲಿದ್ದಾರೆ.

ಕಳೆದ ವರ್ಷ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದ ವೇಳೆ ಸ್ಪಿನ್ ಬೌಲಿಂಗ್ ಗೆ ಸಹಕಾರಿಯಾಗಿ ವರ್ತಿಸಿದ್ದ ಪಿಚ್ ನಿಂದಾಗಿ ವಿಸಿಎ ಐಸಿಸಿಯಿಂದ ಎಚ್ಚರಿಕೆ ಪಡೆದು ಭಾರಿ ಸುದ್ದಿಯಾಗಿತ್ತು. ಟೆಸ್ಟ್ ಬಳಿಕ ಮ್ಯಾಚ್ ರೆಫ್ರಿ ಜೆಫ್ ಕ್ರೋವ್ ಐಸಿಸಿಗೆ ಸಲ್ಲಿಸಿದ್ದ ವರದಿಯಲ್ಲೂ ಪಿಚ್ ಕಳಪೆ ಮಟ್ಟದಲ್ಲಿತ್ತು ಎಂದು ದೂರಿದ್ದರು. ಆರ್. ಅಶ್ವಿನ್ ಪಂದ್ಯದಲ್ಲಿ 11 ವಿಕೆಟ್ ಪಡೆಯುವ ಮೂಲಕ ಕೇವಲ ಮೂರೇ ದಿನದ ಒಳಗಾಗಿ ದಕ್ಷಿಣ ಆಫ್ರಿಕಾ ತಂಡವನ್ನು 124 ರನ್‌ಗಳಿಂದ ಮಣಿಸುವಲ್ಲಿ ಭಾರತ ಯಶ ಕಂಡಿತ್ತು. ವರದಿಯ ಆಧಾರದ ಮೇಲೆ ಐಸಿಸಿಯ ಪಿಚ್ ಕಮಿಟಿ, ವಿಸಿಎಗೆ ಅಧಿಕೃತ ಎಚ್ಚರಿಕೆಯನ್ನೂ ನೀಡಿತ್ತು. ಹೀಗಾಗಿ ಈ ಬಾರಿ ಅಂತಹ ಮುಜುಗರವಾಗದಿರಲಿ ಎಂದು ಮುನ್ನೆಚ್ಚರಿಕೆ ವಹಿಸಿರುವ ವಿಸಿಎ ಅಧಿಕಾರಿಗಳು ಪಿಚ್ ಬಗ್ಗೆ ತುಸು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ.

ಮಂಗಳವಾರ ಭಾರತ- ನ್ಯೂಜಿಲೆಂಡ್ ನಡುವಿನ ವಿಶ್ವಕಪ್‌ನ ಪ್ರಧಾನ ಸುತ್ತಿನ ಪಂದ್ಯಕ್ಕೆ ಆತಿಥ್ಯ ವಹಿಸಿಕೊಂಡಿರುವ ವಿಸಿಎ ಪಿಚ್ ಈ ಬಾರಿ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿರಲಿದೆ ಎಂದು ವಿಸಿಎ ತಿಳಿಸಿದೆ. ‘ಟಿ20 ವಿಶ್ವಕಪ್ ಪಿಚ್‌ಗಳು ಬ್ಯಾಟ್ಸ್‌ಮನ್‌ಗಳ ಪರವಾಗಿರಬೇಕು ಎಂದು ಐಸಿಸಿ ಸ್ಪಷ್ಟ ಸೂಚನೆ ನೀಡಿದೆ. ಈ ಸೂಚನೆಯನ್ನು ನಾವು ಚಾಚೂತಪ್ಪದೆ ಪಾಲಿಸಿದ್ದೇವೆ. ಇದು ಟೆಸ್ಟ್ ಪಂದ್ಯದ ರೀತಿ ಇರುವುದಿಲ್ಲ’ ಎಂದು ವಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಿಕೆಟ್ ಸೋಲ್ಡ್‌ ಔಟ್
44,900 ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ವಿಸಿಎ ಮೈದಾನದ ಎಲ್ಲ ಟಿಕೆಟ್‌ಗಳು ಈಗಾಗಲೇ ಸಂಪೂರ್ಣವಾಗಿ ಮಾರಾಟವಾಗಿದೆ. ಆನ್‌ಲೈನ್ ಲಾಟರಿ ಮೂಲಕ ಟಿಕೆಟ್  ಖಚಿತಪಡಿಸಿಕೊಂಡವರಿಗೆ ಭಾನುವಾರ ಟಿಕೆಟ್ ವಿತರಣೆ ಆರಂಭವಾಗಿದೆ. ಕನಿಷ್ಠ 500 ರು. ಹಾಗೂ ಗರಿಷ್ಠ 7500 ರು. ಮುಖಬೆಲೆಯ ಟಿಕೆಟ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಸೈಟ್‌ಸ್ಕ್ರೀನ್  ಪಕ್ಕದಿಂದ ಪಂದ್ಯ ವೀಕ್ಷಿಸಲು ಬಯಸುವವರಿಗೆ 12,500 ರು. ಟಿಕೆಟ್ ನಿಗದಿ ಮಾಡಲಾಗಿದೆ.

ಕಾರ್ಪೋರೇಟ್ ಬಾಕ್ಸ್‌ಗೆ 5 ಲಕ್ಷ ರು.

ವಿಸಿಎಯಲ್ಲಿ ತಲಾ 15 ಸೀಟುಗಳಿರುವ 35 ಕಾರ್ಪೋರೇಟ್ ಬಾಕ್ಸ್ ಇದ್ದು, ಪ್ರತಿ ಬಾಕ್ಸ್‌ಗೆ 5 ಲಕ್ಷ ರು. ನಿಗದಿ ಮಾಡಲಾಗಿದೆ. 2009ರಲ್ಲಿ ಕೊನೇ ಬಾರಿಗೆ ಈ ಮೈದಾನದಲ್ಲಿ ಟಿ20  ಪಂದ್ಯವಾಡಿದ್ದ ಭಾರತ, ಶ್ರೀಲಂಕಾವನ್ನು 25 ರನ್‌ಗಳಿಂದ ಸೋಲಿಸಿತ್ತು. ವಿಸಿಎ ಪಿಚ್ ಈಗಾಗಲೇ ಅರ್ಹತಾ ಸುತ್ತಿನ 6 ಪಂದ್ಯಗಳಿಗೆ ಆತಿಥ್ಯ ವಹಿಸಿಕೊಂಡಿದ್ದು, ಪ್ರಧಾನ ಸುತ್ತಿನಲ್ಲಿ ಪುರುಷರ  ವಿಭಾಗದ 3 ಹಾಗೂ ಮಹಿಳಾ ವಿಭಾಗದ 2 ಪಂದ್ಯಗಳಿಗೆ ಆತಿಥ್ಯ ವಹಿಸಿಕೊಳ್ಳಲಿದೆ.

ಮಳೆ ಸಾಧ್ಯತೆ ಇಲ್ಲ
ಸ್ಕಾಟ್ಲೆಂಡ್-ಹಾಲೆಂಡ್ ನಡುವೆ ಶನಿವಾರ ನಡೆದ ಅರ್ಹತಾ ಸುತ್ತಿನ ಪಂದ್ಯದ ವೇಳೆ ಮಳೆ ಅಡ್ಡಿಪಡಿಸಿತ್ತು. ಆದರೆ, ಮಂಗಳವಾರ ಮಳೆ ಬರುವ ಸಾಧ್ಯತೆ ಕಡಿಮೆ ಇದೆ ಎಂದು ಹವಾಮಾನ  ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com